ನುಡಿ ಬೆಳಗು
ಶಾಂತವೇರಿ ಗೋಪಾಲಗೌಡರು ಕಡಿದಾಳ್ ಮಂಜಪ್ಪನವರ ಶಿಷ್ಯರು. ಶಾಂತವೇರಿಯವರ ಬದುಕಿನ ಒಂದು ಘಟನೆ ಹೀಗಿದೆ. ಕಡಿದಾಳರು ಮಂತ್ರಿಯಾಗಿದ್ದಾಗ ಗೋಪಾಲಗೌಡರಿಗೆ ಅವರ ಅಭಿಮಾನಿಗಳ ಕೋರಿಕೆಯಂತೆ ಐದು ಎಕರೆ ಭೂಮಿಯನ್ನು ದರಖಾಸ್ತು ನೀಡಲು ಒಪ್ಪಿದ್ದರು. ಗೋಪಾಲಗೌಡರಿಗೆ ವಿಷಯ ತಿಳಿಸಿದಾಗ ಅವರು, ‘ಉಳುವವನೇ ಹೊಲದೊಡೆಯ ಸಿದ್ಧಾಂತದವನು ನಾನು, ಜಮೀನು ಪಡೆದು ಸ್ವಂತ ಸಾಗುವಳಿ ಮಾಡುತ್ತೇನೆಯೇ? ಗೇಣಿ ವಸೂಲಿ ಮಾಡುವ ಭೂಮಾಲೀಕರ ಸಾಲಿಗೆ ಎಂದೂ ಸೇರಲಾರೆ’ ಎಂದು ಹೇಳಿ ಹತ್ತು ಜನ ಕೃಷಿ ಕಾರ್ಮಿಕರಿಗೆ ಆ ಐದು ಎಕರೆ ಜಮೀನನ್ನು ಅರ್ಧರ್ಧ ಎಕರೆಯಂತೆ ಮಂಜೂರು ಮಾಡುವಂತೆ ಮಂಜಪ್ಪನವರಿಗೆ ಮನವಿ ಮಾಡಿದರು. ಗೋಪಾಲಗೌಡರ ಈ ಉತ್ತರ ಕೇಳಿ ಮಂಜಪ್ಪನವರಿಗೆ ಹೆಮ್ಮೆಯಾದರೂ ‘ಅವನಿಗೆ ಹೇಳು, ಶ್ರವಣಬೆಳಗೊಳದಲ್ಲಿ ನಿಂತವನ ಜತೆ ನಿಂತುಕೊಳ್ಳಲಿ’ ಎಂದರು. ಎಲ್ಲವನ್ನೂ ಪರಿತ್ಯಜಿಸಿದ ಮಹಾನ್ ತ್ಯಾಗಮೂರ್ತಿ ಬಾಹುಬಲಿಗೆ ಶಾಂತವೇರಿಯವರನ್ನು ಹೋಲಿಸಿದ್ದರು ಮಂಜಪ್ಪನವರು.
ಲೋಹಿಯಾ ಅವರ ಶಿಷ್ಯರಾಗಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಸಿದ್ಧಾಂತಕ್ಕೆ ಮಲೆನಾಡಿನ ನೆಲದಲ್ಲಿ ಬಲವಾದ ಅಡಿಪಾಯ ಹಾಕಿಕೊಟ್ಟವರು. ಹೋರಾಟಗಳಿಂದಲೇ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡವರು. ಮೂರು ಚುನಾವಣೆಗಳಲ್ಲಿ ಗೆದ್ದರೂ ಹಣ ಮಾಡಲಿಲ್ಲ. ಹಾಗಂತ ಅದರ ಬಗ್ಗೆ ಅವರಿಗೆ ಯಾವುದೇ ಮುಜುಗರ ಇರಲಿಲ್ಲ. ಗೆದ್ದ ಮೇಲೂ ಯಾವ ವಿಜಯೋತ್ಸವದಲ್ಲೂ ಭಾಗವಹಿಸುತ್ತಿರಲಿಲ್ಲ. ಗೋಪಾಲಗೌಡರಿಗೆ ಬಡವರ ಮೇಲೆ ಅಪಾರ ಅನುಕಂಪ. ರಾಜಕೀಯವಿರುವುದು ಇಂತಹವರ ಕತ್ತಲ ಬದುಕಿನಲ್ಲಿ ಬೆಳಕು ತರಲೆಂದೇ ಹೊರತು ಸ್ವಹಿತಾಸಕ್ತಿಗಾಗಿ ಅಲ್ಲ ಎಂಬುದು ಅವರ ಸ್ಪಷ್ಟ ಅಭಿಪ್ರಾಯ. ಬರೀ ರಾಜಕಾರಣಿಯಾಗಿರದೇ ಮುತ್ಸದ್ಧಿಯ ಅರ್ಹತೆ ಹೊಂದಿದ್ದ ವಿರಳರಲ್ಲೊಬ್ಬರು. ಬಸ್ಸು, ರೈಲು ಟಿಕೇಟಿಗೆ, ಬೆಳಗಿನ ಕಾಫಿಗೆ ಕೂಡ ಕಿಸೆಯಲ್ಲಿ ದುಡ್ಡಿಲ್ಲದ, ತೊಡಲು ಬಟ್ಟೆಗೂ ತತ್ವಾರವಿದ್ದ ಶಾಸಕರೊಬ್ಬರಿದ್ದರೆಂದರೆ ಅದು ಶಾಂತವೇರಿ ಗೋಪಾಲಗೌಡರು. ಚುನಾವಣೆಗಳಲ್ಲಿ ಠೇವಣಿ ಇಡಲೂ ದುಡ್ಡಿಲ್ಲದ ಅವರಿಗೆ ಆ ಹಣವನ್ನು ಜನರೇ ಒಟ್ಟುಗೂಡಿಸಿ ಕೊಡುತ್ತಿದ್ದರು ಎಂದರೆ ಇವತ್ತು ನಂಬಲು ಸಾಧ್ಯವೇ? ಜಾತ್ಯತೀತ ತತ್ವವನ್ನು ರಕ್ತದಲ್ಲಿಯೇ ಹೊಂದಿದ್ದ ಶಾಂತವೇರಿಯವರು ಜನರನ್ನು ತಮ್ಮಂತಹ ಮನುಷ್ಯರನ್ನಾಗಿ ಮಾತ್ರ ಕಂಡರು. ಹಾಗಾಗಿಯೇ ಬರಿಗೈ ಫಕೀರರಾದ ಅವರನ್ನು ಜನರೂ ಪ್ರೀತಿಸಿದರು ಮತ್ತು ಗೆಲ್ಲಿಸಿದರು.
ಗೋಪಾಲಗೌಡರು ಬಡತನದಲ್ಲಿಯೇ ಹುಟ್ಟಿದರೂ ತಮ್ಮದೇ ಆಯ್ಕೆಯಿಂದ ಬಡತನದಲ್ಲೇ ಬದುಕಿ, ಕೊನೆಯುಸಿರೆಳೆದವರು. ಇದರರ್ಥ ಬಡತನದಲ್ಲಿ ಬದುಕಬೇಕು ಎಂದಲ್ಲ. ಸಾಧನೆಯಿಂದ ಬದುಕಿನ ಸ್ಥಿತಿಯನ್ನುಉತ್ತಮಪಡಿಸಿಕೊಳ್ಳುವ ಹಂಬಲ ಮನುಷ್ಯ ಸಹಜ ಮತ್ತು ಅದು ಅಗತ್ಯ ಕೂಡ. ಆದರೆ ಪರಕೀಯ ದುಡ್ಡು ವಿಷಕ್ಕೆ ಸಮಾನ ಎಂದು ನಂಬಿದ್ದ ವ್ಯಕ್ತಿಗಳೂ ಇದ್ದರು ಎಂಬ ಅರಿವು ಇದ್ದರೆ ಬಹುಶಃ ಹಣವೇ ಸರ್ವಸ್ವ ಎಂಬ ನಮ್ಮ ತಪ್ಪು ಅಭಿಪ್ರಾಯ ಕಿಂಚಿತ್ತಾದರೂ ಬದಲಾಗಬಹುದು. ಸ್ವಾತಂತ್ರ್ಯದ ಸಂಭ್ರಮದಲ್ಲಿ ಗೋಪಾಲಗೌಡರಂತಹ ವ್ಯಕ್ತಿತ್ವಗಳನ್ನು ಸ್ಮರಿಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.