ADVERTISEMENT

ವಿಶ್ಲೇಷಣೆ | ಜಾತಿಪ್ರಜ್ಞೆ ಮತ್ತು ನೈತಿಕ ಹಕ್ಕು

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 23:30 IST
Last Updated 9 ಜನವರಿ 2025, 23:30 IST
   

ಋಗ್ವೇದದಲ್ಲಿ ಬರುವ ಪುರುಷ ಸೂಕ್ತವೇ ಚಾತುರ್ವರ್ಣದ ಮೂಲ ಪಠ್ಯ. ಪುರುಷ ಸೂಕ್ತವು ಒಂದು ಕಲ್ಪಿತ ಭಾಗವಾಗಿದ್ದು, ಆ ನಂತರದಲ್ಲಿ ಋಗ್ವೇದಕ್ಕೆ ಸೇರ್ಪಡೆಗೊಂಡದ್ದು. ಇಲ್ಲಿಂದ ಮೊದಲ್ಗೊಂಡ ಚಾತುರ್ವರ್ಣದ  ವರ್ಣವಿನ್ಯಾಸವು ಮುಂದಿನ ಕಾಲಘಟ್ಟಗಳಲ್ಲಿ ಜಾತಿಗಳ ಹುಟ್ಟಿಗೆ ವಿಸ್ತರಣೆಯಾಯಿತು. ಈ ಬೆಳವಣಿಗೆ ಒಂದು ದಿನದಲ್ಲಿ, ಒಂದು ಕಾಲಘಟ್ಟದಲ್ಲಿ ಆದದ್ದಲ್ಲ. ಆಗುತ್ತಾ ಸಾಗಿದಂತೆ ತನ್ನ ಬೇರು– ಬಿಳಲುಗಳನ್ನು ಚಾಚುತ್ತಾ ಹೋದ ವೃಕ್ಷ ಮಾದರಿಯ ಬೆಳವಣಿಗೆ ಅದು.

ಈ ಬೆಳವಣಿಗೆಯು ಹುಟ್ಟಿನ ಮೂಲಕ್ಕೇ ವ್ಯಕ್ತಿಗೆ ಜಾತಿಯ ನಂಟನ್ನು ಗಂಟು ಹಾಕುವುದರಿಂದ ಮೊದಲ್ಗೊಂಡು ವಿಧಿ– ನಿಷೇಧಗಳ ಆಚರಣೆಗಳಲ್ಲಿ ಅದನ್ನು ಸ್ಥಿರೀಕರಿಸಿ, ಬೇರೂರಿ ಬೆಳೆದ ವಿಷವೃಕ್ಷವಾಯಿತು. ವರ್ತಮಾನದ ಸಂದರ್ಭದಲ್ಲಿ ಅಧಿಕಾರ, ಅಂತಸ್ತು, ಸಂಪತ್ತಿನ ಕ್ರೋಡೀಕರಣ, ಶಿಕ್ಷಣದಂತಹ ಸವಲತ್ತುಗಳ ಭದ್ರತೆಯಲ್ಲಿ ರಾಜಕಾರಣ, ಧರ್ಮಕಾರಣಗಳ ಹಿಡಿತವನ್ನು ತೆಕ್ಕೆಗೆ ತೆಗೆದುಕೊಳ್ಳುವ ಬಲಾಢ್ಯ ಶಕ್ತಿಯಾಯಿತು. ಈ ಎಲ್ಲ ಬಗೆಯ ಒಡೆತನಗಳ ಯಜಮಾನಿಕೆಯ ಪರಿವ್ಯಾಪ್ತಿಯಲ್ಲಿ ನೋಡಿದಾಗ, ಜಾತಿಯ ವ್ಯಾಖ್ಯಾನದ ಕುರಿತು ಹಿಂದಿನ ಸಂಶೋಧಕರು ಹೇಳಿರುವ ಅರ್ಥಮಿತಿಗೆ ಸೀಮಿತಗೊಳಿಸಲಾಗದು.

ಬದುಕಿನ ಸಂಕೀರ್ಣತೆಗೆ ಪ್ರತಿಸ್ಪರ್ಧಿಯಾಗಿ ಜಾತಿಯ ಗುಣದೋಷಗಳ ಸ್ವರೂಪವೂ ಸಂಕೀರ್ಣಗೊಂಡಿದೆ. ಇಂದು ವರ್ಣಗಳಿಲ್ಲ, ಅವುಗಳೆಲ್ಲ ಜಾತಿಗಳಾಗಿವೆ. ಧರ್ಮಗಳಿಲ್ಲ, ಅವುಗಳೆಲ್ಲ ಮತಗಳಾಗಿವೆ. ಮತ ಮತ್ತು ಜಾತಿ ಎರಡೂ ಪದಗಳು ಒಂದೇ ಅರ್ಥದವುಗಳಾಗಿವೆ. ಜಾತಿಪ್ರಜ್ಞೆಯು ಹಿಂದಿಗಿಂತ ಹೆಚ್ಚು ಅಪಾಯಕಾರಿಯೂ ಅಮೂರ್ತ ಗತಿಯದೂ ಆಗಿ ಬೆಳೆದಿದೆ. ಹಿಂದೆಲ್ಲ ಜಾತಿಪ್ರಜ್ಞೆ ಕಣ್ಣಿಗೆ ಕಾಣುತ್ತಿತ್ತು. ನಡೆನುಡಿಗಳಲ್ಲಿ, ಆಚಾರ ವಿಚಾರಗಳಲ್ಲಿ ಅರಿವಿಗೆ, ಅನುಭವಕ್ಕೆ ಬರುತ್ತಿತ್ತು. ಇಂದು ನಡೆ-ನುಡಿಯ ಗಡಿಗೆರೆ ದಾಟಿದ ಪ್ರಜ್ಞೆಯಾಗಿ, ಕಣ್ಣಿಗೆ ಕಾಣದ, ಅರಿವಿಗೆ ದಕ್ಕದ ವಿಷಾನಿಲವಾಗಿ ಬೆಳೆದಿದೆ. ಅಷ್ಟೇ ಅಲ್ಲ ಅದರ ಕ್ರೌರ್ಯವು ಅನುಭವಕ್ಕೆ, ಅರಿವಿಗೆ ಬರುವ ಹೊತ್ತಿಗೆ ಅದು ಮಾಡಬಹುದಾದ ಎಲ್ಲ ಅನಾಹುತಗಳನ್ನೂ ಮಾಡಿಬಿಟ್ಟಿರುತ್ತದೆ. ಹೀಗಾಗಿ, ಹಿಂದಿನ ಜಾತಿಬುದ್ಧಿಗೂ ಇಂದಿನ ಜಾತಿಮತಿಗೂ ಹೋಲಿಸಲಾಗದಷ್ಟು ಅಪಾಯಕಾರಿ ಬೆಳವಣಿಗೆಯು ವ್ಯವಸ್ಥೆಯೊಳಗಿನ ಭಾಗವಾಗಿದೆ. ಬಿಟ್ಟೆನೆಂದರೂ ಬಿಡದ ಮಾಯೆಯಾಗಿ ಮನುಷ್ಯತ್ವವನ್ನೇ ನುಂಗಿ ನೊಣೆಯುತ್ತಿದೆ.

ADVERTISEMENT

ಜಾತಿಪ್ರಜ್ಞೆಯ ಜನ ಸಿಗುತ್ತಾರೆ, ಆದರೆ ಮಾನವೀಯ ನೆಲೆಯ ಮನುಷ್ಯರು ಕಾಣಸಿಗುವುದಿಲ್ಲ ಎಂಬಷ್ಟು ಅದರ ಕ್ರೂರ ಹಿಡಿತಕ್ಕೆ ಮನುಷ್ಯನ ಮನಸ್ಸು ಮಾರುಹೋಗಿದೆ. ಯಾವುದೇ ಬಗೆಯ ತತ್ವ, ಸಿದ್ಧಾಂತಗಳ ಪ್ರಭಾವಕ್ಕೆ ವ್ಯಕ್ತಿ ಒಳಗಾದರೂ ಜಾತಿಪ್ರಜ್ಞೆ ಎಂಬುದು ವ್ಯಕ್ತಿ ತಾನು ಬಿಟ್ಟರೂ ಅದು ಅವನನ್ನು ಬಿಡದ ಬಂಧವಾಗಿ, ಗುಣವಾಗಿ, ಅಂಟಿನ ನಂಟಾಗಿ ಕಾಡುತ್ತಿದೆ. ಈ ಪ್ರಜ್ಞೆಯನ್ನು ಅಮೂರ್ತ ರೂಪದಲ್ಲಿ ಹೆಚ್ಚು ಬಲಿಷ್ಠಗೊಳಿಸುವ ಪೂರಕ ಶಕ್ತಿಗಳಾಗಿ ರಾಜಕಾರಣ ಮತ್ತು ಧರ್ಮಕಾರಣಗಳು ಕ್ರಿಯಾಶೀಲವಾಗಿವೆ. ಜಾತಿಪ್ರಜ್ಞೆಗೆ ರಾಜಕಾರಣ ನೀರೆರೆದರೆ ಧರ್ಮಕಾರಣಗಳು ಗೊಬ್ಬರ ಹಾಕುವ ಕೆಲಸ ಮಾಡುತ್ತಿವೆ. ಹೀಗಾಗಿ, ವ್ಯಕ್ತಿ ಮತ್ತು ಸಮುದಾಯ ಎರಡೂ ಜಾತಿಪ್ರಜ್ಞೆಯ ಹಳವಂಡದಲ್ಲಿ ಸಿಲುಕಿ ಬಳಲುತ್ತಿವೆ. ಮೇಲರಿಮೆ ಮತ್ತು ಕೀಳರಿಮೆಯ ಭಾವಕೂಪಗಳಲ್ಲಿ ವಿಹರಿಸುವ ಮಂಡೂಕಗಳಾಗಿ ಜನ ವ್ಯವಹರಿಸುತ್ತಿದ್ದಾರೆ. ಎಲ್ಲವನ್ನೂ ಮೀರಿ ನಿಂತ ಮನುಷ್ಯರಂತೆ ಕಾಣಿಸಿಕೊಳ್ಳುತ್ತಾರೆ. ಆದರೆ ಪರೀಕ್ಷೆಯ ಕೊನೆಯ ಹಂತಕ್ಕೆ ಬಂದರೆ ಅದೇ ಆಗಿ ಬೆತ್ತಲಾಗುತ್ತಾರೆ. ‘ಜಾತಿ ಎಂಬುದು ಸೃಜನಶೀಲತೆ’ ಎಂದು ಹೇಳಿದ ಬುದ್ಧಿಜೀವಿಯ ಉದಾಹರಣೆಯೇ ಇದಕ್ಕೆ ನಿದರ್ಶನ.

ಈ ದೇಶದ ಯಾವ ಬರಹಗಾರರೂ ಈ ಜಾತಿಪ್ರಜ್ಞೆಯ ಕೂಪಮಂಡೂಕತ್ವದಿಂದ ಬಿಡುಗಡೆಗೊಂಡಿಲ್ಲ ಎಂಬಷ್ಟರ ಕಠೋರ ಸತ್ಯದಲ್ಲಿ ಜಾತಿಪ್ರಜ್ಞೆಯ ಬುದ್ಧಿಭಾವಗಳ ನಖಮಾಂಸದ ಅಂಟಿನ ನಂಟು ಇದೆ– ಎಲ್ಲ ಜಾತಿಗಳ ಸ್ವಾಮೀಜಿಗಳನ್ನೂ ಜಗದ್ಗುರುಗಳೆಂದು ಕರೆದಂತೆ. ಇಷ್ಟಿದ್ದರೂ ಸಾಹಿತಿಗಳು ಎಷ್ಟು ಪ್ರಮಾಣದಲ್ಲಿ ಮನುಷ್ಯತ್ವದ ವಿಶ್ವಮಾನವತೆಯ ಕಡೆಗೆ ಹೆಜ್ಜೆ ಹಾಕಿದ್ದಾರೆ ಎಂಬುದರ ಮೇಲೆ ಅವರವರ ಸಾಹಿತ್ಯದ ಲೋಕದರ್ಶನ ಅನುಭವಕ್ಕೆ ಸಿದ್ಧಿಸಿದೆ. ಈ ಪರಿಯಲ್ಲಿ ಪ್ರಜ್ಞಾಪೂರ್ವಕವಾಗಿ ಸೃಜನಶೀಲತೆಯನ್ನು ಮಾನವೀಕರಣದ ಲೋಕದರ್ಶನವಾಗಿ ಕಂಡವರು ಮಾತ್ರ ಪೂರ್ಣತೆಯ ಕಡೆಗೆ ಸಾಗಿದ ಸಾಧಕರಾಗಿ ಸಿಗುತ್ತಾರೆ, ಸಿದ್ಧಪುರುಷರಾಗಿ ಅಲ್ಲ.

ಸಮಾಜ ಎಂಬ ಪದವನ್ನು ಜಾತಿಯ ಆವರಣದಲ್ಲಿಯೇ ನಿರ್ದೇಶಿಸಿ ಬಳಸುವುದು ರೂಢಿಗಂಟಿದ ಜಾತಿ
ಪ್ರಜ್ಞೆಯಾಗಿದೆ. ‘ನಮ್ಮ ಸಮಾಜ’ ಎಂದರೆ ನಮ್ಮ ಜಾತಿಯ ಜನ ಎಂಬ ಅರ್ಥದಲ್ಲಿ ಭಾವಿಸಲಾಗುತ್ತದೆ. ಇದು ಆಧುನಿಕ ಬೆಳವಣಿಗೆ. ಇದು ವ್ಯಕ್ತಿಗತ ಮತ್ತು ಸಮೂಹಗತ ನೆಲೆಯ ವಸ್ತುಸ್ಥಿತಿಯಾಗಿದ್ದು, ಇದರ ಕಬಂಧಬಾಹುಗಳ ಹಿಡಿತಕ್ಕೆ ಸಿಲುಕಿ ದೇಶದ ಪ್ರಗತಿ ಕುಂಠಿತವಾಗಿದೆ. ಪ್ರಜಾಪ್ರಭುತ್ವದ ಮೂಲಭೂತ ಗುಣಗಳು ಈ ದೇಶದ ನೆಲದಲ್ಲಿ ಬೇರೂರಲು ಸಾಧ್ಯವಾಗದಂತೆ ಮಾಡಿದೆ. ಜಾತಿ ರಾಜಕಾರಣವೇ ಶಕ್ತಿರಾಜಕಾರಣವಾಗಿ ಪ್ರಜಾಪ್ರಭುತ್ವದ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ.

ಸೂಕ್ಷ್ಮವಾಗಿ ಗಮನಿಸಿದಾಗ, ವರ್ಣದ ನೆಲೆಯ ತಾರತಮ್ಯ ನೀತಿ ಈಗಲೂ ಜಾತಿಗಳ ಅರಿಮೆಗಳನ್ನು ಆಳುವ ಶಕ್ತಿಯಾಗಿದೆ. ಇದು ಮನೋಸ್ಥಿತಿಯಾದಂತೆ ದಾಟಲಾರದ ರೋಗಪ್ರಜ್ಞೆಯಾಗಿ ಬೇರೂರಿದೆ. ಆದ್ದ
ರಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಅದು ರಾಜಕೀಯ ಸ್ವಾತಂತ್ರ್ಯ, ಒಂದು ಚುನಾವಣೆಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ನೀಡುವ ಸ್ವಾತಂತ್ರ್ಯ. ಆದರೆ ಅದರಾಚೆಗೆ ನಾವಿನ್ನೂ ಜಾತಿಪ್ರಜ್ಞೆಯ ಸಾಂಸ್ಕೃತಿಕ ದಾಸ್ಯದಿಂದ ಬಿಡುಗಡೆ ಪಡೆದಿಲ್ಲ. ನಮ್ಮ ಶಿಕ್ಷಣವೂ ನಮ್ಮನ್ನು ಈ ದಾಸ್ಯದಿಂದ ಬಿಡುಗಡೆಗೊಳಿಸುವಲ್ಲಿ ವಿಫಲವಾಗಿದೆ. ದುರಂತವೆಂದರೆ, ಶಿಕ್ಷಣ ಪಡೆದವರಲ್ಲಿ ಇರುವ ಜಾತಿಪ್ರಜ್ಞೆಯೇ ದೇಶಕ್ಕೆ, ಪ್ರಜಾಪ್ರಭುತ್ವಕ್ಕೆ ಹೆಚ್ಚು ಅಪಾಯಕಾರಿಯಾಗಿದೆ. ಹೀಗಾಗಿ, ಈ ಜಾತಿಪ್ರಜ್ಞೆಯ ಸ್ವರೂಪವನ್ನು ಅರಿಯಲು ಮನುಷ್ಯನ ಸೂಕ್ಷ್ಮಮತಿಗೂ ಸಾಧ್ಯವಾಗದ ಸೂಕ್ಷ್ಮಾತಿ ಸೂಕ್ಷ್ಮ ವಿವಂಚನೆಯ ಮೂಲಕಣ ಇದಾಗಿದೆ. ಆದ್ದರಿಂದಲೇ ಜಾತಿವ್ಯವಸ್ಥೆ ಭಾರತಕ್ಕಂಟಿದ ಶಾಪವಾಗಿದೆ.

ಜಾತಿ ವ್ಯವಸ್ಥೆಯ ಹಳವಂಡದಲ್ಲಿ ಪ್ರಭಾವಿ ಜಾತಿಗಳು ಔದಾರ್ಯ ಮೆರೆದಂತೆ ಆಚಾರ ವಿಚಾರಗಳಲ್ಲಿ ಪ್ರಗತಿಯ ಹೆಜ್ಜೆ ಹಾಕತೊಡಗಿವೆ. ಉದಾಹರಣೆಗೆ, ಅಂತರ್ಜಾತಿ ವಿವಾಹ, ಅಂತರ್ಧರ್ಮೀಯ ವಿವಾಹದಂತಹ ವಿಚಾರಗಳಲ್ಲಿ ಅವುಗಳ ಧಾರಾಳತನವನ್ನು ಕಾಣಬಹುದು. ಆದರೆ ಅದೇ ದುರ್ಬಲ ಜಾತಿಗಳು ಶಿಕ್ಷಣಕ್ಕೆ ತೆರೆದುಕೊಂಡಿದ್ದರೂ ಇನ್ನೂ ಹಳೆಯ ಕಂದಾಚಾರಗಳ ವಿಧಿ ನಿಷೇಧಗಳನ್ನು ಉಗ್ರವಾಗಿ ಅನುಸರಿಸುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಇತ್ತೀಚೆಗೆ ಕೆಲವು ಜಾತಿಗಳು ಅಂತರ್ಜಾತಿ ವಿವಾಹಗಳ ಕುಟುಂಬಗಳಿಗೆ ಊರಿನಲ್ಲಿ ಬಹಿಷ್ಕಾರ ಹಾಕಿರುವುದು, ಮಹಿಳೆಯ ಸೂತಕಾಚರಣೆಯ ವಿಷಯದಲ್ಲಿ ಕಂದಾಚಾರವನ್ನು ಜಾರಿಗೊಳಿಸಿರುವುದು ಸುದ್ದಿಯಾಗಿರುವುದನ್ನು ನೆನಪಿಸಿಕೊಳ್ಳಬಹುದು.

ಜಾತಿಯ ಜಗದ್ಗುರುಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಸ್ಥಾನಗೌರವವನ್ನು ಲೆಕ್ಕಿಸದೆ, ಹೆಚ್ಚು ಮಕ್ಕಳನ್ನು ಹೆರುವುದಕ್ಕೆ ಮಹಿಳೆಯರಿಗೆ ಮತ್ತು ಜಾತಿಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಕ್ಕೆ ಸ್ವಜಾತಿಯ ರಾಜಕಾರಣಿ
ಗಳಿಗೆ ಆದೇಶಿಸುತ್ತಿರುವುದು ಹೆಚ್ಚಾಗಿದೆ. ಇದು ಮೇಲ್ನೋಟಕ್ಕೆ ಹುಚ್ಚಾಟದಂತೆ ಕಂಡುಬಂದರೂ ಇದರ ಹಿಂದಿನ ಜಾತಿಪ್ರಜ್ಞೆಯ ಅಪಾಯವು ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವ ನಡೆಯೇ ಆಗಿದೆ. ಇವು ಸೌಹಾರ್ದಕ್ಕೆ ಭಂಗ ತರುವ ಮಾತುಗಳೇ ಆಗಿವೆ. ಇನ್ನು ರಾಜಕಾರಣದಲ್ಲಿನ ಇತ್ತೀಚಿನ ಬೆಳವಣಿಗೆಯು ಜಾತಿಕೂಟಗಳ ಮೇಲಾಟದ ಬೆಳವಣಿಗೆಯೇ ಆಗಿ, ಪಕ್ಷಭೇದ ಮರೆತಂತೆ ಸ್ವಜಾತಿಯ ರಾಜಕಾರಣಿಗಳು ಜಾತಿ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿನ ಪ್ರಜಾಪ್ರಭುತ್ವ
ವಾದಿ ವಿರೋಧಿ ನೆಲೆಯ ಹೇಳಿಕೆಗಳಿಗೆ ಭಾಜನರಾಗುತ್ತಿದ್ದಾರೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ.

ಅರಿವಿನ ಮಾತು: ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ, ಸಂಘಟನೆ, ಹೋರಾಟದ ಸೂತ್ರಗಳು ಹಸಿವಿನ ಲೋಕದ ಅವಮಾನಿತ ಜಗತ್ತಿನ ವಂಚನೆ, ಶೋಷಣೆಗೆ ಒಳಗಾದ ಎಲ್ಲ ಸಮುದಾಯಗಳಿಗೂ ಅನ್ವಯಿಸುತ್ತವೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಅಗತ್ಯ ಇರುವುದು ಬಲಿಷ್ಠ ಜಾತಿಗಳಿಗಲ್ಲ ದುರ್ಬಲ ವರ್ಗದ ಜಾತಿಗಳಿಗೆ ಮಾತ್ರ ಎಂಬುದು ನೈತಿಕ ಹಕ್ಕಿನ ವಿಚಾರ. ಇದು ಜಾತಿಪ್ರಜ್ಞೆಯನ್ನು ಬೆಳೆಸುವುದಕ್ಕಲ್ಲ ಸಮಾನತೆಯನ್ನು ಜಾರಿಗೆ ತರುವುದಕ್ಕೆ ಮತ್ತು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವುದಕ್ಕೆ ಇರುವ ಅನಿವಾರ್ಯ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.