ADVERTISEMENT

ವಿಶ್ಲೇಷಣೆ: ‘ಸಮುದಾಯ’ದ ನಿರಂತರ ನಡಿಗೆ

ನಟರಾಜ್‌ ಹುಳಿಯಾರ್‌
Published 22 ಆಗಸ್ಟ್ 2025, 23:40 IST
Last Updated 22 ಆಗಸ್ಟ್ 2025, 23:40 IST
<div class="paragraphs"><p>ವಿಶ್ಲೇಷಣೆ</p></div>

ವಿಶ್ಲೇಷಣೆ

   

ಏಕೀಕರಣದ ನಂತರ ಕರ್ನಾಟಕ ಕಂಡ ಹೊಸ ಅಲೆಗಳಲ್ಲಿ ‘ಸಮುದಾಯ’ವೂ ಒಂದು. ಕರ್ನಾಟಕದ ‘ಸಮುದಾಯ’, ದೇಶದಲ್ಲೇ ವಿಶಿಷ್ಟವಾದ ಜನಪರ ರಂಗಭೂಮಿ ಆಂದೋಲನವೂ ಹೌದು. ‘ವೈಚಾರಿಕ ಕರ್ನಾಟಕ’ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿರುವ ‘ಸಮುದಾಯ’ದ ಅಪೂರ್ವ ಸಾಂಸ್ಕೃತಿಕ ಚಳವಳಿಗೀಗ ಐವತ್ತು ವರ್ಷ.

-----

ADVERTISEMENT

ಆಗಸ್ಟ್ 16, 1975. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಹುತ್ತವ ಬಡಿದರೆ’ ನಾಟಕ ಪ್ರದರ್ಶನದ ಮೂಲಕ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆ ಅಧಿಕೃತವಾಗಿ ಶುರುವಾದ ದಿನ. ಆಗ ಸಂಘಟನೆಯಲ್ಲಿ ಭಾಗಿಯಾಗಿದ್ದ ಕೆಲವರಿಗೆ ಮಾರ್ಕ್ಸ್‌ವಾದಿ ಸಾಮಾಜಿಕ ಚಿಂತನಾ ಕ್ರಮಗಳನ್ನು, ಇನ್ನು ಕೆಲವರಿಗೆ ಸರ್ವಸಾಮಾನ್ಯವಾದ ಪ್ರಗತಿಪರ ನೋಟಗಳನ್ನು ರಂಗಭೂಮಿ ಮೂಲಕ ಕೊಂಡೊಯ್ಯವ ಆಶಯ ಪ್ರಧಾನವಾಗಿತ್ತು. ಆಗಿನ್ನೂ ಕರ್ನಾಟಕದ ಸಾಂಸ್ಕೃತಿಕ ಲೋಕದಲ್ಲಿ ಹಲ ಬಗೆಯ ಚಿಂತನಾಲೋಕಗಳು ವಿಕಾಸಗೊಳ್ಳುತ್ತಿದ್ದವು. ಕಮ್ಯುನಿಸ್ಟ್ ಚಳವಳಿಯ ಬಗ್ಗೆ ಭರವಸೆಯಿಟ್ಟ ಲೇಖಕ, ಲೇಖಕಿಯರು, ಚಿಂತಕರಿದ್ದರು. ದಲಿತ ಚಳವಳಿ ಶುರುವಾಗಿತ್ತು. ‘ಸಮಾಜವಾದಿ ಯುವಜನ ಸಭಾ’ದ ಪುಟ್ಟ ತಂಡಗಳಿದ್ದವು. ಕಾಲೇಜು, ವಿಶ್ವವಿದ್ಯಾಲಯಗಳ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಕೀಲರು, ಪತ್ರಕರ್ತರು, ರಾಜಕೀಯ ಕಾರ್ಯಕರ್ತರು, ರಂಗಾಸಕ್ತರು, ಹಲ ಬಗೆಯ ಚಳವಳಿಗಾರರು ಸಾಮಾಜಿಕ–ರಾಜಕೀಯ ಪ್ರಶ್ನೆ ಗಳನ್ನು ಎತ್ತುತ್ತಿದ್ದರು. ಆ ಘಟ್ಟದಲ್ಲಿ ಮೂಲತಃ ರಂಗ ಸಂಘಟನೆಯಾಗಿ ಹುಟ್ಟಿದ ಸಂಸ್ಥೆಗೆ ‘ಸಮುದಾಯ’ ಎಂದು ಹೆಸರಿಟ್ಟವರು ಕಿ.ರಂ. ನಾಗರಾಜ್.

ಕಳೆದ ಐವತ್ತು ವರ್ಷಗಳ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ‘ಸಮುದಾಯ’ ಸಾಂಸ್ಕೃತಿಕ ಚಳವಳಿ ಹಾಗೂ ರಂಗ ಚಳವಳಿಯ ನಡಿಗೆಗಳ ಪರಿಣಾಮ ಅಪೂರ್ವವಾದುದು. ಈ ನಡಿಗೆಯಲ್ಲಿ ‘ಸಮುದಾಯ’ವು ನಾಟಕ, ಸಂಘಟನೆ, ಸಮುದಾಯ ವಾರ್ತಾಪತ್ರ, ಪುಸ್ತಕ ಪ್ರಕಟಣೆ, ಸಂವಾದ, ಪ್ರತಿಭಟನೆ, ಜಾಥಾ ಮುಂತಾದ ಹಲವು ಚಟುವಟಿಕೆ ಗಳನ್ನು ನಿರ್ವಹಿಸಿದ್ದರೂ, ಅದು ಜನಮಾನಸದಲ್ಲಿ ರಂಗ ಚಟುವಟಿಕೆಗಳ ಸಂಸ್ಥೆಯಾಗಿಯೇ ಹೆಚ್ಚು ನೆಲೆಸಿದಂತಿದೆ. ಸಮಾನತೆಯ ಚಿಂತನೆಗಳು; ಇಪ್ಪತ್ತನೆಯ ಶತಮಾನದ ಮುಂಚೂಣಿ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ರೂಪಿಸಿದ ರಂಗಭೂಮಿ ಸಿದ್ಧಾಂತಗಳು; ಬ್ರೆಕ್ಟನ ‘ತಾಯಿ’, ‘ಗೆಲಿಲಿಯೋ’ ನಾಟಕಗಳು; ಬಾದಲ್ ಸರ್ಕಾರ್ ರೂಪಿಸಿದ ಮೂರನೇ ರಂಗಭೂಮಿಯ ನಾಟಕಗಳು; ಸಫ್ದರ್ ಹಶ್ಮಿಯವರ ರಾಜಕೀಯ ನಾಟಕಗಳು; ಖಚಿತ ರಾಜಕೀಯ ಧ್ವನಿಯ ಕನ್ನಡ ಬೀದಿ ನಾಟಕಗಳು ಹಾಗೂ ಮಹತ್ತರ ರಂಗ ನಾಟಕಗಳು, ಇವೆಲ್ಲವುಗಳ ಮೂಲಕ ‘ಸಮುದಾಯ’ ವಿಶಾಲ ಅರ್ಥದಲ್ಲಿ ಎಡಪಂಥೀಯ ರಾಜಕೀಯ ರಂಗಭೂಮಿಯನ್ನು ಸೃಷ್ಟಿಸಲೆತ್ನಿಸಿತು; ಒಟ್ಟಾರೆಯಾಗಿ ಕನ್ನಡ ವೈಚಾರಿಕ ರಂಗಭೂಮಿಯ ತಳಹದಿಯಾಯಿತು.

ತುರ್ತು ಪರಿಸ್ಥಿತಿ ಘೋಷಣೆಯಾದ ಎರಡು ತಿಂಗಳ ನಂತರ ಹುಟ್ಟಿದ್ದ ‘ಸಮುದಾಯ’ದ ಹಲವರಿಗೆ ಮುಂದೆ ತಾವು ಬೆಂಬಲಿಸಿದ ಜನತಾ ಸರ್ಕಾರವೇ ಕೇಂದ್ರದಲ್ಲಿದ್ದಾಗ ಬಿಹಾರದ ‘ಬೆಲ್ಚಿ’ಯಲ್ಲಿ 1977ರ ಮೇ ತಿಂಗಳಲ್ಲಿ ನಡೆದ ದಲಿತರ ಭೀಕರ ಹತ್ಯೆ ದಿಗ್ಭ್ರಮೆ ಹುಟ್ಟಿಸಿತು. ಸಿ.ಜಿ. ಕೃಷ್ಣಸ್ವಾಮಿ ಮತ್ತು ತಂಡ ರೂಪಿಸಿದ ‘ಬೆಲ್ಚಿ’ ಬೀದಿ ನಾಟಕದ ಮೂಲಕ ಆಯಾ ಕಾಲದ ಮುಖ್ಯ ವಿದ್ಯಮಾನ ಗಳನ್ನು ತಕ್ಷಣವೇ ಪರಿಣಾಮಕಾರಿ ರಾಜಕೀಯ ನಾಟಕವನ್ನಾಗಿ ಮಾಡುವ ಕಲೆ ಕರ್ನಾಟಕದಲ್ಲಿ ವಿಕಾಸಗೊಂಡಿತು. ಫ್ಯೂಡಲ್ ಶಕ್ತಿಗಳ ವಿರೋಧ ಹಾಗೂ ದಲಿತಪರ ನಿಲುವಿನೊಂದಿಗೆ ಮೂಡಿದ್ದ ‘ಬೆಲ್ಚಿ’ಯಲ್ಲಿ ಬೆಂಗಳೂರಿನ ಶ್ರೀರಾಂಪುರ, ವಿನೋಬನಗರ, ಮಾವಳ್ಳಿಯ ಸ್ಲಮ್‌ಗಳಿಂದ ಬಂದವರು ನಟ, ನಟಿಯರಾದರು. ನಾಟಕದ ಮುಖ್ಯ ಪಾತ್ರದಲ್ಲಿ ಬಸವಲಿಂಗಯ್ಯ; ನಾಟಕದ ಹಾಡುಗಾರರಾಗಿ ಜನ್ನಿ; ಸಿದ್ಧಲಿಂಗಯ್ಯನವರ ಕವಿತೆಗಳು ನಾಟಕದ ಹಾಡುಗಳು– ಹೀಗೆ ಕರ್ನಾಟಕದ ಪ್ರಗತಿಪರ ರಂಗಭೂಮಿ–ನಾಟಕಗಳ ಮೂಲ ಮಾದರಿಯೊಂದು ಸೃಷ್ಟಿಯಾಯಿತು.

26 ಆಗಸ್ಟ್ 1978. ಬೆಂಗಳೂರಿನ ಶ್ರೀರಾಂಪುರದ ಗೋಪಾಲಸ್ವಾಮಿ ಹಾಸ್ಟೆಲಿನಲ್ಲಿ ನಡೆದ ‘ಬೆಲ್ಚಿ’ಯ ಮೊದಲ ಪ್ರದರ್ಶನದ ನಂತರ ಲಾಲ್‌ಬಾಗ್ ಬಳಿಯ ಸ್ಲಮ್ಮಿನಿಂದ ಹಿಡಿದು ಬೆಂಗಳೂರಿನ ಹಲವು ಸ್ಲಮ್ಮುಗಳಲ್ಲಿ ನಾಟಕ ಪ್ರದರ್ಶನ ನಡೆಯಿತು. ಅಲ್ಲಿಂದಾಚೆಗೆ ನಡೆದ ‘ಬೆಲ್ಚಿ’ಯ ಸಾವಿರಾರು ಪ್ರದರ್ಶನಗಳ ಲೆಕ್ಕ ಇನ್ನೂ ಸಿಕ್ಕಿಲ್ಲ. ಕೋಲ್ಕತ್ತದಲ್ಲಿ ಎಪ್ಪತ್ತು ಸಾವಿರ ಜನರೆದುರು ಪ್ರದರ್ಶನಗೊಂಡ ‘ಬೆಲ್ಚಿ’, ಚೆನ್ನೈನ ಮರೀನಾ ಬೀಚಿನಲ್ಲೂ ಪ್ರದರ್ಶನಗೊಂಡಿತು; ರಂಗ ಚಳವಳಿಯೇ ಆಯಿತು. ರಾಜ್ಯದ ಹಲವೆಡೆ ‘ಬೆಲ್ಚಿ’ ನಾಟಕವನ್ನಾಡಿರುವ ತಲೆ ತಲೆಮಾರುಗಳು ಸಿಗುವುದನ್ನು ಕಂಡು ಸಮುದಾಯದ ಗುಂಡಣ್ಣ ವಿಸ್ಮಯಗೊಳ್ಳುತ್ತಾರೆ.  

1979ರಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ನಡೆದ ‘ಸಮುದಾಯ’ದ ನಡಿಗೆ ‘ಜಾಥಾ’ ಎಂದರೆ ‘ಸಮುದಾಯ’ ಎಂಬಂತೆ ಕರ್ನಾಟಕದ ಚರಿತ್ರೆಯಲ್ಲಿ ದಾಖಲಾಗಿದೆ. ಜಾಥಾದ ರೋಮಾಂಚನ, ಸಾಹಸ, ಕಷ್ಟಕೋಟಲೆಗಳು, ಅದು ನಟ, ನಟಿಯರಿಗೆ ಅವ್ಯಕ್ತ ಕರ್ನಾಟಕವನ್ನು ಕಾಣಿಸಿದ ರೀತಿ ಇವೆಲ್ಲವನ್ನೂ ಸಿ.ಜಿ.ಕೆ. ‘ಕತ್ತಾಲ ಬೆಳದಿಂಗಳೊಳಗ’ ಆತ್ಮಚರಿತ್ರೆ ಯಲ್ಲಿ ನಿರೂಪಿಸಿದ್ದಾರೆ. ಸಮುದಾಯದ ಚಾರಿತ್ರಿಕ ವಿವರಗಳು ರವಿಕುಮಾರ್ ಬಾಗಿಯವರ ‘ಕರ್ನಾಟಕದ ಸಾಂಸ್ಕೃತಿಕ ಜಾಥಾಗಳು ಮತ್ತು ಸಾಮಾಜಿಕ ಚಳವಳಿಗಳು’ ಪುಸ್ತಕದಲ್ಲಿ ದಾಖಲಾಗಿವೆ.

‘ಸಮುದಾಯ’ ಜಾಥಾ ಕನ್ನಡ ನಾಡಿನ ಸಾಹಿತ್ಯ, ನಾಟಕ ರಂಗಗಳಲ್ಲಿ ಬಿತ್ತಿದ ವೈಚಾರಿಕ ಕರ್ನಾಟಕದ ಬೀಜಗಳು ಹಲವು ತಲೆಮಾರುಗಳಲ್ಲಿ ಫಲ ಕೊಡುತ್ತಾ ಹಬ್ಬುತ್ತಲೇ ಇವೆ. ಪ್ರಸನ್ನರ ನಿರ್ದೇಶನದಿಂದ ಆರಂಭಗೊಂಡು, ಈಚಿನ ತಲೆಮಾರಿನ ಕೆ.ಪಿ. ಲಕ್ಷ್ಮಣ್ ನಿರ್ದೇಶಿಸಿದ ‘ಕರ್ನಲ್‌ಗೆ ಯಾರೂ ಬರೆಯು ವುದಿಲ್ಲ’ ನಾಟಕದವರೆಗೂ ನಡೆದು ಬಂದಿರುವ ‘ಸಮುದಾಯ’ ಹೊಸ ಹೊಸ ದ್ರವ್ಯಗಳನ್ನು ಪಡೆಯುತ್ತಲೇ ಇದೆ. ಈವರೆಗೆ ಬೀದಿನಾಟಕಗಳೂ ಸೇರಿದಂತೆ ಸುಮಾರು ಎಂಬತ್ತೈದು ನಾಟಕಗಳನ್ನು ರೂಪಿಸಿರುವ ‘ಸಮುದಾಯ’ದಲ್ಲಿ ಹಿಂದೊಮ್ಮೆ ಇದ್ದವರು ಮುಂದೊಮ್ಮೆ ಕವಲಾದರೂ ಅವರ ಹೆಸರಿಗೆ ‘ಸಮುದಾಯ’ ಅಂಟಿಕೊಂಡೇ ಇದೆ! ಹೊಸ ನೀರು ‘ಸಮುದಾಯ’ದ ನದಿಗೆ ಸೇರುತ್ತಲೇ ಇದೆ.

‘ಸಮುದಾಯ’ದ ಆರಂಭದ ವರ್ಷಗಳಲ್ಲಿ ಮಾರ್ಕ್ಸ್‌ವಾದಿ ತಾತ್ವಿಕ ನಿರ್ದೇಶನಗಳಿದ್ದರೂ, ಕಮ್ಯುನಿಸ್ಟ್ ನಾಯಕರಾದ ನಂಬೂದಿರಿಪಾಡ್ ಒಮ್ಮೆ, ‘ನೀವು ಕಲಾವಿದರು ಪಾರ್ಟಿ‌ ಲೈನ್ ಎಂದೆಲ್ಲ ಯೋಚಿಸಬಾರದು. ಸ್ವತಂತ್ರವಾಗಿ ನಿಮ್ಮ ಕಲೆಯನ್ನು ಮುಂದೊಯ್ಯಬೇಕು’ ಎಂದಿದ್ದು ತಮ್ಮ ಕಣ್ಣು ತೆರೆಸಿದ್ದನ್ನು ಜನ್ನಿ ನೆನಪಿಸಿಕೊಳ್ಳುತ್ತಾರೆ. ಆದರೂ, ಒಮ್ಮೆ ಮಾರ್ಕ್ಸಿಸ್ಟ್ ಅಥವಾ ಬೇರಾವುದೇ ತಾತ್ವಿಕ ನೆಲೆಯಲ್ಲಿ ವಿದ್ಯಮಾನಗಳನ್ನು ನೋಡಲಾರಂಭಿಸಿದವರಿಗೆ ಅದನ್ನು ಮೀರಿ ಸತ್ಯವನ್ನು ಕಾಣುವುದು ಕಷ್ಟವೆನ್ನುವುದು ನಿಜ. ಆದರೆ, ಅಸಾಧ್ಯವಲ್ಲ! ಕಲಾಸೃಷ್ಟಿ ಎಂಥ ನಿರ್ದೇಶನಗಳನ್ನೂ ಮೀರಿ ತಾನು ಕಂಡ ಸತ್ಯಕ್ಕೆ ನಿಷ್ಠವಾಗಿ ಮುನ್ನಡೆಯುತ್ತಿರಲೂಬಹುದು. ಇಷ್ಟಾಗಿಯೂ, ಸವೆದ ಹಾದಿಯ ಸಿದ್ಧಮಾದರಿಯ ನಟನೆ, ವಸ್ತುವಿನ್ಯಾಸ, ಮಂಡನೆ, ಅಂತ್ಯಗಳ ಸಮಸ್ಯೆಯೂ ಸಮುದಾಯದ ಪ್ರಯೋಗ ಗಳನ್ನು ಒಮ್ಮೊಮ್ಮೆ ಮುತ್ತಿದ್ದರೆ, ಅದು ಸಹಜ‌. ಎಲ್ಲ ಬಗೆಯ ಭಾಷೆಗಳಂತೆ ಪ್ರಗತಿಪರ ಭಾಷೆ ಕೂಡ ಬಳಸಿ ಬಳಸಿ ಕ್ಲೀಷೆಯಾಗುವ ಸಾಧ್ಯತೆ ಇದ್ದೇ ಇರುತ್ತದೆ.

ಭಾರತದಂಥ ದೇಶದಲ್ಲಿ ಪ್ರತಿನಿತ್ಯ ಅತ್ಯಗತ್ಯವಾಗಿ ಬೇಕಾಗಿರುವ ಪ್ರಗತಿಪರತೆಯ ಮೂಲ ತುಡಿತಗಳನ್ನು ಬಿಡದೆ ತಮ್ಮ ಕಲೆಯ ಹಾಗೂ ರಾಜಕಾರಣದ ಹತಾರಗಳನ್ನು ಮರು ರೂಪಿಸಿಕೊಳ್ಳುವುದು ಕೂಡ ಅಷ್ಟೇ ಅಗತ್ಯ. ಹೀಗಾಗಿ, ಬೇರೆ ಬೇರೆ ದಿಕ್ಕುಗಳಿಗೆ ಒಡ್ಡಿಕೊಳ್ಳುವ, ಹೊರಳುವ ಸವಾಲು ‘ಸಮುದಾಯ’ದ ಹಿರಿಯ ಹಾಗೂ ಹೊಸ ತಲೆಮಾರುಗಳಿಗೆ ಎದುರಾಗುತ್ತಿರುತ್ತದೆ. ಸಮುದಾಯದ ರಂಗ ಪ್ರಯೋಗಗಳಿಗೆ ಮುಖ್ಯ ಪ್ರೇರಣೆಗಳನ್ನು ಕೊಟ್ಟ ಬ್ರೆಕ್ಟ್, ‘ಹಳೆಯ ಒಳ್ಳೆಯ ಮಾದರಿಗಳಿಗಿಂತ, ಕೆಟ್ಟ ಹೊಸ ರೀತಿಗಳನ್ನು ಪ್ರಯೋಗಿಸಿ ನೋಡೋಣ’ ಎಂದು ಯಾಕೆ ಹೇಳಿದ ಎಂಬುದನ್ನು ‘ಸಮುದಾಯ’ದ ಸದಸ್ಯರು ಯೋಚಿಸಬೇಕಾಗುತ್ತದೆ. ವಿಲಿಯಂ ಷೇಕ್ಸ್‌ಪಿಯರ್ ನಾಟಕಗಳನ್ನು ಬ್ರೆಕ್ಟ್ ಹೊಸ ನೆಲೆಯಲ್ಲಿ ನೋಡಿದ್ದು ಕೂಡ ‘ಸಮುದಾಯ’ಕ್ಕೆ ದಾರಿದೀಪವಾಗಬಲ್ಲದು. ‘ಕಲೆಗಾಗಿ ಕಲೆ ಅಲ್ಲ; ಸಮುದಾಯಕ್ಕಾಗಿ ಕಲೆ’ ಎಂಬ ವಿಶಾಲ ಐಡಿಯಾ ಕೂಡ ಸರಳೀಕರಣಗೊಂಡ ಸೂತ್ರವಾದಾಗ, ಅದು ಕಲಾಸೃಷ್ಟಿಯ ಪ್ರಕ್ರಿಯೆಯನ್ನೇ ಸರಳೀಕರಣಗೊಳಿಸಬಲ್ಲದು. ಈ ಅಪಾಯ ಬ್ರೆಕ್ಟ್‌ಗೆ ಗೊತ್ತಿತ್ತು. 

ಅದೇನೇ ಇರಲಿ, ಕನ್ನಡ ನಾಡಿಗಷ್ಟೇ ಅಲ್ಲ, ಇಡೀ ದೇಶಕ್ಕೆ ಮಾದರಿಯಾಗಬಲ್ಲ ದೊಡ್ಡ ನಿರ್ದೇಶಕರನ್ನು, ನಾಟಕಕಾರರನ್ನು, ನಟ–ನಟಿಯರನ್ನು, ಚಿಂತಕ ಚಿಂತಕಿಯರನ್ನು ಸೃಷ್ಟಿ ಮಾಡಿದ ಸಮುದಾಯದ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಅನಗತ್ಯವಾಗಿ ಧಾರ್ಮಿಕ ಪರಿಭಾಷೆ, ಹುಸಿ ಅಧ್ಯಾತ್ಮಗಳ ಗೋಜಲುಗಳಿಗೆ ಸಿಕ್ಕಿಕೊಳ್ಳದೆ, ಹಿಂಗಣ್ಣರಾಗಿ ಹಳಹಳಿಸದೆ, ‘ಸಮುದಾಯ’ದ ಹಲವರು ಐದು ದಶಕಗಳಿಂದಲೂ, ಸ್ಥಗಿತ ಸಮಾಜವನ್ನು ಚಲಿಸುವಂತೆ ಮಾಡುವ ಕನಸು ಹೊತ್ತು ಮುನ್ನಡೆ ಯುತ್ತಲೇ ಇದ್ದಾರೆ. ಜಡ, ಮಡಿ ಸಮಾಜವನ್ನು ಬದಲಿಸಲು ಬಯಸುವ ಎಲ್ಲ ತಲೆಮಾರಿನ, ಎಲ್ಲ ಜಾತಿಗಳ ತರುಣ, ತರುಣಿಯರಿಗೂ ‘ಸಮುದಾಯ’ ಪ್ರಿಯವಾದ, ಸರ್ವಸ್ವೀಕಾರದ ಸಂಘಟನೆಯಾಗಿ, ಚಳವಳಿಯಾಗಿ ಬೆಳೆದಿದೆ.

ದಲಿತವಾದ, ಸಮಾಜವಾದ, ಮಾರ್ಕ್ಸ್‌ವಾದ, ಸ್ತ್ರೀವಾದ, ಬದ್ಧ ರಂಗಭೂಮಿ, ಇವನ್ನೆಲ್ಲ ಒಪ್ಪಿದವರಂತೆಯೇ ಈ ಯಾವುದನ್ನೂ ಅಷ್ಟಾಗಿ ತಿಳಿಯದವರು ಕೂಡ ಊರೂರುಗಳಲ್ಲಿ ಸಮುದಾಯದ ಜೊತೆ ಬೆರೆತಿದ್ದಾರೆ. ಊರೂರುಗಳಲ್ಲಿ ಕಾರ್ಮಿಕರು, ಜೀತಗಾರರು, ಅನಕ್ಷರಸ್ಥರು, ಶ್ರಮಿಕರು, ಬಡವರು ಹಾಗೂ ಎಲ್ಲ ಥರದ ನಾಟಕಾಸಕ್ತರು ಸಮುದಾಯದ ಬೀದಿನಾಟಕಗಳನ್ನು ನೋಡಿ ತಮ್ಮನ್ನು ತಾವು ಆ ನಾಟಕದ ಪಾತ್ರ, ಸನ್ನಿವೇಶಗಳಲ್ಲಿ ಗುರುತಿಸಿಕೊಂಡಿ ದ್ದಾರೆ. ಊರೂರುಗಳ ಸಮುದಾಯ ಜಾಥಾದಲ್ಲಿ ಭಾಗಿಯಾಗಿ ರಂಗಭೂಮಿ ಸೇರಿದವರ ದೊಡ್ಡ ಸಂಖ್ಯೆಯೇ ಇದೆ. ಎಲ್ಲೋ ಪುಟ್ಟ ಊರುಗಳಲ್ಲಿ ಸಮುದಾಯ ನೇರವಾಗಿಯೋ, ತನಗರಿವಿಲ್ಲದೆಯೋ ಎಂದೋ ಹಬ್ಬಿಸಿದ ‘ವೈಚಾರಿಕ ಕರ್ನಾಟಕ’ ಇವತ್ತಿಗೂ ಉಸಿರಾಡುತ್ತಿದೆ.

ಚರಿತ್ರಕಾರರು ದಾಖಲಿಸಲಿ ಬಿಡಲಿ, ‘ಸಮುದಾಯ’ ಎನ್ನುವುದು ಕರ್ನಾಟಕ ಸಂಸ್ಕೃತಿಯಲ್ಲಿ ಸಹಜವಾಗಿ ಬೆರೆತುಹೋಗಿದೆ; ಮುಖ್ಯ ಮೈಲಿಗಲ್ಲೂ ಆಗಿದೆ. ‘ಸಮುದಾಯ’ದ ಐವತ್ತರ ಸಂಭ್ರಮ ಈ ಸಂಘಟನೆಯ ತಳಹದಿಗಳನ್ನು ವಿಸ್ತರಿಸಲಿ; ‘ವೈಚಾರಿಕ ಕರ್ನಾಟಕ’ದ ಈ ಕಾಲದ ಅಗತ್ಯಗಳನ್ನು ಇಂದಿನ ಚೌಕಟ್ಟುಗಳಲ್ಲಿ ಸೃಷ್ಟಿಸುವ ಸೃಜನಶೀಲ ಹುರುಪು ತುಂಬಲಿ. ಸಮುದಾಯದ ನೂರನೇ ನಾಟಕದ ಕಾಲ ಬೇಗನೆ ಬರಲಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.