ADVERTISEMENT

Pv Web Exclusive| ಜನಸಾಮಾನ್ಯರ ಗೋಳು ಕೇಳೋರೆ ಇಲ್ಲ

ವಿಶ್ವನಾಥ ಎಸ್.
Published 17 ಅಕ್ಟೋಬರ್ 2020, 9:56 IST
Last Updated 17 ಅಕ್ಟೋಬರ್ 2020, 9:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಜೆಗಳೇ ಪ್ರಭುಗಳು... ಗ್ರಾಹಕರ ರಕ್ಷಣೆ ಎನ್ನುವುದೆಲ್ಲವೂ ಕೇಳಲು ಬಹಳ ಹಿತಕರ ಅನ್ನಿಸುತ್ತದೆ. ವಾಸ್ತವದಲ್ಲಿ ಜನಸಾಮಾನ್ಯರ ಗೋಳು ಕೇಳುವವರೇ ಇಲ್ಲ. ಇದೇನಿದು ಏಕಾಏಕಿ ಈ ರೀತಿಯ ಹೇಳಿಕೆ ಎನ್ನುವಿರಾ? ಹೌದು, ಇದಕ್ಕೆ ಪೂರಕವಾದ ಕೆಲವು ನಿದರ್ಶನಗಳೂ ಇವೆ ಒಮ್ಮೆ ಕಣ್ಣಾಡಿಸಿ...

ಘಟನೆ 1: ಪ್ರತಿ ತಿಂಗಳ ಎಂಟನೇ ತಾರೀಕು ವಾಟರ್‌ ಬಿಲ್ ರೀಡಿಂಗ್‌ ಮಾಡಬೇಕು. ಆದರೆ, ಆತ ಬರುವುದೇ 14ರಂದು. ಈ ಬಗ್ಗೆ ಕೇಳಿದರೆ ಉಡಾಫೆಯ ಉತ್ತರ. ‘ನನಗೆ ಬೇರೆ ಕೆಲಸಗಳು ಸಾಕಷ್ಟಿವೆ. ನನಗೆ ಆದಾಗ್ಲೇ ಬರೋದು, ನಿಮಗೆ ಸರಿಯಾದ ಬಿಲ್ ಬೇಕು ಅಂತಾದ್ರೆ ನಿಮ್ಮ ಮನೆಯ ಗೋಡೆಯ ಮೇಲೆ 8 ನೇ ತಾರೀಖಿನ ಮೀಟರ್‌ ರೀಡಿಂಗ್‌ ಬರೆದಿಡಿ’ ಅಂತ ದಬಾಯಿಸಿದ. ಸರಿಯಾಗಿ ಕೆಲಸ ಮಾಡಿ ಅಂದಿದ್ದಕ್ಕೆ, ‘ಮಾಡಲ್ಲ, ಯಾರಿಗ್‌ ಹೇಳ್ತಿಯಾ, ಕಂಪ್ಲೇಂಟ್‌ ಮಾಡ್ತಿಯಾ ಮಾಡ್ಕೊ ಹೋಗು‘ ಅಂತ ಕೂಗಾಡಿ ಹೋದ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನ ಮಾತ್ರ ಆಗಲೇ ಇಲ್ಲ.

ಘಟನೆ 2: ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಐ.ಟಿ. ಕಂಪನಿಯ ಕೆಲಸ ಕಳೆದುಕೊಂಡ ಸ್ನೇಹಿತ ತರಕಾರಿ ಅಂಗಡಿ ಇಟ್ಟ. ಕಂಪನಿ ಹೆಸರಿನಲ್ಲಿದ್ದ ಪೋಸ್ಟ್‌ ಪೇಯ್ಡ್‌ ಸಿಮ್‌ ಅನ್ನು ಪ್ರೀಪೇಯ್ಡ್‌ಗೆ ಬದಲಿಸಲು ಮುಂದಾದ. ಆಗ ಆ ದೂರಸಂಪರ್ಕ ಸೇವಾ ಕಂಪನಿಯ ನಿಯಮ ಕೇಳಿ ದಂಗಾದ! ಪ್ರೀಪೇಯ್ಡ್‌ಗೆ ಬದಲಿಸಬೇಕು ಅಂತಾದರೆ ಅದಕ್ಕೂ ಮೊದಲು ಅದನ್ನು ಕಂಪನಿ ಹೆಸರಿನಿಂದ ನಿಮ್ಮ ಹೆಸರಿಗೆ ಮಾಡಬೇಕು. ಹಾಗಾದ ನಾಲ್ಕು ತಿಂಗಳ ಬಳಿಕ ಪ್ರೀಪೇಯ್ಡ್‌ ಆಗಲಿದೆ ಎಂದು ಷೋರೂಂನಲ್ಲಿ ತಿಳಿಸಿದರು. ಪೋಸ್ಟ್‌ ಪೇಯ್ಡ್‌ ದುಬಾರಿ ಅದನ್ನು ಕಟ್ಟಲು ಸಾಧ್ಯ ಇಲ್ಲ ಅನ್ನೋ ಕಾರಣಕ್ಕೆ ಪ್ರೀಪೇಯ್ಡ್‌ಗೆ ಬರುತ್ತಿದ್ದೇನೆ, ಹೀಗಿರುವಾಗ ನಾಲ್ಕು ತಿಂಗಳು ಮತ್ತೆ ಅದೇ ಪ್ಲಾನ್‌ ಅಲ್ಲಿ ಏಕೆ ಇರಬೇಕು ಎನ್ನುವುದು ಅವನ ಪ್ರಶ್ನೆ. ನಿಯಮ ಇರೋದೆ ಹಾಗೆ ಅನ್ನೋದು ಷೋರೂಂನಲ್ಲಿ ಸಿಕ್ಕ ಉತ್ತರ. ಕೊನೆಗೆ ಆತ ನನ್ನ ಬಳಿ ಹೇಳಿದ. ಅದೇ ದೂರಸಂಪರ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯಸ್ಥರೊಬ್ಬರ ಬಳಿ ಸಮಸ್ಯೆ ಹೇಳಿಕೊಂಡೆ. 10 ನಿಮಿಷದಲ್ಲೇ ಸಮಸ್ಯೆ ಬಗೆಹರಿಯಿತು. ಹಾಗೆ ಮಾಡಲು ಬರುವುದಿಲ್ಲ, ನಿಯಮದಲ್ಲಿ ಅವಕಾಶ ಇಲ್ಲ ಎಂದೆಲ್ಲಾ ಹೇಳುತ್ತಿದ್ದ ಷೋರೂಂನ ಸದಸ್ಯ ತೆಪ್ಪಗೆ ಪ್ರೀಪೇಯ್ಡ್‌ ಪ್ಲಾನ್‌ ಬದಲಾಯಿಸಿಕೊಟ್ಟರು.

ADVERTISEMENT

ಘಟನೆ 3: ಮೆಜೆಸ್ಟಿಕ್‌ಗೆ ಹೋಗಲು ಆ್ಯಪ್‌ ಮೂಲಕ ಆಟೊ ಬುಕ್‌ ಮಾಡಿದೆವು. ಬುಕ್‌ ಮಾಡುವಾಗ ಇದ್ದ ಮೊತ್ತ ₹ 110. ಆದರೆ ಮೆಜೆಸ್ಟಿಕ್‌ನಲ್ಲಿ ಇಳಿದು ಪೇ ಮಾಡಲು ಹೋದಾಗ ಅದು ತೋರಿಸಿದ್ದು ₹ 150. ಹೀಗೇಕೆ ಎಂದು ಪ್ರಶ್ನೆ ಮಾಡಿದರೆ, ಟ್ರಾಫಿಕ್‌ ಇತ್ತು ಅಂತ ಬೇರೆ ಕಡೆಯಿಂದ ಬಂದಿದ್ದೇನೆ ಅದಕ್ಕೆ ದುಡ್ಡು ಜಾಸ್ತಿ ಆಗಿದೆ ಅಂತ ಚಾಲಕ ತಿಳಿಸಿದ. ನಿಮಗ್ಯಾರು ಬರಲು ಹೇಳಿದ್ದು? ನಾವೇನು ಅರ್ಜೆಂಟ್ ಇದೆ ಎಂದು ಹೇಳಿರಲಿಲ್ಲವಲ್ಲಾ ಎಂದಿದ್ದಕ್ಕೆ, ನಿಮ್ಮ ಅನುಕೂಲಕ್ಕೆ ಬಂದಿದ್ದು, ನನಗೆ ಅದೆಲ್ಲಾ ಗೊತ್ತಿಲ್ಲ. ಎಷ್ಟು ದುಡ್ಡಾಗಿದೆ ಅಷ್ಟು ಕೊಡಿ ಅಂತ ಗಲಾಟೆ ಮಾಡಿದ. ಆತ ಕೇಳಿದಷ್ಟು ಕೊಟ್ಟಾಯಿತು. ಆ ಬಗ್ಗೆ ದೂರು ನೀಡಲು ಹೋದರೆ, ಕಂಪನಿ ಕೇಳಿದ ನೂರಾರು ಪ್ರಶ್ನೆಗೆ ತಲೆ ಹಾಳಾಗಿ ನೀವು ಬೇಡ, ನಿಮ್ಮ ದುಡ್ಡೂ ಬೇಡ ಎಂದು ವಿಷಯ ಅಲ್ಲಿಗೇ ಕೈಬಿಟ್ಟೆವು.

ಘಟನೆ 4: ಸ್ನೇಹಿತರೊಬ್ಬರು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹಾಗೂ ಪಿಪಿಎಫ್‌ ಖಾತೆ ಹೊಂದಿದ್ದರು. ತಮ್ಮ ಬಳಿ ಹಣ ಇದ್ದಾಗ ಪಿಪಿಎಫ್‌ ಖಾತೆಗೆ ಹಾಕುವುದು ಅವರ ರೂಢಿ. ಜುಲೈನಲ್ಲಿ ಪಿಪಿಎಫ್‌ ಖಾತೆಗೆ ಬ್ಯಾಂಕ್‌ ಖಾತೆಯಿಂದ ವರ್ಗಾಯಿಸುವಂತೆ ಚೆಕ್‌ ನೀಡಿದರು. ಆದರೆ, ಆ ದಿನ ಸರ್ವರ್ ಡೌನ್ ಇದ್ದಿದ್ದರಿಂದ ನಾಳೆ ಮಾಡುವುದಾಗಿ ಹೇಳಿ ಚೆಕ್ ಅನ್ನು ಬ್ಯಾಂಕ್‌ ಅಧಿಕಾರಿ ತಮ್ಮ ಬಳಿಯೇ ಇಟ್ಟುಕೊಂಡರು. ಮಾರನೇ ದಿನ ಪಿಪಿಎಫ್‌ ಖಾತೆಗೆ ಹಣ ವರ್ಗಾವಣೆ ಆದ ಮೆಸೇಜ್‌ ಬಂತು. ಆದರೆ, ವಾರ ಕಳೆದ ಮೇಲೆ ಇದ್ದಕ್ಕಿದ್ದಂತೆಯೇ ಅವರ ಖಾತೆಯಿಂದ ಚೆಕ್‌ ಕೊಟ್ಟಿದ್ದಷ್ಟು ಮೊತ್ತ ಕಟ್ ಆಯಿತು. ಅದೇಕೆ ಎಂದು ಬ್ಯಾಂಕ್‌ಗೆ ಕರೆ ಮಾಡಿ ಕೇಳಿದರೆ, ಬೇರೆಯವರ ಪಿಪಿಎಫ್‌ ಖಾತೆಗೆ ಹೋಗಬೇಕಿದ್ದ ಚೆಕ್ ಅನ್ನು ತಪ್ಪಾಗಿ ನಿಮ್ಮ ಖಾತೆಗೆ ಹಾಕಿದ್ದೆವು ಹಾಗಾಗಿ ಈಗ ನಿಮ್ಮ ಖಾತೆಯಿಂದ ಮೊತ್ತವನ್ನು ಕಟ್‌ ಮಾಡಿ ಅವರ ಖಾತೆಗೆ ವರ್ಗಾಯಿಸಿದ್ದೇವೆ ಎಂದು ಉತ್ತರಿಸಿದರು. ಅದ್ಹೇಗೆ ನನಗೆ ತಿಳಿಸದೇ ನನ್ನ ಖಾತೆಯಿಂದ ಹಣ ಬೇರೆಯವರಿಗೆ ವರ್ಗಾವಣೆ ಮಾಡಿದಿರಿ ಎಂದು ಪ್ರಶ್ನೆ ಮಾಡಿದ್ದಕ್ಕೆ, ನಾವು ಮ್ಯಾನೇಜರ್‌ ಬಳಿ ಅನುಮತಿ ಪಡೆದೇ ಹಾಗೆ ಮಾಡಿದ್ದೇವೆ ಎಂದು ಕಾನೂನು ಹೇಳಿದರು. ಹಾಗಾದರೆ ನನ್ನ ಚೆಕ್‌ ಎಲ್ಲಿ ಹೋಯಿತು ಅದನ್ನು ಕೊಡಿ ಎಂದರೆ ಬ್ಯಾಂಕ್‌ನವರು ಅದನ್ನೂ ಕಳೆದುಕೊಂಡಿದ್ದರು! ಈ ರೀತಿ ಒಂದೊಮ್ಮೆ ಗ್ರಾಹಕರು ತಪ್ಪು ಮಾಡಿದ್ದರೆ ಇಷ್ಟು ಸಲೀಸಾಗಿ ಎಲ್ಲವೂ ನಡೆಯುತ್ತಿತ್ತೆ!? ತಿಂಗಳುಗಳೇ ಬೇಕಿತ್ತು ಸರಿಯಾಗಲು. ಬ್ಯಾಂಕ್‌ನವರೇ ತಪ್ಪು ಮಾಡಿಕೊಂಡಾಗ ಅದನ್ನು ಸರಿಪಡಿಸಿಕೊಳ್ಳಲು ಯಾವ ದಾರಿ ಬೇಕಾದರೂ ಸಿಗುತ್ತದೆ. ಅದೇ ಗ್ರಾಹಕರಿಂದ ತಪ್ಪಾದರೆ ಮಾತ್ರ, ನಿಮ್ಮದೇ ತಪ್ಪು, ತಕ್ಷಣಕ್ಕೆ ಆಗುವುದಿಲ್ಲ. ಮ್ಯಾನೇಜರ್‌ ಹೇಳಬೇಕು, ಹೆಡ್‌ ಆಫೀಸ್‌ಗೆ ಹೋಗಿ ಎನ್ನುವ ಸಿದ್ಧ ಉತ್ತರಗಳು ಬರುತ್ತವೆ.

ನಿತ್ಯದ ಜಂಜಾಟದಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ಬಗೆಹರಿಸಿಕೊಳ್ಳಲು ಸಮಯ ಇರುವುದಿಲ್ಲ. ಕೆಲವೊಮ್ಮೆ ಆ ಬಗ್ಗೆ ತಲೆ ಕೆಡಿಸಿಕೊಂಡು, ಸೋತು ಸುಮ್ಮನಾಗಿಬಿಡುತ್ತೇವೆ. ಅಧಿಕಾರ ಇಲ್ಲವೇ ಪ್ರಭಾವಿಗಳ ಪರಿಚಯ ಇಲ್ಲದೇ ಇದ್ದರೆ ಜನಸಾಮಾನ್ಯರ ಸಮಸ್ಯೆಗಳನ್ನು ಯಾರೂ ಕೇಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.