ADVERTISEMENT

ಜಗನ್ನಾಥನ ದರ್ಶನದ ಹಿಂದೆ–ಮುಂದೆ...

ಹಿಂದೂಗಳಲ್ಲದವರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಬಹುದೇ?

ವಿಜಯ್ ಜೋಷಿ
Published 21 ಜುಲೈ 2018, 2:56 IST
Last Updated 21 ಜುಲೈ 2018, 2:56 IST
ಪುರಿ ಜಗನ್ನಾಥ ರಥೋತ್ಸವದ ನೋಟ
ಪುರಿ ಜಗನ್ನಾಥ ರಥೋತ್ಸವದ ನೋಟ   

ಒಡಿಶಾ ರಾಜ್ಯದಲ್ಲಿರುವ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶ ಇಲ್ಲ ಎಂಬುದರ ಬಗ್ಗೆ ಸಾಕಷ್ಟು ಚರ್ಚೆ, ವಾಗ್ವಾದ ಆಗಿದೆ. ಅದರಲ್ಲಿ ಹೊಸದೇನೂ ಇಲ್ಲ. ಆದರೆ, ಕಳೆದ ವಾರ ನೀಡಿದ ಮಧ್ಯಂತರ ಆದೇಶವೊಂದರಲ್ಲಿ ಸುಪ್ರೀಂ ಕೋರ್ಟ್‌ ಪ್ರಮುಖವಾದ ಸೂಚನೆ ನೀಡಿದೆ. ‘ಹಿಂದೂಗಳಲ್ಲದವರಿಗೂ ದೇವಸ್ಥಾನದ ಒಳಗೆ ಪ್ರವೇಶ ನೀಡುವ ಬಗ್ಗೆ ಪರಿಶೀಲನೆ ನಡೆಸಿ’ ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ಕೋರ್ಟ್‌ ಹೇಳಿದೆ.

ಇದೇ ವೇಳೆ, ಶಬರಿಮಲೆಯಲ್ಲಿನ ಅಯ್ಯಪ್ಪ ದೇವಸ್ಥಾನ ಪ್ರವೇಶಿಸುವ ಹಕ್ಕು ಪುರುಷರಿಗೆ ಇರುವಷ್ಟೇ ಮಹಿಳೆಯರಿಗೂ ಇದೆ ಎಂಬ ಮಾತನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಹೇಳಿದೆ. ಇವು ಧಾರ್ಮಿಕ ವಿಚಾರಗಳಲ್ಲಿ ಕೋರ್ಟ್‌ ಎಷ್ಟರಮಟ್ಟಿಗೆ ಮಧ್ಯಪ್ರವೇಶ ಮಾಡಬಹುದು ಎಂಬ ಚರ್ಚೆಯನ್ನೂ, ಪೂಜಿಸುವ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತಿದ್ದಾಗ ಧಾರ್ಮಿಕ ವಿಷಯಗಳಲ್ಲಿ ಕೋರ್ಟ್‌ ಮಧ್ಯಪ್ರವೇಶ ಮಾಡಬಾರದೇಕೆ ಎಂಬ ಪ್ರತಿವಾದವನ್ನೂ ಹುಟ್ಟುಹಾಕಿದೆ. ಈ ಸುದ್ದಿಗಳಿಗೆ ಸಂಬಂಧಿಸಿದ ಒಂದು ನೋಟ ಇಲ್ಲಿದೆ:

ಹಿಂದೂಗಳಿಗೆ ಮಾತ್ರ ಪ್ರವೇಶ ಏಕೆ, ಇತರರಿಗೆ ಏಕೆ ಪ್ರವೇಶ ಇಲ್ಲ?

ADVERTISEMENT

ಇದರ ಬಗ್ಗೆ ನಿಖರ ಉತ್ತರ ಇಲ್ಲ. ಆದರೆ, ದೇವಸ್ಥಾನದ ಮೇಲೆ ಹಾಗೂ ದೇವಸ್ಥಾನ ಇರುವ ಪ್ರಾಂತ್ಯದ ಇತರ ಕೆಲವು ಕಡೆಗಳಲ್ಲಿ ವಿದೇಶಿ ಆಕ್ರಮಣಕಾರರಿಂದ ದಾಳಿಗಳು ನಡೆದ ನಂತರ ಜಗನ್ನಾಥ ದೇವಸ್ಥಾನಕ್ಕೆ ಹಿಂದೂಗಳಲ್ಲದವರಿಗೆ ಪ್ರವೇಶ ಇಲ್ಲ ಎಂಬ ನಿಯಮ ಜಾರಿಗೆ ಬಂತು ಎಂಬ ಮಾತುಗಳು ಇವೆ.

ವಿಗ್ರಹಾರಾಧನೆ, ಅದಕ್ಕೆ ಹೊಂದಿಕೊಂಡ ಧಾರ್ಮಿಕ ವಿಧಿವಿಧಾನಗಳು ಹಿಂದೂ ಧರ್ಮದಲ್ಲಿ ನಡೆಯುವ ಕ್ರಮಕ್ಕೂ ಇತರ ಧರ್ಮಗಳಲ್ಲಿ ನಡೆಯುವ ಕ್ರಮಕ್ಕೂ ವ್ಯತ್ಯಾಸ ಇದೆ. ಹಿಂದೂ ಧರ್ಮದಲ್ಲಿ ದೇವರನ್ನು ಸಾಕಾರ ರೂಪದಲ್ಲೂ, ನಿರಾಕಾರ ರೂಪದಲ್ಲೂ ಆರಾಧಿಸಲು ಅವಕಾಶ ಇದೆ. ಮೂರ್ತಿಪೂಜೆಯ ನಂಬಿಕೆಗಳಿಗೂ ಹಿಂದೂ ಧರ್ಮದ ನಂಬಿಕೆಗಳಿಗೂ ನೇರ ಸಂಬಂಧ ಇದೆ. ಈ ನಂಬಿಕೆಗಳಿಗೂ ಇತರ ಧರ್ಮಗಳ ಧಾರ್ಮಿಕ ನಂಬಿಕೆಗಳಿಗೂ ಸಾಕಷ್ಟು ವ್ಯತ್ಯಾಸ ಇರುವುದರಿಂದ ಮೂರ್ತಿ
ಪೂಜೆಯಲ್ಲಿ ನಂಬಿಕೆ ಇರದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ವಾದವೂ ಇದೆ.

ಯಾರು ಹಿಂದೂ ಎಂಬುದನ್ನು ಅಲ್ಲಿ ಹೇಗೆ ನಿರ್ಧರಿಸುತ್ತಾರೆ?

‘ಜಗನ್ನಾಥನ ದೇವಸ್ಥಾನಕ್ಕೆ ಹೋಗುವವರಲ್ಲಿ ಯಾರು ಹಿಂದೂ, ಯಾರು ಹಿಂದೂ ಅಲ್ಲ ಎಂಬುದನ್ನು ಪಟ್ಟು ಹಿಡಿದು ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲ. ದೇವಸ್ಥಾನಕ್ಕೆ ಬಂದ ವ್ಯಕ್ತಿಯೊಬ್ಬ ಹಿಂದೂ ಅಲ್ಲ ಎಂಬುದು ಆತನ ವೇಷಭೂಷಣಗಳಿಂದ ಅಥವಾ ಇನ್ಯಾವುದೇ ಸಂಕೇತಗಳ ಮೂಲಕ ಗೊತ್ತಾದರೆ ಮಾತ್ರ ಆತನಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಅದಿಲ್ಲದಿದ್ದರೆ, ಯಾರು ಹಿಂದೂ, ಯಾರು ಹಿಂದೂ ಅಲ್ಲ ಎಂಬುದನ್ನು ಯಾರೂ ಕೇಳುವುದಿಲ್ಲ’ ಎಂದು ಜಗನ್ನಾಥ ದೇವಸ್ಥಾನಕ್ಕೆ ಹಲವು ಬಾರಿ ಭೇಟಿ ನೀಡಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು ಹೆಸರು ಬಹಿರಂಗಪಡಿಸ
ಬಾರದು ಎಂಬ ಷರತ್ತಿನೊಂದಿಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಪ್ರೀಂ ಕೋರ್ಟ್‌ ಸೂಚನೆಗೆ ಬಂದಿರುವ ಪ್ರತಿಕ್ರಿಯೆ ಏನು?

‘ಹಿಂದೂಗಳಲ್ಲದವರಿಗೆ ಪ್ರವೇಶ ಅವಕಾಶ ಕಲ್ಪಿಸಬಹುದೇ...’ ಎಂಬ ಸೂಚನೆಗೆ ಪ್ರತಿಯಾಗಿ ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಪ್ರತಿನಿಧಿಗಳು ಒಡಿಶಾ ರಾಜ್ಯಪಾಲರನ್ನು ಭೇಟಿ ಮಾಡಿ, ಪ್ರತಿಭಟನೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ದೇವಸ್ಥಾನದಲ್ಲಿ ಸಾವಿರಾರು ವರ್ಷಗಳಿಂದ ಇರುವ ಆಚರಣೆಯನ್ನು ರಕ್ಷಿಸಬೇಕು, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸುವ ಆಲೋಚನೆ ಕೂಡ ಅವರಲ್ಲಿ ಇದೆಯಂತೆ. ‘ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರವೊಂದು ನಡೆದಿದೆ ಅನಿಸುತ್ತಿದೆ’ ಎಂದು ವಿಎಚ್‌ಪಿಯ ಒಡಿಶಾ ವಿಭಾಗದ ಕಾರ್ಯಾಧ್ಯಕ್ಷ ಬಿ.ಎನ್. ಪಟ್ನಾಯಕ್ ಹೇಳಿರುವುದಾಗಿ ವರದಿಯಾಗಿದೆ.

ಧಾರ್ಮಿಕ ಆಚರಣೆಯ ವಿಚಾರದಲ್ಲಿ ಕೋರ್ಟ್‌ ಎಷ್ಟರಮಟ್ಟಿಗೆ ಮಧ್ಯಪ್ರವೇಶ ಮಾಡಬಹುದು?

ಕೋರ್ಟ್‌ ನೀಡಿರುವ ಸೂಚನೆಯು ‘ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ನಡೆಸಬಹುದೇ’ ಎಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಈ ವಿಚಾರವನ್ನು ಪರಿಶೀಲಿಸುವ ಮುನ್ನ, ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೋರ್ಟ್‌ಗಳು ಈ ಹಿಂದೆ ಏನು ಹೇಳಿವೆ ಎಂಬುದನ್ನು, ಸಂವಿಧಾನದ ಕೆಲವು ವಿಧಿಗಳು ಏನು ಹೇಳುತ್ತವೆ ಎಂಬುದನ್ನು ಪರಿಶೀಲಿಸಬೇಕು.

‘ಧಾರ್ಮಿಕ ವಿಚಾರಗಳಲ್ಲಿ ತನಗೆ ಸಂಬಂಧಿಸಿದ ವ್ಯವಹಾರ ಗಳನ್ನು ತಾನೇ ನಿಭಾಯಿಸುವ ಹಕ್ಕು ಎಲ್ಲ ಧರ್ಮಗಳಿಗೂ ಇದೆ’ ಎಂದು ಸಂವಿಧಾನದ 26(ಬಿ) ವಿಧಿ ಹೇಳಿದೆ. ಹಾಗೆಯೇ, ಸಂವಿಧಾನದ 25ನೇ ವಿಧಿಯು ‘ಧರ್ಮದ ಆಚರಣೆ, ಪ್ರಚಾರ ಮಾಡುವುದು ಹಾಗೂ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯ’ವನ್ನು ಎಲ್ಲರಿಗೂ ನೀಡಿದೆ. ಈ ಎರಡು ವಿಧಿಗಳನ್ನು ಆಧಾರವಾಗಿ ಇಟ್ಟುಕೊಂಡು, ಹಿಂದೂಗಳಲ್ಲದವರಿಗೆ ಪ್ರವೇಶ ನಿರಾಕರಿಸುವ ಅಥವಾ ಮಹಿಳೆಯರಿಗೆ ಪ್ರವೇಶ ನಿರಾಕರಿಸುವ ‍ಪದ್ಧತಿಯನ್ನು ಸಮರ್ಥಿಸಿಕೊಳ್ಳಬಹುದೇ? ಈ ‍ಪ್ರಶ್ನೆಗೆ ಪೂರಕವಾಗಿ, ಇನ್ನೊಂದೆರಡು ಆಯಾಮಗಳನ್ನು ಗಮನಿಸಬೇಕು.

2004ರಲ್ಲಿ ಪೊಲೀಸ್ ಆಯುಕ್ತರು ಮತ್ತು ಆಚಾರ್ಯ ಜಗದೀಶ್ವರಾನಂದ ಅವಧೂತ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಒಂದು ತೀರ್ಪು ಇಲ್ಲಿ ಗಮನಾರ್ಹ. ‘ಸಂವಿಧಾನದ 25 ಹಾಗೂ 26ನೇ ವಿಧಿಗಳು ರಕ್ಷಣೆ ನೀಡಿರುವುದು ಧರ್ಮಕ್ಕೆ ಸಂಬಂಧಿಸಿದ ನಂಬಿಕೆಗಳಿಗೆ ಮಾತ್ರವೇ ಅಲ್ಲ, ಧರ್ಮದ ಅತ್ಯಗತ್ಯ ಆಚರಣೆಗಳಿಗೂ ಅವು ರಕ್ಷಣೆ ಕಲ್ಪಿಸಿವೆ. ಧರ್ಮದ ಪಾಲಿಗೆ ನೆಲೆಗಟ್ಟಿನಂತೆ ಇರುವ ಮೂಲಭೂತ ನಂಬಿಕೆಗಳನ್ನು ಅತ್ಯಗತ್ಯ ಎಂದು ವರ್ಗೀಕರಿಸಬಹುದು. ಮೂಲಭೂತ ನಂಬಿಕೆ ಅಥವಾ ಆಚರಣೆಯೊಂದನ್ನು ಒಂದು ಧರ್ಮದ ವ್ಯಾಪ್ತಿಯಿಂದ ಹೊರತಂದಾಗ, ಆ ಧರ್ಮದ ಸ್ವರೂಪದಲ್ಲಿ ವ್ಯತ್ಯಾಸವಾಗುತ್ತದೆ ಎಂದಾದರೆ ಅಂಥದ್ದನ್ನು ಧರ್ಮದ ಅತ್ಯಗತ್ಯ ಭಾಗ ಎನ್ನಬಹುದು. ನಮ್ಮ ಸಂವಿಧಾನ ರಕ್ಷಣೆ ಕೊಟ್ಟಿರುವುದು ಇಂತಹ ಮೂಲಭೂತ ಅಂಶಗಳಿಗೆ’ ಎಂದು ಕೋರ್ಟ್‌ ಹೇಳಿದೆ.

ಧರ್ಮದ ಮೂಲ ಸ್ವರೂಪಕ್ಕೆ ಧಕ್ಕೆ ತಾರದ ವಿಚಾರಗಳಲ್ಲಿ ಕೋರ್ಟ್‌ ನಿರ್ದೇಶನಗಳನ್ನು ನೀಡಿದ ಉದಾಹರಣೆಗಳು ಇವೆ. ತ್ರಿವಳಿ ತಲಾಖ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಪೀಠ ತೀರ್ಪು ನೀಡಿದ್ದನ್ನು ಈ ಮಾತಿಗೆ ಆಧಾರವಾಗಿ ಉಲ್ಲೇಖಿಸಬಹುದು. ನಿರ್ದಿಷ್ಟ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಅಥವಾ ನಿರ್ದಿಷ್ಟ ಧರ್ಮಗಳಿಗೆ ಸೇರಿದವರಿಗೆ ಪ್ರವೇಶ ನಿರಾಕರಿಸುವುದು ‘ಅತ್ಯಗತ್ಯ ಧಾರ್ಮಿಕ ಆಚರಣೆಯೇ’ ಎಂಬುದನ್ನು ತೀರ್ಮಾನಿಸುವುದು ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿದೆ.

ಜಗನ್ನಾಥ ದೇವಸ್ಥಾನ ಪ್ರವೇಶಿಸುವ ಅವಕಾಶ ಸಿಗದ ಪ್ರಸಿದ್ಧ ವ್ಯಕ್ತಿಗಳು ಯಾರು?

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ 1984ರಲ್ಲಿ ಜಗನ್ನಾಥ ದೇವಸ್ಥಾನದ ಒಳಕ್ಕೆ ಪ್ರವೇಶ ಸಿಗಲಿಲ್ಲ. ಅವರು ಪಾರ್ಸಿ ವ್ಯಕ್ತಿ ಫಿರೋಜ್ ಗಾಂಧಿ ಅವರನ್ನು ಮದುವೆಯಾದ ಕಾರಣಕ್ಕಾಗಿ ಒಳಗೆ ಬಿಡಲಿಲ್ಲ ಎಂದು ಪೂಜಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರಂತೆ. ಥಾಯ್ಲೆಂಡ್‌ನ ರಾಣಿ ಮಹಾಚಕ್ರಿ ಶ್ರೀಧರನ್ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಮಹಾಚಕ್ರಿ ಅವರು ಬೌದ್ಧ ಧರ್ಮದ ಅನುಯಾಯಿ ಆಗಿರುವ ಕಾರಣ ಹೀಗೆ ಮಾಡಲಾಗಿದೆ ಎಂಬ ಕಾರಣ ನೀಡಲಾಯಿತು.

ಸ್ವಿಟ್ಜರ್‌ಲೆಂಡಿನ ಪ್ರಜೆ ಎಲಿಜಬೆತ್ ಜಿಗ್ಲರ್‌ ಎನ್ನುವವರಿಗೆ 2006ರಲ್ಲಿ ಪ್ರವೇಶ ನಿರಾಕರಿಸಲಾಯಿತು. ಕ್ರೈಸ್ತ ಧರ್ಮೀಯರಾದ ಇವರು ದೇವಸ್ಥಾನಕ್ಕೆ ₹ 1.78 ಕೋಟಿ ದೇಣಿಗೆ ಸಹ ನೀಡಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.