ಇದೀಗ ಎಲ್ಲೆಡೆ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಕಾಲ ಕಾಲಕ್ಕೆ ಭಗವದ್ಗೀತೆ ಮನುಕುಲದ ಕೈ ದೀವಿಗೆ ಆಗಿತ್ತು. ಇಂದಿನ ಆರ್ಟಿಫಿಷಿಯಲ್ ಇಂಟೆಲಿಜೆAಟ್ ಮೇನಿಯಾದಲ್ಲಿರುವ ನಾವುಗಳು ಬದುಕಿನ ಮಹತ್ವ, ಅದರ ಸಾರ ಸರ್ವಸ್ವವನ್ನು ಕಳೆದುಕೊಳ್ಳುತ್ತಿದ್ದೇವೆ. ನೀರಸ ಮತ್ತು ನಿಸ್ಸಾರದತ್ತ ವಾಲುತ್ತಿದ್ದೇವೆ. ಇದರಿಂದ ಪ್ರತಿಯೊಬ್ಬರಲ್ಲೂ ಏನೋ ಒಂದು ದುಗುಡ, ದುಮ್ಮಾನ, ಆತಂಕ, ಆವೇಶ, ಹತಾಶೆ ಮತ್ತು ಹೃದ್ಗತವಾದ ತೊಂದರೆಗಳು, ಹೇಳಿಕೊಳ್ಳಲಾಗದ ಯಾತನೆಗಳನ್ನು ಅನುಭವಿಸುತ್ತಿದ್ದೇವೆ. ಈ ಎಲ್ಲ ಲೌಕಿಕ ರೋಗಗಳಿಗೆ ರಾಮಬಾಣವಾಗಿ ಭಗವದ್ಗೀತೆ ಇಂದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ.
ಒಂದೊಂದು ದಶಕದ ಅವಧಿಯಲ್ಲಿ ಒಂದೊಂದು ರೀತಿಯ ವಿದ್ಯಮಾನಗಳು ನಡೆಯುತ್ತಿರುತ್ತವೆ. ಆಗ ಒಂದೊಂದು ಪ್ರದೇಶದಲ್ಲಿ ಒಬ್ಬೊಬ್ಬ ದಾರ್ಶನಿಕರನ್ನು ಭಗವಂತನೇ ಸೃಷ್ಟಿಸಿರುತ್ತಾನೆ. 1970-80 ಮತ್ತು 90ರ ದಶಕದಲ್ಲಿ ದಾರ್ಶನಿಕರಾಗಿ, ಸಮಾಜ ಸುಧಾರಕರಾಗಿ ಮತ್ತು ಪತ್ರಿಕೋದ್ಯಮದ ಆಳ, ಹರಿವನ್ನು ಅರ್ಥೈಸಿಕೊಂಡು ಅದಕ್ಕೊಂದು ಅರ್ಥ ನೀಡಲು ಬಿ.ವಿ.ನರಸಿಂಹಮೂರ್ತಿರಾಯರಂತಹ ನೇರ, ನಿಷ್ಠುರಿ ಪತ್ರಕರ್ತರು ಇದ್ದರು. ಸಮಾಜದ, ಸರ್ಕಾರದ ವಿವಿಧ ಇಲಾಖೆಗಳ ಹಲವು ಜಾಡ್ಯಗಳಿಗೆ, ಸಮಸ್ಯೆಗಳಿಗೆ ಮದ್ದು ನೀಡುತ್ತಿದ್ದರು. ಹೀಗಾಗಿ ಅವರಿಂದ ಮಾರ್ಗದರ್ಶನ ಪಡೆದವರೆಷ್ಟೋ. ಆದರೆ, ಹೀಗೆ ಅವರಿಂದ ಬೋಧನೆಗೊಳಪಟ್ಟವರು ಇಂದು ಉನ್ನತ ಮಟ್ಟದ ನಾಯಕರಾಗಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಾಗಿದ್ದಾರೆ. ವೈದ್ಯರು ನೀಡುವ ಮಾತ್ರೆ `ನಾಲಿಗೆಗೆ ಅಂಟಿಕೊಂಡರೆ ಕಹಿ, ಗಂಟಲು ಮೂಲಕ ಉದರಕ್ಕೆ ಹೋದಾಗ ಸಿಹಿ. ಹಾಗೆ ಬಿ.ವಿ.ನರಸಿಂಹಮೂರ್ತಿ ಅವರ ಕಹಿ ಮಾತು, ಮಾರ್ಗದರ್ಶನ ಇದ್ದವು. ಕಠಿಣ ನಿರ್ಧಾರ, ಕಠಿಣ ಮಾತು, ಕಠಿಣ ನಡೆ, ಇದು ಅವರ ಗುಣಸ್ವಭಾವ ಆಗಿತ್ತು ಎಂದು ಅವರ ಒಡನಾಡಿಗಳು, ಅವರೊಂದಿಗೆ ಇದ್ದ ಪ್ರೀತಿ ಪಾತ್ರರ ಅಭಿಮತ.
ಸಮಾಜ ಸುಧಾರಕರಾಗಿದ್ದರು:
ಇಂದಿನ ಸಮಾಜದಲ್ಲಿ ಖರ್ಚು ವೆಚ್ಚಕ್ಕೆ ಹೇರಳವಾದ ಹಣ, ಅಂತಸ್ತು, ವೈಭೋಗ ಇದೆ. ಆದರೆ ಇಚ್ಛೆಯನರಿತು ನಡೆವ ಸತಿ ಇಲ್ಲ, ಅಂತಹ ಸತಿಯರಿದ್ದರೂ ಕೃಷ್ಣನಷ್ಟು ಪ್ರೀತಿಸುವ ವ್ಯವಧಾನ ಗಂಡಸರಿಗಿಲ್ಲ. ರಾಮನಂತಹ ಪತಿ ಇದ್ದರೂ ಅರ್ಥ ಮಾಡಿಕೊಳ್ಳದಂತಹ ಎಷ್ಟೋ ಸತಿಯರಿದ್ದಾರೆ. ಗೊಂದಲ, ಗೌಜು, ಗದ್ದಲಗಳ ನಡುವೆ ಹೇಗೂ ಜೀವನ ನಡೆಸುವವರ ಸಮೂಹವೇ ಇಂದು ಕಾಣಬರುತ್ತಿದೆ. ಎಷ್ಟೇ ಜ್ಞಾನಿಗಳಾದರೂ, ಎಷ್ಟೇ ಓದಿಕೊಂಡರೂ, ಗೊಂದಲಕ್ಕೊಳಗಾದಾಗ ಜ್ಯೋತಿಷಿಗಳನ್ನು ಅವಲಂಬಿಸಿ ಜೀವನ ಮಾಡುವ ಮಾನಸಿಕತೆಯುಳ್ಳ ಜನರೂ ಈ ಸಮಾಜದಲ್ಲಿದ್ದಾರೆ. ಇದರಿಂದ ಹೊರತುಪಡಿಸಿ ಎಲ್ಲ ವರ್ಗದ ಜನರಿಗೆ, ಎಲ್ಲ ವರ್ಗದ ವ್ಯಕ್ತಿಗಳಿಗೆ, ಎಲ್ಲ ಕ್ಷೇತ್ರದ ಸಾಧಕರಿಗೆ ಭಗವದ್ಗೀತೆ ಇಂದು ಅತ್ಯಂತ ಪ್ರಸ್ತುತ ಎನ್ನುವುದನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರೂಪಿಸಿದ್ದಾರೆ. ಬಿ.ವಿ.ನರಸಿಂಹಮೂರ್ತಿ ಅವರೂ ಕೂಡ ತಮ್ಮ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಭಗವದ್ಗೀತೆಯನ್ನು ಪ್ರೇರಣೆಯಾಗಿ ಪಡೆದಿದ್ದರು. ನೇರ, ನಿಷ್ಠುರ ಮತ್ತು ಕೋಪದಿಂದ ಯಾರು ಮಾತನಾಡುತ್ತಾರೋ ಅವರಲ್ಲಿ ಕಪಟತನ ಇರುವುದಿಲ್ಲ. ಕಾರುಣ್ಯ ಇರುತ್ತದೆ ಎನ್ನುವ ಮಾತು ಎಷ್ಟು ಸತ್ಯವೋ, ಅಷ್ಟೇ ಸತ್ವಯುತವಾಗಿ ಸಮಾಜವನ್ನು ಸುಧಾರಿಸಬಲ್ಲರು ಎನ್ನುವುದಕ್ಕೆ ನಮ್ಮ ಬಿ.ವಿ.ನರಸಿಂಹಮೂರ್ತಿ ನಿದರ್ಶನರಾಗಿದ್ದಾರೆ.
ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ದಿವಂಗತ ಕೆ.ಪಟ್ಟಾಭಿರಾಮನ್ ಅವರ ಆದರ್ಶಗಳಿಗೆ ಮಾರು ಹೋಗಿ ಅವರನ್ನೇ ಗುರುವಿನಂತೆ ಸ್ವೀಕರಿಸಿ ಅವರ ಮಾರ್ಗದರ್ಶನಕ್ಕೆ ಪ್ರತಿಯಾಗಿ 1978ರಲ್ಲಿ ಕೋಲಾರ ಜಿಲ್ಲೆಯಲ್ಲಿ 'ಕೋಲಾರವಾಣಿ’ ದಿನಪತ್ರಿಕೆ ಪ್ರಾರಂಭಿಸಿದರಷ್ಟೇ ಅಲ್ಲದೆ, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಹೋರಾಟಗಳನ್ನು ರೂಪಿಸಿ ಯಶಸ್ಸು ಕಂಡರು.
ಪತ್ರಕರ್ತನಲ್ಲಿ ಸಂತನ ಉದಯ:
ಬಿ.ವಿ.ನರಸಿಂಹಮೂರ್ತಿ ಪತ್ರಕರ್ತರಾಗಿ ಸಾಕಷ್ಟು ಜನಪ್ರಿಯತೆ ಪಡೆದಷ್ಟೇ ನಿಷ್ಠುರಗಳನ್ನೂ ಕಂಡವರು. ಅವರ ನಿಷ್ಠುರತೆಯಿಂದ ಒಬ್ಬಿಬ್ಬರಿಗೆ ನೋವಾಗಿರಬಹುದೇನೋ... ಆದರೆ ಅವರಿಂದ ಮಾತ್ರ ಕೋಲಾರದಂತಹ ಬಯಲುಸೀಮೆಯಲ್ಲಿ ಭವ್ಯ ಬೆಳಗು ಮೂಡಿದೆ. ಪತ್ರಕರ್ತರಾಗಿ ಲೌಕಿಕ ಜಗತ್ತಿನ ಎಲ್ಲ ರೀತಿಯ ಆಯಾಮಗಳನ್ನು ತಮ್ಮ ದೃಷ್ಟಿಕೋನದಲ್ಲಿ ವಿಮರ್ಶಿಸಿ, ತಮ್ಮ ಬಳಿ ಬರುತ್ತಿದ್ದ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತ ಸಮಾಜದಲ್ಲಿ ಶಿಕ್ಷಕರಂತೆ ಕಾರ್ಯ ನಿರ್ವಹಿಸುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಮುಖ ಸ್ಥಾನದಲ್ಲಿರುವ ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಟೀಕಿಸುವವರೆಗೂ ಬಿಡುತ್ತಿರಲಿಲ್ಲ. ಜಮದಗ್ನಿಯಂತೆ ಕೋಪೋದ್ರಿಕ್ತರಾಗಿ ಅವರ ತಪ್ಪುಗಳನ್ನು ಹೇಳುತ್ತ, ತಿದ್ದಿಕೊಳ್ಳುಂತೆ ಪರಿವರ್ತಿಸುವ ಗುಣ ಉಳ್ಳವರಾಗಿದ್ದರು. ಹೀಗೆ ದಶಕಗಳ ಕಾಲ `ಕೋಲಾರವಾಣಿ' ಪತ್ರಿಕೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆ ಕಾಲಘಟ್ಟದಲ್ಲಿ ಸಂಘಟನೆಗಳು, ರಾಜಕೀಯ ನೇತಾರರು, ಸಮಾಜಮುಖಿ ಕೆಲಸ ಮಾಡುವ ನಾಯಕರು, ಕಲಾವಿದರು, ಕೃಷಿ ಪಂಡಿತರು, ಧರ್ಮಕರ್ತರು, ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವರೆಲ್ಲ ಬಿ.ವಿ. ನರಸಿಂಹಮೂರ್ತಿ ಅವರ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು. ಹೀಗಿರುವಾಗ ಒಂದು ದಿನ ಹರಿಚಿತ್ತದಂತೆ ಮಧ್ವ ಮತದ ಯತಿಗಳಾಗಿ, ಶ್ರೀ ಶ್ರೀ ೧೦೮ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥರಾಗಿ `ಹರಿ ಸರ್ವೋತ್ತಮ, ವಾಯು ಜೀವೋತ್ತಮ' ತತ್ವವನ್ನು ಎಲ್ಲೆಡೆ ಪಸರಿಸುವ ಕಾರ್ಯಕ್ಕೆ ಜೀವನ ಮುಡುಪಾಗಿರಿಸಿದರು.
ನೈತಿಕತೆ ಪರಮೋಚ್ಛ:
ಬಿ.ವಿ. ನರಸಿಂಹಮೂರ್ತಿ `ಇಷ್ಟವಿಲ್ಲದ ಕೆಲಸ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದೆ, ಇಷ್ಟವಾದ ಕೆಲಸ ಮಾಡುವುದರಿಂದ ಜೀವನೋತ್ಸಾಹ ಹೆಚ್ಚಾಗುತ್ತದೆ.' ಹೀಗಾಗಿ, ನಿಮಗಿಷ್ಟವಾದ ಕೆಲಸವನ್ನೇ ಮಾಡಿ ಎಂದು ತಮ್ಮ ಅನುಯಾಯಿಗಳಿಗೆ ಮತ್ತು ಶಿಷ್ಯ ವರ್ಗಕ್ಕೆ ಹೇಳುತ್ತಿದ್ದರು. ತತ್ವಜ್ಞಾನಿ, ದಾರ್ಶನಿಕ, ವ್ಯಾಕರಣಕಾರ, ವಿಮರ್ಶಾಕಾರ, ಸಮಾಜ ಸೇವಕ, ಪತ್ರಕರ್ತ, ಆಧ್ಯಾತ್ಮಿಕ ಪ್ರವರ್ತಕರಾಗಿ ತಮ್ಮ ಕೈಲಾದ ಸೇವೆಯನ್ನು ಸಮಾಜಕ್ಕಾಗಿ ವಿನಿಯೋಗಿಸಿದ್ದರು. ಯಾರಿಂದಲೂ ಬಿಡಿಗಾಸಿನ ಪ್ರತಿಫಲಾಪೇಕ್ಷೆ ಯಾಚಿಸದೇ ಕರ್ತವ್ಯದಲ್ಲಿ ತಲ್ಲೀನರಾಗಿರುತ್ತಿದ್ದರು. ತಮ್ಮ ಬೆವರಿಗೆ ತಕ್ಕಂತೆ ಭಗವಂತ ನೀಡಿದ ಪ್ರತಿಫಲವನ್ನು ಉಂಡು ಜೀವನ ನಡೆಸುತ್ತಿದ್ದರು. ಇದು ಅವರ ಸಿದ್ಧಾಂತವಾಗಿತ್ತು. ನೈತಿಕತೆ, ಸದಾಚಾರ ಅವರ ಜೀವನದ ಮೌಲ್ಯಗಳಾಗಿದ್ದವು.
ರಾಜನೀತಿ, ಸ್ನೇಹ, ಶೌರ್ಯ ಮತ್ತು ಮಾನವ ನಡವಳಿಕೆಯ ವಿವಿಧ ಮುಖಗಳ ಬಗ್ಗೆ ಅವರು `ಕೋಲಾರವಾಣಿ' ಪತ್ರಿಕೆಯ ತಮ್ಮ ಸಂಪಾದಕೀಯದಲ್ಲಿ ಬರೆಯುತ್ತಿದ್ದರು. ಅವರ ಸಂಪಾದಕೀಯಗಳು ಸಾರ್ವಜನಿಕ ಜೀವನದಲ್ಲಿ ಸರಿಯಾದ ಮಾರ್ಗವನ್ನು ತೋರಿಸಲು ಮತ್ತು ಸಮಾಜದಲ್ಲಿ ವ್ಯಕ್ತಿ ಹೇಗೆ ಬಾಳಬೇಕು ಎಂಬುದರ ಕುರಿತು ಪ್ರಾಯೋಗಿಕ ಮತ್ತು ತಾತ್ವಿಕ ಸಲಹೆಗಳನ್ನು ನೀಡುತ್ತಿದ್ದವು. ಅವರ ಪ್ರತಿ ಸಂಪಾದಕೀಯವೂ ಆಳವಾದ ಅರ್ಥವನ್ನು ಹೊಂದಿದ್ದು, ದೈನಂದಿನ ಜೀವನದ ಉದಾಹರಣೆಗಳ ಮೂಲಕ ನೀತಿಯನ್ನು ಸರಳವಾಗಿ ವಿವರಿಸುತ್ತಿದ್ದವು. ಅಜ್ಞಾನಿಗಳಿಗೆ ತಿಳಿ ಹೇಳುವುದು ಸುಲಭ, ಜ್ಞಾನಿಗಳಿಗೆ ತಿಳಿಹೇಳುವುದು ಇನ್ನೂ ಸುಲಭ, ಆದರೆ ಅಲ್ಪಜ್ಞಾನದಿಂದ ಗರ್ವಪಡುವವನನ್ನು ಬ್ರಹ್ಮನಿಗೂ ಮೆಚ್ಚಿಸಲು ಸಾಧ್ಯವಿಲ್ಲ ಎಂದು ಅವರು ಅರಿತಿದ್ದರು. ಮೊಸಳೆಯ ಬಾಯಿಂದ ಮಣಿಯನ್ನು ಬಲವಂತವಾಗಿ ಹೊರತೆಗೆಯಬಹುದು, ಪ್ರಕ್ಷುಬ್ಧ ಸಮುದ್ರವನ್ನು ಈಜಿ ದಾಟಬಹುದು, ಕೋಪಗೊಂಡ ಸರ್ಪವನ್ನು ಹೂವಿನಂತೆ ತಲೆಯ ಮೇಲೆ ಧರಿಸಬಹುದು, ಆದರೆ ಹಠಮಾರಿ ಮೂರ್ಖನ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರಿತಿದ್ದ ಅವರು ಸಮಾಜವನ್ನು ಸುಧಾರಿಸುವುದು ಒಬ್ಬನಿಂದ ಮಾಡುವ ಕೆಲಸವಲ್ಲ, ಇದು ಎಲ್ಲರೂ ಒಳಗೊಳ್ಳುವಂಥದ್ದು ಎನ್ನುವ ಸತ್ಯ ಪತ್ರಿಕೋದ್ಯಮಲ್ಲಿದ್ದಾಗ ಅವರು ಅರಿತಿದ್ದರು.
ಪ್ರೇರಣಾ ಶಕ್ತಿ:
ಪತ್ರಿಕೋದ್ಯಮದ ಮೂಲಕ ನೀತಿ, ಧರ್ಮ, ಮಾನವ ಸ್ವಭಾವ ಮತ್ತು ಜೀವನದ ತತ್ವಗಳ ಕುರಿತು ನೂರಾರು ಸಂಚಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಸೈ ಎನಿಸಿಕೊಂಡಿದ್ದರು. ದೃಢ ಸಂಕಲ್ಪ, ನೀತಿಶಾಸ್ತç್ರದ ತತ್ವಗಳು ಅವರ ಹೆಗ್ಗಳಿಕೆ ಆಗಿತ್ತು. ಸಮಾಜದಲ್ಲಿ ಕಂಡುAಡ ರೂಪಕಗಳು ಮತ್ತು ಹೋಲಿಕೆಗಳೊಂದಿಗೆ ವಿವರಣೆ ಮಾಡುತ್ತ `ಕೋಲಾರವಾಣಿ' ಪತ್ರಿಕೆಗೆ ಒಂದು ಘನತೆ ತಂದುಕೊಟ್ಟಿದ್ದರು. ನೈತಿಕತೆಯ ಮೇರು ವ್ಯಕ್ತಿಗಳ ಬಗ್ಗೆ ಇವರ ಬರವಣಿಗೆಗಳು `ಮರಗಳು ಹಣ್ಣುಗಳಿಂದ ತುಂಬಿದಾಗ ಬಾಗಿದಂತೆ, ಮೋಡಗಳು ಮಳೆಯನ್ನು ತರಲು ಕೆಳಗೆ ಬಂದAತೆ' ಇರುತ್ತಿದ್ದವು. ಭ್ರಷ್ಟಾಚಾರ ಮಾಡಿದವರ ಕುರಿತ ಬರವಣಿಗೆಗಳು ನಖಶಿಖಾಂತ ಹರಿತವಾಗಿರುತ್ತಿದ್ದವು. ಮುಟ್ಟಿ ನೋಡಿಕೊಳ್ಳುವಂತೆ ಇರುತ್ತಿದ್ದವು. ಲಂಚಗುಳಿತನ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿರುವುದು ಇಂದು, ನಿನ್ನೆಯದಲ್ಲ. ಇದು ಶತಮಾನಗಳಿಂದಲೂ ಇದೆ. ಬಿ.ವಿ.ನರಸಿಂಹಮೂರ್ತಿ ಅವರ ಅವಧಿಯಲ್ಲೂ ಇತ್ತು. ಹೀಗಾಗಿ ಅವರ ಬಹುತೇಕ ಬರವಣಿಗೆಗಳು ನೀತಿಗಳ, ಧರ್ಮ, ನೀತಿಶಾಸ್ತçದ ತತ್ವಗಳ, ಸದ್ಗುಣಗಳ, ದುರ್ಗುಣಗಳ, ರಾಜಕೀಯ, ಮಾನವನ ಮನೋಭಾವಗಳನ್ನು ವಿವರಿಸುತ್ತವೆ. ಸರಳ, ಸುಂದರವಾದ ಶಬ್ದಗಳನ್ನು ಬಳಸಿ, ರೂಪಕಗಳು, ವಿರೋಧಾಭಾಸಗಳು ಮತ್ತು ಹೋಲಿಕೆಗಳಿಂದ ವಿಷಯವನ್ನು ವಿವರಿಸುವ ಅವರ ಬರಹಗಳು ಬಯಲು ಸೀಮೆಯ ಜನರಿಗೆ ಅಚ್ಚುಮೆಚ್ಚಾಗಿದ್ದವು. ಅವರ ಬರವಣಿಗೆಗೆ ಪ್ರೇರಣೆಗೊಂಡು ಅದೆಷ್ಟೋ ಬರಹಗಾರರು ಹುಟ್ಟಿಕೊಂಡರು ಮತ್ತು ಅದೆಷ್ಟೋ ಪತ್ರಕರ್ತರು ಪ್ರೇರಣೆಗಳನ್ನು ಪಡೆಯುತ್ತಿದ್ದರು.
ಸದ್ಗುಣಿಗಳಿಗೆ ಸಾತ್ವಿಕರಾಗಿದ್ದರು:
"ಭವಂತಿ ನಮ್ರಾಸ್ತರವಃ ಫಲೋದ್ಗಮಯಃ" ಎನ್ನುವಂತೆ ಸದ್ಗುಣಗಳಿಗೆ ಅವರು ಬಾಗುತ್ತಿದ್ದರು. ನಮ್ರತೆ ವ್ಯಕ್ತಪಡಿಸುತ್ತಿದ್ದರು. ತಪ್ಪುಗಳು ಕಂಡು ಬಂದಲ್ಲಿ ವ್ಯಗ್ರರಾಗುತ್ತಿದ್ದರು. ನರಸಿಂಹನAತೆಯೇ ಘರ್ಜಿಸುತ್ತಿದ್ದರು. ಕೋಪದಲ್ಲಿ ಜಮದಗ್ನಿಯಂತೆ ಕಂಡರೂ ಅವರೊಳಗೊಂದು ಮಾತೃ ಹೃದಯದ ಅಂತಃಕರಣ ಇತ್ತು ಎಂದು ಅವರ ಒಡನಾಡಿಗಳೇ ಒಪ್ಪಿಕೊಂಡಿದ್ದಾರೆ. ಪತ್ರಿಕೋದ್ಯಮದಲ್ಲಿ ಅವರಿಗೆ ಏನೇ ಸಹ್ಯವಾದ, ವಿರೋಧಾಭಾಸವಾದ ವೈರುಧ್ಯಗಳು ಎದುರಾದರೂ ಧೈರ್ಯ ಮತ್ತು ದೃಢನಿಶ್ಚಯವುಳ್ಳವರಾಗಿದ್ದರು. ತಮ್ಮ ಗುರಿ ಸಾಧಿಸುವವರೆಗೆ ಎಂದಿಗೂ ನಿಲ್ಲುವುದಿಲ್ಲ ಎಂಬ ತತ್ವಕ್ಕೆ ಅಂಟಿಕೊAಡಿದ್ದರು. ಪತ್ರಿಕೋದ್ಯಮ ಇರುವುದು ಜೀವನದ ಸತ್ಯಗಳನ್ನು, ನೀತಿ ತತ್ವಗಳನ್ನು ಸರಳವಾಗಿ ತಿಳಿಸಲು ಎಂದು ಭಾವಿಸಿದ್ದರು. ಸಂಪತ್ತು ಬಂದಾಗ ಅಹಂಕಾರ ಪಡದೆ, ಇತರರಿಗೆ ಸಹಾಯ ಮಾಡುವ ಉದಾತ್ತ ಸ್ವಭಾವವನ್ನು ಹೊಂದಿರಬೇಕೆAದು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಮುಲಾಜಿಲ್ಲದೇ ತಿಳಿಸುತ್ತಿದ್ದರು. ಸುಖ-ದುಃಖಗಳನ್ನು ಲೆಕ್ಕಿಸದೇ ತಮ್ಮ ಗುರಿ ಸಾಧಿಸುವತ್ತ ಚಿತ್ತ ಹರಿಸಬೇಕೆಂದು ಸಲಹೆ ನೀಡುತ್ತಿದ್ದರು. ಅದರಂತೆ ಅವರೂ ಕೂಡ ನಡೆದುಕೊಳ್ಳುತ್ತಿದ್ದರು. ಅವರ ನೀತಿಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲದೆ, ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ನೀಡುವ ನೀತಿ ಬೋಧಕವಾಗಿದ್ದವು. ಆರೇಳು ಮಕ್ಕಳನ್ನು ಕಳೆದುಕೊಂಡು ಕೊನೆಗೆ ಭೀಷ್ಮನೊಬ್ಬ ಮಗನನ್ನೇ ಉಳಿಸಿಕೊಂಡ ಶಂತನುವಿನAತೆ ನಾವೂ ಆಗಬೇಕು. ಶಂತನು ಗಂಗೆಯನ್ನು ವರಿಸಿದಂತೆ ನಾವೂ ಬುದ್ಧಿಯನ್ನು ಪಡೆದಿದ್ದೇವೆ. ಗಂಗೆಗೆ ಮೊದಲು ಏಳು ಮಕ್ಕಳು ಹುಟ್ಟಿದಂತೆ ನಮಗೂ ಬುದ್ಧಿಯಿಂದ ಹತ್ತಾರು ಬೇಡದ ಜ್ಞಾನಗಳು ಹುಟ್ಟಿಕೊಳ್ಳುತ್ತಿವೆ. ಅವುಗಳನ್ನೆಲ್ಲ ನಿಷ್ಕರುಣಿಗಳಾಗಿ ಬಿಟ್ಟುಬಿಡಬೇಕು. ಕೊನೆಗೆ ಹುಟ್ಟಿದ ಭೀಷ್ಮನನ್ನು ಮಾತ್ರ ಬಿಡದಂತೆ, ನಾವೂ ಕೊನೆಯಲ್ಲಿ ಬರಬಹುದಾದ ಭಗವದ್ ಜ್ಞಾನವನ್ನು ಉಳಿಸಿ, ಬೆಳೆಸಿಕೊಳ್ಳಬೇಕು ಎಂದು ಮಾಧ್ವ ಯತಿಗಳಾಗಿ ಶಿಷ್ಯರಿಗೆ ಬೋಧಿಸುತ್ತಿದ್ದರು.
ಸವಾಲು ಎದುರಿಸಿ ಸನ್ಯಾಸಿಯಾದರು:
`ಸೇರಿಗೆ ಸವ್ವಾ ಸೇರು' ಎನ್ನುವಂತೆ ಹೀಗೊಂದು ಸವಾಲಿನ ಒಂದು ಸನ್ನಿವೇಶ ಅವರಿಗೆ ಎದುರಾಯಿತು. ಆಧ್ಯಾತ್ಮ ಕ್ಷೇತ್ರ ಅವರನ್ನು ಕೈ ಬೀಸಿ ಕರೆಯಿತು. ಇದು ದೈವೇಚ್ಛೆ ಎಂದುಕೊAಡು ಪತ್ರಿಕೋದ್ಯಮದಿಂದ ಮಾಧ್ವ ಮತದ ಮಠದ ಸಂಪ್ರದಾಯದ ಸಾಂಗತ್ಯಕ್ಕೆ ಪೀಠಿಕೆ ಹಾಕಿದರು. ಅವರಿಗೆ ಸಾಮಾಜಿಕ ಪ್ರಜ್ಞೆ, ಕಾಳಜಿ ಮತ್ತು ಅವರ ಅಂತರAಗ, ಬಹಿರಂಗ ಶುದ್ಧವಾದ್ದರಿಂದ ಧಾರ್ಮಿಕ ಹಾದಿಯಲ್ಲಿ ಅವರು ಮುನ್ನಡೆಯಲು ಇಚ್ಛಿಸಿದರು.
ಕೋಲಾರ ಜಿಲ್ಲೆಯ ತಂಬಿಹಳ್ಳಿಯಲ್ಲಿರುವ ಶ್ರೀ ಮಾಧವ ತೀರ್ಥರ ಮೂಲ ಮಹಾಸಂಸ್ಥಾನ ಎದುರಿಸುತ್ತಿದ್ದ ಸಂಕಷ್ಟದ ಸಮಯದಲ್ಲಿ ಶ್ರೀಮಠದ ಸೇವೆಗೆ ಮುಂದಾದರು. ಶ್ರೀ ಮಠದ ಉಳಿವಿಗಾಗಿ ಅವರು ಕೈಗೊಂಡ ಬದ್ಧ ನಿಲುವು ಅವರನ್ನು ಶ್ರೀಮಠದ ಪುನಶ್ಚೇತನಕ್ಕೆ ಎಳಸಿತು. ಶ್ರೀಮಠದ ಆಶಾಕಿರಣ, ಶ್ರೀ ವೀರರಾಮಚಂದ್ರ ದೇವರ ಅನುಗ್ರಹ, ಪ್ರಕೃತಿ ಮತ್ತು ಪರಿಸ್ಥಿತಿಯ ಸಂಕಲ್ಪದAತೆ ಅವರು ಮಠದ ಪೀಠಾಧಿಪತಿಗಳಾಗಿ `ಶ್ರೀ ಶ್ರೀ ೧೦೮ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥ' ರೆಂಬ ಅಭಿದಾನದೊಂದಿಗೆ ಅನುಸಂಧಾನಗೊAಡು ೧೪ ವರ್ಷಗಳ ಕಾಲ ಮಠದ ಸೇವೆಯನ್ನು ಮಾಡಿದರು. ಧರ್ಮ ಪ್ರಚಾರ, ಮಠದ ಆಡಳಿತ ಯಂತ್ರಾAಗ, ಲೋಕ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯ ಫಲವಾಗಿ ಅವರ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹಲವಾರು ಆಯಾಮಗಳು ನಡೆದು, ಅವರ ಬದುಕನ್ನು ಪಾವನಗೊಳಿಸಿದವು. ಪತ್ರಿಕೋದ್ಯಮದಿಂದ ಮುಕ್ತರಾದ ಬಳಿಕ ಅವರ ಆಶಯದಂತೆ ಅವರ ಪುತ್ರರಾದ ದಿ.ಬಿ.ಎನ್.ಗುರುಪ್ರಸಾದ್ ಪತ್ರಿಕೆಯನ್ನು ಮುನ್ನಡೆಸಿದರು. ಇದೀಗ ಪತ್ರಿಕೆಯ ಸಂಪಾದಕರಾದ ಬಿ.ಎನ್.ಮುರಳಿಪ್ರಸಾದ್ ಅವರು ಪತ್ರಿಕೆಯ ಬೆನ್ನೆಲುಬಾಗಿ ಸಮಾಜ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುರಳಿ ಪ್ರಸಾದ್ ಅವರಿಗೆ ಹೆಗಲೆಣೆಯಾಗಿ ಹಿರಿಯ ಪತ್ರಕರ್ತರಾದ ಬಿ.ವಿ.ಗೋಪಿನಾಥ್ ಅವರು ಜೊತೆಗೆ ನಿಂತಿದ್ದಾರೆ.
ಸಮಾಜ - ಸಂನ್ಯಾಸ ಸರಿದೂಗಿಸಿದ್ದರು:
ಪತ್ರಕರ್ತರಾಗಿ ಲೌಕಿಕ ಬದುಕಿನಲ್ಲಿದ್ದ ಬಿ.ವಿ. ನರಸಿಂಹಮೂರ್ತಿ ಅವರ ಬದುಕಿನಲ್ಲಿ ಘಟಿಸಿದ ದಿಢೀರ್ ಘಟನೆ ಮತ್ತು ಅದಕ್ಕೆ ಒಂದಕ್ಕೊAದರAತೆ ಬೆಸೆದುಕೊಂಡ ಸನ್ನಿವೇಶಗಳಿಂದ ಕೋಲಾರ ಜಿಲ್ಲೆಯಲ್ಲಿ ಕಳೆದ ೫೦೦ಕ್ಕೂ ಅಧಿಕ ವರ್ಷಗಳಿಂದ ನೆಲೆ ನಿಂತಿದ್ದ ಶ್ರೀ ಮಧ್ವಚಾರ್ಯರ ಪರಮ ಶಿಷ್ಯರಾದ ಶ್ರೀ ಮಾಧವ ತೀರ್ಥರಿಂದ ಸ್ಥಾಪಿತವಾಗಿದ್ದ ಸಂಸ್ಥಾನ ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ "ಧರ್ಮೋ ರಕ್ಷತಿ ರಕ್ಷಿತಃ' ಎಂಬುದರಲ್ಲಿ ನಂಬಿಕೆ ಇರಿಸಿ, ಶ್ರೀಮಠದ ಉಳಿವಿಗೆ ತನು-ಮನ-ಧನ ಅರ್ಪಿಸಿ ಹೋರಾಡಿದ ಪರಿಣಾಮ ಇಂದು ಶ್ರೀಮಠ ಉಳಿದು- ಬೆಳೆದು ನಿಂತಿದೆ. ಅವರ ಹೋರಾಟದ ಮನೋಭಾವ, ನೈತಿಕತೆ ಮತ್ತು ರಾಜೀ ಇಲ್ಲದ ಗುಣಗಳಿಂದ ಶ್ರೀಮಠದ ಉಳಿವು ಸಾಧ್ಯವಾಯಿತು. ಹೀಗೆ ಲೌಕಿಕ ಬದುಕಿನ ಹೋರಾಟ ಮತ್ತು "ಧರ್ಮ ರಕ್ಷಣೆ"ಯ ಯಶಸ್ಸಿನಿಂದ ಎನ್ನುವಂತೆ ಶ್ರೀಹರಿಯ ಚಿತ್ತದಂತೆ ಬಿ.ವಿ.ನರಸಿಂಹಮೂರ್ತಿ ಅವರಿಗೆ ಶ್ರೀ ಮನ್ಮಾಧವ ತೀರ್ಥ ಮೂಲ ಮಹಾ ಸಂಸ್ಥಾನದ ಪೀಠಾಧೀಪತಿಯಾಗುವ ಯೋಗ ಕೂಡಿ ಬಂತು.
ಅಂದಿನಿಂದ ಪೂರ್ಣ ಪ್ರಮಾಣದಲ್ಲಿ ತಮ್ಮ ಲೌಕಿಕ ಬದುಕನ್ನು ತೊರೆದ ಬಿ.ವಿ. ನರಸಿಂಹ ಮೂರ್ತಿ ಅವರು ಶ್ರೀ ಶ್ರೀ ೧೦೮ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥರು ಎಂಬ ನಾಮಾಂಕಿತದಿAದ ಸಂಸ್ಥಾನ ಪೀಠ ಅಲಂಕರಿಸಿದರು. ಪೀಠಾಲಂಕಾರದ ನಂತರ ಶ್ರೀಮಠದ ಅಭಿವೃದ್ಧಿಗೆ ನಿರಂತರ ಶ್ರಮವಹಿಸಿದ ಅವರು, ಹಲವೆಡೆ ಶಾಖೆಗಳನ್ನು ತೆರೆದರು ಮತ್ತು ಶ್ರೀಮಠದ ಆಸ್ತಿಪಾಸ್ತಿ ರಕ್ಷಿಸಿದರು. ಕಿರಿಯ ಪೀಠಾಧಿಪತಿಗಳ ನೇಮಕದ ವೇಳೆ ಯಾವುದೇ ಆಮಿಷ ಮತ್ತು ಒತ್ತಡಕ್ಕೆ ಮಣಿಯದೆ ಅರ್ಹರನ್ನು ನೇಮಿಸಬೇಕೆಂಬ ದಿಟ್ಟ ನಿಲುವಿನಿಂದ ಕಂಬಾಲೂರು ವೆಂಕಟೇಶ ಆಚಾರ್ಯ ಅವರನ್ನು ಕಿರಿಯ ಪಟ್ಟಕ್ಕೆ ತಂದು ಅವರ ವಿದ್ಯಾರ್ಜನೆಯನ್ನು ಪರಿಗಣಿಸಿ ಅವರಿಗೆ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು ಎಂದು ನಾಮಕರಣ ಮಾಡಿದರು.
ಶ್ರೀ ಮನ್ಮಾಧವ ತೀರ್ಥ ಮೂಲ ಮಹಾ ಸಂಸ್ಥಾನಕ್ಕೆ ಎದುರಾಗಿದ್ದ ಸಮಸ್ಯೆಗಳನ್ನು ಅದರಲ್ಲೂ ಪ್ರಮುಖವಾಗಿ ಅನ್ಯಾಕ್ರಾಂತವಾಗುವ ಹಂತದಲ್ಲಿದ್ದ ಶ್ರೀಮಠವನ್ನು ಸುಭದ್ರಗೊಳಿಸಿ, ಘನತೆ ಹೆಚ್ಚಿಸಿದ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥರ ಸೇವೆ- ಹೋರಾಟ ಅಜರಾಮರವಾಗಿರಲಿ ಎಂಬ ಕಾರಣದಿಂದ ಶ್ರೀಗಳ ಶಿಷ್ಯರಾಗಿ ಪೀಠ ಅಲಂಕರಿಸಿದ ಶ್ರೀ ವಿದ್ಯಾಸಾಗರ ಮಾಧವ ತೀರ್ಥ ತಮ್ಮ ಗುರುಗಳಿಗೆ ಅರ್ಪಿಸಿರುವ ಚರಮ ಗೀತೆಯಲ್ಲಿ "ಸಂಸ್ಥಾನ ರಕ್ಷಣೇ ಶೂರಾನ್" (ಸಂಸ್ಥಾನ ರಕ್ಷಿಸಿದ ಶೂರ) ಎಂದು ಬಣ್ಣಿಸಿದ್ದಾರೆ.
ಪತ್ರಕರ್ತರಾಗಿ ನಂತರ ಸನ್ಯಾಸಾಶ್ರಮ ಸ್ವೀಕರಿಸಿ ಸಾರ್ಥಕ ಬದುಕು ಕಂಡ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥರ 19ನೇ ಆರಾಧನಾ ಮಹೋತ್ಸವ ಶ್ರೀಗಳ ಮೂಲ ಬೃಂದಾವನ ಇರುವ ಕೋಲಾರ ಜಿಲ್ಲೆಯ ತಂಬಿಹಳ್ಳಿಯಲ್ಲಿನ ಶ್ರೀ ಮನ್ಮಾಧವ ತೀರ್ಥ ಮೂಲ ಮಹಾ ಸಂಸ್ಥಾನದಲ್ಲಿ ಭಕ್ತಿ ಭಾವಗಳಿಂದ ನೆರವೇರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.