ADVERTISEMENT

ಒಳಮೀಸಲು: ಕಾರಣವೇ ಇಲ್ಲ ಸಂಭ್ರಮಿಸಲು

ಎಸ್‌.ಮಾರೆಪ್ಪ
Published 7 ಸೆಪ್ಟೆಂಬರ್ 2020, 19:31 IST
Last Updated 7 ಸೆಪ್ಟೆಂಬರ್ 2020, 19:31 IST
ಎಸ್‌. ಮಾರೆಪ್ಪ
ಎಸ್‌. ಮಾರೆಪ್ಪ   

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವುದರ ಸಂಬಂಧ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸಬೇಕಿದೆ. ಮೀಸಲಾತಿ ಇದ್ದೂ ಅದು ದೊರಕದೆ ಇರುವ ಕಾರಣ ಒಳಮೀಸಲಾತಿಗಾಗಿ ಒತ್ತಾಯಿಸುತ್ತಿರುವ ನಾವು, ಈ ತೀರ್ಪನ್ನು ಸಂಭ್ರಮಿಸಿದ್ದೇವೆ. ಸ್ವಾಗತಿಸಿದ್ದೇವೆ. ಒಳಮೀಸಲಾತಿಗಾಗಿ 20 ವರ್ಷಗಳಿಂದ ನಡೆಸುತ್ತಿರುವ ಹೋರಾಟವು ನ್ಯಾಯಬದ್ಧವಾಗಿದೆ ಎಂದು ಹೇಳಿದರೆ ಯಾರಿಗೆ ತಾನೆ ಸಂತೋಷವಾಗುವುದಿಲ್ಲ. ಆದರೆ, ನಾವು ಇಷ್ಟು ಸಂಭ್ರಮಿಸುವ ಅವಶ್ಯಕತೆ ಇಲ್ಲ.

‘ಒಳಮೀಸಲಾತಿಯು ನ್ಯಾಯಸಮ್ಮತ ಮತ್ತು ಸಂವಿಧಾನಬದ್ಧ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ ಅಷ್ಟೆ. ಈ ಅಭಿಪ್ರಾಯಕ್ಕೆ ತೀರ್ಪಿನ ಮುದ್ರೆ ಒತ್ತಿಲ್ಲ. ಬದಲಿಗೆ ಒಳಮೀಸಲಾತಿಗೆ ಸಂಬಂಧಿಸಿದ ತೀರ್ಮಾನವನ್ನು ಏಳು ಅಥವಾ ಅದಕ್ಕಿಂತಲೂ ಹೆಚ್ಚು ನ್ಯಾಯಮೂರ್ತಿಗಳಿರುವ ಪೀಠವು ತೆಗೆದುಕೊಳ್ಳಬೇಕು ಎಂದು ಹೇಳಿದೆ. ಅಂದರೆ ಒಳಮೀಸಲಾತಿ ದೊರೆಯುವ ಕಾಲ ಹತ್ತಿರವೇನೂ ಇಲ್ಲ. ಹೊಸ ಪೀಠ ರಚನೆಯಾಗಿ, ಅದು ವಿಚಾರಣೆ/ಪರಿಶೀಲನೆ ನಡೆಸಿ ತೀರ್ಪು ನೀಡಲು ತೆಗೆದುಕೊಳ್ಳುವ ಸಮಯ ಕಡಿಮೆಯೇನಲ್ಲ.ಮೀಸಲಾತಿ ವಂಚಿತ ಪರಿಶಿಷ್ಟಜಾತಿಗಳು ಒಳಮೀಸಲಾತಿ ಪಡೆಯಲು ಇನ್ನೂ ಹತ್ತು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ವರ್ಷ ಕಾಯದೆ ಬೇರೆ ದಾರಿ ಇಲ್ಲ. ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ನೀಡಿರುವ ಹೇಳಿಕೆಯೂ ಇದನ್ನೇ ಪುಷ್ಟೀಕರಿಸುತ್ತದೆ. ‘ಮುಂದಿನ ಉನ್ನತ ಪೀಠವು ನೀಡುವ ತೀರ್ಪನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಅವರು ಹೇಳಿದ್ದಾರೆ. ಉನ್ನತ ಪೀಠವು ತೀರ್ಪು ನೀಡುವುದು ಯಾವಾಗ? ಒಳಮೀಸಲಾತಿ ನೀಡುವುದನ್ನು ವಿಳಂಬ ಮಾಡಲಾಗುತ್ತಿದೆ. ಈ ಮೂಲಕ ಸಾಮಾಜಿಕ ನ್ಯಾಯವನ್ನು ನಿರಾಕರಿಸಲಾಗುತ್ತಿದೆ.

ಒಳಮೀಸಲಾತಿಯ ಬೇಡಿಕೆಯನ್ನು ಹತ್ತಿಕ್ಕುವ ಯತ್ನಗಳು ಬಹಳ ಹಿಂದಿನಿಂದಲೂ ನಡೆದಿವೆ. ಒಳಮೀಸಲಾತಿ ಜಾರಿಗೆ ಬರುವುದನ್ನು ಪರಿಶಿಷ್ಟರಲ್ಲಿನ ಬಲಗೈ ಜಾತಿಗಳು ವಿರೋಧಿಸುತ್ತಾ ಬಂದಿವೆ. ಈ ವಿರೋಧದ ಕಾರಣ ಪರಿಶಿಷ್ಟ ಜಾತಿಗಳ ಒಗ್ಗಟ್ಟು ಒಡೆದಿದೆ. ಒಳಮೀಸಲಾತಿಯ ವಿಚಾರದಿಂದಾಗಿ ಪರಿಶಿಷ್ಟರಲ್ಲಿ ವಿಭಜನೆಯಾಗಿದೆ. ಈ ವಿಭಜನೆಯನ್ನು ಮತ್ತಷ್ಟು ದೊಡ್ಡದಾಗಿಸುವ ಅಭಿಪ್ರಾಯವನ್ನೂ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರಿದ್ದ ಪೀಠವು ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲದೇ ಇದ್ದ ‘ಕೆನೆಪದರ’ ವಿಷಯಕ್ಕೆ ಸಂಬಂಧಿಸಿದಂತೆಯೂ ಪೀಠವು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಕೆನೆಪದರ ವಿಷಯವನ್ನು ಮರುಪರಿಶೀಲನೆಗೆ ಒಳಪಡಿಸುವ ಅವಶ್ಯಕತೆ ಇಲ್ಲ’ ಎಂದು ಪೀಠ ಹೇಳಿದೆ. ಪರಿಶಿಷ್ಟರಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದಿರುವ ಜನರನ್ನು ಪರಿಶಿಷ್ಟರ ಪಟ್ಟಿಯಿಂದಲೇ ಹೊರಗೆ ಇಡುವ ಕೆಲಸವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಮಾಡಿದ್ದಾರೆ.‌

ADVERTISEMENT

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟವನ್ನು ಪರಿಶಿಷ್ಟರಲ್ಲಿನ ಬಲಗೈ ಜಾತಿಗಳು ವಿರೋಧಿಸುತ್ತಲೇ ಬಂದಿವೆ. ಇದೇ ಕಾರಣದಿಂದಲೇ ಒಳಮೀಸಲಾತಿ ಜಾರಿಗೆ ಸಂಬಂಧಿಸಿದ ಯಾವ ಕ್ರಮವನ್ನೂ ಸರ್ಕಾರಗಳು ತೆಗೆದುಕೊಳ್ಳುತ್ತಿಲ್ಲ. ಪರಿಶಿಷ್ಟರ ಮರುವರ್ಗೀಕರಣದ ಉದ್ದೇಶದಿಂದ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ರಚಿಸಿತು. 2012ರಲ್ಲಿ ಆಯೋಗವು ವರದಿ ಕೊಟ್ಟಿತು. ಆದರೆ, ವರದಿ ನೀಡಿದ ದಿನವೇ ಬಲಗೈ ಜಾತಿಗಳ ನಾಯಕರು ವರದಿಯನ್ನು ವಿರೋಧಿಸಿದರು.

ಬಲಗೈ ಜಾತಿಗೆ ಸೇರಿದವರಾದ ಜಿ.ಪರಮೇಶ್ವರ ಅವರು ‘ಈ ವರದಿ ಅವೈಜ್ಞಾನಿಕ ಮತ್ತು ಅಸಾಂವಿಧಾನಿಕ’ ಎಂದು ಘೋಷಿಸಿದರು. ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಲಕ್ಷ್ಮೀ ನಾರಾಯಣ ನಾಗವಾರ ಅವರೂ ಈ ವರದಿಯನ್ನು ವಿರೋಧಿಸಿದರು. ‘ಇದು ಅವೈಜ್ಞಾನಿಕ’ ಎಂದು ಹೇಳಿದರು. ಬೇರೆ ಬಲಗೈ ಜಾತಿಯ ನಾಯಕರೂ ಈ ಇಬ್ಬರನ್ನು ಅನುಸರಿಸಿದರು. ‘ಈ ವರದಿಯು ನಮ್ಮ ಮರಣ ಶಾಸನ’ ಎಂದು ಬೋವಿಗಳು ಮತ್ತು ಬಂಜಾರರು ಬೊಬ್ಬೆ ಹೊಡೆದರು. ಒಳಮೀಸಲಾತಿಗಾಗಿ ಆಗ್ರಹಿಸುತ್ತಿರುವ ಜಾತಿಗಳ ನಾಯಕರು ಸಂವಾದಕ್ಕೆ ಕರೆದರೂ, ಈ ಜಾತಿಗಳ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಎ.ಜೆ.ಸದಾಶಿವ ಆಯೋಗದ ವರದಿ ಸಲ್ಲಿಕೆಯಾಗಿ ಎಂಟು ವರ್ಷವಾಗುತ್ತಿದೆ. ಪರಿಶಿಷ್ಟ ಸ್ಪೃಶ್ಯ ಜಾತಿಗಳು ಮತ್ತು ಪರಿಶಿಷ್ಟ ಬಲಗೈ ಜಾತಿಗಳ ವಿರೋಧದ ಕಾರಣವೇ ರಾಜ್ಯ ಸರ್ಕಾರವು, ‘ಆಯೋಗದ ವರದಿಯ ಶಿಫಾರಸನ್ನು ಅಂಗೀಕರಿಸಿ’ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲು ಹಿಂದೇಟು ಹಾಕುತ್ತಿದೆ.

ಎಲ್ಲಾ ದಮನಿತ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರೆಯದಂತೆ ಮಾಡುವಲ್ಲಿ ಈ ವಿರೋಧವು ಕೆಲಸ ಮಾಡುತ್ತಿದೆ. ಒಳಮೀಸಲಾತಿಯನ್ನು ವಿರೋಧಿಸುವ ಈ ಪರಿಶಿಷ್ಟ ಜಾತಿಗಳು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ತಂದೊಡ್ಡುತ್ತಿರುವ ದೊಡ್ಡ ಅಪಾಯವನ್ನು ಕಡೆಗಣಿಸುತ್ತಿವೆ. ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರಿಕಲ್ಪನೆಯನ್ನೇ ನಾಶ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಬಹಳ ಬುದ್ಧಿವಂತಿಕೆಯಿಂದ ಮಾಡುತ್ತಿದೆ. ಮೀಸಲಾತಿಯನ್ನು ನಿರರ್ಥಕಗೊಳಿಸುವ ಕೆಲಸ ಹಿಂಬಾಗಿಲಿನ ಮೂಲಕ ನಡೆಯುತ್ತಿದೆ.

ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇದ್ದರಷ್ಟೇ ಮೀಸಲಾತಿ ಉಪಯೋಗಕ್ಕೆ ಬರುತ್ತದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೇ ಇಲ್ಲದಂತೆ ಮಾಡಿದರೆ ಮೀಸಲಾತಿ ನೀಡಬೇಕಾದ ಅಗತ್ಯವೇ ಇರುವುದಿಲ್ಲ. ಈ ಕಾರಣದಿಂದಲೇ ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ. ಇನ್ನೊಂದೆಡೆ ಮೀಸಲಾತಿಯ ಪರವಾಗಿ ಮಾತನಾಡುತ್ತಿದೆ. ಈ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದರೆ, ಆ ಸಂಸ್ಥೆಗಳಲ್ಲಿ ಇರುವ ಹುದ್ದೆಗಳು ಮೀಸಲಾತಿ ವ್ಯಾಪ್ತಿಗೆ ಬರುವುದಿಲ್ಲ. ಆಗ ಮೀಸಲಾತಿಗೆ ಲಭ್ಯವಿದ್ದ ಹುದ್ದೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಅಪಾಯದ ಬಗ್ಗೆ ಪರಿಶಿಷ್ಟ ಜಾತಿಗಳು ಮೌನವಹಿಸಿವೆ. ಹೀಗೇ ಆದರೆ, ಒಳಮೀಸಲಾತಿಯ ಪ್ರಶ್ನೆಯೇ ಇರುವುದಿಲ್ಲ. ಬದಲಿಗೆ ಮೀಸಲಾತಿಗಾಗಿ ಹೋರಾಟ ನಡೆಸಬೇಕಾಗುತ್ತದೆ. ಪರಿಶಿಷ್ಟ ಜಾತಿಗಳು ಒಳಜಗಳವನ್ನು ಬಿಟ್ಟು,ಈ ಅಪಾಯದ ವಿರುದ್ಧ ಹೋರಾಡಬೇಕಿದೆ.

(ಲೇಖಕ ವಕೀಲ, ಮಾದಿಗ ಮೀಸಲಾತಿ ಹೋರಾಟ
ರಾಜ್ಯ ಸಮಿತಿಯ ಗೌರವಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.