
ಪ್ರಾತಿನಿಧಿಕ ಚಿತ್ರ
ರಸಾಯನ ವಿಜ್ಞಾನ ಓದಿದ ಎಲ್ಲರಿಗೂ ಗೊತ್ತಿರುವ ಅನಿಲ– ಅಮೋನಿಯ. ಕೃಷಿ ಕ್ಷೇತ್ರಕ್ಕೂ, ಉತ್ಪಾದನಾ ಉದ್ಯಮ ವಲಯಕ್ಕೂ ಮತ್ತು ಅಮೋನಿಯಕ್ಕೂ ಅವಿನಾಭಾವ ಸಂಬಂಧ. ಕೃಷಿಯಲ್ಲಿ ಬಳಕೆಯಾಗುವ ರಸಗೊಬ್ಬರ ತಯಾರಿಕೆಗೆ ಅಮೋನಿಯ ಬೇಕೇಬೇಕು. ಉತ್ಪಾದನೆಗೊಳ್ಳುವ ಶೇ 80ರಷ್ಟು ಅಮೋನಿಯ ರಸಗೊಬ್ಬರ ತಯಾರಿಕೆಗೆ ಬಳಕೆಗೊಳ್ಳುತ್ತದೆ. ಯೂರಿಯ, ಡೈ ಅಮೋನಿಯಂ ಫಾಸ್ಫೇಟ್ (ಡಿಎಪಿ) ಮತ್ತಿತರ ಸಂಕೀರ್ಣ ಗೊಬ್ಬರಗಳ ಅವಿಭಾಜ್ಯ ಘಟಕಗಳಲ್ಲೊಂದಾಗಿರುವ ಅಮೋನಿಯ, ಈಗ ಶಾಖವರ್ಧಕ ಅನಿಲ ಹೊಮ್ಮುವಿಕೆ (ಉತ್ಸರ್ಜನೆ) ತಡೆಯಲು ‘ಹಸಿರು ಅಮೋನಿಯ’ದ ಅವತಾರ ಎತ್ತುತ್ತಿದೆ.
ಏನಿದು ಹಸಿರು ಅಮೋನಿಯ? ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ (ಇಂಡೈ) ಹೊಮ್ಮಿಸುವ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲಗಳನ್ನು ಉರಿಸಿ ಉತ್ಪಾದಿಸಲಾಗುವ ಅಮೋನಿಯವನ್ನು ಕಂದು ಅಥವಾ ಬೂದು ಅಮೋನಿಯ ಎಂದು ಕರೆಯಲಾಗುತ್ತದೆ. ಇದರ ಬದಲಿಗೆ ಹಸಿರು ಜಲಜನಕ ಬಳಸಿ ಉತ್ಪಾದಿಸುವ ಅಮೋನಿಯವನ್ನು ‘ಹಸಿರು ಅಮೋನಿಯ’ ಎನ್ನುತ್ತೇವೆ. ವಾತಾವರಣಕ್ಕೆ ಶಾಖವರ್ಧಕ ಅನಿಲಗಳನ್ನು ಹೊಮ್ಮಿಸದ ಇದನ್ನು ಭವಿಷ್ಯದ ಇಂಧನ ಕ್ರಾಂತಿಯ ವಾಹಕ ಎನ್ನಲಾಗುತ್ತಿದೆ.
ವಾಯುಗುಣ ವೈಪರೀತ್ಯ ಎದುರಿಸಲು ಮತ್ತು ನಿವ್ವಳ ಶೂನ್ಯ ಇಂಗಾಲ ಉತ್ಸರ್ಜನೆಯ ಗುರಿ ಸಾಧಿಸಲು ಇಡೀ ವಿಶ್ವವೇ ಒಂದಾಗಿ ಶ್ರಮಿಸುತ್ತಿರುವಾಗ– ಹಸಿರು ಅಮೋನಿಯ ಹೆಚ್ಚಿನ ಖ್ಯಾತಿ ಗಳಿಸುತ್ತಿದೆ. 2050ರ ವೇಳೆಗೆ ಶೂನ್ಯ ಇಂಗಾಲ ಉತ್ಸರ್ಜನೆಯ ಗುರಿ ಸಾಧಿಸಲು ನಮ್ಮ ವಾಹನಗಳಿಗೆ ತುಂಬುವ ಇಂಧನದಲ್ಲಿ ಶೇ 30ರಷ್ಟು ಹಸಿರು ಜಲಜನಕ ಮತ್ತು ಹಸಿರು ಅಮೋನಿಯಗಳು ಇರಬೇಕು. ಹಸಿರು ಜಲಜನಕ ಉತ್ಪಾದನೆಗಾಗಿ ಭಾರತದಲ್ಲಿ ಪ್ರಾರಂಭವಾಗಿರುವ ‘ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್’ 2030ರ ವೇಳೆಗೆ 50 ಲಕ್ಷ ಟನ್ ಹಸಿರು ಜಲಜನಕ ಮತ್ತು ಒಂದೂವರೆ ಕೋಟಿ ಟನ್ ಹಸಿರು ಅಮೋನಿಯ ಉತ್ಪಾದಿಸುವ ಗುರಿ ಹೊಂದಿದೆ.
ಭಾರತದಲ್ಲಿ ಬಳಕೆಯಾಗುತ್ತಿರುವ ಒಟ್ಟು ಅಮೋನಿಯದ ಶೇ 86ರಷ್ಟು ಆಮದಾಗುತ್ತದೆ. ಶೀತಲೀಕರಣ, ಗಣಿಗಾರಿಕೆ, ನೀರಿನ ಶುದ್ಧೀಕರಣ, ಪ್ಲಾಸ್ಟಿಕ್, ಬಣ್ಣದ ಉದ್ಯಮ, ಔಷಧ ತಯಾರಿಕೆ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಗೊಳ್ಳುವ ಅಮೋನಿಯವನ್ನು ಪರಿಸರಸ್ನೇಹಿ ಕ್ರಮಗಳ ಮೂಲಕ ನಾವೇ ಉತ್ಪಾದಿಸಿ ಬಳಸಿದರೆ, ಈ ಎಲ್ಲ ಕ್ಷೇತ್ರಗಳಲ್ಲಿ ಇಂಗಾಲ ಉತ್ಸರ್ಜನೆಯ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಬಹುದು.
ಅಮೋನಿಯ (ಕಂದು ಅಥವಾ ಬೂದು) ತಯಾರಿಸಲು ಬೇಕಾದ ಜಲಜನಕವನ್ನು ಸ್ಟೀಮ್ ಮೀಥೇನ್ ರಿಫಾರ್ಮಿಂಗ್ ವಿಧಾನ ಮತ್ತು ಹೇಬರ್–ಬಾಷ್ ಪ್ರಕ್ರಿಯೆ ಬಳಸಿ ತಯಾರಿಸಲಾಗುತ್ತದೆ. ನಂತರ ಗಾಳಿಯಿಂದ ತೆಗೆದ ಸಾರಜನಕ ಮತ್ತು ಮೀಥೇನ್‌ನಿಂದ ಪಡೆಯಲಾದ ಜಲಜನಕಗಳನ್ನು ಹೆಚ್ಚಿನ ಒತ್ತಡ ಮತ್ತು ತಾಪಮಾನದಲ್ಲಿ ಸಂಯೋಜಿಸಿ, ಅಮೋನಿಯ ತಯಾರಿಸಲಾಗುತ್ತದೆ. ಒಂದು ಟನ್ ಅಮೋನಿಯ ಉತ್ಪಾದನೆಗೆ 178 ಕಿಲೋಗ್ರಾಂ ಜಲಜನಕ ಬೇಕು. ಒಂದು ಟನ್ ಅಮೋನಿಯ ಉತ್ಪಾದನೆಯಾದಾಗ ಸುಮಾರು ಎರಡು ಟನ್ ಇಂಡೈ ಹೊಮ್ಮುತ್ತದೆ. ಸಾಂಪ್ರದಾಯಿಕ ಅಮೋನಿಯ ಉತ್ಪಾದನಾ ವಿಧಾನಗಳಿಂದ ಈಗ ಹೊಮ್ಮತ್ತಿರುವ ಶಾಖವರ್ಧಕ ಅನಿಲಗಳ ಪ್ರಮಾಣ ಶೇ 1.8ರಷ್ಟು ಎಂಬ ಮಾಹಿತಿ ಇದೆ.
ಹಸಿರು ಅಮೋನಿಯ ಉತ್ಪಾದನೆಯಲ್ಲೂ ಹೇಬರ್–ಬಾಷ್ ಪ್ರಕ್ರಿಯೆಯನ್ನು ಬಳಸಲಾಗುತ್ತದೆ. ಆದರೆ, ಇಲ್ಲಿ ಅಮೋನಿಯ ಸಂಶ್ಲೇಷಣೆಗೆ ಬೇಕಾಗುವ ಪ್ರಮುಖ ಕಚ್ಚಾ ವಸ್ತುವಾದ ಜಲಜನಕವನ್ನು ಪಳೆಯುಳಿಕೆ ಇಂಧನಗಳಿಂದ ಪಡೆಯುವ ಬದಲು, ಹಸಿರು ಹೈಡ್ರೋಜನ್‌ನಿಂದ ಪಡೆಯಲಾಗುತ್ತದೆ.
ಹಸಿರು ಜಲಜನಕವನ್ನು ಸೌರ ಮತ್ತು ಪವನಶಕ್ತಿ ಬಳಸಿಕೊಂಡು ನೀರಿನ ವಿದ್ಯುದ್ವಿಭಜನೆಯ ಮೂಲಕ ತಯಾರಿಸಲಾಗುತ್ತದೆ. ಹೀಗೆ ಉತ್ಪಾದಿಸಿದ ಹಸಿರು ಹೈಡ್ರೋಜನ್ ಅನ್ನು ಗಾಳಿಯಿಂದ ಬೇರ್ಪಡಿಸಿದ ನೈಟ್ರೋಜನ್‌ನೊಂದಿಗೆ ನವೀಕರಿಸಬಹುದಾದ ಶಕ್ತಿಯನ್ನೇ ಬಳಸಿಕೊಂಡು ಸಂಯೋಜಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಶಾಖವರ್ಧಕ ಅನಿಲಗಳು ಹೊಮ್ಮುವುದಿಲ್ಲ. ಆದ್ದರಿಂದ ಹಸಿರು ಅಮೋನಿಯವು ಸುಸ್ಥಿರ ಮತ್ತು ಇಂಗಾಲಮುಕ್ತ ಪರ್ಯಾಯವಾಗಿದ್ದು, ಕೃಷಿಯಲ್ಲಿ ಮಾತ್ರವಲ್ಲದೆ, ಇಂಧನ ಮತ್ತು ಸಾಗರ ಸಾಗಣೆ ಕ್ಷೇತ್ರಗಳಲ್ಲೂ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯ ಪಡೆದಿದೆ.
ವಾರ್ಷಿಕ 17.5 ಕೋಟಿ ಟನ್ ಬೂದು ಅಮೋನಿಯ ಉತ್ಪಾದನೆಯಾಗುತ್ತಿದೆ. ಅದಕ್ಕಾಗಿ ಪಳೆಯುಳಿಕೆ ಇಂಧನ ನೈಸರ್ಗಿಕ ಅನಿಲವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಸ್ಟೀಮ್ ಮೀಥೇನ್ ರಿಫಾರ್ಮಿಂಗ್ ಮತ್ತು ಹೇಬರ್–ಬಾಷ್ ಪ್ರಕ್ರಿಯೆಗಳ ಮೂಲಕ ಉತ್ಪಾದನೆ ಆಗುತ್ತದೆಯಾದ್ದರಿಂದ ಅಮೋನಿಯದ ಎರಡು ಪಟ್ಟು ಇಂಡೈ ಹೊಮ್ಮುತ್ತಿದೆ. ಇದು ಸುಸ್ಥಿರ ಕ್ರಮವಲ್ಲ.
ಹಸಿರು ಅಮೋನಿಯ ಉತ್ಪಾದನೆಯ ಇಡೀ ಪ್ರಕ್ರಿಯೆಯು ಹಸಿರು ಶಕ್ತಿಯ ಬಳಕೆಯಿಂದ ನಡೆಯುತ್ತದೆ. ಹೊಮ್ಮುವ ಉಪ ಉತ್ಪನ್ನಗಳು ನೀರು ಮತ್ತು ಆಮ್ಲಜನಕ ಆಗಿರುವುದರಿಂದ, ವಾತಾವರಣಕ್ಕೆ ಇಂಡೈ ಹೊಮ್ಮವುದಿಲ್ಲ; ಓಝೋನ್ ಪದರಕ್ಕೆ ಹಾನಿಯಿಲ್ಲ. ಹಸಿರು ಅಮೋನಿಯದಿಂದ ವಾರ್ಷಿಕ 50 ಕೋಟಿ ಟನ್ ಇಂಡೈ ಹೊಮ್ಮುವುದನ್ನು ತಡೆಯಬಹುದು. ಹಾಗಾಗಿ, ಪರಿಸರಸ್ನೇಹಿ ಹಸಿರು ಅಮೋನಿಯವು ಶುದ್ಧ ಇಂಧನ ವಾಹಕವಾಗುವ ಸಾಧ್ಯತೆ ಒಳಗೊಂಡಿದೆ.
ಒಂದು ಕೆ.ಜಿ ಹಸಿರು ಜಲಜನಕದ ಬೆಲೆ ₹260ರಿಂದ ₹310. ಆದರೆ, ಒಂದು ಕೆ.ಜಿ ಹಸಿರು ಅಮೋನಿಯದ ಬೆಲೆ ₹55 ಮಾತ್ರ. ಇದು ದೇಶದ ಆರ್ಥಿಕತೆ ಮತ್ತು ರಸಗೊಬ್ಬರ ಉದ್ಯಮಕ್ಕೆ ದೊಡ್ಡ ರೀತಿಯಲ್ಲಿ ನೆರವಾಗಲಿದೆ. ಆದರೆ, ಅಮೋನಿಯ ಉತ್ಪಾದನೆಗೆ ಬೇಕಾದ ಹಸಿರು ಜಲಜನಕವನ್ನು ಶೇಖರಿಸುವುದು ಮತ್ತು ಸಾಗಿಸುವುದು ಬಹಳ ಕಷ್ಟ ಮತ್ತು ದುಬಾರಿಯ ಕೆಲಸ. ದ್ರವೀಕೃತ ಜಲಜನಕದ ಶೇಖರಣೆಗೆ ತಾಪಮಾನ –250°ಸೆ. ಇರಬೇಕು. ಅನಿಲ ರೂಪದ ಜಲಜನಕವನ್ನು ಅತೀ ಒತ್ತಡದಲ್ಲಿ ಶೇಖರಿಸಬೇಕು. ಆದರೆ, ಅಮೋನಿಯವನ್ನು –33°ಸೆ. ತಾಪಮಾನದಲ್ಲಿ ಮತ್ತು ಸಾಧಾರಣ ಒತ್ತಡದಲ್ಲಿ ದ್ರವೀಕರಿಸಿ ಸುಲಭವಾಗಿ ಶೇಖರಿಸಬಹುದು, ಸಾಗಣೆಯೂ ಸುಲಭ.
ಅಮೋನಿಯ ಉರಿಸಿ ನೌಕೆಗಳನ್ನು ಓಡಿಸಬಹುದು. ಅಮೋನಿಯ ದಹಿಸಿದಾಗ ಸಾರಜನಕ ಮತ್ತು ನೀರಿನ ಆವಿ ಬಿಡುಗಡೆ ಆಗುವುದರಿಂದ ವಾಯುಗುಣ ಹದಗೆಡುವುದಿಲ್ಲ. ಹಡಗುಗಳಲ್ಲಿ ಹಸಿರು ಅಮೋನಿಯನ್ನು ಇಂಧನವನ್ನಾಗಿ ಬಳಸಿದರೆ, ಸಾಗರೋತ್ತರ ಸಾಗಣೆ ಕ್ಷೇತ್ರದ ಇಂಗಾಲವನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಬಹುದು.
ಅಮೋನಿಯದ ಶೇಖರಣೆ ಮತ್ತು ದಹನಕಾರ್ಯ ಸೂಕ್ತ ನಿಯಂತ್ರಣದಲ್ಲಿ ನಡೆಯದೆ ಹೋದರೆ ಅಪಾಯ ಖಚಿತ. ಕಳೆದ ಫೆಬ್ರುವರಿಯಲ್ಲಿ ತಮಿಳುನಾಡಿನ ಎನ್ನೂರಿನಲ್ಲಿರುವ ರಸಗೊಬ್ಬರ ಕಾರ್ಖಾನೆಯಿಂದ ಹದಿನೈದು ನಿಮಿಷಗಳಲ್ಲಿ 67 ಟನ್ ಅಮೋನಿಯ ಸೋರಿಕೆಯಾಗಿತ್ತು. ಇದೇ ಜುಲೈನಲ್ಲಿ ಮುಂಬೈನ ಹಾಲಿನ ಡೇರಿಯಿಂದ ಮೂರು ಸಾವಿರ ಕಿಲೋ ತೂಕದ ಅಮೋನಿಯ ಸೋರಿಕೆಗೊಂಡಿತ್ತು. 1992ರಲ್ಲಿ ಸೆನೆಗಲ್‌ನ ಡಕರ್ ನಗರದ ಎಣ್ಣೆಬೀಜ ಸಂಸ್ಕರಣಾ ಘಟಕದಲ್ಲಿ ಟ್ಯಾಂಕ್ ಸ್ಫೋಟಗೊಂಡು, 22 ಟನ್ ಅಮೋನಿಯ ಸೋರಿಕೆಯಾಗಿತ್ತು, 129 ಜನ ಸಾವಿಗೀಡಾಗಿದ್ದರು. ಅಮೋನಿಯ ವಿಷಕಾರಿ ಅನಿಲವಾಗಿದ್ದು, ಸುರಕ್ಷತೆಗೆ ಒತ್ತು ನೀಡಲೇಬೇಕು. ಅಮೋನಿಯ ದಹಿಸಿದಾಗ ಸಾರಜನಕದ ಆಕ್ಸೈಡ್‌ಗಳು ಬಿಡುಗಡೆಗೊಂಡು, ಆಮ್ಲಮಳೆ ತರಬಹುದು. ಪೂರ್ಣವಾಗಿ ದಹಿಸದ ಅಮೋನಿಯ ತೇಲುಕಣ ಸೃಷ್ಟಿಸಿ ಗಾಳಿಯನ್ನು ಕಲುಷಿತಗೊಳಿಸುತ್ತದೆ. ದಹಿಸಿದಾಗ ಹೊಮ್ಮುವ ಅಲ್ಪಪ್ರಮಾಣದ ನೈಟ್ರಸ್ ಆಕ್ಸೈಡ್ ವಾತಾವರಣದ ಬಿಸಿ ಏರಿಸುತ್ತದೆ. ಇದನ್ನು ತಡೆಯುವ ತಂತ್ರಜ್ಞಾನ ರೂಪುಗೊಳ್ಳಬೇಕು. ಉತ್ಪಾದನೆ, ಸಂಗ್ರಹ ಮತ್ತು ಸುರಕ್ಷಿತ ಸಾಗಣೆಗಾಗಿ ಹೊಸ ಮೂಲಸೌಕರ್ಯಗಳು ನಿರ್ಮಾಣಗೊಳ್ಳಬೇಕು.
ನಮ್ಮಲ್ಲಿ ಉಷ್ಣ ಸ್ಥಾವರಗಳಲ್ಲಿ ಸುಡುವ ಕಲ್ಲಿದ್ದಲಿನಿಂದ ಅಪಾರ ಪ್ರಮಾಣದ ಇಂಡೈ ಹೊಮ್ಮುತ್ತದೆ. ಈ ಸ್ಥಾವರಗಳಲ್ಲಿ ಹಸಿರು ಅಮೋನಿಯವನ್ನು ಕಲ್ಲಿದ್ದಲಿನೊಂದಿಗೆ ಬೆರೆಸಿ ಸುಡುವ ಮೂಲಕ ಇಂಗಾಲದ ಉತ್ಸರ್ಜನೆಯನ್ನು ಕಡಿತಗೊಳಿಸಬಹುದು ವಿಶೇಷ ಅಮೋನಿಯಚಾಲಿತ ಟರ್ಬೈನ್‌ಗಳನ್ನು ಬಳಸಿ ವಿದ್ಯುತ್ ಉತ್ಪಾದಿಸಬಹುದು. ಹಾಗಾದಲ್ಲಿ ಭಾರತವು ಶುದ್ಧ ವಿದ್ಯುತ್ ಉತ್ಪಾದನೆಯ ಜಾಗತಿಕ ಹಬ್ ಆಗಬಲ್ಲದು.
ಭಾರತದ ಪಾಲಿಗೆ, ಹಸಿರು ಅಮೋನಿಯ ಎರಡು ಮುಖ್ಯ ಪ್ರಯೋಜನಗಳನ್ನು ತರಲಿದೆ. ರಸಗೊಬ್ಬರ ಉತ್ಪಾದನೆಗಾಗಿ ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನ ಮತ್ತು ಕಚ್ಚಾವಸ್ತುಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಹಸಿರು ಅಮೋನಿಯವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಿದರೆ ಹೆಚ್ಚಿನ ವಿದೇಶಿ ವಿನಿಮಯ ಗಳಿಸುವ ಅವಕಾಶವಿದೆ. ಹೊರದೇಶಗಳಿಗೆ ಸಾಗಣೆಯಾಗುವ ಹಸಿರು ಅಮೋನಿಯವನ್ನು ಬಂದರುಗಳ ಬಳಿಯೇ ಬಂಕರ್‌ಗಳಲ್ಲಿ ಸಂಗ್ರಹಿಸಿಟ್ಟರೆ, ಜನವಸತಿ ಪ್ರದೇಶಗಳ ಬಳಿ ಸಾಗಣೆ ವಾಹನಗಳ ಒತ್ತಡ ತಪ್ಪಿಸಬಹುದು.
ಹಸಿರು ಅಮೋನಿಯವು ಭವಿಷ್ಯದ ಇಂಧನ ಪರಿಹಾರವೆಂಬಂತೆ ಬಿಂಬಿತವಾಗಿದ್ದರೂ, ಅದರ ಉತ್ಪಾದನೆ ಮತ್ತು ವ್ಯಾಪಕ ಬಳಕೆ ಸುಲಭವಲ್ಲ. ಅಮೋನಿಯ ಉತ್ಪಾದಿಸಲು ಬೇಕಾಗುವ ಹಸಿರು ಜಲಜನಕದ ಉತ್ಪಾದನಾ ವೆಚ್ಚ ಜಾಸ್ತಿ ಇದೆ. ಇದು ತಗ್ಗಬೇಕು.
ಹಸಿರು ಅಮೋನಿಯವು ಇಂಧನ, ಜಲಜನಕ ಸಾಗಣೆ ಮತ್ತು ಕೈಗಾರಿಕಾ ಇಂಗಾಲ ನಿರ್ಮೂಲನೆಗೆ ದೊಡ್ಡ ಅವಕಾಶವಾಗಿ ಕಾಣಿಸುತ್ತಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಜಾಗತಿಕ ಶುದ್ಧ ಇಂಧನ ಮಾರುಕಟ್ಟೆಯಲ್ಲಿ ನಮ್ಮ ನಾಯಕತ್ವವನ್ನು ಸ್ಥಾಪಿಸಲು, ನಮಗೆ ಒದಗಿ ಬಂದಿರುವ ಸುವರ್ಣಾವಕಾಶದಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.