
ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದು ಈ ತಿಂಗಳ ಅಂತ್ಯಕ್ಕೆ 25 ವರ್ಷಗಳು ಪೂರ್ಣಗೊಳ್ಳುತ್ತವೆ. 1997ರಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಮಸೂದೆಯನ್ನು ವಿಧಾನಮಂಡಲ ಅಂಗೀಕರಿಸಿತ್ತು. ರಾಷ್ಟ್ರಪತಿ ಅವರು 2000ದ ಮಾರ್ಚ್ 28ರಂದು ಇದಕ್ಕೆ ಅನುಮತಿ ನೀಡಿದ್ದರು. ಸರ್ಕಾರವು ಈ 2021ರಲ್ಲಿ ಮತ್ತು ಈ ವರ್ಷ ಈ ಕಾಯ್ದೆಗೆ ತಿದ್ದುಪಡಿ ತಂದಿದೆ. ತಿದ್ದುಪಡಿಯಲ್ಲಿನ ಕೆಲವು ಅಂಶಗಳಿಗೆ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಕಾಯ್ದೆಯ ಬೆಳ್ಳಿ ಹಬ್ಬದ ಆಚರಣೆ ಕೊನೆಗೊಳ್ಳುವ ಹೊತ್ತಿನಲ್ಲಿ ಸೌಹಾರ್ದ ಸಹಕಾರಿ ಚಳವಳಿಗೆ ಸಂಬಂಧಿಸಿದ ವಿಶೇಷ ಲೇಖನ ಇಲ್ಲಿದೆ
ದೇಶದಲ್ಲಿ ಸಹಕಾರಿ ಕ್ಷೇತ್ರ ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸುವಲ್ಲಿ ವಿಫಲವಾಗಿದೆ ಎಂದು ಯೋಜನಾ ಆಯೋಗದ (ಈಗಿನ ನೀತಿ ಆಯೋಗ) ವರದಿಗಳು ಹೇಳಿದ್ದವು. ಆಯೋಗ ನೀಡಿದ ಮಾದರಿ ಸಹಕಾರಿ ಕಾಯ್ದೆಯಿಂದ ರೂಪುಗೊಂಡಿದ್ದೇ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ. ಇದು ಈ ವರ್ಷಾಂತ್ಯಕ್ಕೆ 25 ವರ್ಷಗಳನ್ನು ಪೂರೈಸುತ್ತಿದೆ.
ಸಹಕಾರ ಕ್ಷೇತ್ರವನ್ನು ‘ಸರ್ಕಾರದ ವಿಸ್ತರಣೆ’ಯಾಗಿ ಅಲ್ಲದೆ, ‘ಜನರ ಸ್ವಂತ ಸಂಸ್ಥೆ’ಯಾಗಿ ನೋಡುವ ದೃಷ್ಟಿಕೋನದಿಂದಾಗಿ ಸೌಹಾರ್ದ ಕಾಯ್ದೆಯು ಒಂದು ಪರ್ಯಾಯ ದಾರಿಯಾಗಿ ಹೊರಹೊಮ್ಮಿತು. ಬದಲಾವಣೆಯ ಹರಿಕಾರನಾಗಿದ್ದ ಈ ಸೌಹಾರ್ದ ಕಾಯ್ದೆಯನ್ನು ಮತ್ತೆ 25 ವರ್ಷಗಳಷ್ಟು ಹಿಂದಕ್ಕೆ ಒಯ್ಯುವ ಪ್ರಯತ್ನಗಳು ನಡೆಯುತ್ತಿರುವ ಹೊತ್ತಿನಲ್ಲಿ ಸೌಹಾರ್ದ ಸಹಕಾರಿಗಳ ಕಾಲು ಶತಮಾನದ ಪ್ರಗತಿಯ ಹೆಜ್ಜೆಗಳತ್ತ ನಾವು ದೃಷ್ಟಿ ಹಾಯಿಸಬೇಕಿದೆ.
ಸದಸ್ಯರ ಸ್ವಾಯತ್ತೆ, ಸ್ವನಿಯಂತ್ರಣ, ಸ್ವಶಾಸನ ಎಂಬ ಮೂಲತತ್ವಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದೆಲ್ಲೆಡೆ ಇರುವ 5,800ಕ್ಕೂ ಅಧಿಕ ಸೌಹಾರ್ದ ಸಹಕಾರಿಗಳು, ಸುಮಾರು 50 ಲಕ್ಷಕ್ಕೂ ಹೆಚ್ಚು ಸದಸ್ಯರ ಜೀವನದಲ್ಲಿ ಆರ್ಥಿಕ–ಸಾಮಾಜಿಕ ಬದಲಾವಣೆ ತಂದಿವೆ. ವಾರ್ಷಿಕ ವ್ಯವಹಾರವು ₹51 ಸಾವಿರ ಕೋಟಿಯನ್ನು ದಾಟಿರುವುದು ಈ ಚಳವಳಿಯ ಶಕ್ತಿ ಮತ್ತು ಅದರ ಮೇಲೆ ಜನರಿಗಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಸಂದರ್ಭದಲ್ಲೇ ಸೌಹಾರ್ದ ಚಳವಳಿ ಬೆಳ್ಳಿ ಹಬ್ಬ ಆಚರಿಸಿರುವುದು ಹೆಮ್ಮೆಯ ಸಂಗತಿ, ಜೊತೆಗೆ ಇದು ಗಂಭೀರ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕ್ಷಣವೂ ಹೌದು.
ಡಿಜಿಟಲೀಕರಣದ ಕ್ಷೇತ್ರದಲ್ಲಿ ಸೌಹಾರ್ದ ಬ್ಯಾಂಕುಗಳು ಎಟಿಎಂ, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಕಾರ್ಡ್ ಸೇವೆಗಳು ಇತ್ಯಾದಿ ಸೇವೆಗಳನ್ನು ಗ್ರಾಮ–ನಗರಗಳಲ್ಲಿ ವಿಸ್ತರಿಸಿ, ಗ್ರಾಹಕಸ್ನೇಹಿ, ಪಾರದರ್ಶಕ ವ್ಯವಹಾರ ಮಾದರಿಯನ್ನು ನಿರ್ಮಿಸುತ್ತಿವೆ. ಇದರಿಂದ ಸದಸ್ಯತ್ವ, ಠೇವಣಿಗಳು, ಸಾಲ ಮತ್ತು ಲಾಭ ಎಲ್ಲವೂ ಶಾಶ್ವತ ಏರಿಕೆಯನ್ನು ಕಂಡಿವೆ. ಗ್ರಾಮೀಣ–ನಗರ ಆರ್ಥಿಕ ಚಟುವಟಿಕೆಗಳಿಗೆ ಈ ಚಳವಳಿ ದೊಡ್ಡ ಕೊಡುಗೆ ನೀಡಿದೆ ಎಂಬುದು ಸ್ಪಷ್ಟ.
ಸೌಹಾರ್ದ ಕಾಯ್ದೆಯ ಅಡಿಯಲ್ಲಿ ನೋಂದಣಿಯಾದ ಪ್ರಥಮ ಸಹಕಾರಿ ಸಂಸ್ಥೆಯೆಂದರೆ ಸುಕೋ ಬ್ಯಾಂಕ್. ಇದು ಹಳೆಯ ಸಹಕಾರ ಕಾಯ್ದೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯಾಗಿದ್ದು, ಸ್ವಯಂಪ್ರೇರಿತವಾಗಿ ಸೌಹಾರ್ದ ಕಾಯ್ದೆಗೆ ಪರಿವರ್ತನೆಯಾಯಿತು. ಈ ಪರಿವರ್ತನೆಯು ಕೇವಲ ಒಂದು ಸಹಕಾರಿ ಬ್ಯಾಂಕಿನ ನಿರ್ಧಾರವಲ್ಲ; ಇಡೀ ರಾಜ್ಯದ ಸಹಕಾರ ಕ್ಷೇತ್ರಕ್ಕೆ ದಾರಿ ತೋರಿಸಿದ ಒಂದು ಐತಿಹಾಸಿಕ ಹೆಜ್ಜೆಯಾಯಿತು. ಇದರ ಬಳಿಕ 50ಕ್ಕಿಂತ ಹೆಚ್ಚು ಸಹಕಾರ ಸಂಸ್ಥೆಗಳು ಸೌಹಾರ್ದ ಕಾಯ್ದೆಯನ್ನು ಅಳವಡಿಸಿಕೊಳ್ಳಲೂ ಸುಕೋ ಬ್ಯಾಂಕ್ ಕೆಲಸ ಮಾಡಿತು. ಇದರ ಫಲವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಎಂಬ ರಾಜ್ಯಮಟ್ಟದ ಫೆಡರಲ್ ಸಂಸ್ಥೆ ಹುಟ್ಟಿಕೊಂಡಿತು. ಇದು ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯಲ್ಲ; ಸೌಹಾರ್ದ ಸಹಕಾರಗಳೇ ಸೇರಿ ನಿರ್ಮಿಸಿದ ಸ್ವಯಂ-ಆಡಳಿತ ಸಂಸ್ಥೆ. ಇದರ ಉದ್ದೇಶ ನಿಯಂತ್ರಣವಲ್ಲ, ಮಾರ್ಗದರ್ಶನ; ಆದೇಶವಲ್ಲ, ಸಂಯೋಜನೆ.
25 ವರ್ಷದ ಸಾಧನೆಗಳು
25 ವರ್ಷಗಳಲ್ಲಿ ಸೌಹಾರ್ದ ಸಹಕಾರಿಗಳು ಸರ್ಕಾರದ ಅನುದಾನಗಳಿಲ್ಲದೆ, ರಾಜಕೀಯ ಆದೇಶಗಳಿಲ್ಲದೆ, ಸ್ಥಳೀಯ ಜನರ ಹಣವನ್ನು ಸ್ಥಳೀಯ ಜನರಿಗೇ ಸಾಲವಾಗಿ ನೀಡಿ ಒಂದು ಮೌನ ಕ್ರಾಂತಿಯನ್ನು ನಡೆಸಿವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಣ್ಣ ವ್ಯಾಪಾರಿಗಳು, ಕೃಷಿಕರು, ಸೌಹಾರ್ದ ಸಹಕಾರಿಗಳ ಮೂಲಕ ಆರ್ಥಿಕ ಭದ್ರತೆ ಪಡೆದಿದ್ದಾರೆ. ಸಹಕಾರ ಸಂಸ್ಥೆಗಳು ಸರ್ಕಾರದ ಯೋಜನೆಗಳಾಗಿ ಅಲ್ಲ, ಜನರ ನಂಬಿಕೆಯ ಸಂಸ್ಥೆಗಳಾಗಿ ಬೆಳೆದಿವೆ. ಕೆಲವು ಸೌಹಾರ್ದ ಸಂಸ್ಥೆಗಳು ಜನರ ನಂಬಿಕೆಯನ್ನು ಹಾಳು ಮಾಡಿದ ಉದಾಹರಣೆಗಳೂ ಇವೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಾಡಿದ ಕೆಲವು ಕಾನೂನು ತಿದ್ದುಪಡಿಗಳು ಸೌಹಾರ್ದ ಕಾಯ್ದೆಯ ಮೂಲ ಸ್ವಭಾವವನ್ನೇ ಪ್ರಶ್ನಿಸುತ್ತಿವೆ. ರಿಜಿಸ್ಟ್ರಾರ್ ಅಧಿಕಾರ ವಿಸ್ತರಣೆ, ಠೇವಣಿಗಳ ಮೇಲೆ ಹೆಚ್ಚುವರಿ ಕಡ್ಡಾಯ ರಿಸರ್ವ್ ನಿಯಮಗಳು, ನಿಧಿ ಹೂಡಿಕೆಗಳ ಮೇಲಿನ ಕಠಿಣ ನಿಯಂತ್ರಣಗಳು ಸೌಹಾರ್ದ ಸಂಸ್ಥೆಗಳ ಸ್ವಾಯತ್ತ ನಿರ್ಧಾರ ಶಕ್ತಿಯನ್ನು ಕುಗ್ಗಿಸುವ ದಿಕ್ಕಿನಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿದೆ. ಇವುಗಳು ಸೌಹಾರ್ದ ಕಾಯ್ದೆಯ ಆತ್ಮಕ್ಕೆ ವಿರುದ್ಧವಾಗಿವೆ ಎಂಬ ಅಭಿಪ್ರಾಯವಿದೆ.
ಫೆಡರಲ್ ಕೋ–ಆಪರೇಟಿವ್ ದುರ್ಬಲವಾದರೆ, ಸೌಹಾರ್ದ ಸಹಕಾರಿಗಳು ಸರ್ಕಾರದ ಮುಂದೆ ಏಕಾಂಗಿಗಳಾಗುತ್ತವೆ. ಸದಸ್ಯರ ಹಿತರಕ್ಷಣೆಗೆ ಇರುವ ಒಟ್ಟುಗೂಡಿದ ವೇದಿಕೆ ನಾಶವಾಗುತ್ತದೆ. ಸ್ವಯಂ ನಿಯಂತ್ರಣದ ಬದಲು ಸರ್ಕಾರಿ ನಿಯಂತ್ರಣ ಬಲಗೊಳ್ಳುತ್ತದೆ. ಇದು ಸಹಕಾರ ಕ್ಷೇತ್ರವನ್ನು ಮತ್ತೆ 1959ರ ಯುಗದ ಹಿಂದಕ್ಕೆ ಕರೆದೊಯ್ಯುತ್ತದೆ.
ಸಮಸ್ಯೆ ಎಲ್ಲಿ? ಪರಿಹಾರ ಏನು?
ಸೌಹಾರ್ದ ಸಹಕಾರಿಗಳ ಸಮಸ್ಯೆ ಸ್ವಾಯತ್ತೆಯಲ್ಲ. ಆದರೆ, ಸ್ವಾಯತ್ತೆಯನ್ನು ಬೆಂಬಲಿಸುವ ಸೂಕ್ತ, ಸ್ಪಷ್ಟ ಮತ್ತು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಗಳ ಕೊರತೆಯಲ್ಲಿ ಸಮಸ್ಯೆ ಇದೆ. ಸ್ವಾಯತ್ತೆ ಎಂದರೆ ನಿಯಂತ್ರಣವಿಲ್ಲದ ಸ್ವೇಚ್ಛೆ ಅಲ್ಲ; ಅದು ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸುವ ಸದಸ್ಯರ ಸ್ವಾತಂತ್ರ್ಯ. ಈ ಸೂಕ್ಷ್ಮ ಅಂತರವನ್ನು ಅರಿಯದೆ, ಸ್ವಾಯತ್ತೆಯನ್ನೇ ಸಮಸ್ಯೆಯಾಗಿ ಚಿತ್ರಿಸುವುದು ಸರಿಯಲ್ಲ.
ನಿಯಂತ್ರಣ ಅನಿವಾರ್ಯ ಎನ್ನುವುದು ನಿಜ. ಯಾವುದೇ ಹಣಕಾಸು ಸಂಸ್ಥೆಯಲ್ಲಿ ಠೇವಣಿದಾರರ ಹಣದ ರಕ್ಷಣೆ ಆದ್ಯತೆಯಾಗಬೇಕು. ಆದರೆ ಈ ನಿಯಂತ್ರಣ ಮೇಲಿನಿಂದ ಹೇರಲಾದ ಅಥವಾ ನೇರ ಸರ್ಕಾರಿ ಹಸ್ತಕ್ಷೇಪ ಆಗಬಾರದು. ಅಂಥ ಕ್ರಮಗಳು ಸೌಹಾರ್ದ ಸಹಕಾರಿಗಳ ಆತ್ಮವನ್ನೇ ಕುಗ್ಗಿಸುತ್ತವೆ. ಇದರ ಬದಲಾಗಿ ನಿಯಂತ್ರಣವು ಸಂಸ್ಥೆಯ ಒಳಗಿನಿಂದಲೇ ಬಲಪಡಿಸುವ ರೀತಿಯಲ್ಲಿ ರೂಪುಗೊಳ್ಳಬೇಕು. ಸರ್ಕಾರವು ಇಲ್ಲಿ ಮಾರ್ಗದರ್ಶಕನ ಮಾತ್ರ ನಿರ್ವಹಿಸಬೇಕೇ ವಿನಾ ನಿರ್ವಾಹಕನಾಗಬಾರದು.
ಇಲ್ಲಿ ಅಪಾಯ ಆಧಾರಿತ ನಿಯಂತ್ರಣ ಮಹತ್ವ ಪಡೆದುಕೊಳ್ಳುತ್ತದೆ. ಎಲ್ಲ ಸೌಹಾರ್ದ ಸಹಕಾರಗಳನ್ನೂ ಒಂದೇ ತಟ್ಟೆಯಲ್ಲಿ ತೂಗುವುದರಿಂದ ಸಮಸ್ಯೆ ಪರಿಹಾರವಾಗದು. ಹಣಕಾಸು ಸ್ಥಿತಿ, ಆಡಳಿತ ಗುಣಮಟ್ಟ ಮತ್ತು ಅಪಾಯ ಮಟ್ಟವನ್ನು ಆಧರಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸೌಹಾರ್ದಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕು; ದುರ್ಬಲ ಸಂಸ್ಥೆಗಳ ಮೇಲೆ ಮಾತ್ರ ಹೆಚ್ಚುವರಿ ಮೇಲ್ವಿಚಾರಣೆ ಇರಬೇಕು. ಇದು ನಿಯಂತ್ರಣ ಮತ್ತು ಸ್ವಾಯತ್ತೆಯ ನಡುವಿನ ಸಮತೋಲನಕ್ಕೆ ಸೂಕ್ತ ಮಾರ್ಗ.
ಉದಾಹರಣೆಗೆ, ಸ್ವತಂತ್ರ ಸಹಕಾರಿ ಓಂಬುಡ್ಸ್‌ಮನ್ ವ್ಯವಸ್ಥೆ ತರುವ ಅಗತ್ಯವಿತ್ತು. ರಿಜಿಸ್ಟ್ರಾರ್‌ಗೆ ಅತಿಯಾದ ಅಧಿಕಾರ ಒಪ್ಪಿಸುವ ಬದಲು, ಠೇವಣಿದಾರರು ಮತ್ತು ಸದಸ್ಯರ ದೂರುಗಳಿಗೆ ವೇಗವಾಗಿ ಸ್ಪಂದಿಸುವ ಸ್ವತಂತ್ರ ವ್ಯವಸ್ಥೆ ರೂಪಿಸಬೇಕು. ಇದರಿಂದ ಆಡಳಿತದ ಮೇಲಿನ ವಿಶ್ವಾಸ ಹೆಚ್ಚುತ್ತದೆ ಮತ್ತು ಸರ್ಕಾರದ ನೇರ ಹಸ್ತಕ್ಷೇಪದ ಅಗತ್ಯ ಕಡಿಮೆಯಾಗುತ್ತದೆ.
ಸ್ವಾಯತ್ತೆ ಹೆಚ್ಚಿಸಬೇಕು
ಠೇವಣಿದಾರರ ರಕ್ಷಣೆಗೆ ಸರ್ಕಾರ ತಾನೇ ಅಧಿಕಾರ ಸ್ವಾಧೀನಪಡಿಸಿಕೊಳ್ಳುವ ಮಾರ್ಗವನ್ನು ಆಯ್ಕೆಮಾಡುವ ಬದಲು, ಸಹಕಾರಿ ಆಧಾರಿತ ಠೇವಣಿ ಭದ್ರತಾ ವ್ಯವಸ್ಥೆ ರೂಪಿಸುವುದು ಹೆಚ್ಚು ಸೂಕ್ತ. ಸಹಕಾರಿಗಳೇ ಸೇರಿ ನಿರ್ಮಿಸುವ ಠೇವಣಿ ಭದ್ರತಾ ನಿಧಿ ಅಥವಾ ವಿಮಾ ವ್ಯವಸ್ಥೆ, ಅಪಾಯ ಎದುರಾದಾಗ ಠೇವಣಿದಾರರಿಗೆ ರಕ್ಷಣೆ ನೀಡಬಹುದು. ಇದು ಸಹಕಾರದ ತತ್ವಕ್ಕೂ ಹೊಂದಿಕೆಯಾಗುತ್ತದೆ ಮತ್ತು ಸ್ವಾಯತ್ತೆಯನ್ನೂ ಉಳಿಸುತ್ತದೆ.
ಸೌಹಾರ್ದ ಸಹಕಾರಗಳಿಗೆ ಬೇಕಾಗಿರುವುದು ಸ್ವಾಯತ್ತೆಯ ಕಡಿತವಲ್ಲ; ಅದನ್ನು ಜವಾಬ್ದಾರಿಯುತವಾಗಿ ನಡೆಸುವ ಪ್ರಬಲ ವ್ಯವಸ್ಥೆಗಳು. ನಿಯಂತ್ರಣ ಮತ್ತು ಸ್ವಾತಂತ್ರ್ಯ ಪರಸ್ಪರ ವಿರೋಧಿಗಳಲ್ಲ; ಇವೆರಡರ ನಡುವೆ ಸಮತೋಲನ ಸಾಧಿಸುವುದೇ ಸೌಹಾರ್ದ ಸಹಕಾರ ಚಳವಳಿಯ ಮುಂದಿನ ಹಂತದ ಯಶಸ್ಸಿನ ಕೀಲಿಕೈ. ಈ ಬಗ್ಗೆ ರಾಜ್ಯ ಮತ್ತು ಸರ್ಕಾರದ ಮಟ್ಟದಲ್ಲಿ ಸೂಕ್ತವಾದ ಚರ್ಚೆ ನಡೆಯದಿರುವುದು ದುರದೃಷ್ಟಕರ. ಸೌಹಾರ್ದ ಸಹಕಾರ ಚಳವಳಿ ಒಂದು ಕಾನೂನು ಸಮಸ್ಯೆಯಲ್ಲ; ಅದು ಒಂದು ವಿಚಾರ ಚಳವಳಿ. 25 ವರ್ಷಗಳ ನಂತರವೂ ಇದು ಚರ್ಚೆಯಲ್ಲಿದೆ ಎಂದರೆ, ಅದು ವೈಫಲ್ಯವಲ್ಲ— ಅದರ ಪ್ರಸ್ತುತತೆಯ ಸಾಕ್ಷಿ. ಸ್ವಾಯತ್ತೆಯನ್ನು ಕುಗ್ಗಿಸಿ ಸಹಕಾರವನ್ನು ಉಳಿಸಲಾಗದು. ಸ್ವಾಯತ್ತೆಯನ್ನು ಬಲಪಡಿಸಿದರೆ ಮಾತ್ರ ಸಹಕಾರ ಚಳವಳಿ ಜೀವಂತವಾಗಿರುತ್ತದೆ.
ಲೇಖಕ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಸಂಸ್ಥಾಪಕ ಅಧ್ಯಕ್ಷ ಮತ್ತು ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.