ADVERTISEMENT

ಬಿಆರ್‌ಐ: ಚೀನಾದ ಶಕ್ತಿಪ್ರದರ್ಶನ

ಈ ಯೋಜನೆ ಪುನಃ ವೇಗ ಪಡೆದಿರುವ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಎರಡು ಗುಂಪುಗಳು ಪ್ರಶ್ನೆ ಎತ್ತಿವೆ

ಕೀತ್ ಬ್ರಾಡ್ಶರ್
Published 29 ಜನವರಿ 2020, 6:27 IST
Last Updated 29 ಜನವರಿ 2020, 6:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ವಿಶ್ವದ ಅನೇಕ ಕಡೆ ಬಂದರುಗಳನ್ನು, ರೈಲು ಮಾರ್ಗಗಳನ್ನು, ದೂರಸಂಪರ್ಕ ಜಾಲವನ್ನು ನಿರ್ಮಿಸಿ, ಆ ಮೂಲಕ ಚೀನಾದ ರಾಜಕೀಯ ಶಕ್ತಿಯನ್ನೂ ಹೆಚ್ಚಿಸುವ ಯೋಜನೆಯು ಬಲ ಕಳೆದುಕೊಂಡಂತೆ ಒಂದು ವರ್ಷದ ಹಿಂದೆ ಭಾಸವಾಗಿತ್ತು. ಆದರೆ, ಬಿಆರ್‌ಐ (ಬೆಲ್ಟ್‌ ಆ್ಯಂಡ್ ರೋಡ್ ಇನಿಷಿಯೇಟಿವ್) ಹೆಸರಿನ ಈ ಯೋಜನೆ ಈಗ ಮತ್ತೆ ಶಕ್ತಿ ಪಡೆದುಕೊಂಡಿದೆ.

ವ್ಯಾಪಾರ ಮತ್ತು ರಾಜಕೀಯ ಜಗತ್ತಿನಲ್ಲಿ ಚೀನಾ ಪಡೆಯುವ ಲಾಭಕ್ಕೆ ತಾವು ಬೆಲೆ ತೆರಬೇಕಾದೀತು ಎಂದು ಪಾಶ್ಚಿಮಾತ್ಯ ದೇಶಗಳ ಅಧಿಕಾರಿಗಳು ಹಾಗೂ ಕಂಪನಿಗಳು ಮತ್ತೆ ಎಚ್ಚರಿಕೆ ನೀಡಿವೆ. ಕಳೆದ ವರ್ಷದ 11 ತಿಂಗಳ ಅವಧಿಯಲ್ಲಿ ಚೀನಾದ ಕಂಪನಿಗಳು ಅಂದಾಜು ₹ 9 ಲಕ್ಷ ಕೋಟಿ ಮೊತ್ತದ ಬಿಆರ್‌ಐ ಗುತ್ತಿಗೆಗಳಿಗೆ ಸಹಿ ಮಾಡಿವೆ. ಇದು 2018ರ ಇದೇ ಅವಧಿಗೆ ಹೋಲಿಸಿದರೆ ಶೇಕಡ 41ರಷ್ಟು ಹೆಚ್ಚು ಎಂದು ಚೀನಾದ ವಾಣಿಜ್ಯ ಸಚಿವಾಲಯ ಹೇಳಿದೆ. ನಿರ್ಮಾಣ ಕಾರ್ಯ ಕೈಗೊಳ್ಳುವ ಮತ್ತು ಸಲಕರಣೆಗಳನ್ನು ಪೂರೈಸುವ ಗುತ್ತಿಗೆಯು ಚೀನಾದ ದೊಡ್ಡ ಕಂಪನಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದೆ. ಈ ಕಾರ್ಯದಲ್ಲಿ ತೊಡಗಿಕೊಳ್ಳುವವರು ಚೀನಾದ ಕುಶಲ ಕಾರ್ಮಿಕರು, ಹಣ ಬರುವುದು ಚೀನಾದ ಬ್ಯಾಂಕ್‌ಗಳಿಂದ. ಈ ಯೋಜನೆಗಳು ಸ್ಥಳೀಯವಾಗಿಯೂ ಉದ್ಯೋಗ ಸೃಷ್ಟಿಸಬಹುದು.

ಚೀನಾವು ವಿವಿಧ ರಾಷ್ಟ್ರಗಳ ಒಕ್ಕೂಟವೊಂದನ್ನು ಕಟ್ಟುತ್ತಿದೆ, ಆ ದೇಶಗಳು ಚೀನಾದ ಉತ್ಪನ್ನಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚು, ಆ ದೇಶಗಳು ಚೀನಾದ ಸರ್ವಾಧಿಕಾರಿ ರಾಜಕೀಯ ವ್ಯವಸ್ಥೆಯ ಪರ ಒಲವು ತೋರಬಹುದು ಎಂಬ ಆತಂಕ ಅಮೆರಿಕದ್ದು. ಬಿಆರ್‌ಐ ಪುನಃ ಚುರುಕು ಪಡೆದಿರುವ ಕಾರಣ ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟು ಹೆಚ್ಚುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತೆ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಅಮೆರಿಕ ನಡುವಣ ಹಲವು ವಿವಾದಗಳಲ್ಲಿ ಬಿಆರ್‌ಐ ಪ್ರಸ್ತಾಪವಾಗುತ್ತದೆ. ಮಲೇಷ್ಯಾ, ಶ್ರೀಲಂಕಾ, ಪಾಕಿಸ್ತಾನ ಮತ್ತು ಇತರ ಕೆಲವೆಡೆಗಳಲ್ಲಿನ ಬಿಆರ್‌ಐ ಯೋಜನೆಗಳನ್ನು ಸ್ಥಳೀಯ ಅಧಿಕಾರಿಗಳು ‘ದುಬಾರಿ’ ಎಂದು ಟೀಕಿಸಿದ್ದರು. ಇದಾದ ನಂತರ ಚೀನಾ ಅಧಿಕಾರಿಗಳು 2018ರಲ್ಲಿ ಯೋಜನೆಯಿಂದ ಹಿಂದೆ ಸರಿದಿದ್ದರು. ಈಗ ಬಿಆರ್‌ಐ ಅಡಿ ಹೊಸ ಗುತ್ತಿಗೆಗಳನ್ನು ನೀಡಲಾಗಿದೆ.

ADVERTISEMENT

ಚೀನಾವನ್ನು ವಿಶ್ವಮಟ್ಟದ ಆರ್ಥಿಕ ಶಕ್ತಿಯನ್ನಾಗಿಸಿದ ಉತ್ತಮ ದರ್ಜೆಯ ಮೂಲಸೌಕರ್ಯ ಹೊಂದುವ ಅವಕಾಶವನ್ನು ಬಿಆರ್‌ಐ ಯೋಜನೆಯು, ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ನೀಡುತ್ತದೆ ಎಂದು ಚೀನಾದ ಅಧಿಕಾರಿಗಳು ಹಿಂದಿನಿಂದಲೂ ಹೇಳುತ್ತಿದ್ದಾರೆ. ಈ ಯೋಜನೆಯ ಅಡಿ, ನಿರ್ಮಾಣ ಕಾಮಗಾರಿಗಳಿಗೆ ಚೀನಾದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಅಷ್ಟೂ ಹಣ ನೀಡುತ್ತವೆ. ಕಾಮಗಾರಿಗಳನ್ನು ಚೀನಾದ ಕಂಪನಿಗಳೇ ನಿಭಾಯಿಸುತ್ತವೆ. ಹಣ ಪಡೆದ ದೇಶಗಳು ನಂತರ ಅದನ್ನು ಹಿಂದಿರುಗಿಸಬೇಕು.

ಬಿಆರ್‌ಐ ಯೋಜನೆಯು ಇನ್ನೊಬ್ಬರನ್ನು ಶೋಷಿಸುವಂಥದ್ದು ಎಂದು ಅಮೆರಿಕ ಮತ್ತು ಪಶ್ಚಿಮ ಯುರೋಪಿನ ಅಧಿಕಾರಿಗಳು ಹಿಂದಿನಿಂದಲೂ ಟೀಕಿಸುತ್ತ ಬಂದಿದ್ದಾರೆ. ಅಭಿವೃದ್ಧಿಶೀಲ ದೇಶಗಳ ಕೆಲವು ಅಧಿಕಾರಿಗಳೂ ಇದನ್ನು ಈಚಿನ ವರ್ಷಗಳಲ್ಲಿಒಪ್ಪಿಕೊಳ್ಳುತ್ತಿದ್ದಾರೆ. 2018ರಲ್ಲಿ, ಸಾಲವನ್ನು ಮರುಪಾವತಿಸಲು ಆಗದ ಶ್ರೀಲಂಕಾ ತನ್ನ ಪ್ರಮುಖ ಬಂದರನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು. ಮಲೇಷ್ಯಾವು ತನ್ನಲ್ಲಿನ ದುಬಾರಿ ಯೋಜನೆಯೊಂದನ್ನು ಸ್ಥಗಿತಗೊಳಿಸಿತು.

ನಂತರ, ಟೀಕೆಗಳಿಗೆ ಸ್ಪಂದಿಸಲು ಚೀನಾದ ನಾಯಕರೂ ಮುಂದಾದರು. ಚೀನೀ ಬ್ಯಾಂಕುಗಳು ದೊಡ್ಡ ಪ್ರಮಾಣದಲ್ಲಿ ನೀಡುತ್ತಿರುವ ಸಾಲದ ಬಗ್ಗೆ ಚೀನಾ ಉಪಾಧ್ಯಕ್ಷ ಲೀ ಹೆ ಅವರು 2018ರಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಇದಾದ ನಂತರ ಚೀನಾದ ಹಣಕಾಸು ನಿಯಂತ್ರಕರು ಚೀನಾದ ಬ್ಯಾಂಕ್‌ಗಳು ದೇಶದೊಳಗೆ ಹಾಗೂ ವಿದೇಶಗಳಲ್ಲಿ ನೀಡುವ ಸಾಲದ ಮೇಲೆ ನಿಯಂತ್ರಣ ತಂದರು. ಬಿಆರ್‌ಐ ಅಡಿ ಹೊಸ ಗುತ್ತಿಗೆಗಳ ಸಂಖ್ಯೆ ಕಡಿಮೆ ಆಯಿತು. ಬಡ ದೇಶಗಳಿಗೆ ಸಾಲ ನೀಡುವಾಗ ಎರಡು ಬಾರಿ ಆಲೋಚಿಸಿ ಎಂದು ಹಣಕಾಸು ನಿಯಂತ್ರಕರು, ಬ್ಯಾಂಕ್‌ಗಳಿಗೆ ಸೂಚಿಸಿದರು. ಚೀನಾದ ಹಿರಿಯ ನಾಯಕರು ಈ ಯೋಜನೆಯ ಬಗ್ಗೆ ಉಲ್ಲೇಖಿಸುವುದನ್ನೇ ನಿಲ್ಲಿಸಿಬಿಟ್ಟರು!

ಆದರೆ, ಸಾಲದ ಕೊರತೆಯು 2018ರಲ್ಲಿ ಚೀನಾದ ಅರ್ಥವ್ಯವಸ್ಥೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಕುಸಿತ ತಂದಿಟ್ಟಿತು. ಹಣಕಾಸು ನಿಯಂತ್ರಕರು ತಮ್ಮ ಪಥ ಬದಲಿಸಿದರು. ಇದರಿಂದಾಗಿ, ದೇಶದೊಳಗಿನ ಮೂಲಸೌಕರ್ಯ ಹಾಗೂ ಬಿಆರ್‌ಐ ಸಂಬಂಧಿತ ಮೂಲಸೌಕರ್ಯ ಯೋಜನೆಗಳಿಗೆ ಸಾಲ ಕೊಡುವುದು ಮತ್ತೆ ಆರಂಭವಾಗಿದೆ. 2018ರ ಕೊನೆಯ ವಾರಗಳಲ್ಲಿ ಗುತ್ತಿಗೆಗೆ ಸಹಿ ಹಾಕುವ ಕೆಲಸಗಳು ಆರಂಭವಾದವು.

ಬಿಆರ್‌ಐ ಯೋಜನೆ ಪುನಃ ವೇಗ ಪಡೆದಿರುವ ವಿಚಾರವಾಗಿ ಪಾಶ್ಚಿಮಾತ್ಯ ದೇಶಗಳನ್ನು ಪ್ರತಿನಿಧಿಸುವ ಎರಡು ಗುಂಪುಗಳು ಈಚೆಗೆ ಪ್ರಶ್ನೆಗಳನ್ನು ಎತ್ತಿವೆ. ಯುರೋಪಿನ ಹಡಗು ಕಂಪನಿಗಳಿಗೆ, ಸಾಫ್ಟ್‌ವೇರ್‌ ಸೇವೆ ನೀಡುವವರಿಗೆ ಮತ್ತು ಇತರ ವಾಣಿಜ್ಯೋದ್ಯಮಗಳಿಗೆ ಸ್ಪರ್ಧಿಸುವುದು ಕಷ್ಟವಾಗುವಂತೆ ಚೀನಾದ ದೂರಸಂ‍ಪರ್ಕ ಜಾಲ ಮತ್ತು ಬಂದರುಗಳನ್ನು ನಿರ್ಮಿಸಲಾಗಿದೆ ಎಂದು ಐರೋಪ್ಯ ವಾಣಿಜ್ಯ ಒಕ್ಕೂಟವು ವರದಿಯೊಂದರಲ್ಲಿ ಹೇಳಿದೆ. ಬಿಆರ್‌ಐನ ಬಹುತೇಕ ಗುತ್ತಿಗೆಗಳು ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪಾಲಾಗಿವೆ. ಈ ಗುತ್ತಿಗೆಗಳನ್ನು ತಮ್ಮದಾಗಿಸಿಕೊಳ್ಳಲು ತನ್ನ ಸದಸ್ಯ ಕಂಪನಿಗಳಿಗೆ ಬಹುತೇಕ ಸಾಧ್ಯವೇ ಇರಲಿಲ್ಲ ಎಂದೂ ಒಕ್ಕೂಟ ಹೇಳಿದೆ.

ವಾಷಿಂಗ್ಟನ್‌ನ ‘ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ’ಯು (ಐಐಎಫ್‌) ಜಾಗತಿಕ ಸಾಲದ ಬಗ್ಗೆ ಇನ್ನೊಂದು ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಸಂಸ್ಥೆಯು ‘ಬಿಆರ್‌ಐ ಭಾಗವಾಗಿರುವ ಹಲವು ಬಡ ರಾಷ್ಟ್ರಗಳ ಸಾಲದ ಹೊರೆ ಹೆಚ್ಚಾಗಿದೆ’ ಎಂದು ಹೇಳಿದೆ. ಬಿಆರ್‌ಐ ಅಡಿ ನೀಡುವ ಸಾಲದ ಮೇಲಿನ ಬಡ್ಡಿಯ ಪ್ರಮಾಣವು ವಿಶ್ವ ಬ್ಯಾಂಕ್‌ನಂತಹ ಸಂಸ್ಥೆಗಳು ವಿಧಿಸುವ ಬಡ್ಡಿಗಿಂತ ಹೆಚ್ಚು ಎಂದು ಐರೋಪ್ಯ ಅಂತರರಾಷ್ಟ್ರೀಯ ಗುತ್ತಿಗೆದಾರರ ಒಕ್ಕೂಟವು ಎಚ್ಚರಿಕೆ ನೀಡಿತ್ತು.

ಕಿತ್ ಬ್ರಾಡ್ಶರ್

ಬಿಆರ್‌ಐ ಯೋಜನೆಯ ಅಡಿ ದೂರಸಂಪರ್ಕ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿರುವ ಕುರಿತು ಯುರೋಪಿನ ವಾಣಿಜ್ಯ ಸಂಘಟನೆಗಳು ತಡವಾಗಿ ಗಮನನೀಡಲಾರಂಭಿಸಿದವು. ಹಲವು ಅಭಿವೃದ್ಧಿಶೀಲ ದೇಶಗಳ ರಾಷ್ಟ್ರೀಯ ದೂರಸಂಪರ್ಕ ಜಾಲವನ್ನು ನಿರ್ಮಿಸಿದ್ದು ಚೀನಾದ ಹುವಾವೆ ಅಥವಾ ಜೆಡ್‌ಟಿಇ ಕಂಪನಿಗಳು. ಈ ಎರಡು ಕಂಪನಿಗಳು ಬಿಆರ್‌ಐನ ದೊಡ್ಡಭಾಗೀದಾರರೂ ಹೌದು. ಕೀನ್ಯಾದಲ್ಲಿ ದೂರಸಂಪರ್ಕ ದತ್ತಾಂಶ ಕೇಂದ್ರ ನಿರ್ಮಿಸುವ ಗುತ್ತಿಗೆಯನ್ನು ಹುವಾವೆ ಪಡೆದಿದೆ. ಇಂತಹ ಮಾರುಕಟ್ಟೆಗಳಲ್ಲಿ ಯುರೋಪಿನ ಕಂಪನಿಗಳಿಗೆ ತಂತ್ರಾಂಶ ಅಥವಾ ಯಂತ್ರಾಂಶವನ್ನು ಮಾರಾಟ ಮಾಡುವುದು ಕಷ್ಟವಾಗುವಂತೆ ದೂರಸಂಪರ್ಕ ಜಾಲ ರೂಪಿಸಲಾಗಿದೆ ಎಂಬುದನ್ನು ಯುರೋಪಿನ ಒಕ್ಕೂಟ ಕಂಡುಕೊಂಡಿದೆ.

ಆದರೆ, ಯುರೋಪಿನ ದೂರಸಂಪರ್ಕ ಉಪಕರಣ ಮಾರುಕಟ್ಟೆಯು ಹೆಚ್ಚು ಮುಕ್ತವಾಗಿದೆ ಎಂದು ಒಕ್ಕೂಟ ಹೇಳುತ್ತದೆ. ಉದಾಹರಣೆಗೆ, ಹುವಾವೆ ಕಂಪನಿಯು ಜರ್ಮನಿ ಮತ್ತು ಬ್ರಿಟನ್‌ಗೆ ಸಲಕರಣೆಗಳನ್ನು ಒದಗಿಸುವ ಯತ್ನದಲ್ಲಿದೆ. ದೂರಸಂಪರ್ಕ ಕ್ಷೇತ್ರದ ಜೊತೆಯಲ್ಲೇ, ಬಿಆರ್‌ಐ ಕುರಿತಾಗಿ ಪಾಶ್ಚಿಮಾತ್ಯ ಜಗತ್ತು ಹೊಂದಿರುವ ಬಹುದೊಡ್ಡ ಕಳವಳವು ಚೀನಾ ನಿರ್ಮಿಸುತ್ತಿರುವ ಬಂದರುಗಳಿಗೆ ಸಂಬಂಧಿಸಿದೆ. ಈ ಬಂದರುಗಳು ಈಗ ಹಿಂದೂ ಮಹಾಸಾಗರವನ್ನು ಸುತ್ತುವರಿದು, ಆಫ್ರಿಕಾದ ಪಶ್ಚಿಮ ಕರಾವಳಿ ಹಾಗೂ ಮೆಡಿಟರೇನಿಯನ್ಸಮುದ್ರದವರೆಗೆ ವ್ಯಾಪಿಸಿವೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.