ADVERTISEMENT

ಕೃಷ್ಣ ಯುಗಾಂತ್ಯ: ಸಿಂಗಪುರವಾಗಲಿದೆ ಬೆಂಗಳೂರು ಎಂದಾಗ ನಕ್ಕರು...

ಆರ್. ಮಂಜುನಾಥ್
Published 11 ಡಿಸೆಂಬರ್ 2024, 0:59 IST
Last Updated 11 ಡಿಸೆಂಬರ್ 2024, 0:59 IST
<div class="paragraphs"><p>ವಿಕಾಸಸೌಧ ಕಟ್ಟುವಾಗ ಪರಿಶೀಲನೆ</p></div>

ವಿಕಾಸಸೌಧ ಕಟ್ಟುವಾಗ ಪರಿಶೀಲನೆ

   

ಬೆಂಗಳೂರಿನಲ್ಲಿ ಮೇಲ್ಸೇತುವೆ, ತೂಗುಸೇತುವೆಯಂತಹ ಅತ್ಯಾಧುನಿಕ ಸೌಕರ್ಯಗಳು ನಿರ್ಮಾಣವಾಗಲಿವೆ. ಬೆಂಗಳೂರು ‘ಸಿಂಗಪುರ’ವಾಗಲಿದೆ. ವಿಶ್ವವೇ ನಮ್ಮ ನಗರದತ್ತ ಗಮನ ಕೇಂದ್ರೀಕರಿಸಲಿದೆ...

1999ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ ಅವರು ಇಂತಹ ಮಾತುಗಳನ್ನಾಡಿದಾಗ ಅಂದು ಅದನ್ನು ನಂಬದ ಮನಸ್ಸುಗಳೇ ಹೆಚ್ಚು. ಆದರೆ, ಅಂದಿನ ಭದ್ರಬುನಾದಿಯೇ ಬೆಂಗಳೂರಿಗೆ ಸಿಲಿಕಾನ್‌ ವ್ಯಾಲಿ, ಹೈಟೆಕ್‌ ಸಿಟಿ ಎಂಬಂತಹ ಪ್ರಖ್ಯಾತಿಗಳು ಬರಲು ಕಾರಣ. 

ADVERTISEMENT

ಬೆಂಗಳೂರಿಗೆ ಮೂಲಸೌಕರ್ಯ ಒದಗಿಸುವತ್ತ ಹೆಚ್ಚಿನ ಆಸಕ್ತಿ ತೋರಿದ್ದು ಎಸ್‌.ಎಂ. ಕೃಷ್ಣ. ನಗರದ ಅಭಿವೃದ್ಧಿಗೆ ರೂಪು ರೇಷೆ, ಯೋಜನೆ ಅನುಷ್ಠಾನಕ್ಕೆ ವೇಗ ನೀಡಲೆಂದೆ ಬೆಂಗಳೂರು ಅಜೆಂಡಾ ಟಾಸ್ಕ್‌ ಫೋರ್ಸ್‌ (ಬಿಎಟಿಎಫ್‌) ಅನ್ನು ಇನ್ಫೊಸಿಸ್‌ ಸಿಇಒ ಆಗಿದ್ದ ನಂದನ್‌ ನೀಲೆಕಣಿ ನೇತೃತ್ವದಲ್ಲಿ ಸ್ಥಾಪಿಸಿದ್ದರು.

ಎಸ್‌.ಎಂ. ಕೃಷ್ಣ ಅವರ ಆಸಕ್ತಿ, ನೀತಿ–ನಿಯಮಗಳೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆಯಲು ಕಾರಣ. 1999–2000ರಲ್ಲಿ ₹100 ಕೋಟಿ ಮೌಲ್ಯದ ಸಾಫ್ಟ್‌ವೇರ್‌ಗಳನ್ನು ರಫ್ತು ಮಾಡುತ್ತಿದ್ದ ನಗರದಲ್ಲಿ 13 ಐಟಿ ಕಂಪನಿಗಳಷ್ಟೇ ಇದ್ದವು. 2001–02ರ ವೇಳೆಗೆ ಈ ಸಂಖ್ಯೆ 1032ಕ್ಕೆ ತಲುಪಿತು, ರಫ್ತು ಮೌಲ್ಯ ₹7,200 ಕೋಟಿಗೆ ಏರಿತು. 2004–05ರಲ್ಲಿ 1514 ಕಂಪನಿಗಳ ಸಾಫ್ಟ್‌ವೇರ್‌ ರಫ್ತು ಮೌಲ್ಯ ₹20,700 ಕೋಟಿ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಪ್ರತ್ಯೇಕ ನೀತಿಯನ್ನು 2002ರಲ್ಲಿ ರೂಪಿಸಲಾಯಿತು. ಅಲ್ಲದೆ ರಾಷ್ಟ್ರ– ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ತಮ್ಮ ವ್ಯಾಪ್ತಿ ವೃದ್ಧಿಸಿಕೊಳ್ಳಲು ಪ್ರಥಮ ಬಾರಿಗೆ 2002ರಲ್ಲಿ ‘ಬೆಂಗಳೂರು ಐಟಿ ಡಾಟ್‌ ಕಾಮ್‌’ ಸಮ್ಮೇಳನವನ್ನು ಆಯೋಜಿಸಲಾಯಿತು. ಇದೆಲ್ಲ ಐಟಿ–ಬಿಟಿ ಕ್ಷೇತ್ರದ ವೃದ್ಧಿಗೆ ಭದ್ರಬುನಾದಿಯಾಯಿತು.

ಅಂತರರಾಷ್ಟ್ರೀಯ ತಂತ್ರಜ್ಞಾನ ಪಾರ್ಕ್ (ಐಟಿಪಿಎಲ್‌), ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್ಮೇಷನ್‌ ಟೆಕ್ನಾಲಜಿ– ಬೆಂಗಳೂರು (ಐಐಐಟಿಬಿ) ಸಂಸ್ಥೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ರೂಪಿಸಲು ಎಸ್‌.ಎಂ. ಕೃಷ್ಣ ಅವರ ದೂರದೃಷ್ಟಿಯೇ ಕಾರಣ. 

ಆಡಳಿತದಲ್ಲಿ ತಂತ್ರಜ್ಞಾನ, ಗಣಕೀಕರಣ ವ್ಯವಸ್ಥೆ ಜಾರಿ ಮಾಡಲು ಎಸ್‌.ಎಂ. ಕೃಷ್ಣ ಅವರಿಗೆ ಅತಿಯಾದ ಆಸಕ್ತಿ ಇತ್ತು. ಸರ್ಕಾರಿ ಕಚೇರಿಗಳಲ್ಲಿ ನೌಕರರ ಪ್ರವೇಶಕ್ಕೆ ‘ಸ್ಮಾರ್ಟ್‌ ಕಾರ್ಡ್‌’ ಪ‍ರಿಚಯಿಸಿದ್ದ ಕೃಷ್ಣ ಅವರೇ ವಿಧಾನಸೌಧದ ತಮ್ಮ ಕಚೇರಿ ಪ್ರವೇಶಿಸಲು ‘ಸ್ಮಾರ್ಟ್‌ ಕಾರ್ಡ್‌’ ಬಳಸಿ ಎಲ್ಲರನ್ನೂ ಉತ್ತೇಜಿಸಿದ್ದರು. ಕಂದಾಯ ಇಲಾಖೆಯಲ್ಲಿ ಭೂಮಿ ದಾಖಲೆಗಳಿಗಾಗಿ, ‘ಭೂಮಿ’ ತಂತ್ರಾಂಶ, ಜಲಮಂಡಳಿಯ ಬಿಲ್‌ ಪಾವತಿಗೆ ‘ಕಾವೇರಿ ಇ–ಕಾಂ ಕಿಯೋಸ್ಕ್‌’, ಕಾವೇರಿ ನೀರಿನ ಮೀಟರ್‌ ರೀಡಿಂಗ್‌ ಮಾಡಿದ ಕೂಡಲೇ ‘ಸ್ಪಾಟ್‌ ಬಿಲ್’ ನೀಡುವುದು, ಬಿಲ್‌ ಪಾವತಿ ಮತ್ತು  ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ‘ಬೆಂಗಳೂರು ಒನ್‌’, ರೈತರು– ಗ್ರಾಹಕರ ನಡುವಿನ ನೇರ ಮಾರಾಟಕ್ಕೆ ಯಲಹಂಕದಲ್ಲಿ ಪ್ರಥಮ ‘ರೈತ ಸಂತೆ’, ‘ಕೃಷಿ ಮಾರಾಟ ವಾಹಿನಿ’ ವೆಬ್‌ಸೈಟ್‌ಗಳು ಕೃಷ್ಣ ಅವರು ಬೆಂಗಳೂರಿಗೆ ನೀಡಿದ ಕೊಡುಗೆಗಳು. ಮೂತ್ರಪಿಂಡ ಸಂಬಂಧಿ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ಒದಗಿಸಲು ದೇಶದಲ್ಲೇ ವಿಶಿಷ್ಟವಾದ ‘ಬೆಂಗಳೂರು ನೆಫ್ರೋಯೂರಾಲಜಿ ಸಂಸ್ಥೆ’ ಆರಂಭವಾಗಿದ್ದೂ ಕೃಷ್ಣ ಕಾಲದಲ್ಲಿಯೇ.

ಬಿಡಿಎ ಪುನಶ್ಚೇತನ: ಕೃಷ್ಣ ಸಿಎಂ ಆದ ಆರಂಭ ದಿನಗಳಲ್ಲೇ ಮುಖ್ಯ ಕಾರ್ಯದರ್ಶಿಯವರ ನೇತೃತ್ವದ ಉನ್ನತಾಧಿಕಾರಿಗಳ ಸಮಿತಿ, ‘ಬಿಡಿಎ ನೌಕರರಿಗೆ ವೇತನ ನೀಡಲೂ ಅಲ್ಲಿ ದುಡ್ಡಿಲ್ಲ, ಅದನ್ನು ಮುಚ್ಚಬೇಕು’ ಎಂದು ಸಲಹೆ ನೀಡಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿದ ಕೃಷ್ಣ ಅವರು ಜಯಕರ್‌ ಜರೋಮ್‌ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರನ್ನಾಗಿ ನೇಮಿಸಿದರು. ಅಲ್ಲಿಂದ ಕಡತಗಳು ಅನುಮೋದನೆಗೆ ನೇರವಾಗಿ ಮುಖ್ಯಮಂತ್ರಿಯವರಿಗೇ ಬರುವಂತೆ ನೋಡಿಕೊಂಡರು. ಬಿಡಿಎಗೆ ಪುನಶ್ಚೇತನ ನೀಡಿದ್ದಲ್ಲದೇ, ಅದರ ಆದಾಯ ಹೆಚ್ಚಳವಾಗುವಂತೆ ಮಾಡಿದರು.

ವಿಕಾಸ ಸೌಧ

ವಿಧಾನಸೌಧದ ಮಾದರಿಯಲ್ಲೇ ವಿಕಾಸ ಸೌಧ ನಿರ್ಮಾಣ ಕೃಷ್ಣ ಅವರ ಪರಿಕಲ್ಪನೆ. ₹146 ಕೋಟಿ ವೆಚ್ಚದ ಈ ಕಟ್ಟಡವನ್ನು 2000ದ ಮಾರ್ಚ್‌ 27ರ ತಮ್ಮ ಬಜೆಟ್‌ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಬಳಿಕ 2001ರಲ್ಲಿ ತಾಂತ್ರಿಕ ಮಂಜೂರಾತಿ ನೀಡಿದ್ದರು. 7.5 ಎಕರೆ ಪ್ರದೇಶದಲ್ಲಿ 58,274 ಚದರ ಮೀಟರ್‌ ವಿಸ್ತೀರ್ಣದ ಭವನ ನಿರ್ಮಿಸಿದರು.

ಉದ್ಯೋಗ ಸೌಧ

ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಿಧಾನಸೌಧದ ಮಾದರಿಯಲ್ಲಿ ಕಟ್ಟಡ ನಿರ್ಮಿಸಲು ಕೃಷ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅದಕ್ಕಾಗಿ ₹5 ಕೋಟಿ ಮಂಜೂರು ಮಾಡಿದ್ದರು. ನಂತರ ಒಟ್ಟು ₹16 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಯಿತು. ಅದಕ್ಕೆ ಉದ್ಯೋಗ ಸೌಧ ಎಂದು ನಾಮಕರಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.