ADVERTISEMENT

ಅಮೆರಿಕ- ಚೀನಾ ಉದ್ದೇಶವೇನು?

ಹಾಂಗ್‌ಕಾಂಗ್‌ಗೆ ಸಂಬಂಧಿಸಿದ ಶಾಸನವು ಈ ಎರಡು ರಾಷ್ಟ್ರಗಳ ನಡುವೆ ಸಂಘರ್ಷ ಸೃಷ್ಟಿಸಿದೆ

ಕೀತ್ ಬ್ರಾಡ್ಶರ್
Published 1 ಡಿಸೆಂಬರ್ 2019, 18:30 IST
Last Updated 1 ಡಿಸೆಂಬರ್ 2019, 18:30 IST
   

ಹಾಂಗ್‌ಕಾಂಗ್‌ನಲ್ಲಿ ನಡೆದಿರುವ ಪ್ರತಿಭಟನೆಗೆ ಪರೋಕ್ಷವಾಗಿ ಬೆಂಬಲ ನೀಡುವ ಶಾಸನವೊಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸಹಿ ಹಾಕಿದ ನಂತರ ಚೀನಾ ತನ್ನ ಆಕ್ರೋಶ ಹೊರಹಾಕಿದೆ. ತನ್ನ ಆಂತರಿಕ ವಿಚಾರಗಳಲ್ಲಿ ಈ ಶಾಸನ ಅಕ್ರಮವಾಗಿ ಹಸ್ತಕ್ಷೇಪ ನಡೆಸುವಂತಿದೆ ಎಂದು ಹೇಳಿದೆ.

ಈ ಶಾಸನಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಚೀನಾ ಹೇಳಿದೆ. ಈ ಬೆದರಿಕೆಯು ಗಂಭೀರವಾಗಿಯೂ ಟೊಳ್ಳಾಗಿಯೂ ಕಾಣಿಸುತ್ತಿದೆ. ಏಕೆಂದರೆ, ಅಮೆರಿಕದ ವಿರುದ್ಧ ಅರ್ಥಪೂರ್ಣವಾದ ಕ್ರಮ ಕೈಗೊಳ್ಳಲು ಚೀನಾಕ್ಕೆ ಹೆಚ್ಚಿನ ಆಯ್ಕೆಗಳು ಇಲ್ಲ. ಚೀನಾದ ಆದ್ಯತೆಗಳು ಬೇರೆ ಇವೆ. ಅಮೆರಿಕದ ಜೊತೆಗಿನ ವಾಣಿಜ್ಯ ಸಮರ ಕೊನೆಗಾಣಿಸುವುದು ಅವುಗಳಲ್ಲೊಂದು. ವಾಣಿಜ್ಯ ಸಮರ ಕೊನೆಗಾಣಿಸುವ ಮಾತುಗಳನ್ನು ಎರಡೂ ದೇಶಗಳು ಆಡುತ್ತಿದ್ದರೂ, ಮಧ್ಯಂತರ ಒಪ್ಪಂದ ಕೂಡ ಈವರೆಗೆ ಸಾಧ್ಯವಾಗಿಲ್ಲ.

‘ಈ ವಿಚಾರದಲ್ಲಿ ಚೀನಾ ಗದ್ದಲ ಎಬ್ಬಿಸಿದರೂ, ಅದು ಹೆಚ್ಚೇನೂ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಚೀನಾಕ್ಕೆ ಈಗ ವಾಣಿಜ್ಯ ಒಪ್ಪಂದ ಬಹಳ ಮಹತ್ವದ್ದು. ಅದಕ್ಕೆ ಧಕ್ಕೆಯಾಗಲು ಚೀನಾ ಬಿಡುವುದಿಲ್ಲ’ ಎನ್ನುತ್ತಾರೆ ಲಂಡನ್ನಿನ ಸಂಶೋಧನಾ ಕೇಂದ್ರವೊಂದರ ನಿರ್ದೇಶಕ ಸ್ಟೀವ್ ಸ್ಯಾಂಗ್. ಟ್ರಂಪ್ ಅವರು ಅಂಕಿತ ಹಾಕಿದ ಎರಡು ಮಸೂದೆಗಳು ಹಾಂಗ್‌ಕಾಂಗ್‌ ವಿಚಾರದಲ್ಲಿ ಚೀನಾಕ್ಕೆ ನೀಡಿರುವ ಎದಿರೇಟು ಎಂಬಂತೆ ಮೇಲ್ನೋಟಕ್ಕೆ ಕಾಣುತ್ತವೆ. ಹಾಂಗ್‌ಕಾಂಗ್‌ ತನ್ನದೇ ಆದ ಕಾನೂನುಗಳನ್ನು ಹೊಂದಿದ್ದರೂ, ಈಚೆಗೆ ಅದು ಹೆಚ್ಚಿನ ಪ್ರಮಾಣದಲ್ಲಿ ಚೀನಾದ ನಿಯಂತ್ರಣಕ್ಕೆ ಒಳಪಡುತ್ತಿದೆ. ಐದು ತಿಂಗಳುಗಳಿಂದ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದ‌ಕ್ಕೆ ಇದೊಂದು ಕಾರಣ.

ADVERTISEMENT

ಹಾಂಗ್‌ಕಾಂಗ್‌ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣರಾಗುವ ಚೀನಾ, ಹಾಂಗ್‌ಕಾಂಗ್‌ನ ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸಲು ಮೊದಲ ಮಸೂದೆ ಅವಕಾಶ ಕಲ್ಪಿಸುತ್ತದೆ. ಅಮೆರಿಕ ತಯಾರಿಸಿದ ಅಶ್ರುವಾಯು, ರಬ್ಬರ್ ಗುಂಡು, ಗಲಭೆಕೋರರ ನಿಯಂತ್ರಣಕ್ಕೆ ಬಳಸುವ ಇತರ ವಸ್ತುಗಳನ್ನು ಹಾಂಗ್‌ಕಾಂಗ್‌ನ ಅಧಿಕಾರಿಗಳಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸುವುದಕ್ಕೆ ಎರಡನೆಯ ಮಸೂದೆ ಅವಕಾಶ ಕಲ್ಪಿಸುತ್ತದೆ.

ಚೀನಾ ಎದಿರೇಟು ನೀಡಬಹುದು ಎಂದು ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶ್ವಾಂಗ್ ಹೇಳಿದ್ದಾರೆ. ‘ಅಮೆರಿಕದ ಉದ್ದೇಶ ಸಾಕಾರಗೊಳ್ಳುವುದಿಲ್ಲ. ಈ ರೀತಿಯ ಶಾಸನ ರೂಪಿಸಿರುವುದು ಅಮೆರಿಕದ ಯಾಜಮಾನ್ಯ ಧೋರಣೆ ಬಗ್ಗೆ ಚೀನಾದ ಜನರಿಗೆ ಇನ್ನಷ್ಟು ಗೊತ್ತಾಗುವಂತೆ ಮಾಡುತ್ತದೆ’ ಎಂದು ಶ್ವಾಂಗ್ ಹೇಳಿದ್ದಾರೆ. ಅಮೆರಿಕ ಈ ಮಸೂದೆಯನ್ನು ಅನುಷ್ಠಾನಕ್ಕೆ ತರಬಾರದು, ಚೀನಾ ಜೊತೆಗಿನ ಸಂಬಂಧಕ್ಕೆ ಧಕ್ಕೆ ಉಂಟುಮಾಡಬಾರದು ಎಂದೂ ಅವರು ಹೇಳಿದ್ದಾರೆ.

ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ನೇರವಾಗಿ ತೊಡಗಿಸಿಕೊಂಡಿರುವುದು ಚೀನಾದ ವಾಣಿಜ್ಯ ಸಚಿವಾಲಯ. ಅದು ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಸೂದೆಯ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಹಾಂಗ್‌ಕಾಂಗ್‌ಗೆ ಸಂಬಂಧಿಸಿದ ಮಸೂದೆಯು ವಾಣಿಜ್ಯ ಒಪ್ಪಂದ ಮಾತುಕತೆಯ ಹಳಿ ತಪ್ಪಿಸಬಾರದು ಎನ್ನುವ ಸಂದೇಶವನ್ನು ಟ್ರಂಪ್ ಆಡಳಿತ ಕೂಡ ನೀಡಿದೆ.

ಹಾಂಗ್‌ಕಾಂಗ್‌ನಲ್ಲಿನ ಪ್ರತಿಭಟನೆಯು ತನ್ನ ಶಕ್ತಿ ಮತ್ತು ಅಧಿಕಾರಕ್ಕೆ ಎದುರಾಗಿರುವ ಪರೀಕ್ಷೆ ಎಂದು ಭಾವಿಸಿರುವ ಚೀನಾ, ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಮೊದಲ ಆದ್ಯತೆ ನೀಡಿದೆ. ವಾಣಿಜ್ಯ ಸಮರವು ಮಂದ ಆರ್ಥಿಕತೆಗೆ ಕಾರಣವಾಗಿದೆ. ಜೀವನಮಟ್ಟ ಸುಧಾರಿಸುವ ವಚನದೊಂದಿಗೆ ಪ್ರಶ್ನಾತೀತವಾಗಿ ಆಡಳಿತ ನಡೆಸುವ ಚೀನಾದ ಕಮ್ಯುನಿಸ್ಟ್‌ ಪಕ್ಷಕ್ಕೆ, ಆರ್ಥಿಕ ಕುಸಿತವು ನೇರ ಸವಾಲನ್ನು ಒಡ್ಡಬಹುದು. ಸಾಂಕ್ರಾಮಿಕವೊಂದಕ್ಕೆ ತುತ್ತಾಗಿ ಚೀನಾದ ಅರ್ಧದಷ್ಟು ಪ್ರಮಾಣದ ಹಂದಿಗಳು ಮೃತಪಟ್ಟಿರುವ ಕಾರಣದಿಂದಾಗಿ, ಅದು ಈಗ ಮಾಂಸವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕಿದೆ. ಚೀನಾ ಹೊರತುಪಡಿಸಿದರೆ ವಿಶ್ವದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಹಂದಿಮಾಂಸ ರಫ್ತು ಮಾಡುವ ದೇಶ ಅಮೆರಿಕ. ದನದ ಮಾಂಸದ ಅತಿದೊಡ್ಡ ಉತ್ಪಾದಕ ಕೂಡ ಅಮೆರಿಕವೇ.

ಅಮೆರಿಕದ ಕಡೆಯಿಂದ ಈಚೆಗೆ ಎದುರಾದ ಪ್ರಚೋದನೆಗಳಿಗೆ ಚೀನಾ ಪ್ರತಿಕ್ರಿಯೆ ನೀಡಿಲ್ಲ. ಉದಾಹರಣೆಗೆ, ಅಮೆರಿಕದ ನಿರ್ದೇಶನದ ಅನುಸಾರ ಕೆನಡಾ ಅಧಿಕಾರಿಗಳು ಚೀನಾದ ಹುವಾವೆ ಕಂಪನಿಯ ಹಿರಿಯ ಅಧಿಕಾರಿಯೊಬ್ಬರನ್ನು ಬಂಧಿಸಿದಾಗ ಚೀನಾ ಮಾತುಕತೆ ಕೈಬಿಡಲಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ವಿಚಾರವಾಗಿ ಅಮೆರಿಕವು ಚೀನಾದ ಎರಡು ಡಜನ್ನಿಗೂ ಹೆಚ್ಚಿನ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದಾಗಲೂ ಮಾತುಕತೆಗಳು ಮುಂದುವರಿದಿದ್ದವು.

ಹಾಂಗ್‌ಕಾಂಗ್‌ನ ನಿವಾಸಿಗಳನ್ನು ಚೀನಾದ ಅಪಾರದರ್ಶಕ ಹಾಗೂ ಕಠೋರ ನ್ಯಾಯಾಂಗ ವ್ಯವಸ್ಥೆಯ ಅಡಿ ಎಳೆದು ತರಲು ಅವಕಾಶ ಕಲ್ಪಿಸುತ್ತಿದ್ದ ಮಸೂದೆಯನ್ನು ವಿರೋಧಿಸಿ ಹಾಂಗ್‌ಕಾಂಗ್‌ನಲ್ಲಿ ಜೂನ್‌ನಲ್ಲಿ ಪ್ರತಿಭಟನೆಗಳು ಆರಂಭವಾದವು. ಆ ಮಸೂದೆಯನ್ನು ಹಿಂಪಡೆಯಲಾಗಿದ್ದರೂ, ಪ್ರತಿಭಟನಕಾರರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಈಗ ವಿಸ್ತಾರಗೊಳಿಸಿದ್ದಾರೆ. ಈ ಪ್ರತಿಭಟನೆಗಳ ಪರಿಣಾಮವಾಗಿ, ಈಚೆಗೆ ನಡೆದ ಚುನಾವಣೆಯಲ್ಲಿ ಚೀನಾ ಹಿನ್ನಡೆ ಅನುಭವಿಸಬೇಕಾಯಿತು. ಅಲ್ಲಿನ ಸ್ಥಳೀಯ ಚುನಾವಣೆಗಳಲ್ಲಿ ಸರ್ಕಾರವಿರೋಧಿ ಅಭ್ಯರ್ಥಿಗಳನ್ನು ಜನ ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸಿದ್ದಾರೆ. ಹಾಂಗ್‌ಕಾಂಗ್‌ನಲ್ಲಿನ, ಚೀನಾ ಪರ ಒಲವು ಇರುವ ನಾಯಕರ ಬಗ್ಗೆ ಜನರಿಗೆ ಇರುವ ಅತೃಪ್ತಿಯನ್ನು ಇದು ತೋರಿಸಿದೆ. ಹಾಗೆಯೇ, ಹಾಂಗ್‌ಕಾಂಗ್‌ನ ಬಹುತೇಕರು ಪ್ರತಿಭಟನೆಗಳನ್ನು ವಿರೋಧಿಸುತ್ತಿದ್ದಾರೆ, ಆದರೆ ಅವರು ಅದನ್ನು ಹೇಳಲು ಹಿಂಜರಿಯುತ್ತಿದ್ದಾರೆ ಎಂದು ಕಮ್ಯುನಿಸ್ಟ್‌ ಪಕ್ಷ ಕಟ್ಟಿದ ಸಂಕಥನವನ್ನೂ ಟೊಳ್ಳಾಗಿಸಿದೆ.

ಮತದಾನದ ನಂತರ ಬಿಗುವಿನ ಪರಿಸ್ಥಿತಿ ತುಸು ತಗ್ಗಿದೆ, ಹಿಂಸಾಚಾರ ಕೂಡ ಕಡಿಮೆಯಾಗಿದೆ. ಹಾಂಗ್‌ಕಾಂಗ್‌ನ ಅರ್ಥವ್ಯವಸ್ಥೆ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಹಿಂಜರಿತ ಕಂಡಿದ್ದರೂ, ಚುನಾವಣೆಗೂ ಮುನ್ನವೇ ಅಲ್ಲಿನ ಷೇರು ಮಾರುಕಟ್ಟೆ ಸೂಚ್ಯಂಕ ಏರುಗತಿಗೆ ತಿರುಗಿಕೊಂಡಿತ್ತು. ಚೀನಾದ ಇ–ಕಾಮರ್ಸ್‌ ದೈತ್ಯ ಅಲಿಬಾಬಾ ಕಂಪನಿಯು ಹಾಂಗ್‌ಕಾಂಗ್‌ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಮಂಗಳವಾರ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಬಂಡವಾಳ ಸಂಗ್ರಹಿಸಿತು. ಚೀನಾದ ಕಂಪನಿಗಳ ಪಾಲಿಗೆ ಹಾಂಗ್‌
ಕಾಂಗ್‌ ಈಗಲೂ ಮಹತ್ವದ ಆರ್ಥಿಕ ಕೇಂದ್ರ ಎಂಬುದನ್ನು ಇದು ತೋರಿಸುತ್ತದೆ.

ಹಾಂಗ್‌ಕಾಂಗ್‌ ಚುನಾವಣೆಯಲ್ಲಿ ಗೆದ್ದಿರುವ ಪ್ರಜಾತಂತ್ರ ಪರ ಕೌನ್ಸಿಲರ್‌ಗಳು, ಸ್ಥಳೀಯ ಸಮಸ್ಯೆಗಳತ್ತ ಗಮನ ನೀಡಬೇಕಿದೆ. ಕೌನ್ಸಿಲರ್‌ಗಳಲ್ಲಿ ಹೆಚ್ಚಿನವರು 20ರ ಹರೆಯದಲ್ಲಿ ಇದ್ದಾರೆ. ಅವರು ಚುನಾವಣಾ ಅಭಿಯಾನ ನಡೆಸಿದ್ದು ಪ್ರಜಾತಂತ್ರದ ವಿಚಾರ ಮುಂದಿಟ್ಟುಕೊಂಡು. ಹಾಂಗ್‌ಕಾಂಗ್‌ನ ಮೂಲಭೂತ ಸಮಸ್ಯೆಗಳು ತಕ್ಷಣಕ್ಕೆ ಬಗೆಹರಿಯುವ ಸಾಧ್ಯತೆ ಇಲ್ಲ. ಅವು ಮುಂದಿನ ವರ್ಷ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ನಂತರವೂ ಮುಂದುವರಿಯಬಹುದು. ಚೀನಾವು ಈಗ ಸುಮ್ಮನೆ ಇದ್ದರೂ, ಅಮೆರಿಕದ ಶಾಸನದಿಂದ ಎದುರಾಗಿರುವ ಸವಾಲನ್ನು ಅದು ಮರೆಯುವ ಸಾಧ್ಯತೆ ಇಲ್ಲ.

ಟ್ರಂಪ್‌ ಅವರು ಈ ಮಸೂದೆಗೆ ಸಹಿ ಮಾಡಿರುವ ಪರಿಣಾಮವಾಗಿ, ಹಾಂಗ್‌ಕಾಂಗ್‌ನಲ್ಲಿ ತನ್ನ ಪ್ರಭಾವ ಕುಗ್ಗಬಹುದು ಎಂಬ ಆತಂಕ ಕಮ್ಯುನಿಸ್ಟ್‌ ಪಕ್ಷದಲ್ಲಿ ಬಲಗೊಳ್ಳಬಹುದು. ಹಾಂಗ್‌ಕಾಂಗ್‌ನಲ್ಲಿ ‘ರಾಷ್ಟ್ರದ ಭದ್ರತೆ ಕಾಪಾಡಿಕೊಳ್ಳಲು’ ಹೊಸ ಕ್ರಮಗಳನ್ನು ಕೈಗೊಳ್ಳ
ಲಾಗುವುದು ಎಂದು ಚೀನಾ ಈಗಾಗಲೇ ಹೇಳಿದೆ. ಹಾಂಗ್‌ಕಾಂಗ್‌ ವಿಚಾರದಲ್ಲಿ ಅಮೆರಿಕ ಹೆಚ್ಚು ಸಕ್ರಿಯವಾದಂತೆಲ್ಲ, ಅಲ್ಲಿನ ಭದ್ರತೆಗೆ ಸಂಬಂಧಿಸಿದಂತೆ ಚೀನಾದ ಆತಂಕ ಇನ್ನಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ಬೀಜಿಂಗ್‌ನಲ್ಲಿನ ಸಂಶೋಧನಾ ಸಂಸ್ಥೆಯೊಂದರ ಕಾರ್ಯನಿರ್ವಾಹಕ ನಿರ್ದೇಶಕ ತಿಯಾನ್ ಫೆಲಾಂಗ್.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.