ADVERTISEMENT

ವಿಶ್ಲೇಷಣೆ | ಪರೋಕ್ಷ ತೆರಿಗೆ: ‘ಹೊರೆ’ ತಗ್ಗೀತೆ?

ಬಡ ಮಹಿಳೆಯರ ಮೇಲಿನ ಆರ್ಥಿಕ ಒತ್ತಡ ತಗ್ಗಿಸುವ ತುರ್ತು ಅವಶ್ಯಕತೆ ಇದೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 20:45 IST
Last Updated 22 ಜುಲೈ 2024, 20:45 IST
   

ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾಗಿ ಈ ಜುಲೈಗೆ ಏಳು ವರ್ಷಗಳು ತುಂಬಿವೆ. ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ₹ 2.10 ಲಕ್ಷ ಕೋಟಿ ಆಗಿತ್ತು, ವಾರ್ಷಿಕ ಸರಾಸರಿ ಶೇಕಡ 10ರಷ್ಟು ಪ್ರಮಾಣದಲ್ಲಿ ಇದು ಏರಿಕೆಯಾಗುತ್ತಿದೆ.

ಜಿಎಸ್‌ಟಿ ಉತ್ತಮ ತೆರಿಗೆ ಪದ್ಧತಿ. ಇದು ಪರೋಕ್ಷ ತೆರಿಗೆಯಾಗಿರುವುದರಿಂದ, ಭಿಕ್ಷುಕರು ಕೂಡ ತಾವು ಖರೀದಿಸುವ ವಸ್ತುಗಳಿಗೆ ತೆರಿಗೆ ಕಟ್ಟುತ್ತಾರೆ. ಜಿಎಸ್‌ಟಿ ಕಾಯ್ದೆಯು ಲಿಂಗತಟಸ್ಥವಾಗಿದೆ. ಇದರ ಅನುಷ್ಠಾನದ ಪ್ರಾರಂಭಿಕ ದಿನಗಳಲ್ಲಿ, ಮಹಿಳೆಯರು ಮತ್ತು ಸಣ್ಣ ವ್ಯಾಪಾರಿಗಳನ್ನು ಒಳಗೊಂಡಂತೆ ಸರ್ವಜನರ ಪರೋಕ್ಷ ತೆರಿಗೆ ಹೊರೆಯನ್ನು ತಗ್ಗಿಸುವುದರ ಜೊತೆಗೆ ಒಟ್ಟಾರೆ ಬೆಳವಣಿಗೆಗೆ ಇದು ಕಾರಣವಾಗುತ್ತದೆ, ತೆರಿಗೆ ವ್ಯವಸ್ಥೆಯಲ್ಲಿ ಸಮತೋಲನವೊಂದು ಸೃಷ್ಟಿಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಪರೋಕ್ಷ ತೆರಿಗೆಗಳನ್ನು ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ವಿಧಿಸಲಾಗುತ್ತದೆ. ಅಂದರೆ, ಶ್ರೀಮಂತರು ಮತ್ತು ಬಡವರು ಸರಕು ಮತ್ತು ಸೇವೆಗಳ ಮೇಲೆ ಸಮಾನ ಪ್ರಮಾಣದಲ್ಲಿ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ, ಈ ವ್ಯವಸ್ಥೆಯಡಿ ಅಸಮಾನತೆಯೂ ಇದೆ. ಪರೋಕ್ಷ ತೆರಿಗೆಯು ಹೊರೆಯಾಗಿ ಕಾಣಿಸುವುದು ಕಡಿಮೆ ಆದಾಯದ ಗುಂಪಿನ ಜನರಿಗೇ. ಶ್ರೀಮಂತರು ದಿನನಿತ್ಯದ ಬಳಕೆಗಾಗಿ ಖರೀದಿಸುವ ಸರಕು ಹಾಗೂ ಪಡೆಯುವ ಸೇವೆಗಳಿಗೆ ತಮ್ಮ ಒಟ್ಟು ಆದಾಯದ ಒಂದು ಸಣ್ಣ ಪ್ರಮಾಣವನ್ನು ವ್ಯಯಿಸುತ್ತಾರೆ, ಅದಕ್ಕೆ ಅನ್ವಯಿಸುವ ತೆರಿಗೆಯನ್ನು ಪಾವತಿಸುತ್ತಾರೆ. ಅದೇ ಸೇವೆ ಹಾಗೂ ಸರಕುಗಳನ್ನು ಪಡೆಯಲು ಬಡವರು ತಮ್ಮ ಆದಾಯದ ಹೆಚ್ಚಿನ ಪ್ರಮಾಣವನ್ನು ವ್ಯಯಿಸಬೇಕಾಗುತ್ತದೆ. ಅದರೊಂದಿಗೆ ಪರೋಕ್ಷ ತೆರಿಗೆಯನ್ನೂ ಪಾವತಿಸುತ್ತಾರೆ. ಆಗ ಅವರ ಕೈಯಲ್ಲಿ ಉಳಿಯುವ ಹಣ ಕಡಿಮೆಯಾಗುತ್ತದೆ. ಪರೋಕ್ಷ ತೆರಿಗೆಯ ಪ್ರಮಾಣವನ್ನು ಕುಟುಂಬದ ಆದಾಯದ ಜೊತೆ ಹೋಲಿಸಿ ನೋಡಿದಾಗ, ಶ್ರೀಮಂತರು ಶೇಕಡಾವಾರು ಕಡಿಮೆ ಪ್ರಮಾಣದಲ್ಲಿ ಹಾಗೂ ಬಡವರು ಹೆಚ್ಚಿನ ಪ್ರಮಾಣದಲ್ಲಿ ಪಾವತಿಸುತ್ತಿರುತ್ತಾರೆ.

ADVERTISEMENT

ಪ್ರಸಕ್ತ ಸನ್ನಿವೇಶದಲ್ಲಿ ಸರ್ಕಾರವು ಸಂಗ್ರಹಿಸಲು ಸುಲಭವಾಗಿರುವ ಪರೋಕ್ಷ ತೆರಿಗೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದರಿಂದಾಗಿ ಬಡವರು ಮತ್ತು ಕೂಲಿಕಾರ್ಮಿಕರಿಗೆ ಹೆಚ್ಚು ಹೊರೆಯಾಗುತ್ತದೆ. ಈ ಕಾರಣಕ್ಕಾಗಿ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಒಇಸಿಡಿ) ಸದಸ್ಯ ರಾಷ್ಟ್ರಗಳಲ್ಲಿ ತೆರಿಗೆ ಮತ್ತು ಲಿಂಗಸಮಾನತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪರೋಕ್ಷ ತೆರಿಗೆಯ ಮೇಲೆ ಕೇಂದ್ರೀಕೃತವಾದ ತೆರಿಗೆ ನೀತಿಯು ಮನೆ ಖರ್ಚುಗಳನ್ನು ನಿರ್ವಹಿಸುವ ಬಡ
ಮಹಿಳೆಯರಿಗೆ ಹೊರೆಯಾಗುತ್ತಿದೆ ಎಂಬ ವಾದವನ್ನು ಮಹಿಳೆಯರು ಮಂಡಿಸುತ್ತಲೇ ಬಂದಿದ್ದಾರೆ.

ಇಂತಹ ಸನ್ನಿವೇಶದಲ್ಲಿ ನಮ್ಮ ದೇಶದಲ್ಲೂ ಬಡವರ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾಗಿರುವ ಮತ್ತು ಸದಾ ದುಡಿಯುತ್ತಾ ಕುಟುಂಬದ ಮಕ್ಕಳು ಮತ್ತು ವೃದ್ಧರ ಕಾಳಜಿ ವಹಿಸಿ ಸಂಸಾರವನ್ನು ತೂಗಿಸಿಕೊಂಡು ಹೋಗುವ ಮಹಿಳೆಯರ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸುವ ತುರ್ತು ಅವಶ್ಯಕತೆ ಇದೆ.

ಮನೆಯ ಎಲ್ಲ ಕೆಲಸಗಳಲ್ಲಿ ತೊಡಗುವ ಮಹಿಳೆಯರು ರಾಷ್ಟ್ರದ ಜಿಡಿಪಿಗೆ ಕೊಡುಗೆ ನೀಡುತ್ತಿರುತ್ತಾರೆ. ಅಲ್ಲದೆ, ಹೊರಗಡೆ ಹೋಗಿ ದುಡಿಯುವ ಪುರುಷರನ್ನು ಪೋಷಿಸುವ ಕೆಲಸವನ್ನು ಮಾಡುವುದು ಮಹಿಳೆಯೇ. ಇವೆಲ್ಲವೂ ಜಿಡಿಪಿಗೆ ಕೊಡುಗೆಯಾಗಿ ಪರಿವರ್ತನೆ ಆಗುತ್ತವೆ.‌ ಇನ್ನು ಕೆಲವರು ಸಂಸಾರ ನಿಭಾಯಿಸುವುದರ ಜೊತೆಗೆ ವಿವಿಧೆಡೆಗಳಲ್ಲಿ ದುಡಿದು ದೇಶದ ಜಿಡಿಪಿಗೆ ಪರೋಕ್ಷವಾಗಿ ಮತ್ತು ನೇರವಾಗಿ ಕೊಡುಗೆಯನ್ನು ನೀಡುತ್ತಿದ್ದಾರೆ. ಆದರೂ ಪರೋಕ್ಷ ತೆರಿಗೆಯಡಿ ಬಡ ಮಹಿಳೆಯರಿಗೆ ಸಹಾಯವಾಗುವ ಯಾವುದೇ ವಿಶೇಷ ಸವಲತ್ತುಗಳು ಕಂಡುಬಂದಿಲ್ಲ.

ನಮ್ಮ ಸಂವಿಧಾನದ ಪೀಠಿಕೆಯು ಘನತೆಯ ಬದುಕನ್ನು ಖಾತರಿಪಡಿಸುತ್ತದೆ. ಹಾಗೆಯೇ, ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣದಂತಹ ಸಾಮಾಜಿಕ ಭದ್ರತೆಯನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ, ‘ಯಾರನ್ನೂ ಹಿಂದೆ ಬಿಡಬೇಡಿ’ ಎಂಬ ಮೂಲ ತತ್ವದ ಮೇಲೆ, ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿ ಮತ್ತು 17 ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ಡಿಜಿ) ಕೇಂದ್ರೀಕೃತವಾಗಿವೆ. ಗುರಿ ಸಂಖ್ಯೆ 1 ಎಲ್ಲಾ ಆಯಾಮಗಳಲ್ಲಿ ಬಡತನವನ್ನು ನಿರ್ಮೂಲನೆ ಮಾಡುವ ಉದ್ದೇಶ ಹೊಂದಿದ್ದು, ಇದಕ್ಕೆ ಭಾರತವೂ ಸಹಮತ ನೀಡಿದೆ. ಆದಾಗ್ಯೂ, ಬಡ ಮಹಿಳೆಯರ ಬಗ್ಗೆ, ವಿಶೇಷವಾಗಿ ಹಳ್ಳಿಗಳಲ್ಲಿ ಕೆಲಸವಿಲ್ಲದೆ ನಗರಗಳಿಗೆ ಬಂದು ನೆಲಸಿರುವ ಕಡಿಮೆ ಆದಾಯದ ಮಹಿಳೆಯರ ಕಡೆಗೆ ಗಮನಹರಿಸಬೇಕಾದ ಅಗತ್ಯ ಇದೆ.

ಈ ವರ್ಷದ ಮಹಿಳಾ ದಿನಾಚರಣೆಗೆ ವಿಶ್ವಸಂಸ್ಥೆ ನೀಡಿದ ಘೋಷವಾಕ್ಯ ‘ಮಹಿಳೆಯರ ಸಲುವಾಗಿ ಹೂಡಿಕೆ ಮಾಡಿ: ಪ್ರಗತಿಗೆ ವೇಗ ನೀಡಿ’ ಎಂಬುದಾಗಿದೆ. ಈ ಕಾರಣದಿಂದಲೂ, ಕಡಿಮೆ ಆದಾಯ ಇರುವ ಮಹಿಳೆಯರಿಗೆ ಆಗುವ ಬೆಲೆ ಏರಿಕೆಯ ಹೊರೆ ಮತ್ತು ಅದರೊಂದಿಗೆ ಸೇರಿಕೊಂಡು ಬರುವ ಪರೋಕ್ಷ ತೆರಿಗೆಯ ಭಾರವನ್ನು ಇಳಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಡವರ ಸಹಾಯಕ್ಕೆ ಬಂದದ್ದು ಗ್ಯಾರಂಟಿ ಯೋಜನೆಗಳು. ಗೃಹಲಕ್ಷ್ಮಿ ಯೋಜನೆಯಡಿ ₹ 2,000 ನೀಡುತ್ತಿರುವುದು ಮನೆಯೊಡತಿಗೆ ಅವಳ ಒಟ್ಟಾರೆ ಆರ್ಥಿಕ ಹೊರೆಯನ್ನು ತಗ್ಗಿಸುವ ಉಪಕ್ರಮ ವಾಗಿದೆ. ರಾಜ್ಯ ಸರ್ಕಾರವು ಶಕ್ತಿ, ಗೃಹಜ್ಯೋತಿ, ಅನ್ಯಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದು, ಬದುಕನ್ನು ನಿಭಾಯಿಸಲು ಜನರಿಗೆ ಸಹಕರಿಸುತ್ತಿದೆ.

ಇಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್, ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರಬಹುದೇನೊ. ಈ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಅಭಿಪ್ರಾಯಪಟ್ಟಂತೆ, ಗೃಹಿಣಿಯರಿಗೆ ಆರ್ಥಿಕ ಸ್ಥಿರತೆ ಒದಗಿಸಬೇಕಾಗಿದೆ. ಈ ದಿಸೆಯಲ್ಲಿ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೆಲವು ಪಾಶ್ಚಾತ್ಯ ದೇಶಗಳಲ್ಲಿ ನೀಡಿದಂತೆ ಸ್ಮಾರ್ಟ್‌ಕಾರ್ಡ್‌ಗಳನ್ನು ನೀಡಿ, ಉತ್ತಮ ಗುಣಮಟ್ಟದ ಸಿರಿಧಾನ್ಯ, ಬೇಳೆಕಾಳು, ಸಕ್ಕರೆ, ಅಡುಗೆಎಣ್ಣೆ, ಎಲ್‌ಪಿಜಿ, ಶುದ್ಧಕಾರಕಗಳನ್ನು (ಕ್ಲೀನಿಂಗ್ ಏಜೆಂಟ್‌) ಪರೋಕ್ಷ ತೆರಿಗೆ ಇಲ್ಲದೆ ಅಥವಾ ರಿಯಾಯಿತಿ ದರದಲ್ಲಿ ಒದಗಿಸುವ ಕುರಿತು ಚಿಂತಿಸಬೇಕು. ಇವುಗಳನ್ನು, ಯಾವುದೇ ರೀತಿಯ ಶೋಷಣೆಗೆ ಅವಕಾಶ ಮಾಡಿಕೊಡದೆ, ಮಾನ್ಯತೆ ಪಡೆದ ಪಡಿತರ ಅಂಗಡಿಗಳಲ್ಲಿ ಅಥವಾ ಮಾಲ್‌ಗಳಲ್ಲಿ ಒದಗಿಸುವ ಮೂಲಕ ಮನೆಯ ಖರ್ಚುಗಳನ್ನು ನಿರ್ವಹಿಸಲು ಗೃಹಿಣಿಯರಿಗೆ ಸಹಕಾರ ನೀಡಬಹುದು. ಅವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ರಾಜ್ಯವು ಆಡಳಿತಾತ್ಮಕ ಕಾರ್ಯವಿಧಾನದಲ್ಲಿ ವಿಶೇಷ ವಿಧಾನಗಳನ್ನು ರೂಪಿಸಬೇಕು.

ಇಂತಹ ಯೋಜನೆಯು ದರ್ಬಳಕೆಯಾಗಿ ತೆರಿಗೆ ಸೋರಿಕೆಯಾಗದಂತೆ ಸೂಕ್ತ ತಾಂತ್ರಿಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಇನ್ನೂ ಪಡಿತರ ಚೀಟಿ ಸಿಗದವರಿಗೆ ಅದನ್ನು ಒದಗಿಸುವ ಜೊತೆಗೆ ಕೋವಿಡ್‌ ವಿಧವೆಯರು, ಕೋವಿಡ್‌ ತಬ್ಬಲಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರವನ್ನು ಒಳಗೊಂಡ ಯೋಜನೆಯನ್ನು ರೂಪಿಸಬೇಕು.

ಮಹಿಳೆಯರ ಗೃಹಬಳಕೆ ಖರ್ಚಿಗಾಗಿ ನೀಡಲಾಗುವ ₹ 2,000 ಮೊತ್ತವನ್ನು ಎಲ್ಲ ಅರ್ಹ ಮಹಿಳೆಯರೂ ಅಡಚಣೆಯಿಲ್ಲದೆ ನಿರಂತರವಾಗಿ ಪಡೆಯುವಂತೆ ಆಗಬೇಕು. ವಿಧವಾ, ವೃದ್ಧಾಪ್ಯ ಹಾಗೂ ಇತರ ಪಿಂಚಣಿಗಳನ್ನು ಅಡಚಣೆ ಯಿಲ್ಲದೆ ಪಡೆಯುವಂತೆ ಆಗಬೇಕು. ಜಿಎಸ್‌ಟಿ ಜಾರಿಗೆ ತಂದ ನಂತರದಲ್ಲಿ ಸಾಮಾನ್ಯ ಗ್ರಾಹಕರಿಗೆ ಅದರಲ್ಲೂ ಬಡವರಿಗೆ ಇದರಿಂದ ಅನುಕೂಲವಾಗಿದೆಯೇ ಎಂಬ ಬಗ್ಗೆ ಮೌಲ್ಯಮಾಪನ ನಡೆಯಬೇಕು. ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಮಹಿಳಾ ಗೃಹ ಕಾರ್ಮಿಕರು ಅಥವಾ ಮನೆಕೆಲಸ ಮಾಡುವ ಮಹಿಳೆಯರನ್ನು ಒಳಗೊಂಡಂತೆ ಅಸಂಘಟಿತ ವಲಯವನ್ನು ಕಾರ್ಮಿಕ ಕಾಯ್ದೆಯಡಿ ತರಬೇಕು. ಈ ಮೂಲಕ ಅವರಿಗೆ ಭವಿಷ್ಯನಿಧಿ ಮತ್ತು ಇಎಸ್‌ಐ ಸೌಲಭ್ಯಗಳೊಂದಿಗೆ ಕನಿಷ್ಠ ವೇತನದ ಬದಲಾಗಿ ಜೀವನ ಮಾಡಲು ಯೋಗ್ಯವಾದ ಪ್ರಮಾಣದಲ್ಲಿ ವೇತನ ಸಿಗುವಂತೆ ಸದರಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು.

ದೇಶದ ಒಟ್ಟಾರೆ ತೆರಿಗೆ ಕೊರತೆ ನೀಗಿಸಿಕೊಳ್ಳಲು ಪ್ರತಿ ವಲಯದಿಂದಲೂ ಸರಿಯಾಗಿ ಆದಾಯ ತೆರಿಗೆ ಪಾವತಿ ಆಗುತ್ತಿದೆಯೇ ಎಂಬುದನ್ನು ಖಾತರಿಗೊಳಿಸಿ ತೆರಿಗೆ ಕಳ್ಳತನದ ಹಗರಣಗಳನ್ನು ಭೇದಿಸಿ ಕ್ರಮ ಕೈಗೊಳ್ಳಬೇಕು. ಈಗಿರುವ ಪರೋಕ್ಷ ತೆರಿಗೆಯು ಕನಿಷ್ಠಪಕ್ಷ ಬಡ ಮಹಿಳೆಯರಿಗೆ ಸಂಬಂಧಿಸಿದಂತೆ ಪರಿವರ್ತನೆ ಕಾಣಬೇಕು. ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಪೂರಕವಾದ ಕ್ರಮಗಳು ಇರಬಹುದೆಂದು ಆಶಿಸೋಣವೇ?

ಲೇಖಕಿ: ವಾಣಿಜ್ಯ ತೆರಿಗೆ ನಿವೃತ್ತ ಹೆಚ್ಚುವರಿ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.