ADVERTISEMENT

ವಿಶ್ಲೇಷಣೆ: ಆರ್ಥಿಕ ಪ್ರಗತಿ, ಯಾವುದು ಸ್ಫೂರ್ತಿ?

ವೇಣುಗೋಪಾಲ್‌ ಟಿ.ಎಸ್‌.
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
   
ನಿರಂತರ ಪ್ರಗತಿಯ ಹಿಂದಿರುವ ಕಾರಣಗಳು, ಪ್ರೇರಣೆಗಳು ಯಾವ ಬಗೆಯವು? ಸೈದ್ಧಾಂತಿಕ ಜ್ಞಾನ ಮತ್ತು ಪ್ರಾಯೋಗಿಕ ಜ್ಞಾನಗಳ ಸಮನ್ವಯ ಇಲ್ಲದಿದ್ದರೆ ಏನಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ, ಈ ವರ್ಷ ನೊಬೆಲ್ ಬಹುಮಾನ ಪಡೆದ ಮೂವರು ಅರ್ಥಶಾಸ್ತ್ರಜ್ಞರ ಅಧ್ಯಯನವನ್ನು ಗಮನಿಸಬೇಕು.

ಆರ್ಥಿಕ ಪ್ರಗತಿ ಅನ್ನುವುದು ಲಾಗಾಯ್ತಿನಿಂದ ಆಗುತ್ತಿರುವ ಪ್ರಕ್ರಿಯೆ ಏನಲ್ಲ. ಕೇವಲ ಎರಡು ಶತಮಾನಗಳಿಂದೀಚೆಗೆ– ಅಂದರೆ, ಕೈಗಾರಿಕಾ ಕ್ರಾಂತಿಯ ನಂತರ ಆರ್ಥಿಕ ಪ್ರಗತಿ ನಿರಂತರವಾಗಿ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಹಿಂದೆಯೂ ಹಲವು ವೈಜ್ಞಾನಿಕ ಅನ್ವೇಷಣೆಗಳಾಗಿದ್ದವು. ಆದರೂ, ನಿರಂತರ ಆರ್ಥಿಕ ಪ್ರಗತಿ ಆಗಿರಲಿಲ್ಲ. ತಾತ್ಕಾಲಿಕವಾಗಿ ಒಂದಿಷ್ಟು ಪ್ರಗತಿಯಾಗುತ್ತಿತ್ತು. ಅದು ಅಲ್ಲಿಗೇ ನಿಂತು ಹೋಗುತ್ತಿತ್ತು, ಮುಂದುವರಿಯುತ್ತಿರಲಿಲ್ಲ. ಯಾಕೆ ಹೀಗೆ? ಅನ್ನುವ ಪ್ರಶ್ನೆಗೆ ಈ ವರ್ಷ ನೊಬೆಲ್ ಬಹುಮಾನ ಪಡೆದ ಮೂವರು ಅರ್ಥಶಾಸ್ತ್ರಜ್ಞರಾದ ಜೋಯೆಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹಾವಿಟ್ ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ.

ಜೋಯೆಲ್ ಮೊಕಿರ್ ಉತ್ತರಕ್ಕಾಗಿ ಚಾರಿತ್ರಿಕ ಮಾಹಿತಿಯನ್ನು ಶೋಧಿಸಿದ್ದಾರೆ. ಅದರಲ್ಲೂ ವಿಶೇಷವಾಗಿ, ಕೈಗಾರಿಕಾ ಕ್ರಾಂತಿಯ ಕಾಲದಲ್ಲಾದ ಅನ್ವೇಷಣೆಗಳನ್ನು ಪರಿಶೀಲಿಸಿದ್ದಾರೆ. ಅವರು ಬದಲಾವಣೆ ಅನ್ನುವುದು ಒಂದು ಸಾಂಸ್ಕೃತಿಕ ಪ್ರಕ್ರಿಯೆ, ವೈಜ್ಞಾನಿಕ ಹುಡುಕಾಟ, ಕುತೂಹಲ ಹಾಗೂ ಚಿಂತನೆಗಳ ಮುಕ್ತ ವಿನಿಮಯದ ಕಡೆಗಿನ ಒಂದು ಸಾಂಸ್ಕೃತಿಕ ಪಲ್ಲಟ ಎನ್ನುತ್ತಾರೆ. ಇಂತಹ ಬೌದ್ಧಿಕ ವಾತಾವರಣವಿದ್ದರೆ ಜ್ಞಾನದ ಕ್ರೋಡೀಕರಣ ಹಾಗೂ ಅದರ ಹರಡುವಿಕೆ ಸಾಧ್ಯವಾಗುತ್ತದೆ. ತಂತ್ರಜ್ಞಾನದ ನಿರಂತರ ಬೆಳವಣಿಗೆಗೆ ಅವಕಾಶ ತೆರೆದುಕೊಳ್ಳುತ್ತದೆ.

18ನೇ ಶತಮಾನದವರೆಗೆ ಆಗುತ್ತಿದ್ದ ಅನ್ವೇಷಣೆ ಗಳಿಂದ ನಿರಂತರ ಆರ್ಥಿಕ ಪ್ರಗತಿ ಸಾಧ್ಯವಾಗಿರಲಿಲ್ಲ. ಅನ್ವೇಷಣೆಗಳು, ಹೊಸ ಚಿಂತನೆಗಳನ್ನು, ಹೊಸ ತಂತ್ರಜ್ಞಾನಗಳನ್ನು ಬೆಳೆಸಲಿಲ್ಲ. ಉಪಯುಕ್ತ ಜ್ಞಾನ ನಿರಂತರವಾಗಿ ಹರಿದು ಬರುತ್ತಿದ್ದರೆ ಮಾತ್ರ ನಿರಂತರ ಬೆಳವಣಿಗೆ ಸಾಧ್ಯ ಎನ್ನುತ್ತಾರೆ ಮೊಕಿರ್. ‘ಉಪಯುಕ್ತ ಜ್ಞಾನ’ ಅನ್ನುವಾಗ ಮೊಕಿರ್ ಎರಡು ಬಗೆಯ ಜ್ಞಾನವನ್ನು ಗುರುತಿಸುತ್ತಾರೆ. ಒಂದು ಸೈದ್ಧಾಂತಿಕ ಜ್ಞಾನ. ಇದು ಪ್ರಾಕೃತಿಕ ನಿಯಮಗಳಿಗೆ ಒಂದು ವ್ಯವಸ್ಥಿತ ವಿವರಣೆ ಕೊಡುತ್ತದೆ. ಒಂದು ಪ್ರಕ್ರಿಯೆಗೆ ಕಾರಣವನ್ನು ವಿವರಿಸುತ್ತದೆ. ಮತ್ತೊಂದು ಪ್ರಾಯೋಗಿಕ ಜ್ಞಾನ. ಇದು ಸೈದ್ಧಾಂತಿಕ ಜ್ಞಾನವನ್ನು ಬಳಸುವುದಕ್ಕೆ ಬೇಕಾದ ಕ್ರಮವನ್ನು ತಿಳಿಸುತ್ತದೆ. ಅದಕ್ಕೆ ಬೇಕಾದ ಪ್ರಾಯೋಗಿಕ ಕ್ರಮವನ್ನು, ನಕ್ಷೆಯನ್ನು, ವಿವರಗಳನ್ನು ನೀಡುತ್ತದೆ.

ADVERTISEMENT

ಇವೆರಡೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದರಷ್ಟೆ ಪ್ರಗತಿ ಸಾಧ್ಯ. ಕೇವಲ ವೈಜ್ಞಾನಿಕ ಚಿಂತನೆಗಳಷ್ಟೇ ಸಾಲುವುದಿಲ್ಲ. ಅದನ್ನು ಬಳಕೆಗೆ ತರಲು ಪ್ರಾಯೋಗಿಕ ಜ್ಞಾನವೂ ಬೇಕು. ಲಿಯೋನಾರ್ಡೊ ಡಾ ವಿಂಚಿ 15ನೇ ಶತಮಾನದಲ್ಲೇ ಹೆಲಿಕಾಪ್ಟರ್ ಚಿತ್ರವನ್ನು ರಚಿಸಿದ್ದ. ಆದರೆ, ಅದನ್ನು ನಿರ್ಮಿಸುವುದಕ್ಕೆ ಬೇಕಾದ ಎಂಜಿನಿಯರ್‌ಗಳು, ತಂತ್ರಜ್ಞಾನಿಗಳು ಆಗ ಇರಲಿಲ್ಲ.

ಕೇವಲ ಪ್ರಾಯೋಗಿಕ ಜ್ಞಾನವೂ ಸಾಲುವುದಿಲ್ಲ. ಕಮ್ಮಾರನಿಗೆ ಕಬ್ಬಿಣವನ್ನು ಕಾಯಿಸಿ ತಟ್ಟುವ ಮೂಲಕ ಹತಾರಗಳನ್ನು ಮಾಡಬಹುದೆನ್ನುವ ಪ್ರಾಯೋಗಿಕ ಜ್ಞಾನ ಪರಂಪರಾಗತವಾಗಿ ಬಂದಿದೆ. ಅದರ ಹಿಂದಿನ ವಿಜ್ಞಾನ ಅವನಿಗೆ ತಿಳಿದಿರುವುದಿಲ್ಲ. ವೈಜ್ಞಾನಿಕ ಹಾಗೂ ಪ್ರಾಯೋಗಿಕ ಜ್ಞಾನ ಪರಸ್ಪರ ವ್ಯವಹರಿಸಿದರೆ ಮಾತ್ರ ನಿರಂತರ ಬೆಳವಣಿಗೆ ಸಾಧ್ಯ. ರಸವಾದಿಗೆ ಸೀಸದಿಂದ ಚಿನ್ನವನ್ನು ತಯಾರಿಸುವುದಕ್ಕೆ ಸಾಧ್ಯವಿಲ್ಲವೆಂಬ ವೈಜ್ಞಾನಿಕ ತಿಳಿವು ಇದ್ದಿದ್ದರೆ ಹಲವು ಶತಮಾನಗಳ ಶ್ರಮ ವ್ಯರ್ಥವಾಗುತ್ತಿರಲಿಲ್ಲ.

ಕೈಗಾರಿಕಾ ಕ್ರಾಂತಿಗೆ ಮೊದಲು ಇವೆರಡು ಜ್ಞಾನಶಾಖೆಗಳು ಪ್ರತ್ಯೇಕವಾಗಿದ್ದವು. ತಾಂತ್ರಿಕ ಅನ್ವೇಷಣೆಗಳು ಪ್ರಾಯೋಗಿಕ ಜ್ಞಾನದ ನೆಲೆಯಲ್ಲಿ ನಡೆಯುತ್ತಿದ್ದವು. ಬಹುತೇಕ ಅನುಭವಜನ್ಯ ಜ್ಞಾನ ವಾಗಿತ್ತು. ಇನ್ನು ಪಂಡಿತರು ಹಾಗೂ ದಾರ್ಶನಿಕರು ಗಣಿತ ಹಾಗೂ ಭೌತಶಾಸ್ತ್ರದ ಸಿದ್ಧಾಂತಗಳನ್ನು ಬೆಳೆಸಿದರು. ಆದರೆ, ಅವುಗಳನ್ನು ಪ್ರಾಯೋಗಿಕ ಸಮಸ್ಯೆಗಳಿಗೆ ಅನ್ವಯಿಸಲು ಪ್ರಯತ್ನಿಸಲಿಲ್ಲ. ಎರಡು ಜ್ಞಾನ ಶಾಖೆಗಳು ಪ್ರತ್ಯೇಕವಾಗಿಯೇ ಉಳಿದಿದ್ದವು. ಇದು ಅನ್ವೇಷಣೆಗೆ ಅಡ್ಡಿಯಾಯಿತು. ಹದಿನೆಂಟನೆಯ ಶತಮಾನದ ನಂತರ ಇವು ಪರಸ್ಪರ ಪೂರಕವಾಗಿ ಕೆಲಸ ಮಾಡತೊಡಗಿದವು. ನಂತರವಷ್ಟೇ ಆರ್ಥಿಕ ಪ್ರಗತಿ ಸಾಧ್ಯವಾಯಿತು ಎನ್ನುತ್ತಾರೆ ಮೊಕಿರ್.

ವೈಜ್ಞಾನಿಕ ಅನ್ವೇಷಣೆಗಳು ಹಾಗೂ ಅವುಗಳ ಪ್ರಾಯೋಗಿಕ ಬಳಕೆ ಒಂದನ್ನೊಂದು ಬೆಳೆಸುತ್ತವೆ. ವೈಜ್ಞಾನಿಕ ಅನ್ವೇಷಣೆಗಳು ಪ್ರಾಯೋಗಿಕವಾಗಿ ಉಪಯುಕ್ತವಾದರೆ, ಅದು ಇನ್ನಷ್ಟು ವೈಜ್ಞಾನಿಕ ಅನ್ವೇಷಣೆಯನ್ನು ಪ್ರೋತ್ಸಾಹಿಸುತ್ತವೆ. ಹೊಸ ಅನ್ವೇಷಣೆಗಳಿಂದ ಬಳಕೆಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಉತ್ಪನ್ನಗಳು ಹಾಗೂ ಉತ್ಪಾದನಾ ವಿಧಾನಗಳು ಸುಧಾರಿಸುತ್ತವೆ. ಪರಿಣಾಮವಾಗಿ ನಿರಂತರ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಇದು ಸಾಧ್ಯವಾಗಬೇಕಾದರೆ ಸಮಾಜ ಹೊಸ ಚಿಂತನೆಗಳಿಗೆ, ಬದಲಾವಣೆಗೆ ತೆರೆದುಕೊಳ್ಳಬೇಕು.

ತಾಂತ್ರಿಕ ಬದಲಾವಣೆ ತರುವ ಪ್ರಗತಿಯಲ್ಲಿ ಹಲವರು ವಿಜಯಿಗಳಾಗುತ್ತಾರೆ. ಕೆಲವರು ಸೋಲುತ್ತಾರೆ. ಹೊಸ ಅನ್ವೇಷಣೆಗಳು ಹಳೆಯ ತಂತ್ರಜ್ಞಾನವನ್ನು ಹೊರದಬ್ಬುತ್ತವೆ. ಚಾಲ್ತಿಯಲ್ಲಿರುವ ಉತ್ಪನ್ನಗಳನ್ನು ಹಾಗೂ ಉತ್ಪಾದನಾ ವಿಧಾನಗಳನ್ನು ನಾಶಪಡಿಸುತ್ತವೆ. ಸೋಲುವ, ಅಭದ್ರತೆಯ ಆತಂಕ ಜನರನ್ನು ಕಾಡುತ್ತದೆ. ಸಹಜವಾಗಿಯೇ ಜನ ಹೊಸ ತಂತ್ರಜ್ಞಾನವನ್ನು ವಿರೋಧಿಸುತ್ತಾರೆ. ಪುನರುಜ್ಜೀವನ ಚಳವಳಿಯು ಸಮಾಜವನ್ನು ಬದಲಾವಣೆಗೆ ಹೆಚ್ಚು ಹೆಚ್ಚು ತೆರೆದುಕೊಳ್ಳುವಂತೆ ಮಾಡಿತು. ಬ್ರಿಟಿಷ್ ಪಾರ್ಲಿಮೆಂಟ್ ಇತ್ಯಾದಿ ಸಂಸ್ಥೆಗಳು ಬದಲಾವಣೆಯ ಬೆಂಬಲಕ್ಕೆ ನಿಂತವು. ಈ ಎಲ್ಲಾ ಬೆಳವಣಿಗೆಗಳು, ಬದಲಾವಣೆಗೆ, ಹಾಗೂ ನಿರಂತರ ಪ್ರಗತಿಗಿದ್ದ ಹಲವು ಅಡ್ಡಿಗಳನ್ನು ನಿವಾರಿಸಿದವು. ನಿರಂತರ ಪ್ರಗತಿ ಮೊದಲಿಗೆ ಬ್ರಿಟನ್ನಿನಲ್ಲಿ ಕಾಣಿಸಿಕೊಂಡಿತು. ಕ್ರಮೇಣ ಅದು ಜಾಗತಿಕ ವಿದ್ಯಮಾನವಾಯಿತು. ಜನರ ಜೀವನಮಟ್ಟವೂ ಸುಧಾರಿಸತೊಡಗಿತು.

ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹಾವಿಟ್ ತಾಂತ್ರಿಕ ಬೆಳವಣಿಗೆಯಿಂದ ನಿರಂತರ ಆರ್ಥಿಕ ಪ್ರಗತಿ ಸಾಧ್ಯ ಎಂದು  ತೋರಿಸುವುದಕ್ಕೆ ವಿಭಿನ್ನ ದಾರಿ ಹಿಡಿದರು. ಅವರು ಅದಕ್ಕಾಗಿ ಆರ್ಥಿಕ ಮಾದರಿಗಳನ್ನು ರಚಿಸಿದರು. ಅವರು ಶುಂಪಿಟರ್ ಅವರ ಕ್ರಿಯೇಟಿವ್ ಡಿಸ್ಟ್ರಕ್ಷನ್ – ಸೃಜನಶೀಲ ವಿನಾಶದ ಪರಿಕಲ್ಪನೆಯನ್ನು ಬಳಸಿಕೊಂಡರು ಹಾಗೂ ಸುಧಾರಿಸಿದರು. ಉದ್ದಿಮೆಗಳು ಯಾವಾಗಲೂ ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸುಧಾರಿತ ಉತ್ಪಾದನಾ ವಿಧಾನದ ಮೇಲೆ ಹೂಡಿಕೆ ಮಾಡುತ್ತವೆ. ಸಹಜವಾಗಿಯೇ ಕಡಿಮೆ ಗುಣಮಟ್ಟದ ಉತ್ಪನ್ನಗಳು ಹಾಗೂ ತಂತ್ರಜ್ಞಾನ ಮಾರುಕಟ್ಟೆಯಿಂದ ನಿರ್ಗಮಿಸಬೇಕಾಗುತ್ತದೆ. ನೋಕಿಯಾ ಮೊಬೈಲ್ ಒಂದು ಕಾಲದಲ್ಲಿ ಮಾರುಕಟ್ಟೆಯನ್ನು ಆಳುತ್ತಿತ್ತು. ಈಗ ಆ್ಯಪಲ್, ಸ್ಯಾಮ್ಸಂಗ್ ಇವೆಲ್ಲಾ ಮಾರುಕಟ್ಟೆಯನ್ನು ಆಳುತ್ತಿವೆ. ಆರ್ಥಿಕತೆ ಅನ್ನುವುದು ಒಂದು ಏಣಿ ಇದ್ದ ಹಾಗೆ. ಪ್ರತಿ ಅನ್ವೇಷಣೆಯೂ ಆರ್ಥಿಕತೆಯನ್ನು ಒಂದು ಮೆಟ್ಟಿಲು ಮೇಲಕ್ಕೆ ಒಯ್ಯುತ್ತದೆ. ಸೃಜನಶೀಲವಾದದ್ದು ಯಾಕೆಂದರೆ, ಇದು ಹೊಸ ಅನ್ವೇಷಣೆಯಿಂದ ಸಾಧ್ಯವಾಗಿರುವ ಪ್ರಕ್ರಿಯೆ. ವಿನಾಶಕಾರಿಯಾದದ್ದು ಯಾಕೆಂದರೆ, ಹಳೆಯ ಉತ್ಪನ್ನಗಳನ್ನು ಹಾಗೂ
ಉತ್ಪಾದನಾ ಪ್ರಕ್ರಿಯೆಯನ್ನು ಇದು ಮಾರುಕಟ್ಟೆ ಯಿಂದ ಹೊರದಬ್ಬಿದೆ; ಅವುಗಳಿಗಿರುವ ವಾಣಿಜ್ಯ ಮೌಲ್ಯವನ್ನು ಕಳೆದಿದೆ. ಈ ಪ್ರಕ್ರಿಯೆ ನಮ್ಮ ಸಮಾಜ ವನ್ನು ಮೂಲಭೂತವಾಗಿ ಬದಲಿಸಿದೆ. ಎರಡು ಶತಮಾನಗಳಲ್ಲಿ ಬಹುತೇಕ ಎಲ್ಲವೂ ಬದಲಾಗಿದೆ.

ಹೊಸ ಅನ್ವೇಷಣೆಗಳಾಗುತ್ತಿದ್ದಂತೆ ಹಳೆಯ ತಂತ್ರಜ್ಞಾನ ಹೋಗಿ, ಹೊಸತು ಬರುತ್ತದೆ. ಉತ್ಪಾದಕತೆ ಹೆಚ್ಚುತ್ತದೆ. ಹೆಚ್ಚಿನ ಬೆಳವಣಿಗೆ ಸಾಧ್ಯವಾಗುತ್ತದೆ. ಬೆಳವಣಿಗೆ ವೇಗ ಹೆಚ್ಚಬೇಕಾದರೆ ಅದಕ್ಕೆ ಪೂರಕವಾದ ಶಿಕ್ಷಣ ಇರಬೇಕು. ಅದಕ್ಕೆ
ಅನುಕೂಲವಾದ ನೀತಿಗಳನ್ನು ಸರ್ಕಾರ ರೂಪಿಸಬೇಕು. ಆರೋಗ್ಯಕರ ಸ್ಪರ್ಧೆಯಿರಬೇಕು. ಒಟ್ಟಾರೆಯಾಗಿ ಹೇಳುವುದಾದರೆ, ಅನ್ವೇಷಣೆಯ ಸಂಸ್ಕೃತಿ ಇರಬೇಕು. ಇಲ್ಲದೇ ಹೋದರೆ ಪ್ರಗತಿ ನಿಧಾನವಾಗುತ್ತದೆ.

ಕೈಗಾರಿಕೀಕರಣಗೊಂಡ ದೇಶಗಳಲ್ಲಿ ಆರ್ಥಿಕತೆ ಸ್ಥಿರವಾಗಿರುವಂತೆ ಕಾಣುತ್ತದೆ. ಆದರೆ, ಆಳದಲ್ಲಿ ಸ್ಥಿರತೆ ಇರುವುದಿಲ್ಲ. ಪ್ರತಿವರ್ಷ ಹೊಸ ಹೊಸ ಕಂಪನಿಗಳು ಹುಟ್ಟುಕೊಳ್ಳುತ್ತಿರುತ್ತವೆ. ಎಷ್ಟೋ ಉದ್ದಿಮೆಗಳು ದಿವಾಳಿಯಾಗುತ್ತಿರುತ್ತವೆ. ಒಬ್ಬರು ಇನ್ನೊಬ್ಬರ ಮಾರುಕಟ್ಟೆಯನ್ನು ಕಬಳಿಸುತ್ತಿರುತ್ತಾರೆ. ವ್ಯಾಪಾರದ ಕಳ್ಳತನ ನಡೆಯುತ್ತಲೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಬರೀ ಕಂಪನಿಗಳು ಮಾತ್ರ ನಷ್ಟ ಅನುಭವಿಸುವುದಿಲ್ಲ. ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುತ್ತಾರೆ; ಅಭದ್ರತೆಯ ಆತಂಕದಲ್ಲಿ ಇರುತ್ತಾರೆ. ಆ ಆತಂಕದಿಂದ ಬದಲಾವಣೆಯನ್ನು ವಿರೋಧಿಸುತ್ತಾರೆ. ಅದಕ್ಕೆ ಪರಿಹಾರವೆಂದರೆ, ಹಾಗೆ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕಂಡುಕೊಳ್ಳಲು ನೆರವಾಗಬೇಕು. ಉದ್ಯೋಗದ ರಕ್ಷಣೆ ಗಿಂತ ಉದ್ಯೋಗಿಗಳ ರಕ್ಷಣೆಗೆ ಗಮನಕೊಡಬೇಕು. ಇಂತಹ ಕ್ರಮಗಳು ಬದಲಾವಣೆಗೆ ಇರುವ ವಿರೋಧವನ್ನು ತಗ್ಗಿಸುವುದಕ್ಕೂ ನೆರವಾಗುತ್ತವೆ.

ತಂತ್ರಜ್ಞಾನ ಬೆಳೆದಂತೆ ಪ್ರಗತಿ ಖಾತರಿಯೇನಲ್ಲ. ಇತ್ತೀಚಿನ ದಿನಗಳಲ್ಲಿ ಹಲವು ಕಡೆಗಳಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಾಗುತ್ತಿದ್ದರೂ, ಬೆಳವಣಿಗೆ ಕುಸಿಯುತ್ತಿರುವುದನ್ನೂ ನೋಡಬಹುದು. ಕೆಲವೇ ಪ್ರಬಲ ಕಂಪನಿಗಳು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿರುವುದು, ಶೈಕ್ಷಣಿಕ ಸ್ವಾತಂತ್ರ್ಯಕ್ಕಿರುವ ಅಡ್ಡಿ ಇವೆಲ್ಲ ಪ್ರಗತಿಯನ್ನು ಕುಂಠಿತಗೊಳಿಸುತ್ತಿವೆ. ಪ್ರಗತಿ ಸಾಧ್ಯವಾಗಬೇಕಾದರೆ ಇಂತಹ ಹಲವು ಅಡ್ಡಿಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಬೇಕು. ನಿರಂತರ ಪ್ರಗತಿಯಿಂದ ಮನುಕುಲದ ಒಳಿತು ಹೆಚ್ಚುತ್ತದೆ. ಜೊತೆಗೆ ಹಲವು ದುಷ್ಪರಿಣಾಮಗಳೂ ಆಗುತ್ತಿರುತ್ತವೆ. ಉದಾಹರಣೆಗೆ, ಹವಾಮಾನ ಬದಲಾವಣೆ, ಮಾಲಿನ್ಯ, ಅಸಮಾನತೆ, ನೈಸರ್ಗಿಕ ಸಂಪನ್ಮೂಲದ ಅಪಬಳಕೆ, ಮುಂತಾದವು. ಹಾಗಾಗಿ ಅನ್ವೇಷಣೆಯನ್ನು ಪ್ರೋತ್ಸಾಹಿಸುವುದರ ಜೊತೆ ಜೊತೆಗೆ ಇಂತಹ ನೇತ್ಯಾತ್ಮಕ ಪರಿಣಾಮಗಳ ವಿರುದ್ಧವೂ ನೀತಿಗಳನ್ನು ರೂಪಿಸಬೇಕಾಗುತ್ತದೆ.

ಬಂಡವಾಳದ ಕ್ರೋಡೀಕರಣದಿಂದಷ್ಟೇ ಬೆಳವಣಿಗೆ ಆಗಿಬಿಡುವುದಿಲ್ಲ. ಅನ್ವೇಷಣೆ ಅಂದರೆ ಕೇವಲ ಹಣದ ಹೂಡಿಕೆ ಅಲ್ಲ, ಚಿಂತನೆಗಳು ಅರಳುವುದಕ್ಕೆ ಬೇಕಾದ ಪರಿಸರವನ್ನು ನಿರ್ಮಿಸಬೇಕು. ಹೀಗೆ ತಂತ್ರಜ್ಞಾನ ಹಾಗೂ ನಿರಂತರ ಪ್ರಗತಿಯ ಬಗ್ಗೆ ಹಲವು ಒಳನೋಟಗಳನ್ನು ಈ ಮೂವರ ಅಧ್ಯಯನ ನೀಡುತ್ತದೆ.