ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸುವುದು ಅಗತ್ಯ. ಆತನಿಗೆ ಕ್ಷಮಾದಾನ ದೊರೆತಲ್ಲಿ, ಆ ಔದಾರ್ಯ ಮುಂದೆ ಇಂತಹುದೇ ಪ್ರಕರಣಗಳಲ್ಲಿ ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಯಿದೆ.
ಅಕ್ಟೋಬರ್ 6. ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗಣದ ಸಂಖ್ಯೆ 1ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠದಲ್ಲಿ ಕಲಾಪಗಳು ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗಿದ್ದವು. ನ್ಯಾಯಪೀಠ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ 11.15ರ ಸಮಯದಲ್ಲಿ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಘಟನೆ ಈ ನ್ಯಾಯಾಂಗಣದಲ್ಲಿ ಸಂಭವಿಸಿತು.
ಮಧ್ಯಪ್ರದೇಶದ ವಿಶ್ವವಿಖ್ಯಾತ ಖಜುರಾಹೊದ ಜವಾರಿ ದೇವಸ್ಥಾನದಲ್ಲಿರುವ ವಿಷ್ಣು ಮೂರ್ತಿಯ ಮರು ನಿರ್ಮಾಣ ಹಾಗೂ ಪ್ರತಿಷ್ಠಾಪನೆಗೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ರಾಕೇಶ್ ದಲಾಲ್ ಅರ್ಜಿದಾರರಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ (ರಿಟ್ ಪಿಟಿಷನ್ (ಸಿವಿಲ್) ಡೈರಿ ನಂ:32820/2025) ಕಳೆದ ತಿಂಗಳ 16ರಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಜವಾರಿ ಮಂದಿರವು ‘ಯುನೆಸ್ಕೊ’ದ ವಿಶ್ವಪರಂಪರೆ ತಾಣವಾಗಿದೆ ಮತ್ತು ಖಜುರಾಹೊ ದೇವಾಲಯ ಇದರ ಸಂಕೀರ್ಣದಲ್ಲಿದೆ ಎಂಬ ಹಿನ್ನೆಲೆಯಲ್ಲಿ ನ್ಯಾಯಪೀಠವು, ‘ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ವಿಚಾರಣೆಗೆ ಕೋರಲಾಗಿರುವ ಅರ್ಜಿ ಯನ್ನು ಪರಿಶೀಲಿಸಲು ಇಚ್ಛಿಸುವುದಿಲ್ಲ. ಹಾಗಾಗಿ, ಈ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ ಮತ್ತು ವಿಲೇವಾರಿ ಮಾಡಲಾಗಿದೆ’ ಎಂಬ ಆದೇಶ ನೀಡಿ ಅರ್ಜಿಯನ್ನು ವಜಾಗೊಳಿಸಿತು. ಗವಾಯಿ ಅವರು ಮೌಖಿಕವಾಗಿ, ‘ಕೋರ್ಟಿನಲ್ಲೇಕೆ ಈ ವಿಷಯ ಪ್ರಸ್ತಾಪಿಸುತ್ತಿದ್ದೀರಿ? ಇದು ಪ್ರಚಾರ ಹಿತಾಸಕ್ತಿಯ ಅರ್ಜಿಯಂತಿದೆ. ನೀವು ವಿಷ್ಣು ಭಕ್ತ ಎಂದು ಹೇಳಿಕೊಳ್ಳುತ್ತಿದ್ದೀರಿ, ಹಾಗಿದ್ದರೆ ಹೋಗಿ ದೇವರನ್ನೇ ಕೇಳಿ’ ಎಂಬ ನುಡಿಗಳನ್ನೂ ಆಡಿದರು.
ತಮ್ಮ ಮಾತುಗಳು ವಿವಾದಕ್ಕೆ ಗುರಿಯಾಗಿವೆ ಎಂಬುದು ಅರಿವಿಗೆ ಬರುತ್ತಿದ್ದಂತೆಯೇ, ಮುಖ್ಯ ನ್ಯಾಯಮೂರ್ತಿಗಳು ‘ನಾನು ಯಾವುದೇ ಧರ್ಮದ ವಿರೋಧಿಯಲ್ಲ. ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು. ಆದರೂ, ವಿವಾದ ಮುಂದುವರಿಯಿತು. ಶೂ ಎಸೆಯುವ ಪ್ರಯತ್ನಕ್ಕೆ ಕಾರಣವಾಯಿತು. ಇಂತಹದೊಂದು ಕಪ್ಪುಚುಕ್ಕೆಗೆ ಎಡೆಮಾಡಿಕೊಟ್ಟವರು 71 ವರ್ಷದ ವಕೀಲ ರಾಕೇಶ್ ಕಿಶೋರ್. ಅಂದು ನ್ಯಾಯಾಂಗಣ 1ರಲ್ಲಿ ಆಸೀನರಾಗಿದ್ದ ಅವರು, ಇದ್ದಕ್ಕಿದ್ದಂತೆ ತಮ್ಮ ಕಾಲಿನಲ್ಲಿ ಧರಿಸಿದ್ದ ಬಿಳಿ ಶೂ ಅನ್ನು ಕಳಚಿ ಗವಾಯಿ ಕೂತಿದ್ದ ನ್ಯಾಯಪೀಠದತ್ತ ತೂರಲು ಪ್ರಯತ್ನಿಸಿದರು. ಹಠಾತ್ತನೇ ನಡೆದ ಘಟನೆ ಎಲ್ಲರ ಅರಿವಿಗೆ ಬರಲು ಹಲವು ಕ್ಷಣಗಳೇ ಬೇಕಾಯಿತು. ಭದ್ರತಾ ಸಿಬ್ಬಂದಿ ಅವರನ್ನು ಹೊರಕ್ಕೆ ಕರೆದೊಯ್ಯುವಾಗ ರಾಕೇಶ್, ‘ಸನಾತನ ಧರ್ಮಕ್ಕೆ ಮಾಡುವ ಅವಮಾನಗಳನ್ನು ಸಹಿಸುವುದಿಲ್ಲ’ ಎಂದು ಕೂಗಿದರು. ‘ನನ್ನ ದಾಳಿ ಮುಖ್ಯ ನ್ಯಾಯಮೂರ್ತಿಯವರನ್ನು ಗುರಿಯಾಗಿಸಿತ್ತು’ ಎನ್ನುತ್ತಾ, ಶೂ ಎಸೆತದ ಪ್ರಯತ್ನಕ್ಕೆ ಅವರ ಕ್ಷಮೆಯಾಚಿಸುವೆ ಎಂದೂ ಬಡಬಡಿಸಿದರು.
ಮುಖ್ಯ ನ್ಯಾಯಮೂರ್ತಿ ಗವಾಯಿ, ‘ಅವರನ್ನು ಬಿಟ್ಟುಬಿಡಿ, ನಾನು ವಿಚಲಿತನಾಗಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದೂ ಇಲ್ಲ’ ಎಂದು ತಕ್ಷಣವೇ ಪ್ರತಿಕ್ರಿಯಿಸಿದರು. ವಶಕ್ಕೆ ಪಡೆದ ವಕೀಲರನ್ನು ಸುಮಾರು ಎರಡು ಗಂಟೆ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಮುಖ್ಯ ನ್ಯಾಯಮೂರ್ತಿಗಳ ಮಾತಿನಂತೆ ಅವರನ್ನು ಬಿಟ್ಟು ಹೊರಗೆ ಕಳುಹಿಸಿದರು. ಈ ಕ್ಷಣದಿಂದಾಚೆಗೆ ಉದ್ಭವವಾದ ಕಾನೂನಾತ್ಮಕ ಪ್ರಶ್ನೆಗಳು ಹಲವು.
ತೆರೆದ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಮೇಲೆ ಶೂ ಎಸೆದು ಹಲ್ಲೆ ಅಥವಾ ದಾಳಿಗೆ ಪ್ರಯತ್ನಿಸಿದ ವ್ಯಕ್ತಿಯೊಬ್ಬನ ವಿರುದ್ಧ ಮುಖ್ಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮುಖಾಂತರ ಪೊಲೀಸರಿಗೆ ದೂರು ಸಲ್ಲಿಸುವಂತೆ ಮಾಡಬಹುದಿತ್ತು ಮತ್ತು ಆತನನ್ನು ನ್ಯಾಯಾಂಗ ನಿಂದನೆಗೆ ಗುರಿಪಡಿಸುವ ಕ್ರಮವನ್ನೂ ಜರುಗಿಸಬಹುದಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿಗಳು ಇವೆರಡನ್ನೂ ಬಿಟ್ಟುಕೊಟ್ಟರು. ವಿಪರ್ಯಾಸ ಎಂದರೆ, ಕುಕೃತ್ಯವೆಸಗಿದ ವಕೀಲರು ಅಲ್ಲಿಂದಾಚೆಗೆ ಮಾಧ್ಯಮದವರಿಗೆ ಸಂದರ್ಶನ ನೀಡುತ್ತಾ, ಮುಖ್ಯ ನ್ಯಾಯಮೂರ್ತಿಗಳು ತಮ್ಮ ಅನೇಕ ತೀರ್ಪುಗಳಲ್ಲಿ ಹಿಂದೂ ಧರ್ಮಕ್ಕೆ ದ್ರೋಹವೆಸಗಿದ್ದಾರೆ ಎನ್ನುವ ಹೇಳಿಕೆಗಳನ್ನು ಕೊಡುತ್ತಿರುವುದನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ.
ಈ ಬೆಳವಣಿಗೆಯನ್ನು ಗಮನಿಸಿದಾಗ ಆ ವಕೀಲರು, ಪ್ರತಿ ಸಂದರ್ಶನದ ವೇಳೆಯಲ್ಲಿ ನ್ಯಾಯಾಂಗ ನಿಂದನೆಯನ್ನು ಮಾಡುತ್ತಾ ಬರುತ್ತಿರುವುದು ಎದ್ದು ಕಾಣಿಸುತ್ತಿದೆ. ಅಲ್ಲದೆ, ಅವರ ಈ ಪ್ರವೃತ್ತಿ ‘ಮುಂದುವರಿಯುತ್ತಿರುವ ಅಪರಾಧ’ (continuing offence) ಎಂದು ಕಂಡುಬರುತ್ತಿದ್ದರೂ ಸಂಬಂಧಪಟ್ಟವರು; ಅಂದರೆ, ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಯಾವುದೇ ಕ್ರಮ ಜರುಗಿಸಲು ಮುಂದಾಗದೇ ಇರುವುದು ಸಮಾಧಾನಕರ ಬೆಳವಣಿಗೆಯಲ್ಲ.
ಕಾನೂನಿನಲ್ಲಿ ಸಂಜ್ಞೇಯ ಅಪರಾಧಗಳ ಬಗ್ಗೆ ಬಾಧಿತ ಅಥವಾ ಸಂತ್ರಸ್ತ ವ್ಯಕ್ತಿಯೇ ಅಥವಾ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೇ ಪೊಲೀಸರಿಗೆ ದೂರು ನೀಡಬೇಕು ಎಂದೇನಿಲ್ಲ. ಯಾವುದೇ ಸಾರ್ವಜನಿಕ ವ್ಯಕ್ತಿ ಆ ವಕೀಲನ ವಿರುದ್ಧ ಕೋರ್ಟಿನ ಒಳಗೆ ನಡೆದ ಮತ್ತು ಹೊರಗೆ ನಡೆಯುತ್ತಿರುವ ಅವರ ಕಾನೂನುಬಾಹಿರ ಕೃತ್ಯಗಳ ಕುರಿತು, ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲು ಸಾಧ್ಯವಿದೆ.
ಘಟನೆಯೊಂದರ ವಿಚಾರವನ್ನು ತಿಳಿದ (hear–say) ವ್ಯಕ್ತಿಯೂ ಪೊಲೀಸರಿಗೆ ದೂರು ಕೊಟ್ಟು ಕ್ರಮ ಜರುಗಿಸುವಂತೆ ಮಾಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಅಡಿಯಲ್ಲಿ ಮುಕ್ತ ಅವಕಾಶವಿದೆ. ಈ ದಿಕ್ಕಿನಲ್ಲಿ ಬೆಂಗಳೂರಿನ ವಕೀಲ ಭಕ್ತವತ್ಸಲ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 132 ( ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯನ್ನು ಅಪರಾಧಿಕ ಬಲಪ್ರಯೋಗದ ಮೂಲಕ ಆತ ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ಅಡ್ಡಿಪಡಿಸುವುದು) ಮತ್ತು ಕಲಂ 133 (ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಿರುವುದು ಶ್ಲಾಘನೀಯ. ದೂರನ್ನು ಪಡೆದು ಜೀರೊ ಕ್ರೈಂ ದಾಖಲಿಸಿರುವ ವಿಧಾನಸೌಧ ಠಾಣೆಯ ಪೊಲೀಸರು ಪ್ರಥಮ ವರ್ತಮಾನವನ್ನು ಸುಪ್ರೀಂ ಕೋರ್ಟ್ ವ್ಯಾಪ್ತಿಯ ಸ್ಥಳೀಯ ಪೊಲೀಸರಿಗೆ ರವಾನಿಸಿದ್ದಾರೆ. ಇದರ ಹೊರತಾಗಿ, ಕೃತ್ಯವೆಸಗಿದ ವಕೀಲರ ವಿರುದ್ಧ ಯಾವುದೇ ಸಾರ್ವಜನಿಕ ವ್ಯಕ್ತಿಯು, ಅಟಾರ್ನಿ ಜನರಲ್ ಅವರಿಗೆ ಅರ್ಜಿ ಸಲ್ಲಿಸಿ ಸಮ್ಮತಿ ಪಡೆದು ನ್ಯಾಯಾಂಗ ನಿಂದನೆಯ ಪ್ರಕರಣವನ್ನೂ ದಾಖಲಿಸಬಹುದಾಗಿದೆ.
ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಪ್ರಕರಣಗಳಿಗೆ ಸಂಬಂಧಪಡದ ಮಾತುಗಳನ್ನು ಬಳಕೆ ಮಾಡಿದಾಗ, ಅವರ ವಿರುದ್ಧ ಯಾವುದೇ ರೀತಿಯ ಕ್ರಮವನ್ನು ಯಾವುದೇ ನ್ಯಾಯಾಲಯದಲ್ಲಿ ಜರುಗಿಸಲು ಸಾಧ್ಯವಿಲ್ಲ. ಈ ರಕ್ಷಣೆಯನ್ನು ‘ಜಡ್ಜಸ್ ಪ್ರೊಟೆಕ್ಷನ್ ಆ್ಯಕ್ಟ್’ (ನ್ಯಾಯಾಧೀಶರ ಸುರಕ್ಷಾ ಕಾಯ್ದೆ– 1985) ಕೊಡಮಾಡುತ್ತದೆ.
ಇಲ್ಲಿ ಎಲ್ಲರೂ ಗಮನಿಸಬೇಕಾದ ಮುಖ್ಯ ವಿಚಾರವೊಂದಿದೆ: ಮುಂದಿನ ದಿನಗಳಲ್ಲಿ ವಕೀಲ ರಾಗಲೀ, ಕಕ್ಷಿದಾರರಾಗಲೀ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಟ್ಟಾಗ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಅಥವಾ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ವಿಚಾರಣೆ ಸಂದರ್ಭದಲ್ಲಿ ಹತ್ತು ವರ್ಷಗಳ ಅಥವಾ ಅದರೊಳಗಿನ ಶಿಕ್ಷೆವಿಧಿಸಬಹು ದಾದಂತಹ ಅಪರಾಧದಲ್ಲಿ ಅಂಥವರು ತಪ್ಪಿತಸ್ಥರು ಎಂದು ಕಂಡುಬಂದು, ಶಿಕ್ಷೆಯ ಪ್ರಮಾಣವನ್ನು ಇತ್ಯರ್ಥಗೊಳಿಸುವಾಗ ಅಪರಾಧಿಗಳ ಪರಿವೀಕ್ಷಣಾ ಅಧಿನಿಯಮ ಪ್ರಕಾರ ಶಿಕ್ಷೆಗೆ ಒಳಪಡಿಸಿರುವ ಅಥವಾ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಕಾರಣವೇನಾದರೂ ಇರಬಹುದೇ ಎಂದು ಆರೋಪಿ ಯಿಂದ (ಆರೋಪಿಯ ಹಿನ್ನೆಲೆ) ನ್ಯಾಯಾಧೀಶರು ಕಂಡುಕೊಳ್ಳುವ ಬಗ್ಗೆ ಅವಕಾಶವಿದೆ.
ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಕ್ಷಮಾದಾನ ನೀಡಿರುವುದನ್ನು ಆಧಾರ ಆಗಿಸಿಕೊಂಡು, ಅಕೃತ್ಯ ಎಸಗಿದ ರಾಕೇಶ್ ವಿರುದ್ಧ ಕ್ರಮ ಜರುಗಿಸದೇ ಇರುವುದನ್ನು ಒಂದು ಪೂರ್ವನಿದರ್ಶನವಾಗಿ (precedent) ಬಳಸಿಕೊಳ್ಳುವಂತಿಲ್ಲ. ಇದು ಬಾಧ್ಯತೆಯಿಲ್ಲದ ಅಂಶ (binding force) ಎಂದು ಹೇಳಬಹುದಾದರೂ, ಪ್ರಭಾವಿಸುವ ಶಕ್ತಿ (persuasive force) ಹೊಂದಿರುತ್ತದೆ ಎಂಬುದನ್ನು ಕಡೆಗಣಿಸಲಾಗದು. ಹಾಗಾಗಿ, ಇದರ ಲಾಭವನ್ನು ವಕೀಲರು ತಮ್ಮ ಕಕ್ಷಿದಾರನ ಪರವಾಗಿ ಬಳಸಿಕೊಳ್ಳಲು ಯಾವುದೇ ಅಡ್ಡಿ, ಆತಂಕ ಇರುವುದಿಲ್ಲ. ಈ ಕಾರಣದಿಂದಾಗಿ ರಾಕೇಶ್ ಕಿಶೋರ್ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಅವರನ್ನು ಶಿಕ್ಷೆಗೆ ಒಳಪಡಿಸಲು ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಲು ಸಂಬಂಧಪಟ್ಟವರು ಕಾರ್ಯಪ್ರವೃತ್ತರಾಗುವುದು ಉಚಿತವಿರುತ್ತದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವಿಚಾರಣಾ ನ್ಯಾಯಾಲಯಕ್ಕೆ ಬಂದು ಸಾಕ್ಷ್ಯ ನುಡಿಯುವ ಅವಶ್ಯಕತೆ ಇರುವುದಿಲ್ಲ. ಅವರ ಸಾಕ್ಷ್ಯವನ್ನು ಅವರ ನಿವಾಸದಲ್ಲೇ ಆರೋಪಿ ವಕೀಲ ಮತ್ತು ಪ್ರಾಸಿಕ್ಯೂಟರ್ ಹಾಜರಿದ್ದು, ನ್ಯಾಯಾಧೀಶರಿಂದ ನೇಮಕಗೊಂಡ ವ್ಯಕ್ತಿ ಸಾಕ್ಷ್ಯ ದಾಖಲಿಸಿಕೊಳ್ಳಬಹುದಾಗಿರುತ್ತದೆ.
ಮುಖ್ಯ ನ್ಯಾಯಮೂರ್ತಿಗಳಾಡಿದ ಮಾತುಗಳು ವೈಯಕ್ತಿಕವಾದವು. ಇದನ್ನು ಒತ್ತಡದಿಂದ, ಏಕತಾನತೆಯಿಂದ, ತುಮುಲ ಆವರಿಸಿದ ಸಂದರ್ಭದಿಂದ ಆಡಿದ ಭಾವವೀರೇಚಕ ಮಾತು ಗಳೆಂದೇ ಪರಿಗಣಿಸಬೇಕಾಗುತ್ತದೆ. ಅಂದರೆ, ನ್ಯಾಯಮೂರ್ತಿಗಳು ಕೆಲವು ಸಂದರ್ಭಗಳಲ್ಲಿ ಹಗುರವಾದ, ಲಘುವಾದ, ನಿರ್ದಿಷ್ಟ ಉದ್ದೇಶ ವಿಲ್ಲದ ತಮಾಷೆಯ ಮಾತುಗಳನ್ನು ತೆರೆದ ಕಲಾಪಗಳಲ್ಲಿ ಆಡುವುದುಂಟು. ಆದರೆ, ಮುಖ್ಯ ನ್ಯಾಯಮೂರ್ತಿಗಳು ಆಡಿದರೆನ್ನುವ ಮಾತುಗಳು ಇಂತಹ ಭಾವಲಹರಿಯಿಂದ ಜಿಗಿದು ಬೇರೆಯದೇ ಅರ್ಥ ಪಡೆದುಕೊಂಡಿರುವುದು ದುರದೃಷ್ಟಕರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.