ADVERTISEMENT

ವಿಶ್ಲೇಷಣೆ: ಸ್ವಚ್ಛತೆಯ ಅರ್ಥ ನಮಗೆ ಗೊತ್ತೇ?

ಆರೋಗ್ಯ ಕುರಿತ ಗಾಂಧೀಜಿ ವಿಚಾರಕ್ಕೆ ನಮ್ಮಲ್ಲಿ ಸಹಮತ ಮೂಡಲು ಕೊರೊನಾ ಬರಬೇಕಾಯಿತು

ಅರವಿಂದ ಚೊಕ್ಕಾಡಿ
Published 11 ಅಕ್ಟೋಬರ್ 2020, 19:31 IST
Last Updated 11 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎನ್ನುವುದು ಬಾಲ್ಯದಿಂದಲೂ ಎಲ್ಲರ ತಲೆಗೂ ತುಂಬಿಹೋದ ವಿಷಯ. ಅದರ ಜೊತೆಗೆ, ಸ್ವಾತಂತ್ರ್ಯವೆಂದರೆ ಬ್ರಿಟಿಷರನ್ನು ಓಡಿಸುವುದು ಎಂಬಲ್ಲಿಗೆ ಸ್ವಾತಂತ್ರ್ಯದ ಅರ್ಥ ಸೀಮಿತವಾದಾಗ, ಬ್ರಿಟಿಷರನ್ನು ಭಾರತದಿಂದ ಹೋಗುವಂತೆ ಮಾಡುವುದರಲ್ಲಿ ಕೆಲಸ ಮಾಡಿದ ನೂರಾರು ಸಂಗತಿಗಳಿವೆ. ಗಾಂಧಿಯೂ ಅದರಲ್ಲೊಬ್ಬರು ಅಷ್ಟೆ. ತೇಜಸ್ವಿ ತಿಲಕ್, ಸಂಯಮಿ ಗೋಖಲೆ, ತ್ಯಾಗಿ ಆಜಾದ್, ಹುತಾತ್ಮ ಭಗತ್, ವೀರ ಸಾವರ್ಕರ್, ಚಾಣಾಕ್ಷ ರಾಜಾಜಿ, ಮುತ್ಸದ್ದಿ ನೆಹರೂ, ನಿಷ್ಠಾವಂತ ಪಟೇಲ್, ಯೋಧ ಬೋಸ್ ಇವರೆಲ್ಲರ ಧ್ಯೇಯದೊಂದಿಗಿದ್ದೂ ಅವರ ಯಾರಂತೆಯೂ ಅಲ್ಲದ ಗಾಂಧಿ ಏಕಾಂಗಿ. ಅಲ್ಲಿ ಬ್ರಿಟಿಷರೂ ಇಲ್ಲ, ಇತರ ಸ್ವಾತಂತ್ರ್ಯ ಹೋರಾಟಗಾರರೂ ಇಲ್ಲ. ಬರೀ ಗಾಂಧಿಯೊಬ್ಬರೇ ಇದ್ದಾರೆ.

ಅರವಿಂದ ಚೊಕ್ಕಾಡಿ

ಆ ಏಕಾಂಗಿ ಗಾಂಧಿ ಯಾರು? ಅವರು, ಇಂದಿಗೂ ನಾವು ಅರ್ಥ ಮಾಡಿಕೊಂಡಿಲ್ಲದ ಸ್ವಾತಂತ್ರ್ಯದ ಅರ್ಥವನ್ನು ವಿವರಿಸಿದ ಗಾಂಧಿ. ತನ್ನ ಪ್ರತಿಯೊಂದು ಚಟುವಟಿಕೆ ಮತ್ತು ಚಿಂತನೆಯನ್ನು ಸ್ವಾತಂತ್ರ್ಯದ ರೂಪಕವಾಗಿ ನಿರೂಪಿಸಿದ ಗಾಂಧಿ. ಮಹರ್ಷಿ ವ್ಯಾಸರ ನಂತರ ಭಾರತವನ್ನು ಸಮಗ್ರವಾಗಿ ಗ್ರಹಿಸಿದ ಗಾಂಧಿ.

ಈ ಮನೋಧರ್ಮವು ಭಾರತದ ಸಮಗ್ರ ಅರಿವಿನಿಂದ, ಮಾನವ ಸ್ವಭಾವಗಳ ಕುರಿತ ಆಳವಾದ ಚಿಂತನೆಗಳಿಂದಲೇ ಬಂದಿದೆ. ಬಹುಶಃ ಇನ್ನೊಂದು ಐನೂರು ವರ್ಷಗಳ ನಂತರ ಸ್ವಾತಂತ್ರ್ಯ ಹೋರಾಟವು ಇತಿಹಾಸದ ಬರೀ ವಿವರಗಳಾಗುತ್ತದೆ. ಆದರೆ ಆಗಲೂ ಸ್ವಾತಂತ್ರ್ಯ ಹೋರಾಟವನ್ನು ಜೀವಂತ ಬದುಕಿನ ಪರಂಪರೆಯಾಗಿ ಕಾಣಿಸಬಲ್ಲವರು ಗಾಂಧಿ ಒಬ್ಬರೇ. ಆದ್ದರಿಂದಲೇ ಗಾಂಧೀಜಿಯ ಸ್ವಚ್ಛತೆಯ ಪರಿಕಲ್ಪನೆಯನ್ನು ಕೇವಲ ಸ್ವಚ್ಛತೆಯ ಕಾರ್ಯಕ್ರಮವಾಗಿ ನೋಡಲು ಬರುವುದಿಲ್ಲ.

ADVERTISEMENT

ಗಾಂಧೀಜಿಗೆ ಬುದ್ಧಿವಾದ ಹೇಳುವುದರಲ್ಲಿ ಆಸಕ್ತಿ ಇರಲಿಲ್ಲ. ಅವರು ಅಂದುಕೊಂಡದ್ದನ್ನು ಮಾಡುತ್ತಿದ್ದರು. ಗಾಂಧೀಜಿ ತನ್ನನ್ನು ತಾನು ‘ಭಂಗಿ’ ಎಂದು ಕರೆದುಕೊಂಡಿದ್ದರು. ಎಲ್ಲರ ಮನೆಗಳನ್ನೂ ಸ್ವಚ್ಛ ಮಾಡುವ ಭಂಗಿಗಳನ್ನು ಯಾರೂ ಮುಟ್ಟುವಂತಿಲ್ಲ ಎಂಬ ಪದ್ಧತಿಯನ್ನು ಗಾಂಧೀಜಿ 12ನೇ ವಯಸ್ಸಿನಲ್ಲೇ ಪ್ರತಿಭಟಿಸಿದ್ದರು. ಗಾಂಧೀಜಿಯ ಊರಿನಲ್ಲಿ ‘ಉಕಾ’ಗಳು ಎನ್ನುವವರು ಸ್ವಚ್ಛತಾ ಕಾರ್ಯ ಮಾಡುವವರಾಗಿದ್ದರು. ಬಾಲಕ ಗಾಂಧಿ, ಉಕಾಗಳನ್ನು ಮುಟ್ಟಲು ಹೋದಾಗ ಗಾಂಧೀಜಿಯ ತಾಯಿ ಪುತಲೀಬಾಯಿ ‘ಅವರನ್ನು‌ ಮುಟ್ಟಬಾರದು’ ಎಂದರು. ಆಗ ಗಾಂಧಿ, ‘ಅಮ್ಮಾ, ನೀನೇ ನನಗೆ ರಾಮಾಯಣವನ್ನು ಹೇಳಿರುವೆ. ಗುಹನೂ ಈ ಕೆಲಸದವನೇ. ಆದರೆ ಗುಹನನ್ನು ರಾಮ ಅಪ್ಪಿಕೊಳ್ಳುತ್ತಾನೆ. ರಾಮ ಅಪ್ಪಿಕೊಂಡವರನ್ನು ನಾನೇಕೆ ಮುಟ್ಟಬಾರದು? ರಾಮಾಯಣ ನಮಗೆ ಕೆಟ್ಟದ್ದನ್ನು ಕಲಿಸುತ್ತದೆಯೇ?’ ಎಂದು ಕೇಳುತ್ತಾರೆ. ಪುತಲೀಬಾಯಿಯವರ ಬಳಿ ಉತ್ತರವಿರಲಿಲ್ಲ.

ಇಂಗ್ಲೆಂಡ್, ಅಮೆರಿಕದಂತಹ ಪಶ್ಚಿಮದ ರಾಷ್ಟ್ರಗಳ ಜೀವನ ಪದ್ಧತಿಯನ್ನು ಗಾಂಧೀಜಿ ಒಪ್ಪಲಿಲ್ಲ. ಆದರೆ ಸ್ವಚ್ಛತೆಯ ವಿಷಯದಲ್ಲಿ ಮಾತ್ರ, ‘ಪಾಶ್ಚಿಮಾತ್ಯ ದೇಶಗಳಲ್ಲಿರುವಂತಹ ಸ್ವಚ್ಛತೆಯನ್ನೇ ಭಾರತದಲ್ಲಿ ತರಬೇಕು’ ಎಂಬ ನಿಲುವನ್ನು ಹೊಂದಿದ್ದರು. ಗಾಂಧೀಜಿ ಪ್ರಕಾರ, ಟಾಯ್ಲೆಟ್ ಯಾವಾಗಲೂ ಡ್ರಾಯಿಂಗ್ ರೂಮಿನಂತೆ ಇರಬೇಕು. ದಕ್ಷಿಣ ಆಫ್ರಿಕಾದಿಂದ ಗಾಂಧೀಜಿ ಹಿಂದಿರುಗುವಾಗ ಮಹಾರಾಷ್ಟ್ರದಲ್ಲಿ ಪ್ಲೇಗ್ ರೋಗ ಬಂದಿತ್ತು. ಅದು ರಾಜ್‌ಕೋಟೆಗೂ ಹಬ್ಬುವಂತಿತ್ತು. ಗಾಂಧೀಜಿ ಆಗ ಮನೆ ಮನೆಗೆ ಹೋಗಿ ಸ್ವಚ್ಛತೆಯ ಅರಿವನ್ನು ಉಂಟು ಮಾಡಿದ್ದರು ಮತ್ತು ಸ್ವಚ್ಛತೆಯ ಅರಿವಿಲ್ಲದವರಿಗೆ ಸ್ವತಃ ಸ್ವಚ್ಛಗೊಳಿಸಿ ತೋರಿಸಿಕೊಟ್ಟಿದ್ದರು.

ಹರಿಪುರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ಬಂದಿದ್ದ ಪ್ರತಿನಿಧಿಗಳು ಅವರ ಕೋಣೆಯ ಹೊರಗಿನ‌ ಜಗಲಿಯ ಬಳಿಯೇ ಮೂತ್ರ ಮಾಡುವುದನ್ನು ನೋಡಿ ಗಾಂಧೀಜಿ ಚಿಂತಿತರಾದರು. ಆ ಸ್ಥಳವನ್ನು ಸ್ವಚ್ಛ ಮಾಡಲು ಸ್ವಯಂಸೇವಕರನ್ನು ಕರೆದರು. ಸ್ವಯಂಸೇವಕರು, ‘ಅದು ನಮ್ಮ‌ ಕೆಲಸ ಅಲ್ಲ, ಭಂಗಿಗಳ ಕೆಲಸ’ ಎಂದರು. ‘ಹೌದಾ, ಸರಿ ಹಾಗಾದರೆ’ ಎಂದು ಸ್ವತಃ ಗಾಂಧೀಜಿಯೇ ಎಲ್ಲವನ್ನೂ ಸ್ವಚ್ಛ ಮಾಡಿದರು. ಮರುದಿನವೇ ಕಾಂಗ್ರೆಸ್‌ನಲ್ಲಿ ‘ಭಂಗಿ ತಂಡ’ ಎಂದು ಒಂದು ತಂಡವನ್ನು ರೂಪಿಸಿದರು. ಅರ್ಚಕರೂ ಭಂಗಿಗಳಾದರು, ಶಿಕ್ಷಕರೂ ಭಂಗಿಗಳಾದರು, ವಿದ್ಯಾರ್ಥಿಗಳೂ ಭಂಗಿಗಳಾದರು.

ಒಮ್ಮೆ ಕಾಶಿ ವಿದ್ಯಾಪೀಠಕ್ಕೆ ತೆರಳಿದ್ದ ಸಂದರ್ಭದಲ್ಲಿ, ವಿಶ್ವನಾಥ ದೇವಸ್ಥಾನಕ್ಕೆ ಗಾಂಧೀಜಿ ಹೋದರು. ದೇವಸ್ಥಾನದ ಪರಿಸರದ ಅಸಹ್ಯವನ್ನು ನೋಡಿ, ‘ಕಾಶಿ ದೇವಾಲಯದ ಮಾಲಿನ್ಯ ನಮ್ಮೆಲ್ಲರ ಮನಸ್ಸಿನ‌ ಮಾಲಿನ್ಯವನ್ನು ಸೂಚಿಸುವುದಿಲ್ಲವೇ?’ ಎಂದು ಕೇಳಿ ಸ್ವಚ್ಛತೆಗೆ ಇಳಿದರು‌.

ಗಾಂಧೀಜಿ ಹೋದಲ್ಲೆಲ್ಲ ಆಯಾ ಪುರಸಭೆಯವರಲ್ಲಿ, ‘ನಿಮ್ಮ ರಸ್ತೆಗಳು ಸ್ವಚ್ಛವಾಗಿವೆ. ಉದ್ಯಾನಗಳು ಸುಂದರವಾಗಿವೆ, ಸಂತೋಷವಾಯಿತು. ಆದರೆ ಇದನ್ನೆಲ್ಲ ಸ್ವಚ್ಛಗೊಳಿಸುವವರು ಎಲ್ಲಿ ವಾಸಿಸುತ್ತಾರೆಂದು ನೋಡಿದ್ದೀರಾ? ಅವರು ಆರೋಗ್ಯಕರ ನಿರ್ಮಲ ಪರಿಸರದಲ್ಲಿ ಬದುಕುವಂತೆ ಮಾಡುವುದು ನಮ್ಮ‌ ಜವಾಬ್ದಾರಿಯಲ್ಲವೇ?’ ಎಂದು ಕೇಳುತ್ತಿದ್ದರು.

ಸ್ವಾವಲಂಬನೆಯ ಪಾಠ ಸ್ವಚ್ಛತೆಯಿಂದ ಪ್ರಾರಂಭವಾಗುವುದರ ಹಿಂದೆ ಮನೋವೈಜ್ಞಾನಿಕ ಕಾರಣಗಳಿವೆ. ನಿಜವಾಗಿ ಅವಮಾನಗೊಳ್ಳಲು ಅರ್ಹರಾದವರು ಮಾಲಿನ್ಯವನ್ನು ಉಂಟುಮಾಡುವವರು. ಆದರೆ ಸಮಾಜದ ನಂಬಿಕೆ ಅದಕ್ಕೆ ವಿರುದ್ಧವಾಗಿ ಬೆಳೆದಿದ್ದು, ಸ್ವಚ್ಛಗೊಳಿಸುವವರನ್ನು ಮುಟ್ಟಬಾರದು ಎಂಬ ನಂಬಿಕೆಯನ್ನು ಬೆಳೆಸಿದೆ. ಯಾವ ಕೆಲಸವನ್ನು ಅತ್ಯಂತ ಕೆಳಮಟ್ಟದ್ದೆಂದು ಭಾವಿಸಲಾಗಿದೆಯೋ ಅದನ್ನು ಸ್ವತಃ ಗಾಂಧೀಜಿ ಮಾಡಿದರು.

ಗಾಂಧೀಜಿಯ ಮೂಲಶಿಕ್ಷಣದ ಪರಿಕಲ್ಪನೆಯು ಕೌಶಲಗಳನ್ನೇ ಪ್ರಧಾನವಾಗಿ ನೆಚ್ಚಿಕೊಂಡಿದೆ. ಸ್ವಚ್ಛತೆಯೂ ಒಂದು ಕೌಶಲವೇ. ‘ಹಿಂದ್ ಸ್ವರಾಜ್’ನಲ್ಲಿ ಗಾಂಧೀಜಿ, ಸ್ವರಾಜ್ಯವೆಂದರೆ ತನ್ನ ಕೆಲಸವನ್ನು ತಾನು ಮಾಡುವುದು ಎಂದಿದ್ದಾರೆ. ಜನ ಸ್ವತಃ ಜವಾಬ್ದಾರಿಯುತರಾಗಿ ವರ್ತಿಸಿ ಎಲ್ಲರ ಮತ್ತು ಎಲ್ಲದರ ಸಮಗ್ರ ಅಭ್ಯುದಯವನ್ನು ಸಾಧಿಸುವ ‘ಸರ್ವೋದಯ’ ತತ್ವದಲ್ಲಿ ಅವರು ನಂಬಿಕೆ ಇಟ್ಟವರಾಗಿದ್ದರು.

ಭಾರತೀಯ ಪರಂಪರೆಯಲ್ಲಿ ಆತ್ಮಶುದ್ಧಿಗೆ ಬಹಳ ಮಹತ್ವವಿದೆ. ಧರ್ಮದ ಪ್ರಕಾರ, ದೇವರನ್ನು ತಲುಪಬೇಕಾದರೆ ಕಾಯಾ-ವಾಚಾ-ಮನಸಾ ಸ್ವಚ್ಛತೆ ಇರಬೇಕು. ಗಾಂಧೀಜಿ ವಕೀಲ ವೃತ್ತಿಯನ್ನು, ‘ಸುಳ್ಳು ಹೇಳಬೇಕಾಗುತ್ತದೆ’ ಎಂಬ ಕಾರಣಕ್ಕಾಗಿಯೂ ಆಧುನಿಕ ವೈದ್ಯಕೀಯವು ಜನ ತಮ್ಮ ದೇಹದ ಬಗ್ಗೆ ತಾವೇ ಕಾಳಜಿ ಮಾಡದ ಹಾಗೆ ಮಾಡುತ್ತದೆ ಎಂಬ ಕಾರಣಕ್ಕಾಗಿಯೂ ವಿರೋಧಿಸಿದ್ದರು. ಗಾಂಧಿ ಪಾರಂಪರಿಕವಾದ ಜಲ ಚಿಕಿತ್ಸೆ ಮತ್ತು ಮಣ್ಣಿನ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತಿದ್ದರು.

ಗಾಂಧಿಯವರ ಎಲ್ಲ ಚಿಂತನೆಗಳೂ ಪರಿಸರದ ಮೇಲೆ ಮಾನವ ಒಡೆತನವನ್ನು ಸಾಧಿಸುವುದಲ್ಲ, ಬದಲಿಗೆ ಪರಿಸರದೊಂದಿಗೆ ಬಾಳುವುದರಲ್ಲಿದೆ ಎಂಬುದನ್ನೇ ಪ್ರತಿಪಾದಿಸುತ್ತವೆ. ಈ ಪರಿಕಲ್ಪನೆಯು ಭಾರತದ ಧಾರ್ಮಿಕ ಪರಂಪರೆಯ ಭಾಗವೇ ಆಗಿದೆ.

ಗಾಂಧೀಜಿ ವಿಚಾರ ಸರಿ ಇತ್ತು ಎನ್ನುವುದು ಕೊರೊನಾ ಬಂದಾಗ ಗೊತ್ತಾಯಿತು‌, ಯಾವಾಗ ಔಷಧಿ ಇಲ್ಲ ಎಂದು ಗೊತ್ತಾಯಿತೊ ಆಗ ಜನ ತಮ್ಮ ಆರೋಗ್ಯದ ಬಗ್ಗೆ ತಾವೇ ಕಾಳಜಿ ಮಾಡಲು ತೊಡಗಿದರು. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವುದಕ್ಕಿಂತ ಅನಾರೋಗ್ಯವಾಗದ ಹಾಗೆ ಮಾಡುವುದನ್ನು ಗಾಂಧಿ ನಂಬಿದ್ದರು‌. ವಂಶವಾಹಿಗಳ ಮೂಲಕ ಹರಿದುಬರುವ ಕಾಯಿಲೆಗಳನ್ನು ಬಿಟ್ಟರೆ ಎಲ್ಲ ಕಾಯಿಲೆಗಳ ಮೂಲವೂ ಪರಿಸರ ಮಾಲಿನ್ಯವಾಗಿರುತ್ತದೆ.

ಮನುಷ್ಯನ ಉಸಿರಿನ ಇಂಗಾಲದ ಡೈ ಆಕ್ಸೈಡ್ ಸಸ್ಯದ ಆಹಾರ ತಯಾರಿಕೆಗೆ ಬೇಕು. ಅಂದರೆ ಸಸ್ಯದ ಅರ್ಧ ಜೀವವು ಮನುಷ್ಯ ಮತ್ತು ಇತರ ಮೃಗಗಳ ಬಳಿ ಇದೆ. ಸಸ್ಯವು ವಿಸರ್ಜಿಸುವ ಆಮ್ಲಜನಕವು ಮನುಷ್ಯ ಮತ್ತು ಇತರ ಮೃಗಗಳಿಗೆ ಬೇಕು. ಅಂದರೆ ನಮ್ಮ ಅರ್ಧ ಜೀವ ಸಸ್ಯದ ಬಳಿ ಇದೆ. ಆದ್ದರಿಂದ ಪರಿಸರ ರಕ್ಷಣೆಯು ನಮ್ಮ ರಕ್ಷಣೆಯೂ ಆಗಿದೆ. ಪ್ರಕೃತಿ ಮನುಷ್ಯನಿಗೆ ಅದ್ಭುತವಾದ ಪಾಠವನ್ನು ಕಲಿಸುತ್ತದೆ. ಪ್ರಕೃತಿಯಲ್ಲಿ ಭಿನ್ನತೆ ಇದೆ. ಆದರೆ ಅಸಮಾನತೆ ಇಲ್ಲ.

ಅಂತರಂಗದ ಸ್ವಚ್ಛತೆಯೂ ಮಹತ್ವದ್ದೇ. ಗಾಂಧಿ ಯಾವುದನ್ನೂ ಅಡಗಿಸಿಡದೆ ಅಂತರಂಗದಲ್ಲೂ ಸ್ವಚ್ಛವಾಗಿದ್ದರು. ಆದ್ದರಿಂದಲೇ ವೈಯಕ್ತಿಕವಾಗಿ ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂಬ ಅವರ ಮಾತಿಗೆ ಮಹತ್ವ ಬರುತ್ತದೆ. ಸ್ವತಃ ಗಾಂಧೀಜಿಯೇ ಎಲ್ಲ ಅರ್ಥಗಳಲ್ಲಿಯೂ ಸ್ವಚ್ಛತೆಯ ರೂಪಕವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.