ರಾಜಕೀಯ ಪಕ್ಷವೊಂದು ಸರ್ಕಾರದ ನೇತೃತ್ವ ವಹಿಸಿಕೊಂಡಾಗ ಮಂತ್ರಿ ಸ್ಥಾನ ಸಿಗದ ಶಾಸಕರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಪಕ್ಷದ ತಳಹಂತದ ಕಾರ್ಯಕರ್ತರು ಹಾಗೂ ಮಧ್ಯಮ ಸ್ತರದ ನಾಯಕರು ದೈನಂದಿನ ರಾಜಕಾರಣದಲ್ಲಿ ತೊಡಗುವಂತೆ ಅವರಲ್ಲಿ ಅಧಿಕಾರದ ‘ಬಲ’ ತುಂಬಲು ವಿವಿಧ ಸ್ಥಾನಮಾನಗಳನ್ನು ದಯಪಾಲಿಸುವುದು ಎಲ್ಲ ಪಕ್ಷಗಳು ಹಿಂದಿನಿಂದ ಪಾಲಿಸಿಕೊಂಡು ಬಂದ ಸಂಪ್ರದಾಯವಾಗಿದೆ. ಆಡಳಿತ ನಡೆಸುವವರ ಇಂತಹ ನಡೆಯ ಹಿಂದೆ ಸ್ವಪಕ್ಷೀಯರನ್ನು ರಾಜಕೀಯವಾಗಿ, ಆರ್ಥಿಕವಾಗಿ ಶಕ್ತಗೊಳಿಸುವ ಉದ್ದೇಶದ ಜೊತೆಗೆ ಅವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ, ಓಲೈಸುವ ಕಾರ್ಯಸೂಚಿ ಇರುವುದು ರಹಸ್ಯವೇನಲ್ಲ. ಒಂದು ಮಟ್ಟದಲ್ಲಿ ಒಳಗೊಳಗೇ ನಡೆಯುತ್ತಿದ್ದ ರಾಜಕೀಯ ಪಕ್ಷಗಳ ಇಂತಹ ಅಧಿಕಾರ, ಸ್ಥಾನಮಾನ, ಅನುದಾನ ಹಂಚಿ ತಿನ್ನುವ ಪ್ರವೃತ್ತಿಯು ಪ್ರಚಲಿತ ‘ಅತಿರೇಕಗಳ ಕಾಲ’ಕ್ಕೆ ತಕ್ಕಂತೆ ವ್ಯಾಪಕ ಹಾಗೂ ಬಹಿರಂಗ ಸ್ವರೂಪ ಪಡೆದಂತಿದೆ.
ಸರ್ಕಾರದ ಬೊಕ್ಕಸ ಭರ್ತಿಯಾಗಿರುವ ಸಮೃದ್ಧ ಕಾಲಮಾನದಲ್ಲಿ ಇಂತಹ ಬಾಬತ್ತುಗಳಿಗೆ ವ್ಯಯವಾಗುವ ಮೊತ್ತ ಗಂಭೀರ ಗಣನೆಗೂ ಗಮನಕ್ಕೂ ಬಾರದೇ ಹೋಗಬಹುದಿತ್ತು, ನಿರ್ಲಕ್ಷ್ಯಕ್ಕೂ ಒಳಗಾಗುವ ಸಾಧ್ಯತೆ ಇತ್ತು. ಆದರೆ ಅತಿಶೀಘ್ರ ಅಧಿಕಾರ ಗಳಿಕೆ ಮತ್ತು ಅತಿದೀರ್ಘ ಅವಧಿಗೆ ಅಧಿಕಾರ ಉಳಿಸಿಕೊಳ್ಳುವ ಹಂಬಲದ ಬೆನ್ನುಹತ್ತಿರುವ ರಾಜಕೀಯ ಪಕ್ಷಗಳು ಸರ್ಕಾರದ ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಲು ಅಗತ್ಯವಾದ ಎಲ್ಲ ಕಸರತ್ತುಗಳನ್ನು ಮಾಡುತ್ತಿವೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳುವಂತೆ ಕರ್ನಾಟಕ ರಾಜ್ಯ ಸರ್ಕಾರವು ₹ 1.16 ಲಕ್ಷ ಕೋಟಿ ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಕ್ಕೂಟ ಸರ್ಕಾರದ ಸಾಲ ₹ 200 ಲಕ್ಷ ಕೋಟಿ ದಾಟಿದ್ದನ್ನು ಪ್ರಸ್ತಾಪಿಸುತ್ತಾರೆ. ಅಂದರೆ ಎರಡೂ ಪಕ್ಷಗಳಿಗೆ ಈ ‘ಸಾಲ’ ಎಂಬುದು ಅನುಕರಣೀಯ ಆರೋಪ ಮತ್ತು ಆದರ್ಶವಾಗಿ ಮಾರ್ಪಟ್ಟಿದೆ!
‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಪಾರಂಪರಿಕ ತಿಳಿವಳಿಕೆ ಹೊಂದಿದ ನಾಡು ನಮ್ಮದು. ಆದರೆ ಕಾಲಾಂತರದಲ್ಲಿ ಒಂದು ನಾಗರಿಕ ಸಮಾಜವಾಗಿ, ಒಂದು ಪ್ರಜಾಸತ್ತಾತ್ಮಕ ಸರ್ಕಾರವಾಗಿ ‘ಕಾಲು ಚಾಚುವಷ್ಟು ಹಾಸಿಗೆ ಹಾಸು’ ಎಂಬ ಬದಲಾವಣೆಗೆ ಒಗ್ಗಿಕೊಂಡಂತೆ ಕಾಣಿಸುತ್ತದೆ. ಜಾಗತೀಕರಣ ಮತ್ತು ಉದಾರೀಕರಣದ ಫಲಾನುಭವಿಯಾಗಿ ಜನರ ಬದುಕಿನೊಳಗೆ ನುಸುಳಿರುವ ಕಾರ್ಪೋರೇಟ್ ಪ್ರಣೀತ ಕೊಳ್ಳುಬಾಕ ಸಂಸ್ಕೃತಿಯು ‘ಸಾಲಗಾರರ ಸಂತತಿ’ ಹೆಚ್ಚಿಸಲು ಸಾಧ್ಯವಿರುವ ಎಲ್ಲ ವಿಧ, ತಂತ್ರ ಮತ್ತು ತಂತ್ರಜ್ಞಾನವನ್ನು ಹೇರಳವಾಗಿ ಬಳಸುತ್ತಿದೆ. ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನುವ ಇನ್ನೊಂದು ಗಾದೆಮಾತನ್ನು ವ್ಯಕ್ತಿಗಳಷ್ಟೇ ಅಲ್ಲ, ಸರ್ಕಾರಗಳೂ ಅಳವಡಿಸಿಕೊಂಡ ಎಲ್ಲಾ ಲಕ್ಷಣಗಳಿವೆ.
ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ, ಸರ್ಕಾರವಾಗಲೀ ಸಾಲ ಮಾಡಲೇಕೂಡದು ಎಂದು ಯಾವ ಅರ್ಥಶಾಸ್ತ್ರವೂ ಸಮಾಜಶಾಸ್ತ್ರವೂ ಪ್ರತಿಪಾದಿಸುವುದಿಲ್ಲ. ಹಾಗೆಯೇ ತುಪ್ಪ ತಿನ್ನಲೇಕೂಡದು ಎಂದು ಯಾವ ಆಹಾರ ತಜ್ಞರೂ ಹೇಳಲಾರರು. ಆದರೆ ಸಾಲವನ್ನು ಯಾರು ಯಾವಾಗ ಯಾವುದಕ್ಕೆ ಮಾಡಬೇಕು ಎಂಬ ವಿವೇಕ ಹಾಗೂ ಆರೋಗ್ಯಕ್ಕೆ ಎಷ್ಟು ತುಪ್ಪ ಹಿತಕಾರಿ ಎಂಬ ತಿಳಿವಳಿಕೆ ಬಹಳ ಮುಖ್ಯ. ಈ ರೀತಿಯ ವಿವೇಚನೆ ಮರೆಯಾಗಿ ಅಥವಾ ಮರೆಮಾಚಿ ಸಾಲ ಬಾಚಿಕೊಳ್ಳಲು ಮುಂದಾದರೆ ಚಾಣಕ್ಯ ಕೂಡ ಅಸಹಾಯಕನಾಗಿ ನಿಲ್ಲಬೇಕಾದೀತು.
ಯಾವುದೇ ಆರ್ಥಿಕ ಕೊರತೆ ನಿಭಾಯಿಸಲು ಜನಸಾಮಾನ್ಯರು ಸಾಂಪ್ರದಾಯಿಕವಾಗಿ ಅನುಸರಿಸುವ ಎರಡು ಸರಳ ಮತ್ತು ಸಾಮಾನ್ಯ ಮಾರ್ಗಗಳಿವೆ. ಒಂದು, ವಿವಿಧ ಮೂಲಗಳಿಂದ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದು. ಎರಡು, ವೆಚ್ಚಕ್ಕೆ ಕಡಿವಾಣ ಹಾಕಿ ಸಮತೋಲನ ಸಾಧಿಸುವುದು. ಇಂತಹ ಪ್ರಾಥಮಿಕ, ಸಾಮುದಾಯಿಕ ತಿಳಿವಳಿಕೆಯನ್ನೇ ಆರ್ಥಿಕ ತಜ್ಞರು ಅವರವರ ಪ್ರಮೇಯಗಳಿಗೆ ಅನುಗುಣವಾಗಿ ಸಂಕೀರ್ಣ ರೀತಿಯಲ್ಲಿ ಮಂಡಿಸಬಹುದು. ವಿಚಿತ್ರವೂ ವಿಷಾದನೀಯವೂ ಆದ ಸಂಗತಿಯೆಂದರೆ ಈಗಿನ ಸರ್ಕಾರ ಇವೆರಡರಲ್ಲಿ ಯಾವ ಒಂದು ದಿಕ್ಕಿನಲ್ಲಿ ಕ್ರಮಿಸಲೂ ಸಾಧ್ಯವಾಗದಂತೆ ತನ್ನನ್ನು ತಾನು ಕಟ್ಟಿಹಾಕಿಕೊಂಡ ಸ್ಥಿತಿ ತಲುಪಿರುವುದು.
ಸರ್ಕಾರದ ವರಮಾನ ಹೆಚ್ಚಿಸಲು ಬೇಕಾದ ದಕ್ಷತೆ, ಪ್ರಾಮಾಣಿಕತೆ ಮತ್ತು ಆಡಳಿತ ನೀತಿಯನ್ನು ದುರ್ಬೀನು ಹಿಡಿದು ಹುಡುಕಿದರೂ ವ್ಯವಸ್ಥೆಯ ಯಾವ ಮೂಲೆಯಲ್ಲಿಯೂ ಅದು ಗೋಚರಿಸಲಿಕ್ಕಿಲ್ಲ. ಭ್ರಷ್ಟಾಚಾರ ಮತ್ತು ಪ್ರಾಮಾಣಿಕತೆ ನಡುವೆ ಏರ್ಪಡಬೇಕಿದ್ದ ಸಂಘರ್ಷ, ಚರ್ಚೆ ಮತ್ತು ತುಲನೆ ಕೇವಲ ಭ್ರಷ್ಟಾಚಾರದ ಪ್ರಮಾಣ ಸೂಚಿಸುವ ಪರ್ಸೆಂಟೇಜುಗಳ ವ್ಯತ್ಯಾಸ ಅಳೆಯುವುದಕ್ಕೆ ಸೀಮಿತವಾಗಿರುವುದು ಬೇರೆಯದೇ ಕಥೆ ಹೇಳುತ್ತದೆ. ಹಾಗೆ ನೋಡಿದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಹಣ ಹುಟ್ಟಿಸುವುದರಲ್ಲಿ ನಿಸ್ಸೀಮರು; ಮರಳುಗಾಡಿನಲ್ಲೂ ವರಮಾನ ಕಟಾವು ಮಾಡಬಲ್ಲರು. ಆದರೆ ಆ ದಕ್ಷತೆ, ಚಾಣಾಕ್ಷತೆ, ಚಮತ್ಕಾರಗಳು ಸರ್ಕಾರದ ಬೊಕ್ಕಸ ತುಂಬಿಸಲು ಲಭಿಸುವುದಿಲ್ಲ.
ಈ ಹಿಂದೆ 1989-90ರಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ವೀರೇಂದ್ರ ಪಾಟೀಲ ಅವರು ನೀಡಿದ ಸಮರ್ಥ ಆಡಳಿತ ಶೈಲಿಯನ್ನು ಅನುಕರಿಸುವುದು ಒತ್ತಟ್ಟಿಗಿರಲಿ, ಈಗಿನ ರಾಜಕಾರಣ ಅದನ್ನು ಸ್ಮರಿಸುವ ಮನಃಸ್ಥಿತಿಯಲ್ಲೂ ಇಲ್ಲ. ವೀರೇಂದ್ರ ಪಾಟೀಲ ಅವರು ಎರಡನೇ ಬಾರಿ ಅಧಿಕಾರದ ಹೊಣೆ ಹೊತ್ತಾಗಿನ ಸಮಯ ಅತ್ಯಂತ ಕಠಿಣ ಆರ್ಥಿಕ ಸಂಕಷ್ಟದಿಂದ, ಸವಾಲಿನಿಂದ ಕೂಡಿತ್ತು. ಆದಾಗ್ಯೂ ಅವರು ಅಲ್ಪಾವಧಿಯಲ್ಲಿಯೇ ಆರ್ಥಿಕ ಸ್ಥಿರತೆಯನ್ನು ಕಾಪಾಡುವುದರ ಜೊತೆಗೆ ರಾಜ್ಯದ ಮೂಲ ಸೌಕರ್ಯಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡಿದರು. ಮದ್ಯದ ಮೇಲಿನ ಸುಂಕ ಕುರಿತಾದ ಅವರ ರಾಜಿರಹಿತ ನೀತಿಗಳು ರಾಜ್ಯದ ವರಮಾನದ ಹೆಚ್ಚಳಕ್ಕೆ ಸಹಜವಾಗಿಯೇ ಕಾರಣವಾದವು. ಬಿಗಿ ನಿಲುವಿನ ಆಡಳಿತದ ಮಾತು ಬಂದಾಗ ಕೇಳಿಬರುವ ಮತ್ತೊಂದು ಹೆಸರೆಂದರೆ, ಎಂ.ರಾಜಶೇಖರಮೂರ್ತಿ. ಅವರು ಹಣಕಾಸು, ಅಬಕಾರಿ ಮತ್ತು ಕಂದಾಯ ಸಚಿವರಾಗಿ ಕಟ್ಟುನಿಟ್ಟಿನ ಆಡಳಿತಕ್ಕೆ, ವರಮಾನದ ಹೆಚ್ಚಳಕ್ಕೆ ಹೆಸರು ಮಾಡಿದ್ದರು.
ಖಜಾನೆಯ ವರಮಾನ ಹೆಚ್ಚಳದ ಮಾರ್ಗೋಪಾಯಗಳು, ಮಾದರಿಗಳು ರುಚಿಸದಿದ್ದರೆ ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳಲು ಸರ್ಕಾರ ತನ್ನ ಮುಂದಿರುವ ದುಂದು ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸುವ ಮತ್ತೊಂದು ಆಯ್ಕೆಯನ್ನಾದರೂ ಪರಿಗಣಿಸುವ ಸ್ಥಿತಿಯಲ್ಲಿದೆಯೇ? ಅಂತಹ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಮಂತ್ರಿಗಳ ಮನೆ-ಕಚೇರಿಗಳ ನವೀಕರಣ, ಕಾರುಗಳ ಖರೀದಿ, ಸಲಹೆಗಾರರ ತಂಡ, ನಿಗಮ ಮಂಡಳಿಗಳ ಅಧ್ಯಕ್ಷರು-ಸದಸ್ಯರ ನೇಮಕದಂತಹ ಖರ್ಚುಗಳ ಬಾಬತ್ತು ಕಡಿತಗೊಳಿಸುವ ಸಾಮರ್ಥ್ಯ ಯಾವ ಸರ್ಕಾರದ ಬಳಿಯೂ ಉಳಿದಿಲ್ಲ. ಈಗಿನ ಸರ್ಕಾರದಲ್ಲಿ ಅಧಿಕಾರದಲ್ಲಿರುವವರ ಇಚ್ಛೆಗನುಗುಣವಾಗಿ ಹೀಗೆ ಭರ್ತಿಯಾಗಿರುವ ನೂರಕ್ಕೂ ಹೆಚ್ಚು ಹುದ್ದೆಗಳಿಗೆ ಸಂಪುಟ ದರ್ಜೆ ಸಚಿವರ ಸ್ಥಾನ-ಸೌಲಭ್ಯ ನೀಡಿರುವುದು ಗಮನಾರ್ಹ.
ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳಲ್ಲಿ ಅನೂಚಾನವಾಗಿ ನಡೆಯುವ ಈ ಪ್ರಕ್ರಿಯೆಗೆ ಇದೀಗ ಹೊಸದಾಗಿ ಸೇರ್ಪಡೆಯಾಗಿರುವುದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು. ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಈ ಸಮಿತಿಗಳಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಅವಕಾಶ ಕಲ್ಪಿಸಲು ವಾರ್ಷಿಕ ₹ 15 ಕೋಟಿ ವ್ಯಯಿಸಲಾಗುತ್ತಿದೆ. ರಾಜ್ಯ ಭರಿಸುತ್ತಿರುವ ಹಣಕಾಸು ಹೊರೆಗಿಂತ ಆಡಳಿತ ಪಕ್ಷ ಗಳಿಸುವ ರಾಜಕೀಯ ಲಾಭದ ಮೇಲೆ ಪ್ರತಿಪಕ್ಷಗಳ ಕೆಂಗಣ್ಣು. ಇಂಥ ಬಹಳಷ್ಟು ವಿಷಯಗಳನ್ನು ಪ್ರಸ್ತಾಪಿಸಲು ನೈತಿಕ ಶಕ್ತಿ ಹೊಂದಿಲ್ಲದ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷದಿಂದ ‘ನಿಮ್ಮ ಪಕ್ಷ ಮಾಡಿಲ್ಲವೇ?’ ಎಂಬ ಸಿದ್ಧ ಉತ್ತರ ಇದ್ದೇ ಇರುತ್ತದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ತೃಪ್ತಿಪಡಿಸುವುದರ ಹಿಂದೆ ಅತ್ಯಂತ ಸಂಕೀರ್ಣವೂ ದುಬಾರಿಯೂ ಆದ ಚುನಾವಣೆಗಳನ್ನು ನಿರ್ವಹಿಸುವ ಮತ್ತು ಗೆಲ್ಲುವ ಅನಿವಾರ್ಯ ಕೆಲಸ ಮಾಡುವುದನ್ನು ಮರೆಯಬಾರದು.
ಮಾರ್ಚ್ ಮಾಸದಲ್ಲಿ ಶಾಂತವೇರಿ ಗೋಪಾಲಗೌಡ, ರಾಮಮನೋಹರ ಲೋಹಿಯಾ ಅವರಂತಹ ಮಹನೀಯರ ಹುಟ್ಟಿದ ದಿನಗಳು ಬರುತ್ತವೆ. ಸಮಾಜವಾದಿಗಳು ತಮ್ಮ ಸರಳ ಬದುಕಿನ ಮೂಲಕ ಹಾಕಿಕೊಟ್ಟ ಸಾರ್ವಜನಿಕ ಜೀವನದ ಆದರ್ಶಗಳು ಈ ಸಂದರ್ಭದಲ್ಲಾದರೂ ಸಂಬಂಧಿಸಿದವರ ಎದೆಗೆ ಬೀಳಲಿ ಎಂದು ಆಶಿಸಬಹುದಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.