ADVERTISEMENT

ವಿಜ್ಞಾನ ನೀತಿಗೆ ನಾವೀನ್ಯದ ಕೊಂಡಿ

ಸಂಶೋಧನೆಗೆ ಸಿಗುತ್ತಿರುವ ಅನುದಾನ ಸಾಲದು ಎಂಬ ಕೊರಗು ನಿವಾರಣೆ ಆಗುವುದೇ?

ಟಿ.ಆರ್.ಅನಂತರಾಮು
Published 2 ಫೆಬ್ರುವರಿ 2021, 20:12 IST
Last Updated 2 ಫೆಬ್ರುವರಿ 2021, 20:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯ ನೀತಿ ಕುರಿತು ವರ್ಷದ ಆರಂಭದಲ್ಲೇ ಕರಡನ್ನು ಬಿಡುಗಡೆ ಮಾಡಿದೆ. ಈ ಮೂಲಕ, ಸಾರ್ವಜನಿಕರು ಈ ಕುರಿತು ಚರ್ಚಿಸಲು ಹಾಗೂ ಸಲಹೆ ಕೊಡಲು ಅವಕಾಶ ಮಾಡಿಕೊಟ್ಟಿದೆ.

ಜನಗಣತಿಯಂತೆ ಅಥವಾ ಪಂಚವಾರ್ಷಿಕ ಯೋಜನೆಯಂತೆ ವಿಜ್ಞಾನ– ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಕಟಿಸುವ ನೀತಿಯನ್ನು ಕಾಲಬದ್ಧ ಯೋಜನೆಯಾಗಿ ಬಿಡುಗಡೆ ಮಾಡಬೇಕೆಂಬ ಸಾಂವಿಧಾನಿಕ ನಿರ್ಬಂಧವೇನೂ ಇಲ್ಲ. ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರವು ವಿಜ್ಞಾನ ನೀತಿಯನ್ನು ಪ್ರಕಟಿಸುತ್ತಿರುವುದು ಇದು ಐದನೆಯ ಬಾರಿ. ಇದು ಅನಿವಾರ್ಯವೂ ಆಗಿತ್ತು. ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳೊಡನೆ ವಿಜ್ಞಾನ– ತಂತ್ರಜ್ಞಾನ ನಿಕಟವಾಗಿ ಬೆಸೆದು ಕೊಂಡಿರುವುದಷ್ಟೇ ಅಲ್ಲ ‘ಡ್ರೈವರ್ ಸೀಟ್’ನಲ್ಲಿ ಕೂತಿದೆ. 2013ರಲ್ಲಿ ವಿಜ್ಞಾನ ನೀತಿ ಪ್ರಕಟಿಸಿದಾಗ, ಅದರಲ್ಲಿ ನಾವೀನ್ಯ ಎನ್ನುವ ಪದವಿರಲಿಲ್ಲ. ಈಗ ಅದು ಢಾಳಾಗಿ ಕಾಣಿಸುತ್ತಿದೆ; ಪರಿಸ್ಥಿತಿಯೂ ಹಾಗೆಯೇ ಇದೆ. ವಿಜ್ಞಾನ ಸಾಧನೆಯೇ ಪ್ರಗತಿಯ ಅಳತೆಗೋಲಾಗಿದೆ.

ದೇಸಿ ತಂತ್ರಜ್ಞಾನ ಕುರಿತು ಈ ಕರಡುವಿನಲ್ಲಿ ವಿಶೇಷ ಪ್ರಸ್ತಾಪ ಇದೆ. ಸಾಂಪ್ರದಾಯಿಕ ಜ್ಞಾನದ ಬಳಕೆ ಹಾಗೂ ಸಮಾಜಕ್ಕೆ ತತ್‍ಕ್ಷಣದಲ್ಲಿ ಬೇಕಾಗಿರುವ ತಂತ್ರಜ್ಞಾನ ಕುರಿತಂತೆ ಆದ್ಯತೆಯಲ್ಲಿ ಸಂಶೋಧನೆ ಮಾಡಲು ಇಲ್ಲಿ ಒತ್ತುಬಿದ್ದಿದೆ. ಈ ಕ್ಷೇತ್ರಗಳಿಗೆ ಆರ್ಥಿಕ ನೂಕುಬಲವನ್ನು ಕೊಡುವ ಪ್ರಯತ್ನವನ್ನು ಗುರುತಿಸಬಹುದು. ಇದಕ್ಕಾಗಿ ಇಡೀ ದೇಶದಲ್ಲಿ ಜಾತಿ, ಲಿಂಗ ಭೇದ, ಭೌಗೋಳಿಕ ವಲಯ ಭೇದವಿಲ್ಲದೆ ಉತ್ತಮ ಯೋಜನೆಯನ್ನು ರೂಪಿಸಬಲ್ಲ ಸುಮಾರು 40,000 ಪರಿಣತರೊಂದಿಗೆ 300 ಸುತ್ತು ಚರ್ಚಿಸಿ ಈ ಕರಡನ್ನು ತಯಾರಿಸಿದೆ. ಈ ಪ್ರಯತ್ನ ಸ್ವಾಗತಿಸ ಬೇಕಾದದ್ದೇ. ಅದರಲ್ಲೂ ಕೋವಿಡ್-19 ತಂದೊಡ್ಡಿದ ಆರ್ಥಿಕ ಹೊಡೆತದಿಂದ ಹೊರಬಂದು ಪುನಶ್ಚೇತನಗೊಳ್ಳುವ ಮಾರ್ಗವನ್ನು ಹುಡುಕಬೇಕಿತ್ತು. ಸುಸ್ಥಿರ ಅಭಿವೃದ್ಧಿ ಎನ್ನುವುದು ಕ್ಲೀಷೆಯ ಪದಗುಚ್ಛವಾದರೂ ಮತ್ತೆ ಮತ್ತೆ ಅದರ ಪ್ರಸ್ತಾಪ ಬರುತ್ತದೆ. ವಿಜ್ಞಾನ– ತಂತ್ರಜ್ಞಾನದ ನೆರವಿಲ್ಲದೆ ಇದನ್ನು ಸಾಧಿಸುವುದು ಅಸಾಧ್ಯ ಎನ್ನುವುದು ಭಾರತಕ್ಕಷ್ಟೇ ಅಲ್ಲ, ಜಗತ್ತಿಗೇ ಗೊತ್ತಿದೆ.

ADVERTISEMENT

ಅಂತರಿಕ್ಷ ಯೋಜನೆಗಳಲ್ಲಿ ಉಳಿದ ದೇಶಗಳಿಗಿಂತ ಮುನ್ನಡೆ ಸಾಧಿಸಬೇಕು ಎಂಬ ಪ್ರಸ್ತಾಪವೂ ಈ ಕರಡುವಿನಲ್ಲಿದೆ. ನಿಸ್ಸಂಶಯವಾಗಿ ಇದು ಚೀನಾ ಮತ್ತು ಅಮೆರಿಕ ಕುರಿತಂತೆ ಪರೋಕ್ಷವಾಗಿ ಸೂಚಿಸಿರುವ ಸಲಹೆ. ಫಂಡಿಂಗ್ ಪ್ರಶ್ನೆ ಬಂದಾಗ, ಇಸ್ರೊ ಸಂಸ್ಥೆ ದೊಡ್ಡ ಸಂದಿಗ್ಧವನ್ನೇನೂ ಎದುರಿಸಿಲ್ಲ. ಆದರೆ 2015ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್.) ಪ್ರಯೋಗಾಲಯಗಳು ಸಂಕಷ್ಟ ಎದುರಿಸಬೇಕಾಗಿ ಬಂತು. ಆಗ ಸರ್ಕಾರ ‘ನಿಮ್ಮ ಖರ್ಚನ್ನು ನೀವೇ ಸರಿದೂಗಿಸಿಕೊಳ್ಳಬೇಕು’ ಎಂದು ಸುತ್ತೋಲೆಯನ್ನೇ ಹೊರಡಿಸಿತ್ತು. ಅನೇಕ ಸರ್ಕಾರಿ ಸಂಸ್ಥೆಗಳಿಗೆ ಇದೊಂದು ಸವಾಲಾಗಿತ್ತು. ಭಾರತದ ಮಟ್ಟಿಗೆ ವಿಜ್ಞಾನ– ತಂತ್ರಜ್ಞಾನದ ಪ್ರಶ್ನೆ ಬಂದಾಗ, ಸಂಶೋಧನೆಗೆ ಮತ್ತು ಅಭಿವೃದ್ಧಿಗೆ ತೊಡಗಿಸುತ್ತಿರುವ ಹಣ ತೀರಾ ನಗಣ್ಯ. ಈ ವಿಚಾರವನ್ನು ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರು ಹಲವು ವೇದಿಕೆಗಳಲ್ಲಿ ಸರ್ಕಾರಕ್ಕೆ ನೇರವಾಗಿಯೇ ತಿಳಿಸಿದ್ದಾರೆ.

ನಮ್ಮ ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ 0.5ರಿಂದ 0.6ರಷ್ಟು ಕೂಡ ಸರ್ಕಾರ ಈ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡುತ್ತಿಲ್ಲ. ಹಲವು ವರ್ಷಗಳಿಂದ ಇದನ್ನು ಶೇ 2ಕ್ಕೆ ತರಬೇಕೆಂಬ ಪ್ರಸ್ತಾಪ ಮತ್ತೆ ಮತ್ತೆ ಬರುತ್ತಿದ್ದರೂ ಅದು ಅನುಷ್ಠಾನವಾಗಿಲ್ಲ. ಅಲ್ಲದೆ ವಿಜ್ಞಾನದ ಎಲ್ಲ ಶಾಖೆಗಳಿಗೂ ನಿರೀಕ್ಷಿಸಬಹುದಾದ ಆರ್ಥಿಕ ಬೆಂಬಲ ಸಿಕ್ಕುತ್ತಿಲ್ಲ.

ಇದಕ್ಕೆ ಒಂದು ಅಪವಾದವೆಂದರೆ, ಈಗ ಜಾಗತಿಕ ಸುದ್ದಿಯಾಗಿರುವ ‘ಸ್ಟೆಮ್’ (ಸೈನ್ಸ್, ಟೆಕ್ನಾಲಜಿ, ಎಂಜಿ
ನಿಯರಿಂಗ್ ಮತ್ತು ಗಣಿತ). ನಾವೀನ್ಯ ತಂತ್ರಜ್ಞಾನದ ದೃಷ್ಟಿಯಿಂದ ಇದಕ್ಕೀಗ ಜಾಗತಿಕ ಮನ್ನಣೆಯಷ್ಟೇ ಅಲ್ಲ, ಪ್ರೋತ್ಸಾಹವೂ ಸಿಕ್ಕುತ್ತಿದೆ. ಅಂತರಿಕ್ಷ ವಿಜ್ಞಾನ ಕುರಿತು ಬುದ್ಧಿವಂತ ಮಕ್ಕಳಿಗೆ ನಮ್ಮಲ್ಲಿ ಇಸ್ರೊ ಸಂಸ್ಥೆಯು ಹೇಗೆ ತರಬೇತಿ ಕೊಡಲು ಮುಂದಾಗಿದೆಯೋ ಅಮೆರಿಕದ ನಾಸಾ ಸಂಸ್ಥೆ ಕೂಡ ‘ಕ್ಯಾಚ್ ದೆಮ್ ಯಂಗ್’ ಎನ್ನುವ ತತ್ವ ಅನುಸರಿಸಿ, ದೇಶದ ಮಹಾ ಯೋಜನೆಯಲ್ಲಿ ತೊಡಗಿಕೊಳ್ಳಲು ಕಿರಿಯರನ್ನು ಅಣಿ ಮಾಡುತ್ತಿದೆ. ಇಲ್ಲೊಂದು ಗಂಭೀರ ಅಂಶವನ್ನು ಪರಿಗಣಿಸಲೇಬೇಕು. ಅದು ಈ ಕರಡುವಿನಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಇಂಥ ಯೋಜನೆಗಳು ನಗರ ಕೇಂದ್ರಿತ ಯೋಜನೆಗಳಾಗುವ ಅಪಾಯ ಕಾಣಿಸುತ್ತಿದೆ.

ಗ್ರಾಮೀಣ ಪ್ರದೇಶದ ಬುದ್ಧಿವಂತ ಮಕ್ಕಳನ್ನು ನಾವೀನ್ಯ ಯೋಜನೆಗಳಿಗೆ ಆಕರ್ಷಿಸಲು ಪ್ರತ್ಯೇಕ ವ್ಯವಸ್ಥೆಯನ್ನೇ ಸ್ಥಾಪಿಸುವ ಪ್ರಸ್ತಾವ ಇರಬೇಕಾಗಿತ್ತು. ಇದರ ಜೊತೆಗೆ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಿಗೆ ಇಂಥ ಯೋಜನೆಗಳನ್ನು ಬೆಂಬಲಿಸಲು ವಿಶೇಷ ಆರ್ಥಿಕ ಪ್ಯಾಕೇಜ್‍ಗಳನ್ನು ಕೊಟ್ಟು ಉತ್ತೇಜಿಸಬೇಕಾಗಿದೆ.

ಸರ್ಕಾರದ ಈ ಕರಡುವಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವವನ್ನು ನಿರೀಕ್ಷಿಸಲಾಗಿದೆ. ಆದರೆ ಖಾಸಗಿ ಕಂಪನಿಗಳು ತತ್‍ಕ್ಷಣದ ಲಾಭವಿಲ್ಲದಿದ್ದರೆ ಬಂಡವಾಳ ಹೂಡಲು ಹಿಂಜರಿಯುತ್ತವೆ. ಕೋವಿಡ್-19ಕ್ಕೆ ಲಸಿಕೆಯನ್ನು ತಯಾರಿಸಲು ಏಕೆ ಖಾಸಗಿ ಔಷಧಿ ಕಂಪನಿಗಳು ಇಷ್ಟೊಂದು ಪೈಪೋಟಿ ನಡೆಸುತ್ತಿವೆ ಎಂಬುದು ಸಾಮಾನ್ಯ ಜನರಿಗೂ ಗೊತ್ತು. ಈ ದಿಸೆಯಲ್ಲಿ ಸರ್ಕಾರ ಇನ್ನಷ್ಟು ಉದಾರ ನೀತಿಯನ್ನು ಅನುಸರಿಸಬೇಕಾಗುತ್ತದೆ. ಈ ಕರಡುವಿನ ಇನ್ನೊಂದು ಅಂಶ ನಿರ್ವಹಣೆ ಕುರಿತದ್ದು. ವಿಶೇಷವಾಗಿ ವಿಜ್ಞಾನ– ತಂತ್ರಜ್ಞಾನ ಸಂಸ್ಥೆಗಳಲ್ಲಿ ಪರಿಣತರಿಗಿಂತ ಅಧಿಕಾರಶಾಹಿಯದ್ದೇ ಮೇಲುಗೈ ಅಷ್ಟೇ ಅಲ್ಲ, ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನು ಹದ್ದುಬಸ್ತಿನಲ್ಲಿಡಲು ಪಿರಮಿಡ್ ಪರಿಕಲ್ಪನೆಯನ್ನು ಇಲ್ಲಿ ಮುಂದಿಡಲಾಗಿದೆ. ಅಂದರೆ ತಳದಲ್ಲಿ ಸಂಶೋಧಕರ ಸಂಖ್ಯೆಯ ಹೆಚ್ಚಳ, ತುದಿಗೆ ಹೋದಂತೆ ಅಧಿಕಾರಿಗಳ ಕನಿಷ್ಠ ಸಂಖ್ಯೆ. ಇದರ ಜೊತೆಗೆ ವಿಜ್ಞಾನ– ತಂತ್ರಜ್ಞಾನದ ನಾವೀನ್ಯ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವನ್ನು ಭಾಗಿಯಾಗಿಸುವ ಯೋಜನೆಯನ್ನು ಇಟ್ಟುಕೊಂಡಿದೆ. ಫಂಡ್ ಪ್ರಶ್ನೆ ಬಂದಾಗ, ‘ಅರ್ಧ ಭಾಗ ನಮ್ಮದು, ಉಳಿದರ್ಧ ನಿಮ್ಮದು’ ಎಂಬ ಸಲಹೆಯನ್ನು ಮುಂದಿಡುತ್ತಿದೆ.

‘ಒಂದು ದೇಶ, ಒಂದು ಮಾಹಿತಿ ಭಂಡಾರ’ ಎನ್ನುವುದನ್ನು ವಿಜ್ಞಾನ ಕ್ಷೇತ್ರಕ್ಕೆ ಅನ್ವಯಿಸುವ ಯೋಜನೆಯಲ್ಲಿ ವಿಜ್ಞಾನಿಗಳಿಗೆ ಸುಲಭವಾಗಿ ಸಂಶೋಧನೆಗೆ ಮಾಹಿತಿ ಸಿಗುವಂತೆಯೇ ವಿಜ್ಞಾನಾಸಕ್ತರಿಗೂ ಸಿಕ್ಕಬೇಕೆಂಬುದನ್ನು ಒಂದು ರಾಷ್ಟ್ರೀಯ ನೀತಿಯಾಗಿಯೇ ಕರಡುವಿನಲ್ಲಿ ಸೂಚಿಸಿದೆ. ಬಹುಶಃ ಇದರ ಅಳವಡಿಕೆ ಅಷ್ಟೇನೂ ಕಷ್ಟವಾಗದು. ಏಕೆಂದರೆ ಸರ್ಕಾರೇತರ ಸಂಸ್ಥೆಗಳಾಗಲೀ, ಸಾರ್ವಜನಿಕರಾಗಲೀ, ವಿಜ್ಞಾನಾಸಕ್ತ ವಿದ್ಯಾರ್ಥಿಗಳಾಗಲೀ ಇಂದಿನ ದಿನಗಳಲ್ಲಿ ಭಾರಿ ಹಣ ಕೊಟ್ಟು ವಿಜ್ಞಾನ ಪತ್ರಿಕೆಗಳಿಗೆ ಚಂದಾದಾರರಾಗುವುದು ತುಸು ತ್ರಾಸದಾಯಕವೇ.

ವಿಜ್ಞಾನ ನೀತಿಯ ಮತ್ತೊಂದು ಬಲವಾದ ಪ್ರತಿಪಾದನೆಯು ವಿಜ್ಞಾನ ಸಂವಹನ ಕುರಿತದ್ದು. ಇದಕ್ಕಾಗಿ ಸಾರ್ವಜನಿಕರನ್ನೂ ಒಳಗೊಳ್ಳುವ ಪ್ರಸ್ತಾವವನ್ನು ಮುಂದೆ ಇಡಲಾಗಿದೆ. ವಿಶೇಷವಾಗಿ ಜನಮನದಲ್ಲಿ ಬೇರೂರಿರುವ ಮೌಢ್ಯಗಳ ನಿವಾರಣೆಗೆ ಸಾರ್ವಜನಿಕರು ಗಂಭೀರವಾಗಿ ತೊಡಗಿಕೊಳ್ಳದ ಹೊರತು ಈ ನಿಟ್ಟಿನ ಯಾವ ಪ್ರಯತ್ನವೂ ಫಲ ಕೊಡದು. ಗ್ರಾಮೀಣ
ಪ್ರದೇಶಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ದೊಡ್ಡ ತಂಡವನ್ನೇ ಬೆಳೆಸಬೇಕಾಗುತ್ತದೆ. ಇದು ಹೇಗೆ ಮತ್ತು ಎಂತು ಎಂಬ ಬಗ್ಗೆ ಈ ಕರಡುವಿನಲ್ಲಿ ಸ್ಪಷ್ಟವಾದ ಮಾರ್ಗಸೂಚಿಗಳೇನೂ ಇಲ್ಲ.

ನಮ್ಮ ಸಂವಿಧಾನದ ನಿಬಂಧನೆಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದಕ್ಕೆಪೂರಕವಾದ ಅಂಶಗಳನ್ನು ಒಳಗೊಂಡಿವೆ. ಆದರೆ ಖಾಸಗಿ ಟಿ.ವಿ. ವಾಹಿನಿಗಳು ಇದನ್ನು ಗಾಳಿಗೆ ತೂರಿ ಕಂದಾಚಾರಕ್ಕೆ ಮಣೆ ಹಾಕುತ್ತಿವೆ. ಸರ್ಕಾರವು ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.