ADVERTISEMENT

ಜಾಗತಿಕ ವಿದ್ಯಮಾನವಾಗಿ ಡಾ. ಬಿ.ಆರ್. ಅಂಬೇಡ್ಕರ್: ಶೋಷಣೆಯ ವಿರುದ್ಧ ಏಕಾಂಗಿ ಹೋರಾಟ

ಡಾ.ಅರುಣ್ ಜೋಳದ ಕೂಡ್ಲಿಗಿ
Published 6 ಡಿಸೆಂಬರ್ 2025, 11:04 IST
Last Updated 6 ಡಿಸೆಂಬರ್ 2025, 11:04 IST
<div class="paragraphs"><p>ಡಾ. ಬಿ.ಆರ್. ಅಂಬೇಡ್ಕರ್</p></div>

ಡಾ. ಬಿ.ಆರ್. ಅಂಬೇಡ್ಕರ್

   

ಎಕ್ಸ್ ಚಿತ್ರ

ಕೊರೆವ ಚಳಿಯಲ್ಲೂ 1956ರ ಡಿಸೆಂಬರ್ 6ರ ಬೆಳಗ್ಗೆ ಬೋಧಿ ಸತ್ವ ಬಾಬಾ ಸಾಹೇಬ ಅಂಬೇಡ್ಕರ್ ನಮ್ಮನ್ನು ಅಗಲಿದರು ಎನ್ನುವ ಸುದ್ದಿ ದೇಶದ ದಲಿತ ದಮನಿತರ ಮೈನಡುಗಿಸಿ ಬೆವರುವಂತೆ ಮಾಡಿತ್ತು. ಆ ದಿನದ ತಲ್ಲಣದ ಒಂದು ತಂತು ಪ್ರತಿ ಡಿಸೆಂಬರ್ ಆರರಂದು ದಮನಕ್ಕೆ ಒಳಗಾದ ಎಲ್ಲರ ಎದೆಯೊಳಗೂ ಹಾದುಹೋಗುತ್ತದೆ.

ADVERTISEMENT

ಹಿಂದೆ ಇದೇ ತಿಂಗಳು 19 ದಿನದ ನಂತರ (1927ರ ಡಿಸೆಂಬರ್ 25 ರಂದು) ಡಾ.ಅಂಬೇಡ್ಕರ್ ಮಹಾಡ್ ಸತ್ಯಾಗ್ರಹದಲ್ಲಿ ಮನುಸ್ಮೃತಿಯನ್ನು ಸುಟ್ಟ ಖಾವಿಗೆ ಎಲ್ಲರೂ ವೈಚಾರಿಕ ಅರಿವಿನ ಬಿಸಿ ಕಾಯಿಸಿಕೊಂಡು, ಬಾಬಾ ಸಾಹೇಬರ ಬೌದ್ಧಿಕ ಎಚ್ಚರದ ಜತೆ ಪಯಣಿಸಲು ಆರಂಭಿಸುತ್ತಾರೆ. ಹೀಗೊಂದು ಸಾಂಕೇತಿಕ ಪುನರಾವರ್ತನೆ ತಿರುಗುತ್ತಲೆ ಇದೆ. ಬಾಬಾ ಸಾಹೇಬರ ಬದುಕು ಮತ್ತು ಹೋರಾಟಗಳ ಬಗ್ಗೆ ಮೊದಲಿಗೆ ಅಧ್ಯಯನ ಮಾಡಿದ ಪಾಶ್ಚಾತ್ಯ ವಿದ್ವಾಂಸೆ ಎಲೀನರ್ ಜೆಲಿಯಟ್ ಹೇಳುವಂತೆ, ‘ಡಾ.ಅಂಬೇಡ್ಕರ್ ಅವರು ಅಗಲಿದ ನಂತರ ಅವರ ಜೀವಿತ ಅವಧಿಗಿಂತ ಹೆಚ್ಚಾಗಿ ಭಾರತದ ಹಲವು ಕ್ಷೇತ್ರಗಳಲ್ಲಿ ಬಹುದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ’ ಎನ್ನುತ್ತಾರೆ.

ಈಚೆಗೆ ನವಂಬರ್ 26ರ ಸಂವಿಧಾನ ಸಮರ್ಪಣಾ ದಿನದಂದು ಪ್ಯಾರಿಸ್‌ನ ಯುನೆಸ್ಕೋ ಪ್ರಧಾನ ಕಚೇರಿಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ 40 ದೇಶಗಳ ಪ್ರತಿನಿಧಿಗಳು ಆಗಮಿಸಿದ್ದರು. ಇದೇ ನವಂಬರ್ 30ರಂದು ವಿಯೆಟ್ನಾಂ ನ ಹೋಚಿಮ್ಹಿನ್ ನಗರದಲ್ಲಿ ಬೌದ್ಧರು ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ ಬಾಬಾ ಸಾಹೇಬರನ್ನು ಬೋಧಿಸತ್ವ ಎಂದು ಗೌರವಿಸಿದರು. ಒಂದನೆಯದು ಜಾಗತಿಕವಾಗಿ ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಮತ್ತು ಶಾಂತಿ ಸಂವಹನ ಸಾಧಿಸುವ ಉದ್ದೇಶವುಳ್ಳ ಸಂಸ್ಥೆ ಯುನೆಸ್ಕೋ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಮೂಲಕ ಜಾಗತಿಕವಾಗಿ ಶಿಕ್ಷಣ, ವಿಜ್ಞಾನದ ಅರಿವಿನ ಸಂಕೇತ ಎಂಬುದನ್ನು ಹೇಳುವ ಉದ್ದೇಶ ಹೊಂದಿರಬೇಕು. ಅಂತೆಯೇ ಬೌದ್ಧರ ನಾಡಾದ ವಿಯೆಟ್ನಾಂ ಆಧುನಿಕ ನವಯಾನದ ಭೋದಿಸತ್ವನ ವೈಚಾರಿಕತೆಯನ್ನು ಮನಗಾಣಲು ಸಾಂಕೇತಿಸಿರಬೇಕು. ಈ ಎರಡು ಕಳೆದ ತಿಂಗಳು ಘಟಿಸಿದ ವಿದ್ಯಮಾನಗಳಾಗಿವೆ. ಇವುಗಳು ಡಾ.ಬಾಬಾ ಸಾಹೇಬರು ಜಾಗತಿಕವಾಗಿ ಹೊಸ ಹುಟ್ಟು ಪಡೆಯುತ್ತಿರುವುದರ ಕುರುಹುಗಳಾಗಿವೆ.

ಕರ್ನಾಟಕ ಸರಕಾರ 2017ರಲ್ಲಿ `ಕ್ವೆಸ್ಟ್ ಫಾರ್ ಇಕ್ವಿಟಿ: ರಿಕ್ಲೇಮಿಂಗ್ ಸೋಷಿಯಲ್ ಜಸ್ಟೀಸ್ ರೀ ವಿಜಿಟಿಂಗ್ ಅಂಬೇಡ್ಕರ್’ ಎನ್ನುವ ಮುಖ್ಯ ವಿಷಯವನ್ನು ಆಧರಿಸಿ ಅಂತರರಾಷ್ಟ್ರೀಯ ಸೆಮಿನಾರನ್ನು ಆಯೋಜಿಸಿತ್ತು. ಈ ಸೆಮಿನಾರಿಗೆ ಅರವತ್ತಕ್ಕಿಂತ ಹೆಚ್ಚಿನ ದೇಶಗಳ ಅಂತರರಾಷ್ಟ್ರೀಯ ವಿದ್ವಾಂಸರುಗಳು ಆಯಾ ದೇಶಗಳ ಸಾಮಾಜಿಕ ಹೋರಾಟಗಳ ಮೇಲೆ ಡಾ.ಅಂಬೇಡ್ಕರ್ ಅವರ ಪ್ರಭಾವ ಮತ್ತು ತಮ್ಮ ದೇಶಗಳ ಸಾಮಾಜಿಕ ಸಮತೆಯ ಹೋರಾಟಗಾರರ ಜತೆಗಿನ ತೌಲನಿಕ ವಿಶ್ಲೇಷಣೆ ಮಾಡಿದ್ದರು. ಈ ಸೆಮಿನಾರಿನಲ್ಲಿ ಮಂಡನೆಯಾದ ಆಯ್ದ ವಿದ್ವತ್ ಪೂರ್ಣ ಸಂಶೋಧನ ಲೇಖನಗಳನ್ನು ಕೂಡಿಸಿ ಆಕಾಶ್ ಸಿಂಗ್ ರಾಥೋರ್, ‘ಡಾ.ಬಿ.ಆರ್.ಅಂಬೇಡ್ಕರ್: ಕ್ವೆಸ್ಟ್ ಫಾರ್ ಜಸ್ಟೀಸ್’ ಹೆಸರಲ್ಲಿ ಐದು ಸಂಪುಟಗಳನ್ನು ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ನಿಂದ 2024ರಲ್ಲಿ ಪ್ರಕಟಿಸಿದ್ದಾರೆ. ರಾಜಕೀಯ ನ್ಯಾಯ, ಸಾಮಾಜಿಕ ನ್ಯಾಯ, ಕಾನೂನು ಮತ್ತು ಆರ್ಥಿಕ ನ್ಯಾಯ, ಲಿಂಗ ಮತ್ತು ಜನಾಂಗಿಕ ನ್ಯಾಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ನ್ಯಾಯ ಎನ್ನುವ ಐದು ಸಂಪುಟಗಳಲ್ಲಿ ಜಗತ್ತಿನ 59 ವಿದ್ವಾಂಸರು ಈ ಎಲ್ಲಾ ವಿದ್ಯಮಾನಗಳನ್ನು ಜಾಗತಿಕ ನೆಲೆಯಲ್ಲಿ ಅಂಬೇಡ್ಕರ್ ಚಿಂತನೆಗಳ ಜತೆ ಮುಖಾಮುಖಿ ಮಾಡಿದ್ದಾರೆ. ಈ ಐದೂ ಸಂಪುಟಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸುವ ಯೋಜನೆ ಚಾಲ್ತಿಯಲ್ಲಿದೆ. ಇದು ಜಾಗತಿಕ ಜ್ಞಾನ ಮತ್ತು ದಮನಿತರ ಹಕ್ಕೊತ್ತಾಯಗಳ ವ್ಯಾಪ್ತಿಯಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟದ ಮರುಹುಟ್ಟಿನ ಸಾಂಕೇತವಾಗಿದೆ.

ಪ್ರೊ.ವಲೇರಿಯನ್ ರೋಡ್ರಿಗಸ್ ಅವರ ‘ಅಂಬೇಡ್ಕರ್ ಪೊಲಿಟಿಕಲ್ ಫಿಲಾಸಫಿ’ (2024) ಪುಸ್ತಕದಲ್ಲಿ ಡಾ.ಅಂಬೇಡ್ಕರ್ ಕೇವಲ ರಾಜಕೀಯ ನಾಯಕರು ಮಾತ್ರವಲ್ಲ, ನೈತಿಕ ತತ್ವಜ್ಞಾನಿಯೂ ಕೂಡ ಎಂದಿದ್ದಾರೆ. ಪ್ರಾತಿನಿಧ್ಯ, ಅಧಿಕಾರ, ಪ್ರಜಾಪ್ರಭುತ್ವ, ಅಂತರರಾಷ್ಟ್ರೀಯತೆಯ ಕುರಿತಾದ ಅವರ ಆಲೋಚನೆಗಳು ಜಗತ್ತಿನ ಯಾವುದೇ ಸಮಾಜದಲ್ಲಿ ಅಂಚಿನಲ್ಲಿರುವ ಜನರ ಸಂಗಾತಿಗಳಾಗಿವೆ ಎಂದು ವಿಶ್ಲೇಷಿಸುತ್ತವೆ.

ಆಕಾಶ್ ಸಿಂಗ್ ರಾಥೋರ್ ಕೃತಿ 'ಬಿಕಮಿಂಗ್ ಬಾಬಾ ಸಾಹೇಬ' ಕೃತಿಯಲ್ಲಿ ಜಗತ್ತಿನ ವಿದ್ವತ್ ಲೋಕ ಅಂಬೇಡ್ಕರ್ ಅವರ ಚಿಂತನೆಗಳನ ಜತೆ ಏಕೆ ಮುಖಾಮುಖಿಯಾಗುತ್ತಿದೆ ಎನ್ನುವುದನ್ನು ವಿವರಿಸುತ್ತ, ಡಾ. ಬಾಬಾ ಸಾಹೇಬರ ಆಲೋಚನೆಗಳು ಬಹುಶಿಸ್ತೀಯ ನೆಲೆಯಲ್ಲಿವೆ ಒಂದು ಸಂಗತಿಯನ್ನು ಬಹುಶಿಸ್ತುಗಳ ಮೂಲಕ ಹಲವು ಕೋನಗಳಲ್ಲಿ ವಿಶ್ಲೇಷಿಸುತ್ತಾರೆ. ಹೀಗೆ ಹಲವು ಜ್ಞಾನಶಾಖೆಗಳ ಕಣ್ಣೋಟದಲ್ಲಿ ವಿವರಿಸುವ ಬಾಬಾ ಸಾಹೇಬರ ಚಿಂತನೆ ಜಾಗತಿಕ ವಿದ್ವಾಂಸರಿಗೆ ಮಾರ್ಗದರ್ಶಿಯಾಗಿ ಪ್ರೇರಣೆಯಾಗಿದೆ ಎನ್ನುತ್ತಾರೆ.

ಆನಂದ್ ತೇಲ್ತುಂಬ್ಡೆ ಅವರ ಈಚಿನ ಬಹುಚರ್ಚಿತ ‘ಐಕನೋಕ್ಲಾಸ್ಟ್’ (2024) ಕೃತಿಯಲ್ಲಿ ಜಗತ್ತಿನ ಚಳವಳಿಗಾರರು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗೆಗೆ ಬೆರಗುಗೊಂಡಿರುವುದು ಯಾವ ಕಾರಣಕ್ಕೆ ಎಂಬುದನ್ನು ವಿಶ್ಲೇಷಿಸುತ್ತಾರೆ. ಆಪ್ರಿಕನ್ ಅಮೇರಿಕನ್ಸ್ ನಡೆಸಿದ ವರ್ಣಬೇಧ ಮತ್ತು ಜನಾಂಗೀಯ ಶೋಷಣೆಯ ವಿರುದ್ಧದ ಹೋರಾಟವನ್ನು ಅನೇಕ ಮಹಾನ್ ನಾಯಕರುಗಳು ನಾಯಕತ್ವ ವಹಿಸಿ ಯಶಸ್ವಿಗೊಳಿಸಿದರು. ಆದರೆ ಈ ಜನಾಂಗೀಯ ಶೋಷಣೆಯ ಹೋರಾಟದಷ್ಟೇ ಬಹಳ ಮುಖ್ಯವಾದ ಭಾರತದಲ್ಲಿನ ಜಾತಿ ಶೋಷಣೆಯ ವಿರುದ್ಧದ ಹೋರಾಟದ ನಾಯಕತ್ವವನ್ನು ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ ಏಕಾಂಗಿಯಾಗಿ ನಿರ್ವಹಿಸಿದರು ಎನ್ನುವುದಾಗಿದೆ ಎನ್ನುತ್ತಾರೆ. ಹೀಗೆ ಬಾಬಾ ಸಾಹೇಬರು ತಮ್ಮ ತತ್ವ ಸಿದ್ಧಾಂತ ಹೋರಾಟಗಳ ಮೂಲಕ ಜಾಗತಿಕವಾಗಿ ಮರುಹುಟ್ಟು ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.