ADVERTISEMENT

ವಿಶ್ಲೇಷಣೆ | ಪ್ರಾಣಿ ಮೇಲಿನ ಕ್ರೌರ್ಯ: ತಡೆ ಹೇಗೆ?

ಈ ವಿಷಯದಲ್ಲಿ ಸರ್ಕಾರದ ಪಾತ್ರಕ್ಕಿಂತ ಜನರ ಮನಸ್ಸು ಬದಲಾಗಬೇಕಾಗಿದೆ

ಟಿ.ಆರ್.ಅನಂತರಾಮು
Published 6 ಮಾರ್ಚ್ 2021, 1:15 IST
Last Updated 6 ಮಾರ್ಚ್ 2021, 1:15 IST
 ಪ್ರಾಣಿ ಮೇಲಿನ ಕ್ರೌರ್ಯ: ತಡೆ ಹೇಗೆ?
ಪ್ರಾಣಿ ಮೇಲಿನ ಕ್ರೌರ್ಯ: ತಡೆ ಹೇಗೆ?   

ಲೋಕಸಭೆಯಲ್ಲಿ ಪಶುಸಂಗೋಪನಾ ಸಚಿವರು ಕಳೆದ ತಿಂಗಳಷ್ಟೇ ಒಂದು ಗಂಭೀರ ಪ್ರಶ್ನೆಗೆ ಸರ್ಕಾರದ
ನಿಲುವೇನೆಂಬುದಕ್ಕೆ ಉತ್ತರಿಸಬೇಕಾಯಿತು. ಅದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕುರಿತ ಪ್ರಶ್ನೆ. ಕಳೆದ ವರ್ಷ ಕೇರಳದಲ್ಲಿ ಆನೆಯೊಂದು ಅನಾನಸ್ ಗದ್ದೆಯನ್ನು ಹಾಳುಗೆಡವಿತ್ತು ಎಂದು ಕುಪಿತರಾದವರು ಅದನ್ನು ಪತ್ತೆಹಚ್ಚಿ, ಬಾಯಿಗೆ ಪಟಾಕಿ ಇಟ್ಟು ಸ್ಫೋಟಿಸಿದ್ದರು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗೆ 1960ರಲ್ಲೇ ಕಾನೂನು ರೂಪಿಸಿರುವಾಗ ಏಕೆ ಅದರ ಅನುಷ್ಠಾನದ ಬಗ್ಗೆ ಸರ್ಕಾರ ಕ್ರಿಯಾಹೀನವಾಗಿದೆ ಎಂಬುದು ಆ ಪ್ರಶ್ನೆ. ಸರ್ಕಾರ ಒಡನೆಯೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲೇಬೇಕಾಗಿತ್ತು.

ಮೊದಲ ಹೆಜ್ಜೆ ಎಂದರೆ, 60 ವರ್ಷದ ಹಳೆಯ ಕಾನೂನಿಗೆ ತಿದ್ದುಪಡಿ ತರುವುದು. ಮನುಷ್ಯನನ್ನು ಹೊರತುಪಡಿಸಿ ಉಳಿದೆಲ್ಲ ಜೀವಿಗಳೂ ಈ ಕಾನೂನಿನಡಿ ಬರುತ್ತವೆ. ಪ್ರಾಣಿಗಳಿಗೆ ಮಾಡುವ ಗಾಯ, ಆ ಮೂಲಕ ಅವುಗಳಿಗೆ ಶಾಶ್ವತವಾಗಿ ಅಂಗ ಊನ ಮಾಡುವುದು, ಅವು ಹೊರಲಾರದಷ್ಟು ಹೊರೆ ಹೊರಿಸುವುದು, ಸಾಕುವಾಗ ಅವುಗಳ ಆರೋಗ್ಯದ ಬಗ್ಗೆ ಮತ್ತು ಆಹಾರ ನೀಡಿಕೆಯಲ್ಲಿ ನಿರ್ಲಕ್ಷ್ಯ ಇವೆಲ್ಲವೂ ಅಪರಾಧಗಳ ಸ್ವರೂಪವೇ. ಹಳೆಯ ಕಾನೂನಿನಲ್ಲಿ ಇಂಥ ಅಪರಾಧಿಗಳಿಗೆ ವಿಧಿಸುತ್ತಿದ್ದ ದಂಡ ಕೇವಲ ₹ 50.
ಈಗ ಸರ್ಕಾರ ತಿದ್ದುಪಡಿಯನ್ನು ತರಲು ಹೊರಟಿದೆ. ಕರಡನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಿದೆ. ಪ್ರಮುಖ ಬದಲಾವಣೆ ಎಂದರೆ, ದಂಡದ ಮೊತ್ತವನ್ನು ಕನಿಷ್ಠ ₹ 750ರಿಂದ ₹ 75,000ದವರೆಗೆ ಏರಿಸಿದೆ. ಜೊತೆಗೆ ಅಪರಾಧಿಗಳಿಗೆ ಗರಿಷ್ಠ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಕೂಡ.

ಇದು ಹಲವು ಪ್ರಶ್ನೆಗಳನ್ನು ಸಾರ್ವಜನಿಕರಲ್ಲಿ ಎಬ್ಬಿಸಿದೆ. ಪ್ರಾಣಿಗಳ ಮೇಲಿನ ಕ್ರೌರ್ಯವುಕಾನೂನಿನಿಂದ ಕಡಿಮೆಯಾಗಿದೆಯೇ? ಈ ಪ್ರಶ್ನೆಯಲ್ಲೇ ಉತ್ತರವೂ ಇದೆ; ದೌರ್ಜನ್ಯಕ್ಕೆ ತಡೆಯನ್ನೇ ಹಾಕಿಲ್ಲ. ವನ್ಯಜೀವಿ ಸಂರಕ್ಷಣೆ ನಿಯಮದ ಪ್ರಕಾರ, ಯಾವ ವನ್ಯಜೀವಿಯನ್ನೂ ಕೊಲ್ಲುವ ಹಾಗಿಲ್ಲ. ಅದು ಭಾರಿ ಶಿಕ್ಷಾರ್ಹ ಅಪರಾಧ; ಸಾರ್ವ
ಜನಿಕರಿಗೂ ಗೊತ್ತು. ಇದೇ ಫೆಬ್ರುವರಿಯಲ್ಲಿ ಹಾಸನದ ಅರಸೀಕೆರೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಚಿರತೆಯು ಐದು ಜನರ ಮೇಲೆ ದಾಳಿ ಮಾಡಿತ್ತೆಂದು ಕುಪಿತರಾದ ಜನ, ರಕ್ಷಣೆ ಮಾಡುವವರು ಬರುವ ಮುನ್ನವೇ ದೊಣ್ಣೆಯಿಂದ ಹೊಡೆದು ಸಾಯಿಸಿದ್ದರು. ಕೊಡಗಿನಲ್ಲಿ ಈಗ ಕಾಫಿ ತೋಟಕ್ಕೆ ಹುಲಿಗಳೂ ನುಗ್ಗುತ್ತಿವೆ. ಇದು ಅವುಗಳ ಹೊಸ ಆವಾಸವೆಂದು ವನ್ಯಜೀವಿ ತಜ್ಞರೇ ಹೇಳಿದ್ದಾರೆ.

ADVERTISEMENT

ಕೇಂದ್ರ ಅರಣ್ಯ ಇಲಾಖೆಯ 2020ರ ಸಮೀಕ್ಷೆ ಯಂತೆ, ಕರ್ನಾಟಕದಲ್ಲಿ 1,783 ಚಿರತೆಗಳಿವೆ. ಹೆಮ್ಮೆಪಡಬೇಕಾದ್ದೇ. ಇದೇ ಗಳಿಗೆಯಲ್ಲಿ ಮಾನವ- ವನ್ಯಜೀವಿ ಸಂಘರ್ಷವೂ ಹೆಚ್ಚುತ್ತಿದೆ. ಮೂಲ ಆವಾಸ ನಾಶ, ಆಹಾರ ಬೇಟೆಗೆ ಸಂರಕ್ಷಣಾ ವಲಯದಿಂದ ಹೊರಬರುವ ಪರಿಸ್ಥಿತಿ ಜೊತೆಗೆ ಸಂಖ್ಯೆಯಲ್ಲಿ ಹೆಚ್ಚಳ- ಇವೇ ಮುಂತಾದ ಕಾರಣಗಳನ್ನು ಗುರುತಿಸಬಹುದು. ಇಲ್ಲಿ ಗಮನಿಸಬೇಕಾದದ್ದು ಮನುಷ್ಯಕೇಂದ್ರಿತ ತೀರ್ಪು. ಪ್ರಾಣಿಗಳ ಆ ವರ್ತನೆಗೆ ಹಿಂಸೆಯಿಂದಲೇ ಉತ್ತರ ಕೊಡುವ ಅತಾರ್ಕಿಕ ಮತ್ತು ಅಮಾನವೀಯ ನಿರ್ಧಾರ- ಶಿಕ್ಷೆಯಾಗುತ್ತದೆಂದು ತಿಳಿದಿದ್ದರೂ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ- 1960ರ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ಹೊರಟಿರುವುದು ಸಾಕುಪ್ರಾಣಿಗಳಿಗೆ ಸಂಬಂಧಿಸಿದ್ದು. ಏಕೆಂದರೆ ವನ್ಯಜೀವಿ ಸಂರಕ್ಷಣೆಗೆ ಬೇರೆ ಕಾನೂನು ಕಟ್ಟಲೆಗಳೇ ಇವೆ. ಹಳೆಯ ಕಾನೂನಿನಲ್ಲಿ ಶಿಕ್ಷೆಯ ಬಗ್ಗೆ ಸ್ಪಷ್ಟ ಸೂಚನೆಗಳಿದ್ದರೂ ಅವು ಅನುಷ್ಠಾನಗೊಂಡಿಲ್ಲ ಎನ್ನುವುದು ವನ್ಯಜೀವಿಗಳ ಆಕ್ರಮಣಕ್ಕೆ ತುತ್ತಾದ ಜನರ ಆಕ್ರೋಶ. ದೇಶದ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದಂತೆ ಒಟ್ಟು 316 ಮೊಕದ್ದಮೆಗಳು
ಇತ್ಯರ್ಥವಾಗದೆ ಉಳಿದಿವೆ. ಇಂಥ ಮೊಕದ್ದಮೆಗಳನ್ನು ನ್ಯಾಯಾಲಯಗಳು ಶೀಘ್ರವಾಗಿ ಏಕೆ ಕೈಗೆತ್ತಿಕೊಳ್ಳುತ್ತಿಲ್ಲ? ಏಕೆಂದರೆ ಇದು ಆದ್ಯತೆಯಲ್ಲ!

ಸಾಹಿತಿ ಯು.ಆರ್.ಅನಂತಮೂರ್ತಿ ಅವರು
ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳು ವಸ್ತುಸ್ಥಿತಿಗೆ ಕನ್ನಡಿ ಹಿಡಿಯುತ್ತವೆ: ‘ಚಿಕನ್ ತಿನ್ನುವುದರ ವಿರುದ್ಧ ನನ್ನದೇನೂ ತಕರಾರಿಲ್ಲ. ಆದರೆ ಕೋಳಿಗಳನ್ನು ಸೈಕಲ್ಲಿನಲ್ಲಿ ಗೊಂಚಲಿನಂತೆ ಕಟ್ಟಿ, ತಲೆಕೆಳಗು ಮಾಡಿ, ಅವುಗಳ ಉಸಿರಾಟವನ್ನೂ ಲೆಕ್ಕಿಸದೆ ಒಯ್ಯುವ ರೀತಿ. ಹಾಗೆಯೇ ಕೋಳಿಗೂಡಿನಲ್ಲಿ ಅವುಗಳು ಮಿಸುಕಲೂ ಆಗದಂತೆ ಮಾಡಿರುವ ಇಕ್ಕಟ್ಟು ಮನಸ್ಸಿಗೆ ಬೇಸರ ತರುತ್ತದೆ’ ಎಂದಿದ್ದರು.

ಹಬ್ಬ ಹರಿದಿನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ಕೊಡುವುದನ್ನು ಸರ್ಕಾರವು ಕಾನೂನಾತ್ಮಕವಾಗಿ 1959ರಲ್ಲೇ ನಿಷೇಧಿಸಿದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂಬ ಸಂವಿಧಾನದ ಆಶಯವನ್ನು ಮತ್ತೆ ಮತ್ತೆ ನೆನಪಿಸುತ್ತಿದೆ ಕೂಡ. ಆದರೂ ಕದ್ದುಮುಚ್ಚಿ ಸಣ್ಣ ಪ್ರಮಾಣದಲ್ಲಾದರೂ ಪ್ರಾಣಿಬಲಿ ನಡೆದೇ ಇದೆ. ಈಗ ಹಿಂಸೆ ಎನ್ನುವುದಕ್ಕೆ ಮರುವ್ಯಾಖ್ಯಾನದ ಅವಶ್ಯಕತೆ ಇದೆ.

ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಹಿಂಸೆ ಯಲ್ಲವೇ ಎಂಬುದು ಪ್ರಾಣಿ ದಯಾ ಸಂಘಗಳ ವಾದ. ಈ ವಿಚಾರ ಎಲ್ಲ ಸಂದರ್ಭಗಳಲ್ಲೂ ವಿವಾದಕ್ಕೆಡೆ ಮಾಡು ತ್ತದೆ. ಏಕೆಂದರೆ ಸಮಾಜವನ್ನು ಸಸ್ಯಾಹಾರಿಯನ್ನಾಗಿ ಮಾಡಿ ಎನ್ನುವುದು ಸಮಾಜದ ಆಹಾರ ಪದ್ಧತಿಯನ್ನೇ ಪ್ರಶ್ನಿಸಿದಂತಲ್ಲವೇ ಎಂಬುದು ಸಮಾಜದ ನಿಲುವು. ‘ಆಹಾರ ನಮ್ಮ ಆಯ್ಕೆ, ನಮ್ಮ ಹಕ್ಕು’ ಎನ್ನುವುದು ಪ್ರತಿಪಾದನೆಯ ಒಂದು ಮಗ್ಗುಲಾದರೆ, ಇನ್ನೊಂದು ಅಸಹಾಯಕತೆಯ ಪ್ರಶ್ನೆ-ಕೃಷಿಗೆ ಬಳಸಿದ ಮೇಲೆ ಮುದಿ ರಾಸುಗಳನ್ನು ಎಲ್ಲಿ ಇಟ್ಟುಕೊಳ್ಳುವುದು? ಅವನ್ನು ನಿಭಾಯಿಸುವುದು ಹೇಗೆ ಎನ್ನುವುದು ರೈತಾಪಿ ವರ್ಗದ ಪ್ರಶ್ನೆ. ಮಾಂಸ ಮಾರಾಟವೇ ವೃತ್ತಿಯಾದವರಿಗೆ ತಮ್ಮ ಗತಿ ಏನು ಎಂಬ ಆತಂಕ. ಇವೆರಡೂ ಸುದೀರ್ಘ ಚರ್ಚೆಗೆ ಹಿಂದೆಯೂ ಗ್ರಾಸವಾಗಿವೆ, ಈಗಲೂ ಕೂಡ. ಇದು ಆದಿ-ಅಂತ್ಯವಿಲ್ಲದ ಉತ್ತರ ಕಾಣದ ಪ್ರಶ್ನೆಯಾಗಿಯೇ ಉಳಿದಿದೆ.

ಈ ವರ್ಷದ ಆರಂಭದಲ್ಲೇ ಕರ್ನಾಟಕ ಸರ್ಕಾರವು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿತು. ಈ ಕಾಯ್ದೆಯ ಪ್ರಕಾರ, ಗೋಹತ್ಯೆ ಕರ್ನಾಟಕದಲ್ಲಿ ಸಂಪೂರ್ಣ ನಿಷೇಧವಾಗಿದೆ. ಉಲ್ಲಂಘಿಸಿದವರಿಗೆ ಐದು ಲಕ್ಷ ರೂಪಾಯಿ ದಂಡ, ಏಳು ವರ್ಷಗಳವರೆಗೆ ಜೈಲುವಾಸ. ಇಲ್ಲೊಂದು ವಿರೋಧಾಭಾಸ ಎದ್ದುಕಾಣು ತ್ತದೆ. ಹದಿಮೂರು ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಎಮ್ಮೆ, ಕೋಣಗಳನ್ನು ಮಾಂಸಕ್ಕಾಗಿ ಕತ್ತರಿಸಲು ಅವಕಾಶವಿದೆ. ಹಿಂಸೆ ಎಂದರೆ ಬೇರೆ ಬೇರೆ ಪ್ರಾಣಿಗಳಿಗೆ ಬೇರೆ ಬೇರೆ ವಿಧದಲ್ಲಿರುತ್ತದೆಯೇ ಎಂಬುದು ಜನಸಾಮಾನ್ಯರು ಕೂಡಾ ಕೇಳಬಹುದಾದ ಪ್ರಶ್ನೆ. ಪ್ರಾಣಿಗಳ ಹಕ್ಕಿಗಾಗಿ ಹೋರಾಡುತ್ತಿರುವ ‘ಪೆಟಾ’ದ (ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಫಾರ್ ಅನಿಮಲ್ಸ್) ಭಾರತದ ಮುಖ್ಯ ಕಚೇರಿ ಮುಂಬೈನಲ್ಲಿದೆ. ಅದು
ಪ್ರದರ್ಶಿಸಿರುವ ಘೋಷವಾಕ್ಯ: ‘ಪ್ರಾಣಿ ನಮ್ಮವಲ್ಲ, ಅವುಗಳ ಮೇಲೆ ನಮ್ಮ ಹಕ್ಕಿಲ್ಲ’.

ತಮಿಳುನಾಡಿನ ಮದುರೆಯಲ್ಲಿ ‘ಜಲ್ಲಿಕಟ್ಟು’ ಹೆಸರಿನಲ್ಲಿ ಹೋರಿಗಳಿಗೆ ಮಾಡುವ ಹಿಂಸೆ, ಕರಾವಳಿ
ಕರ್ನಾಟಕದಲ್ಲಿ ‘ಕಂಬಳ’ದ ಹೆಸರಿನಲ್ಲಿ ಕೋಣಗಳಿಗೆ ಬೀಳುವ ಪೆಟ್ಟು ಕೂಡ ಹಿಂಸೆಯ ಪ್ರತಿರೂಪ
ಎನ್ನುವುದು ಪ್ರಾಣಿ ದಯಾ ಸಂಘದ ವಾದ. ಆದರೆ ಇದನ್ನು ಬಲವಾಗಿ ವಿರೋಧಿಸುವವರು ತಳೆದಿರುವ ನಿಲುವೇ ಬೇರೆ. ಇವು ನಮ್ಮ ಜನಪದ ನಂಬಿಕೆಗಳು, ಲಾಗಾಯ್ತಿನಿಂದ ರೂಢಿಯಲ್ಲಿವೆ, ಸಾಂಸ್ಕೃತಿಕವಾಗಿ ಒಪ್ಪಿರುವಂತಹವು. ಇದಕ್ಕೆ ಅಡ್ಡಬರಲು ಯಾರಿಗೂ ಹಕ್ಕಿಲ್ಲ. ಇದು ಅವರ ದನಿ.

ಜಲ್ಲಿಕಟ್ಟು ಪ್ರಕರಣವು ಸುಪ್ರೀಂ ಕೋರ್ಟಿನ ಕಟಕಟೆಯನ್ನೂ ಏರಿತು. ಅಂತಿಮವಾಗಿ ನ್ಯಾಯಾ ಲಯವು ಜಲ್ಲಿಕಟ್ಟಿನ ಪರವಾಗಿ ನಿಂತಿತು. ಇಲ್ಲಿ ಸ್ಪಷ್ಟ ಸಂದೇಶವೊಂದು ಕಾಣುತ್ತದೆ. ಪ್ರಾಣಿಗಳ ಮೇಲಿನ
ಕ್ರೌರ್ಯ ತಡೆಗೆ ಸರ್ಕಾರದ ಪಾಲಿಗಿಂತ ಜನಮನ ಬದಲಾಗಬೇಕು. ‘ದಯವೇ ಬೇಕು ಸಕಲ
ಪ್ರಾಣಿಗಳಲ್ಲಿಯೂ’ ಎನ್ನುವ ಬಸವ ತತ್ವ, ಕಾನೂನಿಗಿಂತ
ಹೆಚ್ಚು ಪರಿಣಾಮಕಾರಿ- ನಮ್ಮ ಹೃದಯಕ್ಕೆ ಇಳಿಯಬೇಕು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.