ADVERTISEMENT

ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ

ರಾಷ್ಟ್ರೀಯ ಏಕತೆ ಮತ್ತು ಬಹುಭಾಷಿಕ ಗುರುತುಗಳ ಸಮತೋಲನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 22:48 IST
Last Updated 2 ಜುಲೈ 2025, 22:48 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

1948–49ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗವು ಬೆಲ್ಜಿಯಂ, ಸ್ವಿಟ್ಜರ್ಲೆಂಡ್‌ನಂತಹ ಬಹುಭಾಷಾ ರಾಷ್ಟ್ರಗಳಿಂದ ಪ್ರೇರಣೆ ಪಡೆದು, ಭಾರತೀಯರು ಮೂರು ಭಾಷೆಗಳನ್ನು ಕಲಿಯುವ ಅಗತ್ಯವನ್ನು ಪ್ರತಿಪಾದಿಸಿತು. ಆಗ ಹಿಂದಿಯು ಈಗಿನಷ್ಟು ವ್ಯಾಪಕವಾಗಿ ಪಸರಿಸಿರಲಿಲ್ಲ. ಆಗಿನ ಶಿಕ್ಷಣ ತಜ್ಞರು ಹಿಂದಿಯನ್ನು ಕನ್ನಡ, ತೆಲುಗು, ತಮಿಳು, ಮರಾಠಿ, ಬಾಂಗ್ಲಾ, ಪಂಜಾಬಿ, ಮಲಯಾಳ, ಅಸ್ಸಾಮಿ, ಗುಜರಾತಿ ಮೊದಲಾದ ಭಾಷೆಗಳಿಗಿಂತ ಶ್ರೇಷ್ಠ ಎಂದೂ ಭಾವಿಸಿರಲಿಲ್ಲ. ಆದರೆ, ಆಯೋಗಕ್ಕೆ ಮುಂದೊಂದು ದಿನ ಇಂಗ್ಲಿಷಿನ ಬದಲು ಹಿಂದಿಯನ್ನು ತರುವ ಆಲೋಚನೆಯಂತೂ ಇತ್ತು.

ಜವಾಹರಲಾಲ್‌ ನೆಹರೂ ಅವರಿಗೆ ದಕ್ಷಿಣ ಭಾರತೀಯರ ಉತ್ಕಟ ಭಾಷಾಭಿಮಾನ ಹಾಗೂ ಅವರ ಭಾಷೆಗಳ ಸಾಹಿತ್ಯಿಕ ಶ್ರೀಮಂತಿಕೆಯ ಬಗ್ಗೆ ತಿಳಿವಳಿಕೆ ಇದ್ದುದರಿಂದ, ಹಿಂದಿಯನ್ನು ಇಂಗ್ಲಿಷಿನ ಜಾಗದಲ್ಲಿ ಪ್ರತಿಷ್ಠಾಪಿಸುವುದನ್ನು ಅವರು ಮುಂದೆ ತಳ್ಳುತ್ತಲೇ ಇದ್ದರು. ಅವರ ನಂತರದ ಪ್ರಧಾನಿಗಳೂ ಇದೇ ಮಾದರಿಯನ್ನು ಅನುಸರಿಸಿದರು. ಈಗ ಪರಿಸ್ಥಿತಿ ಬದಲಾಗಿದೆ. ‘ಇಂಗ್ಲಿಷ್‌ ಮಾತನಾಡುವವರು ಭವಿಷ್ಯದಲ್ಲಿ ನಾಚಿಕೆಪಡುವಂತೆ ಆಗುತ್ತದೆ’ ಎಂದೂ, ಹಿಂದಿಯು ಭಾರತದ ಎಲ್ಲ ಭಾಷೆಗಳ ಸ್ನೇಹಿತನೆಂದೂ ಸ್ವತಃ ಗೃಹ ಸಚಿವರೇ ಘೋಷಿಸಿದ್ದಾರೆ. ಇದು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲು ಅವರು ಇಟ್ಟಿರುವ ಹೆಜ್ಜೆ.

ADVERTISEMENT

ಅಮಿತ್‌ ಶಾ ಅವರು ಭಾಷಾತಜ್ಞರಲ್ಲ. ಆದರೆ, ಅವರ ಕೈಯಲ್ಲಿ ಅಮಿತವಾದ ‌ಅಧಿಕಾರವಿದೆ. ಅವರಿಗೆ ದೊಡ್ಡ ಸಂಖ್ಯೆಯ ಹಿಂಬಾಲಕರೂ ಇದ್ದಾರೆ. ಜೊತೆಗೆ ಕಾನೂನಿನ ಬಲವೂ ಇದೆ. ಹಿಂದಿಯು ಗೃಹ ಇಲಾಖೆ ಅಡಿಯಲ್ಲಿ ಬರುವುದರಿಂದಾಗಿ (ಉಳಿದ ಭಾಷೆಗಳು ಮಾನವ ಸಂಪನ್ಮೂಲ ಇಲಾಖೆಯಡಿ ಬರುತ್ತವೆ), ಅವರಿಗಿದನ್ನು ಮಾಡುವುದೂ ಸುಲಭ.

ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಹಿಂದಿಯ ಅಭಿವೃದ್ಧಿಗಾಗಿ ರಚಿತವಾದ 30 ಸದಸ್ಯರನ್ನು ಒಳಗೊಂಡ ಉನ್ನತ ಸಮಿತಿಯ ಶಿಫಾರಸುಗಳು ಸಂಸತ್ತಿಗೂ ಹೋಗದೆ ನೇರವಾಗಿ ರಾಷ್ಟ್ರಪತಿಗೆ ಹೋಗುತ್ತವೆ. ಅವರ ಅಂಕಿತ ಬಿದ್ದ ತಕ್ಷಣ ಕಾನೂನಾಗಿ ಪರಿವರ್ತನೆಗೊಳ್ಳುತ್ತದೆ. ಆಮೇಲೆ ಅದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವು
ದಿಲ್ಲ. ಭಾರತದ ಇತರ ಭಾಷೆಗಳಿಗೆ ಈ ಅವಕಾಶವಿಲ್ಲ. ಕರ್ನಾಟಕ ಸರ್ಕಾರವು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯಗೊಳಿಸಲು ಹೊರಟಾಗ ಸುಪ್ರೀಂ ಕೋರ್ಟ್ ಅದನ್ನು ತಿರಸ್ಕರಿಸಿದ್ದು (2015ರಲ್ಲಿ) ಇದಕ್ಕೆ ಉದಾಹರಣೆ.

1964–1966ರ ಕೊಥಾರಿ ಆಯೋಗವು ಶ್ರೇಣೀಕೃತ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿತು. ಕೆಲವು ಚರ್ಚೆಗಳ ನಂತರ, 1968ರಲ್ಲಿ ಸಂಸತ್ತು ಅದನ್ನು ಅಂಗೀಕರಿಸಿತು. ಗಮನಿಸಬೇಕಾದ ಅಂಶವೆಂದರೆ, ಈ ಸೂತ್ರವನ್ನು ಭಾರತದ ಬೇರೆ ಬೇರೆ ರಾಜ್ಯಗಳು ಒಂದೇ ರೀತಿಯಲ್ಲಿ ಅನುಷ್ಠಾನಕ್ಕೆ ತರಲೇ ಇಲ್ಲ. ಉದಾಹರಣೆಗೆ, ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಅದು ಇರುವ ರೀತಿಯಲ್ಲಿಯೇ ಅಂಗೀಕರಿಸಿತು. ತಮಿಳುನಾಡು ಅದನ್ನು ಪೂರ್ಣವಾಗಿ ತಿರಸ್ಕರಿಸಿ, ತಮಿಳು ಮತ್ತು ಇಂಗ್ಲಿಷನ್ನು ಮಾತ್ರ ಕಲಿಸುವ ದ್ವಿಭಾಷಾ ನೀತಿಗೆ ಅಂಟಿಕೊಂಡಿತು.

ಉತ್ತರ ಭಾರತದ ರಾಜ್ಯಗಳು ಅದನ್ನು ಪಾರ್ಶ್ವಿಕವಾಗಿ ಅಂಗೀಕರಿಸಿದವು. ಕೊಥಾರಿ ಆಯೋಗದಲ್ಲಿ ಹೇಳಿದ, ‘ಹಿಂದಿ ಮಾತನಾಡುವ ರಾಜ್ಯಗಳು ಹಿಂದಿ, ಇಂಗ್ಲಿಷ್ ಮತ್ತು ಆಧುನಿಕ ಭಾರತೀಯ ಭಾಷೆಯನ್ನು (ದಕ್ಷಿಣ ಭಾರತದ ಭಾಷೆಗಳಲ್ಲಿ ಒಂದು) ಕಲಿಯಬೇಕು ಎಂಬುದನ್ನು ಹಿಂದಿ ರಾಜ್ಯಗಳು ಒಪ್ಪಲಿಲ್ಲ. ಅವು ದಕ್ಷಿಣ ಭಾರತದ ಒಂದು ಭಾಷೆಯ ಬದಲು ಸಂಸ್ಕೃತವನ್ನು ಆಯ್ದುಕೊಂಡವು. ಇದರಿಂದಾಗಿ ಉತ್ತರ ಭಾರತೀಯರಿಗೆ ದಕ್ಷಿಣ ಭಾರತದ ಭಾಷೆಗಳ ಬಗ್ಗೆ ಏನೂ ಗೊತ್ತಿಲ್ಲದ ವಾತಾವರಣ ನಿರ್ಮಾಣವಾಯಿತು. ದೆಹಲಿ ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕರೊಬ್ಬರು ನನ್ನಲ್ಲಿ ‘ಕನ್ನಡ ಎಲ್ಲಿಯ ಭಾಷೆ’ ಎಂದು ಕೇಳಿದ್ದುಂಟು. ಹತಾಶೆಗೊಂಡ ನಾನು ‘ಕನ್ನಡ ಕೆನಡಾ ದೇಶದ ಭಾಷೆ’ ಎಂದು ಹೇಳಿ ಅವರನ್ನು ಸಾಗಹಾಕಿದ್ದೆ!

1986ರ ‘ರಾಷ್ಟ್ರೀಯ ಶಿಕ್ಷಣ ನೀತಿ’ಯು 1968ರ ಸೂತ್ರವನ್ನು ಪುನರುಚ್ಚರಿಸಿದೆ. 2020ರಲ್ಲಿ ಬಿಡುಗಡೆಯಾದ ‘ಹೊಸ ಶಿಕ್ಷಣ ನೀತಿ’ಯು ತ್ರಿಭಾಷಾ ಸೂತ್ರದ ಸಾಧಕ, ಬಾಧಕಗಳ ಬಗ್ಗೆ ಯಾವುದೇ ಚರ್ಚೆ ನಡೆಸದೆ, ಅನುಮೋದನೆ ನೀಡಿದೆ. ಒಂದೇ ಬದಲಾವಣೆ ಎಂದರೆ, ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸಲಾಗಿಲ್ಲ. ಇದರ ಕರಡು ನೀತಿಯನ್ನು ಚರ್ಚೆಗಾಗಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನಾವು ಕೆಲವರು ‘1968ರಿಂದಲೂ ತ್ರಿಭಾಷಾ ಸೂತ್ರವನ್ನು ನಿಷ್ಠೆಯಿಂದ ಅನುಸರಿಸಿಕೊಂಡು ಬಂದಿರುವ ಕರ್ನಾಟಕಕ್ಕೆ ಹೊಸ ಶಿಕ್ಷಣ ನೀತಿಯಿಂದ ಏನು ಲಾಭ ಆಗಿದೆ ಅಥವಾ ನಷ್ಟವಾಗಿದೆ? ಅದೇ ಮಾನದಂಡವನ್ನು ಆಧರಿಸಿ, ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿದ್ದರಿಂದ ತಮಿಳುನಾಡಿಗೆ ಏನು ನಷ್ಟವಾಗಿದೆ ಅಥವಾ ಲಾಭವಾಗಿದೆ? ಉತ್ತರ ಭಾರತೀಯರು ದಕ್ಷಿಣ ಭಾರತದ ಭಾಷೆಗಳನ್ನು ಕಲಿಯದೇ ಇದ್ದುದರಿಂದ ರಾಷ್ಟ್ರೀಯ ಏಕತೆಗೆ ಭಂಗವಾಗಿಲ್ಲವೇ?’ ಎಂಬಂಥ ಪ್ರಶ್ನೆಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆವು.

ಆದರೆ, ಅಂಥ ಯಾವುದೇ ಚರ್ಚೆಗೆ ಸರ್ಕಾರ ಅವಕಾಶ ನೀಡಲಿಲ್ಲ. ಈ ಕುರಿತು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ವು, 2024ರ ಡಿಸೆಂಬರ್‌ 17ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಅವರ ಕಚೇರಿಯಲ್ಲಿಯೇ ಭೇಟಿಯಾಗಿ ಕೇಳಿದಾಗ, ಅವರೂ ಸರಿಯಾದ ಉತ್ತರ ನೀಡಲಿಲ್ಲ. ಮತ್ತೆ ಮತ್ತೆ ಕೇಳಿದಾಗ ಕೋಪಗೊಂಡ ಅವರು, ‘ಭಾಷಾ ವಿಷಯದಲ್ಲಿ ನೀವು ರಾಜಕೀಯ ಮಾಡಬೇಡಿ’ ಎಂಬ ಉಪದೇಶವನ್ನೂ ಮಾಡಿದರು.

ಈಗ ಹಿಂದಿ ಭಾಷೆಯು ನಮ್ಮ ದೈನಂದಿನ ಬದುಕಿನ ವ್ಯವಹಾರಗಳೊಳಗೆ ಪ್ರವೇಶಿಸಿ, ಕನ್ನಡವೂ ಸೇರಿದಂತೆ, ಹಿಂದಿಯೇತರ ಜನರ ತಾಯ್ನುಡಿಗಳನ್ನು ಅಂಚಿಗೆ ತಳ್ಳಿದೆ. 1960ರ ದಶಕದ ಕೊನೆಯಲ್ಲಿ ಹಿಂದಿಯನ್ನು 50 ಅಂಕಗಳಿಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದರೂ, ಅದರಲ್ಲಿ ತೇರ್ಗಡೆಯಾಗಲೇಬೇಕೆಂಬ ನಿಯಮ ಇರಲಿಲ್ಲ. ಹಿಂದಿಯನ್ನು ನೂರು ಅಂಕಗಳಿಗೇರಿಸಿದ ನಂತರ, ತೇರ್ಗಡೆಯಾಗಲು 35 ಅಂಕಗಳನ್ನು ನಿಗದಿಪಡಿಸಲಾಯಿತು. ಆ ಹೊತ್ತಲ್ಲಿ ಅದನ್ನು 10ನೇ ತರಗತಿಯ ಒಟ್ಟು ಅಂಕಗಳ ಸರಾಸರಿಯಿಂದಹೊರಗಿಡಲಾಗಿತ್ತು. ಆದರೆ, ಈಗ ಹಿಂದಿಯ ಅಂಕಗಳನ್ನು ಸರಾಸರಿಗೂ ಸೇರಿಸಿರುವುದರಿಂದ, ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಕಲಿಕಾ ವಿಷಯದಲ್ಲಿ ಬಹಳ ಹಿಂದೆ ಉಳಿಯುವಂತಾಗಿದೆ.

ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಲ್ಲಿ ಅವರಿಗೆ ಅವಕಾಶ ಕಡಿಮೆಯಾಗಿದೆ. ಕರ್ನಾಟಕದ2024–25ರ 10ನೇ ತರಗತಿಯ ಪರೀಕ್ಷೆಗಳಲ್ಲಿ ಸುಮಾರು 1 ಲಕ್ಷದ 42 ಸಾವಿರ ಮಕ್ಕಳು ಹಿಂದಿಯಲ್ಲಿ ತೇರ್ಗಡೆಯಾಗಲಿಲ್ಲ. ರಾಷ್ಟಮಟ್ಟದ ಪರೀಕ್ಷೆಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ನಡೆಯು ವುದರಿಂದಾಗಿ, ಅಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಹಿಂದಿ ಭಾಷಿಕರು ಉದ್ಯೋಗ ಪಡೆದುಕೊಂಡು, ಉಳಿದವರು ನಿಂತಲ್ಲಿಯೇ ತಬ್ಬಲಿಗಳಾಗುತ್ತಿದ್ದಾರೆ.

ಈ ನಡುವೆ ಹಿಂದಿಯೂ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 50ಕ್ಕೂ ಹೆಚ್ಚು ಪ್ರಾದೇಶಿಕ ಮತ್ತು ಸಾಮಾಜಿಕ ಉಪ ಭಾಷೆಗಳ ನಡುವೆ ಹಂಚಿಹೋಗಿದ್ದ ಖಡಿಬೋಲಿಯೆಂಬ ಹೆಸರಿನ ಭಾಷೆಯು, ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಒಂದು ಸಾಮಾನ್ಯ ಸಂಪರ್ಕ ಭಾಷೆಯಾಗಿ ‘ಹಿಂದಿ’ ಎಂಬ ಹೆಸರಿನಲ್ಲಿ ಬೆಳೆಯಿತು. ಆ ಕಾಲದ ಉತ್ತರ ಭಾರತದ ಪತ್ರಿಕೋದ್ಯಮವು ಅಲ್ಲಿನ ಸಣ್ಣ ಭಾಷೆಗಳನ್ನು ಹಿಂದಿಕ್ಕಿ ಸಾಮಾನ್ಯ ಹಿಂದಿಯನ್ನು ಎಲ್ಲರಿಗೂ ಒಪ್ಪಿಗೆಯಾಗುವಂತೆ ಬೆಳೆಸಿತು. ಇದರಿಂದಾಗಿ ಹಿಂದಿ ಪೂರ್ವ ಯುಗದ ಬೃಜ್ ಭಾಷಾ, ಅವಧಿ, ರಾಜಸ್ಥಾನಿ, ಬಘೇಲಿ, ಭೋಜಪುರಿ, ಬುಂದೇಲಿ, ಮೈಥಿಲಿ, ಚತ್ತೀಸ್ ಗರಿ, ಗರ್ವಾಲಿ, ಹರಿಯಾನ್ವಿ, ಕನೌಜಿ, ಕುಮಾಯುನಿ, ಮಗಧಿ, ಮಾರ್ವಾರಿ ಮೊದಲಾದ ಸುಮಾರು 122 ಸುಂದರ ಭಾಷೆಗಳು ದುರ್ಬಲವಾದುವು. ಸ್ವಾತಂತ್ರ್ಯ ಚಳವಳಿಗೆ ಬಹುದೊಡ್ಡ ಕೊಡುಗೆ ನೀಡಿದ್ದ ಉರ್ದು ಕೂಡ ಹಿಂದೆ ಬಿತ್ತು.

ಇವತ್ತು ಸುಮಾರು 70 ಕೋಟಿ ಜನರು ಮಾತನಾಡುವ ಹಿಂದಿಯು ಸಹಜವಾಗಿ ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಲು ಪ್ರಯತ್ನಿಸುತ್ತಿದೆ. ಆದರೆ ಅದನ್ನು ದಕ್ಷಿಣ ಭಾರತ, ಉತ್ತರ ಪೂರ್ವದ ರಾಜ್ಯಗಳು ಮತ್ತು ಭೋಜಪುರಿ, ಮೈಥಿಲಿ, ರಾಜಸ್ಥಾನಿ, ಹರಿಯಾನ್ವಿ ಮತ್ತಿತರ ಭಾಷೆಗಳೂ ತೀವ್ರವಾಗಿ ಪ್ರತಿಭಟಿಸುತ್ತಿವೆ. ಹೀಗಾಗಿ ಹಿಂದಿ ರಾಷ್ಟ್ರಭಾಷೆ ಆಗುವುದು ಸುಲಭವಲ್ಲ.

ಹಿಂದಿ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಕೆಲವರು ವಾದಿಸುತ್ತಾರೆ. ಇದನ್ನು ಸಮರ್ಥಿಸಲು ಯಾವುದೇ ಅಂಕಿ ಅಂಶಗಳ ಆಧಾರವಿಲ್ಲ. ದೆಹಲಿ, ಗುರುಗ್ರಾಮ, ನೊಯಿಡಾ ಮತ್ತು ಫರಿದಾಬಾದ್‌ನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಸಂಖ್ಯೆ ಒಂದೂವರೆ ಸಾವಿರ ಮೀರುವುದಿಲ್ಲ. ಆದರೆ, ಅದೇ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ತಮಿಳರ ಸಂಖ್ಯೆ ಎರಡು ಲಕ್ಷಕ್ಕೂ ಹೆಚ್ಚು. ತಮಿಳರು ಹಿಂದಿ ಕಲಿಯಲಿಲ್ಲ. ಅದರೆ, ಹಿಂದಿ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕನ್ನಡಿಗರು ಹಿಂದಿ ಕಲಿಯುತ್ತಾರೆ, ಅವರಿಗೆ ಹಿಂದಿ ನೆಲದಲ್ಲಿ ಕೆಲಸವೇ ಸಿಗುತ್ತಿಲ್ಲ. 2011ರ ಜನಗಣತಿ ಪ್ರಕಾರ, ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸಂಖ್ಯೆ 50 ಸಾವಿರವನ್ನೂ ಮೀರುವುದಿಲ್ಲ. ಈ 50 ಸಾವಿರ ಜನರಿಗಾಗಿ ಲಕ್ಷಾಂತರ ಮಕ್ಕಳು ಹಿಂದಿ ಕಲಿಯುತ್ತಿದ್ದಾರೆ. 

ಕನ್ನಡ ಭಾಷಾಭಿವೃದ್ಧಿ ಹಾಗೂ ಕನ್ನಡಿಗರಿಗೆ ಉದ್ಯೋಗದ ಅವಕಾಶ ಹೆಚ್ಚಿಸಲು ಕರ್ನಾಟಕಕ್ಕೆ ದ್ವಿಭಾಷಾ ಸೂತ್ರದ ಅಗತ್ಯವಿದೆ. ಹೊರಗಿನ ಪ್ರಪಂಚದೊಂದಿಗೆ ವ್ಯವಹರಿಸಲು ಮತ್ತು ಭೌತಿಕ ಅಭಿವೃದ್ಧಿಯನ್ನು ಸಾಧಿಸಲು ಇಂಗ್ಲಿಷ್‌ ಬೇಕು. ಅದು ಭಾರತದೊಳಗೇ ಇರುವ ಇತರ ರಾಜ್ಯಗಳೊಡನೆ ವ್ಯವಹರಿಸಲೂ ಉಪಯುಕ್ತ. ಮಾನವನ ಸಾಂಸ್ಕೃತಿಕ ಅಭಿವೃದ್ಧಿಗೆ ತಾಯ್ನುಡಿಯಲ್ಲಿ ಕಲಿಕೆ ಬೇಕೇ ಬೇಕು. ತಾಯ್ನುಡಿಗಳ ಸಂಖ್ಯೆಯು ಅಪಾರವಾಗಿರುವುದರಿಂದ, ಸದ್ಯಕ್ಕೆ ರಾಜ್ಯ ಭಾಷೆಯಲ್ಲಿ ಕಲಿಕೆಯ ಅವಕಾಶ ಸಿಕ್ಕರೂ ಸಾಕು. ಆದರೆ, ಈ ಭಾಷೆಗಳನ್ನು ಕಲಿಸುವ ವಿಧಾನದಲ್ಲಿ ನಾವು ಏನಿಲ್ಲವೆಂದರೂ ಅರ್ಧ ಶತಮಾನದಷ್ಟು ಹಿಂದೆ ಬಿದ್ದಿರುವುದರಿಂದ ಭಾಷಾ ಕಲಿಕೆಯೇ ಅನುತ್ಪಾದಕವಾಗಿದೆ. 

ಈ ನಡುವೆ ದೊಡ್ಡ ಭಾಷೆಗಳ ಜಗಳಗಳ ನಡುವೆ ಸಣ್ಣ ಭಾಷೆಗಳು ನಶಿಸಿಹೋಗದ ಎಚ್ಚರವನ್ನೂ ನಾವು ಕಾಪಾಡಿಕೊಳ್ಳಬೇಕು. ಕಳೆದ ಐವತ್ತು ವರ್ಷಗಳಲ್ಲಿ ನಮ್ಮ ದೇಶದಿಂದ 220ಕ್ಕೂ ಹೆಚ್ಚು ಭಾಷೆಗಳು ಕಾಣೆಯಾಗಿವೆ. ಯುನೆಸ್ಕೊ ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ವು ಭಾರತದಲ್ಲಿ 344 ಭಾಷೆಗಳು ಅಪಾಯದ ಅಂಚಿನಲ್ಲಿವೆ ಎಂದು ವರದಿ ಮಾಡಿದೆ. ದ್ವಿಭಾಷಾ ನೀತಿಯೊಂದಿಗೆ ಉಳಿದ ಸಣ್ಣ ಭಾಷೆಗಳ ಸಬಲೀಕರಣಕ್ಕೂ ರಾಜ್ಯ ಸರ್ಕಾರಗಳು ಕೆಲಸ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.