ADVERTISEMENT

ವಿಶ್ಲೇಷಣೆ | ಪಾಸು– ಫೇಲು: ಯಾವುದು ಮೇಲು?

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 22:33 IST
Last Updated 26 ಡಿಸೆಂಬರ್ 2024, 22:33 IST
   

ಕೇಂದ್ರ ಶಿಕ್ಷಣ ಸಚಿವಾಲಯವು ತನ್ನ ಅಧೀನಕ್ಕೆ ಒಳಪಡುವ ಶಾಲೆಗಳಲ್ಲಿ ಅಂದರೆ ಕೇಂದ್ರೀಯ ವಿದ್ಯಾಲಯ, ಜವಾಹರ್‌ ನವೋದಯ ವಿದ್ಯಾಲಯ, ಸೈನಿಕ ಶಾಲೆಯಂತಹವುಗಳಲ್ಲಿ 5 ಮತ್ತು 8ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳು ನಿಗದಿತ ಕಲಿಕಾ ಸಾಮರ್ಥ್ಯ ಹೊಂದಿಲ್ಲದೇ ಇದ್ದಲ್ಲಿ, ಅಂತಹವರನ್ನು ಫೇಲು ಮಾಡಲು ತೀರ್ಮಾನಿಸಿದೆ. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ– 2009ರಲ್ಲಿ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಫೇಲು ಮಾಡದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಕೇಂದ್ರ ಸರ್ಕಾರವು ಈ ನಿಯಮಕ್ಕೆ 2019ರಲ್ಲಿ ತಿದ್ದುಪಡಿಯನ್ನು ತಂದಿದೆ. ಆದರೆ, ತನ್ನ ಅಧೀನದ ಶಾಲೆಗಳಲ್ಲೇ ಅದು ಅನುಷ್ಠಾನಗೊಂಡಿರಲಿಲ್ಲ. ಇದರ ಮಧ್ಯೆ, ದೇಶದ 18 ರಾಜ್ಯಗಳು ಈ ನಿಯಮವನ್ನು ಈಗಾಗಲೇ ಅಳವಡಿಸಿಕೊಂಡಿವೆ. ಕರ್ನಾಟಕವು 8ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಫೇಲು ಮಾಡದೇ ಇರುವ ನೀತಿಯನ್ನು ಹೊಂದಿದೆ.

ಫೇಲು ಮಾಡುವುದು ಒಳಿತೋ ಮಾಡದೇ ಇರುವುದು ಒಳಿತೋ ಎಂಬುದು ಜಿಜ್ಞಾಸೆಯ ವಿಷಯವಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯು (ಆರ್‌ಟಿಇ) ಮಕ್ಕಳು ನಿಗದಿತ ಕಲಿಕಾ ಸಾಮರ್ಥ್ಯ ಗಳಿಸುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದಿದೆಯೇ ವಿನಾ ಸುಮ್ಮನೆ ಪಾಸು ಮಾಡುತ್ತಾ ಮುಂದಿನ ತರಗತಿಗೆ ಕಳುಹಿಸಿ ಎಂದು ತಿಳಿಸಿಲ್ಲ. ಈಗ ಫೇಲು ಮಾಡಬಹುದು ಎಂಬ ನೀತಿ ಅಳವಡಿಸಿಕೊಂಡಾಗ್ಯೂ ಎಷ್ಟು ವರ್ಷ ಮಕ್ಕಳನ್ನು ಅದೇ ತರಗತಿಯಲ್ಲಿ ಇರುವಂತೆ ಮಾಡಬಹುದು ಎಂಬುದು ಪ್ರಶ್ನೆ.

ಫೇಲು ಮಾಡುವುದರಿಂದ ಮಕ್ಕಳು ಶಿಕ್ಷಣದಿಂದ ವಿಮುಖರಾಗಬಹುದು ಎಂಬ ಕಳಕಳಿ ಇದೆ. ಆ ಕಾರಣದಿಂದ, ಸೂಕ್ತ ರೀತಿಯಲ್ಲಿ ಕಲಿಸಿ ಅವರನ್ನು ಮುಂದಿನ ತರಗತಿಗೆ ಕಳುಹಿಸಬೇಕು ಎಂಬುದು ನಪಾಸು ನೀತಿಯ ಆಶಯ. ಇದನ್ನು ಅರ್ಥೈಸಿಕೊಳ್ಳದೆ, ಮಕ್ಕಳಿಗೆ ಸೂಕ್ತವಾಗಿ ಕಲಿಸದಿದ್ದರೂ ಅವರನ್ನು ಪಾಸು ಮಾಡುತ್ತಾ ಹೋಗಿದ್ದು ತಪ್ಪೇ ವಿನಾ ನಪಾಸು ನೀತಿಯ ಅಳವಡಿಕೆಯೇ ತಪ್ಪಲ್ಲ.

ADVERTISEMENT

ಜಾಗತಿಕವಾಗಿ ಈ ವಿಷಯಕ್ಕೆ ಇರುವ ಪ್ರಾಮುಖ್ಯವನ್ನು ಗಮನಿಸುವುದಾದರೆ, ನಮ್ಮ ದೇಶವೂ ಸೇರಿದಂತೆ ವಿಶ್ವದ ಹೆಚ್ಚಿನ ರಾಷ್ಟ್ರಗಳು ಮಕ್ಕಳಲ್ಲಿ ಕಲಿಕೆಯ ಕೊರತೆಯನ್ನು ನೀಗಿಸುವ ಸವಾಲನ್ನು ಎದುರಿಸುತ್ತಿವೆ. ಸುಸ್ಥಿರ ಅಭಿವೃದ್ಧಿ ಗುರಿ ಪ್ರಕಾರ 3, 6 ಮತ್ತು 9ನೇ ತರಗತಿಗಳಲ್ಲಿ ಓದುವುದು ಹಾಗೂ ಲೆಕ್ಕಾಚಾರದ ಕೌಶಲಗಳಲ್ಲಿ ಎಷ್ಟು ಪ್ರಮಾಣದ ಬಾಲಕರು ಮತ್ತು ಬಾಲಕಿಯರು ಕಲಿಕೆಯ ಕನಿಷ್ಠ ಪ್ರಾವೀಣ್ಯದ ಮಟ್ಟವನ್ನು ಸಾಧಿಸುತ್ತಾರೆ ಎಂಬುದನ್ನು ಆಧರಿಸಿ,ಜಾಗತಿಕವಾಗಿ ಶಿಕ್ಷಣದ ಪ್ರಗತಿಯ ಮಾಪನವನ್ನು ಮಾಡಲಾಗುತ್ತದೆ.

ಕಲಿಕೆಯ ಕೊರತೆ ಜಾಗತಿಕ ಸಮಸ್ಯೆಯಾಗಿದ್ದು, ಎಲ್ಲ ದೇಶಗಳನ್ನೂ ವಿವಿಧ ಪ್ರಮಾಣಗಳಲ್ಲಿ ಅದು ಬಾಧಿಸುತ್ತಿದೆ. ನಮ್ಮ ದೇಶದಲ್ಲಿ ಈ ಸಮಸ್ಯೆ ಒಂದಷ್ಟು ತೀವ್ರವಾಗಿರುವುದು ಅನೇಕ ಸಮೀಕ್ಷೆಗಳಿಂದ ಕಂಡುಬಂದಿದೆ. ಕಲಿಕಾ ಸಮಸ್ಯೆಗೆ ಪ್ರಮುಖ ಕಾರಣವೆಂದರೆ, ಮೂಲಭೂತ ಕೌಶಲಗಳಲ್ಲಿ ಮಕ್ಕಳು ಸೂಕ್ತವಾದ ರೀತಿಯಲ್ಲಿ ಪ್ರಾವೀಣ್ಯವನ್ನು ಸಾಧಿಸದೇ ಇರುವುದು.

ಆರಂಭಿಕ ವರ್ಷಗಳಲ್ಲಿ ಮಕ್ಕಳು ತಪ್ಪಿಲ್ಲದೇ ಅರ್ಥಗ್ರಹಿಕೆಯೊಂದಿಗೆ ಓದುವುದು, ಬರೆಯುವುದು ಮತ್ತು ಸರಳ ಲೆಕ್ಕಾಚಾರದ ಕೌಶಲ ಸಾಧಿಸುವುದರಲ್ಲಿ ಹಿಂದುಳಿದರೆ, ಅವರ ಭವಿಷ್ಯದ ಶಿಕ್ಷಣ ಮಸುಕಾಗುತ್ತದೆ. ಈ ದಿಸೆಯಲ್ಲಿ, ಅಮೆರಿಕದ ರಾಜ್ಯವೊಂದರಲ್ಲಿ 3ನೇ ತರಗತಿಯ ಶಿಕ್ಷಣದ ಹಂತವನ್ನು ಗಂಭೀರವೆಂದು
ಪರಿಗಣಿಸಲಾಗಿದೆ. ಆ ತರಗತಿಗೆ ನಿಗದಿಪಡಿಸಿದ ಕಲಿಕಾ ಸಾಮರ್ಥ್ಯಗಳನ್ನು ಅಲ್ಲಿನ ಮಕ್ಕಳು ಯಶಸ್ವಿಯಾಗಿ ಕಲಿಯುವುದನ್ನು ಖಾತರಿಪಡಿಸಿಕೊಳ್ಳುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಮ್ಮಲ್ಲಿ 5 ಮತ್ತು 8ನೇ ತರಗತಿಗಳಲ್ಲಿ ನಿಗದಿತ ಸಾಮರ್ಥ್ಯ ತೋರದ ಮಕ್ಕಳನ್ನು ಫೇಲು ಮಾಡಿ, ಅವರಿಗೆ ನಿಗದಿತ ಸಾಮರ್ಥ್ಯಗಳನ್ನು ಕಲಿಸಿಯೇ ಮುಂದಿನ ತರಗತಿಗಳಿಗೆ ಕಳುಹಿಸುತ್ತೇವೆ ಎನ್ನುವವರು, ಅಮೆರಿಕದ ಮಿಸಿಸಿಪ್ಪಿ ರಾಜ್ಯದ ಪ್ರಯತ್ನದಲ್ಲಿ ಸೂಕ್ತ ಕಲಿಕೆಯ ಅಂಶಗಳನ್ನು ಕಾಣಬಹುದಾಗಿದೆ.

ಮಿಸಿಸಿಪ್ಪಿಯು ಶೈಕ್ಷಣಿಕ ಕ್ಷೇತ್ರದಲ್ಲಿ ಕೈಗೊಂಡಿರುವ ಬದಲಾವಣೆಗಳು ಅಮೆರಿಕದ ಇತರ ರಾಜ್ಯಗಳ ಜೊತೆಗೆ ವಿಶ್ವಮಟ್ಟದಲ್ಲೂ ಪ್ರೇರಣೆಯನ್ನು ಉಂಟು ಮಾಡುವಂತಿವೆ. ಬಡತನ, ಹಸಿವು ನಿವಾರಣೆ, ವರ್ಣಭೇದ ನೀತಿಯ ನಿಯಂತ್ರಣದಂತಹ ಕ್ಷೇತ್ರಗಳಲ್ಲಿ ಅಮೆರಿಕದ ರಾಜ್ಯಗಳ ಪೈಕಿ ಮಿಸಿಸಿಪ್ಪಿಯು ಕೆಳಗಿನ ಸ್ಥಾನದಲ್ಲಿ ಇದೆಯಾದರೂ ಶೈಕ್ಷಣಿಕ ಗುಣಮಟ್ಟದ ವಿಷಯದಲ್ಲಿ ಮೇಲಿನ ದರ್ಜೆಯನ್ನು ಕಾಯ್ದುಕೊಂಡಿರು ವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಮಿಸಿಸಿಪ್ಪಿಯು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದೆ. ಶಾಲೆಗೆ ಮಕ್ಕಳ ದಾಖಲಾತಿ, ಹಾಜರಾತಿ ಹಾಗೂ ಕಲಿಕೆಯ ವಿಷಯದಲ್ಲಿ ಅದು ಅಮೆರಿಕದ ಇತರ ರಾಜ್ಯಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ. ಕಳಪೆ ಸಾಧನೆಗೆ ಬಡತನವನ್ನು ಕಾರಣವನ್ನಾಗಿ ನೀಡುವ ಧೋರಣೆಗೆ ವ್ಯತಿರಿಕ್ತವಾದ ಸಾಧನೆ ಮಾಡುವ ಮೂಲಕ ಉತ್ತಮ ಸಂದೇಶವನ್ನು ನೀಡಿದೆ.

ಅಲ್ಲಿನ ಇಂತಹ ಸಾಧನೆ ಆಕಸ್ಮಿಕವಾಗಿ ಆದದ್ದಲ್ಲ. ತನ್ನ ರಾಜ್ಯದ ಕಳಪೆ ಶೈಕ್ಷಣಿಕ ಸಾಧನೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಉದ್ಯಮಿ ಬಾರ್ಕ್ಸ್‌ಡೇಲ್‌, 2000ನೇ ಇಸವಿಯ ಸಂದರ್ಭದಲ್ಲಿ 100 ಮಿಲಿಯನ್‌ ಡಾಲರ್‌ ಅನ್ನು ಶಿಕ್ಷಣ ಕ್ಷೇತ್ರಕ್ಕೆ ದೇಣಿಗೆಯಾಗಿ ನೀಡಿ, ಜಾಕ್ಸನ್‌ ನಗರದಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಕಾರಣರಾದರು. ಮಿಸಿಸಿಪ್ಪಿಯ ಅನೇಕ ಉದ್ಯಮಿಗಳು ಬಾರ್ಕ್ಸ್‌ಡೇಲ್‌ ಅವರನ್ನು ಅನುಸರಿಸಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಹಣವನ್ನು ನೀಡಿದರು. ಬಾರ್ಕ್ಸ್‌ಡೇಲ್‌ ಮತ್ತು ಇತರರು ಹಣವನ್ನಷ್ಟೇ ನೀಡಿ ಸುಮ್ಮನಾಗಲಿಲ್ಲ. ವಾಷಿಂಗ್ಟನ್‌ ನಗರದಲ್ಲಿ ಶಿಕ್ಷಣ ಅಧಿಕಾರಿಯಾಗಿದ್ದ ಮಹಿಳೆ ಕೇರಿ ರೈಟ್‌ ಅವರನ್ನು ಮಿಸಿಸಿಪ್ಪಿ ರಾಜ್ಯಕ್ಕೆ ಆಹ್ವಾನಿಸಿ, ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಮಾಡಿದರು. ರೈಟ್‌ ಅವರ ಪ್ರಯತ್ನದಿಂದ 2013ರಲ್ಲಿ ಹೊಸ ಕಾನೂನು, ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಸುಧಾರಣೆಗೆ ಮುನ್ನುಡಿ ಬರೆಯಲಾಯಿತು. 

ಮೂರನೇ ತರಗತಿಯ ಮಕ್ಕಳು ಓದುವ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದಲ್ಲಿ ಅವರನ್ನು ಅದೇ ತರಗತಿಯಲ್ಲಿ ಉಳಿಸಿಕೊಂಡು, ವಿನೂತನ ಬೋಧನಾ ಕಾರ್ಯತಂತ್ರಗಳ ಮೂಲಕ ಅವರಿಗೆ ಓದುವುದನ್ನು ಕಲಿಸಿ, ಮುಂದಿನ ತರಗತಿಗೆ ಕಳುಹಿಸುವ ಕಾನೂನು ಮಿಸಿಸಿಪ್ಪಿ ಜಾರಿಗೆ ತಂದ ಪ್ರಮುಖ ನೀತಿಗಳಲ್ಲಿ ಒಂದಾಗಿದೆ. ರಾಜ್ಯದ ಪ್ರತಿ ವಿದ್ಯಾರ್ಥಿಗೂ ತಪ್ಪಿಲ್ಲದೇ ಓದುವ, ಬರೆಯುವ, ಸರಳ ಲೆಕ್ಕಾಚಾರ ಮಾಡುವ ಕೌಶಲಗಳನ್ನು ಕಲಿಸುವ ವಿಷಯದಲ್ಲಿ ಇಡೀ ರಾಜ್ಯವೇ ಪ್ರೇರಣೆಗೊಂಡಿದೆ ಯಲ್ಲದೆ, ಅಧಿಕಾರಿಗಳು ಮತ್ತು ಶಿಕ್ಷಕರು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಫಲವಾಗಿ ಆ ರಾಜ್ಯವು ಶಾಲಾ ಶಿಕ್ಷಣದ ಗುಣಮಟ್ಟ
ದಲ್ಲಿ ಹಂತ ಹಂತವಾಗಿ ಮೇಲೇರುವಂತಾಗಿದೆ.

ಅನುತ್ತೀರ್ಣ ನಿಯಮ ಅಳವಡಿಸಿಕೊಂಡ ಮಾತ್ರಕ್ಕೆ ಮಕ್ಕಳು ಕಲಿಯಲಾರರು. ಯಾವುದೇ ಮಗು ಕಲಿಕೆಯಲ್ಲಿ ಏಕೆ ಹಿಂದುಳಿದಿದೆ ಎಂಬುದನ್ನು ಅನುತ್ತೀರ್ಣಗೊಳಿಸು ವುದರಿಂದ ಕಂಡುಕೊಳ್ಳಬಹುದು ಅಷ್ಟೆ. ಈ ಹಂತದಿಂದ ಪ್ರಾರಂಭಿಸಿ, ಪ್ರತಿ ಮಗುವಿಗೆ ವಿಶಿಷ್ಟವಾಗಿ ಹೇಗೆ ಕಲಿಸಬೇಕೆಂಬ ಕುರಿತ ಕಾರ್ಯತಂತ್ರ, ವೈವಿಧ್ಯಮಯ ಚಟುವಟಿಕೆಗಳು, ಶಿಕ್ಷಕರ ತೊಡಗಿಸಿಕೊಳ್ಳುವಿಕೆ, ಬದ್ಧತೆ, ಉತ್ತರದಾಯಿತ್ವ, ಸಾಂಘಿಕ ಪ್ರಯತ್ನದಂತಹ ಅಂಶಗಳು ಮಿಸಿಸಿಪ್ಪಿ ರಾಜ್ಯದಲ್ಲಿನ ಶೈಕ್ಷಣಿಕ ಬದಲಾವಣೆಗೆ ಕಾರಣವಾಗಿವೆ ಎನ್ನಬಹುದು.

ಮಿಸಿಸಿಪ್ಪಿಯ ವಿವಿಧ ಶಾಲೆಗಳಲ್ಲಿ ಮಕ್ಕಳ ಕಲಿಕಾ ಸ್ಥಿತಿ ಹೇಗಿದೆ ಎಂಬುದನ್ನು ಆ ರಾಜ್ಯದ ಶಿಕ್ಷಣ ಇಲಾಖೆಯ ಜಾಲತಾಣವು (https://www.mdek12.org/) ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣಾಸಕ್ತರಿಗೆ ಕನ್ನಡಿಯಂತೆ ತೋರಿಸುತ್ತದೆ. ಆ ಮಟ್ಟಿನ ಕಾಳಜಿ, ಪ್ರಾಮಾಣಿಕತೆ, ಬದ್ಧತೆಯು ಎಲ್ಲ ದೇಶಗಳ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಬಲ್ಲವು. 

ಲೇಖಕ: ಹಿರಿಯ ಉಪನ್ಯಾಸಕ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.