ADVERTISEMENT

ವಿಶ್ಲೇಷಣೆ: ಫಲಿತಾಂಶವೇ ಇಲ್ಲದ ಸ್ಪರ್ಧಾ ಪ್ರಪಂಚ!

ಅರವಿಂದ ಚೊಕ್ಕಾಡಿ
Published 30 ನವೆಂಬರ್ 2024, 0:03 IST
Last Updated 30 ನವೆಂಬರ್ 2024, 0:03 IST
   

ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸಬೇಕೇ ಬೇಡವೇ ಎಂಬ ಬಗ್ಗೆ ಪರ, ವಿರೋಧದ ಬಹಳಷ್ಟು ಚರ್ಚೆಗಳು ನಡೆದಿವೆ. ಆದರೆ ಇವೆಲ್ಲವೂ ಶಿಕ್ಷಣದ ತತ್ವಶಾಸ್ತ್ರೀಯ ನೆಲಗಟ್ಟಿನ ವೈಚಾರಿಕ ಚರ್ಚೆಗಳಾಗಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ವ್ಯಾವಹಾರಿಕ ನೆಲಗಟ್ಟಿನ ಚರ್ಚೆಯೊಂದು ಈ ದಿನಗಳಲ್ಲಿ ತೀರಾ ಅಗತ್ಯವಾಗಿದೆ. ಅದು, ವಿವಿಧ ಹಿತಾಸಕ್ತಿಯ ಗುಂಪುಗಳು ಶಾಲಾ ಕಾಲೇಜುಗಳಲ್ಲಿ ನಡೆಸುವ ಸ್ಪರ್ಧೆಗಳಿಗೆ ಸಂಬಂಧಿಸಿದ್ದು. ಉದಾಹರಣೆಗೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕೃಷ್ಣಾಷ್ಟಮಿ ಸಮಿತಿ... ಇವೆಲ್ಲ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸುತ್ತವೆ. ಇವನ್ನು ಆಯಾ ಗ್ರಾಮದಲ್ಲೇ ನಡೆಸುತ್ತವೆ ಮತ್ತು ಅವು ನಡೆಸುವ ಸ್ಪರ್ಧೆಗಳು ಇಷ್ಟು ವರ್ಷ ವಯಸ್ಸಿನೊಳಗಿನ ಮಕ್ಕಳಿಗಾಗಿ ಎಂದು ಇರುತ್ತವೆಯೇ ವಿನಾ ಶಾಲಾ ವಿದ್ಯಾರ್ಥಿಗಳಿಗಾಗಿ ಎಂದು ಇರುವುದಿಲ್ಲ.

ಮಕ್ಕಳೂ ಸ್ಥಳೀಯರೇ ಆಗಿರುತ್ತಾರೆ, ಸಮಿತಿಯೂ ಸ್ಥಳೀಯವಾದದ್ದೇ ಆಗಿರುತ್ತದೆ. ಇಂಥ ಸಮಿತಿಗಳಿಗೆ ಹೆಚ್ಚೆಂದರೆ ಮಕ್ಕಳ ಜನನ ಪ್ರಮಾಣಪತ್ರ ಬೇಕು. ಬದಲು ಈ ವಿದ್ಯಾರ್ಥಿ ಈ ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾನೆ ಎಂಬ ಅಧಿಕೃತ ಪ್ರಮಾಣಪತ್ರವನ್ನು ಸಂಸ್ಥೆಯ ಮುಖ್ಯಸ್ಥರು ಕೊಡಬೇಕಾಗುವುದಿಲ್ಲ. ಆದ್ದರಿಂದ ಈ ಮಾದರಿಯ ಸ್ಪರ್ಧೆಗಳಿಂದ ಸಮಸ್ಯೆಗಳಾಗುವುದಿಲ್ಲ.

ಇನ್ನು ಕೆಲವು ಸ್ಪರ್ಧೆಗಳು ಇರುತ್ತವೆ. ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ವಿಭಾಗ ಮಟ್ಟ, ರಾಜ್ಯ ಮಟ್ಟ ಎಂದೆಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ನಡೆಯುತ್ತವೆ. ಯಾವುದೋ ಒಂದು ಸಮಿತಿ ಅದಕ್ಕೆ ಬೇಕಾದ ವಿಷಯದ ಮೇಲೆ ಸ್ಪರ್ಧೆ ನಡೆಸುತ್ತದೆ. ಕೆಲವೊಮ್ಮೆ ಇಲಾಖಾ ಮುಖ್ಯಸ್ಥರ ಅನುಮತಿಯನ್ನೂ ಪಡೆದಿರುತ್ತದೆ. ಇವರಿಗೆ ಆಯಾ ಶಾಲಾ ಕಾಲೇಜಿನ ವಿದ್ಯಾರ್ಥಿ ಎಂಬ ಅಧಿಕೃತ ಪ್ರಮಾಣಪತ್ರ ಬೇಕು. ಅದನ್ನು ಸಲ್ಲಿಸಿ ವಿದ್ಯಾರ್ಥಿಗಳು ಭಾಗವಹಿಸಿದರೆ, ಆಮೇಲೆ ಆ ಸ್ಪರ್ಧೆಯ ಫಲಿತಾಂಶ ಏನಾಯಿತು ಎಂದು ವಿದ್ಯಾರ್ಥಿಗಳಿಗೂ ತಿಳಿಸುವುದಿಲ್ಲ, ವಿದ್ಯಾಸಂಸ್ಥೆಗಳಿಗೂ ತಿಳಿಸುವುದಿಲ್ಲ. ತಾವು ಅನುಮತಿ ಕೊಟ್ಟ ಸ್ಪರ್ಧೆ ಹೇಗೆ ನಡೆದಿದೆ ಎಂದು ಕೇಳಿ ತಿಳಿದು ಇಲಾಖಾ ಮುಖ್ಯಸ್ಥರೂ ಫಲಿತಾಂಶವನ್ನು ತಿಳಿಸುವುದಿಲ್ಲ.

ADVERTISEMENT

ಸಂಘಟಕರಿಗೆ ತಮ್ಮ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಇದು ಒಂದು ವ್ಯವಸ್ಥೆ. ಆದರೆ ಅವರ ಅಜೆಂಡಾ ಶೈಕ್ಷಣಿಕ‌ ಉದ್ದೇಶವನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸದೆಯೇ ಶಿಕ್ಷಣ ವ್ಯವಸ್ಥೆಯು ಅಜೆಂಡಾ ಪ್ರಚಾರಕ್ಕೆ ಅವಕಾಶ ಮಾಡಿಕೊಡುತ್ತದೆ.‌ ಎರಡನೆಯದಾಗಿ, ಸಂಘಟಕರಿಗೆ ತಾವು ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ನಡೆಸಿ ಜಾಗೃತಿ ಮೂಡಿಸಿದ್ದೇವೆ ಎಂದು ತಮ್ಮ ಬಗ್ಗೆ ತಾವು ಪ್ರಚಾರ ಮಾಡಿಕೊಳ್ಳಲು ಇದು ಒಂದು ವ್ಯವಸ್ಥೆಯಾಗಿದೆ.

ಒಂದು ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಿದರೆ, ಬಹುಮಾನವು ಕನಿಷ್ಠ ಹತ್ತು ಸಾವಿರ ರೂಪಾಯಿಯ ಮೌಲ್ಯದ್ದಾದರೂ ಬೇಡವೇ ಎಂದು ಕೇಳಿದರೆ, ‘ಬೇಡ, ಬಹುಮಾನ ಕೊಡಲಾಗುವುದು ಎಂದರೆ ಸಾಕು. ಬಹುಮಾನ ಏನು ಎಂದೂ ತಿಳಿಸಬೇಕಾಗಿಲ್ಲ’ ಎನ್ನುವ ಉತ್ತರ ಬರುತ್ತದೆ.‌ ಯಾವ ಬಹುಮಾನವನ್ನು ಕೊಡಲಿದ್ದೇವೆ ಎಂಬುದನ್ನೂ ತಿಳಿಸದೆಯೇ ಸ್ಪರ್ಧೆ ನಡೆಸುವ ವ್ಯವಸ್ಥೆಯೂ ಇದೆ. ಫಲಿತಾಂಶ ಘೋಷಣೆಯಾದ ಬಳಿಕ ಬಹುಮಾನ ಏನು ಕೊಡಬೇಕೆಂದು ಯೋಚಿಸುವ ಸಂಘಟಕರು ಸಹ ಇದ್ದಾರೆ. ಸ್ಪರ್ಧೆಯನ್ನು ಮಾತ್ರ ನಡೆಸಿ ಫಲಿತಾಂಶವನ್ನೇ ಕೊಡದೆ ಇರುವವರೂ ಇದ್ದಾರೆ. ಫಲಿತಾಂಶ ಮತ್ತು ಬಹುಮಾನದ ಬಗ್ಗೆ ಕೇಳಿದರೆ ಉತ್ತರವನ್ನೇ ಕೊಡದ ಸಂಘಟಕರೂ ಇದ್ದಾರೆ.

ಈ ರೂಪದ ಸ್ಪರ್ಧೆಗಳು ಶಾಲಾ ಕಾಲೇಜುಗಳಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂದರೆ, ಪ್ರತಿ ತರಗತಿಯಲ್ಲೂ ಕೆಲವು ವಿದ್ಯಾರ್ಥಿಗಳು ಪೂರಕ ಪಠ್ಯ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಎಲ್ಲದಕ್ಕೂ ಅವರನ್ನೇ ಕಳುಹಿಸುವುದು. ಸ್ಪರ್ಧೆಗಳ ಸಂಖ್ಯೆ ಹೆಚ್ಚಿದಂತೆಲ್ಲ ಇಂಥ ವಿದ್ಯಾರ್ಥಿಗಳಿಗೆ ಈ ರೀತಿಯ ಸ್ಪರ್ಧೆಗಳು ಹೊರೆ ಎನಿಸತೊಡಗುತ್ತವೆ. ಅಧ್ಯಾಪಕರು, ‘ನೀವು ಹೋಗಿ’ ಎಂದದ್ದಕ್ಕಾಗಿ ಒಲ್ಲದ ಮನಸ್ಸಿನಿಂದ ಭಾಗವಹಿಸುತ್ತಾರೆ. ಅವರಿಗೆ ಉಳಿದೆಲ್ಲ ವಿದ್ಯಾರ್ಥಿಗಳಿಗೆ ಲಭ್ಯವಾಗುವ ತರಗತಿಗಳು ಕಳೆದುಹೋಗುತ್ತವೆ ಮತ್ತು ಕೆಲವು ಸಂದರ್ಭಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ತಗುಲಿದ ಖರ್ಚನ್ನು ಸಂಘಟಕರೂ ಕೊಡುವುದಿಲ್ಲ, ಶಾಲಾ ಕಾಲೇಜುಗಳೂ ಕೊಡುವುದಿಲ್ಲ. ಅವರು ಸ್ಪರ್ಧೆಯಲ್ಲಿ ಭಾಗವಹಿಸಬಲ್ಲವರಾಗಿರುವುದರಿಂದ ಖರ್ಚನ್ನು ಅವರೇ ಹಾಕಿಕೊಳ್ಳಬೇಕಾದದ್ದು ಅವರಿಗೆ ಕೊಡಲಾಗುವ ಹೆಚ್ಚುವರಿ ಶಿಕ್ಷೆಯಂತೆ ಆಗುತ್ತದೆ. ಅಂದರೆ ಸಂಘಟಕರ ತೆವಲಿಗಾಗಿ ವಿದ್ಯಾರ್ಥಿಗಳಿಗೆ ಕೊಡುವ ಹಿಂಸೆ ಇದು.

ಈ ರೀತಿಯ ಹಿಂಸೆಗಳು ವಿವಿಧ ಸಭಾ ಕಾರ್ಯಕ್ರಮಗಳು, ಸೆಮಿನಾರ್‌ಗಳಲ್ಲೂ ನಡೆಯುತ್ತವೆ.‌ ಸಂಘಟಕರು ಯಾರಾದರೊಬ್ಬರು ಪರಿಚಿತ ಉಪನ್ಯಾಸಕರನ್ನು ಸಂಪರ್ಕಿಸಿ ‘ನಿಮ್ಮ ವಿದ್ಯಾರ್ಥಿಗಳನ್ನು ಕಳಿಸಿಕೊಡಿ’ ಎನ್ನುವುದು, ಇವರು ವಿದ್ಯಾರ್ಥಿಗಳನ್ನು ಕಳಿಸುವುದು ‘ಪ್ರೇಕ್ಷಕರನ್ನು ತುಂಬುವ’ ಒಂದು ವ್ಯವಸ್ಥೆಯಾಗಿದೆ. ಹೀಗೆ ಭಾಗವಹಿಸಿದಾಗ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಅಂಕಗಳು ದೊರೆತರೆ ಆಗ ಅದರಿಂದ ಅವರಿಗೆ ಉಪಯೋಗವಾಗುತ್ತದೆ ಅಥವಾ ವಿದ್ಯಾರ್ಥಿ

ಗಳಿಗಾಗಿಯೇ ಕಾರ್ಯಕ್ರಮ ಏರ್ಪಡಿಸಿದ್ದರೆ ಉಪಯೋಗ ಆಗುತ್ತದೆ. ಇಂಥ ವ್ಯವಹಾರ ವ್ಯಾಪಕವಾಗುತ್ತಿರುವುದರಿಂದ, ಅದಕ್ಕೊಂದು ಖಚಿತವಾದ ರೂಪುರೇಷೆಯನ್ನು ಅಳವಡಿಸಬೇಕಾದ ಅಗತ್ಯವಿದೆ.

ಮೊದಲನೆಯದಾಗಿ, ಸಂಘಟಕರು ಸ್ಪರ್ಧೆಗಾಗಿ ವಿದ್ಯಾರ್ಥಿಗಳಿಗೆ ತಗಲುವ ಖರ್ಚನ್ನು ಸ್ವತಃ ಭರಿಸಬೇಕು. ಶಿಕ್ಷಣ ಸಂಸ್ಥೆಯೇ ಆ ಖರ್ಚನ್ನು ಭರಿಸಲು ಸಿದ್ಧವಿದ್ದರೂ ಆಗುತ್ತದೆ. ಉದಾಹರಣೆಗೆ, ಚಿತ್ರ ಬರೆಯುವ ಸ್ಪರ್ಧೆ ಎಂದು ಇದ್ದರೆ ಹಾಳೆಗಳು, ಬಣ್ಣಗಳಿಗೆಲ್ಲ ಖರ್ಚು ತಗಲುತ್ತದೆ. ಕ್ವಿಜ್ ಸ್ಪರ್ಧೆ ಎಂದಾದರೆ ಜಿಲ್ಲಾ ಕೇಂದ್ರ ಅಥವಾ ತಾಲ್ಲೂಕು ಕೇಂದ್ರಕ್ಕೆ ಹೋಗಿ ಬರಲು ಖರ್ಚು ತಗಲುತ್ತದೆ. ಈ ಖರ್ಚನ್ನು ವಿದ್ಯಾರ್ಥಿಗಳ ತಲೆಗೆ ಹಾಕಬಾರದು. ವಿದ್ಯಾರ್ಥಿಗಳನ್ನು ಕಳಿಸಿಕೊಡಿ ಎಂದು ಶಿಕ್ಷಣ ಸಂಸ್ಥೆಗಳಿಗೆ ಹೇಳುವಾಗ, ತಗಲುವ ಖರ್ಚಿನ ಕುರಿತ ಮಾಹಿತಿಯನ್ನು ಶಿಕ್ಷಣ ಸಂಸ್ಥೆಗೆ ಮುಂಚಿತವಾಗಿಯೇ ನೀಡಬೇಕು.

ಎರಡನೆಯದಾಗಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಭಾಗವಹಿಸಿದ ಪ್ರಮಾಣಪತ್ರವನ್ನು ನೀಡಬೇಕು.‌ ಸ್ಪರ್ಧೆ ನಡೆಸುವ ಮೊದಲೇ ಬಹುಮಾನವನ್ನು ಘೋಷಿಸಬೇಕು.‌ ಸಮಾರಂಭ ನಡೆಸಿ ಬಹುಮಾನಿತರನ್ನು ಕರೆಸಿ ಬಹುಮಾನ ವಿತರಣೆ ಮಾಡುತ್ತಾರೋ ಅಥವಾ ಆಯಾ ಶಾಲಾ ಕಾಲೇಜುಗಳಿಗೇ ಕಳಿಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸಬೇಕು.‌

ಮೂರನೆಯದಾಗಿ, ನಡೆಸಲಾಗುವ ಸ್ಪರ್ಧೆಗಳು ವಿದ್ಯಾರ್ಥಿಗಳ ಕಲಿಕೆಯನ್ನು ಯಾವ ರೀತಿ ಉತ್ತಮೀಕರಿಸುತ್ತವೆ ಎಂಬ ವಿವರಣೆಯನ್ನು ಪಡೆದ ನಂತರವೇ ಸಂಬಂಧಿಸಿದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಅನುಮತಿ ನೀಡಬೇಕು.‌ ಶಾಲೆಗಳಲ್ಲೇ ಬಹಳಷ್ಟು ಸ್ಪರ್ಧೆಗಳು ನಡೆಯುವುದರಿಂದ ಮತ್ತಷ್ಟು ಹೆಚ್ಚುವರಿ ಸ್ಪರ್ಧೆಗಳ ಅಗತ್ಯ ಇದೆಯೇ, ಅಂತಹವುಗಳಿಂದ ಇದುವರೆಗೆ ನಡೆಸಿದ ಸ್ಪರ್ಧೆಗಳಿಗಿಂತ ಭಿನ್ನ‌ ಆಯಾಮದ ಕಲಿಕೆಯನ್ನು ವಿದ್ಯಾರ್ಥಿಗಳಲ್ಲಿ ಉಂಟು ಮಾಡಲಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ, ಸೂಕ್ತವೆಂದು ಕಂಡುಬಂದರೆ ಮಾತ್ರ ಇಂಥ ಸ್ಪರ್ಧೆಗಳಿಗೆ ಅನುಮತಿ ನೀಡುವುದು, ವಿದ್ಯಾರ್ಥಿಗಳನ್ನು ತೊಡಗಿಸುವುದು ಮಾಡಬೇಕು. ಅಲ್ಲದೆ, ವಿದ್ಯಾರ್ಥಿಗಳಿಗೆ ಇಷ್ಟವಿಲ್ಲದಿದ್ದರೂ ಒತ್ತಾಯದಿಂದ ಅವರನ್ನು ಸ್ಪರ್ಧೆಗೆ ಕಳಿಸುವ ಕ್ರಮವನ್ನು ನಿಲ್ಲಿಸಬೇಕು.

ಈ ಅಂಶವು ‘ಜನ ಇಲ್ಲದ ಸಭೆ’ಗಳಿಗೆ ಕೇಳುಗರಾಗಿ ಬರುವ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಸಭೆಯನ್ನು ಸಾರ್ವಜನಿಕರಿಗಾಗಿ ಸಂಯೋಜಿಸಿ, ಪ್ರೇಕ್ಷಕರು ಇಲ್ಲ ಎಂದು ಮಕ್ಕಳನ್ನು ಕರೆಸುವ ಪದ್ಧತಿಯನ್ನು ಬಿಡಬೇಕು. ಬದಲು ವಿದ್ಯಾರ್ಥಿಗಳನ್ನೇ ಕೇಳುಗರಾಗಿ ದೃಷ್ಟಿಯಲ್ಲಿರಿಸಿಕೊಂಡು ಸಭೆಯನ್ನು ಸಂಘಟಿಸಿದಾಗ ವಿದ್ಯಾರ್ಥಿಗಳನ್ನು ಕೇಳುಗರನ್ನಾಗಿ ಕರೆಸುವುದು ಸರಿಯಾಗಿರುತ್ತದೆ. ಆಗ ವಿದ್ಯಾರ್ಥಿಗಳಿಗೆ ಅರ್ಥವಾಗುವ ಹಾಗೆ ಹೇಳುವ ಉಪನ್ಯಾಸಕರು ಬೇಕಾಗುತ್ತಾರೆ.

ಸ್ಪರ್ಧೆ, ಸಭೆ- ಸಮಾರಂಭಗಳು ಶಾಲೆ, ಕಾಲೇಜುಗಳಲ್ಲೇ ನಡೆಯುತ್ತವೆ.‌ ಆಗ ಅವು ಸಹಜವಾಗಿ ವಿದ್ಯಾರ್ಥಿಗಳನ್ನೇ ಪರಿಗಣಿಸಿ ಸಂಘಟಿಸಲ್ಪಟ್ಟಿರುತ್ತವೆ.‌ ಇದೇ ಮಾದರಿಯಲ್ಲಿ ಇಲ್ಲದ ಬೇರೆ ಸಮಾರಂಭಗಳಿಗೆ ವಿದ್ಯಾರ್ಥಿಗಳನ್ನು ನಿಯೋಜಿಸುವಾಗ ಬಹಳಷ್ಟು ಎಚ್ಚರಿಕೆ ಇರಬೇಕು.‌ ಸಂಘಟಕರು ಕೇಳಿದರು ಎಂಬ ಕಾರಣಕ್ಕಾಗಿಯೇ ವಿದ್ಯಾರ್ಥಿಗಳನ್ನು ನಿಯೋಜಿಸುವ ಪದ್ಧತಿ ವಿದ್ಯಾರ್ಥಿಗಳಿಗೆ ಅನುಕೂಲಕಾರಿ ಆಗಿರಬೇಕಾಗಿಲ್ಲ. ಈ ದಿಸೆಯಲ್ಲಿ ಸಂಘಟಕರು ಮತ್ತು ವಿದ್ಯಾಸಂಸ್ಥೆಗಳು ಯೋಚಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.