‘ಕಾವೇರಿ ಆರತಿ’ ಮೂಲಕ ಉತ್ತರ ಭಾರತದ ಧಾರ್ಮಿಕ ಆಚರಣೆಯನ್ನು ದಕ್ಷಿಣ ಭಾರತದಲ್ಲಿ ಆರಂಭಿಸಲು ಸರ್ಕಾರ ಚಿಂತಿಸುತ್ತಿದೆ. ಆರತಿ ಮಾಡಲು ಹೊರಟವರು, ನದಿಯ ಆರೋಗ್ಯ ಹೇಗಿದೆ ಎಂಬ ಬಗ್ಗೆ ಚಿಂತಿಸಿದಂತಿಲ್ಲ. ಕನ್ನಡ ನಾಡಿನ ಜೀವನದಿಯ ಒಡಲಿಗೆ, ತಂಬಾಕು ಕೃಷಿಯಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳ ವಿಷ ಸೇರುತ್ತಿದೆ.
ಉತ್ತರ ಭಾರತದಲ್ಲಿ ಗಂಗಾ ನದಿಗೆ ನಡೆಯುವ ‘ಗಂಗಾರತಿ’ಯ ರೂಪದಲ್ಲಿ ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲೊಂದಾದ ಕಾವೇರಿಗೆ ಆರತಿಯನ್ನು ನಡೆಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಆರತಿ ಮೂಲಕ ಕಾವೇರಿಯ ಹಿರಿಮೆಯನ್ನು ಸಂಭ್ರಮಿಸುವುದು ಹಾಗೂ ಪ್ರವಾಸಿಗ ರನ್ನು ಸೆಳೆಯುವುದು ಸರ್ಕಾರದ ಉದ್ದೇಶವಾಗಿದೆ.
ಗಂಗಾರತಿಯು ಬಹುಸಂಖ್ಯಾತರನ್ನು ಆಕರ್ಷಿಸುವ ಧಾರ್ಮಿಕ ಆಚರಣೆಯಾಗಿದೆ. ಅಂಥದೊಂದು ಆಚರಣೆಯನ್ನು ಕಾವೇರಿ ಆರತಿ ಮೂಲಕ ಕರ್ನಾಟಕದಲ್ಲಿ ಆರಂಭಿಸಿ, ಅದರಿಂದ ಪಡೆಯಬಹುದಾದ ಲಾಭಗಳ ರಾಜಕೀಯ ಲೆಕ್ಕಾಚಾರವೂ ಕಾವೇರಿ ಆರತಿಯ ಹಿಂದೆ ಇರಬಹುದು. ಇದರ ಹಿಂದೆ ರಾಜಕಾರಣ, ಧಾರ್ಮಿಕ ಅಥವಾ ವ್ಯಾಪಾರಿ ಉದ್ದೇಶಗಳನ್ನು ಕಾಣಬಹುದೇ ಹೊರತು, ನದಿಯ ಹಿತಾಸಕ್ತಿಗೆ ಪೂರಕವಾದ ಯಾವ ಸಂಗತಿಯನ್ನೂ ಕಾಣುವುದಕ್ಕೆ ಸಾಧ್ಯವಿಲ್ಲ.
ಸರ್ಕಾರದ ‘ಕಾವೇರಿ ಆರತಿ’ ಯೋಜನೆ, ‘ಹೊರಗೆ ಸಿಂಗಾರ, ಒಳಗೆ ಗೋಣಿ ಸೊಪ್ಪು’ ಎನ್ನುವ ಗಾದೆಯನ್ನು ನೆನಪಿಸುವಂತಿದೆ. ತಂಬಾಕು ಘಾಟಿನಿಂದ ಉಸಿರು ಕಟ್ಟುತ್ತಿರುವ ಕಾವೇರಿ ನದಿಯ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಯಾವುದೇ ಚಿಂತೆ ಇದ್ದಂತಿಲ್ಲ. ಕಲುಷಿತಗೊಂಡಿರುವ ನದಿಯನ್ನು ಸ್ವಚ್ಛಗೊಳಿಸುವ ಬದಲು, ಆರತಿಯ ಬಡಾಯಿಗೆ ಸರ್ಕಾರ ಮುಂದಾಗಿದೆ.
ಕಾವೇರಿ ನದಿ ಪಾತ್ರದ ತಾಲ್ಲೂಕುಗಳಾದ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ. ಕೋಟೆ ಹಾಗೂ ಪಕ್ಕದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ತಂಬಾಕು ಕೃಷಿ ನಡೆಯುತ್ತಿದೆ. ತಂಬಾಕು ಆ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಏಕಬೆಳೆಯ ರೂಪದಲ್ಲಿ ದಶಕಗಳಿಂದ ಬೆಳೆಯಲಾಗುತ್ತಿದೆ. ಕಾವೇರಿ ನದಿಯ ನೀರೇ ಈ ಬೆಳೆಗೆ ಬಳಕೆಯಾಗು ತ್ತದೆ. ಇಲ್ಲಿ ಬೆಳೆಯುವ ತಂಬಾಕನ್ನು ಸಿಗರೇಟ್ ಕಂಪನಿಗಳು ನೇರವಾಗಿ ಖರೀದಿ ಮಾಡುತ್ತವೆ. ಹುಣಸೂರಿನಲ್ಲಿರುವ ‘ತಂಬಾಕು ಸಂಶೋಧನಾ ಸಂಸ್ಥೆ’ಯ ವಿಜ್ಞಾನಿಗಳು, ತಂಬಾಕು ಖರೀದಿ ಮಾಡುವ ಸಿಗರೇಟ್ ಕಂಪನಿಗಳ ಆಗ್ರಹದ ಮೇರೆಗೆ, ಬಗೆ ಬಗೆಯ ಕೀಟನಾಶಕಗಳನ್ನು ರೈತರಿಗೆ ಪೂರೈಕೆ ಮಾಡುತ್ತಾರೆ. ಕೀಟನಾಶಕಗಳ ಬಳಕೆಯಿಂದ ದೊಡ್ಡ ತಂಬಾಕು ಎಲೆಗಳನ್ನು ಪಡೆದು, ಗುಣಮಟ್ಟದ ಸಿಗರೇಟ್ ತಯಾರಿಕೆ ಸಾಧ್ಯವಾಗುತ್ತದೆ ಎಂಬುದು ಸಿಗರೇಟ್ ಕಂಪನಿಗಳ ಲೆಕ್ಕಾಚಾರ.
ಗುಣಮಟ್ಟದ ತಂಬಾಕು ಎಲೆಗಳ ಆಸೆಗೆ ನೀರಿನಂತೆಯೇ ಔಷಧಗಳನ್ನು ಮಣ್ಣಿಗೆ ಸೇರಿಸ ಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಕೀಟನಾಶಕ ಗಳಲ್ಲಿ ಇರುವ ವಿಷ ಮತ್ತು ತಂಬಾಕಿನಲ್ಲಿರುವ ನಿಕೋಟಿನ್ ಅಂಶ ಹೇರಳ ಪ್ರಮಾಣದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಸೇರುತ್ತದೆ. ಈ ವಿಷ ಸೇರ್ಪಡೆ ನದಿಯ ಹರಿವಿನುದ್ದಕ್ಕೂ ನಡೆಯುತ್ತದೆ. ತ್ಯಾಜ್ಯಗಳು ಸೇರುವ ಮೂಲಕ ಕಾವೇರಿ ನದಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಔಷಧ ಸಿಂಪಡಣೆ ಸಂದರ್ಭದಲ್ಲಿ ರೈತರ ದೇಹವನ್ನೂ ವಿಷಕಾರಿ ಅಂಶಗಳು ಸೇರುವ ಸಾಧ್ಯತೆ ಇದ್ದೇ ಇದೆ.
ಹುಣಸೂರು ಅರಣ್ಯ ವಿಭಾಗದಲ್ಲಿ ನಾನು ದೀರ್ಘ ಕಾಲ ಕೆಲಸ ಮಾಡಿರುವೆ. ಹಾಗಾಗಿ, ಆ ಭಾಗದ ಪರಿಚಯ ನನಗೆ ಚೆನ್ನಾಗಿದೆ. ಹುಣಸೂರು, ಹೆಗ್ಗಡದೇವನಕೋಟೆ, ಪಿರಿಯಾಪಟ್ಟಣ, ಇವೆಲ್ಲವೂ ಕಾವೇರಿ ಮತ್ತು ಕಬಿನಿ ನದಿಯ ಜಲಾನಯನ ಪ್ರದೇಶಗಳು. ಈ ನದಿಗಳಿಗೆ ನೀರು ಹರಿದು ಹೋಗುವುದು ಪ್ರಮುಖವಾಗಿ ಈ ಭಾಗದಿಂದಲೇ. ನಾನು ಗಮನಿಸಿದಂತೆ, ಜಲಾನಯನ ಪ್ರದೇಶಗಳ ಪಕ್ಕದಲ್ಲೇ ಹುಲಿ ಮತ್ತು ಆನೆಗಳ ಆವಾಸ ಸ್ಥಾನಗಳಿವೆ. ಹೀಗೆ, ಸಮೃದ್ಧ ಹಸಿರು ಮತ್ತು ಜೀವವೈವಿಧ್ಯದಿಂದ ಕೂಡಿರುವ ಪರಿಸರವನ್ನು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ವಿಷಮಯ ಮಾಡಲಾಗುತ್ತಿದೆ.
ಕೀಟನಾಶಕಗಳ ವಿಷ ನೇರವಾಗಿ ಕೃಷಿ ಭೂಮಿಯನ್ನು ಸೇರುವುದರಿಂದ ಆಗುವ ಅನಾಹುತಗಳು ಒಂದೆರಡಲ್ಲ. ರಾಸಾಯನಿಕಗಳು ಮಣ್ಣಿನ ಹ್ಯೂಮಸ್‌ನಲ್ಲಿ ಸೇರ್ಪಡೆಯಾಗುತ್ತವೆ. ಅದರಿಂದಾಗಿ, ಎರೆಹುಳುಗಳು ಸೇರಿದಂತೆ ಮಣ್ಣಿನಲ್ಲಿ ಇರುವ ಅಸಂಖ್ಯ ಜೀವರಾಶಿ ನಶಿಸಿಹೋಗುತ್ತದೆ. ಎರೆಹುಳುಗಳು ಇಲ್ಲದೆ ಹೋದರೆ, ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ.
ಕಾವೇರಿ ನದಿಯ ನೀರನ್ನು ಕರ್ನಾಟಕ, ತಮಿಳುನಾಡು ಭಾಗದ ರೈತರು ಕೃಷಿಗೆ ಬಳಸುವುದರ ಜೊತೆಗೆ ನಿತ್ಯದ ಬಳಕೆಗೂ ಉಪಯೋಗಿಸುತ್ತಾರೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಹಲವು ಪಟ್ಟಣ– ಗ್ರಾಮಗಳ ಜನರು ಕಾವೇರಿ ನೀರನ್ನು ಕುಡಿಯುವುದಕ್ಕೆ ಬಳಸುತ್ತಾರೆ. ವಿಷತ್ಯಾಜ್ಯಗಳು ಸೇರಿದ ನೀರನ್ನು ಕುಡಿಯುವ ಜನರ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳು ಆಗಬಹುದು? ಕಳವಳದ ಸಂಗತಿಯೆಂದರೆ, ಕಲುಷಿತ ನೀರಿನ ಸೇವನೆಯಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ನಮ್ಮಲ್ಲಿ ಗಂಭೀರ ಅಧ್ಯಯನವೇ ನಡೆದಿಲ್ಲ.
ಅರಣ್ಯಾಧಿಕಾರಿಯಾಗಿದ್ದ ನಾನು ಪರಿಸರ ಪ್ರೇಮಿಯೂ ಹೌದು. ಪರಿಸರದ ಆತಂಕಕಾರಿ ಬದಲಾವಣೆಗಳ ಕುರಿತಾಗಿ ಜನರನ್ನು ಎಚ್ಚರಿಸುವುದು ನನ್ನ ನೈತಿಕ ಹೊಣೆಗಾರಿಕೆ ಎಂದು ಭಾವಿಸಿರುವೆ. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಆಗುತ್ತಿರುವ ಮಾಲಿನ್ಯ ಮತ್ತು ಅದರಿಂದ ಪರಿಸರ ಹಾಗೂ ಜನರ ಆರೋಗ್ಯ ಕೆಡುತ್ತಿರುವುದನ್ನು ಸರ್ಕಾರಿ ಕರ್ತವ್ಯದಲ್ಲಿದ್ದಾಗ ಗುರುತಿಸಲು ನನಗೆ ಸಾಧ್ಯವಾಗಲಿಲ್ಲ. ಆ ಅಪರಾಧೀಭಾವ ಈಗಲೂ ನನ್ನನ್ನು ಕಾಡುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಆಗುತ್ತಿರುವ ಮಾಲಿನ್ಯದ ಬಗ್ಗೆ ಇತ್ತೀಚೆಗೆ ಮಾಧ್ಯಮ ವರದಿಯೊಂದನ್ನು ಗಮನಿಸಿದ ನಂತರವಷ್ಟೇ ನಿಜಸ್ಥಿತಿ ನನ್ನ ಅರಿವಿಗೆ ಬಂತು. ವಸ್ತುಸ್ಥಿತಿಯ ಬೆನ್ನತ್ತಿ ಹೋದಾಗ, ರಾಸಾಯನಿಕಗಳ ಶೇಷಾಂಶ ಪರಿಸರದಲ್ಲಿ ಸೇರಿಕೊಂಡು ಜನಜೀವನಕ್ಕೆ ಹೇಗೆ ಮಾರಕವಾಗುತ್ತದೆ ಎನ್ನುವುದನ್ನು ತಿಳಿದು ಗಾಬರಿಯಾಯಿತು.
ನಿಕೋಟಿನ್‌ನಲ್ಲಿ ಇರುವ ರಾಸಾಯನಿಕ ಅಂಶಕ್ಕೆ ಮೂಲತಃ ಬಣ್ಣವಿರುವುದಿಲ್ಲ. ನಿಧಾನವಾಗಿ, ಅದು ಹಳದಿ ಬಣ್ಣಕ್ಕೆ ತಿರುಗಿ ಜಿಡ್ಡಿನಂತಹ ದ್ರವರೂಪಕ್ಕೆ ಪರಿವರ್ತನೆಗೊಳ್ಳುತ್ತದೆ. ಸಿಗರೇಟಿನಲ್ಲಿರುವ ಸಕ್ರಿಯ ರಾಸಾಯನಿಕ ನಿಕೋಟಿನ್ ಆಗಿದೆ. ಸಿಗರೇಟ್ ರೂಪದಲ್ಲಿ ತಂಬಾಕು ಸೇವಿಸುವುದರಿಂದಾಗಿ, ನಿಕೋಟಿನ್ ಜಿಡ್ಡು ದ್ರವ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ದೇಹವನ್ನು ಸೇರಿಕೊಂಡು, ಅಲ್ಲಿ ತನ್ನ ವಸಾಹತು ಸ್ಥಾಪಿಸುತ್ತದೆ. ನಂತರದಲ್ಲಿ ಅದು, ಸ್ವನಿಯಂತ್ರಿತ ನರಮಂಡಲ ಮತ್ತು ಅಸ್ಥಿಮಜ್ಜೆಯನ್ನು ದುರ್ಬಲಗೊಳಿಸುವ ಕೆಲಸವನ್ನು ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ಮಾಡುತ್ತದೆ.
ರೈತರು ಒಂದು ಕೆ.ಜಿ. ತಂಬಾಕು ಸಂಸ್ಕರಣೆ ಮಾಡುವುದಕ್ಕೆ ಆರರಿಂದ ಎಂಟು ಕೆ.ಜಿ. ಸೌದೆ ಬಳಸುತ್ತಾರೆ. ಈ ಪ್ರಕ್ರಿಯೆಯಲ್ಲಿ, ವಿಶೇಷವಾಗಿ ರೂಪಿತವಾಗಿರುವ ಚಿಮಣಿಯ ಮೂಲಕ ಹೊಗೆ ಹೊರಗೆ ಹೋಗುತ್ತದೆ. (ನಾನು ಡಿ.ಸಿ.ಎಫ್. ಆಗಿದ್ದಾಗ ಇದ್ದಿಲು ಮತ್ತು ಗ್ಯಾಸ್ ಬಳಕೆ ಬಗ್ಗೆ ಚಿಂತನೆ ಮಾಡುವಂತೆ ಸರ್ಕಾರಕ್ಕೆ ಒಂದು ವರದಿ ಸಲ್ಲಿಸಿದ್ದೆ). ಅನೇಕ ವರ್ಷಗಳಿಂದ ತಂಬಾಕು ಸಂಸ್ಕರಣೆಗೆ ಸೌದೆ ಬಳಕೆಯಾಗುತ್ತಿದೆ ಮತ್ತು ಅದರಿಂದ ಕಾಡು ನಾಶವಾಗುತ್ತಲೇ ಇದೆ. ಕಟಾವಿನ ನಂತರ ತಂಬಾಕು ಎಲೆಗಳನ್ನು ಆದಷ್ಟು ಬೇಗ ಸಂಸ್ಕರಣೆಗೆ ಒಳಪಡಿಸ ಬೇಕು. ಇಲ್ಲವಾದಲ್ಲಿ ತಂಬಾಕಿನ ಗುಣಮಟ್ಟ ಹಾಳಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುವುದಿಲ್ಲ. ತಂಬಾಕು ಬೆಳೆಯುವ ಪ್ರದೇಶದ ಪಕ್ಕದಲ್ಲೇ ಅರಣ್ಯವಿದೆ ಮತ್ತು ಸುಲಭದಲ್ಲಿ ಸೌದೆ ಲಭ್ಯವಾಗುತ್ತದೆ ಎಂಬ ಕಾರಣಕ್ಕೆ, ಸೌದೆಯನ್ನೇ ಇಂಧನವಾಗಿ ಬಳಸಿ ತಂಬಾಕಿನ ಸಂಸ್ಕರಣೆ ನಡೆಯುತ್ತದೆ.
ಹಿಂದೆ ಸೌದೆ ಕಳ್ಳಸಾಗಣೆಯೂ ದೊಡ್ಡ ಪ್ರಮಾಣದಲ್ಲಿ ಆಗುತ್ತಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ಗಮನವನ್ನು ಆ ವಿಚಾರದತ್ತ ಸೆಳೆದಾಗ, ಸೌದೆಗಾಗಿ ಕಾಡಿನ ಮರಗಳನ್ನು ಬೇಕಾಬಿಟ್ಟಿ ಕಡಿಯುವುದರ ಬದಲಾಗಿ, ಅರಣ್ಯ ಇಲಾಖೆಯಿಂದಲೇ ಸೌದೆ ಡಿಪೊಗಳನ್ನು ತೆರೆದು ಸಬ್ಸಿಡಿ ದರದಲ್ಲಿ ಸೌದೆ ಒದಗಿಸುವಂತೆ ಅವರು ಸಲಹೆ ಕೊಟ್ಟಿದ್ದರು. ಅದನ್ನು ನಾನು ಜಾರಿಗೆ ತಂದಿದ್ದೆ. ಸೌದೆ ಡಿಪೊಗಳ ಕಾರ್ಯಾಚರಣೆಗೆ ವಿಧಾನಸೌಧ ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ಅಕೌಂಟೆಂಟ್ ಜನರಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಸೌದೆ ಡಿಪೊ ತೆರೆದಿದ್ದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲವಾದ್ದರಿಂದ ಅವರ ಆಕ್ಷೇಪ
ಗಳಿಗೆ ಮಾನ್ಯತೆ ಸಿಗಲಿಲ್ಲ.
ಜಾಗತಿಕ ಮಟ್ಟದಲ್ಲಿ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುವಲ್ಲಿ ತಂಬಾಕು ಮತ್ತು ಅದರ ಉಪ ಉತ್ಪನ್ನಗಳ ಕೊಡುಗೆ ದೊಡ್ಡದಿದೆ. ಅತ್ಯಧಿಕ ತೆರಿಗೆ ವಿಧಿಸುವ ಮೂಲಕ ತಂಬಾಕು ಬಳಕೆಯನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ. ಭಾರತದಲ್ಲಿ ತಂಬಾಕು ಸೇವನೆಯ ಪರಿಣಾಮದಿಂದ ಪ್ರತಿನಿತ್ಯ ಕನಿಷ್ಠ 4,000 ಸಾವು ಸಂಭವಿಸುತ್ತಿವೆ ಹಾಗೂ ಭಾರತ ವಿಶ್ವದಲ್ಲೇ ತಂಬಾಕು ಸೇವನೆ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದೆ. ಕೂಲಿಕಾರರು ಕೂಡ ತಂಬಾಕು ಉತ್ಪನ್ನಗಳ ವ್ಯಸನಕ್ಕೆ ಒಳಗಾಗಿದ್ದಾರೆ. ಸಣ್ಣ ಪ್ಲಾಸ್ಟಿಕ್ ಪ್ಯಾಕ್‌ನಲ್ಲಿ ಬರುವ ಅನೇಕ ಬಗೆಯ ತಂಬಾಕು ಉತ್ಪನ್ನಗಳನ್ನು ಸೇವಿಸಿ, ಆ ಪ್ಯಾಕೆಟ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದ ವ್ಯಕ್ತಿಗತವಾಗಿಯೂ ಆರೋಗ್ಯಕ್ಕೆ ಹಾನಿ, ಪರಿಸರದ ಆರೋಗ್ಯಕ್ಕೂ ಹಾನಿ.
ತಂಬಾಕು ಕೃಷಿಯಿಂದಾಗಿ ಕಾವೇರಿ ನದಿಯ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆಯಬೇಕಾಗಿದೆ. ಅಧ್ಯಯನಗಳನ್ನು ನಡೆಸಿ, ಕಾವೇರಿ ನದಿಯನ್ನು ಉಳಿಸಿ ಕೊಳ್ಳುವುದಕ್ಕೆ ಏನೇನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸುವುದರ ಬದಲಾಗಿ, ನೂರಾರು ಕೋಟಿ ಖರ್ಚು ಮಾಡಿ ಆರತಿ ಮಾಡುವುದರಿಂದ ನದಿಗೆ ಅಂಟಿರುವ ಮಾಲಿನ್ಯ ಪರಿಹಾರವಾಗುವುದಿಲ್ಲ. ‘ಮಂಗಳಾರತಿ ಮಾಡು’ ಎನ್ನುವ ಪದವನ್ನು ನಕಾರಾತ್ಮಕವಾಗಿಯೂ ಬಳಸಲಾಗುತ್ತದೆ. ಕಾವೇರಿಗೆ ಆರತಿ ಮಾಡಲು ಹೊರಟಿರುವವರಿಗೆ ನಾಡಿನ ಪ್ರಜ್ಞಾವಂತರೆಲ್ಲ ಮಂಗಳಾರತಿ ಮಾಡಬೇಕಾಗಿದೆ.
ಸರ್ಕಾರ ‘ಕಾವೇರಿ ಆರತಿ’ಯ ನಿರ್ಧಾರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನದಿಯನ್ನು ಉಳಿಸುವ ಮಾರ್ಗೋಪಾಯಗಳ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಈಗಾಗಲೇ ವ್ಯಾಪಕವಾಗಿರುವ ಪರಿಸರ ಮಾಲಿನ್ಯಕ್ಕೆ ಆರತಿಯೂ ಅಳಿಲು ಕಾಣಿಕೆ ನೀಡುವಂತೆ ಆಗಬಾರದು. ನಮ್ಮ ಅರಿವಿಗೆ ಬಾರದಂತೆಯೇ ಇಂಗಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ವಾಯುಮಂಡಲಕ್ಕೆ ಸೇರಿಸುತ್ತಿ ದ್ದೇವೆ. ಇದರಿಂದ ಬಿಸಿಗಾಳಿ ಉತ್ಪನ್ನವಾಗುತ್ತದೆ. ಭೂಮಿಯೂ ಬಿಸಿಯಾಗುತ್ತದೆ. ಮಳೆ ಚಕ್ರದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಜೊತೆಗೆ, ಜನರ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತವೆ.
ಕ್ಯಾನ್ಸರ್ ಮತ್ತು ಹೃದಯಾಘಾತ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ವರದಿಯಾಗುತ್ತಿವೆ. ಮಕ್ಕಳು ಹಾಗೂ ಯುವಜನ ಹೃದಯ ಸಂಬಂಧಿ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಸಾರ್ವಜನಿಕ ಆರೋಗ್ಯದ ಗುಣಮಟ್ಟ ಕಡಿಮೆಯಾಗುತ್ತಿರುವುದಕ್ಕೆ ಪರಿಸರ ಮಾಲಿನ್ಯವೂ ಒಂದು ಮುಖ್ಯ ಕಾರಣವಾಗಿದೆ ಎನ್ನುವುದನ್ನು ನಾವು ಮರೆಯಬಾರದು. ಜವಾಬ್ದಾರಿಯುತ ಸರ್ಕಾರದ ಆದ್ಯತೆ ಜನ ಹಾಗೂ ಪರಿಸರದ ಆರೋಗ್ಯವನ್ನು ಕಾಪಾಡುವುದೇ ಹೊರತು, ನದಿಗೆ ಆರತಿ ಮಾಡುವುದಲ್ಲ. ಕಾವೇರಿಗೆ ಬೇಕಿರುವುದು ಆರತಿಯಲ್ಲ, ನೈಜ ಪ್ರೀತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.