ಊರಿಂದ ಬಸ್ ಹತ್ತಿದವನು ಬಂದು ಇಳಿದಿದ್ದು ಮೆಜೆಸ್ಟಿಕ್‌ನಲ್ಲಿ. ಬಸ್‌ನಿಂದ ಇಳಿದೊಡನೆ ಒಂದು ಸಲ ದಿಗ್ಭ್ರಮೆಯಾಯಿತು. ಅತ್ತಿಂದಿತ್ತ ಓಡಾಡುವ ಸಾವಿರಾರು ಜನ, ವಿಶಾಲವಾದ ಪ್ರದೇಶ, ನೂರಾರು ಬಸ್‌ಗಳು, ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿದಾಗ ಎತ್ತ ಸಾಗಬೇಕು ಎಂಬುವುದೇ ಗೊತ್ತಾಗಲಿಲ್ಲ.
ಹೀಗೆ ಸುತ್ತ ಕಣ್ಣಾಡಿಸುತ್ತಾ, ಆಶ್ಚರ್ಯ ಭಾವದೊಂದಿಗೆ ನಿಂತಲ್ಲೆ ನಿಂತಿದ್ದೆ. ಮಲ್ಲೇಶ್ವರಂಗೆ ಯಾವ ಕಡೆ ಹೋಗಬೇಕು ಎಂದು ಯಾರ ಬಳಿ ಕೇಳುವುದು ಎಂದು ಯೊಚಿಸುತ್ತಿದ್ದೆ. ಅಲ್ಲೆ ಬಸ್ ನಿಲ್ದಾಣದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಕಂಡರು. ತಕ್ಷಣ ಅವರತ್ತ ಧಾವಿಸಿ ಮಲ್ಲೇಶ್ವರಂ ದಾರಿ ತಿಳಿದುಕೊಂಡೆ. ಕೇವಲ ದಾರಿ ಕೇಳಿ ಸುಮ್ಮನಾಗಲು ಮನಸ್ಸಾಗಲಿಲ್ಲ. ಅವರನ್ನು ಮಾತಿಗೆಳೆಯುವ ಅನ್ನಿಸಿತು. ‘ಅಜ್ಜ, ಈ ಮೆಜೆಸ್ಟಿಕ್ ಬಗ್ಗೆ ನಿಮಗೆ ಎಲ್ಲ ಗೊತ್ತೋ?’ ಎಂದು ಕೇಳಿದೆ.
ತುಸು ನಗೆ ಬೀರಿದ ಅವರು, 'ಹುಟ್ಟಿದ್ದು ಇಲ್ಲೆ, ಬದುಕುತ್ತಿರುವುದು ಇಲ್ಲೇ, ಸಾಯುವುದು ಇಲ್ಲೇ' ಎಂದು ಸುಮ್ಮನಾದರು. ಮೆಜೆಸ್ಟಿಕ್‌ನೊಂದಿಗೆ ಜೀವಿಸಿದ್ದೇನೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.
ಮಾತು ಮುಂದುವರಿಸಿದ ನಾನು, ‘ನನಗೂ ಮೆಜೆಸ್ಟಿಕ್ ಬಗ್ಗೆ ತಿಳಿದುಕೊಳ್ಳೊ ಕುತೂಹಲ, ಇಲ್ಲಿನ ಬಗ್ಗೆ ಹೇಳಿ’ ಎಂದೆ. ಕರೆದು ಪಕ್ಕದಲ್ಲಿ ಕೂರಿಸಿಕೊಂಡ ಅವರು ಮಾತಿಗೆ ಮುಂದಡಿ ಇಟ್ಟರು...
‘ಮೆಜೆಸ್ಟಿಕ್, ಇದೊಂತರ ಬೆಂಗಳೂರಿನ ರಾಜಧಾನಿ ಇದ್ದಂತೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮುಂತಾದ ರಸ್ತೆ ಸಾರಿಗೆ ಬಸ್‌ಗಳ ವಾಸಸ್ಥಳವಿದು. ಬೇರೆ ಬೇರೆ ಊರಿಂದ ಬರೋ ಸರ್ಕಾರಿ ಬಸ್‌ಗಳ ಕೊನೆಯ ನಿಲ್ದಾಣವಿದು. ಹಾಗಾಗಿ ಇದು ನಿತ್ಯದ ಜನಸಂತೆ’.
‘ನಾವೆಲ್ಲ ಹೇಳುವ ಮೆಜೆಸ್ಟಿಕ್ ಎಂಬ ಹೆಸರಿನ ಹಿಂದೆ ಒಂದು ಕಥೆ ಇದೆ ನಿಂಗೊತ್ತಾ ಹುಡುಗ?’ ಅಂತ ಕೇಳಿದ್ರು ಅಜ್ಜ. ನನಗೂ ತಿಳ್ಕೊಳ್ಳುವ ಕುತೂಹಲ ಇತ್ತು, ‘ಹೇಳಿ ಅಜ್ಜ ಅಂದೆ’...
‘ಈ ಮೆಜೆಸ್ಟಿಕ್ ಅನ್ನೋದು ಒಂದು ಸಿನಿಮಾ ಥಿಯೇಟರ್ ಹೆಸರು. ಈ ಕೆಂಪೇಗೌಡ ಬಸ್ ನಿಲ್ದಾಣದಲ್ಲೇ ಮೆಜೆಸ್ಟಿಕ್ ಎಂಬ ಥಿಯೇಟರ್ ಇದ್ದಿದ್ದು. ಯಾರೋ ಹೇಳೋದು ಕೇಳಿದ್ದೀನಿ 1920ರಲ್ಲಿ ಆ ಥಿಯೇಟರ್ ಕಟ್ಟಿದ್ರು ಅಂತಾ. ಮುಂದೆ ಅದ್ರ ಹೆಸರೆ ಈ ಇಡೀ ಪ್ರದೇಶಕ್ಕೆ ಕಾಯಂ ಆಯ್ತು. ಆ ಥಿಯೇಟರ್ ಮುಚ್ಚಿ ಹೋದ್ರೂ ಅದ್ರ ಹೆಸರು ಮಾತ್ರ ಶಾಶ್ವತವಾಗಿ ಉಳೀತು’.
‘ನಿಂಗೊಂದು ವಿಷಯ ಗೊತ್ತಾ. ನೀನು ನೋಡ್ತಿದ್ಯಲ್ಲ ಇಷ್ಟು ದೊಡ್ಡ ಬಸ್ ನಿಲ್ದಾಣ ಇದನ್ನು ಕಟ್ಟಿರೋದು ಒಂದು ಕೆರೆಯ ಮೇಲೆ. ಆ ಕಾಲದಲ್ಲಿ ಬತ್ತಿ ಹೋಗಿದ್ದ ಧರ್ಮಾಂಬುಧಿ ಕೆರೆಯನ್ನು ಮುಚ್ಚಿ ಆದರ ಮೇಲೆ ಬಸ್ ನಿಲ್ದಾಣ ಕಟ್ಟಿದ್ರು. 19 ಮತ್ತು 20ನೇ ಶತಮಾನದಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಸಾಕಷ್ಟು ಕೆರೆಗಳಿದ್ದವು. ಬೆಂಗಳೂರು ಬೆಳೆಯುತ್ತಾ ಅಭಿವೃದ್ಧಿ ಹೊಂದುತ್ತಾ ಹೋದಂತೆ ಕೆರೆಗಳನ್ನು ಮುಚ್ಚಿ ಅಂಗಡಿ ಮಳಿಗೆ, ಬಸ್ ನಿಲ್ದಾಣ ಮುಂತಾದವುಗಳನ್ನು ನಿರ್ಮಾಣ ಮಾಡಲಾಯಿತು’.
‘ಹಿಂದೆ ಮೆಜೆಸ್ಟಿಕ್‌ನಲ್ಲಿ ಹಲವಾರು ಸಿನಿಮಾ ಥಿಯೇಟರ್‌ಗಳಿದ್ದವು. ಆ ವೈಭವ ಈಗಿಲ್ಲ ಬಿಡು, ಅವುಗಳಲ್ಲಿ ಕೆಲವೊಂದು ಮುಚ್ಚಿ ಹೋಗಿವೆ. ಸಂತೋಷ್, ಅನುಪಮಾ, ತ್ರಿವೇಣಿ, ನರ್ತಕಿ ಹೀಗೆ ಹಲವಾರು ಚಿತ್ರಮಂದಿರಗಳ ಹೆಸರು ಸಿನಿಪ್ರಿಯರ ಮನೆಮಾತಾಗಿದ್ದವು’.
‘ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿ ಊರು ಬಿಟ್ಟು ಬರುವ ಅದೆಷ್ಟೋ ಜನರ ಹೊಸ ಪಯಣ ಆರಂಭಗೊಂಡಿದ್ದು ಇದೆ ಮೆಜೆಸ್ಟಿಕ್‌ನಿಂದ. ಹಲವಾರು ಸಿನಿಮಾ ನಟರು, ಉದ್ಯಮಿಗಳು, ಸಾಧಕರು ಹೇಳಿದ್ದನ್ನು ನೀನು ಕೇಳಿರ್ಬೇಕಲ್ವ’.
‘ಬೆಂಗಳೂರನ್ನು ಕಾಯೋ ತಾಯಿ ಅಣ್ಣಮ್ಮ ಇದಾಳಲ್ಲ ಅವ್ಳು ಇರೋದು ಮೆಜೆಸ್ಟಿಕ್‌ನಲ್ಲೇ. ಅವಳ ದೇಗುಲದಲ್ಲಿ ಪ್ರತಿದಿನವೂ ಕೂಡ ಪೂಜೆ ಪುನಸ್ಕಾರಗಳು, ಅಮಾವಾಸ್ಯೆ ಹಾಗೂ ಪೌರ್ಣಿಮೆಯಂದು ವಿಶೇಷ ಪೂಜೆಯನ್ನು ನಡೆಯುತ್ತಿರುತ್ತೆ. ಅವಳ ಹೆಸ್ರಲ್ಲಿ ಗಲ್ಲಿ ಗಲ್ಲಿಗಳಲ್ಲಿ ಉತ್ಸವ ನಡೆಯುತ್ತೆ. ವರ್ಷಕೊಮ್ಮೆ ನಡೆಯುವ ಕರಗ ಇದೆಯಲ್ಲ ಅದು ಬೆಂಗಳೂರಿನ ಹಬ್ಬ ಇದ್ದಂಗೆ’.
‘ಇಲ್ಲಿ ಒಳ್ಳೇದು ಇದೆ; ಕೆಟ್ಟದ್ದು ಇದೆ. ನೂರಾರು ಜನ ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿ ಇರುವವರಿಗೆ ಇಲ್ಲಿಗೆ ಬರೋ ಜನರಿಂದಲೇ ಜೀವನ. ಇದರೊಂದಿಗೆ ಕಳ್ಳ ಕಾಕರು ತುಂಬಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೆ. ನಿಮ್ಮಲ್ಲಿರುವ ಒಂದು ವಸ್ತುವನ್ನು ಬಿಡದೆ ದೋಚುತ್ತಾರೆ. ಅಲ್ಲಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತೆ’.
‘ಅದಿರ್ಲಿ ಬಿಡು ನಾವು ಒಳ್ಳೆದನ್ನು ಮಾತ್ರ ನೋಡಿದ್ರೆ ಆಯ್ತು’ ಎನ್ನುತ್ತಾ ಅಜ್ಜ ಹೊರಟೆ ಬಿಟ್ರು. ಅಬ್ಬಾ ಮೆಜೆಸ್ಟಿಕ್ ಹಿಂದೆ ಇಷ್ಟು ಕಥೆ ಇದೆಯಾ ಅಂತ ಯೋಚಿಸುತ್ತ ನಾನು ಮಲ್ಲೇಶ್ವರಂ ಬಸ್ ಕಡೆ ಹೆಜ್ಜೆ ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.