ADVERTISEMENT

ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 8:42 IST
Last Updated 14 ಜನವರಿ 2026, 8:42 IST
   

'ಕಲ್ಯಾಣವೆಂಬ ಪ್ರಣತೆಯಲ್ಲಿ’ ಅಲ್ಲಮಪ್ರಭು ದೇವರ ವಚನ ಕೇಳದ ಶಿವಶರಣರಿಲ್ಲ. ಶಿವಯೋಗ ಸಾಧನೆಯಲ್ಲಿ ಮಹಾ ಸಾಧನೆಗೈದು ಶ್ರೀ ಶೈಲ ಮಲ್ಲಿಕಾರ್ಜುನನ ಒಲುಮೆ ಗೇಲಿದು ಭವ ಗೆದ್ದ ಮಹಾ ಶಿವಶರಣ ಶ್ರೀ ಸಿದ್ಧರಾಮೇಶ್ವರರು.

ಸೊನ್ನಲಿಗೆಗೆ ಅಲ್ಲಮಪ್ರಭು ಬಂದು ಸಿದ್ಧರಾಮನನ್ನು 'ವಡ್ಡರಾಮ'ನೆಂದು ಕರೆದು ಅವನ ಶಿಷ್ಯರ ಕೋಪಕ್ಕೆ ತುತ್ತಾಗುತ್ತಾರೆ. ಅಲ್ಲಮಪ್ರಭುವನ್ನು ಕಂಡೊಡನೆ ಸಿದ್ಧರಾಮನರಿಗೆ ಅವರು ಮಾಯ, ಕೋಲಾಹಲ ಮೂರ್ತಿಯಾಗಿ, ಪರಮ ವೈರಾಗ್ಯ ನಿಧಿಯಾಗಿ, ಅನುಭವ ಮಂಟಪದ ಅಧ್ಯಕ್ಷನಾಗಿ, ರಜತಾಚಲದ ಬೆಳದಿಂಗಳ ಶಿಖರದಲ್ಲಿ, ಹಿಂದೆ ತನಗೆ ಕರ್ಮಯೋಗದ ನಿರ್ದೇಶನವನ್ನು ಕೊಟ್ಟ ಗುರುಮೂರ್ತಿಯ ನೆನಪಾಗುತ್ತದೆ. ಅಲ್ಲಮಪ್ರಭು ಸಿದ್ಧರಾಮರ ಸಂಭಾಷಣೆ ವಚನ ಸಾಹಿತ್ಯದಲ್ಲಿ ಬಹಳ ಪ್ರಸಿದ್ಧವಾಗಿದೆ.

ಅಲ್ಲಮಪ್ರಭು: ಸಿದ್ಧರಾಮ ನೆರೆಯವರಿಗಾಗಿ ಅತ್ತು ಕಣ್ಣು ಕಳೆದುಕೊಂಡಂತಿದೆ ನಿನ್ನಪರಿ! ಲೋಕವನ್ನು ನಾನು-ನೀನು ನೆಲೆಯಾಗಿ ನಿಂತು ತಿದ್ಧಿ ಸರಿಪಡಿಸುತ್ತೇವೆನ್ನುವ ಭ್ರಾಂತಿ ಏಕೆ? ನಮಗೆ ಚಳಿಯಾದರೆ ಹಚ್ಚಡ ಹೊದಿಸಬಹುದಲ್ಲದೆ; ಬೆಟ್ಟಕ್ಕೆ ಚಳಿಯಾದರೆ ಏನನ್ನು ಹೊದಿಸುತ್ತೀರಿ?

ADVERTISEMENT

ಸಿದ್ಧರಾಮ: ಗಾಳಿಯನ್ನು ಹುಡಿ ಹಿಡಿಯುವುದೇ! ಪ್ರಭುವೇ? ನಾಲಗೆ ಹಲ್ಲುಗಳ ನಡುವೆ ಇದ್ದರೂ, ಅದು ಉಳಿದ ಪದಾರ್ಥಗಳಂತೆ ಕಡಿತಕ್ಕೆ ಸಿಗುವುದೇ? ಈ ಜಗತ್ತಿನಲ್ಲಿ ಶಿವಯೋಗಿ ಬಾಳಿದರೂ, ಆತ ನೀರ ನಡುವೆ ಅಂಟಿಯೂ ಅಂಟದ ಕಮಲಪತ್ರದ ಹಾಗೆ ಇರುತ್ತಾನೆ.

ಅಲ್ಲಮಪ್ರಭು: ಎಲ್ಲರಿಗೂ ನೂರಾರು ಲೌಕಿಕ ತಾಪತ್ರಯದ ಚಿಂತೆ-ಕಂತೆಗಳು. ಎಷ್ಟು ಗುಡಿಸಿದರೂ ಕಸ ಬೀಳುತ್ತಲೇ ಇರುವ ಅರಮನೆಯ ಹಾಗೆ ಈ ಜಗತ್ತು ಇದನ್ನು ಬದಲಾಯಿಸಲು ನಿನ್ನಿಂದ ಸಾಧ್ಯವೇ ?

ಸಿದ್ಧರಾಮ: ಕರೆ ಬರುವವರೆಗೂ ಕಾಯಕ ಮಾಡುತ್ತಲೇ ಕಾಯಬೇಕು. ಈ ಕರ್ಮ ಅನಂತ. ಯಾವ ಯಾವ ಜೀವ ಎಲ್ಲೆಲ್ಲಿ ಶ್ರದ್ಧೆಯಿಂದ ಕಾಯಕದಲ್ಲಿ ತೊಡಗುತ್ತದೊ ಅಲ್ಲಿ ಮಲ್ಲಿಕಾರ್ಜುನನಿರುತ್ತಾನೆ.

ಸಿದ್ಧರಾಮೇಶ್ವರರ ವಚನಗಳು ಕಪಿಲಸಿದ್ಧಮಲ್ಲಿಕಾರ್ಜುನ ಎಂಬ ಅಂಕಿತನಾಮದಿಂದ ರಚಿತವಾಗಿವೆ. ವ್ಯಕ್ತಿತ್ವದ ಶುದ್ಧೀಕರಣ, ಸಾಮಾಜಿಕ ಸಮಾನತೆ, ಸ್ತ್ರೀಶಕ್ತಿ ಮತ್ತು ಆಧ್ಯಾತ್ಮಿಕ ಆಳವನ್ನು ಪ್ರತಿಪಾದಿಸುತ್ತವೆ, ಮುಖ್ಯವಾಗಿ ಜಂಗಮ (ಗುರು) ಮತ್ತು ಭಕ್ತಿಯ ಮಹತ್ವ, ಅರಿವಿನ ಶಕ್ತಿ ಮತ್ತು ಲೋಕಕಲ್ಯಾಣದ ಬಗೆಗೆ ಜಾಗೃತಿ ಮೂಡಿಸುತ್ತವೆ. ಇವರ ವಚನಗಳಲ್ಲಿ ಬಸವಣ್ಣನವರ ಪ್ರಭಾವ ಸ್ಪಷ್ಟವಾಗಿದ್ದು, ಮಾನವನ ಪ್ರತಿಯೊಂದು ಕ್ರಿಯೆಯೂ ದೈವತ್ವದೊಂದಿಗೆ ಬೆರೆಯಬೇಕು ಎಂದು ಸಾರುತ್ತವೆ.

ಪ್ರಮುಖ ವಚನಗಳು

ಸ್ತ್ರೀ ಸಂವೇದನೆ: ಸಿದ್ಧರಾಮೇಶ್ವರರು ಸ್ತ್ರೀಯನ್ನು ಕೇವಲ ಹೆಣ್ಣಾಗಿ ನೋಡದೆ, ಅವಳಲ್ಲಿ ಗಂಗೆ, ಆದಿಶಕ್ತಿ (ಪಾರ್ವತಿ), ಸರಸ್ವತಿ ಮತ್ತು ಲಕ್ಷ್ಮಿ ರೂಪಗಳನ್ನು ಕಾಣುತ್ತಾರೆ. ಆಕೆಯ ಅರಿವು ಪುರುಷನ ಅರ್ಧ ಭಾಗವಾಗಿದ್ದು, ಸ್ತ್ರೀ ಶಕ್ತಿಯನ್ನು ಗೌರವಿಸಬೇಕು ಎಂದು ಸಾರುತ್ತಾರೆ.

ಉದಾಹರಣೆ: ‘ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ; ಹೆಣ್ಣು ಪ್ರತ್ಯಕ್ಷ ಕಪಿಲಸಿದ್ದಮಲ್ಲಿಕಾರ್ಜುನ ನೋಡಾ!’.

ಗುರು-ಭಕ್ತಿ: ಬಸವಣ್ಣನವರನ್ನು ಪರಮ ಬಂಧುವಾಗಿ, ಗುರುವಾಗಿ ಕಂಡರು. ಜಂಗಮದ ಮೂಲಕವೇ ಪ್ರಪಂಚದ ಅಜ್ಞಾನ ಕಳೆಯಲು ಸಾಧ್ಯವೆಂದು ನಂಬಿದ್ದರು.

ಉದಾಹರಣೆ: ‘ಬಸವಣ್ಣನೇ ಪರಮ ಬಂಧುವೆನಗೆ... ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ’.

ಅರಿವು ಮತ್ತು ಲೋಕಕಲ್ಯಾಣ: ಕೇವಲ ಓದು ಬರಹದಿಂದ ಅರಿವು ಮೂಡುವುದಲ್ಲ, ಅದು ಸಮಾಜದ ಒಳಿತಿಗೆ ಬಳಕೆಯಾಗಬೇಕು. ಸುಳ್ಳು, ಚಾಡಿ ಮಾತುಗಳಿಂದ ದೂರವಿರಬೇಕು. ಅರಿವಿನಿಂದಲೇ ನಿಜವಾದ ಜ್ಞಾನ ಸಾಧ್ಯ ಎಂದು ಹೇಳುತ್ತಾರೆ.

ಉದಾಹರಣೆ: ‘ಅರಿವಿನ ಮಾರಿತಂದೆಯ ವಚನಗಳ ಓದು", "ಕಿವಿಯನೂದುವುದಕ್ಕೇನೋ ಅಯ್ಯಾ’.

ವಸ್ತುವಾದ ಪೂಜೆಯ ವಿಮರ್ಶೆ: ದೇವರ ಮುಂದೆ ಇಡುವ ತಿಂಡಿ-ತಿನಸುಗಳು ದೇವರನ್ನು ತಣಿಸುವುದಿಲ್ಲ, ಅದು ವ್ಯಕ್ತಿಯ ಹೊಟ್ಟೆ ತುಂಬಿಸುತ್ತದೆ. ನಿಜವಾದ ಪೂಜೆ ಆತ್ಮದ ಶುದ್ಧೀಕರಣ ಮತ್ತು ಲಿಂಗದ ಒಡಲಲ್ಲಿ ಸಲ್ಲಬೇಕು ಎಂದು ಹೇಳುತ್ತಾರೆ.

ಉದಾಹರಣೆ: ‘ಭರಿತಾರ್ಪಣವೆಂಬುದು ಲಿಂಗಕ್ಕೊ ನಿನಗೊ ಲಿಂಗಕ್ಕೆ ಸಂಕಲ್ಪ ನಿನಗೆ...’.

ಸಂಸಾರ ಮತ್ತು ಅನಾಸಕ್ತಿ: ಸಂಸಾರದ ದುಃಖದಿಂದ ಮುಕ್ತಿ ಪಡೆಯಲು, ಪ್ರೀತಿ, ಭಾವ, ಅನುಬಂಧಗಳ ಅರಿವಿನೊಂದಿಗೆ ಮುನ್ನಡೆಯಬೇಕು. ನೋವಿನಲ್ಲೂ ಜೀವನದ ಸತ್ಯವನ್ನು ಅರಿತು ಮುನ್ನಡೆಯುವಂತೆ ಪ್ರೇರೇಪಿಸುತ್ತಾರೆ.

ಉದಾಹರಣೆ: ‘ಪ್ರೀತಿಸು ಮನವೇ ಪ್ರೀತಿಸು’, ‘ಸಂಸಾರದುಪಟಳವು ಕಾಡಿತ್ತು ಇನ್ನೇವೆನಿನ್ನೇವೆ?’.

ಸಿದ್ಧರಾಮೇಶ್ವರರ ಅಂಕಿತನಾಮ: ಕಪಿಲಸಿದ್ಧಮಲ್ಲಿಕಾರ್ಜುನ. ಸಿದ್ಧರಾಮೇಶ್ವರರ ವಚನಗಳು ಆಧ್ಯಾತ್ಮಿಕ ಮಾರ್ಗದಲ್ಲಿ ಸಂಸಾರ, ಸ್ತ್ರೀ ಶಕ್ತಿ, ಗುರು ಭಕ್ತಿ, ಲೋಕಹಿತದ ಕುರಿತಾದ ಸಮಾಜಮುಖಿ ಚಿಂತನೆಗಳನ್ನು ಒಳಗೊಂಡಿವೆ.

(ಶ್ರೀ ಬಸವಾಕ್ಷ ಸ್ವಾಮಿಗಳು, ಸಾಧಕರು, ಶ್ರೀ ವಿರಕ್ತ ಮಠ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.