ADVERTISEMENT

ಹೊಸ ಮೀಸಲಾತಿ: ತೊಡಕುಗಳೇನು?

ದುರ್ಬಲ ಮತ್ತು ಪ್ರಬಲ ಜಾತಿಗಳನ್ನು ಸಮಾನ ನೆಲೆಯಲ್ಲಿ ಪರಿಗಣಿಸುವುದು ತರವಲ್ಲ

ಎಚ್.ಕಾಂತರಾಜ
Published 9 ಜುಲೈ 2019, 20:00 IST
Last Updated 9 ಜುಲೈ 2019, 20:00 IST
Backward Classes Commission Chairman H Kantharaju, conducting the press conference regarding caste census, at Backward Classes Commission Office, in Bengaluru on Monday. Photo/ B H Shivakumarkantharaj
Backward Classes Commission Chairman H Kantharaju, conducting the press conference regarding caste census, at Backward Classes Commission Office, in Bengaluru on Monday. Photo/ B H Shivakumarkantharaj   

ಸಾಮಾನ್ಯ ವರ್ಗಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿ ದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಿದ ತೀರ್ಮಾನ ಈ ವರ್ಷದ ಆರಂಭದಲ್ಲಿ ಚರ್ಚೆ ಹುಟ್ಟುಹಾಕಿತು. ಈ ತೀರ್ಮಾನದಲ್ಲಿ ತಪ್ಪೇನಿಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಇದರಿಂದಾಗುವ ಲಾಭ–ನಷ್ಟ ನಿಚ್ಚಳವಾಗಿ ಗೋಚರಿಸಬೇಕಾದರೆ, ಸಂವಿಧಾನ ಮತ್ತು ಮೀಸಲು ವ್ಯವಸ್ಥೆಯ ಒಳಹೊರಗನ್ನು ಅರ್ಥಮಾಡಿಕೊಳ್ಳಬೇಕು.

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಸಂವಿಧಾನಕ್ಕೆ ತಿದ್ದುಪಡಿ ತಂದು ಕೇಂದ್ರ ಸರ್ಕಾರವು ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಸೌಲಭ್ಯ ಕಲ್ಪಿಸಿ ಈ ವರ್ಷದ ಜನವರಿ 19ರಂದು ಆದೇಶಿಸಿತು. ಈ ತಿದ್ದುಪಡಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಹಾಗೂ ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಲಾಗಿದೆ. ತೀರ್ಪು ಈ ತಿಂಗಳ ಕೊನೆಗೆ ಬರುವ ನಿರೀಕ್ಷೆ ಇದೆ. ಶೇ 10ರಷ್ಟು ಮೀಸಲಾತಿ ಜಾರಿಗೊಳಿಸಲು ಇರುವ ತೊಡಕುಗಳನ್ನು ಪ್ರಸ್ತಾಪಿಸುವುದುಈ ಬರಹದ ಉದ್ದೇಶ.

ಆರ್ಥಿಕ ಸ್ಥಿತಿಗತಿ ಆಧರಿಸಿ ಪ್ರಥಮ ಬಾರಿಗೆ ದೇಶದಲ್ಲಿ ಜಾರಿಗೆ ತಂದಿರುವ ಮೀಸಲಾತಿ ಇದು. ಪರಿಶಿಷ್ಟ ಜಾತಿ– ಪಂಗಡ ಹಾಗೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಇತರ ವರ್ಗಗಳಿಗೆ ನೀಡಿರುವ ಒಟ್ಟು ಶೇ 50ರಷ್ಟು ಮೀಸಲಾತಿಯನ್ನು ಹೊರತುಪಡಿಸಿ ನೀಡಿದ ಮೀಸಲಾತಿಯೂ ಹೌದು. ಈ ಮೀಸಲಾತಿ ಪಡೆಯಲು ಆರ್ಥಿಕವಾಗಿ ಹಿಂದುಳಿದವರ ವಾರ್ಷಿಕ ಆದಾಯ ₹ 8 ಲಕ್ಷದ ಒಳಗಿರಬೇಕು. ಅವರಿಗೆ 5 ಎಕರೆಗಿಂತ ಕಡಿಮೆ ಜಮೀನು ಇರಬೇಕು. 1,000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಇರಬೇಕು ಇತ್ಯಾದಿ ಮಾನದಂಡಗಳಿವೆ.

ADVERTISEMENT

ಕೇಂದ್ರ ಸರ್ಕಾರಒಂದೆಡೆ ‘ಜಾತಿರಹಿತ’ ಮೀಸಲಾತಿ ನೀಡುತ್ತಿರುವುದಾಗಿ ಹೇಳಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿಯು ಜಾತಿಯೇತರ ಹಾಗೂ ಆರ್ಥಿಕ ಮಾನದಂಡಗಳನ್ನು ಆಧರಿಸಿದೆ ಎಂದು ಹೇಳಿದ್ದರೂ ಈ ಮೀಸಲಾತಿಯನ್ನೂ ಜಾತಿ ಹೆಸರಿನಲ್ಲೇ ನೀಡಲಾಗುತ್ತಿದೆ ಎಂಬುದು ವಾಸ್ತವ. ಯಾವ ಜಾತಿಯನ್ನು ಈ ಮೀಸಲಾತಿಯಿಂದ ಹೊರಗಿಡಬೇಕು ಎಂದು ತೀರ್ಮಾನಿಸುವಾಗ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನುಶೇ10ರಷ್ಟು ಮೀಸ ಲಾತಿಗೆ ಅರ್ಹರೆಂದು ಗುರುತಿಸುವಾಗ ಕೂಡ ಜಾತಿ ಅನಿವಾರ್ಯ. ಈಗ ಶೇ 10ರಷ್ಟು ಮೀಸಲಿಗೆ ಅರ್ಹರ ಪಟ್ಟಿ ನೋಡುವಾಗ, ಅಲ್ಲಿ ಜಾತಿಯನ್ನು ಕಡ್ಡಾಯವಾಗಿ ನಮೂದಿಸಲೇಬೇಕು (ಉದಾಹರಣೆಗೆ ಬ್ರಾಹ್ಮಣ, ಆರ್ಯವೈಶ್ಯ). ಇದು, ಭಾರತದಲ್ಲಿ ಜಾತಿಯ ಪಾತ್ರ, ಪ್ರಸ್ತುತತೆ ಹಾಗೂ ವಾಸ್ತವಕ್ಕೆ ಸಾಕ್ಷಿ.

ಇನ್ನು ಒಬಿಸಿ ಪಟ್ಟಿಗೆ ಬರುವುದಾದರೆ, ಕೇಂದ್ರ ಸರ್ಕಾರದಲ್ಲಿ ಎಲ್ಲ ರಾಜ್ಯಗಳಿಗೂ ಸಂಬಂಧಿಸಿದಂತೆ ಪ್ರತ್ಯೇಕವಾದ ಒಬಿಸಿ ಪಟ್ಟಿ ಇದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದಲ್ಲಿರುವ ಒಬಿಸಿ ಪಟ್ಟಿಯಲ್ಲಿ 199 ಜಾತಿ ಮತ್ತು ಉಪಜಾತಿಗಳಿವೆ. ಆದರೆ, 2002ರಲ್ಲಿ ಕರ್ನಾಟಕ ಸರ್ಕಾರ ತಯಾರಿಸಿದ ಒಬಿಸಿ ಪಟ್ಟಿಯಲ್ಲಿ 208 ಜಾತಿ ಮತ್ತು ಉಪಜಾತಿಗಳಿವೆ! ಕೇಂದ್ರದ ಒಬಿಸಿ ಪಟ್ಟಿಗೂ ರಾಜ್ಯದ ಒಬಿಸಿ ಪಟ್ಟಿಗೂ ತಾಳೆಯಾಗುವುದೇ ಇಲ್ಲ. ಉದಾಹರಣೆಗೆ, ಕರ್ನಾಟಕದಲ್ಲಿರುವ ಅಗಮುಡಿ ಸಮುದಾಯವು ರಾಜ್ಯದ ಒಬಿಸಿ ಪಟ್ಟಿಯ ಪ್ರವರ್ಗ–1ರ ಅಡಿ ಬರುತ್ತದೆ.

ಆದರೆ, ಈ ಸಮುದಾಯವು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇಲ್ಲ. ರಾಜ್ಯದಲ್ಲಿ ಅತಿ ಹಿಂದುಳಿದ ವರ್ಗಕ್ಕೆ ಸೇರಿರುವ ಈ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದಿದೆ ಎನ್ನುವ ಏಕೈಕ ಕಾರಣಕ್ಕೆ ಶೇ 10ರ ಮೀಸಲು ಪಟ್ಟಿಗೆ ಹಾಕಿದರೆ, ಈ ಸಮುದಾಯವು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪ್ರಬಲ ಜಾತಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವೇ? ಅಂತೆಯೇ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇಲ್ಲದ ಹೆಳವ, ಕಿಳ್ಳೇಕ್ಯಾತದಂಥ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಬ್ರಾಹ್ಮಣ, ಜೈನರಂಥ ಪ್ರಬಲ ಜಾತಿಗಳ ಜೊತೆಗೆ ಸ್ಪರ್ಧಿಸುವುದನ್ನು ಊಹಿಸಲು ಸಾಧ್ಯವೇ? ಇದು ಗಾಯದ ಮೇಲೆ ಬರೆ ಎಳೆದಂತೆ. ಸಂವಿಧಾನದ ಪ್ರಕಾರ, ಸ್ಪರ್ಧೆ ಎನ್ನುವುದು ಯಾವಾಗಲೂ ಸಮಬಲರ ನಡುವೆ ನಡೆಯಬೇಕೇ ವಿನಾ ದುರ್ಬಲ–ಪ್ರಬಲರ ನಡುವೆ ಅಲ್ಲ.

ರಾಜ್ಯದಲ್ಲಿ ಅಲೆಮಾರಿ, ಅರೆಅಲೆಮಾರಿ, ಪ್ರವರ್ಗ– 1ರ ಅಡಿಯಲ್ಲಿರುವ ಇತರೆ ಹಿಂದುಳಿದ ವರ್ಗಗಳನ್ನು ಬಹಳ ಶೋಚನಿಯ ಸ್ಥಿತಿಯಲ್ಲಿರುವ ತಳಸಮುದಾಯಗಳೆಂದು ಪರಿಗಣಿಸಿ, ಕೆನೆಪದರದ ಆದಾಯ ಮಿತಿ ಯಿಂದ ವಿನಾಯಿತಿ ನೀಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ 2018-19ನೇ ಮುಂಗಡ ಪತ್ರದಲ್ಲಿ ಅತಿ ಹಿಂದುಳಿದ ಸಮಾಜಗಳೆಂದು ಪರಿಗಣಿಸಿ, ₹ 100 ಕೋಟಿ ಅನುದಾನ ಘೋಷಿಸಲಾಗಿದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೂಡ 2018-19ನೇ ಸಾಲಿನ ಮುಂಗಡ ಪತ್ರದಲ್ಲಿ ಕಿಳ್ಳೇಕ್ಯಾತ, ದೊಂಬಿ ದಾಸ, ಹೆಳವ, ಹೂವಾಡಿಗ, ಕಂಚುಗಾರ, ದರ್ಜಿ, ಬುಡಬುಡಿಕೆ, ತಿಗಳ, ಬಡಿಗೆ, ಹಟ್ಗಾರ, ಕರೆವಕ್ಕಲಿಗ ಇತ್ಯಾದಿ ಸಮುದಾಯಗಳ ಅಭಿವೃದ್ಧಿಗಾಗಿ ₹ 10 ಕೋಟಿ ಅನುದಾನ ತೆಗೆದಿರಿಸಿದೆ. ಇದು, ಈ ಸಮುದಾಯಗಳ ಬಗ್ಗೆ ರಾಜ್ಯ ಸರ್ಕಾರಗಳ ಕಾಳಜಿಯನ್ನು ತೋರಿಸುತ್ತದೆ.

ಈ ತಳಸಮುದಾಯಗಳು ಆರ್ಥಿಕವಾಗಿ ಹಿಂದು ಳಿದ ವರ್ಗಗಳ ಪಟ್ಟಿಗೆ ಸೇರಿದರೆ, ರಾಜ್ಯ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಅಲೆಮಾರಿ, ಅರೆಅಲೆಮಾರಿ ಜಾತಿಗಳು ನಮ್ಮನ್ನು ಇತರೆ ಯಾವುದೇ ಹಿಂದುಳಿದ ಜಾತಿಗಳ ಜೊತೆಗೆ ಸೇರಿಸದೆ, ಪ್ರತ್ಯೇಕವಾಗಿ ವರ್ಗೀಕರಿಸಿ ಸೂಕ್ತ ಪ್ರಮಾಣದಲ್ಲಿ ಮೀಸಲಾತಿ ನೀಡಬೇಕೆಂದು ಈಗಾಗಲೇ ಬೇಡಿಕೆ ಇಟ್ಟಿವೆ. ಮೇಲೆ ಹೆಸರಿಸಿದ ಅಲೆಮಾರಿ, ಅರೆಅಲೆಮಾರಿ ಜಾತಿಗಳು ಕೇಂದ್ರದ ಆರ್ಥಿಕವಾಗಿ ಹಿಂದುಳಿದ ಮೀಸಲಾತಿ ಪಟ್ಟಿಗೆ ಸೇರುತ್ತವೆ.

ಈ ಕ್ರಮದಿಂದ ದುರ್ಬಲ ಮತ್ತು ಪ್ರಬಲ ಜಾತಿಗಳನ್ನು ಸರಿಸಮಾನ ನೆಲೆಯಲ್ಲಿ ಪರಿಗಣಿಸಿದಂತೆ ಆಗುತ್ತದೆ. ಇದು ಎಷ್ಟರಮಟ್ಟಿಗೆ ಸರಿ? ಇದು ಸಂವಿಧಾನದ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲ. ತೀರಾ ಹಿಂದುಳಿದ ಜಾತಿಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಕಡ್ಡಾಯವಾಗಿ ಸೇರಿಸಲೇಬೇಕು. ಮಂಡಲ್ ಆಯೋಗದ ವರದಿ ಬರುವ ತನಕ, ಅಂದರೆ 1998ರ ತನಕ ಒಬಿಸಿಗೆ ಕೇಂದ್ರ ಸರ್ಕಾರ ಮೀಸಲಾತಿಯನ್ನೇ ನೀಡಿರಲಿಲ್ಲ ಎಂಬುದು ಇಲ್ಲಿ ಗಮನಾರ್ಹ. ಅಂತೆಯೇ ಕೇಂದ್ರ ಮತ್ತು ರಾಜ್ಯದ ಒಬಿಸಿ ಪಟ್ಟಿಗಳಲ್ಲಿ ಪರಸ್ಪರ ಸಾಮ್ಯತೆ ಇರಬೇಕಾದುದು ಅಗತ್ಯ. ಹಾಗಾಗಿ, ರಾಜ್ಯದ ಒಬಿಸಿ ಪಟ್ಟಿಯಲ್ಲಿರುವ ಎಲ್ಲ ಜಾತಿಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಕೆಲಸ ಈಗಲಾದರೂ ಆಗಬೇಕು.

ಹೀಗೆ ಸೇರಿಸುವಾಗ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿ ಎಂದರೆ ಒಳವರ್ಗೀಕರಣ. ಕೇಂದ್ರ ಇದುವರೆಗೆ ಒಬಿಸಿ ಪಟ್ಟಿಯಲ್ಲಿ ಒಳವರ್ಗೀಕರಣವನ್ನೇ ಮಾಡಿಲ್ಲ. ಆದರೆ, ರಾಜ್ಯದ ಒಬಿಸಿ ಪಟ್ಟಿಯಲ್ಲಿ ಒಳವರ್ಗೀಕರಣವಿದೆ. ಈ ಒಳವರ್ಗೀಕರಣಕ್ಕೆ ವೈಜ್ಞಾನಿಕ ಕಾರಣವೂ ಇದೆ. ಯಾವುದೇ ಜಾತಿಯನ್ನು ಒಂದು ವರ್ಗಕ್ಕೆ ಸೇರಿಸುವಾಗ ಸಮಾನ ನೆಲೆಯಲ್ಲಿ ಪ್ರತ್ಯೇಕ ಗುಂಪು ಮಾಡಬೇಕು. ಅಂದರೆ, ಹಳ್ಳಿಯವರನ್ನು ಹಳ್ಳಿಯವರೊಂದಿಗೆ ಸೇರಿಸಬೇಕೇ ವಿನಾ ನಗರದವರ ಜತೆಗಲ್ಲ. ಮೀಸಲಾತಿ ಪ್ರಶ್ನೆ ಬಂದಾಗ ಹಳ್ಳಿಯವರು ನಗರದವರೊಂದಿಗೆ ಸ್ಪರ್ಧಿಸಲಾಗದು. ಸಮಾನರ ನಡುವೆಯೇ ಸ್ಪರ್ಧೆ ನಡೆಯಬೇಕೆಂಬುದು ಸಂವಿಧಾನದ ಆಶಯ.

ಇಷ್ಟಕ್ಕೂ ಎಸ್‌.ಸಿ, ಎಸ್‌.ಟಿ, ಒಬಿಸಿ ಹೊರತುಪಡಿಸಿ ಬಾಕಿ ಎಷ್ಟು ಜಾತಿಗಳಿವೆ ಎಂಬ ನಿಖರವಾದ ಪಟ್ಟಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಬಳಿ ಇದೆಯೇ? ಆರ್ಥಿಕವಾಗಿ ಹಿಂದುಳಿದವರ ಪಟ್ಟಿಯಲ್ಲಿ ಬ್ರಾಹ್ಮಣ, ವೈಶ್ಯ, ನಗರ್ತ, ಜೈನರಿದ್ದಾರೆ ಎಂದಷ್ಟೇ ಹೇಳಿದರೆ ಸಾಕೇ? ಇತರ ಯಾವ ಜಾತಿಗಳು ಆರ್ಥಿಕವಾಗಿ ಹಿಂದುಳಿದಿವೆ ಎನ್ನುವ ಪಟ್ಟಿಯಾದರೂ ಬೇಕಲ್ಲವೇ? ಶೇ10ರಷ್ಟು ಮೀಸಲಾತಿಯಲ್ಲಿ ಒಳವರ್ಗೀಕರಣ ಮಾಡದೆ ಸಣ್ಣಸಣ್ಣ ಜಾತಿಗಳನ್ನು ಸೇರಿಸಿಬಿಟ್ಟರೆ, ಅವು ಪ್ರಬಲ ಜಾತಿಗಳ ಎದುರು ಸೋತು, ಅಸ್ಮಿತೆ ಕಳೆದುಕೊಳ್ಳುವುದಿಲ್ಲವೇ?

ಲೇಖಕ: ಅಧ್ಯಕ್ಷ, ಕರ್ನಾಟಕ ರಾಜ್ಯಹಿಂದುಳಿದ ವರ್ಗಗಳ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.