ADVERTISEMENT

‘ಗಬಾಳ’ರಿಗಾಗಿ ಮಿಡಿಯುವ ಕಾಲ ಬಂದಿದೆ

ದುಡಿಮೆ ಕಸಿಯುವ ರಾಕ್ಷಸ ಯಂತ್ರಗಳು ಈ ಸಮುದಾಯಕ್ಕೆ ವರವೋ? ಶಾಪವೋ?

ಡಿ.ಎಸ್.ಚೌಗಲೆ
Published 23 ಜುಲೈ 2019, 19:39 IST
Last Updated 23 ಜುಲೈ 2019, 19:39 IST
   

ಮರಾಠಿ ಶಬ್ದಕೋಶದಲ್ಲಿ ‘ಗಬಾಳ’ ಪದಕ್ಕೆ ನಿರುಪಯೋಗಿ, ತಿರಸ್ಕೃತ, ಮೂಲೆಗುಂಪು ಎಂಬರ್ಥಗಳಿವೆ. ನಿರಂತರ ಬರಗಾಲಗಳಿಗೆ ತುತ್ತಾಗುತ್ತಾ, ಕಬ್ಬು ಕಟಾವು ಮಾಡುವ ಪೇಟೆಂಟ್ ತಮ್ಮದೇ ಎಂದುಕೊಂಡಂತೆ ಗುಳೆ ಹೋಗುವ ‘ಗಬಾಳ’ರು, ಶಬ್ದಕೋಶದಲ್ಲಿ ಇರುವ ಮೂಲೆಗುಂಪು ಎಂಬ ಅರ್ಥಕ್ಕೆ ಅನ್ವಯವಾಗಿ, ಸಮಾಜದಿಂದ ತಿರಸ್ಕೃತ ರಾದವರಂತೆಯೇ ಬದುಕುತ್ತಿದ್ದಾರೆ. ಅವರಿಗಾಗಿ ನಮ್ಮ ನಾಗರಿಕ ಜಗತ್ತು ಎಂದೂ ಮಿಡಿದೇ ಇಲ್ಲ. ಸಕ್ಕರೆಕಾರ್ಖಾನೆಗಳು ಮತ್ತು ಕಬ್ಬು ಬೆಳೆ ಅಧಿಕವಾಗಿರುವ ಮಹಾರಾಷ್ಟ್ರ ಹಾಗೂ ಕರ್ನಾಟಕದ ಪರಿಸರದಲ್ಲಿ, ಕಟಾವು ಸಮೀಪಿಸುತ್ತಿದ್ದಂತೆ ಧುತ್ತನೆ ಉದಯಿಸುವ ಈ ಸಮುದಾಯದ ದಾರುಣ ಪರಿಸ್ಥಿತಿಯನ್ನು ದಶಕಗಳಿಂದ ಗಮನಿಸುತ್ತಾ ಬಂದಿರುವವರನ್ನು ಹಲವು ಪ್ರಶ್ನೆಗಳು ಕಾಡುತ್ತವೆ.

ಉಚ್ಚಕುಲೋತ್ತಮರು ಎಂದು ಭ್ರಮಿಸುವ ನಾವು ಎಷ್ಟು ಅಮಾನವೀಯರಾಗಿದ್ದೇವೆ ಎನ್ನುವುದಕ್ಕೆ, ‘ಅವ ಗಬಾಳೇರ ಹಂಗ ಇರತಾನ...’ ‘ಲೋ ಗಬಾಳ್ಯಾ’ ಎಂದೆಲ್ಲ ಗಬಾಳ ಪದವನ್ನು ಒಂದು ಅಸ್ಪೃಶ್ಯ ಮತ್ತು ಬೈಗುಳದ ಪದವೆಂಬಂತೆ ಬಳಸುವುದೇ ನಿದರ್ಶನ. ಈ ಸಮುದಾಯದ ಕುರಿತು ಕೆಲ ದಂತಕತೆಗಳೂ ಇವೆ. ಮಹಾರಾಷ್ಟ್ರದ ಬೀಡ್‌ ಪ್ರದೇಶವು ಬರದ ನಾಡು. ಸದಾ ಬರಗಾಲದಲ್ಲಿ ಬದುಕುವ ಗಬಾಳರು ದಿನನಿತ್ಯ ಸ್ನಾನವನ್ನೇ ಮಾಡುವುದಿಲ್ಲ. ಬಹಿರ್ದೆಸೆಗೆ ಹೋದಾಗ ಇವರು ಸ್ವಚ್ಛತೆಗೆ ನೀರಿನ ಬದಲು ಕಲ್ಲು ಚೂರು ಬಳಸುತ್ತಾರೆ. ಹೊಲಸು ಬಟ್ಟೆ ತೊಟ್ಟಿರುತ್ತಾರೆ- ಇಂಥ ಅವಹೇಳನಾತ್ಮಕ ಮಾತುಗಳು ನಾಗರಿಕ ಸಮಾಜಕ್ಕೆ ಭೂಷಣವೇ? ಬೀಡ್‌ ಪ್ರದೇಶದ ಗಬಾಳರಲ್ಲಿ ಹಿಂದುಳಿದ ಉಪಜಾತಿಗಳಿವೆ. ಮಹಾರ್, ಮಾಂಗ್ ಮತ್ತು ಬಡ ಮರಾಠ ಜಾತಿಯವರೂ ಒಳಗೊಂಡಿದ್ದಾರೆ. ಇವರು ಬಳಸುವ ಸ್ಥಳೀಯ ಮರಾಠಿ ಭಾಷೆಯನ್ನು ಗಬಾಳೇರ ಭಾಷೆ ಎಂತಲೂ ಕರೆಯಲಾಗುತ್ತದೆ. ಇವರಲ್ಲಿ ಬಡತನ ಎಷ್ಟರಮಟ್ಟಿನದು ಎಂದರೆ, ಇವರು ಪೂರಿಯನ್ನು ಎಣ್ಣೆಯಲ್ಲಿ ಕರಿಯದೆ ನೀರಲ್ಲಿ ಕರಿಯುತ್ತಾರೆ, ಸಿಹಿ ಪದಾರ್ಥ ಬಾಲೂಶಾವನ್ನೂ ನೀರಲ್ಲೇ ಕರಿಯುತ್ತಾರೆ ಎಂಬೆಲ್ಲಾ ವದಂತಿಗಳು, ಕಥೆಗಳು ಈ ಭಾಗದಲ್ಲಿ ಪ್ರಚಲಿತವಾಗಿವೆ.

ನೀರಾವರಿ ಪ್ರದೇಶಗಳು ಈಚೆಗೆ ವೃದ್ಧಿಸಿವೆ. ಕಳೆದ ಹಲವು ದಶಕಗಳಲ್ಲಿ ಆರ್ಥಿಕ ಬೆಳೆ ಕಬ್ಬು ಬೆಳೆಯುವುದು ಹೆಚ್ಚಾಗಿದೆ. ಸಕ್ಕರೆ ಕಾರ್ಖಾನೆಗಳ ಸಂಖ್ಯೆಯೂ ಹೆಚ್ಚಿದೆ. ಆದಕಾರಣ ಲಕ್ಷಾಂತರ ಎಕರೆಯ ಕಬ್ಬಿನ ಕಟಾವಿಗೆ ಬಳಕೆಯಾಗುವ ಮಾನವ ಸಂಪನ್ಮೂಲ ಎಂದರೆ ಈ ಗಬಾಳರು. ದಾರಿದ್ರ್ಯದ ನೆಲೆಯಲ್ಲಿ ಸುಲಭಕ್ಕೆ ಎಟಕುವವರು. ಬಿಸಿಲನ್ನೇ ಹಾಸಿ ಹೊದೆಯುವ ಶಾಪಗ್ರಸ್ತ ಬೀಡ್‌ ಪ್ರಾಂತ್ಯದ ಇವರ ಅಲ್ಲಿಯ ಜಮೀನು ಕೆಮ್ಮಣ್ಣಿನ ಮರಡಿ ನೆಲ. ಕರಕಿ ಸಹ ಮೊಳಕೆ ಒಡೆಯಲು ಮಳೆ ಹನಿಯಿಲ್ಲ. ಇಂಥವರ ದಾರಿದ್ರ್ಯ ಮತ್ತು ಹಸಿವನ್ನು ಲಾಭ ಮಾಡಿಕೊಳ್ಳುವವರೆಂದರೆ, ಕಬ್ಬು ಕಟಾವು ಠೇಕೆದಾರರು ಅರ್ಥಾತ್ ಮುಕಾದಮ್‍ರು. ಇವರು, ಅಕ್ಟೋಬರ್‌ನಲ್ಲಿ ಆರಂಭಗೊಳ್ಳುವ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಟಾವು ಮಾಡಲು ಗಬಾಳರನ್ನು ಫೆಬ್ರುವರಿ, ಮಾರ್ಚ್‌ನಲ್ಲೇ ಮುಂಗಡ ಹಣ ನೀಡಿ ಕರಾರು ಮಾಡಿ ಬಂದಿರುತ್ತಾರೆ. ಇದೊಂದು ಜಾಲದ ವರ್ತುಲ. ಕಾರ್ಖಾನೆಗಳು ಶುರುವಾಗಿ, ಮೂರ್ನಾಲ್ಕು ತಿಂಗಳು ಕಬ್ಬು ನುರಿಸಿ ಮುಚ್ಚುವ ಹೊತ್ತಿಗೆ ಈ ಮುಕಾದಮ್‍ಗಳು ಧುತ್ತನೆಪ್ರತ್ಯಕ್ಷವಾಗಿ, ಬರುವ ವರ್ಷದ ಕಟಾವಿನ ಮುಂಗಡ ನೀಡಿ ಅವರನ್ನು ಖಚಿತಗೊಳಿಸಿರುತ್ತಾರೆ. ನೂರಾರು ಕಿ.ಮೀ ದೂರದ ಬೀಡ್‌ನಿಂದ ಲಾರಿಯಲ್ಲಿ ಅಣ್ಣ, ತಮ್ಮ, ಅತ್ತಿಗೆ, ಚಿಕ್ಕಪ್ಪ, ದೊಡ್ಡಪ್ಪ, ಅವರ ಹೆಂಡಂದಿರು, ಮಕ್ಕಳು... ಹೀಗೆ ಬಳಗವೆಲ್ಲ ಬಂದಿಳಿಯುತ್ತದೆ. ಇವರಲ್ಲಿ ಕೆಲವರು ಎತ್ತುಗಳನ್ನೂ ತಂದಿರುತ್ತಾರೆ. ಇಲ್ಲಿ ಕಾರ್ಖಾನೆಯ ಬಾಡಿಗೆ ಚಕ್ಕಡಿಯನ್ನು ಬಳಸಿ ಕಬ್ಬು ರವಾನಿಸುತ್ತಾರೆ. ಕಟಾವಿನ ಜೊತೆ ಇನ್ನೂ ನಾಲ್ಕು ಕಾಸು ದೊರೆಯಲೆಂಬ ಆಸೆ.

ADVERTISEMENT

ಗಬಾಳ ಮಹಿಳೆಯರು ಗಟ್ಟಿಗಿತ್ತಿಯರು. ಅತ್ಯಂತ ಶ್ರಮಜೀವಿಗಳು. ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ, ಕಬ್ಬಿನ ಗರಿಯು ಗರಗಸದ ರೀತಿ ಚೂಪಾದ ಹಲ್ಲುಗಳನ್ನು ಹೊಂದಿರುತ್ತದೆ. ಗದ್ದೆ ಸೇರಿದರೆ ಸಾಕು, ಕೊರೆವ ಚಳಿಯಲ್ಲಿ ಮೈಯ್ಯನ್ನೆಲ್ಲ ಕೊರೆದು ನೆತ್ತರು ಒಸರಿಸುತ್ತದೆ. ಆ ಕೊರೆತದ ವೇದನೆಯನ್ನು ನಿರ್ಲಕ್ಷಿಸುತ್ತಾ ಕಟಾವು ಮಾಡುತ್ತಾರೆ.

ಅನೇಕ ಬಾರಿ ಅವಘಡಗಳೂ ಜರುಗುತ್ತವೆ. ಹಾವು, ಚೇಳು ಕಚ್ಚುತ್ತವೆ, ಅವರು ಕಟ್ಟಿಕೊಂಡ ಪುಟ್ಟ ಕಬ್ಬಿನ ರವುದಿಯ ಗುಡಿಸಲಿಗೆ ಬೆಂಕಿ ಬಿದ್ದು ಸಾವುನೋವುಗಳಾಗುತ್ತವೆ. ಎತ್ತಿನ ಗಾಡಿಗಳು ಅಪಘಾತಕ್ಕೆ ಈಡಾಗುತ್ತವೆ. ಈ ಬಗೆಯ ಘಟನೆಗಳಿಗೆ ಸಿಗುವ ಪ್ರತಿಕ್ರಿಯೆ ಅತ್ಯಂತ ಹಗುರ ಮತ್ತು ನಿರ್ಲಕ್ಷ್ಯದ್ದು! ಏನೂ ನಡೆದೇ ಇಲ್ಲವೆಂಬಂತೆ ಇರುವುದು. ಯಾವ ಪರಿಹಾರವೂ ದೊರೆಯುವುದಿಲ್ಲ. ಇದು ನಮ್ಮ ಜಡತ್ವ, ಮಾನಸಿಕ ಕ್ರೌರ್ಯ ಮತ್ತು ಅಮಾನವೀಯ ನಡೆಯನ್ನು ತೋರುತ್ತದೆ. ತುಂಬು ಗರ್ಭಿಣಿಯಾದರೂ ಹಾಗೇ ಸುಮ್ಮನೆ ಗುಡಿಸಲಿನಲ್ಲಿ ಕೂರುವುದಿಲ್ಲ. ಆಕೆ ಮುಂಗಡ ಹಣ ಪಡೆದಿರುತ್ತಾಳೆ. ಮುಕಾದಮರು ವಾಪಸ್‌ ಹಣ ಕೇಳಿಯಾರು ಎಂಬ ಕಾರಣಕ್ಕೆ ದುಡಿಮೆ ಅನಿವಾರ್ಯ. ಹೀಗಾಗಿ, ಭಾರವಾದ ಹೊಟ್ಟೆಯನ್ನು ಹೊತ್ತುಕೊಂಡೇ ಕಬ್ಬು ಕಟಾವಿಗೆ ಆಕೆ ಬರಬೇಕು. ಒಮ್ಮೊಮ್ಮೆ, ಕಟಾವು ಮಾಡುವಾಗಲೇ ಹೆರುವ ಪ್ರಸಂಗಗಳೂ ನಡೆದಿವೆ. ಮತ್ತೆ ಆಕೆ ನಾಲ್ಕೈದು ದಿನಗಳಲ್ಲಿ ಕಟಾವಿಗೆ ಹಾಜರ್! ಒಮ್ಮೊಮ್ಮೆ ಮಗುವನ್ನು ಮಡಿಲಲ್ಲಿ ಕಟ್ಟಿಕೊಂಡೇ ಬರುವುದುಂಟು, ಇಲ್ಲವೇ ಗುಡಿಸಲಿನಲ್ಲಿ ಇತರ ಮಕ್ಕಳ ಜತೆ ಇರಿಸಿ ಕಟಾವಿಗೆ ಬರುತ್ತಾಳೆ. ಇವೆಲ್ಲ ಮಾಮೂಲು ಎನ್ನುವಂತೆ ನಾಗರಿಕ ಸಮಾಜ ಗಮನಿಸುತ್ತಿರುತ್ತದೆ. ಹೆರಿಗೆ ರಜೆ, ಭತ್ಯೆ, ವೈದ್ಯಕೀಯ ಚಿಕಿತ್ಸೆಯ ಸವಲತ್ತುಗಳನ್ನು ಪಡೆದು ಮೆರೆವ ನಾವು, ಗಬಾಳ ಮಹಿಳೆಯರ ಆರೋಗ್ಯದ ಕುರಿತು ಎಂದಾದರೂ ಯೋಚಿಸಿದ್ದೇವೆಯೇ? ಅವರ ಕಠೋರ ಬದುಕಿಗೆ ನಮ್ಮೊಳಗಿನ ಮನುಷ್ಯನೇನಾದರೂ ಸ್ಪಂದಿಸಿದ್ದಾನೆಯೇ?

ಇಂಥ ಗುಲಾಮಿ ಬದುಕು ಸವೆಸುವ ಇವರ ಕುರಿತು ಸರ್ಕಾರಗಳು ಯಾವುದಾದರೂ ನೀತಿಯನ್ನು ಯೋಜಿಸಿವೆಯೇ? ಕಾರ್ಖಾನೆಗಳು ಅವರ ಏಳ್ಗೆಯ ಚಿಂತನೆಯನ್ನು ಅತ್ಯಂತ ಪ್ರಾಥಮಿಕ ಹಂತದಲ್ಲಿಯಾದರೂ ಮಾಡಿವೆಯೇ? ಆದರೆ ಗಬಾಳರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಕೆಲ ಸಾಮಾಜಿಕ ಕಾರ್ಯಕರ್ತರು ತಾತ್ಕಾಲಿಕ ಟೆಂಟ್ ಶಾಲೆಯನ್ನು ತೆರೆದಿದ್ದಾರೆ. ಅದಕ್ಕೆ ‘ಸಾಖರ ಶಾಳಾ’ (ಸಕ್ಕರೆ ಶಾಲೆ) ಎಂದು ಹೆಸರಿಟ್ಟಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಸದಲಗದ ಸಾಮಾಜಿಕ ಕಾರ್ಯಕರ್ತ ಹೇಮಂತ ಶಿಂಗೆ ಅವರು ಈ ಶಾಲೆಯ ರೂವಾರಿ. ಆ ಮಕ್ಕಳು ತಮ್ಮ ಊರು ಬಿಟ್ಟು ಬರುವಾಗ ಯಾವ ತರಗತಿಯಲ್ಲಿ ಕಲಿಯುತ್ತಿರುತ್ತಾರೋ ಆ ತರಗತಿಗಳನ್ನು ಹೇಮಂತ ನಡೆಸುತ್ತಾ ಬಂದಿದ್ದಾರೆ. ಅಲ್ಲಿಯ ಪಠ್ಯಕ್ರಮವನ್ನೂ, ಪುಸ್ತಕಗಳನ್ನೂ ಲಭ್ಯವಾಗಿಸಿ, ಅಂದಾಜು ನಲವತ್ತು ಮಕ್ಕಳಿಗೆ ಇಬ್ಬರು ಶಿಕ್ಷಕರನ್ನು ನೇಮಿಸಿ, ಉಚಿತ ಶಿಕ್ಷಣ ಒದಗಿಸುತ್ತಿರುವ ಅವರ ಕಾರ್ಯ ಬಹುಮೌಲಿಕವಾದುದು.

ಆದರೆ ಗಬಾಳರ ಕುರಿತು ಸಮಾಜ, ಸರ್ಕಾರ ಎಚ್ಚೆತ್ತು ಕೊಳ್ಳಬೇಕಾದ ಕಾಲ ಬಂದಿದೆ. ಪುನರ್ವಸತಿ ಕಲ್ಪಿಸ ಬೇಕಾದ ಸಮಯ ಸನ್ನಿಹಿತವಾಗಿದೆ. ಈಗ ಕಬ್ಬು ಕಟಾವು ಮಾಡುವ ಬೃಹತ್‍ಯಂತ್ರಗಳು ಬಂದಿವೆ. ಕೆಲವರಿಗೆ ಅದಾಗಲೇ ಕಟಾವಿನ ತರಬೇತಿ ನೀಡಲಾಗುತ್ತಿದೆ. ಗಬಾಳರ ದುಡಿಮೆಯನ್ನು ಕಸಿಯುವ ರಾಕ್ಷಸ ಯಂತ್ರಗಳು. ಇನ್ನು ಮುಂದೆ ಯಾರೂ ಅವರನ್ನು ಹುಡುಕಿಕೊಂಡು ಹೋಗಿ ಮುಂಗಡ ಹಣ ನೀಡುವುದಿಲ್ಲ. ಲಕ್ಷಾಂತರ ಗಬಾಳರು ಕೆಲಸ ಕಳೆದುಕೊಳ್ಳುವ ಭೀತಿಯಿದೆ. ಲಕ್ಷ ಲಕ್ಷ ಎಕರೆಗಳಷ್ಟು ಕಬ್ಬನ್ನು ಕೆಲವೇ ಗಂಟೆಗಳಲ್ಲಿ ಕಟಾವು ಮಾಡುವ ಯಂತ್ರಗಳು, ‘ಚಿರೇಬಂದಿವಾಡೆ’ ನಾಟಕದ ಕೊನೆಯಲ್ಲಿ ಬಂದು ವಾಡೆಯನ್ನು ಧ್ವಂಸ ಮಾಡುವ ಬುಲ್‌ಡೋಜರ್‌ನಂತೆ ಗೋಚರಿಸುತ್ತಿವೆ.

ಲೇಖಕ: ಪ್ರಾಧ್ಯಾಪಕ, ಭಾವುರಾವ ಕಾಕತಕರಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.