
ಎಸ್ಎಸ್ಎಲ್ಸಿ ತೇರ್ಗಡೆಯ ಅಂಕಗಳ ಇಳಿಕೆ ಸೇರಿದಂತೆ, ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಹೊಸ ಉಪಕ್ರಮಗಳಿಗೆ ತಾತ್ತ್ವಿಕ ಸ್ಪಷ್ಟತೆ ಇದ್ದಂತಿಲ್ಲ; ಅವು ಮಕ್ಕಳು, ಶಿಕ್ಷಕರನ್ನು ಸದಾ ಒತ್ತಡದಲ್ಲಿ ಇರಿಸುವಂತಿವೆ. ಕಲಿಕೆಯ ಜೊತೆಗೆ ಮನೋಲ್ಲಾಸ ಹಾಗೂ ಮನರಂಜನೆ ಪೂರಕವಾಗಿ ಶಿಕ್ಷಣಕ್ರಮ ಇರಬೇಕು.
ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್ಎಲ್‌ಸಿ ಪರೀಕ್ಷೆಯ ತೇರ್ಗಡೆ ಅಂಕಗಳನ್ನು 35ರಿಂದ 33ಕ್ಕೆ ಇಳಿಸುವುದರ ಜೊತೆಗೆ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡುತ್ತಿದೆ. ವೈಯಕ್ತಿಕವಾಗಿ ನನಗೆ ತೇರ್ಗಡೆಯ ಅಂಕಗಳನ್ನು ಇಳಿಸಿದ್ದು, ಮಾತ್ರವೇ ‘ಮುಖ್ಯ’ ಪ್ರಶ್ನೆ ಅಲ್ಲ.
ಶಾಲಾ ಶಿಕ್ಷಣ ಇಲಾಖೆಯು ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ನೀತಿ ನಿರ್ಧಾರಗಳು ತಾತ್ತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಎಷ್ಟು ಸಮರ್ಥನೀಯ ಎನ್ನುವುದು ನನ್ನ ಪ್ರಶ್ನೆ. ಕರ್ನಾಟಕದ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ರಾಷ್ಟ್ರೀಯ ಶಿಕ್ಷಣನೀತಿಯನ್ನು ನಿರಾಕರಿಸಿತು. ರಾಜ್ಯ ಶಿಕ್ಷಣನೀತಿ ರೂಪಿಸಲು ಸಮಿತಿಯನ್ನು ನೇಮಿಸಿತು. ಈ ಸಮಿತಿಯಿಂದ ವಿಸ್ತೃತ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇಲ್ಲಿರುವ ತಾತ್ತ್ವಿಕ ಪ್ರಶ್ನೆಯೆಂದರೆ– ರಾಷ್ಟ್ರೀಯ ಶಿಕ್ಷಣನೀತಿಯನ್ನು ನಿರಾಕರಿಸಿ, ಅದರ ಅಡಿಯಲ್ಲಿರುವ ಪರೀಕ್ಷಾ ಮಾದರಿಯನ್ನು ಅನುಷ್ಠಾನಗೊಳಿಸುವುದು ತಾತ್ತ್ವಿಕವಾಗಿ ಎಷ್ಟು ಸರಿ? ಹಾಗಿದ್ದರೆ ರಾಷ್ಟ್ರೀಯ ಶಿಕ್ಷಣನೀತಿಯನ್ನು ‘ಇಡಿಯಾಗಿ’ ಯಾಕೆ ನಿರಾಕರಿಸಬೇಕಿತ್ತು? ಶಾಲಾ ಶಿಕ್ಷಣನೀತಿಗೆ ಸಂಬಂಧಿಸಿದ ವರದಿ ಸಲ್ಲಿಕೆಯಾಗಿರುವಾಗ ಮತ್ತು ಅದನ್ನು ಆಧರಿಸಿದ ಸರ್ಕಾರದ ನೀತಿ ರೂಪುಗೊಳ್ಳದೇ ಇರುವಾಗ, ಹೊಸ ಬದಲಾವಣೆಗಳಿಗೆ ಮುಂದಾಗುವುದು ಆಡಳಿತಾತ್ಮಕ ನೀತಿ ನಿಯಮದ ದೃಷ್ಟಿಯಿಂದ ಸೂಕ್ತವಲ್ಲ ಅಲ್ಲವೆ?
ಇಂತಹ ತಾತ್ತ್ವಿಕ ಪ್ರಶ್ನೆಗಳಿಗೆ ಹೊರತಾದ ಪ್ರಾಯೋಗಿಕ ಪ್ರಶ್ನೆಗಳು ಸಾಕಷ್ಟಿವೆ. ಎಸ್ಎಸ್ಎಲ್‌ಸಿ ತೇರ್ಗಡೆಯ ಅಂಕಗಳನ್ನು 35ರಿಂದ 33ಕ್ಕೆ ಇಳಿಸುವುದಷ್ಟೇ ಅಲ್ಲ, 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿ ಮಾಡಲಾಗಿದೆ. ಹೀಗೆ ಮಾಡುವಾಗ ತೇರ್ಗಡೆಯ ಶೇಕಡಾವಾರು ಸಂಖ್ಯೆಯನ್ನು ಹೆಚ್ಚಿಸಿ ‘ಹೆಮ್ಮೆ’ಪಡುವ ಉಮೇದು ಮಾತ್ರವಿದೆಯೇ ಹೊರತು ಬೇರೇನೂ ಇಲ್ಲ. 35 ಮತ್ತು 33 ನಡುವಿನ ಎರಡು ಅಂಕಗಳು ವಾಸ್ತವದಲ್ಲಿ ಅಗಾಧ ಪರಿಣಾಮಕ್ಕೆ ಕಾರಣವಾಗುವುದಿಲ್ಲ. ನಾನು ಪ್ರೌಢಶಾಲೆಯ ಅಧ್ಯಾಪಕನಾಗಿಯೂ ಕೆಲಸ ಮಾಡಿದ್ದು, ತೇರ್ಗಡೆಯ ಅಂಕಕ್ಕೆ ತೀರಾ ಹತ್ತಿರ ಬಂದ ವಿದ್ಯಾರ್ಥಿಗಳಿಗೆ ಒಂದೆರಡು ಅಂಕ ಹಾಕುವ ‘ಔದಾರ್ಯ’ವನ್ನು ಬಹುಪಾಲು ಮೌಲ್ಯಮಾಪಕರು ಅನುಸರಿಸುತ್ತ ಬಂದಿದ್ದನ್ನು ಕಂಡಿದ್ದೇನೆ. ಒಂದೆರಡು ಅಂಕಗಳ ಅಂತರವು ವಿದ್ಯಾರ್ಥಿಗಳ ಜ್ಞಾನ ಅಥವಾ ಅಜ್ಞಾನದ ಮಾನದಂಡ ಅಲ್ಲವೇ ಅಲ್ಲ. ಇಲ್ಲಿರುವ ಮುಖ್ಯ ಪ್ರಶ್ನೆಯೆಂದರೆ, ಆಂತರಿಕ ಮೌಲ್ಯಮಾಪನಕ್ಕೆ 20 ಅಂಕಗಳನ್ನು ನಿಗದಿ ಮಾಡಿ, ತೇರ್ಗಡೆಯಾಗಲು ಲಿಖಿತ ಪರೀಕ್ಷೆಯಲ್ಲಿ 13 ಅಂಕಗಳು ಬಂದರೆ ಸಾಕು ಎಂಬುದು ಎಷ್ಟು ಸರಿ? ವಾಸ್ತವವಾಗಿ ತೇರ್ಗಡೆಗಾಗಿ ಲಿಖಿತ ಪರೀಕ್ಷೆಗೆ ನಿಗದಿಪಡಿಸುವ ಕನಿಷ್ಠ ಅಂಕಗಳು ಗರಿಷ್ಠವಾಗಿರಬೇಕು. ಆಂತರಿಕ ಮೌಲ್ಯಮಾಪನಕ್ಕೆ ಕಡಿಮೆ ಇರಬೇಕು. ಇಲ್ಲಿ ಉಲ್ಟಾ ಆಗಿದೆ. ಇಷ್ಟಕ್ಕೂ ಯಾವ ಅಧ್ಯಾಪಕರೂ ಆಂತರಿಕ ಮೌಲ್ಯಮಾಪನದಲ್ಲಿ 18ಕ್ಕಿಂತ ಕಡಿಮೆ ಅಂಕಗಳನ್ನು ಕೊಟ್ಟ ನಿದರ್ಶನಗಳು ಇಲ್ಲ ಎಂದೇ ಹೇಳಲಾಗುತ್ತಿದೆ. ಕೆಲವೊಮ್ಮೆ 20ಕ್ಕೆ 20 ಅಂಕಗಳನ್ನು ಕೊಡುತ್ತಾರೆ.
ಲಿಖಿತ ಪರೀಕ್ಷೆಗೆ ಕಡಿಮೆ ಅಂಕಗಳನ್ನು ನಿಗದಿ ಮಾಡುವ ಮೂಲಕ ಪಠ್ಯಗಳ ಅಭ್ಯಾಸವನ್ನು ಸಾಕಷ್ಟು ಕುಂಠಿತಗೊಳಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಪ್ರಶ್ನೆಪತ್ರಿಕೆಗಳ ಸ್ವರೂಪವನ್ನು ಹೊಸದಾಗಿ ರೂಪಿಸಿ, ಯಾವ ಯಾವ ಅಧ್ಯಾಯಕ್ಕೆ ಎಷ್ಟು ಅಂಕಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆಯೆಂಬುದನ್ನು
‘ನೀಲನಕ್ಷೆ’ಯ ಮೂಲಕ ಪ್ರಕಟಿಸಲಾಗಿದೆ. ಕನ್ನಡ ಪಠ್ಯದ ಉದಾಹರಣೆ ಕೊಡುವುದಾದರೆ ‘ನಮ್ಮ ಭಾಷೆ’ ಎಂಬ ಪಾಠದಲ್ಲಿ 1 ಅಂಕದ ಒಂದು ಪ್ರಶ್ನೆ, 2 ಅಂಕದ ಒಂದು ಪ್ರಶ್ನೆ ಕೇಳಲಾಗುತ್ತದೆ. ಈ ಅಧ್ಯಾಯಕ್ಕೆ ಒಟ್ಟು 3 ಅಂಕ ನಿಗದಿಯಾಗಿದೆ. ಹೀಗೆ ವಿವಿಧ ಪಠ್ಯವಿಷಯಗಳ ಪ್ರತಿ ಅಧ್ಯಾಯಕ್ಕೆ ಇಂತಿಷ್ಟು ಅಂಕಗಳ ಪ್ರಶ್ನೆ ಕೇಳಲಾಗುತ್ತದೆಯೆಂದು ಮೊದಲೇ ಪ್ರಕಟಿಸಿರುವುದರಿಂದ ತೇರ್ಗಡೆ ಹೊಂದಲು ಅಗತ್ಯವಾದ ಕೆಲವು ಅಧ್ಯಾಯಗಳನ್ನು ಮಾತ್ರ ಅಭ್ಯಾಸ ಮಾಡಿಕೊಂಡರೂ ಸಾಕೆಂಬ ನಿರ್ಧಾರಕ್ಕೆ ಅನೇಕ ವಿದ್ಯಾರ್ಥಿಗಳು ಬರಬಹುದು. ಉದಾಹರಣೆಗೆ, ಐದು ಅಧ್ಯಾಯಗಳಿಗೆ ಕ್ರಮವಾಗಿ 5, 6, 4, 3, 5 ಹೀಗೆ ನಿಗದಿಯಾಗಿದ್ದರೆ, ತೇರ್ಗಡೆ ಯಾಗಲು ಐದು ಅಧ್ಯಾಯಗಳ ಓದು ಸಾಕೆಂದು ತೀರ್ಮಾನಿಸಬಹುದು. ಉಳಿದ ಅಧ್ಯಾಯ ಅಥವಾ ಪಾಠಗಳನ್ನು ಸಂಪೂರ್ಣ ಕೈ ಬಿಡಬಹುದು.
ಮೊದಲು ಹೀಗಿರಲಿಲ್ಲ. ಉದಾಹರಣೆಗೆ ‘ಸಮಾಜ ವಿಜ್ಞಾನ’ ಪಠ್ಯದಲ್ಲಿ ಚರಿತ್ರೆ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಎಂಬ ವಿಭಾಗಗಳಿದ್ದು, ಪ್ರತಿ ಅಧ್ಯಾಯಕ್ಕೆ ಇಂತಿಷ್ಟು ಅಂಕದ ಪ್ರಶ್ನೆ ಕೇಳಲಾಗುತ್ತದೆಯೆಂಬ ಮಾಹಿತಿ ಕೊಡುತ್ತಿರಲಿಲ್ಲ. ಎಲ್ಲಾ ಅಧ್ಯಾಯಗಳೂ ಸೇರಿದಂತೆ ಚರಿತ್ರೆಗೆ ಒಟ್ಟಾರೆ ಇಂತಿಷ್ಟು, ರಾಜ್ಯಶಾಸ್ತ್ರಕ್ಕೆ ಇಂತಿಷ್ಟು ಎಂದು ಒಟ್ಟು ಅಂಕಗಳನ್ನು ನಿಗದಿ ಮಾಡುವ ಪದ್ಧತಿಯಿತ್ತು. ಉದಾಹರಣೆಗೆ, ಚರಿತ್ರೆಗೆ 30, ರಾಜ್ಯಶಾಸ್ತ್ರಕ್ಕೆ 30, ಅರ್ಥಶಾಸ್ತ್ರಕ್ಕೆ 20, ಹೀಗೆ ಒಟ್ಟಾರೆಯಾಗಿ ಅವುಗಳನ್ನು ನಿಗದಿ ಮಾಡಲಾಗುತ್ತಿತ್ತು. ಆಗ ವಿದ್ಯಾರ್ಥಿಗಳು ಎಲ್ಲಾ ಅಧ್ಯಾಯಗಳನ್ನೂ ಓದಬೇಕಿತ್ತು. ಅಧ್ಯಾಪಕರು ಎಲ್ಲಾ ಅಧ್ಯಾಯಗಳನ್ನು ಬೋಧಿಸಬೇಕಿತ್ತು. ಈಗ ಹಾಗಿಲ್ಲ. ತೇರ್ಗಡೆ ಹೊಂದಲು ಎಷ್ಟು ಬೇಕೋ ಅಷ್ಟು ಅಧ್ಯಾಯ ಆಯ್ಕೆ ಮಾಡಿಕೊಳ್ಳಬಹುದು. ಇದು ಜ್ಞಾನ ವಿಸ್ತರಣೆಯ ವಿಧಾನವಲ್ಲ. ಗುಣಮಟ್ಟದ ಕ್ರಮವೂ ಅಲ್ಲ.
ಇನ್ನು ‘ಎಲ್‌ಬಿಎ’ ಎಂಬ ಕಿರುಪರೀಕ್ಷೆಯ ಪದ್ಧತಿ ಜಾರಿಯಲ್ಲಿದೆ. ಎಲ್‌ಬಿಎ ಎಂದರೆ ಲೆಸನ್ ಬೇಸ್ಡ್ ಅಸೆಸ್‌ಮೆಂಟ್, ಅಂದರೆ ಪಾಠಾಧಾರಿತ ಮೌಲ್ಯಾಂಕನ. ಈ ಪದ್ಧತಿಯ ಪ್ರಕಾರ, ಪ್ರತಿ ಪಠ್ಯ ವಿಷಯದಲ್ಲೂ ಪ್ರತಿ ಪಾಠ ಅಥವಾ ಅಧ್ಯಾಯದ ಬೋಧನೆ ಮುಗಿದ ಕೂಡಲೇ ಪ್ರತ್ಯೇಕ ಕಿರುಪರೀಕ್ಷೆಗಳನ್ನು ನಿಯಮಿತವಾಗಿ ಮಾಡಬೇಕು. ವಿದ್ಯಾರ್ಥಿಗಳು ಪ್ರತಿವಾರವೂ ಕಿರು ಪರೀಕ್ಷೆಗಳಿಗೆ ಸಿದ್ಧವಾಗಬೇಕು. ಅಧ್ಯಾಪಕರು ಕಿರು ಪರೀಕ್ಷೆ ಮಾಡಿ ವಿದ್ಯಾರ್ಥಿವಾರು ಅಂಕಗಳನ್ನು ಅಪ್‌ಲೋಡ್ ಮಾಡಬೇಕು. ಇದಕ್ಕೆ ಆಕ್ಷೇಪಗಳು ಬಂದ ಮೇಲೆ ಕೆಲವು ಪಠ್ಯ ವಿಷಯಗಳಲ್ಲಿ ಮಾತ್ರ ಎರಡೆರಡು ಅಧ್ಯಾಯಗಳನ್ನು ಸೇರಿಸಿ ಕಿರುಪರೀಕ್ಷೆ ಮಾಡಲಾಗುತ್ತಿದೆಯಂತೆ. ಇಷ್ಟಾದರೂ ತಿಂಗಳಿಗೆ ಕಡೇ ಪಕ್ಷ 15 ಕಿರುಪರೀಕ್ಷೆಗಳನ್ನು ವಿದ್ಯಾರ್ಥಿಗಳು ‘ಎದುರಿಸಬೇಕು’. ಇದರ ಜೊತೆಗೆ ಒಂದು ಶೈಕ್ಷಣಿಕ ವರ್ಷದಲ್ಲಿ ನಾಲ್ಕು ಫಾರ್ಮ್ಯಾಟಿವ್ ಅಸೆಸ್‌ಮೆಂಟ್ (ರೂಪಣಾತ್ಮಕ ಮೌಲ್ಯಾಂಕನ) ಕಿರು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಕಿಕ್ಕಿರಿದ ಕಿರುಪರೀಕ್ಷೆಗಳಿಂದ ವಿದ್ಯಾರ್ಥಿಗಳ ಮೇಲೆ ಅಪಾರ ಒತ್ತಡ ಉಂಟಾಗುತ್ತದೆ. ಅಧ್ಯಾಪಕರಿಗೂ ತರಾತುರಿಯಾಗುತ್ತದೆ. ಇದರಿಂದ ಗುಣಮಟ್ಟ ಹೆಚ್ಚುವ ಬದಲು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಯ ಸಿಗುವುದಿಲ್ಲ. ವಿದ್ಯಾರ್ಜನೆಯು ಉಲ್ಲಾಸದಾಯಕವಾಗಿರಬೇಕೇ ಹೊರತು ಪ್ರಯಾಸದಾಯಕವಾಗಬಾರದು.
ಇನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ವಿಷಯ. ಮೇಲ್ನೋಟಕ್ಕೆ ಇದೊಂದು ಆಕರ್ಷಕ ಪದ್ಧತಿ. ಆದರೆ, ಸುತ್ತಮುತ್ತಲ ಸರ್ಕಾರಿ ಶಾಲೆಗಳು ಮುಚ್ಚುತ್ತವೆಯೆಂಬ ಆತಂಕವಿದೆ. ಇದಕ್ಕೆ ನಿದರ್ಶನಗಳೂ ಇವೆ. ಸಚಿವರು ‘ಒಂದು ಶಾಲೆಯನ್ನೂ ಮುಚ್ಚುವುದಿಲ್ಲ’ ಎಂದು ಹೇಳಿದ್ದರೂ ‘ವಿಲೀನ’ದ ಹೆಸರಲ್ಲಿ ಸ್ಥಗಿತಗೊಳ್ಳುತ್ತಿವೆ. ಇದು ‘ಅಳಿಯ ಅಲ್ಲ; ಮಗಳ ಗಂಡ’ ಎಂಬ ಗಾದೆ ಮಾತಿನಂತಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆ ಪ್ರಕಾರ ಒಂದು ಕಿಲೋಮೀಟರ್‌ಗೆ ಒಂದು ಕಿರಿಯ ಪ್ರಾಥಮಿಕ ಶಾಲೆ, ಮೂರು ಕಿ.ಮೀ.ಗೆ ಒಂದು ಹಿರಿಯ ಪ್ರಾಥಮಿಕ ಶಾಲೆ, ಐದು ಕಿ.ಮೀ.ಗೆ ಒಂದು ಪ್ರೌಢಶಾಲೆ ಇರಬೇಕು. ಪಬ್ಲಿಕ್ ಶಾಲೆಗಳಿಂದ ಈ ಪದ್ಧತಿ ಹಾಗೇ ಉಳಿಯುವುದು ಅನುಮಾನ. ಇದಿಷ್ಟೇ ಅಲ್ಲ; ಒಂದೇ ಸೂರಿನಡಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣ ಕೊಡುವ ಪದ್ಧತಿಯನ್ನು ಮನೋವೈಜ್ಞಾನಿಕ ದೃಷ್ಟಿಯಿಂದಲೂ ನೋಡಬೇಕು. ಎಲ್‌ಕೆಜಿ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಿಯುಸಿ ವಿದ್ಯಾರ್ಥಿಗಳ ಜೊತೆಗೆ ಇರುವಾಗ ಕಿರಿಯ ವಯಸ್ಸಿನ ಮಕ್ಕಳ ಮನಸ್ಸಿನ ಮೇಲೆ ಆಗುವ ಪರಿಣಾಮ ಏನು ಎಂಬುದನ್ನೂ ವಿಶ್ಲೇಷಣೆಗೊಡ್ಡಬೇಕು. ವಿವಿಧ ವಯೋಮಾನದವರು ಪ್ರತ್ಯೇಕವಾಗಿ ವಿದ್ಯಾಭ್ಯಾಸ ಮಾಡುವಾಗ ಇರುವ ಮನೋಲ್ಲಾಸ ಹಾಗೂ ಸ್ವಾತಂತ್ರ್ಯ ಒಂದೇ ಸೂರಿನಡಿ ಸಿಗುತ್ತದೆಯೆ ಎಂಬ ಪ್ರಶ್ನೆಯೂ ಮುಖ್ಯ.
ಒಟ್ಟಾರೆ ಹೇಳುವುದಾದರೆ, ಶಿಕ್ಷಣ ಇಲಾಖೆಯು ತನ್ನ ಹೊಸ ಉಪಕ್ರಮಗಳನ್ನು ಮರು ಪರಿಶೀಲಿಸಬೇಕು:
1. ತೇರ್ಗಡೆಯ ಕನಿಷ್ಠ ಅಂಕಗಳು ಎಷ್ಟೇ ಇರಲಿ, ಆಂತರಿಕ ಮೌಲ್ಯಮಾಪನಕ್ಕೆ ನಿಗದಿ ಮಾಡಿದ ಇಪ್ಪತ್ತು ಅಂಕಗಳನ್ನು ಹತ್ತಕ್ಕೆ ಇಳಿಸಿ ಅಂಕ ನೀಡಿಕೆಗೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಬೇಕು. ತೇರ್ಗಡೆಗೆ ಬೇಕಾದ ಲಿಖಿತ ಪರೀಕ್ಷೆಯ ಕನಿಷ್ಠ ಮಿತಿಯ ಅಂಕಗಳು ಹೆಚ್ಚಾಗಿರಬೇಕು.
2. ಪ್ರಶ್ನೆಪತ್ರಿಕೆ ಕುರಿತಂತೆ ಪ್ರತಿ ಅಧ್ಯಾಯಕ್ಕೆ ಇಂಥವೇ ಪ್ರಶ್ನೆಗಳು ಮತ್ತು ಇಂತಿಷ್ಟೇ ಅಂಕಗಳು ಎನ್ನುವುದನ್ನು ಬಿಡಬೇಕು. ಮೊದಲಿನ ಪದ್ಧತಿ ತರಬೇಕು.
3. ಮುಖ್ಯವಾಗಿ ‘ಎಲ್‌ಬಿಎ’ ಪದ್ಧತಿಯ ಒತ್ತಡವನ್ನು ಕಡಿಮೆ ಮಾಡಿ, ಪ್ರತಿ ಪಠ್ಯ ವಿಷಯಕ್ಕೆ ತಿಂಗಳಿಗೊಂದು ಕಿರುಪರೀಕ್ಷೆ ಮಾತ್ರ ಮಾಡಬೇಕು.
ಸನ್ಮಾನ್ಯ ಶಿಕ್ಷಣ ಸಚಿವರಲ್ಲಿ ವಿನಂತಿ: ಆಕ್ಷೇಪ ಎತ್ತಿದವರ ಬಗ್ಗೆ ಲಘುವಾಗಿ ಮಾತಾಡುವ ಬದಲು, ಮೇಲ್ಕಂಡ ಬದಲಾವಣೆ ಮಾಡಿಕೊಳ್ಳುವ ಮೂಲಕ, ಹೆಚ್ಚು ಫಲಿತಾಂಶ ಬರಬೇಕೆಂಬ ಉಮೇದಿನ ಜೊತೆಗೆ ಜ್ಞಾನಾರ್ಜನೆ ಮತ್ತು ಗುಣಮಟ್ಟಕ್ಕೂ ದಯವಿಟ್ಟು ಒತ್ತಾಸೆಯಾಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.