ADVERTISEMENT

ವಿಶ್ಲೇಷಣೆ | ಗಾಂಧೀಜಿ ಆತ್ಮಕಥನಕ್ಕೆ 100 ವರ್ಷ

ಪ್ರೊ.ಬರಗೂರು ರಾಮಚಂದ್ರಪ್ಪ
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
ವಿಶ್ಲೇಷಣೆ
ವಿಶ್ಲೇಷಣೆ   

‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎಂಬ ಹೆಸರಿನ ಗಾಂಧೀಜಿಯವರ ಆತ್ಮಕಥನವು ಪ್ರಕಟಗೊಂಡು 2025ಕ್ಕೆ ನೂರು ವರ್ಷಗಳಾಗಿವೆ. ಈ ಆತ್ಮಕಥನವನ್ನು ಮಹಾದೇವ ದೇಸಾಯಿಯವರು ಗುಜರಾತಿನಿಂದ ಆಂಗ್ಲ ಭಾಷೆಗೆ ಅನುವಾದಿಸಿದರು. ಈ ಆಂಗ್ಲ ಅನುವಾದವನ್ನು ಕನ್ನಡಕ್ಕೆ ತಂದ ಪ್ರಸಿದ್ಧ ಸಾಹಿತಿ, ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮ ಶತಮಾನದ ವರ್ಷದಲ್ಲೇ ಗಾಂಧಿ ಆತ್ಮಕಥನಕ್ಕೂ ‘ಜನ್ಮ’ ಶತಮಾನದ ವರ್ಷವಾಗಿರುವುದು ಒಂದು ವಿಶೇಷ. ಗೊರೂರರ ಅನುವಾದವು ಗಾಂಧೀಜಿಯವರ ‘ಅಂತರಂಗದ ಮಾತುಗಳಿಗೆ’ ಕನ್ನಡಿಯಾದದ್ದು ಕನ್ನಡ ಓದುಗರಿಗೆ ಹೆಮ್ಮೆಯ ಕೊಡುಗೆಯಾಗಿದೆ.

ಗಾಂಧೀಜಿಯವರ ಆತ್ಮಕಥನವನ್ನು ‘ಅಂತರಂಗದ ಮಾತುಗಳು’ ಎಂದು ನಾನು ಕರೆಯಲು ಕಾರಣವಿದೆ. ಗಾಂಧೀಜಿಯವರು ತಮ್ಮ ಆತ್ಮಕಥನ ಕುರಿತಂತೆ ಹೇಳಿರುವ ಮಾತುಗಳನ್ನು ಗಮನಿಸಿ: ‘ನಾನು ಆಳವಾದ ಅಂತರಂಗ ವೀಕ್ಷಣೆಗೆ ಒಳಗಾಗಿದ್ದೇನೆ. ನನ್ನನ್ನು ನಾನೇ ಆಮೂಲಾಗ್ರವಾಗಿ ಶೋಧಿಸಿಕೊಂಡಿದ್ದೇನೆ ಮತ್ತು ಮಾನಸಿಕ ಸಂದರ್ಭಗಳನ್ನು ಪರೀಕ್ಷಿಸಿ, ವಿಶ್ಲೇಷಿಸಿಕೊಂಡಿದ್ದೇನೆ. ಆದರೂ, ನನ್ನ ನಿರ್ಧಾರಗಳನ್ನು ಅವೇ ಅಂತಿಮ ಅಥವಾ ದೋಷಾತೀತವೆಂದು ಹೇಳುವುದರಿಂದ ಬಹಳ ದೂರವೇ ಉಳಿದಿದ್ದೇನೆ’. ಗಾಂಧೀಜಿಯವರ ಈ ಮಾತುಗಳು ಅವರ ಸತ್ಯನಿಷ್ಠೆ, ಪ್ರಾಮಾಣಿಕತೆಗೆ ಸಾಕ್ಷಿಯಾಗಿರುವುದಲ್ಲದೆ, ಆತ್ಮಕಥನವನ್ನು ಆತ್ಮಾವಲೋಕನ ಕಥನವೆಂದು ಭಾವಿಸಿರುವುದನ್ನು ಸ್ಪಷ್ಟಪಡಿಸುತ್ತವೆ. ನಿಜ; ಯಾರದೇ ಆತ್ಮಕಥನವು ಆತ್ಮಾವಲೋಕನದ ಆಯಾಮವನ್ನು ಪಡೆಯದೆ ಇದ್ದರೆ ಆತ್ಮರತಿಯಾಗುವ ಅಪಾಯ ಇದ್ದೇ ಇರುತ್ತದೆ. ಆತ್ಮರತಿಗೆ ಅಹಂಕಾರದ ಸ್ಪರ್ಶವೂ ಅಗೋಚರವಾಗಿ ಕೆಲಸ ಮಾಡುತ್ತದೆ. ಆತ್ಮಕಥನಗಳು ಆಂತರಂಗಿಕ ಶೋಧವೂ, ಪರೀಕ್ಷೆಗೊಡ್ಡಿಕೊಂಡ ಪರಿಶೀಲನೆಯೂ ಆದಾಗ ಸತ್ಯಕಥನಗಳಾಗುತ್ತವೆ. ಹಾಗೆಂದು ಆತ್ಮಕಥನಕಾರರು ತಮ್ಮ ಬದುಕಿನ ಸಮಸ್ತಸತ್ಯಗಳನ್ನು ದಾಖಲಿಸಿರುತ್ತಾರೆಂದು ಭಾವಿಸಲಾಗದು. ಅನುಭವಗಳ ಆಯ್ಕೆಯೂ ಆತ್ಮಕಥನಗಳ ಅಂಗವಾಗಿರುತ್ತದೆ. ಈ ಇತಿಮಿತಿಗಳ ನಡುವೆ ವಾಸ್ತವಿಕತೆ ಮತ್ತು ಪ್ರಾಮಾಣಿಕತೆಯುಳ್ಳ ಆತ್ಮಕಥನಗಳು ಮೌಲ್ಯಯುತವಾಗುತ್ತವೆ. ಗಾಂಧೀಜಿ ಆತ್ಮಕಥನಕ್ಕೆ ಇಂತಹ ಮೌಲ್ಯ ತಾನಾಗಿಯೇ ಲಭ್ಯವಾಗಿದೆ. ಯಾಕೆಂದರೆ, ಅವರು ತಮ್ಮ ಅನುಭವಗಳನ್ನು ತಮಗೆ ತಾವೇ ಹೇಳಿಕೊಂಡಂತೆ ಬರೆಯುತ್ತಾರೆ. ಓದುಗರಿಗೆ ಬೋಧೆ ಮಾಡುತ್ತೇನೆ ಎಂಬ ಹಮ್ಮುಬಿಮ್ಮುಗಳಿಲ್ಲದೆ ನಿವೇದಿಸುತ್ತಾರೆ. ಇನ್ನೊಂದು ಗಮನಾರ್ಹ ಅಂಶವೆಂದರೆ– ಗಾಂಧಿ
ಆತ್ಮಕಥನದ ಅವಧಿ 56 ವರ್ಷಗಳು ಮಾತ್ರ. ಗಾಂಧೀಜಿ ಹುಟ್ಟಿದ್ದು 1869ರ ಅಕ್ಟೋಬರ್ 2ರಂದು. ಆತ್ಮಕಥನ ಹೊರಬಂದದ್ದು 1925ರ ನವೆಂಬರ್ ತಿಂಗಳಲ್ಲಿ. ಆನಂತರ 23 ವರ್ಷಗಳ ಕಾಲ ಗಾಂಧೀಜಿ ಬದುಕಿದ್ದರು. ಈ 23 ವರ್ಷ ಗಾಂಧೀಜಿ ಬದುಕಿನ ಅತ್ಯಮೂಲ್ಯ ಆಕರಗಳೆಂದರೆ ತಪ್ಪಾಗಲಾರದು. ಯಾಕೆಂದರೆ, ಗಾಂಧೀಜಿಯವರು ಜಾತಿ, ವರ್ಣವೇ ಮುಂತಾದ ಸಾಮಾಜಿಕ ಸಂರಚನೆಗಳನ್ನು ಕುರಿತು ಮೊದಲು ಪ್ರತಿಪಾದಿಸಿದ್ದ ಸಾಂಪ್ರದಾಯಿಕ ಜಡ ಚಿಂತನೆಗಳಿಗೆ, ಚಲನಶೀಲ ಪ್ರಗತಿಪರ ಆಯಾಮ ದೊರಕಿದ್ದು, ಇದೇ ಅವಧಿಯಲ್ಲಿ.

ಗಾಂಧೀಜಿಯವರು 1919ರಲ್ಲಿ ಅಂತರ್ಜಾತಿ ವಿವಾಹ ಮತ್ತು ಅಂತರ್ಜಾತಿ ಭೋಜನ ವ್ಯವಸ್ಥೆಯನ್ನು ಒಪ್ಪಿರಲಿಲ್ಲ. ಈ ಭಾವನೆಯು 1936ರಲ್ಲಿ ಖಚಿತತೆ ಮತ್ತು ಸ್ಪಷ್ಟತೆಯೊಂದಿಗೆ ಪ್ರಕಟಗೊಂಡಿತು. ಒಬ್ಬ ಪತ್ರಿಕಾ ವರದಿಗಾರನಿಗೆ ಕೊಟ್ಟ ಸಂದರ್ಶನದಲ್ಲಿ ಗಾಂಧೀಜಿ ಹೀಗೆ ಹೇಳಿದ್ದಾರೆ: ‘ತನ್ನ ಎಲ್ಲಾ ಭಯಾನಕತೆಗಳಿಂದ ನಮಗೆ ಇವತ್ತು ಕಾಣಿಸುತ್ತಿರುವ ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ, ನಾನು ನನ್ನನ್ನು ಹಿಂದೂವೆಂದು ಕರೆದುಕೊಂಡು ಅದರಲ್ಲಿ ಉಳಿದುಕೊಳ್ಳಲಾರೆ. ಕಾರಣ, ಅಂತರ್ಜಾತಿ ಭೋಜನ ಅಥವಾ ಅಂತರ್ಜಾತಿ ವಿವಾಹಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಅಂಬೇಡ್ಕರ್ ಅವರು ಮೊದಲಿಂದಲೂ ಅಂತರ್ಜಾತಿ ವಿವಾಹದ ಪ್ರತಿಪಾದಕರಾಗಿದ್ದರು ಎಂಬ ಅಂಶವನ್ನು ಇಲ್ಲಿ ಗಮನಿಸಬೇಕು. ಗಾಂಧೀಜಿಯವರು ಅಂಬೇಡ್ಕರ್ ಅವರ ಬಗ್ಗೆ ಅಪಾರ ಆದರವುಳ್ಳವರಾಗಿದ್ದರು ಎನ್ನುವುದಕ್ಕೆ ಒಂದು ನಿದರ್ಶನವನ್ನು ನೀಡಬಹುದು. ಜಗತ್ತಿನಲ್ಲೇ ಮೊದಲ ಅಧಿಕೃತ ನಾಸ್ತಿಕ ಕೇಂದ್ರವನ್ನು ಆಂಧ್ರದಲ್ಲಿ ಸ್ಥಾಪಿಸಿದ್ದ ಗೋರಾ ಅವರ ಅಳಿಯ ಗಾಂಧೀಜಿಯವರ ಶಿಷ್ಯತ್ವವನ್ನು ಬಯಸಿದಾಗ, ‘ನೀನು ಅಂಬೇಡ್ಕರ್ ಅವರಂತೆ ಆಗಬೇಕು. ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನಕ್ಕಾಗಿ ಕೆಲಸ ಮಾಡಬೇಕು. ಯಾವ ಬೆಲೆಯನ್ನು ತೆತ್ತಾದರೂ ಸರಿಯೇ, ಅಸ್ಪೃಶ್ಯತೆಯು ಹೋಗಲೇಬೇಕು’ (1946) ಎಂದು ಗಾಂಧೀಜಿ ಬರೆದು ತಿಳಿಸಿದರು. 1946ರಲ್ಲಿ ಗಾಂಧೀಜಿ ‘ವರ್ಗರಹಿತ, ಜಾತಿರಹಿತ ಇಂಡಿಯಾ ನಿರ್ಮಾಣದ ಅಗತ್ಯ’ವನ್ನು ಅಮೆರಿಕದ ಸಂದರ್ಶಕರೊಂದಿಗೆ ಹಂಚಿಕೊಂಡಿದ್ದರು. ಜಾತಿಯು ಬೇರುಸಹಿತ ಹೋಗಬೇಕು ಎಂದು ಆಶಿಸಿದ್ದರು. ‘ನನ್ನ ಮನಸ್ಸು ಸತತವಾಗಿ ಬೆಳೆಯುತ್ತಿದೆ’ ಎಂದೂ ಹೇಳಿದ್ದರು. ಆದರೆ ಇವರ ಬೆಳವಣಿಗೆ ಮತ್ತು ಬದಲಾವಣೆಯನ್ನು ಗಮನಿಸದ, ಗುರುತಿಸದ, ಟೀಕಾಕಾರರಿಗೆ ಆಹಾರವೂ ಆದರು.

ADVERTISEMENT

1925ರವರೆಗಿನ ಗಾಂಧೀಜಿಯವರ ಆತ್ಮಕಥನ ಕೂಡ ಅವರ ಬೆಳವಣಿಗೆ ಮತ್ತು ಬದಲಾವಣೆಯ ಚರಿತೆಯಾಗಿದೆ. ತಾಯಿ, ತಂದೆಯವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಗಾಂಧೀಜಿ ತಮ್ಮ ದೌರ್ಬಲ್ಯಗಳನ್ನು ತೆರೆದಿಡುತ್ತಲೇ ಆನಂತರ ಆದ ಬದಲಾವಣೆಗಳನ್ನು ಉಲ್ಲೇಖಿಸುತ್ತಾರೆ. ತಮ್ಮ ಪ್ರತಿಯೊಂದು ಪ್ರಮುಖ ಪ್ರಸಂಗವನ್ನು ‘ಪ್ರಯೋಗ’ ಎಂದೇ ಕರೆಯುತ್ತಾರೆ. ಈ ಪ್ರಯೋಗಗಳ ಆಂತರ್ಯದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಭಾವನೆಯಿದೆಯೆಂದು ಸ್ಪಷ್ಟಪಡಿಸುತ್ತಾರೆ: ‘ನಾನು ಕಟ್ಟಿಕೊಡುತ್ತಿರುವ ಕಥನಗಳು, ಆಧ್ಯಾತ್ಮಿಕವಾದವು ಅಥವಾ ಖಚಿತವಾಗಿ ನೈತಿಕವಾದವು. ಧರ್ಮದ ಮೂಲಸಾರವೇ ನೈತಿಕತೆ’ ಎಂದು ಹೇಳಿದ್ದಾರೆ.

ಗಾಂಧೀಜಿಯವರಿಗೆ ಧರ್ಮವೆನ್ನುವುದು ನೈತಿಕವೇ ಹೊರತು ಸಾಂಸ್ಥಿಕ ಸ್ವರೂಪದ ನಿಯಂತ್ರಕವಲ್ಲ. ಆದ್ದರಿಂದಲೇ ಅವರು ಹಿಂದೂ ಧರ್ಮವನ್ನು ನಂಬಿ ನಡೆಯುತ್ತಲೇ ಅದರ ಒಳವಿಮರ್ಶಕರಾಗಿದ್ದರು. ದ್ವೇಷವಿಲ್ಲದ ಧಾರ್ಮಿಕ ಸಾಮರಸ್ಯದ ನೈತಿಕ ಪ್ರತಿಪಾದಕರಾಗಿದ್ದರು. ನೈತಿಕತೆಯ ಮೂಲತತ್ತ್ವಗಳಿಗೆ ವಿರುದ್ಧವಾದ ಎಲ್ಲವನ್ನೂ ನಿರಾಕರಿಸುತ್ತೇನೆ ಎಂದು ಬರೆದರು. ವೇದ, ಉಪನಿಷತ್ತು ಮುಂತಾದವುಗಳಲ್ಲಿ ನಂಬಿಕೆಯಿದ್ದರೂ ‘ಮಂತ್ರ ಪಠಣದಿಂದ ಧರ್ಮ ನಿರ್ಧಾರ ಆಗುವುದಿಲ್ಲ’ ಎಂದರು. ಯಾಕೆಂದರೆ, ನೈತಿಕತೆ ಮತ್ತು ಪ್ರಾಮಾಣಿಕತೆಗಳೇ ಅವರ ಬದುಕಿನ ಸತ್ಯಶೋಧದ ಸಾಧನವಾಗಿದ್ದವು.

ಗಾಂಧೀಜಿಯವರು ಸ್ನೇಹಿತರ ಜೊತೆಗೆ ಸಿಗರೇಟು ಸೇದಿದ್ದು, ಸಿಗರೇಟು ಖರೀದಿಸಲು ಹಣ ಕದ್ದಿದ್ದು, ಮೇಕೆಮಾಂಸ ತಿಂದಿದ್ದು, ಮುಂತಾದ ಪ್ರಸಂಗಗಳನ್ನು ಆತ್ಮಾವಲೋಕನದ ಮಾದರಿಯಲ್ಲಿ ಕಟ್ಟಿಕೊಡುತ್ತಾರೆ. ತಾಯಿ, ತಂದೆ ಹಾಗೂ ಹಿರಿಯರ ಬಗ್ಗೆ ಇದ್ದ ಗೌರವ ಮತ್ತು ಅವರ ಕಟ್ಟುಪಾಡುಗಳು ತಮ್ಮ ‘ಹವ್ಯಾಸಗಳಿಗೆ’ ಅಡ್ಡಿಯಾಗಿ ‘ಸ್ವಾತಂತ್ರ್ಯ’ವನ್ನು ಕಸಿಯುತ್ತಿವೆಯೆಂಬ ಅನುಭವದಿಂದ ಬಾಲಕ ಗಾಂಧೀಜಿ, ತಳಮಳಕ್ಕೆ ಒಳಗಾಗುತ್ತಾರೆ. ತೃಪ್ತಿಯೇ ಇಲ್ಲದ ಮಾನಸಿಕ ತಳಮಳಗಳನ್ನು ತಾಳಿಕೊಳ್ಳಲಾರದೆ ಸ್ನೇಹಿತರೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬರುತ್ತಾರೆ. ದತ್ತೂರಿ ಗಿಡದ ಬೀಜಗಳನ್ನು ತಿಂದರೆ ಸಾವು ಸಂಭವಿಸುತ್ತದೆಯೆಂದು ತಿಳಿದಿದ್ದ ಇವರು ಆ ಗಿಡಕ್ಕಾಗಿ ಹುಡುಕಿ, ಪತ್ತೆ ಮಾಡಿ, ಒಂದೆರಡು ಬೀಜ ತಿಂದು, ತಕ್ಷಣವೇ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. ‘ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಯಷ್ಟು ಅದನ್ನು ಸಾಧಿಸುವುದು ಸುಲಭವಲ್ಲ ಎಂದು ನಾನು ಮನಗಂಡೆ’ ಎಂದು ಬರೆಯುತ್ತಾರೆ.

ಮೇಕೆಮಾಂಸ ತಿಂದ ಪ್ರಸಂಗ ಮತ್ತು ಆನಂತರದ ಬೆಳವಣಿಗೆಗಳ ನಿರೂಪಣೆ ಆಸಕ್ತಿದಾಯಕವಾಗಿದೆ. ಮಾಂಸ ಸೇವನೆಯು, ಶಕ್ತಿವಂತ ಹಾಗೂ ಧೈರ್ಯವಂತನನ್ನಾಗಿ ಮಾಡುತ್ತದೆ. ಇಂಗ್ಲಿಷರನ್ನು ಮಣಿಸಲು ಇದು ಸಹಾಯಕವಾಗುತ್ತದೆ ಎಂದು ಬಾಲಕ ಗಾಂಧಿ ಭಾವಿಸುತ್ತಾರೆ. ಬ್ರಿಟಿಷರನ್ನು ಮಣಿಸಲು ಮಾಂಸ ತಿನ್ನಬೇಕೆಂಬ ಬಯಕೆ ವಿಚಿತ್ರ ಎನ್ನಿಸಿದರೂ, ಬ್ರಿಟಿಷರ ವಿರುದ್ಧ ಬಾಲ್ಯದಲ್ಲೇ ಮೂಡಿದ್ದ ಅವರ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದು. ಆನಂತರ ಧೂಮಪಾನ, ಮಾಂಸ ಸೇವನೆಗಳನ್ನು ತೊರೆದು ತಂದೆಗೆ ತಪ್ಪೊಪ್ಪಿಗೆ ಪತ್ರ ಬರೆದು ನೇರವಾಗಿ ಕೊಟ್ಟ ಸನ್ನಿವೇಶವನ್ನು ಗಾಂಧೀಜಿ ಭಾವುಕವಾಗಿ ವಿವರಿಸಿದ್ದಾರೆ. ಹಾಗೆಂದು ಗಾಂಧೀಜಿ ಮಾಂಸಾಹಾರದ ವಿರೋಧಿಯಾಗಿರಲಿಲ್ಲ. ತಾಯಿ–ತಂದೆಗೆ ನೋವಾಗುತ್ತದೆಯೆಂದು ತಾನು ಅವರು ಬದುಕಿರುವವರೆಗೆ ಮಾಂಸಾಹಾರ ಸೇವನೆ ಮಾಡುವುದಿಲ್ಲವೆಂದೂ, ಅವರು ಗತಿಸಿದ ನಂತರ ತನಗೆ ‘ಸ್ವಾತಂತ್ರ್ಯ’ ಬಂದಾಗ, ಬಹಿರಂಗವಾಗಿಯೇ ತಿನ್ನುವುದಾಗಿಯೂ ಬರೆದುಕೊಂಡಿದ್ದಾರೆ.

ಗಾಂಧಿ ಆತ್ಮಕಥನದ ಒಂದು ಮುಖ್ಯ ಘಟನೆ ಯೆಂದರೆ – ಅವರನ್ನು ಜಾತಿಭ್ರಷ್ಟರನ್ನಾಗಿ ಮಾಡಿದ್ದು. ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೊರಟಾಗ ಜಾತಿ ಮುಖಂಡರು ‘ಸಮುದ್ರಯಾನವು ತಮ್ಮ ಜಾತಿಯಲ್ಲಿ
ನಿಷಿದ್ಧ’ವೆಂದು ವಿರೋಧಿಸುತ್ತಾರೆ. ಸಮುದ್ರಯಾನ ಮಾಡಿದರೆ ಬಂಧುಬಳಗದವರು ಗಾಂಧಿ ಜೊತೆಗೆ
ಒಡನಾಡುವ ಹಾಗಿಲ್ಲ, ನೀರನ್ನು ಕೂಡ ಕೊಡುವಂತಿಲ್ಲ. ಆದರೆ ಗಾಂಧೀಜಿ ಬಗ್ಗಲಿಲ್ಲ. ‘ಜಾತಿ ಭ್ರಷ್ಟನನ್ನಾಗಿಸಿ; ನಾನು ಹೆದರುವುದಿಲ್ಲ’ ಎಂದರು. ಜಾತಿಯಿಂದ ಹೊರಹಾಕಲ್ಪಟ್ಟರು; ಜಾತಿಯಿಲ್ಲದವರಾದರು. ಇಂತಹ ಅನೇಕ ಪ್ರಸಂಗಗಳು ಗಾಂಧಿ ಆತ್ಮಕಥನದಲ್ಲಿ ಹಾಸುಹೊಕ್ಕಾಗಿವೆ. ವೈರುಧ್ಯಗಳೂ ಇವೆ. ಬ್ರಹ್ಮಚರ್ಯದ ಪ್ರಯೋಗ, ಅಸ್ಪೃಶ್ಯ ಮೂಲದ ಕ್ರಿಶ್ಚಿಯನ್ ಉದ್ಯೋಗಿಯ ಕಕ್ಕಸ್ಸಿನ ಕೊಡವನ್ನು ಶುದ್ಧ ಮಾಡದೆ ಇದ್ದ ಕಸ್ತೂರ್ ಬಾ ಅವರ ಬಗ್ಗೆ ನಡೆದುಕೊಂಡ ಗಂಡಾಳಿಕೆಯ ದರ್ಪ, ಆನಂತರದ ಪಶ್ಚಾತ್ತಾಪ– ಇಂತಹ ಅನೇಕ ಆತ್ಮಾವಲೋಕನ ಮತ್ತು
ಮಂಥನಗಳಿಂದ ಗಾಂಧಿ ಆತ್ಮಕಥನವು ವೈರುಧ್ಯ ಗಳನ್ನು ಮೀರಿದ ಮಾಹಿತಿ ಕೇಂದ್ರವೂ ಆಗಿದೆ.

ಗಾಂಧೀಜಿಯವರು ರೈಲಿನ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ಭಾರತವನ್ನು ‘ಕಂಡುಕೊಂಡದ್ದು’ ಅವರ ಬದುಕಿನ ಒಂದು ಮುಖ್ಯಘಟ್ಟ; ತನ್ನ ‘ವರ್ಗ’ವು ಅನುಭವಿಸುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಆಗ ಮೂಡಿದ್ದು ಪಾಪಪ್ರಜ್ಞೆ. ಸೂಟುಧಾರಿಯಾಗಿದ್ದ ಗಾಂಧೀಜಿ ಅರೆಬೆತ್ತಲೆ ಉಡುಪಿಗೆ ಅಪವರ್ಗೀಕರಣಗೊಂಡದ್ದು ಮತ್ತು ಅರೆಬೆತ್ತಲೆ ಉಡುಪಿನ ವಲಯದಿಂದ ಬಂದ ಅಂಬೇಡ್ಕರ್ ಸೂಟುಧಾರಿಯಾದದ್ದು ಕೇವಲ ಉಡುಪಿನ ಬದಲಾವಣೆಯಲ್ಲ. ಗಾಂಧೀಜಿಯವರ ಪಾಪಪ್ರಜ್ಞೆಯ ಕೆಳಮುಖ ಚಲನೆ ಮತ್ತು ಅಂಬೇಡ್ಕರ್ ಅವರ ಜಾಗೃತ ಪ್ರಜ್ಞೆಯ ಮೇಲ್ಮುಖ ಚಲನೆಗೆ ಉಡುಪಿನ ಬದಲಾವಣೆ ಸಕಾರಾತ್ಮಕ ಚಾರಿತ್ರಿಕ ಸಂಕೇತ. ಎರಡೂ ಹೋರಾಟದ ಮಾದರಿಗಳು. ಕೊನೆಗೊಂದು ಮಾತು: ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಬಾಳ ಕಥನವಿಲ್ಲದೆ ಭಾರತ ಕಥನ ಪೂರ್ಣವಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.