ADVERTISEMENT

ವಿಶೇಷ ಲೇಖನ: ರಾಜ್ಯಕ್ಕೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲು ಸಿಗಲೇಬೇಕು

16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ 9 ಬೇಡಿಕೆಗಳು

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 0:17 IST
Last Updated 28 ಜನವರಿ 2026, 0:17 IST
   
16ನೇ ಹಣಕಾಸು ಆಯೋಗದ ವರದಿಯನ್ನು ಬಜೆಟ್‌ ಅಧಿವೇಶನದ ಆರಂಭದಲ್ಲಿ ಕೇಂದ್ರ ಸರ್ಕಾರ ಮಂಡಿಸುವ ನಿರೀಕ್ಷೆ ಇದೆ. 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ಕರ್ನಾಟಕ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಅನ್ಯಾಯವಾಗಿದೆ, ತೆರಿಗೆ ಪಾಲಿನಲ್ಲಿ ಗಣನೀಯ ಇಳಿಕೆಯಾಗಿದೆ ಎಂಬ ಕೂಗು ಮೊದಲಿನಿಂದಲೂ ಇದೆ. ಅನುದಾನ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ತಾರತಮ್ಯ ಎಸಗಿದೆ ಎಂಬ ಆಪಾದನೆಯನ್ನು ಬಿಜೆಪಿಯೇತರ ರಾಜ್ಯ ಸರ್ಕಾರಗಳು ಮಾಡುತ್ತಾ ಬಂದಿವೆ. 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ರಾಜ್ಯಕ್ಕೆ ಆಗಿರುವ ಆರ್ಥಿಕ ನಷ್ಟ, ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಹಾಗೂ  ಹಣಕಾಸು ಆಯೋಗಕ್ಕೆ ರಾಜ್ಯ ಮಾಡಿರುವ ಮನವಿಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ವಿವರಿಸಿದ್ದಾರೆ

ಅರವಿಂದ ಪನಗರಿಯಾ ಅವರ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗವು 2023ರಿಂದ ರಾಜ್ಯಗಳಿಗೆ ಭೇಟಿ ನೀಡಿ ಚರ್ಚಿಸಿ, ಮನವಿಗಳನ್ನು ಸ್ವೀಕರಿಸಿ 2025ರ ನ.17ರಂದು ತನ್ನ ವರದಿಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿದೆ. ಸಂವಿಧಾನದ ವಿಧಿ 280ರಡಿ ರಾಷ್ಟ್ರಪತಿಯವರು ಹಣಕಾಸು ಆಯೋಗವನ್ನು ರಚಿಸುತ್ತಾರೆ. ಸಂಗ್ರಹವಾಗುವ ಒಟ್ಟು ತೆರಿಗೆ, ಆ ತೆರಿಗೆಯನ್ನು ರಾಜ್ಯಗಳಿಗೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸೂತ್ರಗಳನ್ನು ಆಯೋಗವು ರೂಪಿಸಿ ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾದ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡುತ್ತದೆ. ಜೊತೆಗೆ, ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯಗಳಿಗೆ ನೀಡಬೇಕಾದ ಅನುದಾನ, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಅನುದಾನ, ಆರೋಗ್ಯ, ಪ್ರಕೃತಿ ವಿಕೋಪಗಳಿಗಾಗಿ ಒದಗಿಸಬೇಕಾದ ಅನುದಾನ ಹಾಗೂ ಸುಭದ್ರ ಹಣಕಾಸು ಸ್ಥಿತಿ... ಹೀಗೆ ರಾಷ್ಟ್ರಪತಿಯವರು ಆಯೋಗಕ್ಕೆ ವಹಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಶಿಫಾರಸನ್ನೂ ಅದು ಮಾಡಬೇಕಾಗುತ್ತದೆ.

ಈ ವರದಿಯನ್ನು ಬಜೆಟ್‌ ಮಂಡಿಸುವ ಮೊದಲು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹಿಂದಿನ ಆಯೋಗಗಳಿಗೆ ಇಲ್ಲದ ಮಹತ್ವ 16ನೇ ಹಣಕಾಸು ಆಯೋಗಕ್ಕೆ ಬಂದಿದೆ. ಕಾರಣ ಏನೆಂದರೆ, 15ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರವು ದೇಶದ ಪ್ರಗತಿಶೀಲ ರಾಜ್ಯಗಳಿಗೆ ಮಾಡಿದ ಅನ್ಯಾಯದ ಕಾರಣದಿಂದ ದೇಶದ ಬಹುತೇಕ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಹದಗೆಡುವಂತಾಗಿದೆ. ಪ್ರಮುಖ ರಾಜ್ಯಗಳ ವಿತ್ತೀಯ ಶಿಸ್ತುಗಳೇ ಬುಡಮೇಲಾಗಿವೆ.

ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ನೋಡಿದರೆ, 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ವರದಿಯಿಂದಾಗಿ ಶೇ 23ರಷ್ಟು ತೆರಿಗೆ ಪಾಲು ನೇರವಾಗಿ ಕಡಿಮೆಯಾಯಿತು. ಕೆಲವು ಆರ್ಥಿಕ ಅಜ್ಞಾನಿಗಳು ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದೆ ಅಪರಾ ತಪರಾ ವಿತಂಡವಾದ ಮಾಡುತ್ತಾರೆ. 14ನೇ ಹಣಕಾಸು ಆಯೋಗವು ಶೇ 4.71ರಷ್ಟು ಪಾಲನ್ನು ನಮಗೆ ಒದಗಿಸಿತ್ತು. 15ನೇ ಹಣಕಾಸು ಆಯೋಗವು ಇದನ್ನು ಶೇ 3.64ಕ್ಕೆ ಇಳಿಸುವ ಮೂಲಕ ಘೋರ ಅನ್ಯಾಯ ಮಾಡಿತು. ಉದಾಹರಣೆಗೆ, ರಾಜ್ಯಗಳಿಗೆ ಹಂಚಿಕೆ ಮಾಡುವ ₹100ರಲ್ಲಿ ಮೊದಲು ಕರ್ನಾಟಕಕ್ಕೆ ₹4.71 ಸಿಗುತ್ತಿದ್ದರೆ 15ನೇ ಆಯೋಗವು ಅದನ್ನು ₹3.64 ಇಳಿಸಿತು. ಇದರಿಂದ ರಾಜ್ಯಕ್ಕೆ ನೇರವಾಗಿ ಸುಮಾರು ₹80 ಸಾವಿರ ಕೋಟಿಯಷ್ಟು ಬೃಹತ್ ಪ್ರಮಾಣದ ತೆರಿಗೆ ಪಾಲು ಸಿಗದೆ ಅನ್ಯಾಯವಾಯಿತು.

ADVERTISEMENT

ದೇಶದ ಆರ್ಥಿಕ ಶಕ್ತಿಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕ ತಲಾವಾರು ಆರ್ಥಿಕ ಉತ್ಪಾದಕತೆಯಲ್ಲಿ ಮೊದಲ ಸ್ಥಾನದಲ್ಲಿದೆ. ತೆರಿಗೆ, ಸೆಸ್‌ ಮುಂತಾದ ರೂಪದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದಿಂದ ₹4.5 ಲಕ್ಷ ಕೋಟಿಯಿಂದ ₹5 ಲಕ್ಷ ಕೋಟಿಗಳಷ್ಟು ಸಂಗ್ರಹಿಸುತ್ತದೆ. ರಾಜ್ಯದ ಒಟ್ಟಾರೆ ಆಯವ್ಯಯದಲ್ಲಿ ಇಡೀ ದೇಶದಲ್ಲಿಯೇ ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು ಮತ್ತು ಅನುದಾನ ಪಡೆಯುವ ರಾಜ್ಯವೂ ಕರ್ನಾಟಕವೇ ಆಗಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ನಮಗೆ 14ನೇ ಹಣಕಾಸು ಆಯೋಗವು ನೀಡಿದ್ದ ಶೇ 4.71ರಷ್ಟು ಪಾಲನ್ನು ಕೊಟ್ಟರೆ ಮಾತ್ರ ನಾವು ನಿಟ್ಟುಸಿರು ಬಿಡುವಂತಾಗುತ್ತದೆ. ಅದಕ್ಕಿಂತ ಹೆಚ್ಚು ಕೊಟ್ಟರೆ ಮಾತ್ರ ನೈಜವಾಗಿ ನ್ಯಾಯ ಸಿಕ್ಕಂತಾಗುತ್ತದೆ. ಅದಕ್ಕಿಂತ ಶೇ 0.001ರಷ್ಟು ಕಡಿಮೆ ಕೊಟ್ಟರೂ ರಾಜ್ಯಕ್ಕೆ ಅನ್ಯಾಯ ಮುಂದುವರಿಯುತ್ತದೆ ಎಂದು ಭಾವಿಸಬೇಕಾಗುತ್ತದೆ. 

15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನ ಹಾಗೂ ಬೆಂಗಳೂರಿನ ಪೆರಿಫರಲ್‌ ರಸ್ತೆಗೆ ₹3,000 ಕೋಟಿ ಮತ್ತು ಕೆರೆಗಳ ಅಭಿವೃದ್ಧಿಗೆ ₹3,000 ಕೋಟಿ ಸೇರಿ ಒಟ್ಟಾರೆ ₹11,495 ಕೋಟಿ ಕೊಡಬೇಕೆಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಕೊಡದೆ ಅನ್ಯಾಯ ಮಾಡಿತು.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಗಳು ಶೇ 40ರಷ್ಟನ್ನು ತಮ್ಮ ತೆರಿಗೆ ಸಂಗ್ರಹದಿಂದ ಕೊಡಬೇಕಾಗಿದೆ. ಆದರೆ ಕರ್ನಾಟಕವು 2021ರಿಂದ 2024-25ರವರೆಗೆ ₹49,271 ಕೋಟಿ ಕೊಡಬೇಕಾಗಿತ್ತು. ಆದರೆ ಕೇಂದ್ರವು ತನ್ನ ಪಾಲನ್ನು ಸಮರ್ಪಕವಾಗಿ ಕೊಡದೇ ಹೋದ ಕಾರಣ ರಾಜ್ಯವು ಹೆಚ್ಚುವರಿಯಾಗಿ ₹23,402 ಕೋಟಿ ಭರಿಸಬೇಕಾಯಿತು. ಹಾಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕರ್ನಾಟಕವು ಭರಿಸಿದ ಪಾಲು ಶೇ 50ಕ್ಕಿಂತ ಹೆಚ್ಚಾಯಿತು. ಜಲಜೀವನ್‌ ಮಿಷನ್‌ ಯೋಜನೆಯೊಂದರಲ್ಲೇ ₹13 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಕೇಂದ್ರ ಸರ್ಕಾರ ಕೊಡದೆ ಬಾಕಿ ಉಳಿಸಿಕೊಂಡಿದೆ.

ಆಯೋಗವು ಶಿಫಾರಸು ಮಾಡಿದ್ದ ಅನುದಾನದಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ₹1,802 ಕೋಟಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ₹874 ಕೋಟಿಗಳಷ್ಟು ಕಡಿಮೆ ಅನುದಾನ ನೀಡಲಾಗಿದೆ.

ಒಕ್ಕೂಟ ಸರ್ಕಾರವು ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಮಿತಿಯಿಲ್ಲದ ಪ್ರಮಾಣದಲ್ಲಿ ಸಂಗ್ರಹಿಸಿ ಅದರಲ್ಲಿ ಪಾಲು ಕೊಡದಿರುವುದರಿಂದ ರಾಜ್ಯಗಳಿಗೆ ತೀವ್ರ ಅನ್ಯಾಯವಾಗುತ್ತಿದೆ. 2023-24ರಲ್ಲಿ ಸೆಸ್‌ ಮತ್ತು ಸರ್‌ಚಾರ್ಜ್‌ಗಳ ಮೂಲಕವೇ ₹5.53 ಲಕ್ಷ ಕೋಟಿ ಸಂಗ್ರಹಿಸಿದೆ. 2011-12ರಲ್ಲಿ ಸೆಸ್‌ ಮತ್ತು ಸರ್‌ಚಾರ್ಜ್‌ಗಳ ಪ್ರಮಾಣ ಶೇ 9.4ರಷ್ಟಿತ್ತು. ಇದು 2023-24ರಲ್ಲಿ ಶೇ 20ರ
ವರೆಗೂ ಏರಿಕೆಯಾಯಿತು. ಹೀಗಾಗಿರುವುದರಿಂದ ರಾಜ್ಯಗಳಿಗೆ ಶೇ 42ರಷ್ಟು ತೆರಿಗೆ ಸಂಪನ್ಮೂಲಗಳನ್ನು ಹಂಚಿಕೆ ಮಾಡುತ್ತೇವೆ ಎಂದು ಹೇಳಿದರೂ ವಾಸ್ತವವಾಗಿ ದೊರೆಯುತ್ತಿರುವುದು ಶೇ 30ರಷ್ಟು ಮಾತ್ರ.

ಜಿಎಸ್‌ಟಿ ಸೆಸ್‌ಗಳನ್ನು ಕೇಂದ್ರ ಸರ್ಕಾರವು ಜನರಿಂದ ಸಂಗ್ರಹಿಸುತ್ತಲೇ ಇದೆ. ರಾಜ್ಯಗಳಿಗೆ ಅದರಲ್ಲಿ ನಯಾಪೈಸೆಯೂ ಬರುತ್ತಿಲ್ಲ. ಇದನ್ನು 2022ರ ಜೂನ್‌ನಿಂದಲೇ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದಾಗ ವಾರ್ಷಿಕವಾಗಿ ಶೇ 14ರಷ್ಟು ಬೆಳವಣಿಗೆಯನ್ನು ರಾಜ್ಯಕ್ಕೆ ಖಾತ್ರಿ ಮಾಡಲಾಗಿತ್ತು. ಆ ಬೆಳವಣಿಗೆ ಸಾಧ್ಯವಾಗದೇ ಹೋದಾಗ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ ಕೊಡಬೇಕಾಗಿತ್ತು. ಕೊಡದೇ ಹೋದ ಕಾರಣದಿಂದ ರಾಜ್ಯಕ್ಕೆ ಪ್ರತಿ ವರ್ಷ ಸುಮಾರು ₹20 ಸಾವಿರ ಕೋಟಿಗಳಷ್ಟು ನಷ್ಟವಾಗುತ್ತಿದೆ. ಕೇಂದ್ರ ಸರ್ಕಾರವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಏಕಾಏಕಿ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಿತು. ಇದರಿಂದಾಗಿ ಜಿಎಸ್‌ಟಿ ಬೆಳವಣಿಗೆ ದರವು ಶೇ 5ಕ್ಕೆ ಕುಸಿದಿದೆ.

ಜಿಎಸ್‌ಟಿ ದರಗಳ ಏಕಾಏಕಿ ಪರಿಷ್ಕರಣೆಗೆ ಮುಖ್ಯ ಕಾರಣ ಜನರ ಕೊಂಡುಕೊಳ್ಳುವ ಶಕ್ತಿ ಕ್ಷೀಣಿಸುತ್ತಿರುವ ವಿದ್ಯಮಾನವೇ ಆಗಿದೆ. ಇಲ್ಲದಿದ್ದರೆ ಕಳೆದ ಫೆಬ್ರುವರಿಯಿಂದೀಚೆಗೆ ಎರಡು ಬಾರಿ ರೆಪೊ ದರಗಳನ್ನು ಕಡಿಮೆ ಮಾಡಲು ಕಾರಣಗಳಿರಲಿಲ್ಲ. 2017ರಿಂದ ಜಿಎಸ್‌ಟಿಯ ನೆಪದಲ್ಲಿ ಅಪಾರ ಪ್ರಮಾಣದ ತೆರಿಗೆ ಸಂಗ್ರಹಿಸಿದ ಕೇಂದ್ರವು ಇದ್ದಕ್ಕಿದ್ದಂತೆ ಪರಿಷ್ಕರಣೆ ಮಾಡಿ ತನ್ನದು ಜನಹಿತಕಾರಿ ತೆರಿಗೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಇಷ್ಟಾದರೂ ದೇಶದ ಗ್ರಾಹಕ ಬೆಲೆ ಸೂಚ್ಯಂಕವನ್ನು (ಸಿಪಿಐ) ಪರಿಶೀಲಿಸಿದರೆ ಅತ್ಯಂತ ನಿರಾಶಾದಾಯಕ ಸ್ಥಿತಿಯಲ್ಲಿಯೇ ಇದೆ. ಹಣದುಬ್ಬರ ಪ್ರಮಾಣವು ಕನಿಷ್ಠ ಶೇ 2ರಷ್ಟು ಮತ್ತು ಗರಿಷ್ಠ ಶೇ 4ರಷ್ಟು ಇರಬೇಕಾಗುತ್ತದೆ. ಇದು ಶೇ 2ಕ್ಕಿಂತ ಕಡಿಮೆಯಾದರೆ ಅಪಾಯಕಾರಿ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. 2025ರ ಮೇನಿಂದ ಸರಾಸರಿ ಸಿಪಿಐ ಅನ್ನು ನೋಡಿದರೆ ಕರ್ನಾಟಕವನ್ನು ಹೊರತುಪಡಿಸಿ ಉಳಿದ ರಾಜ್ಯಗಳ ಸಿಪಿಐ ಆಶಾದಾಯಕವಾಗಿಲ್ಲ. ಡಿಸೆಂಬರ್‌ ತಿಂಗಳಲ್ಲಿ ಮಾತ್ರ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ತುಸು ಸುಧಾರಿತ ಪರಿಸ್ಥಿತಿಯಿದೆ. ಕರ್ನಾಟಕದ ಸಿಪಿಐ ಆರೋಗ್ಯಕರವಾಗಿದ್ದರೆ ಅದಕ್ಕೆ ಕಾರಣ ನಮ್ಮ ಗ್ಯಾರಂಟಿ ಯೋಜನೆಗಳು.

2020ರಿಂದ ರಾಜ್ಯವು ಆರ್ಥಿಕ ಅನ್ಯಾಯಗಳಿಂದ ಬಹಳ ಬಳಲಿದೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಂಡು 16ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರಗಳು ರಾಜ್ಯಕ್ಕೆ ನ್ಯಾಯ ನೀಡಬಹುದು ಎಂದು ನಿರೀಕ್ಷಿಸುತ್ತಿದ್ದೇವೆ. ಜನರ ಹಣಕ್ಕೆ ಟ್ರಸ್ಟಿಯಾಗಿರುವ ಸರ್ಕಾರವು ಈ ಎಲ್ಲ ವಿಚಾರಗಳನ್ನು ನಾಡಿನ ಮುಂದೆ ಮಂಡಿಸಬೇಕಾದುದು ಕರ್ತವ್ಯವೆಂದು ಭಾವಿಸಿದೆ.

ರಾಜ್ಯವು 16ನೇ ಹಣಕಾಸು ಆಯೋಗದ ಮುಂದೆ ಸಲ್ಲಿಸಿದ ಬೇಡಿಕೆ ಹಾಗೂ ಒತ್ತಾಯಗಳನ್ನು ಜನರ ಮುಂದೆ ತಿಳಿಸಬೇಕಾದುದು ನಮ್ಮ ಕರ್ತವ್ಯ. ನಮ್ಮ ಒತ್ತಾಯ ಪೂರ್ವಕ ಮನವಿಗಳಿವು:

  1. ರಾಜ್ಯಕ್ಕೆ 15ನೇ ಹಣಕಾಸು ಆಯೋಗದಲ್ಲಿ ಸಮಸ್ಯೆಯಾಗಲು ಆಯೋಗವು ಅಳವಡಿಸಿಕೊಂಡ ಸೂತ್ರಗಳಲ್ಲಿಯೇ ದೋಷಗಳಿದ್ದವು. ಆದಾಯ ದೂರ ಅಥವಾ ಇನ್‌ಕಂ ಡಿಸ್ಟೆನ್ಸ್‌ ಎಂಬ ಸೂತ್ರಕ್ಕೆ ಶೇ 45ರಷ್ಟು ಪ್ರಾಮುಖ್ಯ (ವೈಟೇಜ್‌) ನೀಡಿದ್ದು ಮುಖ್ಯ ಕಾರಣ. ಕರ್ನಾಟಕದ ಜನರ ತಲಾ ಆದಾಯ ಹೆಚ್ಚಿಗಿದೆಯೆಂದು ನಮಗೆ ಕಡಿಮೆ ಪಾಲನ್ನು ಹಂಚಿಕೆ ಮಾಡಲಾಯಿತು. ತಲಾ ಆದಾಯ ಎನ್ನುವುದು ಆರ್ಥಿಕತೆಯನ್ನು ಅಳೆಯುವ ಮಾನದಂಡಗಳಲ್ಲೊಂದಷ್ಟೆ. ಅದೇ ಮುಖ್ಯವಲ್ಲ. ರಾಜ್ಯದ ಉತ್ಪನ್ನವನ್ನು ಶ್ರೀಮಂತರು ಮತ್ತು ಬಡವರನ್ನೆಲ್ಲ ಒಂದೇ ಗುಂಪಿಗೆ ಸೇರಿಸಿ ಎಲ್ಲರಿಗೂ ಸಮಾನವಾಗಿ ವಿಭಾಗಿಸಲಾಗುತ್ತದೆ. ಇದರಿಂದ ಬರುವ ಮೊತ್ತವನ್ನು ತಲಾ ಆದಾಯ ಎನ್ನಲಾಗುತ್ತದೆ. 2014ರಿಂದ ಈಚೆಗೆ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರವು ಅಳವಡಿಸಿಕೊಂಡ ನೀತಿಗಳಿಂದಾಗಿ ಸಂಪತ್ತು ಕೆಲವೇ ಜನರ ಬಳಿ ಕೇಂದ್ರೀಕೃತವಾಗುತ್ತಿದೆ. ಜಾಗತಿಕ ಅಸಮಾನತಾ ಸೂಚ್ಯಂಕದ ಅಧ್ಯಯನಗಳ ಪ್ರಕಾರ, ಶೇ 50ರಷ್ಟಿರುವ ಬಡ ಜನರು ಕೇವಲ ಶೇ 15ರಷ್ಟು ಆದಾಯ ಗಳಿಸುತ್ತಿದ್ದಾರೆ.
    ಶೇ 10ರಷ್ಟಿರುವ ಶ್ರೀಮಂತರು ಶೇ 58ಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಈ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಅಳತೆ ಮಾಡಿ ಅದನ್ನು ಆದಾಯ ದೂರ ಎಂಬ ಸೂತ್ರಕ್ಕೆ ತಂದು ಅನುದಾನಗಳನ್ನು ಖೋತಾ ಮಾಡುವುದು ಅನ್ಯಾಯವಾಗುತ್ತದೆ ಎಂದು ಹೇಳಿದ್ದೇವೆ. ಕಲ್ಯಾಣ ಕರ್ನಾಟಕವೂ ಸೇರಿದಂತೆ ಕೆಲವು ಜಿಲ್ಲೆಗಳ ತಲಾ ಆದಾಯ ದೇಶದ ಸರಾಸರಿ ತಲಾ ಆದಾಯಕ್ಕಿಂತ ಕಡಿಮೆ ಇದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ ಈ ಸೂತ್ರವನ್ನು ಶೇ 45ರ ಬದಲು ಶೇ 25ಕ್ಕೆ ಇಳಿಸಬೇಕು. 

  2. 15 ನೇ ಹಣಕಾಸು ಆಯೋಗವು ಜಿಎಸ್‌ಡಿಪಿಯನ್ನು ಲೆಕ್ಕ ಹಾಕುವಾಗ ಅಳವಡಿಸಿಕೊಂಡಿದ್ದ ಮೂಲ ವರ್ಷ (ಬೇಸ್‌ ಇಯರ್‌) 2004-05ರ ಬದಲು 2011-12ಕ್ಕೆ ಬದಲಾಯಿಸಿದ್ದರಿಂದ ಕರ್ನಾಟಕಕ್ಕೆ ನಷ್ಟವಾಯಿತು. 2004-05ರಲ್ಲಿ ರಾಜ್ಯಗಳು ರಫ್ತಿನಲ್ಲಿ, ಉತ್ಪಾದನೆಯ ವಿಧಾನಗಳಲ್ಲಿ ತುಸು ಸಮೀಪವರ್ತಿಯಾಗಿದ್ದವು. ಐಟಿ ಕ್ರಾಂತಿ ಸಂಭವಿಸಿದ ನಂತರ ಕಾನೂನು ಸುವ್ಯವಸ್ಥೆ ಸೇರಿದಂತೆ ಯಾವ ರಾಜ್ಯವು ಅನುಕೂಲಕರವಾಗಿದೆಯೋ ಅಲ್ಲಿ ಐಟಿ ಕಂಪೆನಿಗಳು ನೆಲಸಿದವು. ಅವುಗಳಲ್ಲಿ ಬೆಂಗಳೂರು ಒಂದು. ಐಟಿ ರಫ್ತಿನಿಂದ ಕೇಂದ್ರಕ್ಕೆ ಹಲವಾರು ಅನುಕೂಲಗಳಾಗುತ್ತಿವೆ. ನಮ್ಮಲ್ಲಿ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಚಟುವಟಿಕೆಗಳು ಒಂದಿಷ್ಟು ಹೆಚ್ಚಾಗಬಹುದು. ಆದರೆ ಐಟಿ ರಫ್ತಿನ ಕಾರಣಕ್ಕೆ ನಮ್ಮ ಜಿಎಸ್‌ಡಿಪಿ ಹೆಚ್ಚು ಹಿಗ್ಗಿದಂತೆ ಕಾಣುತ್ತದೆ. ಮೂಲ ವರ್ಷ ಬದಲಾಯಿಸಿದ ಕಾರಣಕ್ಕೆ ಕರ್ನಾಟಕದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ 33ರಷ್ಟು ಹೆಚ್ಚಾಗಿರುವಂತೆ ಕಂಡು ಬಂದಿತು. ಇತರೆ ರಾಜ್ಯಗಳ ಸರಾಸರಿ ಏರಿಕೆ ಶೇ 5.6ರಷ್ಟು ಎಂದು ಲೆಕ್ಕ ಹಾಕಿದ ಕಾರಣ ನಮಗೆ ಅನ್ಯಾಯವಾಗಿದೆ. ಹೀಗಾಗಿ ಈ ಮಾನದಂಡವನ್ನು ವಾಸ್ತವಿಕವಾಗಿ ಲೆಕ್ಕ ಹಾಕಿ ಸರಿಪಡಿಸಬೇಕು.

  3. 15ನೇ ಹಣಕಾಸು ಆಯೋಗವು ಜನಸಂಖ್ಯೆಯನ್ನು 1971ರ ಬದಲಾಗಿ 2011 ಅನ್ನು ಆಧಾರವಾಗಿರಿಸಿಕೊಂಡ ಕಾರಣದಿಂದಲೂ ನಮಗೆ ತೀವ್ರ ರೂಪದ ಅನ್ಯಾಯವಾಗಿದೆ. ಜನಸಂಖ್ಯಾ ನಿಯಂತ್ರಣದ ಮೂಲಕ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿತು. ಜನಸಂಖ್ಯಾ ನಿಯಂತ್ರಣ ಸಾಧಿಸಿದ ರಾಜ್ಯಗಳಿಗೆ ಉತ್ತೇಜನ ನೀಡುವ ಬದಲು ಘೋರ ಶಿಕ್ಷೆ ನೀಡಲಾಯಿತು. ಇದನ್ನು ಸರಿಪಡಿಸಬೇಕಾದರೆ 1971ರ ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಇಟ್ಟುಕೊಳ್ಳಬೇಕು ಹಾಗೂ ಜನಸಂಖ್ಯೆಗೆ ನಿಗದಿಪಡಿಸಿರುವ ಪ್ರಾಮುಖ್ಯವನ್ನು ವೈಜ್ಞಾನಿಕವಾಗಿ ಪರಿಗಣಿಸಬೇಕು.

  4. ಪ್ರಕೃತಿ ವಿಕೋಪಗಳನ್ನು ನಿಭಾಯಿಸಲು ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್ ಅನುದಾನಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ಲೆಕ್ಕ ಹಾಕಿ ಹಂಚಿಕೆ ಮಾಡಬೇಕು. 2018-24ರ ಅವಧಿಯಲ್ಲಿ ರಾಜ್ಯವು ಪ್ರಕೃತಿ ವಿಕೋಪಗಳಿಂದಾಗಿ ₹1.56 ಲಕ್ಷ ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ. 2002ರಿಂದಲೂ ಅತಿವೃಷ್ಟಿ, ಬರ, ಪ್ರವಾಹಗಳಿಗೆ ರಾಜ್ಯವು ನಿರಂತರವಾಗಿ ಒಳಗಾಗುತ್ತಲೇ ಇದೆ. ಇಷ್ಟಿದ್ದರೂ ನಮಗೆ ಕೇವಲ 5 ರಿಸ್ಕ್‌ ಫ್ಯಾಕ್ಟರ್‌ ಅಂಕ ನೀಡುವ ಮೂಲಕ ವಂಚಿಸಲಾಗಿದೆ. ಇದನ್ನು 15ಕ್ಕೆ ಏರಿಸಬೇಕು.

  5. ವಿಕೇಂದ್ರೀಕರಣದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನು ಪ್ರೋತ್ಸಾಹಿಸಲು ಪಂಚಾಯತ್‌ ಅಧಿಕಾರ ಹಂಚಿಕೆ ಸೂಚ್ಯಂಕವನ್ನು ಅಳವಡಿಸಿಕೊಳ್ಳಬೇಕು. ಹಿಂದಿನ ಹಣಕಾಸು ಆಯೋಗಗಳು ಜನಸಂಖ್ಯೆಗೆ ಶೇ 90 ಹಾಗೂ ವಿಸ್ತೀರ್ಣಕ್ಕೆ ಶೇ 10ರಷ್ಟು ಮಾನದಂಡಗಳನ್ನು ಅಳವಡಿಸಿಕೊಂಡ ಕಾರಣ, ವಿಕೇಂದ್ರೀಕರಣ ಸಾಧಿಸಿದ ರಾಜ್ಯಗಳಿಗೆ ಅನ್ಯಾಯವಾಯಿತು. ಆದ್ದರಿಂದ ಜನಸಂಖ್ಯೆಗೆ ಶೇ 60, ಭೌಗೋಳಿಕ ವಿಸ್ತೀರ್ಣಕ್ಕೆ ಶೇ 20 ಮತ್ತು ಅಧಿಕಾರ ಹಂಚಿಕೆ ಸೂಚ್ಯಂಕಕ್ಕೆ ಶೇ 20ರಷ್ಟು ಮಾನದಂಡಗಳನ್ನು ನಿಗದಿಪಡಿಸಬೇಕು.

  6. ರಾಜ್ಯವು ಕಲ್ಯಾಣ ಕರ್ನಾಟಕಕ್ಕೆ 5 ವರ್ಷಗಳಲ್ಲಿ ₹25 ಸಾವಿರ ಕೋಟಿಗಳನ್ನು ಮೀಸಲಿರಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವೂ ಅಷ್ಟೇ ಮೊತ್ತವನ್ನು ಮ್ಯಾಚಿಂಗ್‌ ಗ್ರ್ಯಾಂಟ್‌ ನೀಡಬೇಕು ಹಾಗೂ ಆ ಭಾಗದ ಪರಿಸರ ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ
    ₹10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ನೀಡಬೇಕು.ಮಲೆನಾಡು, ಕರಾವಳಿ ಹಾಗೂ ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯಗಳಾಗಿವೆ. ಅವು ಇಡೀ ಭಾರತದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ. ಅಲ್ಲಿನ ಕೃಷಿಕರ ಬದುಕು ಸಂಕಷ್ಟದಲ್ಲಿದೆ. ಅದಕ್ಕಾಗಿ ವಿಶೇಷ ಅನುದಾನಗಳನ್ನು ಒದಗಿಸಬೇಕು. ಅಲ್ಲದೆ, ರಾಜಸ್ಥಾನದ ನಂತರ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಒಣ ಭೂಮಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅದಕ್ಕೆ ಅನುದಾನಗಳನ್ನು ಕೊಡಬೇಕು.

  7. ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ₹1.15 ಲಕ್ಷ ಕೋಟಿಗಳಷ್ಟು ಹೂಡಿಕೆ ಅಗತ್ಯವಿದೆ. ಇದಕ್ಕಾಗಿ 16ನೇ ಹಣಕಾಸು ಆಯೋಗವು ಕನಿಷ್ಠ ₹27,793 ಕೋಟಿಗಳನ್ನಾದರೂ ನೀಡುವಂತೆ ಶಿಫಾರಸು ಮಾಡಬೇಕು.

  8. ಪ್ರಧಾನಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಒತ್ತಾಯ ಮಾಡುತ್ತಿದ್ದಂತೆಯೇ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿರುವ ಶೇ 41ರಷ್ಟು ಹಂಚಿಕೆಯನ್ನು ಶೇ 50ಕ್ಕೆ ಏರಿಕೆ ಮಾಡಬೇಕು; ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಕೇಂದ್ರದ ಆದಾಯದ ಶೇ 5ಕ್ಕೆ ಮಾತ್ರ ಸೀಮಿತಗೊಳಿಸಿ ಉಳಿಕೆ ಮೊತ್ತವನ್ನು ರಾಜ್ಯಗಳಿಗೆ ಹಂಚಬೇಕು.

ಅನುದಾನ ಕೊಡದೆ ಕೇಂದ್ರದಿಂದ ಅನ್ಯಾಯ

15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ₹5495 ಕೋಟಿ ವಿಶೇಷ ಅನುದಾನ ಹಾಗೂ ಬೆಂಗಳೂರಿನ ಪೆರಿಫರಲ್‌ ರಸ್ತೆಗೆ ₹3000 ಕೋಟಿ ಮತ್ತು ಕೆರೆಗಳ ಅಭಿವೃದ್ಧಿಗೆ ₹3000 ಕೋಟಿ ಸೇರಿ ಒಟ್ಟಾರೆ ₹11495 ಕೋಟಿ ಕೊಡಬೇಕೆಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಕೊಡದೆ ಅನ್ಯಾಯ ಮಾಡಿತು.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಗಳು ಶೇ 40ರಷ್ಟನ್ನು ತಮ್ಮ ತೆರಿಗೆ ಸಂಗ್ರಹದಿಂದ ಕೊಡಬೇಕಾಗಿದೆ. ಆದರೆ ಕರ್ನಾಟಕವು 2021ರಿಂದ 2024-25ರವರೆಗೆ ₹49271 ಕೋಟಿ ಕೊಡಬೇಕಾಗಿತ್ತು. ಆದರೆ ಕೇಂದ್ರವು ತನ್ನ ಪಾಲನ್ನು ಸಮರ್ಪಕವಾಗಿ ಕೊಡದೇ ಹೋದ ಕಾರಣ ರಾಜ್ಯವು ಹೆಚ್ಚುವರಿಯಾಗಿ ₹23402 ಕೋಟಿ ಭರಿಸಬೇಕಾಯಿತು. ಹಾಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕರ್ನಾಟಕವು ಭರಿಸಿದ ಪಾಲು ಶೇ 50ಕ್ಕಿಂತ ಹೆಚ್ಚಾಯಿತು. ಜಲಜೀವನ್‌ ಮಿಷನ್‌ ಯೋಜನೆಯೊಂದರಲ್ಲೇ ₹13 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಕೇಂದ್ರ ಸರ್ಕಾರ ಕೊಡದೆ ಬಾಕಿ ಉಳಿಸಿಕೊಂಡಿದೆ. ಆಯೋಗವು ಶಿಫಾರಸು ಮಾಡಿದ್ದ ಅನುದಾನದಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ₹1802 ಕೋಟಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ₹874 ಕೋಟಿಗಳಷ್ಟು ಕಡಿಮೆ ಅನುದಾನ ನೀಡಲಾಗಿದೆ.

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.