ADVERTISEMENT

ವಿಶ್ಲೇಷಣೆ | ಸಿಂಗ್‌ಗೆ ವಜ್ರಕವಚ ಆಗಿದ್ದವರು ರಾವ್

ಎ.ಸೂರ್ಯ ಪ್ರಕಾಶ್
Published 27 ಜನವರಿ 2025, 0:06 IST
Last Updated 27 ಜನವರಿ 2025, 0:06 IST
   

ಸತತ ಎರಡು ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು ಕಳೆದ ತಿಂಗಳು ನಿಧನರಾದ ನಂತರದಲ್ಲಿ ಅವರ ನಾಯಕತ್ವ ಹಾಗೂ ಅವರಲ್ಲಿದ್ದ ಜಾಣತನದ ಬಗ್ಗೆ ಮೆಚ್ಚುಗೆ ಸೂಚಿಸುವ ಬಹಳಷ್ಟು ಮಾತುಗಳು ದಾಖಲಾಗಿವೆ. ಅವರು 1991ರಲ್ಲಿ ದೇಶದ ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸಿದರು, ತಾನು ವಿಶ್ವದ ಇತರ ರಾಷ್ಟ್ರಗಳ ಜೊತೆ ಸ್ಪರ್ಧೆಗೆ ಇಳಿಯಬಲ್ಲೆ ಎಂಬ ವಿಶ್ವಾಸವನ್ನು ಭಾರತಕ್ಕೆ ಅವರು ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಸಿಂಗ್ ಅವರ ಬುದ್ಧಿಶಕ್ತಿಯ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಪಕ್ಷಭೇದ ಮರೆತು ಎಲ್ಲರೂ ಪ್ರಶಂಸಿಸುತ್ತಿದ್ದಾರೆ. ಆದರೆ ನೆಹರೂ–ಗಾಂಧಿಗಳು ಮಾತ್ರ, ಸಿಂಗ್ ಅವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ದುಃಖದ ವಾತಾವರಣವನ್ನೂ ಕೆಡಿಸುವಂತಹ ಕೆಲಸ ಮಾಡಿದ್ದಾರೆ.

ಸಿಂಗ್ ಅವರ ಅಂತ್ಯಸಂಸ್ಕಾರಕ್ಕೆ ಸೂಕ್ತವಾದ ಸ್ಥಳವನ್ನು ಒದಗಿಸದೆ ಇರುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಣ್ಣ ಮನಸ್ಸನ್ನು ತೋರಿಸಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಪ್ರಧಾನಿ ಹುದ್ದೆಯ ಘನತೆಗೆ ನ್ಯಾಯ ಕೊಡುವ ಕೆಲಸವನ್ನು ಕೇಂದ್ರ ಮಾಡಿಲ್ಲ ಎಂದು ಹೇಳಿರುವ ಪ್ರಿಯಾಂಕಾ, ಹಿಂದೆ ಎಲ್ಲ ಮಾಜಿ ಪ್ರಧಾನಿಗಳಿಗೆ ಅತ್ಯುನ್ನತ ಮಟ್ಟದ ಗೌರವವನ್ನು ನೀಡಲಾಗಿತ್ತು ಎಂದಿದ್ದಾರೆ. ನಿಗಮಬೋಧ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಸುವ ಮೂಲಕ ಸಿಂಗ್‌ ಅವರಿಗೆ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಅವಮಾನ ಮಾಡಿದೆ ಎಂದು ಪ್ರಿಯಾಂಕಾ ಅವರ ಸಹೋದರ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ADVERTISEMENT

ಸಿಂಗ್ ಅವರು ಆಧುನಿಕ ಭಾರತದ, ಉದಾರೀಕರಣ ನೀತಿಯ ಶಿಲ್ಪಿಯಾಗಿದ್ದರು ಮತ್ತು ಇದುವರೆಗೆ ಪ್ರಧಾನಿಗಳಾಗಿ ಸೇವೆ ಸಲ್ಲಿಸಿದ ಎಲ್ಲರ ಅಂತಿಮ ಸಂಸ್ಕಾರವನ್ನು ‘ಅಧಿಕೃತ ಸ್ಥಳ’ಗಳಲ್ಲಿ ಮಾತ್ರ ನಡೆಸಲಾಗಿದೆ ಎಂದು ಕೂಡ ರಾಹುಲ್‌ ಅವರು ಹೇಳಿದ್ದಾರೆ. ಸಿಂಗ್‌ ಅವರ ಸ್ಮಾರಕ ನಿರ್ಮಿಸಲು ಸೂಕ್ತವಾದ ಸ್ಥಳವನ್ನು ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭರವಸೆ ನೀಡಿದ ನಂತರವೂ ಇವೆಲ್ಲ ಆಗಿದೆ.

ಪ್ರಿಯಾಂಕಾ ಮತ್ತು ರಾಹುಲ್‌ ಗಾಂಧಿ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಅಪ್ರಾಮಾಣಿಕತೆಗೆ ಮಿತಿ ಇಲ್ಲವೇ ಎಂಬ ಪ್ರಶ್ನೆಯೊಂದು ಎದುರಾಗುತ್ತದೆ. ಪಿ.ವಿ. ನರಸಿಂಹ ರಾವ್‌ ಅವರು 2004ರ ಡಿಸೆಂಬರ್‌ನಲ್ಲಿ ಮೃತಪಟ್ಟಾಗ, ಸಿಂಗ್‌ ಅವರು ಪ್ರಧಾನಿಯಾಗಿದ್ದರೂ ಅಧಿಕಾರದ ಲಗಾಮು ಸೋನಿಯಾ ಗಾಂಧಿ ಅವರ ಬಳಿ ಇತ್ತು. ರಾವ್‌ ಅವರ ಅಂತ್ಯಸಂಸ್ಕಾರವು ದೆಹಲಿಯಲ್ಲಿ ನಡೆಯದಂತೆ ನೋಡಿಕೊಳ್ಳುವುದು ಮೊದಲ ತೀರ್ಮಾನವಾಗಿತ್ತು. ರಾವ್‌ ಅವರ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರಕ್ಕೆ ಹೈದರಾಬಾದ್‌ಗೆ ಒಯ್ಯುವುದನ್ನು ನೆಹರೂ–ಗಾಂಧಿ ಕುಟುಂಬವು ಖಾತರಿಪಡಿಸಿಕೊಂಡಿತು.

ಅಷ್ಟೇ ಅಲ್ಲ, ಅಂತ್ಯ ಸಂಸ್ಕಾರದ ಮಾತು ಬದಿಗಿರಲಿ, ದೆಹಲಿಯ ಅಕ್ಬರ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಯ ಆವರಣಕ್ಕೆ ರಾವ್‌ ಅವರ ಪಾರ್ಥಿವ ಶರೀರವು ಪ್ರವೇಶಿಸದಂತೆ ಮಾಡಿ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬವು ರಾವ್‌ ಅವರಿಗೆ ಇನ್ನಷ್ಟು ಅವಮಾನ ಮಾಡಿತು. ರಾವ್‌ ಅವರು 1991ರಿಂದ 1996ರವರೆಗೆ ಐದು ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದರೂ ಈ ರೀತಿ ಮಾಡಲಾಯಿತು. ಪಾರ್ಥಿವ ಶರೀರ ಹೊತ್ತಿದ್ದ ವಾಹನವು ಕಾಂಗ್ರೆಸ್‌ ಕಚೇರಿಯ ಬಳಿಗೆ ಬಂದಾಗ ಭದ್ರತಾ ಸಿಬ್ಬಂದಿ ಗೇಟುಗಳನ್ನು ಮುಚ್ಚಿದರು, ರಾವ್‌ ಅವರ ಪಾರ್ಥಿವ ಶರೀರವು ಹೊರಗಡೆಯೇ ಉಳಿಯಿತು. ಪಕ್ಷವನ್ನು ಅಧ್ಯಕ್ಷರಾಗಿ ಮುನ್ನಡೆಸಿದ್ದ ಇವರಿಗೆ ಗೌರವ ಸಲ್ಲಿಸಲು ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಕೂಡ ಆಗಲಿಲ್ಲ. ರಾವ್‌ ಅವರು ಮೃತಪಟ್ಟಾಗ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಹಿಡಿದಿತ್ತು. 

ಕಾಂಗ್ರೆಸ್‌ ಪಕ್ಷದ ಮಾಲೀಕತ್ವ ಹೊಂದಿರುವ ಹಾಗೂ ಪಕ್ಷವನ್ನು ನಿಯಂತ್ರಿಸುವ ಕುಟುಂಬವು ರಾವ್‌ ಅವರಿಗೆ ಎಸಗಿದ ಅವಮಾನವು ಆಘಾತ ಮೂಡಿಸುವಂತಿತ್ತು. ಆಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ವೈ.ಎಸ್.‌ ರಾಜಶೇಖರ ರೆಡ್ಡಿ ಅವರು ಹೈದರಾಬಾದ್‌ನಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸುವಂತೆ ನೆಹರೂ-ಗಾಂಧಿ ಕುಟುಂಬವು ನೋಡಿಕೊಂಡಿತು. ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ಒಯ್ಯುವಂತೆ ರಾವ್‌ ಅವರ ಕುಟುಂಬದ ಮನವೊಲಿಸುವ ಕೆಲಸವನ್ನು ರೆಡ್ಡಿ ಹಾಗೂ ಪಕ್ಷದ ಇತರ ಕೆಲವು ಪ್ರಮುಖ ನಾಯಕರಿಗೆ ವಹಿಸಲಾಯಿತು. ಅಂತ್ಯ ಸಂಸ್ಕಾರವನ್ನು ಹೈದರಾಬಾದ್‌ನಲ್ಲಿ ನಡೆಸುವುದಕ್ಕೆ ಅವರನ್ನು ಬಲವಂತದಿಂದ ಒಪ್ಪಿಸಲಾಯಿತು. ಭಾರತ ಕಂಡ ಮಹಾನ್‌ ಪ್ರಧಾನಿಗಳಲ್ಲಿ ಒಬ್ಬರಾದ ರಾವ್‌ ಅವರ ಕುರುಹು ಕೂಡ ದೆಹಲಿಯಲ್ಲಿ ಇರದಂತೆ ನೋಡಿಕೊಳ್ಳುವುದನ್ನು ನೆಹರೂ-ಗಾಂಧಿಗಳು ಈ ಮೂಲಕ ಖಾತರಿಪಡಿಸಲು ಬಯಸಿದ್ದರು. 

ಹೀಗಿರುವಾಗ, ‘ಮಾಜಿ ಪ್ರಧಾನಿಗಳೆಲ್ಲರಿಗೂ ಅತ್ಯುನ್ನತ ಮಟ್ಟದ ಗೌರವ ನೀಡಲಾಗಿತ್ತು’ ಎಂದು ಪ್ರಿಯಾಂಕಾ ಅವರು ಹೇಳಿರುವ ಮಾತಿನ ಅರ್ಥವೇನು? ‘ಎಲ್ಲ’ ಮಾಜಿ ಪ್ರಧಾನಿಗಳ ಅಂತ್ಯ ಸಂಸ್ಕಾರವು ‘ಅಧಿಕೃತ ಸ್ಥಳ’ಗಳಲ್ಲಿ ನಡೆಯಿತು, ಸಿಂಗ್‌ ಅವರಿಗೆ ಅವಮಾನ ಮಾಡಲಾಯಿತು ಎಂದು ರಾಹುಲ್‌ ಆಡಿರುವ ಮಾತಿನ ಅರ್ಥ ಏನು? ನರಸಿಂಹ ರಾವ್‌ ಪ್ರಕರಣವು ಅಂದಿನ ಪ್ರಧಾನಿಯಾಗಿದ್ದ ಸಿಂಗ್‌ ಅವರ ಅಧಿಕಾರ ಹಾಗೂ ಅವರ ಸ್ಥಾನದ ಬಗ್ಗೆ ಸೂಚ್ಯವಾಗಿ ಒಂದಿಷ್ಟು ಮಾತು ಹೇಳುವಂತಿದೆ. ರಾಷ್ಟ್ರ ರಾಜಧಾನಿಯಲ್ಲಿ ರಾವ್‌ ಅವರ ಅಂತ್ಯ ಸಂಸ್ಕಾರ ನಡೆಯುವಂತೆ ಮಾಡುವ ಸಾಮರ್ಥ್ಯವು ಸಿಂಗ್‌ ಅವರಿಗೆ ಇರಲಿಲ್ಲ. ನೆಹರೂ-ಗಾಂಧಿ ಕುಟುಂಬ ಮಾಡಿದ ಕಿಡಿಗೇಡಿತನದ ಕೃತ್ಯವನ್ನು ಸರಿಪಡಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ. ರಾವ್‌ ಅವರಿಗೆ ದೆಹಲಿಯ ಏಕತಾ ಸ್ಥಳದಲ್ಲಿ ಸೂಕ್ತವಾದ ಸ್ಮಾರಕ ನಿರ್ಮಾಣವಾಗುವಂತೆ ಮೋದಿ ನೋಡಿಕೊಂಡರು, ಅವರಿಗೆ ಅರ್ಹವಾಗಿಯೇ ದೊರಕಬೇಕಿದ್ದ ಭಾರತರತ್ನ ಪುರಸ್ಕಾರ ಸಿಗುವಂತೆ ಮಾಡಿದರು.

1990ರ ದಶಕದ ಆರ್ಥಿಕ ಪರಿವರ್ತನೆಯ ಶ್ರೇಯಸ್ಸನ್ನು ಸಿಂಗ್‌ ಅವರಿಗೆ ನೀಡಲು ನೆಹರೂ-ಗಾಂಧಿ ಕುಟುಂಬದವರು ಯತ್ನಿಸುತ್ತ ಇರುತ್ತಾರಾದಾದರೂ, ದೇಶದ ಆರ್ಥಿಕ ಪುನಶ್ಚೇತನದ ಹಿಂದೆ ಇದ್ದ ರಾವ್‌ ಅವರ ಕೊಡುಗೆಯನ್ನು ಗುರುತಿಸುವ ಕೋಟ್ಯಂತರ ಮಂದಿ ಭಾರತೀಯರು ಇದ್ದಾರೆ. ರಾವ್‌ ಅವರು 1991ರ ಜೂನ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತವು ಕೇವಲ 200 ದಶಲಕ್ಷ ಅಮೆರಿಕನ್‌ ಡಾಲರ್‌ಗಾಗಿ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಬಳಿ ಚಿನ್ನವನ್ನು ಅಡಮಾನವಾಗಿ ಇರಿಸಿತ್ತು. ಏಕೆಂದರೆ ಭಾರತದ ಬಳಿ ಪೆಟ್ರೋಲ್‌ ಖರೀದಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹ ಇರಲಿಲ್ಲ. ರಾವ್‌ ಅವರು 1996ರ ಮೇ ತಿಂಗಳಲ್ಲಿ ಅಧಿಕಾರದಿಂದ ಇಳಿದಾಗ ದೇಶದ ವಿದೇಶಿ ವಿನಿಮಯ ಸಂಗ್ರಹವು 50 ಶತಕೋಟಿ ಅಮೆರಿಕನ್‌ ಡಾಲರ್‌ ಆಗಿತ್ತು. ರಾವ್‌ ಅವರು 2004ರಲ್ಲಿ ಮೃತಪಟ್ಟಾಗ ಈ ಮೊತ್ತವು 146 ಶತಕೋಟಿ ಡಾಲರ್‌ ಆಗಿತ್ತು. ರಾವ್‌ ಅವರ ಹಲವು ಸಾಧನೆಗಳಲ್ಲಿ ಇದು ಒಂದು. ನೆಹರೂ ಮತ್ತು ಇಂದಿರಾ ಗಾಂಧಿ ಅಳವಡಿಸಿಕೊಂಡಿದ್ದ ‘ನೆಹರೂ ಪ್ರಣೀತ ಸಮಾಜವಾದವು’ ದೇಶವನ್ನು ಬೇಡುವ ಹಂತಕ್ಕೆ ತಂದಿರಿಸಿತ್ತು. ಆ ಸಮಾಜವಾದದ ಹಿಡಿತದಿಂದ ದೇಶವನ್ನು ಹೊರತರಲು ರಾವ್‌ ಜಾಣತನದಿಂದ ನೆರವಾದರು. 

ಭಾರತದ ಮಾರುಕಟ್ಟೆಯನ್ನು ಮುಕ್ತಗೊಳಿಸಬೇಕು ಎಂಬ ತೀರ್ಮಾನವನ್ನು ರಾವ್‌ ತೆಗೆದುಕೊಂಡರು. ಅರ್ಥ ಸಚಿವರನ್ನಾಗಿ ಐ.ಜಿ. ಪಟೇಲ್‌ ಅವರನ್ನು ನೇಮಿಸುವುದು ರಾವ್‌ ಅವರ ಮೊದಲ ಆಯ್ಕೆಯಾಗಿತ್ತು. ಆದರೆ ಪಟೇಲ್‌ ಒಲ್ಲೆ ಎಂದಾಗ ರಾವ್‌ ಅವರು ಸಿಂಗ್‌ ಅವರ ಕಡೆ ಮುಖ ಮಾಡಿದರು. ಸಾಧ್ಯವಿರುವ ಎಲ್ಲ ಬಗೆಯ ಬೆಂಬಲ ನೀಡುವುದಾಗಿ ರಾವ್‌ ಅವರು ಸಿಂಗ್‌ ಅವರಿಗೆ ಭರವಸೆ ನೀಡಿದರು. ಸಿಂಗ್‌ ಅವರಿಗೆ ರಾಜಕಾರಣ ಹೊಸದು. ಕಮ್ಯುನಿಸ್ಟರು ಹಾಗೂ ಕಾಂಗ್ರೆಸ್ಸಿನಲ್ಲಿದ್ದ ಸಮಾಜವಾದಿಗಳು ಸಿಂಗ್‌ ಅವರನ್ನು ನಿರಂತರವಾಗಿ ಟೀಕಿಸುತ್ತಿದ್ದರು. ಆದರೆ ಅವರಿಗೆ ವಜ್ರ ಕವಚ ನೀಡಿ ರಕ್ಷಿಸಿದ್ದು ರಾವ್‌ ಅವರು, ಸಿಂಗ್ ಅವರನ್ನು ಪೂರ್ತಿ ಐದು ವರ್ಷಗಳವರೆಗೆ ಹಣಕಾಸು ಸಚಿವರನ್ನಾಗಿ ಇರಿಸಿಕೊಂಡರು. ರಾವ್‌ ಅವರು ರಕ್ಷಣೆ ಕೊಟ್ಟಿರಲಿಲ್ಲ ಎಂದಾದರೆ ಸಿಂಗ್‌ ಅವರಿಗೆ ಆರ್ಥಿಕ ಸುಧಾರಣೆಗಳನ್ನು ತರಲು ಆಗುತ್ತಿರಲಿಲ್ಲ. 

ಹೀಗಿದ್ದರೂ ನೆಹರೂ-ಗಾಂಧಿ ಕುಟುಂಬದವರು ರಾವ್‌ ಅವರನ್ನು ಸಣ್ಣವರನ್ನಾಗಿ ತೋರಿಸಲು ಯತ್ನಿಸುತ್ತಿರುತ್ತಾರೆ. ರಾವ್‌ ಅವರು ಮೃತಪಟ್ಟಾಗ ಅವರಿಗೆ ತಾವು ಅವಮಾನ ಎಸಗಲಿಲ್ಲ ಎಂದು ಸೋಗುಹಾಕಲು ಕೂಡ ಯತ್ನಿಸುತ್ತಿರುತ್ತಾರೆ. ಬಹಳಷ್ಟು ಜನರಿಗೆ ಸತ್ಯ ಗೊತ್ತಿರುವ ಕಾರಣ, ಅದರಲ್ಲೂ ಮುಖ್ಯವಾಗಿ ರಾವ್‌ ಮೃತಪಟ್ಟ ನಂತರ ಏನಾಯಿತು ಎಂಬುದು ತಿಳಿದಿರುವುದರಿಂದ, ಇಂತಹ ಕೆಲಸಗಳು ಪ್ರಯೋಜನಕ್ಕೆ ಬರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.