ADVERTISEMENT

ವಿಶ್ಲೇಷಣೆ: ಎಲ್ಲಿದೆ ಧರ್ಮ, ಜಾತಿಗಳೇ ಎಲ್ಲ!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
   
ಮಾನವೀಯ ಸಾಧ್ಯತೆಗಳನ್ನು ಒಂದು ಧರ್ಮ ಬಿಟ್ಟುಕೊಟ್ಟಾಗ, ಅದು ಜೀವನವಿಧಾನದ ರೂಪದಲ್ಲಷ್ಟೇ ಉಳಿದುಕೊಳ್ಳುತ್ತದೆ. ಈ ಅರಿವನ್ನು ನೇಪಥ್ಯಕ್ಕೆ ಸರಿಸಿ, ಜಾತಿಯ ವಿಕಾರಗಳನ್ನು ಧರ್ಮದ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ವಿಕಾರಗಳು ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಕುರಿತಾದ ಚರ್ಚೆಗಳಲ್ಲಿ ಸ್ಪಷ್ಟವಾಗಿ ಅನಾವರಣಗೊಂಡಿವೆ.

ಇತ್ತೀಚಿನ ದಿನಗಳಲ್ಲಿ ಭಾಷಾ ಬಳಕೆಯಲ್ಲಿ ಅಪ ಪ್ರಯೋಗಗಳು ಹೆಚ್ಚಾಗಿವೆ. ಇವುಗಳಿಂದಾಗಿ ಪದಗಳ ಮೂಲಾರ್ಥಗಳು ಕಳೆದುಹೋಗಿವೆ. ಬದಲಾಗಿ ಅನುಕೂಲಸಿಂಧು ಅರ್ಥಗಳು ಪ್ರಯೋಗದಲ್ಲಿವೆ. ಇದರಿಂದಾಗಿ ಮೂಲ ಪದಗಳ ಅರ್ಥಗಳ ಜೊತೆಗೆ, ಅರ್ಥದ ಆವರಣ ಕಟ್ಟಿಕೊಡಬೇಕಾಗಿದ್ದ ವಾಸ್ತವಿಕ ಸತ್ಯದ ಸ್ವರೂಪವೇ ಕಳೆದುಹೋಗಿದೆ. ಇವುಗಳಲ್ಲಿ ಉದಾಹರಣೆಗೆ, ಎರಡು ಪದಗಳನ್ನು ಇಲ್ಲಿ ವಿವೇಚನೆಗೆ ಎತ್ತಿಕೊಳ್ಳಬಹುದು. ಒಂದು, ‘ಧರ್ಮ’ ಎಂಬ ಪದ. ಎರಡು, ‘ಮಾತೃಭಾಷೆ’ ಎಂಬ ಪದ.

ಧರ್ಮವನ್ನು ಕುರಿತು ಪಂಪ ಕವಿ ಒಂದು ಮಾತು ಹೇಳಿದ್ದಾನೆ: ‘ಅರಿವಂ ಪೊಸೆಯಿಸುವುದು ಧರ್ಮಂ’. ಅಂದರೆ, ಮನುಷ್ಯನ ಅರಿವನ್ನು ಅರ್ಥಾತ್ ವಿವೇಕವನ್ನು ಪ್ರಜ್ಞೆಯನ್ನು ಕಾಲೋಚಿತ ವಾಗಿ ಹೊಸತು ಮಾಡುವುದೇ ಧರ್ಮ. ಧರ್ಮ ನಿಂತ ನೀರಲ್ಲ, ಅದು ಹರಿಯುವ ನದಿ. ಭೂವೈಲಕ್ಷಣ್ಯಕ್ಕೆ ಅನುಗುಣವಾಗಿ ಅದರ ಪಾತ್ರ ಬದಲಾಗುತ್ತದೆ. ಹಾಗೆಯೇ ಭೂಮಿಯ ಸಾರ ಸಾಂದ್ರತೆಗೆ ಅನುಗುಣವಾಗಿ ಅದರ ಸ್ವಾದಗುಣ ಸಂಪನ್ನವಾಗುತ್ತದೆ. ಆದರೆ, ನೀರಿನ ಮೂಲ ಸ್ವರೂಪ ಮಾತ್ರ ಮೂಲ ಸ್ವರೂಪವಾಗಿಯೇ ಅರ್ಥಾತ್ ಗುಣವಾಗಿಯೇ ಉಳಿದಿರುತ್ತದೆ. ಹಾಗೆಯೇ ಧರ್ಮದ ನಿಜ ಸ್ವರೂಪ. ಯಾವುದೇ ಧರ್ಮದ ಮೂಲ ಆಶಯ ಮಾನವೀಯತೆ, ಜೀವಪರತೆ ಹಾಗೂ ಸಮಾನಶೀಲಭಾವದಲ್ಲಿ ನಿಸರ್ಗ ಧರ್ಮಕ್ಕೆ ಎರವಾಗದಂತೆ ಸಕಲ ಜೀವಗಳ ಸಂರಕ್ಷಣೆ. ಇದು ಇರದ ಯಾವುದೇ ಧರ್ಮವೂ ಅದು ಧರ್ಮವೆನ್ನಿಸಿಕೊಳ್ಳುವುದಿಲ್ಲ; ಅದು ಜೀವನವಿಧಾನ ಅರ್ಥಾತ್ ಮತ ಎನ್ನಿಸಿಕೊಳ್ಳುತ್ತದೆ.

ಮತವೆಂದರೆ ಅಭಿಪ್ರಾಯ. ಅಭಿಪ್ರಾಯಗಳಲ್ಲಿ ಭೇದವಿರುತ್ತದೆ. ಧರ್ಮಗಳಲ್ಲಿ ಸಮಾನಶೀಲತೆ ಇರುತ್ತದೆ. ಅಂದರೆ, ಆಚರಣೆಗಳಲ್ಲಿ ಭಿನ್ನತೆ ಇದ್ದರೂ ಆಶಯ ಮೂಲದಲ್ಲಿ ಜೀವಸಂರಕ್ಷಣೆಯ ಸಮಾನಶೀಲ ಸಂವೇದನೆ ಧರ್ಮದ ಪ್ರಾಣದ್ರವ್ಯವಾಗಿರುತ್ತದೆ. ಆ ಕಾರಣಕ್ಕಾಗಿಯೇ ‘ಅರಿವಂ ಪೊಸೆಯಿಸುವುದು ಧರ್ಮ’ ಎಂದು ಪಂಪ ಹೇಳಿರುವುದು.

ADVERTISEMENT

ಜಾತಿಗಳು ವರ್ಣಗಳಿದ್ದಂತೆ. ವರ್ಣ ಎಂದರೆ ಬಣ್ಣ. ಬಣ್ಣದ ಮೂಲ ಸ್ವರೂಪ ಅದರ ಅಸ್ಮಿತೆ. ಬಣ್ಣಗಳಲ್ಲಿ ಏಳು ಬಣ್ಣಗಳನ್ನು ಪ್ರತ್ಯೇಕವಾಗಿ ಗುರುತಿಸಿರುವುದು ಅವುಗಳ ಮೂಲ ಸ್ವರೂಪದ ಆಧಾರದ ಮೇಲೆಯೇ. ಬಣ್ಣ ಬಣ್ಣಗಳಲ್ಲಿ ಸಂಕರ ಏರ್ಪಟ್ಟಾಗ ಮತ್ತೊಂದು ಬಣ್ಣವೇ ಕಾಣಬಹುದು. ಅದು ಆ ಏಳು ಬಣ್ಣಗಳಲ್ಲಿ ಯಾವುದರ ಸಂಕರ ಸಾಂದ್ರತೆಯಲ್ಲಿ ಪ್ರಬಲವಾಗಿರುತ್ತದೋ ಅದರ ಸಮೀಪದ ಅಥವಾ ಅದರ ಹತ್ತಿರದ ತೆಳು ಬಣ್ಣವಾಗಿ ಗುರುತಿಸಲಾಗುತ್ತದೆ. ನಮ್ಮ ಚಾತುರ್ವರ್ಣ ಪದ್ಧತಿಯ ಜಾತಿ ವಿಂಗಡಣೆಗಳು ಆನಂತರದ ಜಾತಿ ಸಂಕರಗಳ ಒಳಜಾತಿಗಳು ಈ ಮಾದರಿಯಲ್ಲಿ ರಚಿತವಾದವುಗಳು. ಹೀಗಾಗಿ, ನಮ್ಮ ದೇಶದಲ್ಲಿ ಜಾತಿಗಳು ಪ್ರಧಾನವಾಗಿವೆ. ಅವುಗಳೊಳಗೆ ಒಳಜಾತಿಗಳು ಜಾತಿಪ್ರಜ್ಞೆಯ ವಿಕೇಂದ್ರೀಕರಣ ಒಳಭೇದಗಳಾಗಿ ತಮ್ಮ ಭಿನ್ನತೆಯನ್ನು ತೆಳು ಅಥವಾ ಸಾಂದ್ರ ಸ್ವರೂಪದಲ್ಲಿ ಉಳಿಸಿಕೊಂಡಿವೆ.

ಈ ದೇಶದಲ್ಲಿ ಹುಟ್ಟಿದ ಪದ್ಧತಿಗಳು, ಪಂಥಗಳು, ಮತಗಳು ಎಲ್ಲವೂ ಈ ಜಾತಿವ್ಯವಸ್ಥೆಯನ್ನು ದಾಟಲಾರದವುಗಳಾಗಿ ಅವು ತತ್ತ್ವಗಳಾಗಿ, ಸಿದ್ಧಾಂತಗಳಾಗಿ ಪ್ರತ್ಯೇಕವಾಗಿ ಉಳಿದಿವೆ. ಎಲ್ಲ ವರ್ಣಗಳನ್ನು ಅರ್ಥಾತ್ ಜಾತಿಗಳನ್ನು ನುಂಗಿಯೂ ಅವು ಅವುಗಳನ್ನು ಅರಗಿಸಿಕೊಳ್ಳಲಾಗದೆ ‘ಬಾಯಲ್ಲಿ ಬ್ರಹ್ಮ ಬಾಳಲ್ಲಿ ಲೊಳಲೊಟ್ಟೆ’ಗಳಾಗಿ ದ್ವಯಗಳಾಗಿವೆ. ಆದ್ದರಿಂದಲೇ ಇಂದು ಇವುಗಳನ್ನು ಒಂದೇ ಛತ್ರಿಯಡಿಯಲ್ಲಿ ತರುವ ಪ್ರಯತ್ನದ ಫಲವಾಗಿ ಹಿಂದೂ ಎಂಬ ಪದ ಚಾಲ್ತಿಗೆ ಬಂದಿದೆ. ಅದೂ ಚಾತುರ್ವರ್ಣದ ಹಿತ ಸಾಧನೆಯ ಜಾತಿಹಿತಕ್ಕಾಗಿ ಬಳಕೆಗೆ ಬಂದದ್ದು ಮತ್ತು ಧರ್ಮ ಎಂದು ನಂಬಿಸಲಾದದ್ದು. ಆದರೆ, ಅದು ಎಲ್ಲಾ ಭಿನ್ನತೆಗಳನ್ನು ಉಸಿರಾಡುತ್ತಿರುವ ಕಾರಣದಿಂದ ಅದು ಧರ್ಮವಲ್ಲ. ಧರ್ಮದ ಮೂಲ ಆಶಯಕ್ಕೆ ಅದು
ತೀರಾ ವ್ಯತಿರಿಕ್ತಭಾವದ ನಡೆ–ನುಡಿ ಸಿದ್ಧಾಂತ ಆಗಿರುವುದರಿಂದ, ಅದನ್ನು ಧರ್ಮ ಎಂದು ಕರೆಯಲಾಗುವುದಿಲ್ಲ. ಜಾತಿವ್ಯವಸ್ಥೆಯನ್ನು ಒಪ್ಪಿಕೊಂಡ ಒಂದು ಜೀವನಪದ್ಧತಿ ಎಂದು ಕರೆಯಬಹುದು.

ಇಂಥ ಜೀವನಪದ್ಧತಿಯಲ್ಲಿ ಉಸಿರಾಡುತ್ತಿರುವ ಕೆಲವು ಜಾತಿಗಳು ಅವಮಾನ, ಅಸಮಾನತೆಯ ನೋವಿನ ಕಾರಣದಿಂದ ಅದರಿಂದ ಬಿಡುಗಡೆ ಬಯಸಿ ಹೊರಗಿನಿಂದ ಬಂದ ಬೇರೆ ಧರ್ಮಗಳಿಗೆ ಮತಾಂತರವಾಗುತ್ತವೆ. ಈ ಮತಾಂತರ ಸ್ವಇಚ್ಛೆ ಯಿಂದ ಆಗಿರಬಹುದು ಅಥವಾ ಪ್ರಲೋಭನೆಗೆ ಒಳಗಾಗಿ ಆಗಿರಬಹುದು. ಅಥವಾ ಈ ಹಿಂದೆ ಆಗಿರುವಂತೆ ಹಲವು ಬಗೆಯ ರಾಜಕೀಯ, ಸಾಮಾಜಿಕ ಸಂಘರ್ಷಗಳ ಕಾರಣದಿಂದ ಆಗಿರಬಹುದು. ಆದರೆ, ಬೇರೆ ಧರ್ಮಕ್ಕೆ ಹೋದರೂ ಇಲ್ಲಿಯ ವಾಸನೆಯಿಂದ ಮುಕ್ತವಾಗಲಾರದ ಮೂಲ ವರ್ಣ/ಜಾತಿಯ ನಂಟು ಅವರನ್ನು ಹಿಂಬಾಲಿಸುತ್ತದೆ. ಅದರಿಂದಾಗಿಯೇ ಅಲ್ಲಿಯೂ ಈಗಾಗಲೇ ಇರುವ ಜಾತಿಗಳ ಜೊತೆಗೆ ಧರ್ಮದ ಹೆಸರಿಗೆ ತಾವು ಬಂದ ಮೂಲದ ಜಾತಿ/ವರ್ಣದ ಗುರುತನ್ನು ಉಳಿಸಿಕೊಂಡೇ ಉಸಿರಾಡುತ್ತಾರೆ.

‘ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು’ ಎಂಬ ಗಾದೆಯ ಪರಿಸ್ಥಿತಿ ಮತಾಂತರಗೊಂಡ ಬಹುತೇಕರದ್ದಾಗಿರುತ್ತದೆ. ಆದರೆ, ಅದು ಸಮುದ್ರವಲ್ಲ; ಸಮುದ್ರದ ಭ್ರಮೆಯನ್ನು ಬಿತ್ತಿದ್ದ ಧರ್ಮ. ಆ ಧರ್ಮಕ್ಕೆ ಹೋದರೂ ಅದೂ ಮೊಳಕಾಲುದ್ದದ್ದೇ ಹೊರತು ಸಮುದ್ರ ಸದೃಶವಲ್ಲ ಎಂಬ ಅರಿವು ಅವರಿಗೆ ಕಾಡಿದಂತೆ ಬದುಕು ಎದುರಾಗುತ್ತದೆ. ಅತ್ತ ಅದನ್ನು ಕಟ್ಟಿಕೊಳ್ಳಲಾರದ, ಇತ್ತ ಇದನ್ನು ಬಿಟ್ಟುಕೊಡಲಾಗದ ಎಡಬಿಡಂಗಿ ಬದುಕು ಈ ದೇಶದ ಸಾಮಾಜಿಕ ವಾಸ್ತವವಾಗುತ್ತಿದೆ. ಹೀಗಾಗಿಯೇ, ದಲಿತ ಕ್ರಿಶ್ಚಿಯನ್, ಪಿಂಜಾರ ಮುಸ್ಲಿಂ, ಗಾಣಿಗ ಲಿಂಗಾಯತ, ದಲಿತಸಿಖ್ ಇತ್ಯಾದಿ ಹೊಸ ಜಾತಿಗಳ ಸೃಷ್ಟಿ ನಿರ್ಮಾಣವಾಗಿದೆ. ಇದೆಲ್ಲ ನಮ್ಮ ವರ್ಣನೀತಿಯ ಹೊಸ ವಿದ್ಯಮಾನವೇ ಆದ ಬೆಳವಣಿಗೆಯೇ ಹೊರತು ಬೇರೆ ಅಲ್ಲ. ಹೀಗೆ ಹೊರಗಣ್ಣಿಗೆ ಧರ್ಮದ ಆವರಣ ಕಾಣುತ್ತದೆ, ಒಳಹೊಕ್ಕು ನೋಡಿದರೆ ಹಳೆಯ ಗಾಯದ ಮಾಯದ ನೋವು ಅಲ್ಲಿ ಇನ್ನೂ ತೀವ್ರತರವಾಗಿರುವುದು ಅರಿವಿಗೆ ಬರುತ್ತದೆ.

ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪದ ಬಾಯಿಯ ಬೇಗೆಯಲ್ಲಿ ಅವರು ಬಳಲುತ್ತಿರುತ್ತಾರೆ. ಇದು ಈ ದೇಶದ ಕಥೆಯಾದರೆ, ಬೇರೆ ದೇಶಗಳಲ್ಲಿ ಹುಟ್ಟಿದ ಧರ್ಮಗಳೂ ಅವುಗಳ ಬೆಳವಣಿಗೆಯ ಸ್ವರೂಪದಲ್ಲಿ ನಾಯಿಬಾಲಗಳೇ ಆಗಿವೆ. ಪ್ರತಿಯೊಂದು ಧರ್ಮದೊಳಗಿರುವ ಪ್ರಧಾನ ಪಂಗಡಗಳು, ಅವುಗಳೊಳಗಿರುವ ಒಳಪಂಗಡಗಳು ಏನನ್ನು ಹೇಳುತ್ತಿವೆ? ಪಂಗಡಗಳು ಜಾತಿಗೆ ಪರ್ಯಾಯವಾಗಿ ಬಳಸುತ್ತಿರುವ ಪದಗಳೇ ಹೊರತು, ಅವುಗಳ ನಡವಳಿಕೆಯೆಲ್ಲ ಜಾತಿಭಿನ್ನತೆಯ ಭಾಗ ರೂಪಗಳೇ ಆಗಿವೆ. ಇದಕ್ಕೆ ಯಾವ ಧರ್ಮವೂ ಹೊರತಾಗಿಲ್ಲ. ಹೀನಾಯಾನ–ಮಹಾಯಾನ; ಷಿಯಾ–ಸುನ್ನಿ; ಕ್ಯಾಥೊಲಿಕ್–ಪ್ರಾಟೆಸ್ಟೆಂಟ್ ಇತ್ಯಾದಿಗಳೆಲ್ಲಾ ಏನನ್ನು ಹೇಳುತ್ತಿವೆ. ಈ ದಾರಿಯಲ್ಲಿ ನಡೆದಾಗ ಧರ್ಮದ ಮೂಲ ಸ್ವರೂಪ ಎಲ್ಲೋ ಎಂದೋ ಕಳೆದುಹೋಗಿರುವುದು ವಾಸ್ತವ ಸತ್ಯ. ದುರಂತವೆಂದೆರೆ ಇಂದೂ ‘ಧರ್ಮ’ ಎಂಬ ಪದವನ್ನು ಪದೇ ಪದೇ ನಾವು ಬಳಸುತ್ತಿರುವುದು ದುರಂತ ವ್ಯಂಗ್ಯದಂತೆ ಕಾಣುತ್ತಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿಜನಗಣತಿ) ವಿರೋಧಿಸುತ್ತಿರುವ ಬಲಿಷ್ಠ ಸಮುದಾಯಗಳು ಒಳಪಂಗಡಗಳನ್ನು ಉದಾರತೆ ಯಲ್ಲಿ ತಬ್ಬಿಕೊಂಡಂತೆ ಮಾತನಾಡುತ್ತಿರುವುದು ಯಾರ ಹಿತಕ್ಕಾಗಿ? ಜಾತಿಗಳೊಳಗೆ ಇರುವ ಅಸಮಾನತೆ ಹಾಗೂ ಅಮಾನವೀಯತೆಯನ್ನು ಹೋಗಲಾಡಿಸಲಾರದ ‘ಜಗದ್ಗುರುಗಳು’ ನಿಜವಾದ ನೆಲೆಯಲ್ಲಿ ಅರಿವಂ ಪೊಸೆಯಿಸುವ ಧರ್ಮದ ಜಗದ್ಗುರುಗಳೇ? ಅಥವಾ ಜಾತಿಯೊಳಗೂ, ಜಾತಿಗಳೊಳಗೂ ಹಿತಾಸಕ್ತ ಪಂಗಡಗಳ ಹಿತ ಕಾಯುವ ಜಗದ್ಗುರುಗಳೋ? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಮಾನವೀಯ ಹೊಣೆಗಾರಿಕೆ.

ಈ ದೇಶದಲ್ಲಿ ಇಂದೂ ಅಸಮಾನತೆ ತಾಂಡವವಾಡುತ್ತಿದೆ. ಅವಮಾನ, ಹಸಿವು, ಕ್ರೌರ್ಯ, ಹಿಂಸೆ, ಅತ್ಯಾಚಾರಗಳ ಮಾರಣಹೋಮ ಇಂದಿಗೂ ದಿನದಿನದ ಸುದ್ದಿಯಾಗಿವೆ. ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ–ಸಂಘಟನೆ–ಹೋರಾಟ ಎಂಬ ಸೂತ್ರಶಕ್ತಿ ಅವಕಾಶವಾದಿ ರಾಜಕಾರಣದಿಂದ ಹಾದಿ ತಪ್ಪಿದೆ. ‘ಅರಿವಂ ಪೊಸೆಯಿಸುವ ಧರ್ಮ’ ಇಲ್ಲವಾಗಿದೆ. ‘ಬಾಯಿ ಇದ್ದವನು ಬರದಲ್ಲಿ ಬದುಕಿದ’ ಎಂಬಂತೆ ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಜಾತಿಗಳು ಬೊಬ್ಬೆ ಹೊಡೆದು ಬಡಜಾತಿಗಳನ್ನು ಅಲೆಮಾರಿ ಸಮುದಾಯಗಳನ್ನು ಬಾಯಿ ಮುಚ್ಚಿಸುತ್ತಿವೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಯಾರಿಗೆ ದೂರಲಿ ಕೂಡಲ ಸಂಗಮದೇವಾ?

ಇನ್ನು ಮಾತೃಭಾಷೆಯ ವಿಚಾರ, ಶಿಕ್ಷಣದ ಭಾಷೆ ಮಾತೃಭಾಷೆಯೇ ಆಗಬೇಕು ಎಂಬುದು ದುರ್ಬಳಕೆಯ ಪ್ರಯೋಗವಾಗಿದೆ. ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡಿರುವ ಲಾಭಬಡುಕರಿಗೆ ಇದೊಂದು ವ್ಯವಹಾರದ ಭಾವನಾತ್ಮಕ ಅಸ್ತ್ರವಾಗಿದೆ. ಎಷ್ಟು ಭಾಷೆಗಳಿಗೆ ಲಿಪಿಗಳಿವೆ? ಕರ್ನಾಟಕದಲ್ಲೇ ಲಿಪಿ ಇಲ್ಲದ ಮಾತೃಭಾಷೆಗಳೆಷ್ಟಿವೆ? ಭಾಷಾವಾರು ಪ್ರಾಂತ ರಚನೆಯ ಹಿನ್ನೆಲೆಯಲ್ಲಿ ಶಿಕ್ಷಣವನ್ನು ರಾಜ್ಯಭಾಷೆ, ಆಡಳಿತ ಭಾಷೆ, ಪ್ರಾದೇಶಿಕ ಭಾಷೆಗಳ ನೀತಿಸಂಹಿತೆಯಲ್ಲಿ ವ್ಯಾಖ್ಯಾನಿಸುವ ನಿರ್ವಚಿಸುವ ಅಗತ್ಯವಿದೆ. ಅದು ಬಿಟ್ಟು ಮಾತೃಭಾಷೆ ಎಂಬ ಅವಾಸ್ತವಿಕ, ಅವೈಜ್ಞಾನಿಕ ಪದವನ್ನು ಶಿಕ್ಷಣಕ್ಕೆ ಲಗತ್ತಿಸಿರುವುದು ರಾಜ್ಯಭಾಷೆಗಳಿಗೆ ಮಾಡುತ್ತಿರುವ ವಂಚನೆ, ಒಕ್ಕೂಟ ನೀತಿಗೆ ಮಾಡುತ್ತಿರುವ ದ್ರೋಹ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅಸಾಂವಿಧಾನಿಕ ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.