ADVERTISEMENT

ನುಡಿ ಬೆಳಗು: ಮನುಷ್ಯ ಪ್ರೀತಿಯ ವಿಜ್ಞಾನಿ

ದೀಪಾ ಹಿರೇಗುತ್ತಿ
Published 26 ಜನವರಿ 2026, 23:36 IST
Last Updated 26 ಜನವರಿ 2026, 23:36 IST
   

ಮರಿಯಾ ಸಾಲೋಮಿಯಾ ಸ್ಕ್ಲೋಡೊವಸ್ಕಾ ಕ್ಯೂರಿ ಎಂದರೆ ಗೊತ್ತಾಗದಿರಬಹುದು. ಆದರೆ ಮೇರಿ ಕ್ಯೂರಿ ಎಂಬ ಹೆಸರು ಜಗತ್ತಿಗೆ ಚಿರಪರಿಚಿತ. ಮನುಕುಲದ ಏಳಿಗೆಗೆ ತಮ್ಮನ್ನೇ ತಾವು ಸಮರ್ಪಿಸಿಕೊಂಡ ಮಹಾನ್‌ ವಿಜ್ಞಾನಿ ಇವರು.

ಅವರ ವೈಜ್ಞಾನಿಕ ಸಂಶೋಧನೆಯ ಆರಂಭ ಬಹಳ ಆರಾಮದಾಯಕವೇನೂ ಆಗಿರಲಿಲ್ಲ. ಪೋಲೆಂಡ್‌ನ ಬಡ ಕುಟುಂಬದಲ್ಲಿ ಹುಟ್ಟಿದ ಮೇರಿ ಕೈಲಿ ಪುಡಿಗಾಸಿಟ್ಟುಕೊಂಡು ಪ್ಯಾರಿಸ್ಸಿಗೆ ಓದಲೆಂದು ಬಂದವರು. ತಣ್ಣಗಿನ ಕೊರೆವ ಚಳಿಯಲ್ಲಿ, ಅರ್ಧಂಬರ್ಧ ಹೊಟ್ಟೆಗೆ ತಿಂದು ಹಣ ಉಳಿಸಲು ಹೆಣಗಾಡುತ್ತ ಸಂಶೋಧನೆ ನಡೆಸಿದವರು. ಆದರೆ ಅರೆಹೊಟ್ಟೆಯನ್ನು ಮೇರಿ ದೊಡ್ಡ ವಿಷಯವೆಂದು ಅಂದುಕೊಳ್ಳಲೇ ಇಲ್ಲ. ತಮ್ಮ ಜ್ಞಾನದ ಹಸಿವನ್ನು ತಣಿಸಿಕೊಳ್ಳುವತ್ತಲೇ ಅವರ ಗಮನ. ವಿಜ್ಞಾನ ಎಂಬುದು ಜನಪ್ರಿಯತೆ ಗಳಿಸಲು ಇರುವ ಮಾಧ್ಯಮವಲ್ಲ, ಬದಲಿಗೆ ಮನುಕುಲಕ್ಕೆ ಸೇವೆ ಸಲ್ಲಿಸಲು ಇರುವ ಅವಕಾಶ ಎಂದು ಅಂದುಕೊಂಡಿದ್ದರು ಮೇರಿ.

ಗಂಡ ಪಿಯರಿ ಕ್ಯೂರಿಯೊಂದಿಗೆ ಪೊಲೋನಿಯಂ ಮತ್ತು ರೇಡಿಯಂ ಎಂಬ ಎರಡು ಧಾತುಗಳನ್ನು ಕಂಡುಹಿಡಿದರು ಮೇರಿ. 1903ರಲ್ಲಿ ಭೌತವಿಜ್ಞಾನದಲ್ಲಿ ಮೇರಿ, ಪಿಯರಿ ಮತ್ತು ಹೆನ್ರಿ ಬೆಕೆರೆಲ್‌ಗೆ ನೊಬೆಲ್‌ ಬಹುಮಾನ ಬಂದಿತು. 1906ರಲ್ಲಿ ರಸ್ತೆ ಅಪಘಾತದಲ್ಲಿ ಪಿಯರಿ ಕ್ಯೂರಿ ಮೃತಪಟ್ಟರು. ಮೇರಿಯ ಜಗತ್ತು ತಲೆಕೆಳಗಾಯಿತು. ಜತೆಯಾಗಿ ಸದಾ ಸಂಶೋಧನೆಯಲ್ಲಿ ತೊಡಗಿದ್ದ ಮೇರಿ ಮತ್ತು ಪಿಯರಿ ಹೊರಗಿನ ಜಗತ್ತನ್ನೇ ಮರೆತಿದ್ದರು. ಆದರೆ ಒಡೆದು ಚೂರಾಗುತ್ತಿದ್ದ ಹೃದಯವನ್ನು ಜೋಡಿಸಿಕೊಂಡು ಮತ್ತೆ ಪ್ರಯೋಗಾಲಯಕ್ಕೆ ಬಂದರು ಮೇರಿ. ಹಗಲೂ ರಾತ್ರಿ ಸಂಶೋಧನೆ ಮಾಡಿದರು. ಪ್ಯಾರಿಸ್‌ನ ಸೊರ್ಬೋನ್‌ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದ ಮೊದಲ ಮಹಿಳೆ ಎನಿಸಿಕೊಂಡರು. ಸಂಶೋಧನೆ ಮುಂದುವರಿಸಿ 1911ರಲ್ಲಿ ರಸಾಯನವಿಜ್ಞಾನದಲ್ಲಿ ನೊಬೆಲ್‌ ಪಡೆದರು ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ಎರಡೂ ವಿಭಾಗಗಳಲ್ಲಿ ನೊಬೆಲ್‌ ಪಡೆದ ಮೊದಲ ಹಾಗೂ ಏಕೈಕ ವಿಜ್ಞಾನಿಯಾದರು.

ADVERTISEMENT

ವಿಜ್ಞಾನವಿರುವುದು ಜನರಿಗಾಗಿ ಎಂಬುದನ್ನು ಬಲವಾಗಿ ನಂಬಿದ್ದ ಮೇರಿ ಕ್ಯೂರಿ ಆ ನಿಟ್ಟಿನಲ್ಲಿ ಸದಾ ಯೋಚಿಸುತ್ತಿದ್ದರು. ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಯುದ್ಧರಂಗಕ್ಕೆ ಎಕ್ಸ್‌ ರೇ ವ್ಯವಸ್ಥೆಯೊಂದಿಗೆ ತೆರಳಿ ಗಾಯಗೊಂಡ ಸೈನಿಕರ ಶುಶ್ರೂಷೆಗೆ ವೈದ್ಯರೊಂದಿಗೆ ಕೈಜೋಡಿಸಿದರು. Petites Curies ಅಥವಾ ಪುಟ್ಟ ಕ್ಯೂರೀಸ್‌ ಎಂದು ಕರೆಯಲ್ಪಡುವ ಈ ಮೊಬೈಲ್‌ ಎಕ್ಸ್‌ರೇ ಯೂನಿಟ್‌, ಒಂದು ಎಕ್ಸ್‌ ರೇ ಯಂತ್ರ, ಸಣ್ಣ ಡಾರ್ಕ್‌ ರೂಮ್ ಮತ್ತು ಡೈನಮೋ ಹೊಂದಿತ್ತು. ಈ ಯೂನಿಟ್‌ ಸಹಾಯದಿಂದ ಆಸ್ಪತ್ರೆಗೆ ಹೋಗಲಾಗದ ಗಾಯಗೊಂಡ ಸೈನಿಕರು ಇದ್ದಲ್ಲೇ ಹೋಗಿ ಅವರ ಗಾಯಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರಕಿಸಿಕೊಟ್ಟು ಅವರ ಚಿಕಿತ್ಸೆಗೆ ಸಹಾಯ ಮಾಡಬಹುದಿತ್ತು.

ಯಾವುದೇ ಸಂಶೋಧನೆಗೂ ಪೇಟೆಂಟ್‌ ಮಾಡದ ಮೇರಿ ಕೋಟಿಗಟ್ಟಲೆ ಹಣ ಮಾಡುವ ಅವಕಾಶವನ್ನು ನಿರ್ಲಿಪ್ತರಾಗಿ ತ್ಯಜಿಸಿದ ಮಹಾನ್‌ ವ್ಯಕ್ತಿ. ವಿಕಿರಣಗಳ ನಡುವೆಯೇ ದೀರ್ಘಕಾಲ ಕೆಲಸ ಮಾಡಿದ್ದರಿಂದ ಆರೋಗ್ಯ ಹದಗೆಟ್ಟಿತ್ತು. ಆ ಬಗ್ಗೆ ಯಾವತ್ತೂ ಪಶ್ಚಾತ್ತಾಪ ಪಡದ ಮೇರಿ 1934ರಲ್ಲಿ ಮೃತಪಟ್ಟರು. ತಮ್ಮ ಕೆಲಸದಿಂದ ಜಗತ್ತಿಗೆ ಉಪಯೋಗವಾಯಿತೆನ್ನುವುದೊಂದೇ ಅವರಿಗೆ ಮುಖ್ಯವಾಗಿತ್ತು. ಜನಪ್ರಿಯತೆ, ಶ್ರೀಮಂತಿಕೆಗಿಂತ ಅಪ್ಪಟ ಮನುಷ್ಯ ಪ್ರೀತಿಯ ಕೆಲಸ ಜಗತ್ತಿನಲ್ಲಿ ಶಾಶ್ವತವಾಗಿ ಇರುತ್ತದೆಂದು ತೋರಿಸಿದರು. ಸಂಕಟ, ನೋವು ಏನೇ ಇದ್ದರೂ ಒಂದು ಉದಾತ್ತ ಗುರಿಯತ್ತ ಸಾಗುವ ಛಲದಿಂದ ಯಾವ ಸಾಧನೆ ಬೇಕಾದರೂ ಸಾಧ್ಯವೆಂಬ ಸಂದೇಶವನ್ನೂ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.