ಕಾವೇರಿ ನಮ್ಮ ದೇಶದ ಪವಿತ್ರ ನದಿಗಳಲ್ಲಿ ಒಂದು. ‘ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂಬ ಶ್ಲೋಕ ಅನಾದಿ ಕಾಲದಿಂದಲೂ ಜನಪ್ರಿಯ. ಇಲ್ಲಿ ಪ್ರಸ್ತಾಪವಾಗಿರುವ ಸಪ್ತ ನದಿಗಳು ಅತ್ಯಂತ ಪವಿತ್ರ ಎಂದು ಹೆಸರಾಗಿವೆ. ಆದರೆ ಬಹುತೇಕ ಈ ಎಲ್ಲ ನದಿಗಳೂ ಇಂದು ಕಲುಷಿತವಾಗಿವೆ. ಇದು ಈ ನದಿಗಳಿಗೆ ಬಂದಿರುವ ದುರ್ದೆಸೆ.
ಈಗ ಕಾವೇರಿಯ ವಿಚಾರಕ್ಕೆ ಬರೋಣ. ತನ್ನ ಇಕ್ಕೆಲಗಳಲ್ಲೂ ಗುಡ್ಡ, ಬೆಟ್ಟ, ಪರ್ವತಗಳಿಂದ ಆವೃತವಾಗಿರುವ ಕಾವೇರಿ ನದಿಯ ಪರಿಸರ ರಮ್ಯ ಮನೋಹರವಾದದ್ದು. ನದಿಯ ಪಕ್ಕದ ಬೆಟ್ಟಗುಡ್ಡಗಳು ಪ್ರಕೃತಿದೇವಿಯ ಸೊಬಗಿಗೆ ಕಳಶಪ್ರಾಯದಂತಿವೆ. ಅವು ಯಥಾಸ್ಥಿತಿಯಲ್ಲಿ ಇದ್ದರೆ ಅಲ್ಲಿ ಜೈವಿಕ ವೈವಿಧ್ಯ ರೂಪುಗೊಳ್ಳುತ್ತದೆ. ಮುಂಗಾರು ಮಳೆ ಕಾಲಕಾಲಕ್ಕೆ ಇಳೆಯನ್ನು ತಣಿಸುತ್ತದೆ, ನದಿಯ ಹರಿವನ್ನು ಏಕತ್ರವಾಗಿಸುತ್ತದೆ. ನದಿಯ ಸುತ್ತಲಿನ ಪರಿಸರವು ಮಳೆಕಾಡು ಎಂದೇ ಸುಪ್ರಸಿದ್ಧ. ಪಶ್ಚಿಮಘಟ್ಟ ಪ್ರದೇಶದ ಜೀವನಾಡಿಯಾಗಿರುವ ಕಾವೇರಿ ನದಿ ಕೋಟ್ಯಂತರ ಜನರಿಗೆ ನೀರುಣಿಸುವ, ಕೃಷಿ, ನೀರಾವರಿಗೆ ಒದಗುವ ಮಹಾತಾಯಿ. ಹಾಗಾಗಿಯೇ ಜನಮಾನಸದಲ್ಲಿ ಆಕೆಗೆ ಪೂಜನೀಯ ಸ್ಥಾನವಿದೆ.
ಆದರೆ ನಾವೇನು ಮಾಡಿದ್ದೇವೆ? ನದಿಯ ಇಕ್ಕೆಲದ ಬೆಟ್ಟಗುಡ್ಡಗಳನ್ನು ಬಗೆಯುತ್ತಿದ್ದೇವೆ. ಕಲ್ಲುಕ್ವಾರಿ ಸೇರಿದಂತೆ ವಿವಿಧ ಬಗೆಯ ಗಣಿಗಾರಿಕೆ ನಡೆಸುತ್ತಿದ್ದೇವೆ. ನದಿಯ ಸ್ವಚ್ಛಂದ ಹರಿವಿಗೆ ಅಡ್ಡಿ ಮಾಡಿ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿದ್ದೇವೆ. ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳುತ್ತಲೇ ಬಂದಿದ್ದೇವೆ. ಕೆಆರ್‌ಎಸ್, ಹೇಮಾವತಿ, ಕಬಿನಿ, ಹಾರಂಗಿ, ತಾರಕ ಹೀಗೆ ಅನೇಕ ಅಣೆಕಟ್ಟೆಗಳ ಮೂಲಕ ನದಿಯ ಸರಾಗ ಹರಿವಿನ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದೇವೆ. ಇದಿಷ್ಟೇ ಸಾಲದು ಎಂಬಂತೆ ಉದ್ದಿಮೆಗಳಿಂದ ಹೊರಬರುವ ವಿಷಕಾರಿ ತ್ಯಾಜ್ಯವನ್ನೂ ಪರಿಷ್ಕರಿಸದೆ ನೇರವಾಗಿ ನದಿಗೆ ಹರಿಯಬಿಟ್ಟು ಆಕೆಯ ಒಡಲನ್ನು ಮಲಿನಗೊಳಿಸುತ್ತಿದ್ದೇವೆ. ಇಂದು ಎಲ್ಲ ಅಣೆಕಟ್ಟುಗಳಲ್ಲೂ ಹೂಳು ತುಂಬಿಕೊಂಡಿದೆ. ಶತಮಾನಗಳಿಂದಲೂ ಕಾವೇರಿ ನದಿಯ ಬಗ್ಗೆ, ಕಾವೇರಿ ನೀರಿನ ಬಗ್ಗೆ ಜನಮಾನಸದಲ್ಲಿ ಪೂಜ್ಯಭಾವವಿದೆ. ಕಾವೇರಿ ನದಿಯ ಮಹತ್ವವನ್ನು ಸಂಭ್ರಮಿಸುತ್ತಲೇ ಖುಷಿಪಟ್ಟ ಪೀಳಿಗೆ ನಮ್ಮದು. ಹೀಗಿರುವಾಗ, ಅದರ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕಾದ ಆದ್ಯ ಕರ್ತವ್ಯ ನಮ್ಮದು.
ಅಣೆಕಟ್ಟುಗಳ ನಿರ್ಮಾಣದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ ಎಂಬುದನ್ನು ರಾಜ್ಯ ಅರಣ್ಯ ಸಚಿವರು ಒಪ್ಪಿಕೊಂಡಿದ್ದಾರೆ. ಇತ್ತೀಚಿನ ಎತ್ತಿನಹೊಳೆ ಯೋಜನೆಯ ಕಾರಣದಿಂದ ಸಕಲೇಶಪುರ, ಆಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳು ನಾಡಿಗೆ ನುಗ್ಗಿ ಮಾಡುತ್ತಿರುವ ಹಾವಳಿ, ದಾಂದಲೆ ಆ ಭಾಗದ ರೈತಾಪಿ ಜನರ ಬದುಕನ್ನು ಕಸಿದುಕೊಂಡಿದೆ. ಆದರೆ ಇದೆಲ್ಲವನ್ನೂ ಬದಿಗಿಟ್ಟು ₹ 26,000 ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಗೆ ಚಾಲನೆ ಕೊಟ್ಟು, ಹಸಿರು ಕಾಡನ್ನು ನಾಶ ಮಾಡುತ್ತಿದೆ ನಮ್ಮ ಸರ್ಕಾರ. ಇದಿಷ್ಟೇ ಸಾಲದು ಎಂಬಂತೆ, ಮೇಕೆದಾಟುವಿನ ಸಮೃದ್ಧ ಹಸಿರು ಪರಿಸರದಲ್ಲಿ ಇನ್ನೊಂದು ಅಣೆಕಟ್ಟು ಕಟ್ಟುವುದಕ್ಕೂ ಮುಂದಾಗಿದೆ. ಜೊತೆಜೊತೆಗೆ ಆನೆ ಕಾರಿಡಾರ್ ಹೆಸರಿನಲ್ಲೂ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ. ಇವೆಲ್ಲವೂ ಒಂದಕ್ಕೊಂದು ವಿರೋಧಾಭಾಸದ ಸಂಗತಿಗಳು.
ಜೌಗುಪ್ರದೇಶಗಳ ಅಭಿವೃದ್ಧಿಯಲ್ಲಿ ಬಹಳಷ್ಟು ಯಶಸ್ಸು ಸಾಧಿಸಿದ್ದೇವೆ ಎಂದು ನಮ್ಮ ಅರಣ್ಯ ಇಲಾಖೆ ಇತ್ತೀಚೆಗೆ ಹೆಮ್ಮೆಯಿಂದ ಹೇಳಿಕೊಂಡಿದೆ. ‘ರಾಮ್‍ಸಾರ್ ಒಪ್ಪಂದ’ದ ಪ್ರಕಾರ, ಜೌಗು ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗಿದೆ ಎಂದೂ ಹೇಳಿದೆ. ಹೌದು, ಈ ಜೌಗು ಪ್ರದೇಶಗಳ ವ್ಯಾಪ್ತಿ ಹೆಚ್ಚಿದರೆ ಅಲ್ಲಿ ನೀರಿನ ಸೆಲೆ ಇರುತ್ತದೆ, ಅಂತರ್ಜಲ ಹೆಚ್ಚುತ್ತದೆ, ಜಲಚರಜೀವಿಗಳ ಸಂಖ್ಯೆ ವೃದ್ಧಿಸುತ್ತದೆ, ವಲಸೆ ಪಕ್ಷಿಗಳೂ ದೂರದೂರದ ಊರುಗಳಿಂದ ಬಂದು ಇಲ್ಲಿ ನೆಲೆಗೊಳ್ಳುತ್ತವೆ, ಸಂತಾನೋತ್ಪತ್ತಿ ಮಾಡುತ್ತವೆ, ಸುತ್ತಲ ಕೃಷಿಪರಿಸರದ ಕೀಟಗಳ ಭಕ್ಷಣೆ ಮಾಡುತ್ತವೆ. ಜೊತೆಗೆ ಪರಿಸರ ವ್ಯವಸ್ಥೆಗೆ ಮತ್ತು ಮಣ್ಣಿಗೆ ಹೇರಳ ಪ್ರಮಾಣದಲ್ಲಿ ಪೊಟ್ಯಾಷ್ ಒದಗುವಂತೆ ಮಾಡುತ್ತವೆ. ಇದರಿಂದ ಭತ್ತ, ಕಬ್ಬಿನಂತಹ ತೋಟಗಾರಿಕಾ ಬೆಳೆಗಳು ಸಮೃದ್ಧ ಫಸಲು ಕೊಡುವುದೂ ಸಾಧ್ಯವಾಗುತ್ತದೆ.
ಜೌಗು ಪ್ರದೇಶಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ 2021ರ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 14,930 ಜೌಗು ತಾಣಗಳಿವೆ. ಇದು ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ 4.1ರಷ್ಟು ಎಂದೂ ಪ್ರಕಟಿಸಲಾಗಿದೆ. ಈ ಹಿಂದೆ ಹೈಕೋರ್ಟ್‌ನ ಲೋಕ್ ಅದಾಲತ್, ಎನ್ವಿರಾನ್ಮೆಂಟಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಪಾಲಿಸಿ ರಿಸರ್ಚ್ ಇನ್‍ಸ್ಟಿಟ್ಯೂಟ್ (ಇಎಂಪಿಆರ್‌ಐ) ಎಂಬ ಸಂಸ್ಥೆಗೆ ಕೆಲವು ನಿರ್ದೇಶನಗಳನ್ನು ನೀಡಿತ್ತು. ನದಿಗಳಿಗೆ ಮಲಿನ ಹರಿವನ್ನು ತಡೆಯುವ ದಿಸೆಯಲ್ಲಿ, ನದಿಪಾತ್ರದ 1,000 ಅಡಿ ವಿಸ್ತಾರದ ಪ್ರದೇಶವನ್ನು ಬಫರ್ ಜೋನ್ ಎಂದು ಪರಿಗಣಿಸಲು, ಅಲ್ಲಲ್ಲಿ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳು ಇರುವಂತೆ ನೋಡಿಕೊಳ್ಳಲು ಮಾರ್ಗದರ್ಶನ ಕೊಟ್ಟಿತ್ತು. ಹೀಗೆ ಮಾಡುವುದರಿಂದ ನದಿ ನೀರು ಕಲುಷಿತವಾಗುವುದನ್ನು ತಪ್ಪಿಸಬಹುದು ಎಂಬುದು ಲೋಕ್ ಅದಾಲತ್ತಿನ ಉದ್ದೇಶವಾಗಿತ್ತು. ವೃಷಭಾವತಿ ನದಿಯ ನೀರು ಹೇಗೆ ಕಲುಷಿತವಾಗುತ್ತಿದೆ ಎಂಬ ಜ್ವಲಂತ ಉದಾಹರಣೆಯೇ ನಮ್ಮ ಮುಂದಿದೆ. ಇಂತಹ ಎಲ್ಲ ನದಿಗಳ ನೀರು ಬಂಗಾಳಕೊಲ್ಲಿಯನ್ನು ತಲುಪುವ ತನಕವೂ ಮಾಲಿನ್ಯವನ್ನೇ ಹೊತ್ತುಕೊಂಡು ಸಾಗುತ್ತಿದೆ ಎಂಬ ವಿಚಾರವೂ ನಿತ್ಯಸತ್ಯ.
ಇಲ್ಲೊಂದು ಮಾತು ಹೇಳಲೇಬೇಕು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶಾಮಾಶಾಸ್ತ್ರಿಗಳೆಂಬ ತ್ರಿಮೂರ್ತಿಗಳು ನಮ್ಮ ನಾಡಿನ ಮಹಾನ್ ಸಂತರು. ಅವರು ಕಾವೇರಿಯ ಪರಿಶುದ್ಧ ನೀರನ್ನು ಸೇವಿಸಿ ಬದುಕು ಸವೆಸಿದವರು ಮತ್ತು ದೈವಿಕವಾದ ಮಹತ್ಸಾಧನೆ ಮಾಡಿದ ಮಹನೀಯರು. ಮುತ್ತುಸ್ವಾಮಿ ದೀಕ್ಷಿತರು ಯೋಗಿ ಚಿದಂಬರನಾಥರನ್ನು ತಮಿಳುನಾಡಿನ ತಿರುವಯ್ಯಾರಿನಲ್ಲಿ ಭೇಟಿಯಾಗುತ್ತಾರೆ. ಮುತ್ತುಸ್ವಾಮಿ ದೀಕ್ಷಿತರ ತಂದೆಯವರು ಯೋಗಿಗಳೊಂದಿಗೆ ತಮ್ಮ ಮಗನನ್ನೂ ಕಾಶಿಗೆ ಕಳುಹಿಸುತ್ತಾರೆ. ಅಲ್ಲಿ ತರಬೇತಿ ಪಡೆದ ನಂತರದಲ್ಲಿ ದೀಕ್ಷಿತರು ಸರಸ್ವತಿ ವೀಣೆಯನ್ನು ಪಡೆಯುತ್ತಾರೆ. ಮುತ್ತುಸ್ವಾಮಿ ದೀಕ್ಷಿತರು ಮಹಾವಿಷ್ಣುವಿನ ಪರಮ ಆರಾಧಕರು. ಶಾಮಾಶಾಸ್ತ್ರಿಗಳು ದೇವಿ ರಾಜರಾಜೇಶ್ವರಿಯ ಆರಾಧಕರು. ತ್ಯಾಗರಾಜರು ಶ್ರೀರಾಮನ ಪರಮಭಕ್ತರು. ಇವರೆಲ್ಲರ ಸಾಧನೆಗೆ ಒಂದಿಲ್ಲೊಂದು ವಿಧದಲ್ಲಿ ಕಾವೇರಿ ನದಿ ಕಾರಣಳಾಗಿದ್ದಾಳೆ. ಆ ಕಾಲಘಟ್ಟದಲ್ಲಿ ಕಾವೇರಿ ನದಿಯ ಪಾವಿತ್ರ್ಯ ಹಾಗಿತ್ತು. ಆದರೆ ಇಂದಿನ ಸ್ಥಿತಿ ಅಯೋಮಯವಾಗಿದೆ.
ನಾನು ಕೊಡಗು ಅರಣ್ಯ ವೃತ್ತದಲ್ಲಿ ಅರಣ್ಯಾಧಿಕಾರಿಯಾಗಿದ್ದ ಅವಧಿಯಲ್ಲೇ ಕಬಿನಿ, ಹಾರಂಗಿಯಂತಹ ಕೆಲವು ಅಣೆಕಟ್ಟುಗಳ ನಿರ್ಮಾಣವಾಯಿತು, ಅನೇಕ ಬಗೆಯಲ್ಲಿ ಅರಣ್ಯ ನಾಶವಾಯಿತು. ಇದನ್ನೆಲ್ಲ ನೋಡಿ ನಾನು ಮೂಕಪ್ರೇಕ್ಷಕನಂತೆ ಇರಬೇಕಾಯಿತು. ಅದರ ಬಗ್ಗೆ ನನ್ನಲ್ಲಿ ಅಪರಾಧಿ ಭಾವ ಇಂದಿಗೂ ಇದೆ, ಮನಸ್ಸಿನಲ್ಲೊಂದು ವಿಷಾದ ಆವರಿಸಿಕೊಂಡಿದೆ. ಹಾಗಾಗಿಯೇ ನಾನು ನದಿಗಳ ಬಗ್ಗೆ, ಪರಿಸರದ ಉಳಿವಿನ ಬಗ್ಗೆ ನನ್ನ ಇಳಿವಯಸ್ಸಿನಲ್ಲೂ ಚಿಂತೆ-ಚಿಂತನೆ ಮಾಡುತ್ತಲೇ ಇದ್ದೇನೆ.
ಕೊನೆಯದಾಗಿ ಒಂದು ಮಾತು. ಗಂಗಾನದಿಗೆ ವಾರಾಣಸಿಯಲ್ಲಿ ಗಂಗಾರತಿ ಹೇಗೆ ಮಾಡಲಾಗುತ್ತಿದೆಯೋ ಅದೇ ರೀತಿ ಕಾವೇರಿ ನದಿಗೂ ಆರತಿ ಮಾಡುವ ಯೋಜನೆಯೊಂದಕ್ಕೆ ನಮ್ಮ ರಾಜ್ಯ ಸರ್ಕಾರ ಚಾಲನೆ ಕೊಟ್ಟಿದೆ. ಅದಕ್ಕಾಗಿ ₹ 92 ಕೋಟಿ ಅನುದಾನವನ್ನು ಮೀಸಲಿಟ್ಟಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ. ಇದು ಬೇಕೇ? ಕಲುಷಿತವಾಗಿರುವ ನದಿಯ ಒಡಲನ್ನು ಶುದ್ಧೀಕರಣ ಮಾಡುವುದರ ಬದಲಿಗೆ ಆರತಿ ಮಾಡುವುದರಿಂದ ಏನು ಫಲ ಸಿಕ್ಕೀತು? ಗಂಗಾರತಿಯಿಂದ ಎಂದಾದರೂ ಗಂಗೆ ಪವಿತ್ರಳಾಗಿದ್ದಾಳೆಯೇ? ಇಲ್ಲ, ಇನ್ನಷ್ಟು ಮಲಿನಗೊಂಡಿದ್ದಾಳೆ. ಅಂತೆಯೇ ಕಾವೇರಿಗೆ ಆರತಿ ಮಾಡಲು ಇಂತಹದ್ದೊಂದು ಬೃಹತ್ ಮೊತ್ತವನ್ನು ಖರ್ಚು ಮಾಡುವುದು ವ್ಯರ್ಥ, ಅರ್ಥಹೀನ ವಿಚಾರ. ಜನರ ತೆರಿಗೆಯ ದುಡ್ಡನ್ನು ಹೀಗೆ ಬೇಕಾಬಿಟ್ಟಿ ಖರ್ಚು ಮಾಡುವುದೆಂದರೆ ಅದು ಹೊಸ ರೀತಿಯಲ್ಲಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವ ಸಂಗತಿ. ಇದೇ ಹಣವನ್ನು ರಾಜ್ಯದಲ್ಲಿ ಜೌಗು ಪ್ರದೇಶಗಳ ಅಭಿವೃದ್ಧಿಗೆ ವಿನಿಯೋಗಿಸಬಹುದು. ₹ 92 ಕೋಟಿಯಲ್ಲಿ ಸರಿಸುಮಾರು ಹತ್ತು ಸಾವಿರ ಹೆಕ್ಟೇರ್ ಜೌಗು ಪ್ರದೇಶದ ಅಭಿವೃದ್ಧಿ ಸಾಧ್ಯವಿದೆ.
ಇಂತಹ ಕ್ರಿಯಾತ್ಮಕ ಯೋಜನೆಗಳಿಗೆ ಕೈಹಾಕುವುದರ ಬದಲು, ಕಾವೇರಿಗೆ ಆರತಿ ಮಾಡುವುದರಿಂದ ಸಿಗುವ ಫಲವಾದರೂ ಏನು? ಅದರಿಂದ ಕಾವೇರಿ ಒಡಲಿನ ಮಾಲಿನ್ಯ ನಿವಾರಣೆಯಾಗುವುದೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.