ಪಂಚ ಗ್ಯಾರಂಟಿಗಳು
12ನೇ ಶತಮಾನದಲ್ಲಿ ಬಸವಣ್ಣನವರು ಜಗತ್ತಿಗೆ ಸಮಾಜವಾದವನ್ನು ಕಲಿಸಿದ ಮಹಾಮಾನವತಾವಾದಿ. ಅದೇ ಮಾದರಿಯನ್ನು ಭಾರತ ಸಂವಿಧಾನದ ವಿಧಿ 38 ಮತ್ತು 39ರಲ್ಲಿ ಸಮಾಜವಾದ ಎಂಬ ಸಿದ್ಧಾಂತದ ಅಡಿಯಲ್ಲಿ ಸೇರಿಸಲಾಗಿದೆ. ಇದರರ್ಥ ಸಮಾಜದ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡುವುದೇ ಸಮಾಜವಾದ. ಸಂಪತ್ತನ್ನು ಕ್ರೂಢೀಕರಿಸುವುದು ಬಂಡವಾಳವಾದ, ಅದನ್ನು ಬಡವರಿಗೆ ನಿರ್ಗತಿಕರಿಗೆ, ಮಹಿಳೆಯರಿಗೆ, ವಿಧವೆಯರಿಗೆ, ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಅಂಗವಿಕಲರಿಗೆ ಹಂಚುವುದೇ ಸಮಾಜವಾದ ಅದನ್ನೆ ಬಸವಣ್ಣ ಹೇಳಿದ್ದಾರೆ.
ಇಂದಿನ ಹಂಚಿ-ತಿನ್ನುವ ಈ ಕಾರ್ಯವೇ ‘ಉಚಿತ ಕೊಡುಗೆಗಳು, ಗ್ಯಾರಂಟಿಗಳು‘ ಅಂದು ಬಸವಣ್ಣ ಮಾಡಿದ್ದು ಸರಿ ಇದ್ದರೆ, ಇಂದು ಸಿದ್ದರಾಮಣ್ಣ ಮಾಡುವುದು ಸರಿ.
ಕರ್ನಾಟಕ ಸರ್ಕಾರ 2023ರಲ್ಲಿ ಚುನಾವಣಾ ವೇಳೆಯಲ್ಲಿ ತನ್ನ ಜನರಿಗಾಗಿ ಪಂಚ ಗ್ಯಾರಂಟಿಗಳನ್ನು ಘೋಷಿಸಿತು, ಈ ಘೋಷಣೆಗಳನ್ನು ತನ್ನ ಪಕ್ಷದ ಪ್ರಣಾಳಿಕೆಯಲ್ಲಿಟ್ಟಿತು ಈ ಕುರಿತು ಫಲಾನುಭವಿಗಳು ಇದರ ಸದುಪಯೋಗ ಪಡೆಯಲಾರಂಭಿಸಿದ್ದಾರೆ ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಸರ್ಕಾರದ ಈ ಪಂಚಯೋಜನೆಗಳಿಂದ ರಾಜ್ಯ ಸರ್ವನಾಶ ಆಯಿತೆಂದು ಬೊಬ್ಬಿರಿಯುತ್ತಿರುವುದನ್ನು ನಾವು ನೋಡಿದ್ದೇವೆ ಆ ಯೋಜನೆಗಳ ಸ್ಥೂಲನೋಟವನ್ನು ನೋಡೋಣ.
1. ಗೃಹ ಜ್ಯೋತಿ ಯೋಜನೆ...
ಜುಲೈ 1, 2023ರಿಂದ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹಿಂದಿನ ವಿದ್ಯುತ್ ಬಿಲ್ಲು ಪಾವತಿಸಿದವರು ಈ ಯೋಜನೆಗೆ ಅರ್ಹರು. ಇದು ಬಡವರ ಅಂಧಕಾರ ದೂರ ಮಾಡುವ ಯೋಜನೆಯಾಗಿದೆ. ಸೀಮೆ ಎಣ್ಣೆಯ ದೀಪದಲ್ಲಿ ಓದಿ ಮನಮೋಹನ್ ಸಿಂಗ್ ಈ ದೇಶದ ಪ್ರಧಾನ ಮಂತ್ರಿಗಳಾಗಿದ್ದಾರೆ. ಬೀದಿ ದೀಪದಲ್ಲಿ ಓದಿ ದಿವಾನರಾದವರು ಸರ್ ಎಂ ವಿಶ್ವೇಶ್ವರಯ್ಯ. ಇಂದಿನ ಈ ಗೃಹಜ್ಯೋತಿ ಯೋಜನೆಯ ಬೆಳಕಿನಲ್ಲಿ ಓದಿದ ಬಾಲಕರು ಮುಂದಿನ ಮನಮೋಹನ್ ಸಿಂಗ್ ಅಥವಾ ಸರ್ ಎಂ ವಿಶ್ವೇಶ್ವರಯ್ಯ ಆದರೂ ನಾವೆಲ್ಲ ಅಚ್ಚರಿಪಡಬೇಕಾಗಿಲ್ಲ.
ಈ ಯೋಜನೆಯನ್ನು ವಿರೋಧಿಸುವವರ ಮಾತು ಹೇಗಿದೆ ಎಂದರೆ ಸರ್ ಎಂ ವಿಶ್ವೇಶ್ವರಯ್ಯರವರು ರಾತ್ರಿಯಲ್ಲಿ ಬೀದಿ ದೀಪದಲ್ಲಿ ಏಕೆ ಓದುತ್ತಿದ್ದರು? ಅವರು ಹಗಲಿನಲ್ಲಿ ಏನು ಮಾಡುತ್ತಿದ್ದರು? ಎಂದು ಅಣಕಿಸುವಂತಿದೆ. ಈಗಾಗಲೇ ಈ ಹಿಂದೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳಿಗೆ ವಿರೋಧಿಸದಿರುವವರು ಈ ಯೋಜನೆಗೇಕೆ ವಿರೋಧಿಸುತ್ತಿದ್ದಾರೆ ಏಕೆ ಬಡವರ ಮಕ್ಕಳು ಬೆಳೆಯಬಾರದ?
2. ಗೃಹಲಕ್ಷ್ಮಿ ಯೋಜನೆ
6 ಜೂನ್, 2023ರಂದು ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿ, ಮಹಿಳೆಯು ಮುಖ್ಯಸ್ಥರಾಗಿರುವ ಯಾವುದೇ ಕುಟುಂಬಕ್ಕೆ ಆಗಸ್ಟ್ 5 ರಿಂದ ಪ್ರತಿ ತಿಂಗಳು ₹ 2000 ನೀಡುವುದಾಗಿ ಹೇಳಿತು. ಈ ಯೋಜನೆಯ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿರಬೇಕು ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಕ್ಕೆ ಸೇರಿದವರಾಗಿರಬೇಕು.
‘ಹೆಣ್ಣು ಜಗದ ಕಣ್ಣು‘ ಹೀಗೆಲ್ಲ ಹಾಡಿ ಹೊಗಳಿದರೆ ಸಾಲದು ಅವಳ ಕೈ ಬಲಪಡಿಸಬೇಕಾಗಿದೆ. ಹೆಣ್ಣಿನ ಕೈಗೆ ನೀಡಿದ ಹಣ, ಭೂಮಿಗೆ ಹಾಕಿದ ಬೀಜ ಎರಡು ಒಂದೇ ಅವು ಇಂದಲ್ಲ ನಾಳೆ ಫಲ ಕೊಟ್ಟೆ ಕೊಡುತ್ತವೆ.
ಶತಶತಮಾನಗಳಿಂದ ಗಂಡಿನಿಂದ ತುಳಿತಕ್ಕೆ ಒಳಗಾದ ಒಂದು ಮುಖ್ಯವಾದ ಗುಂಪು ಯಾವುದೇ ಇದ್ದರೆ ಅದು ಸ್ತ್ರೀ ಕುಲ. ಮಹಾಭಾರತದಲ್ಲಿ "ಅಂಬ, ಅಂಬಿಕಾ ಅಂಬಾಲಿಕಾ, ದ್ರೌಪದಿ, ಕುಂತಿ, ಗಾಂಧಾರಿ ಇವರ ಜೀವನ ಚರಿತ್ರೆ ನೋಡಿದರೆ ಇವರೆಲ್ಲ ಗಂಡಿನ ಕ್ರೌರ್ಯಕ್ಕೆ ಬಲಿಯಾದವರೇ, ರಜಪೂತರ ಜೋಹರ್ ಪದ್ಧತಿ, ಸತಿ ಪದ್ಧತಿ, ದೇವದಾಸಿ ಪದ್ಧತಿ, ವರದಕ್ಷಣೆ ಪಿಡುಗು ಒಂದೇ ಎರಡೇ ಇದೆಲ್ಲ ನೋಡಿದ ಕವಯತ್ರಿ ಚೆನ್ನಾಗಿ ಬರೆದಿದ್ದಾಳೆ.
ಹೆಣ್ಣಾಗಿ ಹುಟ್ಟೋದಕ್ಕಿಂತ
ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮೇಲೊಂದು ಮರವಾಗಿ
ಮಣ್ಣಿನ ಮೇಲೊಂದು ಮರವಾಗಿ
ಹುಟ್ಟಿದರೆ, ಪುಣ್ಯವಂತರಿಗೆ ನೆರಳಾದೆ...
ಪ್ರಸ್ತುತ ಕರ್ನಾಟಕ ಸರ್ಕಾರದ ಈ ಯೋಜನೆ ಕನ್ನಡದ ಮಾತೆಯರು ತಲೆಯೆತ್ತಿ ಬದುಕುವಂತೆ ಮಾಡಿದೆ. ಹಳ್ಳಿಯಲ್ಲಿ ನಾನು, ಬೇಸರಾದಾಗ ಹೆಂಗಸರು ಒಂದು ಮಾತು ಹೇಳುವುದನ್ನು ಕೇಳಿದ್ದೇನೆ. ನನ್ನ ಕಡೆ ವಿಷ ಕುಡಿದು ಸಾಯೋಕು ಹತ್ತು ಪೈಸೆ ಇಲ್ಲ ಎಂದು. ಇಂದು ಗೌರವಯುತವಾಗಿ ಅವಳ ಖಾತೆಗೆ ₹ 2,000 ಜಮೆಯಾಗುತ್ತಿದೆ. ಈ ಯೋಜನೆಗೆ ಸರ್ಕಾರ ಎಷ್ಟು ಖರ್ಚು ಮಾಡುತ್ತದೆ ಎಂಬುದು ಮುಖ್ಯವಲ್ಲ, ಎಷ್ಟು ಬಡ ಹೆಂಗಸರ ಕಣ್ಣೀರು ಒರಿಸುತ್ತದೆ ಎಂಬುದು ಮುಖ್ಯ.
3. ಯುವ ನಿಧಿ ಯೋಜನೆ
ಕರ್ನಾಟಕದ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹3000, ಭತ್ಯೆ ಸಿಗುತ್ತದೆ, ಡಿಪ್ಲೋಮಾ ಮಾಡಿದ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹ 1,500 ಸಿಗುತ್ತದೆ. ಫಲಾನುಭವಿಗಳಾಗಿ ಎರಡು ವರ್ಷದಲ್ಲಿ ಉದ್ಯೋಗ ಪಡೆಯಬೇಕು, ಇಲ್ಲದಿದ್ದರೆ ಈ ಯೋಜನೆಯಿಂದ ಅವರಿಗೆ ಹಣ ಜಮೆ ಆಗುವುದನ್ನು ನಿಲ್ಲಿಸಲಾಗುತ್ತದೆ. ಯುವಕರು ಈ ದೇಶದ ಆಶಾಕಿರಣ ಅಲ್ಲವೇ, ಇಲ್ಲಿಯವರೆಗೆ ಶಿಷ್ಯವೇತನ ಉಚಿತ ಹಾಸ್ಟೆಲ್, ಸೈಕಲ್, ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿ ಊಟ ಎಲ್ಲಾ ಯೋಜನೆಗಳನ್ನು ಯುವಕರಿಗೆ ಎಲ್ಲಾ ಸರ್ಕಾರಗಳು ನೀಡುತ್ತಾ ಬಂದಿವೆ. ಈ ಎಲ್ಲಾ ಯೋಜನೆಗಳಿಗೆ ಯಾರು ಇಲ್ಲಿಯವರೆಗೆ ವಿರೋಧ ಮಾಡಿರುವುದಿಲ್ಲ ಇಂದಿನ ಯೋಜನೆಗೆ ವಿರೋಧವೇಕೆ?
ಇಂದಿನ ಯುವಕ ನಾಳಿನ ನಾಯಕ. ಶಿಷ್ಯವೇತನ ಪಡೆದ ಇದೇ ಬಾಲಕ ಮುಂದೆ ಅಧಿಕಾರಿ, ನ್ಯಾಯಾಧೀಶ, ರಾಜಕಾರಣಿ, ವಿಜ್ಞಾನಿ, ತಂತ್ರಜ್ಞಾನಿ ಆಗಬಹುದು ಆಗ ಈ ಸಮಾಜದ ಋಣ ತಿರಿಸಬಹುದಲ್ಲವೇ.
4. ಅನ್ನಭಾಗ್ಯ ಯೋಜನೆ
ಅನ್ನ ದೇವರ ಮುಂದೆ,
ಇನ್ನೂ ದೇವರಂತೆ ಜಗದೋಳ್,
ಅನ್ನವೇ ದೈವ ಸರ್ವಜ್ಞ‘
ದೇವರನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ ಹಸಿದವನಿಗೆ ಅನ್ನ ಹಾಕಿದರೆ ದೇವರೇ ನಮ್ಮನ್ನು ಹುಡುಕಿಕೊಂಡು ಬರುತ್ತಾನೆ, ಕರ್ನಾಟಕ ಸರ್ಕಾರ 01 ಜುಲೈ 2023ರಿಂದ ಬಿಪಿಎಲ್ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ದೊರಕುವಂತೆ ಮಾಡಿದೆ.
ಈಗಾಗಲೇ ಸಾರ್ವಜನಿಕ ಪಡಿತರ ವ್ಯವಸ್ಥೆ ತುಂಬಾ ವರ್ಷಗಳ ಹಿಂದೆಯೇ ಜಾರಿಯಲ್ಲಿದೆ ಎಲ್ಲಾ ಸರ್ಕಾರಗಳು ಬಡವನ ಹೊಟ್ಟೆ ತುಂಬಿಸುವ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿವೆ. ಅಂದು ಮಾಡದ ವಿರೋಧ ಇಂದೇಕೆ?
ಇಂತಹ ಯೋಜನೆಗಳು ಭಾರತದಂತಹ ಹೆಚ್ಚು ಜನಸಂಖ್ಯೆ ಇರುವ ಮತ್ತು ವೈವಿಧ್ಯತೆಯಿಂದ ಕೂಡಿದ ದೇಶಗಳಿಗೆ ಅತ್ಯಗತ್ಯ. ದೇಶದ ಯಾವುದೇ ಪ್ರಜೆ ಹೊಟ್ಟೆ ಹಸಿದುಕೊಂಡು ಮಲಗಬಾರದು ಇದುವೇ ಸಮಾಜವಾದದ ಪರಿಕಲ್ಪನೆ. ತಿನ್ನಲು ಅನ್ನ, ಕುಡಿಯಲು ನೀರು, ಮಾನ ಮುಚ್ಚಲು ಬಟ್ಟೆ, ಅಗತ್ಯವಾದ ಸೌಕರ್ಯಗಳನ್ನು ಕೊಡದಿದ್ದ ಮೇಲೆ ಪ್ರಜಾಪ್ರಭುತ್ವಕ್ಕೆ ಬೆಲೆ ಎಲ್ಲಿದೆ?
5. ಶಕ್ತಿ ಯೋಜನೆ
ಜೂನ್ 11, 2023ರಿಂದ ಕರ್ನಾಟಕದ ಮಹಿಳೆಯರು ರಾಜ್ಯದ ಯಾವುದೇ ಭಾಗಕ್ಕಾದರೂ ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಕೋಶ ಓದುವುದಕ್ಕಿಂತ ದೇಶ ಸುತ್ತುವುದೇ ಲೇಸು ಎಂದಿದ್ದಾರೆ ಜ್ಞಾನಿಗಳು. ಕೇವಲ ಹೆಣ್ಣು ಎಂಬ ಕಾರಣಕ್ಕೆ ಅವಳ ವಿದ್ಯಾಭ್ಯಾಸ, ಬಟ್ಟೆ, ಬರೆ, ಊಟ, ಆಭರಣದಲ್ಲಿ ತಾರತಮ್ಯ ಮಾಡುತ್ತಲೇ ಬಂದಿದ್ದೇವೆ. ಅವಳ ಸ್ವಾತಂತ್ರ್ಯದ ಮೊದಲ ಹೆಜ್ಜೆಯೇ ಚಲನಶೀಲತೆ. ಯಾವಾಗ ಹೆಣ್ಣು ಮನೆಯ ನಾಲ್ಕು ಗೋಡೆ ಬಿಟ್ಟು ಬಂದು ಚಲಿಸಲು ಪ್ರಾರಂಭಿಸುವಳು ಆಗವಳು ಸ್ವಾತಂತ್ರ್ಯಳು, ದೇವಸ್ಥಾನಕ್ಕಾದರೂ ಹೋಗಲಿ, ತವರಿಗಾದರೂ ಹೋಗಲಿ, ಮಗಳ ಮನೆಗಾದರೂ ಹೋಗಲಿ, ಶಾಲೆಗೆ ಹೋಗಲಿ, ನೌಕರಿಗಾಗಿ ಹೋಗಲಿ ಒಟ್ಟಾರೆ ಸ್ವಾತಂತ್ರ್ಯವಾಗಿ ನಿರ್ಭೀತಿಯಿಂದ ಈ ನಾಡನ್ನು ನೋಡಲಿ ಎಂಬುದೇ ಸರ್ಕಾರದ ಆಶಯವಾಗಿದೆ.
ನಿಜವಾದ ರಾಮರಾಜ್ಯ ಯಾವಾಗ ಬರುತ್ತದೆ? ಹೆಣ್ಣೊಂದು ನಿರ್ಭೀತಿಯಿಂದ ಮಧ್ಯರಾತ್ರಿ ರಸ್ತೆಯಲ್ಲಿ ಓಡಾಡಿದಾಗ ಎಂದು ಮಹಾತ್ಮ ಗಾಂಧಿ
ಗಾಂಧಿ ಹೇಳಿದ್ದರು. ಗಾಂಧಿ ಕಂಡ ರಾಮ ರಾಜ್ಯ ಕನಸು ಇಂದು ನನಸಾಗಿದೆ. ಅಂಬೇಡ್ಕರ್ ಕಂಡ ಭೀಮ ರಾಜ್ಯದ ಕನಸು ನನಸಾಗಬೇಕಿದೆ!
ಕರ್ನಾಟಕ ಸರ್ಕಾರದ ಆರ್ಥಿಕತೆ
ಕರ್ನಾಟಕ ಸರ್ಕಾರ ತನ್ನ ಆರ್ಥಿಕ ಮಂತ್ರಿಯಿಂದ 2024-25ರ ಬಜೆಟ್ ಅನ್ನು 16 ಫೆಬ್ರವರಿ 2024 ರಂದು ಮಂಡಿಸಿತು. ಬಜೆಟ್‍ನ ವೆಚ್ಚ ₹ 3,46,409 ಕೋಟಿ, ಒಟ್ಟು ಸ್ವೀಕೃತಿ ₹ 2,63,428ಕೋಟಿ. ಇವೆರಡರ ನಡುವಿನ ವ್ಯತ್ಯಾಸ ₹ 80,272 ಕೋಟಿ ಸಾಲದ ಹಣ. ಈ ಬಜೆಟ್ ನಲ್ಲಿ ₹ 53,674 ಕೋಟಿ ಮೊತ್ತವನ್ನು ಸರ್ಕಾರ ಪಂಚ ಗ್ಯಾರಂಟಿಗಳಿಗೆ ನಿಗದಿ ಮಾಡಿತ್ತು. ಈ ಅಂಕಿ ಅಂಶಗಳನ್ನು ನೋಡಿದಾಗ ಇದು ರಾಜ್ಯದ ಮೇಲೆ ಹೊರೆಯೇ? ಬಡವರು, ನಿರ್ಗತಿಕರು, ಹೆಂಗಸರು. ಯುವಕರು ಈ ರಾಜ್ಯಕ್ಕೆ ಬಾರವೇ? ಖಂಡಿತ ಇಲ್ಲ.
ನಮ್ಮ ರಾಜ್ಯದ ಒಟ್ಟು ವೆಚ್ಚ ₹ 3.46 ಲಕ್ಷ ಕೋಟಿ. ಸ್ವೀಕೃತಿಗಳು ₹ 2.63 ಲಕ್ಷ ಕೋಟಿ ಈಗ ಸಾಲ ಮಾಡಿ ನಾವು ಬಡವರಿಗೆ ಯುವಕರಿಗೆ ಹೆಂಗಸರಿಗೆ ಗ್ಯಾರಂಟಿ ನೀಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸಾಲ ಮಾಡುವುದು ತಪ್ಪು ಎಂದು ಭಾವಿಸಿದರೆ ಅದು ಮೂರ್ಖತನದ ಪರಮಾವಧಿ. ಸಾಲ ಮಾಡದವರು ಈ ದೇಶದಲ್ಲಿದ್ದಾರೆಯೇ? ನಾವು ಬೈಕು, ಕಾರು, ಮನೆ ಖರೀದಿಸಲು ಸಾಲ ಮಾಡುವುದಿಲ್ಲವೇ? ₹ 10 ಲಕ್ಷ ಕಾರು ಖರೀದಿಸುವ ನಾವು ₹ 8 ಲಕ್ಷ ಸಾಲ ಮಾಡುತ್ತೇವೆ, ಯಾವ ಭರವಸೆಯ ಮೇಲೆ? ನಾನು ಈ ಸಾಲ ತೀರಿಸಿ ಸಾಯುತ್ತೇನೆ ಎಂಬ ಹಠದ ಮೇಲೆ? ಇಲ್ಲಿಯವರೆಗೆ ಈ ದೇಶ, ರಾಜ್ಯ ಮಾಡಿದ ಸಾಲವನ್ನು ಯಾವುದೇ ರಾಜಕಾರಣಿ, ನ್ಯಾಯಾಧೀಶ, ಟಿವಿ ಚಾನೆಲ್, ಸಿನಿಮಾ ನಟರು, ಉದ್ಯಮಿ ಪತಿಗಳು ತೀರಿಸಿದ್ದಾರೆಯೇ? ಇದನ್ನು ತೀರಿಸಿದ್ದು ನಾವೆಲ್ಲ ಸೇರಿ.
ಚುನಾಯಿತ ಸರ್ಕಾರ ಇದನ್ನು ವಿಶಾಲಾರ್ಥದಲ್ಲಿ ಮನಗಾಣಗಬೇಕು ಸಂವಿಧಾನದ ವಿಧಿ 21 ನಮಗೆಲ್ಲ ಘನತೆಯಿಂದ ಬದುಕುವ ಹಕ್ಕು ನೀಡಿದೆ. ಈ ದೇಶದ ಸ್ಥಿತಿ ನೋಡಿದರೆ 90ರಷ್ಟು ಜನರ ಬದುಕುವ ಹಕ್ಕನ್ನು ಕಸಿಯಲಾಗಿದೆ. ಭಾರತದ ನಲವತ್ತರಷ್ಟು ಸಂಪತ್ತು ಕೇವಲ ಒಂದರಷ್ಟು ಜನರ ಕೈಯಲ್ಲಿದೆ. ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ–2023ಯನ್ನು ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯ ಪ್ರಕಟಿಸಿದೆ. 1980ರಲ್ಲಿ ಮಹಿಳೆಯರು ಕೆಲಸದಲ್ಲಿ ಭಾಗವಹಿಸುವಿಕೆ ಶೇ. 52% ಇತ್ತು, ಅದೀಗ ಶೇ.39.1% ಆಗಿದೆ. 25 ವರ್ಷದೊಳಗಿನ ಶೇ. 45 ರಷ್ಟು ಪದವೀಧರರು ಇಂದು ದೇಶದಲ್ಲಿ ನಿರುದ್ಯೋಗಿಗಳು. ನರೇಗಾ ಯೋಜನೆ, ಪಡಿತರ ವ್ಯವಸ್ಥೆ ಶೇ. 50 ರಷ್ಟು ಜನರ ಬಡತನ ರೇಖೆಗಿಂತ ಕೆಳಗೆ ಹೋಗದಂತೆ ತಡೆದಿದೆ. ಈ ಯೋಜನೆ ನಿಲ್ಲಿಸಿದರೇ ರಾತ್ರೋರಾತ್ರಿ ಶೇ. 50 ರಷ್ಟು ಜನರು ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಆಗಲಿದ್ದಾರೆ.
ಸರಿಪಡಿಸ ಬೇಕಿರುವುದು ಯಾವುದನ್ನು?
ಹತ್ತು ವರ್ಷಗಳಲ್ಲಿ ಈ ದೇಶದ ಬಂಡವಾಳಶಾಹಿಗಳ ಸುಮಾರು 15 ಲಕ್ಷ ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಿದೆ. ಕಾರ್ಪೋರೆಟ್ ಕಂಪನಿಗಳ ತೆರಿಗೆಯನ್ನು ಶೇ. 30 ರಿಂದ 22 ಪರ್ಸೆಂಟ್ ಇಳಿಸಿದೆ. ಇದರಿಂದ ವರ್ಷಕ್ಕೆ 1 ಲಕ್ಷ ಕೋಟಿ ಸ್ವೀಕೃತಿ ಪಡೆದ ಕಾರ್ಪೋರೆಟ್ ಕಂಪನಿಗಳ ದೇಶದ ಅಭಿವೃದ್ಧಿ ಮಾಡದೇ ವೈಯಕ್ತಿಕ ಅಭಿವೃದ್ಧಿಗೆ ಮುಂದಾಗಿವೆ. ದೇಶದ ಅಭಿವೃದ್ಧಿ ಎಂದರೆ ನಿರುದ್ಯೋಗದ ಅಭಿವೃದ್ಧಿ ಆದಂತಾಗಿದೆ. ಭಾರತದಲ್ಲಿ ಕೋಟ್ಯಾದಿಪತಿಗಳು ಶೇ.10ರಷ್ಟು ಇದ್ದಾರೆ. ಉಚಿತ ಯೋಜನೆ ಪಡೆಯುವವರು ಶೇ.90ರಷ್ಟು ಇದ್ದಾರೆ, ಪ್ರಜಾಪ್ರಭುತ್ವದಲ್ಲಿ ಪ್ರಭು ಆದವರು ಬಹುತ್ವದ ಪ್ರತಿನಿಧಿ ಆಗಬೇಕೇ ಹೊರತು ಪುಲೀನರ ಕೈಯಾಳು ಆಗಬಾರದು. ಒಂದು ವೇಳೆ ಹಾಗಾದರೆ ಅದು ಡೆಮೊಕ್ರಸಿ ಅಲ್ಲ ಅರಿಷ್ಟೊಕ್ರೆಸಿ ಆದಂತೆ.
ಕರ್ನಾಟಕ ಸರ್ಕಾರ ತನ್ನ ಬಜೆಟ್‍ನ ಶೇ. 32.4 ಅಷ್ಟು ಹಣವನ್ನು ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳಿಗೆ ವಿನಿಯೋಗ ಮಾಡುತ್ತಿದೆ ಇದರಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ ₹ 25,000 ರಿಂದ ₹ 55,000 ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊರೆತಿವೆ. ಇದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಆಗುವುದಲ್ಲದೆ ಇದೇ ವರ್ಗ ಭವಿಷ್ಯದಲ್ಲಿ ನೂರಾರು ಲಕ್ಷ ಕೋಟಿ ರೂಪಾಯಿಗಳ ಭೌತಿಕ ಅಭಿವೃದ್ಧಿ ಸೃಷ್ಟಿ ಮಾಡುತ್ತದೆ.
ಸರ್ಕಾರ ಮಾಡಬೇಕಿರುವುದು ಏನು?
ಗ್ಯಾರೆಂಟಿ ಘೋಷಿಸುವ ಮೂಲಕ ಸರ್ಕಾರ ಬಡವರ ಪಾಲಿನ ಬಂದು ಆಗಿದೆ ನಿಜ. ಆದರೆ ಮಾಡಿದ ಸಾಲವನ್ನು ತೀರಿಸಲು ತಕ್ಕ ಯೋಜನೆ ರೂಪಿಸಬೇಕು ಅನರ್ಹ ಫಲಾನುಭವಿಗಳನ್ನು ಹುಡುಕಬೇಕು, ತೆರಿಗೆ ಸೋರಿಕೆಯನ್ನು ತಡೆಯಬೇಕು, ಕೇಂದ್ರ ಸರ್ಕಾರದಿಂದ ತನಗೆ ನ್ಯಾಯಯುತವಾಗಿ ಬರಬೇಕಾದ ಪಾಲನ್ನು ಪಡೆಯಬೇಕು. ಸಮಾಜದ ಕೆಲವು ವರ್ಗಗಳಿಗೆ ನೀಡಿದ ಅನಾವಶ್ಯಕ ಐಷಾರಾಮಿ ಸೌಲಭ್ಯವನ್ನು ಹಿಂಪಡೆಯಬೇಕು, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವವರಿಗೆ ಉಗ್ರ ಶಿಕ್ಷೆ ರೂಪಿಸಬೇಕು.
ಕೊನೆಯ ನುಡಿ
ಬಂಡವಾಳ ವಾದವನ್ನು ಮಣಿಸಲು ಫ್ರಾನ್ಸ್‌ನಲ್ಲಿ ರಕ್ತ ಕ್ರಾಂತಿಯಾಗುತ್ತದೆ. ಫ್ರಾನ್ಸ್ ದೇಶದ ರಾಜ 16ನೇ ಲೂಯಿಯ ತಲೆ ಕಡಿದು ಸಾಯಿಸಲಾಗುತ್ತದೆ. ರಷ್ಯಾ ದೇಶದಲ್ಲಿ ಜಾರ್ ವಂಶದ ನಿಕೋಲಸ್ ಎಂಬ ಅರಸ ಆಳುತ್ತಿದ್ದ. ಅವನ ಜೊತೆ ರೆಸ್ಟುಟಿನ್ ಎಂಬ ದುಷ್ಟ ಸನ್ಯಾಸಿ ಇದ್ದ. ಅಲ್ಲಿನ ಜನ ಇವರ ವಿರುದ್ಧ ಪಕ್ಷ ಕಟ್ಟಿ ನಿಕೋಲಸ್‌ನನ್ನು ಕೊಂದು 1917ರಲ್ಲಿ ಯುಎಸ್‌ಎಸ್‌ಆರ್ ಸ್ಥಾಪಿಸಿದರು.
ಫ್ರಾನ್ಸ್, ರಷ್ಯಾ, ಅಮೆರಿಕದಲ್ಲಾದ ಈ ರಕ್ತ ಕ್ರಾಂತಿ ಭಾರತದಲ್ಲಿ ಆಗಿಲ್ಲ. ಏಕೆಂದರೆ ದೇಶದಲ್ಲಿ ಗ್ಯಾರಂಟಿ ಯೋಜನೆಗಳಂತಹ ಸಮಾಜವಾದಿ ಯೋಜನೆಗಳಿವೆ. ಅಧಿಕಾರಿಗಳು, ಶ್ರೀಮಂತರು, ನ್ಯಾಯಾಧೀಶರು, ಪತ್ರಕರ್ತರು ಯೋಜನೆಗಳನ್ನು ಟೀಕಿಸಬಹುದು ಆದರೆ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ನಮಗೆಲ್ಲರಿಗೂ ಬೇಕಿರುವುದು ಅಗಲವಾದ ರಸ್ತೆಗಳಲ್ಲ, ಭವ್ಯವಾದ ಬಂಗಲೆಗಳಲ್ಲ ಜಗಮಗಿಸುವ ವಿದ್ಯುತ್ ದೀಪಗಳಲ್ಲ, ಐಷಾರಾಮಿ ಕಾರುಗಳಲ್ಲ, ವೇಗವಾಗಿ ಚಲಿಸುವ ರೈಲುಗಳಲ್ಲ, ಆಕಾಶದ ಎತ್ತರಕ್ಕೆ ಹಾರಾಡುವ ವಿಮಾನಗಳಲ್ಲ, ನಮಗೆ ಬೇಕಿರುವುದು ‘ಒಂದೇ ಒಂದು ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ, ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ‘
ಲೇಖನ: ಬಿ.ಎಸ್.ಶಿವಣ್ಣ
ಅಧ್ಯಕ್ಷರು, ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.