ADVERTISEMENT

ಭಾರತಕ್ಕೆ ಸಹೋದರರ ಸವಾಲು: ರಾಜಪಕ್ಸೆ ಕುಟುಂಬದ ಹಿಡಿತದಲ್ಲಿ ಶ್ರೀಲಂಕಾ

ಗೋಟಬಯ ಅವಧಿಯಲ್ಲಿ ಭಾರತ– ಶ್ರೀಲಂಕಾ ಸಂಬಂಧ ಯಾವ ದಿಕ್ಕಿಗೆ ಹೊರಳಬಹುದು?

ಸುಧೀಂದ್ರ ಬುಧ್ಯ
Published 17 ಡಿಸೆಂಬರ್ 2019, 3:40 IST
Last Updated 17 ಡಿಸೆಂಬರ್ 2019, 3:40 IST
ಗೋಟಬಯ ರಾಜಪಕ್ಸೆ ಮತ್ತು ನರೇಂದ್ರ ಮೋದಿ
ಗೋಟಬಯ ರಾಜಪಕ್ಸೆ ಮತ್ತು ನರೇಂದ್ರ ಮೋದಿ   

ವರ್ಷದ ಹಿಂದೆ ರಾಜಕೀಯ ಅಸ್ಥಿರತೆಗೆ ಒಳಗಾಗಿದ್ದ ಶ್ರೀಲಂಕಾ ಇದೀಗ ಪ್ರಬಲ ನಾಯಕನನ್ನು ಆರಿಸಿಕೊಂಡು ಹೊಸ ಹುಮ್ಮಸ್ಸಿನಲ್ಲಿದೆ. ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ ತಮ್ಮ ಮೊದಲ ಭೇಟಿಗೆ ಭಾರತವನ್ನೇ ಆರಿಸಿಕೊಂಡು, ದೆಹಲಿಗೆ ಬಂದು ಹೋಗಿದ್ದಾರೆ. ಭಾರತದ ಪ್ರಧಾನಿಯನ್ನು ತಮ್ಮ ದೇಶಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಅತ್ತ ಚೀನಾ ತನ್ನ ಹಿತಾಸಕ್ತಿಗೆ ಪೂರಕವಾಗಿ ಶ್ರೀಲಂಕಾವನ್ನು ಒಲಿಸಿಕೊಳ್ಳಲು ಪೈಪೋಟಿಗಿಳಿದಿದೆ. ಹಾಗಾಗಿ ಗೋಟಬಯ ಅವಧಿಯಲ್ಲಿ ಭಾರತ-ಶ್ರೀಲಂಕಾ ದ್ವಿಪಕ್ಷೀಯ ಸಂಬಂಧ ಯಾವ ದಿಕ್ಕಿಗೆ ಹೊರಳಬಹುದು ಎಂಬ ಪ್ರಶ್ನೆ ಢಾಳಾಗಿ ಕಾಣುತ್ತಿದೆ.

ಈ ಬಾರಿಯ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವದ ವಿಷಯ ಹೆಚ್ಚು ಚರ್ಚೆಗೆ ಒಳಪಟ್ಟಿತ್ತು. ಈ ಎರಡರ ಕುರಿತು ನಿಖರವಾಗಿ ಮಾತನಾಡಿದ್ದ ನಂದಸೇನ ಗೋಟಬಯ ರಾಜಪಕ್ಸೆ ತಮ್ಮ ಪ್ರತಿಸ್ಪರ್ಧಿ ಸಜಿತ್ ಪ್ರೇಮದಾಸ್ ಅವರ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದರು. ರನಿಲ್ ವಿಕ್ರಮಸಿಂಘೆ ರಾಜೀನಾಮೆಯಿಂದ ತೆರವಾದ ಪ್ರಧಾನಿ ಹುದ್ದೆಗೆ ತಮ್ಮ ಸಹೋದರ ಮಹಿಂದಾ ರಾಜಪಕ್ಸೆ ಅವರನ್ನು ಮುಂದಿನ ಚುನಾವಣೆವರೆಗೆ ನಿಯೋಜಿಸಿದರು. ಹಾಗಾಗಿ ಶ್ರೀಲಂಕಾದ ಆಡಳಿತ ಇಡಿಯಾಗಿ ರಾಜಪಕ್ಸೆ ಸಹೋದರರ ಕೈಗೆ ಬಂದಂತಾಗಿದೆ.

ಗೋಟಬಯ ಅವರ ಈ ಗೆಲುವನ್ನು ಮಹಿಂದಾ ಅವರ ಗೆಲುವು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಅದಕ್ಕೆ ಕಾರಣವಿದೆ. ಶ್ರೀಲಂಕಾದ ಮಟ್ಟಿಗೆ ಮಹಿಂದಾ ಅತ್ಯಂತ ಪ್ರಭಾವಿ ರಾಜಕಾರಣಿ. ಈ ಹಿಂದೆ 9 ವರ್ಷಗಳ ಅವಧಿಗೆ ಶ್ರೀಲಂಕಾದ ಅಧ್ಯಕ್ಷರಾಗಿದ್ದವರು. ತಮ್ಮ ನಿಕಟವರ್ತಿಗಳನ್ನು ರಾಜಕೀಯದ ಉಪ್ಪರಿಗೆಯ ಲ್ಲಿರಿಸಿ, ಆಗದ ವರನ್ನು ಕೆಳಕ್ಕೊತ್ತುವ ಕೆಲಸ ಮಾಡಿದ್ದರು. ಈ ಬಾರಿ ಗೋಟಬಯ ಅವರನ್ನು ‘ಶ್ರೀಲಂಕಾ ಪೊದುಜನ ಪೆರಮುಣ’ದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸುವ ಹಿಂದಿನ ದಿನ ‘ನನ್ನ ಸಹೋದರ ಈ ಚುನಾವಣೆಯಲ್ಲಿ ಗೆದ್ದರೆ ನಾನು ಪ್ರಧಾನಿಯಾಗುತ್ತೇನೆ’ ಎಂಬ ಸಂದೇಶ ರವಾನಿಸಿದ್ದರು.

ADVERTISEMENT

ಚುನಾವಣೆಯ ವೇಳೆ ಬಹಳಷ್ಟು ಸಂಗತಿಗಳು ಪ್ರಸ್ತಾಪ ಆದವು. 2009ರಲ್ಲಿ ಎಲ್‌ಟಿಟಿಇ ನಾಯಕ ಪ್ರಭಾಕರನ್‌ ಹತ್ಯೆಯಾದಾಗ ನಿಟ್ಟುಸಿರುಬಿಟ್ಟಿದ್ದ ಶ್ರೀಲಂಕಾ, 2019ರ ಏಪ್ರಿಲ್‌ನಲ್ಲಿ ಈಸ್ಟರ್ ಬಾಂಬ್ ದಾಳಿಗೆ ಬೆಚ್ಚಿತ್ತು. ಭಯೋತ್ಪಾದನೆಯ ವಿಷಯಸಹಜವಾಗಿ ಚರ್ಚೆಗೆ ಒಳಪಟ್ಟಿತು. ನಿಕಟಪೂರ್ವ ರಾಷ್ಟ್ರಪತಿ ಸಿರಿಸೇನ ಮತ್ತು ಪ್ರಧಾನಿ ವಿಕ್ರಮಸಿಂಘೆ ಅವರು ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಂಡರಾದರೂ ಅವು ಗೌಣವಾಗಿ, ಇಬ್ಬರ ನಡುವಿನ ವೈಮನಸ್ಯ ಮತ್ತು ಅದೇ ಕಾರಣಕ್ಕೆ ಉಂಟಾದ ಆಡಳಿತದ ನಿಷ್ಕ್ರಿಯತೆ ಎದ್ದು ಕಂಡಿತು. ಇದರ ಜೊತೆಗೆ ಮಹಿಂದಾರನ್ನು 2015ರಲ್ಲಿ ಭಾರತ ಸೇರಿದಂತೆ ಬಾಹ್ಯ ಶಕ್ತಿಗಳು ಸಂಚು ರೂಪಿಸಿ ಅಧಿಕಾರದಿಂದ ಕೆಳಗಿಳಿಸಿದವು ಎಂಬ ಸಂಗತಿಯನ್ನು ಪ್ರಸ್ತಾಪಿಸಲಾಯಿತು. ಸಿಂಹಳೀಯರ ಭದ್ರತೆ, ಶ್ರೀಲಂಕಾದ ಸಾರ್ವಭೌಮತ್ವದ ಜೊತೆ ಅಭಿವೃದ್ಧಿ ಎಂಬ ಮಂತ್ರದಂಡ ಹಿಡಿದು ಗೋಟಬಯ ಗೆಲುವಿನ ಹಾದಿ ಕ್ರಮಿಸಿದರು.

ಹಾಗೆ ನೋಡಿದರೆ ಗೋಟಬಯ ರಾಜಕೀಯ ಅನನುಭವಿ. ಸಂಸತ್ತಿನಲ್ಲಿ ಕಾರ್ಯನಿರ್ವಹಿಸದೇ
ಅಧ್ಯಕ್ಷಗಾದಿಗೇರಿದ ಶ್ರೀಲಂಕಾದ ಮೊದಲ ಅಧ್ಯಕ್ಷ. ಈ ಮೊದಲು ಅವರು ಶ್ರೀಲಂಕಾ ಸೇನೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದ್ದರು. 2005ರಲ್ಲಿ ಸಹೋದರ ಮಹಿಂದಾ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಶ್ರೀಲಂಕಾಕ್ಕೆ ಮರಳಿದರು. ಮಹಿಂದಾ ಅವಧಿಯಲ್ಲಿ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರು ಕೈಗೊಂಡ ಕ್ರಮಗಳು ಮತ್ತು ಉಗ್ರವಾದವನ್ನು ಮಟ್ಟಹಾಕಿದ ರೀತಿ ಜನಮೆಚ್ಚುಗೆಗೆ ಪಾತ್ರವಾಗಿದ್ದವು. ಆ ಜನಮೆಚ್ಚುಗೆ ಈ ಚುನಾವಣೆಯಲ್ಲಿ ಮತವಾಗಿ ಬದಲಾಯಿತು. ಜೊತೆಗೆ ಮತೀಯ ಮತ್ತು ಜನಾಂಗೀಯ ನೆಲೆಯಲ್ಲಿ ಮತಗಳ ಧ್ರುವೀಕರಣ ನಡೆದು ಅಲ್ಪಸಂಖ್ಯಾತ ಮುಸ್ಲಿಮರು ಮತ್ತು ತಮಿಳರು ಪ್ರೇಮದಾಸರ ಪರ ನಿಂತರೆ, ಬೌದ್ಧ ಸಿಂಹಳೀಯರು ಸಾರಾಸಗಟಾಗಿ ಗೋಟಬಯ ಪರ ನಿಂತರು. ಗೆಲುವು ಸುಲಭವಾಯಿತು.

ಹಾಗಾದರೆ ಗೋಟಬಯ ಅಧಿಕಾರಾವಧಿ ಹೇಗಿರಬಹುದು? ಇನ್ನು ಆರು ತಿಂಗಳಿನಲ್ಲಿ ನಡೆಯುವ ಸಂಸತ್ ಚುನಾವಣೆಯಲ್ಲಿ ಮಹಿಂದಾ ಬಹುಮತ ಪಡೆದು ಪೂರ್ಣಾವಧಿಗೆ ಪ್ರಧಾನಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಆಡಳಿತದ ಎರಡು ಅಗ್ರ ಹುದ್ದೆಗಳಲ್ಲಿ ರಾಜಪಕ್ಸೆ ಸಹೋದರರು ಇರುತ್ತಾರೆ. ಈ ಹಿಂದೆ ಮಹಿಂದಾ ಅಧ್ಯಕ್ಷರಾದಾಗ ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ತಮ್ಮವರನ್ನೇ ನಿಯೋಜಿಸಿದ್ದರು. ಅಂತರ್ಯುದ್ಧವನ್ನು ಕೊನೆಗೊಳಿಸುವಲ್ಲಿ, ಪ್ರಭಾಕರನ್ ಹತ್ಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮಾಜಿ ಸೇನಾ ಮುಖ್ಯಸ್ಥ ಶರತ್ ಫೊನ್ಸೇಕ ತನಗೆ ಪ್ರತಿಸ್ಪರ್ಧಿಯಾಗಬಹುದು ಎಂದು ಭಾವಿಸಿ ಅವರಿಗೆ ಕಿರುಕುಳ ನೀಡಿದ್ದರು. ಅನೇಕ ಸೇನಾ ಅಧಿಕಾರಿಗಳನ್ನು ಅನುಕೂಲಕ್ಕೆ ತಕ್ಕಂತೆ ವಜಾಗೊಳಿಸುವ, ಬಂಧಿಸುವ ಕೆಲಸವೂ ಆಗಿತ್ತು. ಹೆಚ್ಚಿದ ಭ್ರಷ್ಟಾಚಾರವು ಆಡಳಿತ ವಿರೋಧಿ ಅಲೆ ಎಬ್ಬಿಸಿತ್ತು.

ಜನಪ್ರಿಯ ಯೋಜನೆಗಳಿಗೆ ಹಣ ತರಲು ಅವರು ಚೀನಾದ ಹಿಂದೆ ಬಿದ್ದರು. ಇದನ್ನು ಲಾಭಕ್ಕೆ ಬಳಸಿಕೊಂಡ ಚೀನಾ, ಸಾಲದ ಕೂಪದಲ್ಲಿ ಶ್ರೀಲಂಕಾವನ್ನು ಕೆಡವಿತು. ಸಾಲದ ಮರುಪಾವತಿಯಲ್ಲಿ ಸೋತಾಗ, ಆಯಕಟ್ಟಿನ ಜಾಗಗಳನ್ನು ಪಡೆದುಕೊಂಡು ತನ್ನ ಸೇನಾ ನೆಲೆ ಸ್ಥಾಪಿಸುವ ಯೋಜನೆಗೆ ಚೀನಾ ಇಳಿಯಿತು. ದಕ್ಷಿಣ ಶ್ರೀಲಂಕಾದ ಹಂಬನ್‌ತೋಟ ಬಂದರನ್ನು ಅಭಿವೃದ್ಧಿಪಡಿಸಲು ಹಣ ಹೂಡಿಕೆ ಮಾಡಿ, ಹಣದ ಮರುಪಾವತಿ ಬದಲಿಗೆ ಬಂದರನ್ನು 99 ವರ್ಷಗಳ ಭೋಗ್ಯಕ್ಕೆ ಪಡೆದು ಕೊಳ್ಳುವ ಒಪ್ಪಂದ ಮಾಡಿಕೊಂಡಿತು. ಕೊಲಂಬೊ ಬಂದರಿನ ಮೇಲೂ ಚೀನಾ ಕಣ್ಣಿಟ್ಟಿತು. ಚೀನಾದ ಯುದ್ಧನೌಕೆಗಳು ಕೊಲಂಬೊ ಬಂದರನ್ನು ತಂಗುದಾಣ ಮಾಡಿಕೊಂಡವು. ಭಾರತ ಎಚ್ಚೆತ್ತುಕೊಂಡಿತು.

ಮಹಿಂದಾ ರಾಜಕೀಯ ವಿರೋಧಿ ಚಂದ್ರಿಕಾ ಕುಮಾರ ತುಂಗ, ರನಿಲ್ ವಿಕ್ರಮಸಿಂಘೆ ಮತ್ತು ಶರತ್ ಫೊನ್ಸೇಕ ಸೇರಿ ಮಹಿಂದಾ ವಿರುದ್ಧ ಕಾರ್ಯತಂತ್ರ ಹೆಣೆದರು. ಭಾರತದ ಗುಪ್ತಚರ ಸಂಸ್ಥೆಯು ಮಹಿಂದಾರನ್ನು ಪದ ಚ್ಯುತಗೊಳಿಸಲು ಸಹಾಯಕ್ಕೆ ನಿಂತಿತು. ಮೈತ್ರಿಪಾಲ ಸಿರಿಸೇನ 2015ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದರು. ಈ ಸಂಗತಿಯನ್ನೇ ರಾಜಪಕ್ಸೆ ಕುಟುಂಬವು ಶ್ರೀಲಂಕಾ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗಿದೆ ಎಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಿಕೊಂಡು ಜನರನ್ನು ಭಾವನಾತ್ಮಕ ವಾಗಿ ಒಲಿಸಿಕೊಂಡಿತು.

ಮುಖ್ಯಪ್ರಶ್ನೆಗೆ ಬರುವುದಾದರೆ, ಗೋಟಬಯ ಅವಧಿಯಲ್ಲಿ ಭಾರತ ಏನು ನಿರೀಕ್ಷಿಸಬಹುದು? ಮಹಿಂದಾ ಅವರ ಆಡಳಿತಶೈಲಿ ಪುನರಾವರ್ತನೆಯಾದೀತೇ? ಹೇಳುವುದು ಕಷ್ಟ. ಗೋಟಬಯ ದೃಢ ನಿಲುವು ತಳೆಯಬಲ್ಲ ಪ್ರಬಲ ನಾಯಕ ಎಂದು ಬಿಂಬಿತ ವಾಗಿದ್ದಾರೆ. ಪ್ರಾಂತೀಯವಾಗಿ ಭಾರತ ಮತ್ತು ಚೀನಾ ಆರ್ಥಿಕವಾಗಿ ಬಲಿಷ್ಠ ಮತ್ತು ಪ್ರತಿಸ್ಪರ್ಧಿ ರಾಷ್ಟ್ರಗಳು ಎಂದು ಅರಿತಿರುವ ಅವರು, ಎರಡೂ ದೇಶಗಳಿಂದ ಲಾಭ ಮಾಡಿಕೊಳ್ಳುವ ತಂತ್ರಗಾರಿಕೆ ಪ್ರದರ್ಶಿಸಬಹುದು. ಹಾಗಾಗಿ ವಿದೇಶಾಂಗ ನೀತಿಯ ದೃಷ್ಟಿಯಿಂದ ಭಾರತವು ಶ್ರೀಲಂಕಾವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ಹಿಂದಿನ ಅಧ್ಯಕ್ಷ ಸಿರಿಸೇನ ಅವರನ್ನು ಭಾರತಸ್ನೇಹಿ ರಾಜಕಾರಣಿ ಎಂದು ಕರೆಯಲಾಗಿತ್ತು. ಆದರೆ ಚೀನಾದ ಬಲೆಯಿಂದ ತಪ್ಪಿಸಿಕೊಂಡು ಭಾರತದ ಪರ ಯಾವುದೇ ನಿಖರ ನಿಲುವು ಪ್ರದರ್ಶಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ನೆರೆಯ ರಾಷ್ಟ್ರಗಳಲ್ಲಿ ಭಾರತದ ಪರ ಇರುವ ರಾಜಕಾರಣಿಯನ್ನು ಅಧಿಕಾರಕ್ಕೆ ತರುವ ನಿಟ್ಟಿ ನಲ್ಲಿ ಪ್ರಯತ್ನಿಸುವುದಕ್ಕಿಂತ, ಅಧಿಕಾರಕ್ಕೇರಿದ ಪಕ್ಷ, ರಾಜಕಾರಣಿಯನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭಾರತ ಕಾರ್ಯತಂತ್ರ ರೂಪಿಸಬೇಕು. ಈ ಕೆಲಸವನ್ನು ಚೀನಾ ಈಗಾಗಲೇ ಸಮರ್ಥವಾಗಿ ಮಾಡುತ್ತಿದೆ. ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಮುಗಿಯುವ ಮೊದಲೇ ಪ್ರಧಾನಿ ನರೇಂದ್ರ ಮೋದಿ, ಗೋಟಬಯ ಅವರನ್ನು ಅಭಿನಂದಿಸಿ, ಭಾರತಕ್ಕೆ ಆಹ್ವಾನಿಸಿದ್ದು ರಾಜಪಕ್ಸೆ ಕುಟುಂಬವನ್ನು, ತನ್ಮೂಲಕ ಶ್ರೀಲಂಕಾವನ್ನು ಮರಳಿ ವಿಶ್ವಾಸಕ್ಕೆ ತೆಗೆದುಕೊಳ್ಳಲು ಇಟ್ಟ ಮೊದಲ ಹೆಜ್ಜೆ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.