ಚಾತುರ್ವರ್ಣ ವ್ಯವಸ್ಥೆಯ ಕಾರಣದಿಂದಾಗಿ ಒಡೆದು ಛಿದ್ರಗೊಂಡಿರುವ ಮಾನವ ಸಮಾಜದಲ್ಲಿ ಸಮಾನತೆ ಎಂಬುದು ಕನಸಾಗಿದೆ. ಶಿಕ್ಷಣ, ಸಂಪನ್ಮೂಲ, ಭೂಒಡೆತನ, ರಾಜಕೀಯ ಅಧಿಕಾರ ಎಲ್ಲವುಗಳಿಂದಲೂ ವಂಚನೆಗೆ ಈಡಾಗಿರುವ ದನಿ ಇಲ್ಲದ ಸಣ್ಣಪುಟ್ಟ ಸಮುದಾಯಗಳ ದುಃಖ–ದುಮ್ಮಾನಗಳನ್ನು ಕೇಳುವವರೇ ಇಲ್ಲ. ಸರ್ವರ ಏಳಿಗೆಯನ್ನೂ ಹಾರೈಸಿ ಬಂದ ಸಂವಿಧಾನವನ್ನು ಈಗಿನ ಆಡಳಿತಗಳು ವಿರೂಪಗೊಳಿಸುತ್ತಿವೆ. ಯಾವುದೋ ಕಾಲಘಟ್ಟದಲ್ಲಿ ಮಾಡಿದ ಜಾತಿ ಜನಗಣತಿಯನ್ನು ಈಗಲೂ ಪರಿಗಣನೆಗೆ ತೆಗೆದುಕೊಂಡು ಸಾಮಾಜಿಕ ನ್ಯಾಯವನ್ನು ನೀಡತೊಡಗಿರುವುದು ಪ್ರಜಾಪ್ರಭುತ್ವದ ವ್ಯಂಗ್ಯವೇ ಸರಿ.
ಉಂಡವನು ಉಂಡೇ ತೇಗಿದ, ಹಸಿದವನು ಹಸಿದೇ ಸತ್ತ ಎಂಬಂತೆ ಆಗಿರುವುದು ವಂಚಿತ ಸಮುದಾಯಗಳ ದುರಂತ. ಕರ್ನಾಟಕದಲ್ಲೇ 52 ಅಲೆಮಾರಿ ಸಮುದಾಯಗಳಿದ್ದು ಅವುಗಳಿಗೆ ಇನ್ನೂ ಸರಿಯಾದ ವಿಳಾಸವಿಲ್ಲ. ಹೇಳಿಕೊಳ್ಳುವುದಕ್ಕೆ ಊರಾಗಲೀ ವಾಸಿಸುವುದಕ್ಕೆ ಒಂದು ಸೂರಾಗಲೀ ಇರದ ಸಣ್ಣಪುಟ್ಟ ಸಮುದಾಯಗಳು ಶಿಕ್ಷಣ, ಆಶ್ರಯ, ಭೂಮಿ, ಉದ್ಯೋಗ, ಮತಾಧಿಕಾರ... ಎಲ್ಲವುಗಳಿಂದಲೂ ವಂಚಿತವಾಗಿವೆ. ಇದರ ಜತೆಗೆ ಅವರು ಬಹುನಾಮಿಗಳಾಗಿರುವುದರಿಂದ, ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಅವರನ್ನು ಕರೆಯುತ್ತಿರುವುದರಿಂದ, ನಾಗರಿಕ ಸಮಾಜ ಅವರ ಗಣತಿ ಮಾಡುವಾಗ ಅವೈಜ್ಞಾನಿಕ ಲೆಕ್ಕಾಚಾರಗಳಾಗುತ್ತವೆ. ಇದನ್ನು ಹೇಳಿಕೊಳ್ಳುವುದಕ್ಕೂ ಅವರಿಗೆ ಬಾಯಿ ಇಲ್ಲ, ಬಲ ಮೊದಲೇ ಇಲ್ಲ. ಇಂಥ ಸಮುದಾಯಗಳು ಇನ್ನೂ ಮುಖ್ಯವಾಹಿನಿಗೆ ಬಾರದೇ ಇರುವುದು ನಮ್ಮ ರಾಜಕೀಯ ಸ್ವಾತಂತ್ರ್ಯದ ಸೋಲು. ಏಕೆಂದರೆ, ಸಾಂಸ್ಕೃತಿಕವಾಗಿ ಬಲಿಷ್ಠಗೊಂಡಿರುವ ಜಾತಿಗಳು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಮ್ಮ ಜಹಗೀರು ಮಾಡಿಕೊಂಡಂತೆ ವರ್ತಿಸುತ್ತಿವೆ. ಮಠ-ಪೀಠಗಳು ಇದಕ್ಕೆ ತಾಳ ಹಾಕುತ್ತಾ ಪ್ರಜಾಪ್ರಭುತ್ವದಲ್ಲಿ ಜಾತೀಯತೆ, ಕೋಮುಪ್ರಜ್ಞೆ ಬೆಳೆಯುವುದಕ್ಕೆ ಕಾರಣವಾಗಿವೆ. ಹೀಗಾಗಿ, ಬಲಿಷ್ಠ ಜಾತಿಗಳ ಬೊಬ್ಬೆ, ಅಬ್ಬರ ಜಾಸ್ತಿಯಾಗಿ ಎಲ್ಲಾ ಜನಪರ ಯೋಜನೆಗಳು ಅಪವ್ಯಾಖ್ಯೆಗೆ ಈಡಾಗುತ್ತಿವೆ. ಸತ್ಯಸಂಗತಿ ಬೆಳಕಿಗೆ ಬಾರದೆ ಸಾಮಾಜಿಕ ನ್ಯಾಯ ಎಂಬುದು ಮಣ್ಣುಪಾಲಾಗಿದೆ.
ಜಾತಿ ವ್ಯವಸ್ಥೆಯ ಬಗ್ಗೆ ವೈಜ್ಞಾನಿಕ ದೃಷ್ಟಿಕೋನದ ಅಧ್ಯಯನ ನಡೆಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು, ಅಸಮಾನತೆ ತೊಲಗಬೇಕಾದರೆ ವಂಚನೆಗೆ ಒಳಗಾಗಿರುವ ಸಮುದಾಯಗಳು ಶಿಕ್ಷಣ- ಸಂಘಟನೆ- ಹೋರಾಟಕ್ಕೆ ತೊಡಗಬೇಕಾದ ಅಗತ್ಯದ ಕುರಿತು ಮಾತನಾಡಿದ್ದಾರೆ. ಅವರು ಹೇಳುವ ಸಂಘಟನೆಯ ಅರ್ಥ ಅಸಂಘಟಿತವಾಗಿ ಎಲ್ಲದರಿಂದಲೂ ವಂಚನೆಗೊಳಗಾಗಿರುವ ಸಮುದಾಯಗಳಿಗೆ ಅನ್ವಯಿಸುವ ಮಾತು. ದುರ್ಬಲರ, ವಂಚಿತರ ನೈತಿಕ ಹಕ್ಕಿನ ‘ಸಂಘಟನೆ’. ಅವರು ಸಂಘಟಿತರಾಗುವುದು ಜಾತಿಯ ವಿಷಬೀಜ ಬೆಳೆಸುವುದಕ್ಕಾಗಿ ಅಲ್ಲ; ಜಾತಿಯ ವಿಷದಿಂದ ಹೊರಬರುವುದಕ್ಕಾಗಿ. ಆದ್ದರಿಂದಲೇ ಅವರ ಸಂಘಟನೆಯ ಉದ್ದೇಶದ ಹಿಂದೆ ಶಿಕ್ಷಣವಿದೆ, ಮುಂದೆ ಹೋರಾಟವಿದೆ. ಈ ಹೋರಾಟದ ಗುರಿ ತಮ್ಮ ಹಕ್ಕನ್ನು ತಾವು ಪಡೆಯಬೇಕಾಗಿರುವುದೇ ಆಗಿದೆ. ಹೀಗಾಗಿ, ವಂಚಿತರಿಗೆ ಸಂಘಟನೆ ಎಂಬುದು ನೈತಿಕ ಹಕ್ಕಾದರೆ ಬಲಿಷ್ಠರಿಗೆ ಸಂಘಟನೆಯಾಗಲು ನೈತಿಕ ಅಧಿಕಾರ ಇರುವುದಿಲ್ಲ.
ಈ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಬಲಿಷ್ಠರು, ಉಳ್ಳವರು ಉದಾರಿಗಳಾಗಿ ವರ್ತಿಸಬೇಕಾದ ಅಗತ್ಯವಿದೆ. ದನಿ ಇಲ್ಲದವರ ಪರವಾಗಿ ಯೋಚಿಸುವ ಮಾತೃಪ್ರಜ್ಞೆ ಬೆಳೆಸಿಕೊಳ್ಳುವ ಅಗತ್ಯವಿದೆ. ಅದನ್ನು ಬಿಟ್ಟು ಜಾತಿಪ್ರಜ್ಞೆ ಮೆರೆಯುವುದು ಬಲಿಷ್ಠ ಜಾತಿಗಳು ತಮಗೆ ತಾವೇ ಮಾಡಿಕೊಳ್ಳುವ ಅವಮಾನ. ತಮ್ಮತಮ್ಮ ಜಾತಿಗಳಲ್ಲಿ ಹುಟ್ಟಿ, ಜಾತಿಪ್ರಜ್ಞೆಯಿಂದ ಬಿಡುಗಡೆಗೊಂಡು ಮಹಾ ಮಾನವತಾವಾದಿಗಳಾಗಿ ಬೆಳೆದ ನಾಡಿನ ಮಹಾಚೇತನಗಳಿಗೆ ಮಾಡುವ ಅವಮಾನ.
ಬಸವಣ್ಣನವರು ‘ಆನು ಹಾರುವನೆಂದಡೆ ಕೂಡಲಸಂಗಮದೇವ ನಗುವನಯ್ಯಾ’ ಎಂದು ಜಾತಿ ಶ್ರೇಷ್ಠತೆಯ ಬಗ್ಗೆ ನಾಚಿಕೆಪಟ್ಟುಕೊಂಡವರು. ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದಿಂದ ಬಿಡುಗಡೆಗೊಂಡು, ಅಸ್ಪೃಶ್ಯರ ಮನೆಯ ಮಗನಾದರು. ಹೀಗೆ ಅಪವರ್ಣೀಕರಣ ಪ್ರಜ್ಞೆಯಲ್ಲಿ ಮಹಾ ಮಾನವತಾವಾದಿಯಾದರು. ಇಂದು ಪ್ರಬಲ ಜಾತಿಗಳಿಗೆ ಬಸವಣ್ಣನವರು ಮಾದರಿಯಾಗಬೇಕು. ಜಾತ್ಯತೀತ ರಾಷ್ಟ್ರದಲ್ಲಿ ಬಲಿಷ್ಠ ಜಾತಿಗಳು ಬಸವಪ್ರಜ್ಞೆಯಿಂದ ಬಾಳಿದಾಗ ಮಾತ್ರ ಸಾಮಾಜಿಕ ನ್ಯಾಯ ಸಾಧಿತವಾಗುತ್ತದೆ. ಅಂದರೆ ಪ್ರಬಲ ಜಾತಿಗಳ ಸಂಘಟನೆಗಳಿಗೆ ಈ ದೇಶದಲ್ಲಿ ಜಾತಿಯ ಹೆಸರಿನಲ್ಲಿ ಸಂಘಟಿತವಾಗುವುದಕ್ಕೆ ಯಾವುದೇ ನೈತಿಕ ಅಧಿಕಾರ ಇರುವುದಿಲ್ಲ. ಇದು ಕಾನೂನಾತ್ಮಕ ಅವಕಾಶದ ಪ್ರಶ್ನೆಯಲ್ಲ, ಮಾನವಾಂತಃಕರಣದ ಬಸವಪ್ರಜ್ಞೆಯ ಉತ್ತರದಾಯಿತ್ವ. ಕುವೆಂಪು ಅವರು ಪ್ರತಿಪಾದಿಸಿದ ಬಡವರ ಏಳ್ಗೆಯ ಮನುಜಮತ ವಿಶ್ವಪಥದ ಉತ್ತರದಾಯಿತ್ವ. ಕುಲ ಕುಲ ಕುಲವೆಂದು ಬಡಿದಾಡದಿರಿ ಎಂದ ಕನಕದಾಸರ ಉತ್ತರದಾಯಿತ್ವ... ಇಂಥ ಉತ್ತರದಾಯಿತ್ವಕ್ಕೆ ಭಾಜನವಾಗದೇ ಹೋದಾಗ ಯಾವುದೇ ಬಲಿಷ್ಠ ಜಾತಿ ಸಂಘಟನೆಗಳಿಗೆ ಆ ಮಹಾನುಭಾವರ ಹೆಸರನ್ನು ಹೇಳುವ ನೈತಿಕ ಅಧಿಕಾರ ಇಲ್ಲದೇ ಹೋಗುತ್ತದೆ.
ನಮ್ಮ ಬಹುತೇಕ ರಾಜಕಾರಣಿಗಳು, ಸ್ವಾಮೀಜಿಗಳು, ಬುದ್ಧಿಜೀವಿಗಳು ಜಾತ್ಯತೀತ ಎಂಬ ಮಾತನ್ನು ಪದೇಪದೇ ಬಳಸುತ್ತಾರೆ. ಆದರೆ ಇವರೆಲ್ಲರೂ ಅದಕ್ಕೆ ವಿರುದ್ಧವಾಗಿ ಜಾತಿಯ ಕೂಪಮಂಡೂಕಗಳ ಸಂಘಟನೆಗಳು ಬೆಳೆಯುವುದಕ್ಕೆ ಬೆಂಬಲ ನೀಡುತ್ತಾರೆ. ಪ್ರಜಾಪ್ರಭುತ್ವ ಎಂಬುದು ಬಲಿಷ್ಠ ಜಾತಿಗಳ ಕೊಬ್ಬುವಿಕೆಗೆ ನೀರೆರೆಯುವುದಾದರೆ ಬಡಜಾತಿಗಳು, ಅಸಂಘಟಿತ ಜಾತಿಗಳ ಗೋಳನ್ನು ಕೇಳುವವರು ಯಾರು? ಈ ನೆಲೆಯಲ್ಲಿ ಜಾತಿ ಜನಗಣತಿ ಎಂಬುದು ಸಂವಿಧಾನಾತ್ಮಕ ತುರ್ತಿನ ಅಗತ್ಯವಾಗಿದೆ. ಇಂಥ ಅಗತ್ಯಪಾಲನೆಗೇ ಅಡ್ಡಬರುವ ದೊಡ್ಡ ಬಾಯಿಗಳಿಗೆ ವಿವೇಕ ಹೇಳುವವರಾರು? ವಿವೇಕ ಹೇಳಬೇಕಾದ ಶಾಸಕರು, ಸಂಸದರೇ ಜಾತಿ ಸಂಘರ್ಷಗಳಿಗೆ ಕುಮ್ಮಕ್ಕು ಕೊಡುತ್ತಿರುವಾಗ ಅವರ ನೈತಿಕ ನಡೆ ಪ್ರಶ್ನಾರ್ಹವಲ್ಲವೇ? ಒಂದೇ ಜಾತಿಯ ಶಾಸಕರು, ಸಂಸದರು ಒಂದೆಡೆ ಸೇರಿ, ಸಾಮಾಜಿಕ ನ್ಯಾಯದ ಪರವಾಗಿ ನಡೆಯುವ ಯಾವುದೇ ಕಾರ್ಯಕ್ರಮದ ವಿರುದ್ಧವಾಗಿ ಸಭೆ ನಡೆಸುವುದು ಸಂವಿಧಾನ ವಿರೋಧಿ ನಡೆಯಲ್ಲವೇ? ಜನತೆಗೆ ನೀತಿ ಹೇಳಬೇಕಾದ ಇವರೇ ನೀತಿಗೆಟ್ಟ ಸಂಘಟನೆಯಲ್ಲಿ ತೊಡಗಿದರೆ ಹೇಗೆ? ಸಂವಿಧಾನದ ಪ್ರಸ್ತಾವನೆಯನ್ನು ಪ್ರಮಾಣವಚನ ರೂಪದಲ್ಲಿ ಸಭೆ ಸಮಾರಂಭಗಳಲ್ಲಿ ಪಠಿಸುವುದಾದರೂ ಯಾಕೆ? ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?
ಜಾತಿ ಜನಗಣತಿಗೆ ಆದೇಶ ಹೊರಡಿಸುವಾಗ ಯಾವ ಶಾಸಕರು, ಸಚಿವರು ಬೆಂಬಲ ಸೂಚಿಸಿದ್ದರೋ ಅವರೇ ಅದರ ಬಿಡುಗಡೆಗೆ ಅಡ್ಡಿಯಾಗುವುದು ಎಷ್ಟು ಸರಿ? ಅದು ಪ್ರಕಟವಾಗುವ ಮುಂಚೆಯೇ ಊಹಾಪೋಹಗಳ ಗಣತಿ ಲೆಕ್ಕಾಚಾರಗಳನ್ನು ಮುಂದಿಡುತ್ತಾ ವಿರೋಧಿಸುವುದು ಪ್ರಜಾಸತ್ತಾತ್ಮಕ ನಡವಳಿಕೆಯೇ? ಈ ಎಲ್ಲ ಪ್ರಶ್ನೆಗಳೂ ನೇರವಾಗಿ ಜಾತಿಪ್ರಜ್ಞೆಯ ಹಿತಾಸಕ್ತಿಯನ್ನು ಪ್ರಶ್ನಿಸುತ್ತಿರುವುದರಿಂದ ಅವರ ಉದ್ದೇಶ ಬಯಲಾಗುತ್ತಿದೆ.
ಜಾತಿ ಜನಗಣತಿ ಎಂಬುದು ಬರೀ ಜಾತಿಗಳ ಜನಸಂಖ್ಯಾ ಬಾಹುಳ್ಯವನ್ನು ಪ್ರಮಾಣೀಕರಿಸುವ ಲೆಕ್ಕಾಚಾರದ ಗಣತಿಯಲ್ಲ. ಶತಶತಮಾನಗಳಿಂದಲೂ ವಂಚನೆಗೊಳಗಾಗಿಯೂ ಸ್ವಾತಂತ್ರ್ಯಾನಂತರದ 78 ವರ್ಷಗಳ ಪ್ರಜಾಪ್ರಭುತ್ವದ ಅಡಿಯಲ್ಲಿಯೂ ಅದೇ ಅಸಮಾನತೆ, ಶೋಷಣೆ ಮುಂದುವರಿಯುತ್ತಿರುವುದನ್ನು ತಪ್ಪಿಸುವ ಪ್ರಾಥಮಿಕ ಪ್ರಯತ್ನವಿದು.
ಬಹುನಾಮಿಗಳಾಗಿರುವ ಅಲೆಮಾರಿ ಸಮುದಾಯಗಳ ಸಾಮ್ಯಪದನಾಮಧಾರಿಗಳಾಗಿರುವ ಪ್ರಬಲ ಜಾತಿಗಳ ಒಳಪಂಗಡದವರು ಈಗಿರುವ ಬಡ ಅಲೆಮಾರಿ, ದಲಿತ ಜಾತಿಗಳ ಮೀಸಲಾತಿಯ ತಟ್ಟೆಗೂ ಕೈಹಾಕಿ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸುವಲ್ಲಿ ಈ ಜಾತಿ ಜನಗಣತಿ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಈ ಎಲ್ಲಾ ಕಟು ವಾಸ್ತವಗಳನ್ನು ಬದಿಗಿರಿಸಿ, ಸಂಖ್ಯೆಗಳನ್ನು ಮಾತ್ರ ತೆಗೆದುಕೊಂಡು ಬೊಬ್ಬೆ ಹೊಡೆಯುವುದು ಎಷ್ಟು ಸರಿ? ಏನೂ ಇಲ್ಲದವರು, ಬಡವರು, ಇವರ ಜನಸಂಖ್ಯೆಯ ಸಂಖ್ಯೆಗಳಿರಲಿ ಬದುಕೇ ಲೊಳಲೊಟ್ಟೆಯಾಗಿರುವಾಗ ಇವರ ಬಗ್ಗೆ ಚಕಾರ ಎತ್ತದಿರುವ ಬಲಿಷ್ಠರ ಬೊಬ್ಬೆ ಅಸಾಧುವಷ್ಟೇ ಅಲ್ಲ, ಅಮಾನವೀಯ ಕೂಡ. ಏಕೆಂದರೆ ಯಾವುದೇ ಪ್ರಮಾಣಗಳ ಬಗ್ಗೆ ಮಾತನಾಡುವಾಗ ತಮ್ಮದನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದಷ್ಟೇ ಆದರೆ ಸಾಲದು, ಬೇರೆ ಸಮುದಾಯಗಳ ಜೊತೆಯಲ್ಲಿ ಸರ್ವರೀತಿಯಲ್ಲೂ ಹೋಲಿಸಿ ನೋಡುವ ವೈಜ್ಞಾನಿಕ ದೃಷ್ಟಿಕೋನ ಅವಶ್ಯವಾಗಿ ಬೇಕಾಗಿರುತ್ತದೆ.
ಇದು ಒಕ್ಕೂಟ ವ್ಯವಸ್ಥೆ. ಇಲ್ಲಿ ಸಾಮಾಜಿಕ ನ್ಯಾಯ ಎಂಬುದು ಸಂವಿಧಾನಬದ್ಧ ಹಕ್ಕು. ಮೀಸಲಾತಿ ಅದರ ಅನುಷ್ಠಾನ ಮಾರ್ಗ. ಆದರೆ ಮೀಸಲಾತಿ ಎಂದ ತಕ್ಷಣ ದಲಿತರ ನೆನಪು ತಂದುಕೊಂಡು ಗೇಲಿ ಮಾಡುವ ಧೋರಣೆ ಇನ್ನೂ ಮುಂದುವರಿದಿದೆ.
ಇಂತಹ ಎಲ್ಲ ಅನ್ಯಾಯಗಳನ್ನು ತಪ್ಪಿಸಿ ಕಿಂಚಿತ್ ಪ್ರಮಾಣದಲ್ಲಿಯಾದರೂ ದುರ್ಬಲರ ಏಳಿಗೆಗೆ ದಾರಿ ಮಾಡಿಕೊಡಲಿರುವ ಜಾತಿ ಜನಗಣತಿಯ ಬಗ್ಗೆ ಸಂವಿಧಾನಾತ್ಮಕವಾಗಿ ಚರ್ಚೆಗೆ ಅವಕಾಶ ಮಾಡಿಕೊಡುವುದು ಪ್ರತಿ ನಾಗರಿಕನ ಕರ್ತವ್ಯ ಹಾಗೂ ಪ್ರತಿ ಜಾತಿ ಸಂಘಟನೆಯ ಆದ್ಯಕರ್ತವ್ಯ.
ಸಂವಾದ ಪ್ರಜಾಪ್ರಭುತ್ವದ ಗುಣ. ಯಾವುದೇ ವರದಿಯನ್ನೂ ವಾದ-ಪ್ರತಿವಾದದ ನೆಲೆಯಲ್ಲಿ ಪರಾಮರ್ಶಿಸಬೇಕಾದದ್ದು ಶಾಸನಸಭೆಯ ಕರ್ತವ್ಯ. ಈ ಕರ್ತವ್ಯಕ್ಕೆ ಅಡ್ಡಗಾಲು ಹಾಕುವ ಯಾವುದೇ ನಡೆಯೂ ಅಸಾಂವಿಧಾನಿಕ ನಡೆ, ಪ್ರಜಾಸತ್ತಾತ್ಮಕವಲ್ಲದ ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.