ADVERTISEMENT

ಕೃಷ್ಣ ಯುಗಾಂತ್ಯ: ಸಮರ್ಥ ಆಡಳಿತ– ಆಹ್ಲಾದಕರ ಅನುಭವ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 0:05 IST
Last Updated 11 ಡಿಸೆಂಬರ್ 2024, 0:05 IST
<div class="paragraphs"><p>ಸಿದ್ದರಾಮಯ್ಯ ಅವರೊಂದಿಗೆ</p></div>

ಸಿದ್ದರಾಮಯ್ಯ ಅವರೊಂದಿಗೆ

   

ಕೃಷ್ಣ ಅವರ ಆಡಳಿತದ ಅವಧಿಯನ್ನು ನೆನಪು ಮಾಡಿಕೊಂಡು ದಾಖಲಿಸುವುದು ಎಂದರೆ ಅದೊಂದು ಆಹ್ಲಾದಕರ ಅನುಭವ. 1999ರ ಅಕ್ಟೋಬರ್ 11ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ಅವರು ರಾಜ್ಯದ ಸಮಗ್ರ ಅಭಿವೃದ್ಧಿಯ ಕುರಿತ ತಮ್ಮದೇ ಕನಸುಗಳನ್ನು ಒಳಗೊಂಡ ನೀಲಿ ನಕಾಶೆಯನ್ನು ಸಿದ್ಧಪಡಿಸಿಕೊಂಡರು. ಆಳವಾದ ಅಧ್ಯಯನ, ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಗಳಿಸಿದ ಅಪಾರ ಅನುಭವಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ಅವರಿಗೆ ಸಹಾಯಕವಾಗಿದ್ದವು. ಆಡಳಿತದಲ್ಲಿ ಸಾರ್ವಜನಿಕ ಸಹಭಾಗಿತ್ವ ಮತ್ತು ಅಧಿಕಾರಿಗಳನ್ನು ಚುರುಕುಗೊಳಿಸಬೇಕೆಂಬ ಅವರ ನಿರ್ಧಾರ ಆರಂಭದಿಂದಲೇ ಫಲ ಕಂಡವು.

ರಾಜಧಾನಿಯಲ್ಲಿ ಇರುವ ದಿನಗಳಂದು ಪ್ರತಿದಿನ 11 ಗಂಟೆಗೆ ವಿಧಾನ ಸೌಧದ ಕಚೇರಿಗೆ ಆಗಮಿಸಿ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ದ್ವಾರದ ಬಳಿ ಇದ್ದ ಸರ್ಕಾರಿ ನೌಕರರ ಹಾಜರಾತಿ ದಾಖಲಾತಿ ಯಂತ್ರದಲ್ಲಿ ತಮ್ಮ ಗುರುತಿನ ಕಾರ್ಡನ್ನು ಪಂಚ್ ಮಾಡುವ ಮೂಲಕ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹಾಗೂ ನೌಕರರಿಗೆ ಹಾಜರಾತಿಯಲ್ಲಿ ಶಿಸ್ತು ತರಲು ಮಾದರಿಯಾದರು. ತಮ್ಮ ಆಡಳಿತದಲ್ಲಿ ಹೊಸತನ, ಹೊಸ ದಾರಿಯನ್ನು ತರಲು ಸದಾ ಆಲೋಚಿಸುತ್ತಿದ್ದ ಕೃಷ್ಣ ಅವರು ತಮ್ಮ ಶಿಸ್ತು, ಸಂಯಮ, ಜವಾಬ್ದಾರಿಯುತ ನಡವಳಿಕೆ ಹಾಗೂ ಸಮಯಪ್ರಜ್ಞೆ ಮೂಲಕವೇ ಆಡಳಿತ ಯಂತ್ರವನ್ನು ಬಿಗಿಗೊಳಿಸಿದ್ದರು. ಯಾವುದೇ ಸರ್ಕಾರಿ ಆದೇಶವನ್ನು ಹೊರಡಿಸದೇ ತಮ್ಮ ವ್ಯಕ್ತಿತ್ವದ ಮೂಲಕವೇ ಮಾದರಿ ಆಡಳಿತ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಅವರದು. ನಾಳೆ ಏನು ಮಾಡಬೇಕು ಎಂಬುದನ್ನು ಹಿಂದಿನ ದಿನ ತಾವೇ ನಿರ್ಧರಿಸಿ ನಮಗೆಲ್ಲರಿಗೂ ಸೋಜಿಗ ಮೂಡಿಸುತ್ತಿದ್ದರು. ಅವರ ಸಂಪುಟದ ಸಹದ್ಯೋಗಿಗಳಾಗಿದ್ದ ಕೆ.ಎಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಎಚ್.ಕೆ. ಪಾಟೀಲ ಮುಂತಾದ ಹಿರಿಯ ನಾಯಕರು ಸಹ ಅವರ ಪೂರ್ವಾನುಮತಿ ಪಡೆದೇ ಅವರನ್ನು ಭೇಟಿಯಾಗುತ್ತಿದ್ದುದು ಕೃಷ್ಣ ಅವರ ಶಿಸ್ತಿನ ಆಡಳಿತಕ್ಕೆ ನಿದರ್ಶನ.

ಸರ್ಕಾರದ ಎಲ್ಲಾ ಯೋಜನೆಗಳ ಮೇಲೆ ನಿಗಾ ವಹಿಸಲು ತಮ್ಮ ಸಚಿವಾಲಯದಲ್ಲೇ ಪರಿಶೀಲನಾ ತಂಡವನ್ನು ರಚಿಸಿದ್ದ  ಕೃಷ್ಣ ಅವರು ಕೇಂದ್ರ ಸರ್ಕಾರದ ಅನುದಾನಿತ ಯೋಜನೆಗಳ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡುತ್ತಿದ್ದರು. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಾಂಧವ್ಯ ಸುಮಧುರವಾಗಿ ಇರಬೇಕು ಎಂಬ ಆಶಯವೂ ಇತ್ತು. ಅಂದು ಪ್ರಧಾನ ಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು, ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಕರ್ನಾಟಕ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬ ವಿಚಾರವನ್ನು ಅಂಕಿ ಅಂಶಗಳ ಸಮೇತ ಪ್ರಸ್ತಾಪಿಸಿ ಕೃಷ್ಣ ಅವರಿಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿನ ಕೆಲವು ಸಾಲುಗಳು ಮುಖ್ಯಮಂತ್ರಿಯವರ ಭಾವನೆಗಳನ್ನು ತುಸು ಗಾಸಿಗೊಳಿಸಿದ್ದವು. ಪತ್ರ ಓದಿದ ತಕ್ಷಣವೇ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಸಭೆ ಕರೆದ ಮುಖ್ಯಮಂತ್ರಿ, ಪ್ರಧಾನಮಂತ್ರಿಯವರ ಆಕ್ಷೇಪಗಳಿದ್ದ ಪತ್ರವನ್ನು ಸಭೆಯಲ್ಲಿ ತಾವೇ ಓದಿದ್ದರು. ಸಭೆಯಲ್ಲಿದ್ದ ಅಂದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೋಟಮ್ಮ ಅವರನ್ನು ಉದ್ದೇಶಿಸಿ, ಈ ಅನುದಾನ ಬಳಕೆಗೆ ನಿರ್ದಿಷ್ಟ ಯೋಜನೆಯನ್ನು ರೂಪಿಸಿ ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮೋಟಮ್ಮ ಅವರು ಒಂದು ವಾರದಲ್ಲಿ ಸ್ತ್ರೀಶಕ್ತಿ ಯೋಜನೆ ಸಿದ್ಧಪಡಿಸಿ ಸಂಪುಟ ಸಭೆಯಲ್ಲಿ ಮಂಡಿಸಿದರು. ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದ ಸ್ತ್ರೀಶಕ್ತಿ ಯೋಜನೆ ಕೃಷ್ಣ ಅವರ ಸರ್ಕಾರದ ಸಾಧನೆಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಸ್ತ್ರೀಶಕ್ತಿ ಯೋಜನೆ ಆಂದೋಲನ ರೂಪ ಪಡೆದಿದ್ದು ಈಗ ಇತಿಹಾಸ.

ADVERTISEMENT

ಲೇಖಕ: ನಿವೃತ್ತ ಜಂಟಿ ನಿರ್ದೇಶಕ, ವಾರ್ತಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.