ADVERTISEMENT

ದರ ನಿಗದಿ ಹಕ್ಕು ರೈತನದ್ದು: ಎಸ್‌.ಟಿ. ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 19:31 IST
Last Updated 24 ಡಿಸೆಂಬರ್ 2020, 19:31 IST
ಎಸ್‌.ಟಿ.ಸೋಮಶೇಖರ್
ಎಸ್‌.ಟಿ.ಸೋಮಶೇಖರ್   

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ದೇಶದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿವೆ. ರೈತ ಸಂಕುಲವೇ ನಾಶವಾಗಿ ಹೋಗುತ್ತದೆ ಎಂಬ ಹುಯಿಲು ಎದ್ದಿದೆ. ಕಾಯ್ದೆ ತಿದ್ದುಪಡಿ ಮಾಡಿರುವುದಕ್ಕೆ ಎರಡು ಕಾರಣಗಳಿವೆ– ಒಂದು, ಅನಾದಿಕಾಲದ ಕಾಯ್ದೆಯನ್ನು ಈಗಲೂ ಇಟ್ಟುಕೊಳ್ಳುವುದು ಸರಿಯಲ್ಲ. ಕಾಲಕ್ಕೆ ತಕ್ಕಂತೆ ಕಾಯ್ದೆಯೂ ಬದಲಾಗಬೇಕು ಎನ್ನುವುದು ಇದರ ಹಿಂದಿರುವ ಸತ್ಯ. ಇನ್ನೊಂದು, ತಾನು ಬೆಳೆದ ಉತ್ಪನ್ನಕ್ಕೆ ರೈತನೇ ಬೆಲೆ ನಿಗದಿ ಮಾಡುವ ಹಕ್ಕನ್ನು ನೀಡಬೇಕು ಎನ್ನುವುದು. ಈ ದೃಷ್ಟಿಯಲ್ಲಿ ಈಗಿನ ಕಾಯ್ದೆಯು ರೈತರ ಹಿತವನ್ನು ಕಾಪಾಡುವುದಲ್ಲದೆ, ಅವರ ಸ್ವಾಭಿಮಾನವನ್ನೂ ಎತ್ತಿ ಹಿಡಿಯುತ್ತದೆ.

ರೈತನ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೇಳುವ ಸಂಪ್ರದಾಯಕ್ಕೆ ಈ ಕಾಯ್ದೆಗಳ ಮೂಲಕ ತಿದ್ದುಪಡಿ ಮಾಡಿದಂತಾಗಿದೆ; ಬೆಳೆಯುವ ಹಕ್ಕು ರೈತನದ್ದು, ದರ ನಿಗದಿ ಇನ್ಯಾರದ್ದೋ ಎಂಬ ಸಂಸ್ಕೃತಿಯನ್ನು ಬದಲಾಯಿಸಲಾಗಿದೆ. ಇದನ್ನು ವಿರೋಧ ಮಾಡುತ್ತಿರುವವರು ‘ಮುಂದೆ ಹಾಗೆ ಆಗಬಹುದು, ಹೀಗೆ ಆಗಬಹುದು’ ಎಂಬ ಊಹಾತ್ಮಕ ಅಂಶಗಳನ್ನೇ ಹೇಳುತ್ತಿದ್ದಾರೆ. ರೈತರಿಗೆ ತೊಂದರೆ ಕೊಡುತ್ತಿದ್ದ ಕಾನೂನುಗಳಿಗೆ ಈಗ ತಿದ್ದುಪಡಿ ಮಾಡಲಾಗಿದೆ. ಈಗ ಜಾರಿಗೆ ಬಂದಿರುವ ಕಾಯ್ದೆಗಳು ಮುಂದೊಂದು ದಿನ ರೈತರಿಗೆ ಅನನುಕೂಲ ಉಂಟುಮಾಡುತ್ತಿವೆ ಎಂದಾದರೆ, ಆಗ ಮತ್ತೆ ತಿದ್ದುಪಡಿಗೆ ಅವಕಾಶ ಇದ್ದೇ ಇದೆ.

ಹೌದು. ಹಿಂದಿನಿಂದಲೂ ರೈತ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದ್ದಾನೆ. ಮಳೆ ಬರಲಿ, ಬಾರದಿರಲಿ, ಉತ್ಪಾದನೆ ಹೆಚ್ಚಿರಲಿ, ಕಡಿಮೆ ಇರಲಿ ಹೊಲದಲ್ಲಿ ಕಷ್ಟಪಟ್ಟು ಉತ್ತು ಬಿತ್ತಿದ ಬೆಳೆಗೆ ನೈಜ ಬೆಲೆ ಸಿಗುತ್ತಲೇ ಇಲ್ಲ ಎಂಬ ಕೊರಗು ಅನ್ನದಾತರನ್ನು ಕಾಡುತ್ತಲೇ ಇದೆ. ಇದಕ್ಕೆ ಬಹುಮುಖ್ಯವಾದ ಕಾರಣ, ನಮ್ಮ ವ್ಯವಸ್ಥೆಯಲ್ಲಿರುವ ಲೋಪ. ಕಷ್ಟಪಟ್ಟು ಬೆಳೆಯುವ ರೈತ, ಫಸಲನ್ನು ಕೊಯ್ದು, ಸಂಸ್ಕರಿಸಿ, ಚೀಲಕ್ಕೆ ತುಂಬಿ, ವಾಹನಗಳಲ್ಲಿ ಅವುಗಳನ್ನು ಹೇರಿಕೊಂಡು ಮಾರುಕಟ್ಟೆಗಳಿಗೆ ಬಂದರೆ, ಆತನಿಗೆ ದಕ್ಕುವುದು ಏನು? ಈ ಪ್ರಶ್ನೆಯನ್ನು ರೈತನೊಬ್ಬನೇ ಅಲ್ಲ, ಸಮಾಜದ ಪ್ರತಿಯೊಬ್ಬರು ಕೇಳಿಕೊಳ್ಳಬೇಕಿದೆ. ರೈತನ ಬಳಿ ಕಡಿಮೆ ದರಕ್ಕೆ ಖರೀದಿ ಮಾಡುವ ದಲ್ಲಾಳಿ/ವ್ಯಾಪಾರಿ ಆತನ ಕಣ್ಣ ಮುಂದೆಯೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಾನೆ. ಗ್ರಾಹಕ ಉಪಯೋಗಿ ಉತ್ಪನ್ನಗಳನ್ನು ಮಾರುವ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಎಂ.ಆರ್.ಪಿ. ನಿಗದಿ ಮಾಡಿಕೊಳ್ಳುವ ಅವಕಾಶವನ್ನು ಕೊಟ್ಟಿದ್ದೇವೆ. ನಾಡಿನ ಜನರ ಹೊಟ್ಟೆಗೆ ಅನ್ನ ಕೊಡುವ ರೈತನಿಗೆ ಆ ಹಕ್ಕನ್ನು ಕೊಡುವುದಿಲ್ಲ ಎನ್ನುವುದು ನ್ಯಾಯವೇ?

ADVERTISEMENT

ಕೇಂದ್ರ ಸರ್ಕಾರದ ಕೃಷಿ ಉತ್ಪನ್ನ ಮತ್ತು ಜಾನುವಾರು ಮಾರಾಟ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2017ರ ಮಾದರಿ ಕಾಯ್ದೆಯ ಶಿಫಾರಸುಗಳನ್ವಯ ರಾಜ್ಯದ ಎಪಿಎಂಸಿ ಕಾಯ್ದೆಯ ಕಲಂ 8(2) ಮತ್ತು ಕಲಂ 117ಕ್ಕೆ ತಿದ್ದುಪಡಿ ಮಾಡಲಾಗಿದೆ. ಕಲಂ 8(3)ನ್ನು ಕೈಬಿಡಲಾಗಿದೆ.

ಕಲಂ 8(2) ಅಡಿ ಇದುವರೆಗೆ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲೇ ಮಾರಾಟ ಮಾಡಬೇಕೆಂಬ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಎಪಿಎಂಸಿ ಸಮಿತಿಯ ನಿಯಂತ್ರಣವನ್ನು ಪ್ರಾಂಗಣಕ್ಕೆ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ವಿಧಿಸುತ್ತಿದ್ದ ಕಲಂ 117ಕೈಬಿಡಲಾಗಿದೆ. ಈ ತಿದ್ದುಪಡಿಯಿಂದಾಗಿ, ತಾನು ಬೆಳೆದ ಉತ್ಪನ್ನವನ್ನು ತನ್ನ ಇಚ್ಚೆಯಂತೆ ಹೊಲ/ಫಾರಂ ಗೇಟ್ ಅಥವಾ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಸ್ವಾತಂತ್ರ್ಯವನ್ನು ರೈತ ಪಡೆದುಕೊಂಡಿದ್ದಾನೆ.

ಈ ಮೊದಲಿನ ಎಪಿಎಂಸಿ ಕಾಯ್ದೆ ಪ್ರಕಾರ, ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲಿಯೇ ಮಾರುವುದು ಅನಿವಾರ್ಯವಿತ್ತು. ಪ್ರಾಂಗಣದ ಹೊರಗೆ ಯಾವುದೇ ವ್ಯಾಪಾರಿ ಖರೀದಿಸಿದಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಿತ್ತು. ಈಗ ತಿದ್ದುಪಡಿ ಮಾಡಿ ದಂಡ ಮತ್ತು ಶಿಕ್ಷೆಯನ್ನು ಕೈಬಿಟ್ಟಿರುವುದರಿಂದ ರೈತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ರೈತರು ಯಾವುದೇ ವ್ಯಾಪಾರಿಗೆ, ಯಾವುದೇ ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಮಾರಾಟ ಮಾಡಬಹುದು. ಇದಲ್ಲದೆ, ಬೇರೆ ರಾಜ್ಯಗಳಿಗೂ ತೆರಳಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಈಗ ಕಲ್ಪಿಸಲಾಗಿದೆ.

ನೂತನ ಎಪಿಎಂಸಿ ಕಾಯ್ದೆಯಿಂದ ಯಾರೂ ಆತಂಕ ಪಡಬೇಕಿಲ್ಲ. ಇದರಿಂದ ಈ ಹಿಂದಿನ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗಿಲ್ಲ. ಎಪಿಎಂಸಿಯನ್ನು ಮುಚ್ಚುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದೆ ಇಲ್ಲ. ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಬೆಳೆಯನ್ನು ಮಾರಾಟ ಮಾಡುವ ಹಕ್ಕನ್ನು ರೈತರಿಗೆ ನೀಡಿರುವುದರಿಂದ ರೈತನಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ವ್ಯಾಪಾರಿಗಳ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ.

2007ರಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ,ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ಜೊತೆಯಲ್ಲಿಯೇ ಪ್ರಾಂಗಣದ ಹೊರಗೆ ರೈತರಿಂದ ನೇರ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 62 ಕಂಪನಿಗಳು ನೇರ ಖರೀದಿ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿವೆ. ಈಗಲೂ ಹಲವು ದೊಡ್ಡ ಕಂಪನಿಗಳು ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರ ಮಾಡುತ್ತಿದೆ. 2014ರಿಂದ ಆನ್‌ಲೈನ್ ಟ್ರೇಡಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಗ ಆಗದ ತೊಂದರೆ ಈಗ ಏಕಾಗುತ್ತದೆ?

(ಲೇಖಕ: ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.