ADVERTISEMENT

ವಿಶ್ಲೇಷಣೆ | ಆಟಕ್ಕೇಕೆ ಬೇಕು ರಾಜಕೀಯ?

ಗಿರೀಶ ದೊಡ್ಡಮನಿ
Published 13 ಅಕ್ಟೋಬರ್ 2025, 22:06 IST
Last Updated 13 ಅಕ್ಟೋಬರ್ 2025, 22:06 IST
   

‘ಅತಿಯಾದ ರಾಜಕೀಯ ಹಸ್ತಕ್ಷೇಪ ವೆಸ್ಟ್‌ ಇಂಡೀಸ್ ಕ್ರಿಕೆಟ್‌ಗೆ ಮಾರಕವಾಗುತ್ತಿದೆ’.

ದಶಕದ ಹಿಂದೆ ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೊ ಹೇಳಿದ್ದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ ಸುಧಾರಣೆಯತ್ತ ಹೆಜ್ಜೆಯಿಟ್ಟಿದ್ದರೆ, ಕೆರಿಬಿಯನ್ ಕ್ರಿಕೆಟ್‌ ಗತವೈಭವಕ್ಕೆ ಮರಳುತ್ತಿತ್ತೋ ಏನೋ? ಹಾಗಾಗಲಿಲ್ಲ. ದ್ವೀಪರಾಷ್ಟ್ರದ ಕ್ರಿಕೆಟ್ ಇವತ್ತು ತಾರೆಗಳಿಲ್ಲದ ಆಗಸದಂತಾಗಿದೆ. ಕ್ರಿಕೆಟ್‌ ‘ದೈತ್ಯ’ ಎಂದೇ ಕರೆಸಿಕೊಳ್ಳುತ್ತಿದ್ದ ತಂಡ ಈಗ ಸೊರಗಿ ಸುಣ್ಣವಾಗಿದೆ.

ದಶಕಗಳ ಹಿಂದಿನ ವೆಸ್ಟ್ ಇಂಡೀಸ್ ತಂಡದಲ್ಲಿದ್ದ ವೇಗದ ಬೌಲರ್‌ಗಳಾದ ಆ್ಯಂಡಿ ರಾಬರ್ಟ್ಸ್, ಜೊಯಲ್ ಗಾರ್ನರ್‌, ಮೈಕೆಲ್ ಹೋಲ್ಡಿಂಗ್, ಪ್ಯಾಟ್ರಿಕ್ ಪ್ಯಾಟರ್ಸನ್, ಮಾಲ್ಕಂ ಮಾರ್ಷಲ್, ಕೋರ್ಟ್ನಿ ವಾಲ್ಶ್, ಕರ್ಟ್ಲಿ ಆ್ಯಂಬ್ರೋಸ್, ಇಯಾನ್ ಬಿಷಪ್ ಅವರು ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಗ್ಯಾರಿ ಸೋಬರ್ಸ್, ಬ್ರಯನ್ ಲಾರಾ, ಗಾರ್ಡನ್ ಗ್ರಿನೀಜ್, ಡೆಸ್ಮಂಡ್ ಹೇಯ್ನ್ಸ್, ಕ್ರಿಸ್ ಗೇಲ್ ಅವರ ಬ್ಯಾಟಿಂಗ್‌ ಮುಂದೆ ಬಸವಳಿದ ಬೌಲರ್‌ಗಳಿಗೆ ಲೆಕ್ಕವಿಲ್ಲ. ಆದರೆ, ಸದ್ಯ ಭಾರತದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ವಿಂಡೀಸ್ ತಂಡದಲ್ಲಿ ಭರವಸೆದಾಯಕ ಆಟಗಾರರು ಕಾಣುತ್ತಿಲ್ಲ. ಏಕದಿನ ಕ್ರಿಕೆಟ್‌ನಲ್ಲಿಯೂ ಬಹುತೇಕ ಆ ದೇಶದ ‘ಯುಗಾಂತ್ಯ’ವಾಗಿದೆ.

ADVERTISEMENT

ಏಕದಿನ ಮಾದರಿಯ ಮೊದಲೆರಡೂ ವಿಶ್ವಕಪ್ ಜಯಿಸಿದ್ದ ತಂಡ ವಿಂಡೀಸ್. ಅಷ್ಟೇ ಅಲ್ಲ; ಇತ್ತೀಚೆಗೆ ಕ್ರಿಕೆಟ್ ಅಂಗಳದಲ್ಲಿ ಅಂಬೆಗಾಲಿಡುತ್ತಿರುವ ನೇಪಾಳ ತಂಡವೂ ಟಿ20 ಸರಣಿಯಲ್ಲಿ 2–1ರಿಂದ ವಿಂಡೀಸ್ ಬಳಗವನ್ನು ಹಣಿದಿತ್ತು. ಕೆರಿಬಿಯನ್ ನಾಡಿನಲ್ಲಿ ಪ್ರತಿಭಾನ್ವಿತರಿಗೆ ಕೊರತೆಯೇನಿಲ್ಲ. ಆದರೆ, ಅಲ್ಲಿಯ ಕ್ರಿಕೆಟ್ ಮಂಡಳಿಯ ಧೋರಣೆ, ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ದುಂದುವೆಚ್ಚಗಳಿಂದಾಗಿ ಈ ಗತಿ ಬಂದೊದಗಿದೆ. ಯಾವುದಕ್ಕೂ ಉತ್ತರದಾಯಿತ್ವ ಇಲ್ಲದ ಆಡಳಿತ ನಡೆಯುತ್ತಿದೆ ಎಂದು ಈಚೆಗೆ ವಿಂಡೀಸ್ ಮಾಜಿ ಕ್ರಿಕೆಟಿಗ ದೀನಾನಾಥ್ ರಾಮನಾರಾಯಣ್ ಅವರು ವೆಬ್‌ಸೈಟ್‌ನಲ್ಲಿ ಬರೆದಿದ್ದರು. ವಿಂಡೀಸ್ ತಂಡದ ಮುಖ್ಯ ಕೋಚ್ ಆಗಿರುವ ಡ್ಯಾರೆನ್ ಸ್ಯಾಮಿ ಅವರೂ ತಮ್ಮ ದೇಶದ (ಅ)ವ್ಯವಸ್ಥೆ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಮನಬಿಚ್ಚಿ ಮಾತನಾಡಿದ್ದರು.

ಪ್ರಸ್ತುತ ಕಾಲಘಟ್ಟದಲ್ಲಿ ವಿಂಡೀಸ್ ಮಾತ್ರವಲ್ಲ, ಹಲವು ಪ್ರಮುಖ ಕ್ರಿಕೆಟ್ ತಂಡಗಳು ರಾಜಕೀಯ ಹಸ್ತಕ್ಷೇಪ ಮತ್ತು ದುರಾಡಳಿತದಿಂದ ಅವನತಿಯತ್ತ ಸಾಗುತ್ತಿವೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಈ ಪಟ್ಟಿಯಲ್ಲಿವೆ. ಜಿಂಬಾಬ್ವೆ, ಕೆನ್ಯಾ ದೇಶಗಳ ಕಥೆಯೂ ಭಿನ್ನವಲ್ಲ. 

ಪಾಕಿಸ್ತಾನ ತಂಡದ ಪರಿಸ್ಥಿತಿಯಂತೂ ಅತ್ಯಂತ ಶೋಚನೀಯವಾಗಿದೆ. ಅಲ್ಲಿಯ ಸಚಿವ ಮೊಹಸಿನ್ ನಕ್ವಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರೂ ಹೌದು. ಅವರೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರೂ ಆಗಿದ್ದಾರೆ. ಪಾಕ್ ತಂಡದ ಆಯ್ಕೆ ಪ್ರಕ್ರಿಯೆ, ಮೂಲಸೌಲಭ್ಯಗಳ ಅಭಿವೃದ್ಧಿಯಲ್ಲಿ ಮತ್ತು ಕ್ರಿಕೆಟ್ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತದೆ. ಅದಕ್ಕಾಗಿಯೇ ಅರ್ಹರಿಗೆ ಅವಕಾಶ ಸಿಗುತ್ತಿಲ್ಲ ಎಂದು ಅಲ್ಲಿಯ ಮಾಜಿ ಕ್ರಿಕೆಟಿಗರೇ ಆರೋಪಿಸುತ್ತಿದ್ದಾರೆ.

ಭಾರತ ವಿರೋಧಿ ನಿಲುವಿನ ಮನೋಭಾವವನ್ನೂ ಪಾಕ್ ಸರ್ಕಾರ ತಮ್ಮ ಆಟಗಾರರಲ್ಲಿ ಬಿತ್ತುತ್ತಿರುವುದು ಗೋಪ್ಯವೇನಲ್ಲ. ಅದಕ್ಕೆ ಪ್ರತ್ಯುತ್ತರ ನೀಡುವ ಭರದಲ್ಲಿ ಇತ್ತೀಚೆಗೆ ಭಾರತ ತಂಡದ ‘ನವಪೀಳಿಗೆ’ಯ ಆಟಗಾರರೂ ಕ್ರೀಡಾ ಮನೋಭಾವ ಮರೆತಿದ್ದು ವ್ಯಾಪಕ ಟೀಕೆಗಳಿಗೆ ಕಾರಣವಾಯಿತು. ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ಆಟಗಾರರೊಂದಿಗೆ ಹಸ್ತಲಾಘವ ನೀಡದ ಭಾರತದ ಆಟಗಾರರು, ಫೈನಲ್ ಗೆದ್ದ ನಂತರ ಮೊಹಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲಿಲ್ಲ. ಇದು ಬಹಳ ದೊಡ್ಡ ವಿವಾದಕ್ಕೆ ಕಾರಣವಾಯಿತು. ಪಹಲ್ಗಾಮ್‌ ಭಯೋತ್ಪಾದನಾ ದಾಳಿ ಖಂಡಿಸಿ ಪಾಕ್ ವಿರುದ್ಧ ಪಂದ್ಯಗಳನ್ನು ಬಹಿಷ್ಕರಿಸಬೇಕು ಎಂದು ಟೂರ್ನಿಗೂ ಮುನ್ನವೇ ಲಕ್ಷಾಂತರ ಭಾರತೀಯರು ಒತ್ತಾಯಿಸಿದ್ದರು. ಆದರೂ, ತಂಡವು ಬಿಸಿಸಿಐ ಆಣತಿಯಂತೆ ಕಣಕ್ಕಿಳಿಯಿತು. ಕ್ರಿಕೆಟ್ ಮಂಡಳಿಯು ಕೇಂದ್ರ ಸರ್ಕಾರದ ಸೂಚನೆಗಳನ್ನು ಪಾಲಿಸಿತ್ತಷ್ಟೇ. ಫೈನಲ್‌ ನಂತರ  ಪ್ರಧಾನ ಮಂತ್ರಿಗಳೇ ಟ್ವೀಟ್ ಮಾಡಿ ಭಾರತದ ಗೆಲುವನ್ನು ‘ಆಪರೇಷನ್ ಸಿಂಧೂರ’ ಜಯಕ್ಕೆ ಹೋಲಿಕೆ ಮಾಡಿದ್ದರು.

‘ಆಟಗಾರರು ತಮ್ಮ ಕರ್ತವ್ಯವನ್ನು ನಿಭಾಯಿಸಿದರೆ ಸಾಕು. ಉಳಿದವರು ತಮ್ಮ ತಮ್ಮ ಕೆಲಸ ಮಾಡಲಿ’ ಎಂದು ದಿಗ್ಗಜ ಕಪಿಲ್ ದೇವ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ಹೇಳಿದ ಮಾತುಗಳು ಬಹುಶಃ ಬಿಸಿಸಿಐಗೆ ನಾಟಿಲ್ಲ. ಅದಕ್ಕಾಗಿಯೇ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತದ ವನಿತೆಯರಿಗೂ ಪಾಕ್ ಎದುರಿನ ಪಂದ್ಯದಲ್ಲಿ ಆಟಗಾರ್ತಿಯರಿಗೆ ಹಸ್ತಲಾಘವ ಮಾಡದಂತೆ ಸೂಚನೆ ನೀಡಿತ್ತು. 

ಪ್ರತಿಭಟಿಸಲು ಹಲವು ದಾರಿಗಳಿವೆ. ದಶಕಗಳ ಹಿಂದೆ ವರ್ಣ ತಾರತಮ್ಯವನ್ನು ವಿರೋಧಿಸಿ ತಾವು ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕವನ್ನೇ ನದಿಗೆ ಎಸೆದಿದ್ದ ಮೊಹಮ್ಮದ್ ಅಲಿಯ ಎದೆಗಾರಿಕೆಯೂ ಐತಿಹಾಸಿಕ ಪ್ರತಿಭಟನೆಯೇ ಆಗಿತ್ತು. ಅವರ ನಡೆ ಕ್ರೀಡೆಯ ಧ್ಯೇಯೋದ್ದೇಶವನ್ನು ಮತ್ತಷ್ಟು ಸಬಲಗೊಳಿಸಿದ್ದು ಸುಳ್ಳಲ್ಲ. ಕ್ರಿಕೆಟ್‌ ಕೂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿರುವ ಈ ಹೊತ್ತಿನಲ್ಲಿ ಕ್ರಿಕೆಟಿಗರೂ ಇತಿಹಾಸದ ಪಾಠಗಳನ್ನು ಓದಿಕೊಂಡರೆ ಒಳಿತು. 

ಭಾರತದ ಕ್ರಿಕೆಟ್‌ಗೆ ರಾಜಕೀಯ ಮತ್ತು ರಾಜಕಾರಣಿಗಳ ಪ್ರಭಾವ ಹೊಸದೇನಲ್ಲ. ಆದರೆ, ಎರಡರ ನಡುವೆ ಅಂತರ ಕಾಪಾಡಿಕೊಂಡು ಬರಲಾಗಿತ್ತು. ‘ಗುಲಾಬಿ ಹೂವಿಗೆ ರಕ್ಷಣೆ ನೀಡುವ ಮುಳ್ಳುಗಳ’ ನಡುವೆ ಇರುವಷ್ಟೇ ಅಂತರ ಅದು. ಆದರೆ, ಈಗ ಮುಳ್ಳುಗಳು ಹೂವಿಗಿಂತ ಹೆಚ್ಚು ಉದ್ದ ಬೆಳೆಯುತ್ತಿರುವಂತೆ ಕಾಣುತ್ತಿವೆ. ಇದು ಗುಲಾಬಿಯ ಅಸ್ತಿತ್ವಕ್ಕೇ ಮಾರಕ. 

1983ರಲ್ಲಿ ಕಪಿಲ್ ದೇವ್ ನಾಯಕತ್ವದ ತಂಡವು ವಿಶ್ವಕಪ್ ಜಯಿಸಿದ ನಂತರ ಭಾರತದ ಕ್ರಿಕೆಟ್ ಮಗ್ಗಲು ಬದಲಾಯಿಸಿತು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್, ಮಹೇಂದ್ರಸಿಂಗ್ ಧೋನಿ, ಜಹೀರ್ ಖಾನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರು ಭಾರತದ ಕ್ರಿಕೆಟ್‌ ಶ್ರೇಷ್ಠತೆಯನ್ನು ಎತ್ತರಕ್ಕೇರಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜನಿಸಿದ ನಂತರ ಬಿಸಿಸಿಐ ಬೊಕ್ಕಸ ತುಂಬಿ ತುಳುಕುತ್ತಿದೆ.

ಕ್ರಿಕೆಟ್ ಸಿರಿವಂತಿಕೆ ಹಾಗೂ ಜನಪ್ರಿಯತೆಯು ರಾಜಕಾರಣಿಗಳನ್ನು ಆಕರ್ಷಿಸುತ್ತಿದೆ. ಆದರೆ ನಿಯಮದ ಪ್ರಕಾರ, ರಾಜಕಾರಣಿಗಳು ಬಿಸಿಸಿಐ ಆಡಳಿತದಲ್ಲಿ ನೇರವಾಗಿ ಅಧಿಕಾರ ನಡೆಸುವಂತಿಲ್ಲ. ಆದರೂ, ರಾಜಕಾರಣಿಗಳು ‘ರಂಗೋಲಿ ಕೆಳಗೆ ನುಸುಳುವುದನ್ನು’ ಬಿಟ್ಟಿಲ್ಲ. ಪರೋಕ್ಷವಾಗಿ ತಮ್ಮ ಆಪ್ತರನ್ನು ಅಥವಾ ಕುಟುಂಬಸ್ಥರನ್ನು ಪದಾಧಿಕಾರಿಗಳನ್ನಾಗಿ ಮಾಡುತ್ತಿದ್ದಾರೆ. ಬಿಸಿಸಿಐಗೆ ಈ ಹಿಂದೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ, ಈಗ ಐಸಿಸಿ ಅಧ್ಯಕ್ಷರಾಗಿರುವ ಜಯ್ ಶಾ (ಕೇಂದ್ರ ಗೃಹ ಸಚಿವರ ಮಗ) ಅವರೇ ಇದಕ್ಕೆ ಉದಾಹರಣೆ. ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಕಾಂಗ್ರೆಸ್ ಪಕ್ಷದ ಧುರೀಣ. ಕ್ರಿಕೆಟ್ ಎಂದರೆ ಎಲ್ಲ ಪಕ್ಷದವರಿಗೂ ಇಷ್ಟ! 

ಇನ್ನೊಂದೆಡೆ ವಿರಾಟ್, ರೋಹಿತ್ ಅವರಂತಹ ಖ್ಯಾತನಾಮರ ನಿವೃತ್ತಿಯೊಂದಿಗೆ (ಟೆಸ್ಟ್, ಟಿ20 ಕ್ರಿಕೆಟ್) ಭಾರತ ತಂಡದಲ್ಲಿ ತಾರಾ ಆಟಗಾರರ ಕೊರತೆ ಎದ್ದು ಕಾಣುತ್ತಿದೆ. ದಶಕಗಳಿಂದ ಭಾರತ ತಂಡದಲ್ಲಿ ನಾಯಕನಷ್ಟೇ ಅಲ್ಲ. ತಾರಾ ವರ್ಚಸ್ಸಿನ ಏಳೆಂಟು ಆಟಗಾರರು ಇರುವುದು ವಾಡಿಕೆಯಾಗಿತ್ತು. ತೀರಾ ಇತ್ತೀಚೆಗಿನ ಕಾಲಘಟ್ಟದಲ್ಲಿ; ಧೋನಿ ನಾಯಕತ್ವದಲ್ಲಿ ಸಚಿನ್ ತೆಂಡೂಲ್ಕರ್ ಮತ್ತಿತರರು ಇದ್ದರು. ಅದರ ನಂತರ ವಿರಾಟ್, ರೋಹಿತ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಇದ್ದರು. ಆಗವರು ತಂಡದೊಳಗೆ ಬರುತ್ತಿದ್ದ ಹೊಸಬರಿಗೆ ಆಟದ ಜೊತೆಗೆ ನಡವಳಿಕೆಗಳನ್ನು ಕಲಿಸುತ್ತಿದ್ದರು. 

ವಿರಾಟ್ ತಮ್ಮ ಆರಂಭಿಕ ದಿನಗಳಲ್ಲಿ ಅಭಿಮಾನಿಗಳೊಂದಿಗೆ ತುಸು ಒರಟಾಗಿ ನಡೆದುಕೊಂಡಾಗ ಸೆಹ್ವಾಗ್, ಧೋನಿ, ಸಚಿನ್ ಅಂತಹವರು ಕಿವಿ ಹಿಂಡಿದ್ದರು. ರಹಾನೆ ಅವರು ಮುಂಬೈ ತಂಡದ ನಾಯಕರಾಗಿದ್ದಾಗ ರಣಜಿ ಟ್ರೋಫಿ ಟೂರ್ನಿಯಲ್ಲಿ ಪೃಥ್ವಿ ಶಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಅಶಿಸ್ತಿನ ನಡವಳಿಕೆಗೆ ಬುದ್ಧಿ ಕಲಿಸಿದ್ದು ಅಚ್ಚಳಿಯದೇ ಉಳಿದಿದೆ. ‘ಸೂಪರ್‌ಸ್ಟಾರ್’ ಆಟಗಾರರಿಗೆ ‘ಹೀಗೆ ಮಾಡಿ...’ ಎಂದು ಸೂಚಿಸುವ ಧೈರ್ಯ ಅಧಿಕಾರಸ್ಥರಿಗೂ ಇರಲಿಲ್ಲ. ಆದ್ದರಿಂದ ಈಗ ಝೆನ್‌ ಜೀ ಹುಡುಗರೇ ಹೆಚ್ಚಿರುವ ಭಾರತ ಕ್ರಿಕೆಟ್ ತಂಡವು ಪಟ್ಟಭದ್ರರ ‘ಸುಲಭದ ಗುರಿ’ಯಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಹೊತ್ತಿನಲ್ಲಿ ತಂಡದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮೇಲೆ ದೊಡ್ಡ ಹೊಣೆ ಇದೆ.

ತಂಡದಲ್ಲಿ ಸದ್ಯ ಗಂಭೀರ್‌ ಅವರೊಬ್ಬರೇ ಹೆಚ್ಚು ಅನುಭವಿ ಹಾಗೂ ತಾರಾವರ್ಚಸ್ಸಿನವರು. ಅವರು ಕೂಡ ಭಾರತ ಕ್ರಿಕೆಟ್‌ ಭವ್ಯ ಪರಂಪರೆಯ ಪ್ರಮುಖ ಆಟಗಾರನಾಗಿದ್ದವರು. ನಿವೃತ್ತಿ ನಂತರ ಒಂದು ಅವಧಿಗೆ ಬಿಜೆಪಿಯ ಸಂಸದರಾಗಿದ್ದವರು. ಕ್ರಿಕೆಟ್ ಆಟವನ್ನು ಧರ್ಮದಂತೆ ಆರಾಧಿಸುವ ದೊಡ್ಡ ವರ್ಗವೊಂದು ದೇಶದಲ್ಲಿದೆ. ಆದ್ದರಿಂದ ರಾಜಕೀಯ ಮತ್ತು ಕ್ರಿಕೆಟ್‌ ನಡುವಿನ ಅಂತರವನ್ನು ಕಾಯುವ ಮುತ್ಸದ್ಧಿತನ ಅವರಿಂದ ನಿರೀಕ್ಷಿತವೇ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.