ADVERTISEMENT

ವಿಶ್ಲೇಷಣೆ: ನಾಗರಿಕಸ್ನೇಹಿ ಮಾದರಿ ಮಸೂದೆ ಬ್ಯಾಂಕ್‌– ಕರ್ನಾಟಕದ ಮಾದರಿ

ವೈ.ಜಿ.ಮುರಳೀಧರನ್
Published 8 ಮೇ 2025, 22:30 IST
Last Updated 8 ಮೇ 2025, 22:30 IST
<div class="paragraphs"><p>ವಿಶ್ಲೇಷಣೆ: ನಾಗರಿಕಸ್ನೇಹಿ ಮಾದರಿ ಮಸೂದೆ ಬ್ಯಾಂಕ್‌– ಕರ್ನಾಟಕದ ಮಾದರಿ</p></div>

ವಿಶ್ಲೇಷಣೆ: ನಾಗರಿಕಸ್ನೇಹಿ ಮಾದರಿ ಮಸೂದೆ ಬ್ಯಾಂಕ್‌– ಕರ್ನಾಟಕದ ಮಾದರಿ

   

ಇತ್ತೀಚೆಗೆ ಬಿಡುಗಡೆಯಾಗಿರುವ ‘ಇಂಡಿಯಾ ಜಸ್ಟಿಸ್‌– 2025’ ವರದಿ ಪ್ರಕಾರ ಕಾನೂನು ನೆರವಿನಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಬಂದಿಖಾನೆಗಳ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಪೊಲೀಸ್‌ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಪೊಲೀಸ್ ಇಲಾಖೆಯ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿರುವ ವಿಷಯದಲ್ಲೂ ಕರ್ನಾಟಕ ಮುಂದಿದೆ. ಕಾನೂನು ಇಲಾಖೆ ಈಗ ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ನಾಗರಿಕಸ್ನೇಹಿ ಮಾದರಿ ಮಸೂದೆಗಳನ್ನು ಒಳಗೊಂಡ ಬ್ಯಾಂಕೊಂದನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಬ್ಯಾಂಕ್‌ನಲ್ಲಿ ಸುಮಾರು ಒಂದು ಸಾವಿರ ಮಾದರಿ ಮಸೂದೆಗಳು ಲಭ್ಯವಾಗಲಿದ್ದು, ಅವಶ್ಯಕತೆ ಉಂಟಾದಾಗ ಸರ್ಕಾರ ಸೂಕ್ತ ಬದಲಾವಣೆ ಮತ್ತು ತಿದ್ದುಪಡಿ ಮಾಡಿ ಅವನ್ನು ಬಳಸಿಕೊಳ್ಳಬಹುದಾಗಿದೆ. ಬಹುಶಃ ದೇಶದಲ್ಲಿ ಇಂತಹ ಪ್ರಯತ್ನ ಇದೇ ಮೊದಲು ಎಂದು ತೋರುತ್ತದೆ.

ಪ್ರಜಾಪ್ರಭುತ್ವದಲ್ಲಿ ಕಾನೂನು ರಚಿಸುವ ಅಧಿಕಾರ ಇರುವುದು ಶಾಸನಸಭೆಗಳಿಗೆ ಮಾತ್ರ. ಸಾಮಾನ್ಯ ನಾಗರಿಕರು ಅದರಲ್ಲಿ ನೇರವಾಗಿ ಭಾಗವಹಿಸಲಾಗದು. ಕಾನೂನು ರಚಿಸುವ ಪ್ರಕ್ರಿಯೆಯಲ್ಲಿ ನಾಗರಿಕರ ಸಕ್ರಿಯ ಒಳಗೊಳ್ಳುವಿಕೆ ಇರಬೇಕೆಂಬ ವಿಷಯ ಬಹಳಷ್ಟು ಚರ್ಚೆಗೆ ಒಳಪಟ್ಟಿದೆ. ಇದಕ್ಕಾಗಿ ಹೋರಾಟವೂ ನಡೆದಿದೆ. ಕೆಲವು ವರ್ಷಗಳ ಹಿಂದೆ ಲೋಕಪಾಲ್‌ ಮಸೂದೆಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಈ ವಿಷಯ ಬಹಳಷ್ಟು ಚರ್ಚೆಗೆ ಒಳಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಕಾನೂನು ರಚನೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಅವಕಾಶವೇ ಇಲ್ಲ ಎಂದರೆ ತಪ್ಪಾದೀತು.

ADVERTISEMENT

ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾನೂನು ರಚನೆಗೆ ಮೊದಲು ಸಮಾಲೋಚನೆ ನಡೆಸಲು ಅವಕಾಶ ಇದೆ. ಇದರ ಪ್ರಕಾರ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಉದ್ದೇಶಿತ ಮಸೂದೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಅದಕ್ಕೆ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಬೇಕು. ಸಾರ್ವಜನಿಕರು ತಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯ ಸೂಚಿಸಲು ಮೂವತ್ತು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ ಈ ನಿಯಮ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ವಿಶೇಷವಾಗಿ ರಾಜ್ಯ ಮಟ್ಟದಲ್ಲಿ ಮಸೂದೆ ಬಗ್ಗೆ ಯಾವುದೇ ಮುನ್ಸೂಚನೆ ದೊರೆಯುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಮಸೂದೆ ಸಿದ್ಧವಾಗಿದೆ ಎಂದಾಗಲಿ, ಅದು ರಾಜ್ಯಪತ್ರದಲ್ಲಿ ಪ್ರಕಟವಾಗಿದೆ ಎಂದಾಗಲಿ ನಾಗರಿಕರಿಗೆ ತಿಳಿಯುವುದಿಲ್ಲ. ಸಂಬಂಧಪಟ್ಟ ಇಲಾಖೆಗಳು ಮಸೂದೆಗೆ ಅಗತ್ಯ ಪ್ರಚಾರ ನೀಡುವುದಿಲ್ಲ. ಹೀಗಾಗಿ, ಮಸೂದೆಯು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಇಲ್ಲದೇ ಕಾನೂನಿನ ರೂಪ ಪಡೆದುಕೊಳ್ಳುತ್ತದೆ. ಮಸೂದೆಯು ಶಾಸನಸಭೆಯಲ್ಲಿ ಮಂಡನೆಯಾದಾಗಲೇ ನಾಗರಿಕರಿಗೆ ಅದರ ಬಗ್ಗೆ ಗೊತ್ತಾಗುವುದು.

ಈ ಕಾರಣದಿಂದ, ರಾಜ್ಯ ಸರ್ಕಾರವು ಸ್ಥಾಪಿಸಲು ಹೊರಟಿರುವ ಮಾದರಿ ಮಸೂದೆ ಬ್ಯಾಂಕ್‌, ಕಾನೂನು ರಚನೆಯಲ್ಲಿ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯ ಒಂದು ಮಾದರಿ. ಈ ಬ್ಯಾಂಕ್‌ಗೆ ಮಸೂದೆಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವಾಲಯದ ನಿಯಂತ್ರಣಕ್ಕೆ ಒಳಪಟ್ಟಿರುವ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಗೆ ಹೊರಿಸಲಾಗಿದೆ. ಸಂಸ್ಥೆಯು ವಿಷಯ ತಜ್ಞರು, ವಕೀಲರು ಮತ್ತು ಸಾರ್ವಜನಿಕರ ಪ್ರತಿನಿಧಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿದೆ. ಈ ತಂಡಗಳು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮಸೂದೆ ಸಿದ್ಧಪಡಿಸಬೇಕು. ಇದರ ಮೂಲಕ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಸಲಹೆ, ಅಭಿಪ್ರಾಯಗಳು ದೊರೆಯಲಿವೆ. ಮಸೂದೆಯ ಗುಣಮಟ್ಟ ಹೆಚ್ಚುವುದಲ್ಲದೆ, ಕಾನೂನು ರಚನೆಯಲ್ಲಿ ಉಂಟಾಗುವ ವಿಳಂಬವನ್ನು ತಪ್ಪಿಸಬಹುದಾಗಿದೆ. ಅವಶ್ಯಕತೆ ಉಂಟಾದಾಗ ರಾಜ್ಯ ಸರ್ಕಾರವು ಈ ಮಾದರಿ ಮಸೂದೆಗಳನ್ನು ಬಳಸಿಕೊಳ್ಳಬಹುದು. ಆದರೆ ‘ಮಾದರಿ ಮಸೂದೆ ಬ್ಯಾಂಕ್‌’ನಲ್ಲಿರುವ ಮಸೂದೆಗಳು ಅಂತಿಮವಲ್ಲ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಸೂದೆಯ ಮಂಡನೆ, ಚರ್ಚೆ, ತಿದ್ದುಪಡಿಯಂತಹ ನಿಯಮ ಪಾಲಿಸಲಾಗುತ್ತದೆ.

ಸಂಸ್ಥೆಯು ಮಾದರಿ ಮಸೂದೆಗಳ ರಚನೆಗೆ ಕೆಲವು ನಿಯಮಗಳನ್ನು ರೂಪಿಸಿದೆ. ಮಸೂದೆಯು ಸಂವಿಧಾನದ ಅನುಸಾರ ರಾಜ್ಯಪಟ್ಟಿಯಲ್ಲಿರುವ ವಿಷಯಗಳಿಗೆ ಸೀಮಿತವಾಗಿ ಇರಬೇಕು. ಮಸೂದೆಗಳ ಅನುಷ್ಠಾನದಿಂದ ಸರ್ಕಾರಕ್ಕೆ ಅಧಿಕ ಆರ್ಥಿಕ ಹೊರೆ ಆಗಬಾರದು. ಸಾಮಾನ್ಯವಾಗಿ ಮಸೂದೆಯಲ್ಲಿ ಹೊಸ ಪ್ರಾಧಿಕಾರ ರಚನೆಯ ಪ್ರಸ್ತಾಪ ಇರುತ್ತದೆ. ಇದರಿಂದ ಅಧಿಕಾರಿಗಳು, ಸಿಬ್ಬಂದಿ ನೇಮಕ ಮತ್ತು ಇತರ ಮೂಲ ಸೌಕರ್ಯಗಳಿಗೆ ಆರ್ಥಿಕ ಸಂಪನ್ಮೂಲ ಬೇಕಾಗುತ್ತದೆ. ಸಾಧ್ಯವಾದ ಮಟ್ಟಿಗೆ ಮಸೂದೆಯಲ್ಲಿ ಈ ರೀತಿಯ ವೆಚ್ಚಕ್ಕೆ ಅವಕಾಶ ಇರಬಾರದು ಎಂದು ಸೂಚಿಸಲಾಗಿದೆ. ರಾಜ್ಯ ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವ ಮಸೂದೆಗಳಿಗೆ ಆದ್ಯತೆ ಇರಬೇಕು ಹಾಗೂ ಮಸೂದೆಯನ್ನು ಜಾರಿಗೆ ತರುವ ಅಧಿಕಾರಿಗಳ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಕ್ಕೆ ಒತ್ತು ಕೊಡಬೇಕು. ಮಸೂದೆಯ ಅನುಷ್ಠಾನದ ಪ್ರತಿ ಹಂತದಲ್ಲೂ ಉತ್ತರದಾಯಿತ್ವ ಇರಬೇಕೆಂದು ಸೂಚಿಸಲಾಗಿದೆ.

ಮಾದರಿ ಮಸೂದೆ ಬ್ಯಾಂಕ್‌ಗೆ ಬಹಳಷ್ಟು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಾನವ ಹಕ್ಕುಗಳು, ಶಿಕ್ಷಣ, ಕಾರ್ಮಿಕರ ಕಲ್ಯಾಣ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು, ಆಡಳಿತ, ಹಿರಿಯ ನಾಗರಿಕರು, ಸಂತ್ರಸ್ತರ ಹಕ್ಕುಗಳು, ಹಣಕಾಸು ವ್ಯವಹಾರ, ರೈತರ ಸಮಸ್ಯೆಗಳು, ಗುತ್ತಿಗೆ ಕಾರ್ಮಿಕರು, ನಾಗರಿಕರ ಜವಾಬ್ದಾರಿಯಂತಹ ವಿಷಯಗಳನ್ನು ಇದು ಒಳಗೊಂಡಿದೆ. ಗ್ರಾಹಕರ ಹಕ್ಕುಗಳಿಗೆ ಸಹ ಒತ್ತು ನೀಡಲಾಗಿದೆ. ಈ ವಿಷಯಗಳಲ್ಲದೆ, ಕೌಟುಂಬಿಕ ಹಿಂಸೆ, ವಕೀಲ ವೃತ್ತಿಯ ನಿಯಂತ್ರಣ, ಖಾಸಗಿ ಶಾಲೆ ಮತ್ತು ಕಾನೂನು ಕಾಲೇಜು ಸೇರಿದಂತೆ ಇತರ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣದ ಬಗ್ಗೆ ಮಾದರಿ ಮಸೂದೆಯನ್ನು ಸಿದ್ಧಪಡಿಸಲು ಅವಕಾಶ ಇದೆ.

ನಮ್ಮ ದೇಶದಲ್ಲಿ ಕಾನೂನುಗಳಿಗೆ ಬರವಿಲ್ಲ ಎಂಬ ಮಾತಿದೆ. ಇದರಲ್ಲಿ ಸತ್ಯಾಂಶವಿದ್ದರೂ ಒಳಹೊಕ್ಕು ನೋಡಿದಾಗ ಅದೆಷ್ಟೋ ವಿಷಯಗಳಿಗೆ ಕಾನೂನುಗಳು ಇಲ್ಲದಿರುವುದು ಗೋಚರಿಸುತ್ತದೆ. ಉದಾಹರಣೆಗೆ, ಆ್ಯಸಿಡ್‌ ಎರಚುವಿಕೆಯಿಂದ ಮುಖ, ಮೈ ಸುಟ್ಟವರಿಗೆ ಪರಿಹಾರ ನೀಡುವ ಯೋಜನೆ ಇದೆಯೇ ವಿನಾ ಅದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸುವ ಪ್ರತ್ಯೇಕ ಕಾನೂನು ಇಲ್ಲ. ಈಗ ದೇಶದಾದ್ಯಂತ ಕೋಚಿಂಗ್‌ ಕೇಂದ್ರಗಳ ಹಾವಳಿ ಹೆಚ್ಚಾಗುತ್ತಿದೆ. ಈ ಕೇಂದ್ರಗಳಲ್ಲಿ ವಸೂಲು ಮಾಡುವ ಶುಲ್ಕ, ನೀಡುವ ಶಿಕ್ಷಣದ ಗುಣಮಟ್ಟ, ಮೂಲ ಸೌಕರ್ಯದಂತಹವನ್ನು ನಿಯಂತ್ರಿಸುವ ಕಾನೂನು ಬೇಕಾಗಿದೆ.

ಖಾಸಗಿ ಬಸ್‌ ಮಾಲೀಕರು ಹಬ್ಬ ಮತ್ತು ರಜಾ ದಿನಗಳಲ್ಲಿ ಪ್ರಯಾಣಿಕರಿಂದ ವಸೂಲು ಮಾಡುವ ಮೊತ್ತವನ್ನು ಸಾಮಾನ್ಯ ದಿನಗಳ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಿಸುತ್ತಾರೆ. ಮನೆಗೆಲಸ ಮಾಡುವವರಿಗೆ ಯಾವುದೇ ರಕ್ಷಣೆ ಇಲ್ಲವಾಗಿದೆ. ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಕಾರಣದಿಂದ ಅಪಘಾತಕ್ಕೀಡಾಗಿ ಮೃತಪಟ್ಟವರು ಅಥವಾ ಗಾಯಗೊಂಡವರಿಗೆ ಪರಿಹಾರ ನೀಡುವ ಕಾನೂನು ಅವಶ್ಯವಾಗಿದ್ದರೂ ಸರ್ಕಾರ ಅದರ ಬಗ್ಗೆ ಚಿಂತನೆ ನಡೆಸಿಲ್ಲ. ಮದುವೆ, ಹುಟ್ಟುಹಬ್ಬದಂತಹ ಸಮಾರಂಭಗಳಲ್ಲಿ ಆಹಾರದ ಪೋಲನ್ನು ನಿಯಂತ್ರಿಸುವುದು ಅಗತ್ಯ. ಅದಕ್ಕೊಂದು ಪ್ರತ್ಯೇಕ ಕಾನೂನು ಬೇಕಾಗಿದೆ.

ಹೊಸಪೇಟೆ ಸಮೀಪದ ಹೋಮ್‌ಸ್ಟೇಯಲ್ಲಿ ಇತ್ತೀಚೆಗೆ ವಿದೇಶಿ ಮಹಿಳೆಯೊಬ್ಬರ ಅತ್ಯಾಚಾರದ ಪ್ರಕರಣ ವರದಿಯಾಗಿದೆ. ಅತಿಥಿಗಳ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡುವ ಕಾನೂನು ಬೇಕಿದೆ. ಇಂದಿನ ಯುವಕರು ಮತ್ತು ಪುಟ್ಟಮಕ್ಕಳು ವಾಟರ್‌ ರ್‍ಯಾಫ್ಟಿಂಗ್‌, ಸ್ಕೂಬಾ ಡೈವಿಂಗ್‌ನಂತಹ ಆಟಗಳಲ್ಲಿ ತೊಡಗುತ್ತಾರೆ. ದುಬಾರಿ ಹಣ ನೀಡಿದರೂ ಅವರ ಸುರಕ್ಷತೆಗೆ ಧಕ್ಕೆ ಉಂಟಾಗಿರುವ ಪ್ರಕರಣಗಳಿವೆ. ಶಾಲಾ ಮಕ್ಕಳನ್ನು ಚಾರಿತ್ರಿಕ ಸ್ಥಳಗಳಿಗೆ, ಮ್ಯೂಸಿಯಂಗಳಿಗೆ, ಕಲಾ ಗ್ಯಾಲರಿಗಳ ವೀಕ್ಷಣೆಗೆ ಕರೆದೊಯ್ಯುವ ಪದ್ಧತಿ ಈಗ ಕಂಡುಬರುತ್ತಿಲ್ಲ. ಮಕ್ಕಳಿಗೆ ಈಗ ವಿಹಾರ ಎಂದರೆ ರೆಸಾರ್ಟ್‌, ಈಜುವ ಕೊಳ ಅಷ್ಟೆ. ಇಲ್ಲಿಯೂ ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿದೆ. ಪ್ರವಾಸಿಗರ ಸುರಕ್ಷತೆಗೆ ಪ್ರತ್ಯೇಕ ಕಾನೂನಿನ ಅಗತ್ಯವಿದೆ.

ಈ ದಿಸೆಯಲ್ಲಿ ಕರ್ನಾಟಕ ಸರ್ಕಾರದ ‘ಮಾದರಿ ಮಸೂದೆ ಬ್ಯಾಂಕ್‌’ ಒಂದು ಉತ್ತಮ ಪ್ರಯತ್ನ. ತಜ್ಞರು ಮತ್ತು ಸಾರ್ವಜನಿಕರು ರೂಪಿಸುವ ಮಾದರಿ ಮಸೂದೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅನುಷ್ಠಾನ ಮಾಡಬೇಕಿದೆ. ಶಾಸನಸಭೆಗಳಲ್ಲಿ ಮಂಡನೆಯಾಗುವ ಸದಸ್ಯರ ಖಾಸಗಿ ಮಸೂದೆಗಳಂತೆ ಕಡೆಗಣನೆಗೆ ಒಳಗಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.