ADVERTISEMENT

ವಿಶ್ಲೇಷಣೆ: ಎ.ಐ ಪೈಪೋಟಿ; ಇದು ಆರಂಭವಷ್ಟೆ!

ಬುದ್ಧಿವಂತಿಕೆಯನ್ನು ಒಂದು ಸರಕಾಗಿಸುವ ಹೊಸ ಕಾಲ ಬರುತ್ತಿದೆ. ಇದಕ್ಕೆ ಸಜ್ಜಾಗುವುದೊಂದೇ ದಾರಿ

ವಸಂತ ಶೆಟ್ಟಿ
Published 11 ಫೆಬ್ರುವರಿ 2025, 19:41 IST
Last Updated 11 ಫೆಬ್ರುವರಿ 2025, 19:41 IST
   

2025 ಶುರುವಾಗಿ ತಿಂಗಳಾಗಿದೆಯಷ್ಟೆ. ಆದರೆ ತಿಂಗಳೊಂದರಲ್ಲೇ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದರೆ, ಇನ್ನು ಕೆಲ ವರ್ಷಗಳಲ್ಲಿ ನಾವು ನೋಡಲಿರುವ ಪ್ರಪಂಚ ಈಗಿನಂತಿರದು ಅನ್ನುವುದು ಸ್ಪಷ್ಟ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅಧಿಕಾರಕ್ಕೇರಿದ ತಕ್ಷಣವೇ ‘ಸ್ಟಾರ್ ಗೇಟ್’ ಅನ್ನುವ ಯೋಜನೆಯನ್ನು ಘೋಷಿಸಿ, ಅದಕ್ಕೆ /ಐನೂರು ಬಿಲಿಯನ್ ಡಾಲರ್‌/ ಹೂಡಿಕೆ ಮಾಡುವುದಾಗಿ ತಿಳಿಸಿದರು. ನಾಲ್ಕನೆಯ ಔದ್ಯಮಿಕ ಕ್ರಾಂತಿಯಲ್ಲೂ ಅಮೆರಿಕದ ಪಾರಮ್ಯ ಮುಂದುವರಿಯಬೇಕು ಅಂದರೆ ಎ.ಐ ತಂತ್ರಜ್ಞಾನದ ಬೆಳವಣಿಗೆಯ ಮೇಲೆ ಬಿಗಿ ಹಿಡಿತ ಅಮೆರಿಕದ್ದಾಗಿರಬೇಕು ಮತ್ತು ಅದನ್ನು ಸಾಧ್ಯವಾಗಿಸಲು ಈ ಹೂಡಿಕೆ ಬೇಕು ಅನ್ನುವ ನಿಲುವು ಇಲ್ಲಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಚೀನಾ ‘ಡೀಪ್‌ಸೀಕ್’ ಅನ್ನುವ ಹೊಸತೊಂದು ಎ.ಐ ನುಡಿ ಮಾದರಿಯನ್ನು ಜಗತ್ತಿಗೆ ಪರಿಚಯಿಸಿತು. ಓಪನ್ ಎ.ಐ ತರಹದ ಅಮೆರಿಕದ ಸಂಸ್ಥೆಯು ಒಂದು ನುಡಿಮಾದರಿಯನ್ನು ತರಬೇತುಗೊಳಿಸಲು ಮಾಡಿದ ವೆಚ್ಚದ ನೂರರಲ್ಲಿ ಒಂದು ಭಾಗದಷ್ಟು ವೆಚ್ಚದಲ್ಲಿ ಅದರಷ್ಟೇ ಸಮರ್ಥವಾಗಿ ಕೆಲಸ ಮಾಡುವ ಮಾದರಿಯೊಂದನ್ನು ಬಿಡುಗಡೆಗೊಳಿಸಿ ಜಗತ್ತನ್ನೇ ಬೆರಗಾಗಿಸಿತು.

ಎ.ಐ ತಂತ್ರಜ್ಞಾನದ ಬೆಳವಣಿಗೆಗೆ ನಿರಂತರವಾಗಿ ವಿಶ್ಲೇಷಣಾ ಶಕ್ತಿಯನ್ನು (ಕಾಂಪ್ಯುಟೇಷನಲ್ ಪವರ್) ಒದಗಿಸುವ ಜಿಪಿಯು ಚಿಪ್‍ಗಳು ಬೇಕು, ದೊಡ್ಡ ಡೇಟಾ ಸೆಂಟರುಗಳು ಬೇಕು, ನಿರಂತರ ವಿದ್ಯುತ್ ಪೂರೈಕೆ ಬೇಕು... ಹೀಗಾಗಿ ಇದಕ್ಕೆ ದೊಡ್ಡ ಮಟ್ಟದ ಬಂಡವಾಳ ಬೇಕು ಎಂದು ಜಗತ್ತನ್ನೇ ನಂಬಿಸಿದ್ದ ಅಮೆರಿಕದ ಮುಂಚೂಣಿಯ ತಂತ್ರಜ್ಞಾನ ಸಂಸ್ಥೆಗಳ ವಾದವನ್ನು ತಲೆಕೆಳಗು ಮಾಡಿದ ಚೀನಾ, ರಾತ್ರೋರಾತ್ರಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಈ ಎಲ್ಲ ತಂತ್ರಜ್ಞಾನ ಸಂಸ್ಥೆಗಳ ಷೇರುಗಳ ಮೌಲ್ಯ ತೀವ್ರವಾಗಿ ಕುಸಿಯುವಂತೆ ಮಾಡಿತು. ‘ಸ್ಟಾರ್ ಗೇಟ್’ ಯೋಜನೆ ಘೋಷಿಸಿದ ಕೆಲ ದಿನಗಳಲ್ಲೇ ಚೀನಾ ‘ಡೀಪ್ ಸೀಕ್’ ಬಿಡುಗಡೆಗೊಳಿಸಿ ಅಮೆರಿಕದ ಕಂಪನಿಗಳ ಷೇರು ಮೌಲ್ಯ ಕುಸಿಯುವಂತೆ ಮಾಡಿದ್ದು ಖಂಡಿತ ಕಾಕತಾಳೀಯ ಆಗಿರಲಿಕ್ಕಿಲ್ಲ!

ADVERTISEMENT

ಇಲ್ಲಿ ಇನ್ನೊಂದು ಆಸಕ್ತಿಯ ವಿಷಯವೆಂದರೆ, ಎ.ಐ ವಿಷಯದಲ್ಲಿ ಚೀನಾವನ್ನು ನಿಯಂತ್ರಿಸಲೆಂದೇ ಈ ಜಿಪಿಯು ಚಿಪ್‍ಸೆಟ್‍ಗಳನ್ನು ಚೀನಾಕ್ಕೆ ಕೊಡುವುದರ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ಆದರೂ ಅದು ಯಾವುದೋ ದಾರಿಯಲ್ಲಿ ಒಂದಿಷ್ಟು ಚಿಪ್‍ಸೆಟ್‍ಗಳನ್ನು ಹೊಂದಿಸಿಕೊಂಡಿದ್ದ ಚೀನಾ, ಇದ್ದ ಸೀಮಿತ ಸಂಪನ್ಮೂಲವನ್ನೇ ಬಳಸಿಕೊಂಡು, ಬುದ್ಧಿಶಕ್ತಿಯ ಬಲದಲ್ಲಿ ಸಮರ್ಥವಾಗಿ ಅಮೆರಿಕದ ಸಂಸ್ಥೆಗಳ ಅತ್ಯಂತ ಸುಧಾರಿತ ಎ.ಐ ಮಾದರಿಗೆ ಸಡ್ಡು ಹೊಡೆಯುವ ಮಾದರಿಯನ್ನು ಕಟ್ಟಿ ಸಿಲಿಕಾನ್ ವ್ಯಾಲಿಯ ದೈತ್ಯರನ್ನು ನಡುಗಿಸಿತು.

ಮನುಕುಲದ ಈವರೆಗಿನ ತಿಳಿವಳಿಕೆಯನ್ನೆಲ್ಲ ಬಸಿದು, ಎ.ಐ ನುಡಿಮಾದರಿಗಳನ್ನು ಕಟ್ಟುವುದು ಅಂದರೆ ಭಾರಿ ಮೊತ್ತದ ಹೂಡಿಕೆ ಬೇಕು ಅನ್ನುವ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದ ಈ ಬೆಳವಣಿಗೆ ಭಾರತಕ್ಕಂತೂ ಒಂದು ಹೊಸ ಭರವಸೆ ನೀಡಿತು. ಎ.ಐ ತಂತ್ರಜ್ಞಾನ ಕುರಿತ ಚರ್ಚೆ ಶುರುವಾದಾಗಿನಿಂದಲೂ ಭಾರತದಲ್ಲಿ ನಾವು ನಮ್ಮದೇ ನುಡಿ ಮಾದರಿಗಳನ್ನು ಕಟ್ಟಿಕೊಳ್ಳಬೇಕೇ ಅಥವಾ ಇತರರು ಕಟ್ಟಿದ ಮಾದರಿಯನ್ನು ಬಳಸಿಕೊಂಡು ಅದರ ಮೇಲೆ ನಮ್ಮ ಅಗತ್ಯಗಳಿಗೆ ಬೇಕಾದ ಉತ್ಪನ್ನ, ಸೇವೆಗಳನ್ನು ಕಟ್ಟಿಕೊಳ್ಳುವುದೇ ಅನ್ನುವ ಚರ್ಚೆ ನಡೆಯುತ್ತಲಿತ್ತು. ಭಾರತದ ಸಾಫ್ಟ್‌ವೇರ್ ಸೇವಾ ವಲಯದ ದೊಡ್ಡ ಸಂಸ್ಥೆಗಳೆಲ್ಲ ‘ನಾವು ಬಳಸುಗರಾದರೆ ಸಾಕು, ನಮ್ಮದೇ ನುಡಿಮಾದರಿ ಕಟ್ಟುವುದು ಆರ್ಥಿಕವಾಗಿ ಕಷ್ಟ, ಅದಕ್ಕೆ ಬೇಕಾದ ಪ್ರತಿಭೆಯ ಪೂರೈಕೆಯೂ ನಮ್ಮಲ್ಲಿಲ್ಲ’ ಅನ್ನುವ ಅನುಮಾನದ ಮಾತುಗಳನ್ನಾಡುತ್ತಿದ್ದವು. ಆದರೆ ಚೀನಾದ ಡೀಪ್‌ಸೀಕ್ ಯಶಸ್ಸು ಭಾರತದಲ್ಲೂ ಒಂದಿಷ್ಟು ಗಟ್ಟಿಯಾದ ನಿರ್ಧಾರಗಳಿಗೆ ಕಾರಣವಾಯಿತು.

ಈ ಬಾರಿಯ ಬಜೆಟ್‍ನಲ್ಲಿ ಇಂಡಿಯಾ ಎ.ಐ ಮಿಶನ್ ಅನ್ನುವ ಯೋಜನೆಯಡಿ ಸರ್ಕಾರವೇ ಜಿಪಿಯು ಚಿಪ್‍ಗಳನ್ನು ಖರೀದಿಸಿ, ಸ್ಟಾರ್ಟ್ ಅಪ್ ಮತ್ತು ಸಂಶೋಧಕರಿಗೆ ಅಗ್ಗದ ಬೆಲೆಯಲ್ಲಿ ವಿಶ್ಲೇಷಣಾ ಶಕ್ತಿಯನ್ನು ಒದಗಿಸಲು ₹ 2,000 ಕೋಟಿ ನಿಗದಿ ಮಾಡುವುದಾಗಿ ಘೋಷಿಸಿದೆ. ಇದೊಂದು ಒಳ್ಳೆಯ ಹೆಜ್ಜೆಯೇ ಆಗಿದ್ದರೂ ಚೀನಾದ ಉದಾಹರಣೆಯನ್ನು ಸ್ವಲ್ಪ ಆಳವಾಗಿ ಗಮನಿಸಿದರೆ, ತಂತ್ರಜ್ಞಾನ ಲೋಕದಲ್ಲಿನ ಅವರ ಈಗಿನ ಯಶಸ್ಸೆಲ್ಲವೂ ಕೆಲ ದಶಕಗಳಿಂದ ಶಿಕ್ಷಣ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಸರ್ಕಾರ ಮಾಡುತ್ತಾ ಬಂದಿರುವ ನಿರಂತರವಾದ ಹೂಡಿಕೆಯ ಫಲವೆಂದು ಕಾಣಬಹುದು. ಇಂದು ಜಗತ್ತಿನ ಅರ್ಧಕ್ಕೂ ಹೆಚ್ಚು ಎ.ಐ ಸಂಶೋಧಕರು ಚೀನಾದಿಂದ ಬರುತ್ತಿದ್ದರೆ, 2030ರ ಹೊತ್ತಿಗೆ ಈ ವಿಷಯದಲ್ಲಿ ಜಾಗತಿಕ ನಾಯಕತ್ವವನ್ನು ಪಡೆಯಬೇಕು ಅನ್ನುವ ದೂರಾಲೋಚನೆಯಿಂದ ಚೀನಾ ಮಾಡಿರುವ ಹೂಡಿಕೆಯೇ ಕಾರಣವಾಗಿದೆ.

ಜೆರೋದಾ ಸಂಸ್ಥೆಯ ಕೈಲಾಶ್ ನಾದ್ ಅವರು ಹೇಳುವಂತೆ, ಈ ಚರ್ಚೆಯನ್ನು ಎ.ಐ ನುಡಿಮಾದರಿ, ಜಿಪಿಯು ವಿಷಯದಲ್ಲಿ ನಮ್ಮ ದೇಶಕ್ಕೂ ಸಾರ್ವಭೌಮತ್ವ ಇರಬೇಕು ಅನ್ನುವ ಸೀಮಿತ ದೃಷ್ಟಿಯಿಂದ ಮಾತ್ರ ನೋಡಬಾರದು. ಮೂಲಭೂತವಾಗಿ ಉದ್ಯಮ ಮತ್ತು ಉನ್ನತ ಶಿಕ್ಷಣದ ವಲಯದಲ್ಲಿ ವಿಜ್ಞಾನ, ಗಣಿತ, ತತ್ವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳ ಪರಿಣತಿಯನ್ನು ಬುಡದಿಂದ ಕಟ್ಟುತ್ತ, ಯಾವೆಲ್ಲ ಕಾರಣಗಳಿಗಾಗಿ ಇಂದು ಹೊರದೇಶಗಳಿಗೆ ಈ ಕ್ಷೇತ್ರಗಳಲ್ಲಿ ಪ್ರತಿಭಾ ಪಲಾಯನವಾಗುತ್ತಿದೆಯೋ ಅದನ್ನು ತಡೆದು ನಿಲ್ಲಿಸುವ ದೂರಗಾಮಿ ಯೋಜನೆಗೂ ವಿಸ್ತರಿಸಿದರೆ ಹತ್ತು ವರ್ಷಗಳಲ್ಲಿ ನಾವು ನಿಜಕ್ಕೂ ಇದಕ್ಕೆ ಸರಿಯಾಗಿ ಸಜ್ಜಾಗುತ್ತೇವೆ.

ದೂರಗಾಮಿ ನೆಲೆಯಲ್ಲಿ ಏನಾಗಬೇಕು ಅನ್ನುವುದು ಒಂದು ಚರ್ಚೆಯಾದರೆ, ಮುಂದಿನ ಐದು ವರ್ಷಗಳಲ್ಲಿ ಈ ತಂತ್ರಜ್ಞಾನದ ಅಲೆಯು ಭಾರತದಂತಹ ಇನ್ನೂ ಮಧ್ಯಮ ಆದಾಯದ ಮಟ್ಟಕ್ಕೂ ತಲುಪದ ದೇಶದಲ್ಲಿ ಯಾವ ಬಗೆಯ ತಲ್ಲಣಗಳನ್ನು ಸೃಷ್ಟಿಸಲಿದೆ ಮತ್ತು ಅದಕ್ಕೆ ಹೇಗೆ ತಯಾರಾಗಬೇಕು ಅನ್ನುವ ಬಗ್ಗೆ ಈಗ ತುರ್ತಾಗಿ ಚರ್ಚಿಸಬೇಕಾದ ಅಗತ್ಯವಿದೆ. ಇತ್ತೀಚಿನ ಆರ್ಥಿಕ ಸಮೀಕ್ಷೆ ಈ ಕುರಿತು ಮಾತನಾಡಿದೆ. ಹಿಂದಿನ ಮೂವತ್ತು ವರ್ಷಗಳಲ್ಲಿ ಭಾರತದ ಐಟಿ ಸೇವಾ ವಲಯ ಗಳಿಸಿದ ಯಶಸ್ಸು ನಮ್ಮ ನಗರಗಳಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿತ್ತು. ಇದು ಸೃಷ್ಟಿಸಿದ ಉಪಭೋಗದ ಆರ್ಥಿಕತೆ ಐಟಿಯೇತರ ವಲಯಗಳಲ್ಲಿ ಹತ್ತಾರು ಪಟ್ಟು ಉದ್ಯೋಗಗಳನ್ನು ಸೃಷ್ಟಿಸಿ, ಭಾರತವು ಜಗತ್ತಿನ ಐದನೆಯ ದೊಡ್ಡ ಆರ್ಥಿಕತೆಯಾಗುವುದಕ್ಕೆ ಕೊಡುಗೆ ನೀಡಿದೆ. ಐಟಿ ಸೇವಾ ವಲಯದಲ್ಲಿನ ಹಲವಾರು ರೀತಿಯ ಕೆಲಸಗಳನ್ನು ಈಗ ಎ.ಐ ತಂತ್ರಜ್ಞಾನ ಅತ್ಯಂತ ಸುಲಭವಾಗಿ ತಾನೇ ಮಾಡುವ ಶಕ್ತಿ ಪಡೆದುಕೊಳ್ಳುತ್ತಿರುವುದರಿಂದ ಇಲ್ಲಿನ ಬಹುತೇಕ ಕಡಿಮೆ ನೈಪುಣ್ಯದ ಕೆಲಸಗಳು ಇನ್ನಿಲ್ಲವಾಗುವ ದಿನಗಳು ಹತ್ತಿರದಲ್ಲಿವೆ.

ಈಗಾಗಲೇ ನಿರುದ್ಯೋಗದ ಸಮಸ್ಯೆ ಆಳವಾಗಿರುವ ನಮ್ಮ ದೇಶದಲ್ಲಿ ಇದರಿಂದಾಗಿ ಇನ್ನಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಎ.ಐ ಬಳಕೆಯ ಕುರಿತು ಒಂದು ಜವಾಬ್ದಾರಿಯುತ ನೀತಿ ರೂಪಿಸುವ ತುರ್ತಿದೆ ಎಂದು ಸಮೀಕ್ಷೆ ಹೇಳುತ್ತದೆ. ಆದರೆ ಈ ತಂತ್ರಜ್ಞಾನದ ಕ್ರಾಂತಿ ಒಂದು ಜಾಗತಿಕ ಬೆಳವಣಿಗೆಯಾಗಿರುವುದರಿಂದ ಇದನ್ನು ನಿರ್ದಿಷ್ಟವಾಗಿ ನಿಯಂತ್ರಿಸುವುದು ಯಾವುದೇ ದೇಶಕ್ಕೂ ಕಷ್ಟ. ಈ ಬಗ್ಗೆ ಒಂದು ಜಾಗತಿಕ ಸಹಮತ ರೂಪಿಸುವ ಅಗತ್ಯವಿದೆಯಾದರೂ ಸದ್ಯಕ್ಕಂತೂ ಈ ತಂತ್ರಜ್ಞಾನದ ಮೇಲೆ ಪಾರಮ್ಯ ಸಾಧಿಸುವ ಪೈಪೋಟಿಯಲ್ಲಿರುವ ಅಮೆರಿಕ ಮತ್ತು ಚೀನಾ ಈ ಪ್ರಯತ್ನಗಳಿಗೆ ಕೈ ಜೋಡಿಸದೇ ಇದು ಸಾಧ್ಯವಾಗದು. ಅಲ್ಲಿಯವರೆಗೆ ನಮಗೆ ಇರುವ ಆಯ್ಕೆಯೆಂದರೆ ಇಂತಹ ತಂತ್ರಜ್ಞಾನದ ಕಟ್ಟುವಿಕೆ, ಬಳಕೆ ಮತ್ತು ವಿಕಾಸದಲ್ಲಿ ಚೀನಾದಂತೆಯೇ ನಾವು ಸ್ವಾವಲಂಬಿಯಾಗುವ ಪ್ರಯತ್ನದ ಜೊತೆ ನಮ್ಮ ಸಂದರ್ಭ, ನಮ್ಮ ಅಗತ್ಯಗಳಿಗೆ ಪೂರಕವಾಗಿ ಈ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ನಮ್ಮ ಶಿಕ್ಷಣ, ಆರೋಗ್ಯ ಸೇವೆ ಮತ್ತು ಆಡಳಿತ ಯಂತ್ರದಲ್ಲಿ ಚುರುಕುತನ ಮತ್ತು ಪಾರದರ್ಶಕತೆ ತರುವತ್ತ ಬಳಸಿಕೊಳ್ಳುವುದಾಗಿದೆ.

ಈ ಕ್ರಾಂತಿಯ ಆರಂಭದ ದಿನಗಳಲ್ಲಿ ನಾವಿದ್ದೇವೆ. ಇದು ಮನುಕುಲದ ನಾಗರಿಕತೆಯ ಚಹರೆಯನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಇದಕ್ಕೆ ಮುಖ ತಿರುಗಿಸದೇ ಇದನ್ನು ನಮ್ಮೊಳಿತಿಗೆ ಬಳಸಿಕೊಳ್ಳುವುದು ಹೇಗೆ ಅನ್ನುವ ಕುರಿತು ಯುದ್ಧೋಪಾದಿಯಲ್ಲಿ ಕೆಲಸ ಮಾಡುವುದೊಂದೇ ಈಗಿರುವ ದಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.