ADVERTISEMENT

ನುಡಿ ಬೆಳಗು: ಹೆತ್ತವರು, ಮಕ್ಕಳು ಹೊರೆಯಲ್ಲ

ಡಾ.ದಾದಾಪೀರ್ ನವಿಲೇಹಾಳ್
Published 8 ಸೆಪ್ಟೆಂಬರ್ 2025, 0:13 IST
Last Updated 8 ಸೆಪ್ಟೆಂಬರ್ 2025, 0:13 IST
   

ಅದೊಂದು ಪುಟ್ಟ ಸಂಸಾರ. ತಂದೆ ತಾಯಿ ಇಬ್ಬರೂ ಹೊರಗೆ ಹೋಗಿ ದುಡಿಯಬೇಕು. ತಮ್ಮ ದೇಹ ಮತ್ತು ಆತ್ಮಗಳ ಮಿಲನದ ಫಲಶ್ರುತಿಗಳಂತಿರುವ ಮಗ, ಮಗಳು. ಅಣ್ಣನಿಗೆ ತಂಗಿ, ತಂಗಿಗೆ ಅಣ್ಣನ ಹೊರತು ಬೇರೆ ಪ್ರಪಂಚವಿಲ್ಲ. ದುಡಿಮೆಯಿಂದ ಸಂಜೆ ಮನೆಗೆ ಹಿಂತಿರುಗುವವರೆಗೆ ಕಂದಮ್ಮಗಳು ಹೇಗಿರುತ್ತವೆಯೋ, ಏನು ತಿನ್ನುತ್ತವೆಯೋ ಎಷ್ಟು ಅಳುತ್ತವೆಯೋ ಅನ್ನುವ ಆತಂಕ ಹೆತ್ತೊಡಲಿಗೆ. ಕೆಲಸಕ್ಕೆ ಹೋಗುವಾಗಿನ ಆತುರಕ್ಕಿಂತ ಕೆಲಸ ಮುಗಿಸಿ ಬರುವಾಗಿನ ಅವಸರಕ್ಕೆ ವೇಗ ಆವೇಗ ಹೆಚ್ಚು. ಮಕ್ಕಳ ಕಣ್ಣಿಗೆ ಕಣ್ಣಿಟ್ಟು ತಬ್ಬಿ ಮುದ್ದಾಡಿದರೆ ಅಷ್ಟೇ ಸಮಾಧಾನ. 

ಅಂಕುಶವಿಟ್ಟಷ್ಟೂ ಹರೆಯಕ್ಕೆ ತಿಮಿರು ಜಾಸ್ತಿ. ಅಪ್ಪ ಅವ್ವರ ಮಾತಿನ ಮಾಧುರ್ಯ ಕಳೆದು ಕಹಿಯಾಗುವ ಹೊತ್ತು. ಮೂರು ಹೊತ್ತೂ ಮೊಬೈಲು, ಹೊರಗಿನ ಚಪಲ. ಅಮ್ಮನ ಅಡಿಗೆಗೆ ಮೊದಲಿನ ರುಚಿಯಿಲ್ಲ. ಅಪ್ಪನ ಹೆಗಲು ವಿಸ್ತಾರವಾಗುತ್ತಲೇ ಇದೆ. 

ಓದು ಬರಿ, ಓದು ಬರಿ. ದಿನದಿನವೂ ಇದೇ ಗೋಳು. ಆಟವಿಲ್ಲ ನೋಟವಿಲ್ಲ. ಅಕ್ಕಪಕ್ಕದವರೆಲ್ಲ ಹಾಗೆ. ನಮ್ಮ ಮಕ್ಕಳೇಕೆ ಹೀಗೆ? ಅನವರತವೂ ಹೋಲಿಕೆಯ ಕಿಚ್ಚು. ತಮ್ಮಂತಾಗಬಾರದೆಂದೇ ಹಪಹಪಿ. ನಮ್ಮದೇ ನಿರೀಕ್ಷೆಗಳಿವೆ, ದೇಹ ಮತ್ತು ಮನಸ್ಸು ಅಪ್ಪ ಅವ್ವರ ಹೊರತಾಗಿ ಬೇರೇನನ್ನೋ ಬಯಸುತ್ತವೆ. ಇದು ಅವರಿಗೆ ಯಾಕೆ ಅರ್ಥವಾಗುವುದಿಲ್ಲ? ಮೊಬೈಲು ಹಿಡಿದರೆ ತಪ್ಪು, ಕದ ಮುಚ್ಚಿಕೊಂಡರೆ ಕಷ್ಟ. ಸ್ವಿಚ್ ಆನ್ ಮಾಡಿದರೆ ಓಡುವ, ಸ್ವಿಚ್ ಆಫ್ ಮಾಡಿದರೆ ಎಲ್ಲಿರುತ್ತವೆಯೋ ಅಲ್ಲಿಯೇ ನಿಂತು ಬಿಡುವ ಭಾವಶೂನ್ಯ ಮೆಷಿನ್‌ಗಳೇ ನಾವು? ಇದು ಮಕ್ಕಳ ಬೆನ್ನು ಬಿಡದ ಬವಣೆ.

ADVERTISEMENT

ಯುವಜನ ನೈತಿಕ ನಿಯಂತ್ರಣವಿಲ್ಲದೆ ದಾರಿ ತಪ್ಪುತ್ತಿದ್ದಾರೆ ಎನ್ನುವುದು ದೊಡ್ಡವರ ಸಾಮಾನ್ಯ ಅಳಲು. ಈ ಅಳಲಿನಲ್ಲಿ ಹಿರಿಯರ ಪಾಲೂ ಇದೆ. ತಮ್ಮ ಕಷ್ಟನಿಷ್ಠುರಗಳನ್ನು ಧಾರಾವಾಹಿಯಂತೆ ಪ್ರಲಾಪಿಸುವ ತಂದೆತಾಯಿಯರು ಮಕ್ಕಳ ಮೇಲೆ ಅಸಾಮಾನ್ಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಮಕ್ಕಳ ಆಸಕ್ತಿ, ಕೌಶಲಗಳನ್ನು ಅರಿಯುತ್ತಾ ಅವರ ಪ್ರತಿಭಾವಿಲಾಸಕ್ಕೆ ಪ್ರೇರಣೆಯಾಗಬೇಕಾದ ತಂದೆತಾಯಿಯರು ಅನಗತ್ಯ ಒತ್ತಡಗಳನ್ನು ಅವರ ಮೈ ಮನಸ್ಸಿಗೆ ತುಂಬುತ್ತಾರೆ. ಅಪರೂಪಕ್ಕಾದರೂ ಮಕ್ಕಳೊಂದಿಗೆ ಮಕ್ಕಳಾಗಿ ನಲಿದು ಅಕ್ಷರಲೋಕದ ಹೊರಗಿನ ಗಿಡಮರ , ಬೆಟ್ಟ ಗುಡ್ಡ, ನದಿ ಸಾಗರ, ತಾರೆ ನೀಹಾರಿಕೆಗಳ ಉಲ್ಲಾಸದಲ್ಲಿ ಅವರನ್ನು ನಾದಬೇಕಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ ‘ನಿಮ್ಮಿಂದ ಇದು ಸಾಧ್ಯ, ಫಲಿತಾಂಶ ಏನೇ ಬರಲಿ, ನಿಮ್ಮ ಬೆನ್ನಿಗೆ ನಾವಿದ್ದೇವೆ’ ಅನ್ನುವ ಭರವಸೆಯ ಬಲ ತುಂಬಿ ನಂಬಿ ನಡೆದರೆ ಅವರು ಅಸಾಧ್ಯಗಳನ್ನೇ ಸಾಧಿಸಿಬಿಡಬಲ್ಲರು.

ಹರೆಯವೆಂದರೆ ವಿವೇಕಶೂನ್ಯ ಉತ್ಸಾಹದ ಚಿಲುಮೆ. ಅದು ಮೂಗುದಾಣವಿಲ್ಲದ ತುಂಡುಗೂಳಿಯಂತೆ. ಅಪ್ಪ ಅವ್ವರನ್ನು ಅದು ತಿವಿಯದೇ ಬಿಡುವುದಿಲ್ಲ. ಆದರೆ ಅವರನ್ನು ತಮ್ಮ ಸ್ನೇಹವಲಯದ ಧ್ರುವ ತಾರೆಗಳಂತೆ ಎದೆಯಲ್ಲಿಟ್ಟುಕೊಂಡರೆ ತಾಪ ತಣಿಯುತ್ತದೆ. ಮನೆಯಿಂದ ಹೊರಗೆ ಹೊರಡುವ ಮೊದಲು ಇಂಥ ಕಡೆ ಹೊರಟಿದ್ದೇನೆ, ಇಂಥವರ ಜೊತೆ ಇರುತ್ತೇನೆ ಇಷ್ಟು ಹೊತ್ತಿಗೆ ಬರುತ್ತೇನೆ ಎಂದು ಮುಕ್ತ ಮನಸ್ಸಿನಿಂದ ಹೇಳಿದರೆ ಹಡೆದವರ ಕಾಳಜಿಪೂರ್ಣ ಆತಂಕ ಕಡಿಮೆಯಾಗಿ ನಂಬಿಕೆ ಹುಟ್ಟುತ್ತದೆ. ಅವರಿಂದ ಏನನ್ನೋ ಮುಚ್ಚಿಟ್ಟರೆ ಮಕ್ಕಳು ತಮ್ಮನ್ನು ವಂಚಿಸುತ್ತಿದ್ದಾರೆ ಎಂಬ ನೋವು ಅವರನ್ನು ಕಾಡುತ್ತದೆ. ಅಪ್ಪ ಅಮ್ಮ ಯಾವತ್ತೂ ಮಕ್ಕಳ ಶತ್ರುಗಳಾಗುವುದಿಲ್ಲ. ಅವರದು ಕಪಟವಿಲ್ಲದ ಕರುಳು. ಸಾವಿನ ನಂತರವೂ ಮಕ್ಕಳೆದೆಯ ಉಸಿರಾಗಿ ಅವರ ಪ್ರಾಣ ಜೀವಂತವಾಗಿರುತ್ತದೆ. ಸರಿದಾರಿಯಲ್ಲಿ ನಡೆಯುವ ಮಕ್ಕಳನ್ನು ಹೆಗಲುತುಂಬ ಹೊತ್ತು ಮೆರೆಯುತ್ತವೆ, ಜಗತುಂಬಿ ಹಾಡಿ ಹರಸುತ್ತವೆ ಆ ಮಾಗಿದ ಮನಸುಗಳು. ಅಪ್ಪ ಅಮ್ಮ ಮಡಿಲ ಕುಡಿಗಳ ಪಾಲಿನ ವರಗಳು. ನಿತ್ಯಜತನದಿಂದ ಅವುಗಳನ್ನು ಕಾಪಿಟ್ಟುಕೊಳ್ಳುವ ವಿವೇಕಯುತ ಧನ್ಯತೆಯಿದ್ದರೆ ಬದುಕು ಅರ್ಥಪೂರ್ಣ. ಹೆತ್ತವರು ಮತ್ತು ಮಕ್ಕಳು ಪರಸ್ಪರ ಆಸರೆಯೇ ಹೊರತು ಹೊರೆಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.