SSLC ಫಲಿತಾಂಶ ವಿಶ್ಲೇಷಣೆಯ ಒಳನೋಟ: ಎಚ್.ಬಿ.ಚಂದ್ರಶೇಖರ್ ಅವರ ಲೇಖನ
ಎಸ್ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಯಾವುದೇ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ನಂತರ ಆ ಶೈಕ್ಷಣಿಕ ವರ್ಷದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡವು ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ ಫಲಿತಾಂಶ ಪ್ರಕಟಣೆಯ ನಂತರ ಫಲಿತಾಂಶದ ವಿಶ್ಲೇಷಣೆ ನಡೆಸಿ, ಅದರ ಆಧಾರದ ಮೇಲೆ ಮುಂದಿನ ಸಾಲಿನ ಅಥವಾ ಮುಂಬರುವ ವರ್ಷಗಳ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಯಾವ ರೀತಿಯ ಮಾರ್ಪಾಡುಗಳನ್ನು ಮಾಡಬಹುದು ಎಂಬುದರ ಬಗ್ಗೆ ಚಿಂತನ– ಮಂಥನ ನಡೆಸಲು ಫಲಿತಾಂಶವು ಅಗತ್ಯ ದತ್ತಾಂಶಗಳನ್ನು ನಮ್ಮ ಕೈಯಲ್ಲಿ ಇಡುತ್ತದೆ. ಆತ್ಮಾವಲೋಕನಕ್ಕೆ, ಪರಿಹಾರೋಪಾಯ ಕಂಡುಕೊಳ್ಳಲು ಪೂರಕವಾಗಿ ಒದಗಿಬರುತ್ತದೆ.
ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಶಾಲಾ ಹಂತಗಳಲ್ಲಿ ಇಂತಹ ವಿಶ್ಲೇಷಣೆಯನ್ನು ಕೈಗೊಂಡು ಸೂಕ್ತ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ. ಈ ಸಾಲಿನ ರಾಜ್ಯ ಹಂತದ ಫಲಿತಾಂಶದ ವಿಶ್ಲೇಷಣೆಯಲ್ಲಿ ಅನೇಕ ಒಳನೋಟಗಳು ನಮಗೆ ಕಾಣಸಿಗುತ್ತವೆ. ವಿವಿಧ ಸಾಮಾಜಿಕ ವರ್ಗಗಳಿಗೆ ಸೇರಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಯಾವ ರೀತಿ ಸಾಧನೆ ಮಾಡಿದ್ದಾರೆ ಎಂಬುದನ್ನು ಕಂಡುಕೊಂಡು, ಫಲಿತಾಂಶದಲ್ಲಿ ಹಿನ್ನಡೆ ಹೊಂದಿರುವ ಸಾಮಾಜಿಕ ವರ್ಗಗಳ ಮಕ್ಕಳಿಗೆ ಯಾವ ರೀತಿಯ ಬೆಂಬಲ ನೀಡಬಹುದು ಎಂಬುದನ್ನು ಯೋಜಿಸಲು ಸಾಧ್ಯವಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶವು ಕ್ರಮವಾಗಿ ಶೇ 59, ಶೇ 58 ಹಾಗೂ ಶೇ 57ರಷ್ಟು ಇದ್ದು, ರಾಜ್ಯದ ಒಟ್ಟಾರೆ ಶೇಕಡಾವಾರು ಫಲಿತಾಂಶಕ್ಕಿಂತ (ಶೇ 66) ಕಡಿಮೆ ಇರುವುದನ್ನು ಗಮನಿಸಬಹುದು. ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಶಾಲೆಗೆ ಗೈರುಹಾಜರಾಗುವುದು ಹಾಗೂ ಚಿಕ್ಕ ವಯಸ್ಸಿನಲ್ಲಿ ವಿವಿಧ ಉದ್ಯೋಗಗಳಲ್ಲಿ ನಿರತರಾಗುವುದು ಸಾಮಾನ್ಯ. ಅದರಲ್ಲೂ ಈ ಸಮುದಾಯದ ಬಾಲಕರ ಶಾಲಾ ಹಾಜರಿಯ ಪ್ರಮಾಣ ಕಡಿಮೆ ಇರುತ್ತದೆ. ಇವರ ಫಲಿತಾಂಶವು ಶೇ 47ರಷ್ಟು ಇದ್ದು, ಬಾಲಕರ ಒಟ್ಟಾರೆ ಶೇಕಡಾವಾರು ಫಲಿತಾಂಶಕ್ಕಿಂತ (ಶೇ 58) ಬಹಳಷ್ಟು ಕಡಿಮೆ ಇದೆ.
ಇದನ್ನು ಅವಲೋಕಿಸಿದಾಗ, ಮುಸ್ಲಿಂ ಸಮುದಾಯದ ಬಾಲಕರನ್ನು ವಿಶೇಷವಾಗಿ ಗಮನದಲ್ಲಿ ಇರಿಸಿಕೊಂಡು, ಅವರು ಶಾಲೆಗೆ ನಿಯಮಿತವಾಗಿ ಹಾಜರಾಗುವಂತೆ ಹಾಗೂ ಕಲಿಕೆಯಲ್ಲಿ ಉತ್ತಮವಾಗಿ ತೊಡಗುವಂತೆ ಮಾಡಲು ಪೋಷಕರ ಸಹಭಾಗಿತ್ವ, ಶಿಕ್ಷಣದ ಮಹತ್ವವನ್ನು ವಿವರಿಸುವ ಪ್ರೇರಣಾತ್ಮಕ ಕ್ರಮಗಳು, ಸಮುದಾಯದ ಸಾಧಕರ ಯಶೋಗಾಥೆಗಳ ಪರಿಚಯ ಹಾಗೂ ಇನ್ನಿತರ ಕಾರ್ಯತಂತ್ರಗಳನ್ನು ಹೊಂದಬೇಕಾಗುತ್ತದೆ. ಜೊತೆಗೆ ಈ ಸಮುದಾಯದ ಬಾಲಕಿಯರ ಶಿಕ್ಷಣಕ್ಕೂ ಒತ್ತು ನೀಡಬೇಕಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶವನ್ನು ಉತ್ತಮಪಡಿಸಲು ಪೋಷಕರಲ್ಲಿ ಜಾಗೃತಿ, ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಸ್ಥಳೀಯವಾಗಿ ಸೂಕ್ತವಾಗುವ ಇನ್ನಿತರ ಕಾರ್ಯತಂತ್ರಗಳನ್ನು ಯೋಜಿಸಿ ಜಾರಿಗೊಳಿಸಬೇಕಾಗುತ್ತದೆ. ಈ ಸಮುದಾಯಗಳ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆದ ಮೊದಲ ಪೀಳಿಗೆಯವರಾಗಿರುವ ಸಾಧ್ಯತೆಯಿದ್ದು, ಕುಟುಂಬದ ಸಂಕಷ್ಟಗಳು ಇಂತಹ ಮಕ್ಕಳನ್ನು ಶಿಕ್ಷಣದಿಂದ ವಿಮುಖರನ್ನಾಗಿ ಮಾಡಿಸುವ ಸಾಧ್ಯತೆ ಇರುತ್ತದೆ.
ಈ ಕಾರಣದಿಂದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಕ್ಷಣದ ಮುಂದುವರಿಕೆ ಹಾಗೂ ಕಲಿಕಾ ಪ್ರಗತಿಯ ಬಗ್ಗೆ ಹೆಚ್ಚಿನ ನಿಗಾ ಇಡುವುದರ ಜೊತೆಗೆ ಶಿಕ್ಷಕರು ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಂಬಂಧಿಸಿದ ಸಮುದಾಯಗಳ ಶಿಕ್ಷಣ ತಜ್ಞರು, ಅಧಿಕಾರಿಗಳು, ಉದ್ಯಮಿಗಳು, ಉದ್ಯೋಗಿಗಳು ಹಾಗೂ ಇತರ ಸಾಧಕರ ನೆರವನ್ನು ಪಡೆಯಬಹುದು.
ರಾಜ್ಯ ಹಂತದಲ್ಲಿ ಬಾಲಕರ ಶೇಕಡಾವಾರು ಫಲಿತಾಂಶವು 58ರಷ್ಟಿದ್ದು, ಬಾಲಕಿಯರ ಶೇಕಡಾವಾರು ಫಲಿತಾಂಶಕ್ಕಿಂತ (74) ಶೇ 16ರಷ್ಟು ಕಡಿಮೆ ಇದೆ. ಬಾಲಕರ ಫಲಿತಾಂಶವು ಇಷ್ಟೊಂದು ಕಡಿಮೆ ಆಗಿರುವುದು ಒಟ್ಟಾರೆ ಫಲಿತಾಂಶದ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನು ಗಮನಿಸಿ, ಬಾಲಕರನ್ನು ಕಲಿಕಾ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಕಾರ್ಯವಿಧಾನವನ್ನು ಅನುಷ್ಠಾನ ಮಾಡಬೇಕಾಗಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಫಲಿತಾಂಶ ಕ್ರಮವಾಗಿ ಶೇ 63 ಮತ್ತು ಶೇ 59ರಷ್ಟು ಇದ್ದು, ಅನುದಾನರಹಿತ ಶಾಲೆಗಳ ಫಲಿತಾಂಶಕ್ಕಿಂತ (ಶೇ 75) ಕಡಿಮೆ ಇರುವುದನ್ನು ಗಮನಿಸಬಹುದು. ಅನುದಾನರಹಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯು ಉತ್ತಮವಾಗಿರುವುದು ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗಿರಬಹುದು. ಆದಾಗ್ಯೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಹಿನ್ನೆಲೆಯನ್ನು ಗಮನದಲ್ಲಿ ಇಟ್ಟುಕೊಂಡು, ಅವರ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯವಾದ, ಸ್ಥಳೀಯ ಸನ್ನಿವೇಶಗಳಿಗೆ ಸೂಕ್ತವಾದ ನಿರ್ದಿಷ್ಟ ಕಾರ್ಯಯೋಜನೆಯನ್ನು ಹಾಕಿಕೊಳ್ಳಬಹುದು.
ಮಾಧ್ಯಮವಾರು ಫಲಿತಾಂಶವನ್ನು ಗಮನಿಸಿದಾಗ, ಉರ್ದು ಮಾಧ್ಯಮದ ಶೇಕಡಾವಾರು ಫಲಿತಾಂಶವು 46ರಷ್ಟಿದ್ದು, ಇತರ ಪ್ರಮುಖ ಮಾಧ್ಯಮಗಳ ಫಲಿತಾಂಶಕ್ಕಿಂತ ಕಡಿಮೆ ಇದೆ. ಉರ್ದು ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವಲ್ಲಿ ಇನ್ನಷ್ಟು ಬೆಂಬಲಾತ್ಮಕ ಕಾರ್ಯತಂತ್ರಗಳು ಅಗತ್ಯ ಎಂಬುದನ್ನು ಈ ಅಂಶವು ತೋರಿಸುತ್ತದೆ.
ಜಿಲ್ಲಾವಾರು ಫಲಿತಾಂಶವನ್ನು ಗಮನಿಸಿದಾಗ, ವಿಜಯನಗರ ಜಿಲ್ಲೆ ಹೊರತುಪಡಿಸಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಫಲಿತಾಂಶದ ಪಟ್ಟಿಯಲ್ಲಿ ಕೊನೆಯಲ್ಲಿ ಇರುವುದನ್ನು ಗಮನಿಸಬಹುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ 21,381 (ಶೇ 37) ಶಿಕ್ಷಕ ಹುದ್ದೆಗಳು ಖಾಲಿ ಇರುವುದು ಇದಕ್ಕೆ ಪ್ರಮುಖ ಕಾರಣ ಆಗಿರಬಹುದು ಎಂದು ಕಲ್ಯಾಣ ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಆಕಾಶ್ ಅಭಿಪ್ರಾಯಪಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಅಂಶದ ಜೊತೆಗೆ ಈ ಭಾಗದಲ್ಲಿ ಖಾಸಗಿ ಶಾಲೆಗಳ ಸಂಖ್ಯೆಯು ಇತರ ವಿಭಾಗಗಳಿಗಿಂತ ಕಡಿಮೆ ಇರುವುದು ಸಹ ಫಲಿತಾಂಶ ಕುಸಿತಕ್ಕೆ ಕಾರಣವಾಗಿರಬಹುದು. ಏಕೆಂದರೆ ಅನುದಾನರಹಿತ ಪ್ರೌಢಶಾಲೆಗಳಲ್ಲಿ ಫಲಿತಾಂಶವು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗಿಂತ ಉತ್ತಮವಾಗಿ ಇರುವುದನ್ನು ಗಮನಿಸಬಹುದು. ಈ ಕುರಿತು ಇನ್ನಷ್ಟು ವಿಶ್ಲೇಷಣೆಯ ಅಗತ್ಯ ಇದೆ.
ರಾಜ್ಯ ಮಟ್ಟದ ಫಲಿತಾಂಶದ ವಿಶ್ಲೇಷಣೆಯ ಜೊತೆಗೆ ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿಯೂ ಫಲಿತಾಂಶದ ವಿಶ್ಲೇಷಣೆಯನ್ನು ಕೈಗೊಂಡು, ಫಲಿತಾಂಶ ಹೆಚ್ಚಳ ಅಥವಾ ಕುಸಿತಕ್ಕೆ ಕಾರಣವಾದ ನಿರ್ದಿಷ್ಟವಾದ ಸ್ಥಳೀಯ ಅಂಶಗಳನ್ನು ಕಂಡುಕೊಂಡು ಫಲಿತಾಂಶವನ್ನು ಉತ್ತಮಪಡಿಸಲು ಪ್ರಯತ್ನಿಸಬೇಕು. ಈ ಪ್ರಕ್ರಿಯೆಯಲ್ಲಿ ಆಯಾ ಹಂತದಲ್ಲಿ ಸಕ್ರಿಯವಾಗಿರುವ ಶಿಕ್ಷಣಾಸಕ್ತರನ್ನು ತೊಡಗಿಸಿಕೊಂಡು, ಅವರ ಸಹಭಾಗಿತ್ವದಿಂದ ಮುಂದಡಿ ಇಡುವ ಪ್ರಯತ್ನಗಳಾಗಬೇಕು.
ಶಾಲಾ ಹಂತದಲ್ಲಿ ಕೈಗೊಳ್ಳುವ ಫಲಿತಾಂಶದ ವಿಶ್ಲೇಷಣೆಯು ಉತ್ತಮ ಒಳನೋಟಗಳನ್ನು ನೀಡುತ್ತದೆ. ಉದಾಹರಣೆಗೆ, ನನ್ನ ಬಂಧುವೊಬ್ಬರ ಶಾಲೆಯ ಫಲಿತಾಂಶವು ಶೇ 41ರಷ್ಟಿದ್ದು, ಗಣಿತ ವಿಷಯದ ಫಲಿತಾಂಶ ಶೇ 73ರಷ್ಟಿದೆ. ಗಣಿತ ಶಿಕ್ಷಕರು ಉತ್ತಮವಾದ ರೀತಿಯಿಂದ ತೊಡಗಿಸಿಕೊಂಡು ಕಲಿಸಿದ್ದರಿಂದ ಅದರ ಪರಿಣಾಮವು ಫಲಿತಾಂಶದಲ್ಲಿ ಕಂಡುಬಂದಿದೆ. ಶಿಕ್ಷಕ ಹುದ್ದೆ ಖಾಲಿಯಿದ್ದು, ಅನುಭವಿ ಕಾಯಂ ಶಿಕ್ಷಕರು ಇಲ್ಲದಿದ್ದ ವಿಷಯಗಳಲ್ಲಿ ಫಲಿತಾಂಶದ ಕುಸಿತ ಕಂಡುಬಂದಿದೆ. ಇದನ್ನು ಗಮನಿಸಿದಾಗ, ಶಿಕ್ಷಕರ ಲಭ್ಯತೆ, ಶಿಕ್ಷಕರ ತೊಡಗಿಸಿಕೊಳ್ಳುವಿಕೆ ಹಾಗೂ ಪೋಷಕರ ಪಾಲ್ಗೊಳ್ಳುವಿಕೆಯು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ. ಈ ಅಂಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸಲು ಕ್ರಮ ತೆಗೆದುಕೊಳ್ಳಬಹುದು. ಶಾಲಾ ಹಂತದಲ್ಲಿ ಫಲಿತಾಂಶ ಹೆಚ್ಚಳಕ್ಕೆ ಮುಖ್ಯ ಶಿಕ್ಷಕರು, ಶಿಕ್ಷಕರು, ಪೋಷಕರು, ಸ್ಥಳೀಯ ಶಿಕ್ಷಣಾಸಕ್ತ ಸ್ವಯಂಸೇವಾ ಸಂಸ್ಥೆಗಳ ದೃಢವಾದ ಮತ್ತು ಸಂಘಟಿತವಾದ ಪ್ರಯತ್ನಗಳಾಗಬೇಕು.
ಇದರ ಜೊತೆಗೆ ಕೆಳಹಂತದ ತರಗತಿಗಳಲ್ಲಿ, ಅಂದರೆ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ಹಂತಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದು ಬಹುಮುಖ್ಯವಾದ ಅಂಶವಾಗುತ್ತದೆ. ಸರಿಯಾಗಿ ಓದಲು, ಬರೆಯಲು ಬಾರದ ಹಾಗೂ ಗಣಿತದಂತಹ ಮೂಲಭೂತ ಕೌಶಲಗಳ ಕಲಿಕೆಯಾಗದ ವಿದ್ಯಾರ್ಥಿಗಳು ಎಂಟನೇ ತರಗತಿಗಾಗಿ ಪ್ರೌಢಶಾಲೆಗೆ ದಾಖಲಾದ ಸಂದರ್ಭದಲ್ಲಿ ಅವರಿಗೆ ಪಠ್ಯಪುಸ್ತಕದ ನಿಗದಿತ ಕಲಿಕಾಂಶಗಳನ್ನು ಕಲಿಸುವುದು ಹೆಚ್ಚಿನ ಶಿಕ್ಷಕರಿಗೆ ಸವಾಲಾಗುತ್ತದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು, ಕಿರಿಯ ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ಗುಣಾತ್ಮಕ ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಯೋಜಿಸಿ, ಅನುಷ್ಠಾನ ಮಾಡುವುದು ಸೂಕ್ತವಾಗುತ್ತದೆ.
ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಬೆಂಗಳೂರು ನಗರ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.