
ನದಿ ತಿರುವು ಯೋಜನೆಗಳ ಹಿಂದೆ ಕರೆಯುವ ಹಸುವಿನ ಕೆಚ್ಚಲು ಕೊಯ್ಯುವ ಅವಿವೇಕವಿದೆ. ನದಿಗಳು ಪೈಪುಗಳಲ್ಲಿ ಹರಿಸುವ ನೀರಿನ ಮೂಲಗಳಲ್ಲ. ಅವುಗಳ ಸಹಜ ನಡಿಗೆಗೆ ಅಡ್ಡಿ ಉಂಟು ಮಾಡಿದರೆ, ಪಶ್ಚಿಮಘಟ್ಟಗಳಿಗೆ ಗಾಸಿಯಾಗುತ್ತದೆ; ರಾಜ್ಯವೂ ಅಪಾಯ ಎದುರಿಸಬೇಕಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನವರಿ 11ರಂದು ನಡೆದ ಸಮಾವೇಶದಲ್ಲಿ ಜಾತಿಭೇದ ಮರೆತು ಸುಮಾರು 30 ಸಾವಿರ ಜನರು ಭಾಗವಹಿಸಿದ್ದರು. ಜಿಲ್ಲೆಯ ಜೀವನಾಡಿಗಳಾದ ಬೇಡ್ತಿ ಮತ್ತು ಅಘನಾಶಿನಿ ನದಿಯನ್ನು ಅಪಹರಿಸಲು ಹೊರಟ ಸರ್ಕಾರದ ಯೋಜನೆಯನ್ನು ವಿರೋಧಿಸುವುದು ಅವರ ಉದ್ದೇಶವಾಗಿತ್ತು.
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ದೇಶದಾದ್ಯಂತ 30 ನದಿಗಳ ಜೋಡಣೆ ಯೋಜನೆಗಳನ್ನು ಗುರುತಿಸಿದೆ. ಅವುಗಳಲ್ಲಿ 16 ದಕ್ಷಿಣ ಭಾರತಕ್ಕೆ ಸಂಬಂಧಿಸಿವೆ. ರಾಜ್ಯಕ್ಕೆ ಸಂಬಂಧಿಸಿದ 6 ಪ್ರಸ್ತಾವಗಳಲ್ಲಿ ಎರಡು ವಿಶ್ವಪ್ರಸಿದ್ಧ ಪಶ್ಚಿಮಘಟ್ಟಗಳ ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗಳು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿರುವ ಪಶ್ಚಿಮಘಟ್ಟಗಳಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ತಿರುಗಿಸಿ, ಪೂರ್ವಾಭಿಮುಖವಾಗಿ ಹರಿಯುವ ವರದಾ ನದಿಗೆ ಸೇರಿಸುವ ಯೋಜನೆಯಿವು.
ಅರಬ್ಬಿ ಸಮುದ್ರಕ್ಕೆ ಸೇರುವ ಬೇಡ್ತಿ ಮತ್ತು ಅಘನಾಶಿನಿ ಅಪರೂಪದ ಸಸ್ಯ–ಪ್ರಾಣಿ ಪ್ರಭೇದ ಮತ್ತು ವಿಶಿಷ್ಟವಾದ ಶಿಲಾರಚನೆಯಿಂದ ಕೂಡಿವೆ. ದಟ್ಟವಾದ, ಸದಾಹಸಿರು ಅರಣ್ಯಗಳಿಂದ ಆವೃತವಾದ ಸಂಕೀರ್ಣ ಕಣಿವೆಗಳನ್ನು ಹೊಂದಿವೆ. ಅಘನಾಶಿನಿ ನದಿಯು ಮಾನವ ಹಸ್ತಕ್ಷೇಪದಿಂದ ದೂರ ಉಳಿದಿದೆ.
ಜಲಚಕ್ರ ಸರಾಗವಾಗಿ ತಿರುಗಲು ಪಶ್ಚಿಮಘಟ್ಟಗಳ ಅರಣ್ಯ ಮಹತ್ವದ ಪಾತ್ರವಹಿಸುತ್ತದೆ. ಅರಣ್ಯ ನಿರ್ವಹಣೆಯಲ್ಲಿ ಮಾನವನ ಹಸ್ತಕ್ಷೇಪವಾದಾಗ ಜಲಚಕ್ರದಲ್ಲಿ ವ್ಯತ್ಯಯವುಂಟಾಗುತ್ತದೆ. ನದಿ ಹರಿವು, ಅಂತರ್ಜಲ ಮಟ್ಟ, ಮಣ್ಣಿನ ಸವಕಳಿಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
ಬೇಡ್ತಿ–ವರದಾ ಜೋಡಣೆಯ ಯೋಜನಾಪೂರ್ವ ವರದಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು 2021ರ ಆಗಸ್ಟ್‌ನಲ್ಲಿ ಸಲ್ಲಿಸಿದೆ. ವರದಿಯ ಪ್ರಕಾರ, ಬೇಡ್ತಿ ನದಿಯಿಂದ 242 ದಶಲಕ್ಷ ಕ್ಯೂಬಿಕ್ ಮೀಟರ್ ನೀರನ್ನು ಎತ್ತಿ ರಾಯಚೂರು ಜಿಲ್ಲೆಯ ತುಂಗಭದ್ರಾ ಯೋಜನೆಯ ಅಡಿಯಲ್ಲಿ 60,200 ಹೆಕ್ಟೇರ್ ಕೃಷಿಭೂಮಿಗೆ ಒದಗಿಸಲಾಗುವುದು. ಇದಕ್ಕಾಗಿ ಪಟ್ಟಣದ ಹಳ್ಳ ಮತ್ತು ಶಾಲ್ಮಲಾ ಹಳ್ಳಗಳಿಗೆ ತಡೆಕಟ್ಟುಗಳನ್ನು ನಿರ್ಮಿಸಿ, ಅವುಗಳನ್ನು ಪರಸ್ಪರ ಸಂಪರ್ಕಿಸುವ ಪ್ರಸ್ತಾವ ಇದೆ. ಯೋಜನೆ ಜಾರಿಗೆ ಬಂದರೆ, ಉತ್ತರ ಕನ್ನಡ ಜಿಲ್ಲೆಯ 787 ಹೆಕ್ಟೇರ್ ಅರಣ್ಯ, 130 ಹೆಕ್ಟೇರ್ ಕೃಷಿ ಭೂಮಿ ಮತ್ತು 88 ಹೆಕ್ಟೇರ್ ಕೃಷಿಯೇತರ ಭೂಮಿ ಮುಳುಗಡೆಯಾಗಲಿದೆ. ಸಿದ್ದಾಪುರ ತಾಲ್ಲೂಕಿನ ಕೆಲವು ಹೋಬಳಿಗಳು ಭಾಗಶಃ ಮುಳುಗಲಿವೆ. ಕೊಳವೆಗಳ ಮೂಲಕ ನೀರನ್ನು ಸಾಗಿಸಲು ಕಡಿಯಲಾಗುವ ಮರಗಳ ಸಂಖ್ಯೆ ಒಂದು ಲಕ್ಷದ ಇಪ್ಪತ್ತು ಸಾವಿರ ಎಂದು ಅಂದಾಜು ಮಾಡಲಾಗಿದೆ. ಹಾಲಿ 967 ಜನಸಂಖ್ಯೆಯಿರುವ ಒಂದು ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಲಿದೆ. ಹಾಲಿ ಯೋಜನೆಯ ಸ್ವರೂಪವನ್ನು ಬದಲಿಸಿ, ಅತಿ ಕಡಿಮೆ ಅರಣ್ಯನಾಶ ಮತ್ತು ಇತರ ಹಾನಿಗಳನ್ನು ತಗ್ಗಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಸರ್ಕಾರ ಬಲವಂತವಾಗಿ ಈ ಯೋಜನೆಗಳನ್ನು ಜಾರಿ ಮಾಡಿದಲ್ಲಿ, ತೀರ ಪ್ರದೇಶದ ಜನರ ಜೀವನೋಪಾಯಕ್ಕೆ ತೀವ್ರ ಹೊಡೆತ ಬೀಳುತ್ತದೆ; ಅರಣ್ಯ ನಾಶದಿಂದ ಜಲಚಕ್ರ, ಮುಂಗಾರು ಮಳೆ ಮಾದರಿಯಲ್ಲಿ ವ್ಯತ್ಯಯ ಉಂಟಾಗಲಿದೆ. ಅಪಾಯದಂಚಿನಲ್ಲಿರುವ ಜೀವಿವೈವಿಧ್ಯ ನಾಶವಾಗುವ ಭೀತಿಯಿದೆ. ನದಿಯ ಸಹಜ ಹರಿವಿಗೆ ತಡೆ ಮಾಡಿದಲ್ಲಿ, ಕರಾವಳಿಯಲ್ಲಿ ಸಮುದ್ರದ ಉಪ್ಪುನೀರು ನದಿಗೆ ಸೇರುತ್ತದೆ. ಇದರಿಂದ ಆ ಭಾಗದಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗುತ್ತದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್, ಸಂರಕ್ಷಿತ ಅರಣ್ಯಗಳ ಗಡಿಯಿಂದ ಒಂದು ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ್ದು, ಸದರಿ ಪ್ರದೇಶದಲ್ಲಿ ಯಾವುದೇ ಶಾಶ್ವತ ನಿರ್ಮಾಣಕ್ಕೆ ಅನುಮತಿ ಇಲ್ಲ ಎಂದು ಆದೇಶಿಸಿದೆ. ಅದರಂತೆ, ಈ ಯೋಜನೆ ಜಾರಿ ಮಾಡಲು ಅವಕಾಶವೇ ಇರುವುದಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳು ಮತ್ತು ತಾಲ್ಲೂಕು ಪಂಚಾಯಿತಿಗಳು ಈ ಯೋಜನೆ ಜಾರಿ ವಿರೋಧಿಸಿ ನಿರ್ಣಯ ಕೈಗೊಂಡಿವೆ.
ಹೂಳಿನಿಂದ ತುಂಬಿರುವ ತುಂಗಭದ್ರಾ ಜಲಾಶಯದಲ್ಲಿ ನದಿ ಜೋಡಣೆಯಿಂದ ಲಭ್ಯವಾಗುವ ಹೆಚ್ಚುವರಿ ನೀರು ಸಂಗ್ರಹಿಸುವುದು ತಾಂತ್ರಿಕವಾಗಿ ಅಸಾಧ್ಯ. ಅತಿಯಾದ ಮತ್ತು ನಿರಂತರವಾಗಿ ನೀರನ್ನು ಬಳಸಿದ ಪ್ರದೇಶಗಳು ಸವುಳಾಗುತ್ತಿವೆ. ಸ್ವಲ್ಪ ವರ್ಷದ ನಂತರದಲ್ಲಿ ಆ ಭೂಮಿಯಲ್ಲಿ ಯಾವ ಬೆಳೆಯನ್ನೂ ಬೆಳೆಯುವುದು ಅಸಾಧ್ಯವಾಗಲಿದೆ.
ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯು ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಿಸುವ ₹23,000 ಕೋಟಿ ಮೌಲ್ಯದ ಬೃಹತ್ ಯೋಜನೆಯ ಸಾಧ್ಯತಾ ವರದಿಯನ್ನು ತಯಾರಿಸಿದೆ. ಇದರನ್ವಯ 35 ಟಿಎಂಸಿ ಅಡಿ ನೀರನ್ನು ತಿರುಗಿಸಿ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರವನ್ನು ತುಂಬಿಸುವ ಉದ್ದೇಶವಿದೆ. 194 ಕಿ.ಮೀ. ಉದ್ದದ ಕೊಳವೆಮಾರ್ಗ ಸಿದ್ದಾಪುರ, ಗೋಳಿಮಕ್ಕಿ, ಹಾರ್ಸಿಕಟ್ಟಾ, ಸಾಗರ, ಶಿವಮೊಗ್ಗ, ತರೀಕೆರೆ ಮತ್ತು ಅಜ್ಜಂಪುರ ಮೂಲಕ ಸಾಗಲಿದೆ ಎನ್ನಲಾಗಿದೆ.
ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಪಶ್ಚಿಮಘಟ್ಟವಾಸಿಗಳ ಮನವೊಲಿಸಿ ನದಿ ಜೋಡಣೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಬೇಡ್ತಿ–ಅಘನಾಶಿನಿ ನದಿ ತಿರುವಿನಿಂದ ಬಯಲು ನಾಡು ಹಸಿರಾಗುವುದು ಹಾಗೂ ಇಲ್ಲಿನ ಜನರಿಗೆ ಕುಡಿಯುವ ನೀರು ಲಭ್ಯವಾಗುವುದು ಎಂಬುದು ಅವರ ಮಾತಿನ ತಾತ್ಪರ್ಯ. ಯೋಜನೆಯ ಸಮರ್ಥಕರು ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ನೀರಿನ ಕೊರತೆಯನ್ನು ಮುಂದಿಡುತ್ತಾರೆ. ಆದರೆ, ಈ ಪ್ರದೇಶಗಳ ನೀರಿನ ಸಮಸ್ಯೆಗೆ ಬೇರೆಯದೇ ಕಾರಣವಿದೆ. ಈ ಜಿಲ್ಲೆಗಳಲ್ಲಿ ಇತ್ತೀಚಿನ ದಶಕಗಳಲ್ಲಿ ವಿಪರೀತ ನೀರು ಬೇಡುವ ಬೆಳೆಗಳಾದ ಭತ್ತ, ಕಬ್ಬು, ಬಾಳೆ ಬೆಳೆಯಲಾಗುತ್ತಿದೆ. ಒಂದು ಹೆಕ್ಟೇರ್ ಕಬ್ಬು ಬೆಳೆಯು ವರ್ಷಕ್ಕೆ 15–20 ದಶಲಕ್ಷ ಲೀಟರ್ ನೀರು ಬೇಡುತ್ತದೆ. ಬರ ಪ್ರದೇಶದಲ್ಲಿ ಇಂತಹ ಬೆಳೆ ವಿನ್ಯಾಸವೇ ನೀರಿನ ಸಂಕಷ್ಟಕ್ಕೆ ಮೂಲ ಕಾರಣ. ಅಲ್ಲದೆ, ತುಂಗಭದ್ರಾ, ವರದಾ, ವೇದಾವತಿ ಕಣಿವೆಯಲ್ಲಿ ಈಗಾಗಲೇ ಅಣೆಕಟ್ಟುಗಳು, ಕಾಲುವೆಗಳಿವೆ. ಅಲ್ಲಿ ನೀರಿನ ದುರ್ಬಳಕೆ, ಸೋರಿಕೆ, ಅಸಮರ್ಪಕ ನಿರ್ವಹಣೆ ಮುಂದುವರಿದಿದೆ. ಇವುಗಳನ್ನು ಸರಿಪಡಿಸದೇ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ.
ವೈಜ್ಞಾನಿಕವಾಗಿ ನೋಡಿದರೆ, ರಾಯಚೂರು–ಕೊಪ್ಪಳ–ಗದಗ ಪ್ರದೇಶಗಳಿಗೆ ನದಿ ತಿರುವು ಮಾತ್ರವೇ ಪರಿಹಾರ ಎಂಬುದು ತಪ್ಪುಕಲ್ಪನೆ. ಬರ ಪ್ರದೇಶಗಳಿಗೆ ಸೂಕ್ತವಾದ ಜೋಳ, ಸಜ್ಜೆ, ರಾಗಿ, ತೊಗರಿ, ಕಡಲೆ, ಎಣ್ಣೆಕಾಳುಗಳು ಮುಂತಾದ ಅತಿ ಕಡಿಮೆ ನೀರು ಬೇಡುವ ಬೆಳೆಗಳನ್ನು ಅಲ್ಲಿ ಬೆಳೆಯಲಾಗುತ್ತಿತ್ತು. ಸೂಕ್ಷ್ಮ ನೀರಾವರಿ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಶೇ 30–40ರಷ್ಟು ನೀರು ಉಳಿತಾಯವಾಗಲಿದೆ. ಬೆಳೆ ವಿನ್ಯಾಸ ಬದಲಾವಣೆ ಹಾಗೂ ನೀರಾವರಿಯಲ್ಲಿ ದಕ್ಷತೆ ಹೆಚ್ಚಿಸಿದಲ್ಲಿ, ಹಾಲಿ ಲಭ್ಯವಿರುವ ನೀರಿನಲ್ಲೇ ಹೆಚ್ಚಿನ ಪ್ರದೇಶವನ್ನು ನೀರಾವರಿ ಭೂಮಿಯನ್ನಾಗಿ ಪರಿವರ್ತಿಸಬಹುದು. ಇಂತಹ ಸುಧಾರಣೆಗಳು ರಾಜಕೀಯವಾಗಿ ಆಕರ್ಷಕವಾಗಿರದಿದ್ದರೂ, ದೀರ್ಘಕಾಲೀನ ಪರಿಹಾರಗಳಾಗಿವೆ.
ಮಹದಾಯಿ ನದಿ ತಿರುವು ಯೋಜನೆ ಈಗಾಗಲೇ ಪಶ್ಚಿಮಘಟ್ಟಗಳಲ್ಲಿ ಎಬ್ಬಿಸಿರುವ ವಿವಾದ ಎಚ್ಚರಿಕೆಯ ಗಂಟೆಯಾಗಿದೆ. ಅತ್ತ ಗೋವಾ ರಾಜ್ಯವೂ ಈ ನದಿ ತಿರುವು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಮೂಲತಃ ಮಲಪ್ರಭಾ ಅಣೆಕಟ್ಟು (1974) ಕುಡಿಯುವ ನೀರಿಗಾಗಿ ಪ್ರಾರಂಭವಾದ ಯೋಜನೆಯಾಗಿತ್ತು. ಆದರೆ, ಅತಿ ಹೆಚ್ಚು ನೀರು ಕಬ್ಬು ಬೆಳೆಗೆ ಮತ್ತು ಸಕ್ಕರೆ ಕಾರ್ಖಾನೆಗಳ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ನೀರಿನ ತೀವ್ರ ಕೊರತೆಯಿರುವ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ 2005ರಲ್ಲಿ 25,000 ಹೆಕ್ಟೇರ್ ಕಬ್ಬು ಬೆಳೆಯಲಾಗುತ್ತಿತ್ತು. 2025ರಲ್ಲಿ ಮೂರು ಪಟ್ಟು ಹೆಚ್ಚಾಗಿ, 96,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಹಾಗೂ 132 ಟಿಎಂಸಿ ಅಡಿ ನೀರನ್ನು ಬಳಸಲಾಗುತ್ತಿದೆ. 2 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಬೆಳೆಯುವ ಬೆಳೆಗಳಿಗೆ ಬರೀ 24 ಟಿಎಂಸಿ ಅಡಿ ನೀರು ಬಳಕೆಯಾಗುತ್ತಿದೆ. ಜೊತೆಗೆ, ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ರಾಜಕೀಯ ಶಕ್ತಿಗಳ ಕೈಯಲ್ಲಿರುವುದು ಯೋಜನೆಗಳ ಬಗೆಗಿನ ಅನುಮಾನವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಬೇಡ್ತಿ–ಅಘನಾಶಿನಿ ನದಿ ಜೋಡಣೆ ಯೋಜನೆಯಲ್ಲಿಯೂ ಇದೇ ರೀತಿಯ ಅಪಾಯ ಕಾಣುತ್ತಿದೆ. ಆರಂಭದಲ್ಲಿ ಬರ ಪ್ರದೇಶಗಳಿಗೆ ನೀರು ಎಂದು ಹೇಳಿ, ನಂತರ ನೀರು ಹೆಚ್ಚು ಬೇಡುವ ಬೆಳೆಗಳು ಮತ್ತು ಕೈಗಾರಿಕೆಗಳಿಗೆ ಮಾರ್ಗ ತೆರೆದರೆ, ಪಶ್ಚಿಮಘಟ್ಟಗಳ ನಾಶ ಅನಿವಾರ್ಯ.
ನದಿಗಳು ಪೈಪಿನಲ್ಲಿ ಹರಿಸುವ ನೀರಿನ ಮೂಲಗಳಲ್ಲ; ಅವು ಜೀವಂತ ಪರಿಸರ ವ್ಯವಸ್ಥೆಗಳು. ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಉತ್ತರ ಕನ್ನಡದ ಕಾಡು, ಕರಾವಳಿ ಮತ್ತು ಪಶ್ಚಿಮಘಟ್ಟಗಳ ಭವಿಷ್ಯವನ್ನು ನಾಶ ಮಾಡುತ್ತದೆ. ಬರ ಪ್ರದೇಶಗಳ ಸಮಸ್ಯೆಗೆ ಪರಿಹಾರ ಹುಡುಕುವಾಗ, ಮತ್ತೊಂದು ಪ್ರದೇಶವನ್ನು ಬರದ ದಾರಿಯಲ್ಲಿ ತಳ್ಳುವುದು ನ್ಯಾಯವೂ ಅಲ್ಲ, ವಿವೇಕವೂ ಅಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.