ADVERTISEMENT

ಬಂಜಾರರ ಅಸ್ಮಿತೆ: ಸಮಾಜಸುಧಾರಕ ಸೇವಾಲಾಲ್

ಅಪ್ಪಟ ಮಾನವತಾವಾದಿ, ಸಂಘಟನಾ ಚತುರ

ಬಿ.ಟಿ.ಲಲಿತಾನಾಯಕ್
Published 14 ಫೆಬ್ರುವರಿ 2021, 21:30 IST
Last Updated 14 ಫೆಬ್ರುವರಿ 2021, 21:30 IST
ಸೇವಾಲಾಲ್‌
ಸೇವಾಲಾಲ್‌   

ಸೇವಾಲಾಲರ 282ನೇ ಜನ್ಮದಿನಾಚರಣೆಯನ್ನು ರಾಜಧಾನಿ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಚರಿಸಲು ಕರ್ನಾಟಕ ಸರ್ಕಾರ ವ್ಯವಸ್ಥೆ ಮಾಡಿದೆ.

ಸುಮಾರು 17-18ನೇ ಶತಮಾನದ ನಡುವಿನ ಕಾಲಘಟ್ಟದಲ್ಲಿ ತಮ್ಮ ಗೋಸಂಪತ್ತಿನೊಂದಿಗೆ ವನಸಂಚಾರಿಗಳಾಗಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ಬಂಜಾರ (ಲಂಬಾಣಿ) ಜನಾಂಗದ ಭೀಮಾನಾಯ್ಕ–ಧರ್ಮಣಿ ಬಾಯಿ ದಂಪತಿಗಳ ಮಗನಾಗಿ ಜನಿಸಿದ ಸೇವಾಲಾಲ್ (15-02-1739 – 04-12-1806) ಬಾಲ್ಯದಲ್ಲಿ ದನಗಾಹಿ ಯಾಗಿ, ನಂತರದಲ್ಲಿ ತಂದೆಯೊಡನೆ ಸಂಚಾರ ಮಾಡುತ್ತಾ ತನ್ನಸುತ್ತಮುತ್ತಣ ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಸಂವೇದನಾಶೀಲನಾಗಿ ಯಕ್ಷಿಣಿ, ನಾಟಿ ವೈದ್ಯ ಮುಂತಾದ ಕೌಶಲಪೂರ್ಣ ವಿದ್ಯೆ ಗಳನ್ನು ಕರಗತ ಮಾಡಿಕೊಳ್ಳುತ್ತಾನೆ.

ಅಪ್ಪಟ ಮಾನವತಾವಾದಿಯಾದ ಆತ ತನ್ನ ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವ, ಸಂಘಟನಾ ಚತುರತೆ, ಸಂತಗುಣಗಳಿಂದ ಸಮಾಜಸುಧಾರಕನಾಗಿ ಜನಾಕರ್ಷಣೆಗೆ ಪಾತ್ರನಾಗುತ್ತಾನೆ. ಕರ್ನಲ್ ಮೆಕಂಝಿ (ಬಿಯರ್ ಸೆನ್ಸಸ್ ರಿಪೋರ್ಟ್ -1881) ಒದಗಿಸಿರುವ ಅತ್ಯ ಮೂಲ್ಯ ದಾಖಲೆ ಸೇವಾಲಾಲರ ಬಗ್ಗೆ ಸಾಕಷ್ಟು ವಿವರವನ್ನುಒದಗಿಸುತ್ತದೆ.

ADVERTISEMENT

ರೈಲು ಸಂಚಾರದಿಂದಾಗಿ ಬ್ರಿಟಿಷರ ವ್ಯಾಪಾರ ಶರವೇಗದಲ್ಲಿ ಸಾಗಿದರೆ, ದನಕರುಗಳು, ಕುದುರೆ, ಕತ್ತೆ, ಕಾಲುನಡಿಗೆ ಮೂಲಕ ಸಂಚರಿಸುತ್ತಿದ್ದ ಬಂಜಾರರ ವ್ಯಾಪಾರಕ್ಕೆ ಭಾರಿ ಹಿನ್ನಡೆಯಾಗತೊಡಗುತ್ತದೆ. ಜೊತೆಗೆ ವ್ಯಾಪಾರಕ್ಕೆಂದು ಹೊರಗಿನಿಂದ ಬಂದು ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದ್ದ ಬ್ರಿಟಿಷರು ನಾನಾ ರೀತಿಯ ಕಠಿಣ ಕಾಯ್ದೆ ಕಾನೂನು ಗಳನ್ನು ತಂದು ಬಂಜಾರರ ಮೇಲೆ ನಿರ್ಬಂಧ ಹೇರಿ ಅವರ ಗೋಮಾಳದ ಜಮೀನು ವ್ಯವಸಾಯದ ಭೂಮಿಯನ್ನು ಕಿತ್ತುಕೊಳ್ಳುವುದರ ಮೂಲಕ ಅವರ ಸರ್ವನಾಶಕ್ಕೆ ಕಾರಣರಾಗುತ್ತಾರೆ.

ಇದರಿಂದ ನೊಂದು ರೊಚ್ಚಿಗೆದ್ದ ಬಂಜಾರರು ಸೇವಾಲಾಲರ ನೇತೃತ್ವದಲ್ಲಿ ಹೈದ್ರಾಬಾದ್ ನಿಜಾಮನಿಗೂ, ದೆಹಲಿಯ ಸುಲ್ತಾನನಿಗೂ ತಮಗೆ ಬ್ರಿಟಿಷರಿಂದ ಆಗುತ್ತಿರುವ ಅನ್ಯಾಯ ಕುರಿತು ದೂರು ಸಲ್ಲಿಸುತ್ತಾರೆ. ಆದರೆ ನ್ಯಾಯ ಸಿಗದಾಗ ಅನ್ಯಮಾರ್ಗವಿಲ್ಲದೆ ಸೇವಾಲಾಲರ ವೀರಪಡೆ ನಿಜಾಮನ ಹಾಗೂ ಸುಲ್ತಾನನ ಭಾರಿ ಸೈನ್ಯವನ್ನು ಎದುರಿಸಿ ಜಯಶಾಲಿಯಾಗುತ್ತದೆ. ಇದರಿಂದ ಸೇವಾಲಾರ ಕೀರ್ತಿ ದೇಶದ ಮೂಲೆ ಮೂಲೆಗೂ ಹರಡಿ, ತಮಗಾಗಿ ಹೋರಾಡಿದ ಆ ವೀರ ಸೇನಾನಿಗೆ ಸಂತನೆಂಬ ಬಿರುದು ನೀಡಿ ಗೌರವಿಸುತ್ತದೆ. ಅದರ ಸೂಚಕವಾಗಿ ಪ್ರತಿ ತಾಂಡದಲ್ಲಿಯೂ ಸೇವಾಲಾಲನ ಮಠ(ಮಠ್)ವಿರುವುದನ್ನು ಇಂದಿಗೂ ಕಾಣಬಹುದಾಗಿದೆ.

ಇವೆಲ್ಲಕ್ಕೂ ಸಾಕ್ಷಿಯಾಗಿ ಸೇವಾಲಾಲ ರಿಗೆ ನಿಜಾಮರು ಸನ್ಮಾನಿಸಿದ ಸಂದರ್ಭದ ಅತ್ಯಮೂಲ್ಯ ಕಾಣಿಕೆಗಳು ದೆಹಲಿ, ಹೈದರಾಬಾದ್, ಜೈಪುರ, ರಾಜಾಸ್ಥಾನ, ಲಾಹೊರ್ ಮುಂತಾದ ರಾಜ್ಯಗಳ ಮ್ಯೂಜಿಯಂಗಳಲ್ಲಿ ಇಂದಿಗೂ ನೋಡಬಹುದಾಗಿದೆ.

ಸೇವಾಲಾಲ್ ತನ್ನ ಜನರಿಗೆ ನೀಡಿದ ಕಟ್ಟಕಡೆಯ ಸಂದೇಶ: ಮದ್ಯಪಾನ ಮಾಡಬೇಡಿ, ಕಳ್ಳತನ ಮಾಡಬೇಡಿ, ಪ್ರಾಮಾಣಿಕತೆ ಬಿಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.