ADVERTISEMENT

ವಿಶ್ಲೇಷಣೆ | ನುಡಿ ನೈತಿಕತೆಯ ಅರಸುತ್ತಾ...

ನುಡಿಮಾಲಿನ್ಯದಿಂದ ಸಭ್ಯರ ನಾಲಿಗೆಯು ನಾಚಿಕೆಯಿಂದ ನುಡಿಮೌನಕ್ಕೆ ಸರಿಯುವಂತಾಗಿದೆ

ಪ್ರೊ.ಬರಗೂರು ರಾಮಚಂದ್ರಪ್ಪ
Published 5 ಫೆಬ್ರುವರಿ 2025, 0:26 IST
Last Updated 5 ಫೆಬ್ರುವರಿ 2025, 0:26 IST
   

ಇತ್ತೀಚಿನ ವರ್ಷಗಳಲ್ಲಿ ದ್ವೇಷವನ್ನು ಕಾರಿಕೊಳ್ಳುವ ಪ್ರವೃತ್ತಿ ಅನೇಕರಲ್ಲಿ ಸಭ್ಯತೆಯ ಎಲ್ಲೆ ದಾಟಿ ವ್ಯಕ್ತವಾಗುತ್ತಿದೆ. ನಾವು ಆಡುವ ಮಾತು ಬರೀ ನಾಲಿಗೆಯ ನುಡಿಯಲ್ಲ, ಅದು ಮನಸ್ಸಿನ ಭಾಷಾರೂಪ. ನಮ್ಮ ಮನಸ್ಸಿನಲ್ಲಿ ಮಾಲಿನ್ಯ ತುಂಬಿಕೊಂಡಿದ್ದರೆ ಅದಕ್ಕನುಗುಣವಾದ ನುಡಿಮಾಲಿನ್ಯ ವಿಜೃಂಭಿಸುತ್ತದೆ; ನುಡಿ ನೈತಿಕತೆಯ ನಾಶಕ್ಕೆ ಮುನ್ನುಡಿ ಬರೆಯುತ್ತದೆ. ಈ ನನ್ನ ಮಾತಿಗೆ ನಿದರ್ಶನವಾಗುವ ನೂರಾರು ನುಡಿಮಾಲಿನ್ಯದ ಮುಂದಾಳುಗಳು ನಮ್ಮ ಸಮಾಜದಲ್ಲಿ ಇದ್ದಾರೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ವಲಯಗಳಿಂದ ಎದ್ದುಬಂದು ಜಿದ್ದು ಸಾಧಿಸುವ ಇಂತಹ ಕೆಲವು ಮುಂದಾಳುಗಳು ತಮ್ಮ ನುಡಿಮಾಲಿನ್ಯದಿಂದ ಸಾಮಾಜಿಕ ಪರಿಸರದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ.

ಕೆಲವರು ಜಾತಿಮೂಲವನ್ನು ಹಿಡಿದು ಹೀಯಾಳಿಸಿ ಮಾತಾಡುತ್ತಾರೆ. ಇನ್ನು ಕೆಲವರು ರಾಜಕೀಯ ಮತ್ತು ‘ಧರ್ಮ’ ದ್ವೇಷದಿಂದ ಪ್ರಚೋದನಾತ್ಮಕ ಭಾಷೆ ಬಳಸಿ ಹಿಂಸೆಯನ್ನು ಉದ್ರೇಕಿಸುತ್ತಾರೆ. ಯಾವ ಧರ್ಮವೂ ಮೂಲತಃ ಹಿಂಸೆಗೆ ಕರೆ ಕೊಡುವುದಿಲ್ಲವಾದರೂ, ಆಯಾ ಧರ್ಮದ ಹೆಸರಿನಲ್ಲಿ ‘ಹೊಡಿ ಬಡಿ ಕಡಿ’ಯ ನುಡಿ ಮಾಲಿನ್ಯವನ್ನು ಮೆರೆಯುವ ಕೆಲವರು, ಅವರವರ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ. ರಾಜಕೀಯ ಮುಂದಾಳುಗಳಲ್ಲಿ ಕೆಲವರು ಏಕವಚನ ಪ್ರಯೋಗ ಸ್ಪರ್ಧೆಯಲ್ಲಿ ನಿತ್ಯ ನಿರತರಾಗಿದ್ದಾರೆ. ‘ನೀನು ಹೆಚ್ಚೊ ನಾನು ಹೆಚ್ಚೊ’ ಎಂದು ವೈಯಕ್ತಿಕ ಸವಾಲು ಎಸೆಯಲು ಪಕ್ಷಾತೀತವಾಗಿ ಬೀದಿ ಬಯ್ಗುಳದ ಮಾದರಿ ಅನುಸರಿಸುತ್ತಿದ್ದಾರೆ. ಇದರಿಂದ, ರಾಜಕೀಯ ವಲಯದಲ್ಲಿ ಇರುವ ಸಭ್ಯರ ನಾಲಿಗೆಯು ನಾಚಿಕೆಯಿಂದ ನುಡಿಮೌನಕ್ಕೆ ಸರಿಯುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಲಾಗುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿಯೂ ಅಷ್ಟೇ. ಮತೀಯತೆಯ ಅಬ್ಬರದಲ್ಲಿ ಮಾನವೀಯ ಮೌಲ್ಯದ ಮಾತಾಡುವ ಧಾರ್ಮಿಕರಿಗೆ ಹಿನ್ನಡೆಯಾಗುತ್ತಿದೆ.

ಧಾರ್ಮಿಕ ಮೂಲಭೂತವಾದ ಮತ್ತು ಫ್ಯೂಡಲ್ ಪದ್ಧತಿಯ ಪಳೆಯುಳಿಕೆಯ ಮನೋಧರ್ಮದವರಿಂದ ಮಾತ್ರ ಇಂತಹ ಹಿಂಸಾತ್ಮಕ ಮತ್ತು ವೈಯಕ್ತಿಕ ನಿಂದನೆಯ ಅತಿರೇಕದ ಮಾತುಗಳು ಬರುತ್ತವೆ. ಇಂಥವರ ವರ್ತನೆಯು ಮಾತಿನ ಉಡಾಫೆತನಕ್ಕಷ್ಟೇ ಸೀಮಿತವಾದುದಲ್ಲ. ಹೀಗೆ ತಂತಮ್ಮ ಪಕ್ಷ, ಪಂಥ, ಧರ್ಮ, ಜಾತಿ, ಲಿಂಗ ತಾರತಮ್ಯಗಳ ನೆಲೆಯಲ್ಲಿ ನುಡಿ ನೈತಿಕತೆಯ ನಾಶಕ್ಕೆ ನಿಂತು ನುಡಿಮಾಲಿನ್ಯಕ್ಕೆ ಕಾರಣವಾಗುವವರು ಮೂಲತಃ ಮಾನಸಿಕ ಮಾಲಿನ್ಯದ ಮಾಲೀಕರಾಗಿರುತ್ತಾರೆ. ಹಾಗೆಂದು ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಹೊರತಾದ ಸಾಂಸ್ಕೃತಿಕ ಕ್ಷೇತ್ರದ ಎಲ್ಲರೂ ನುಡಿನೈತಿಕತೆಯ ಸಂರಕ್ಷಕರೆಂದು ಸಾರುವಂತಿಲ್ಲ. ಇಲ್ಲಿಯೂ ನುಡಿ ನೈತಿಕತೆಗೆ ಧಕ್ಕೆ ತರುವ ಮಾನಸಿಕ ಮಾಲಿನ್ಯದ ಕೆಲವರು ಇದ್ದಾರೆ.

ADVERTISEMENT

ನುಡಿ ನೈತಿಕತೆಯು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯದಂತಹ ಎಲ್ಲ ಕ್ಷೇತ್ರಗಳ ನೈತಿಕತೆಯನ್ನು ಅವಲಂಬಿಸಿದೆ. ಜಾತಿ ತಾರತಮ್ಯವಿಲ್ಲದ ಸಾಮಾಜಿಕ ನ್ಯಾಯದ ನೆಲೆಯುಳ್ಳ ಸಾಮಾಜಿಕ ನೈತಿಕತೆ, ಪ್ರಜಾಸತ್ತಾತ್ಮಕ ಸಭ್ಯ ಸಂವಾದದ ತಳಹದಿಯುಳ್ಳ ರಾಜಕೀಯ ನೈತಿಕತೆ, ಪರಸ್ಪರ ದ್ವೇಷದ ದಳ್ಳುರಿ ಹಬ್ಬಿಸದೆ ಸೌಹಾರ್ದ ಸಾರುವ ಧಾರ್ಮಿಕ ನೈತಿಕತೆ, ಬಹುಸಂಸ್ಕೃತಿಗೆ ಮನ್ನಣೆ ಕೊಡುವ ಮತ್ತು ವೈಯಕ್ತಿಕ ಈರ್ಷ್ಯೆಗಳನ್ನು ಮೀರಿದ ಸಮಚಿತ್ತದ ಸಾಂಸ್ಕೃತಿಕ ನೈತಿಕತೆ, ‘ಪಕ್ಷ’ಪಾತವಿಲ್ಲದ ನೈಜ ವಿಶ್ಲೇಷಣೆ ಮತ್ತು ಸುದ್ದಿ ಪ್ರಕಟಣೆಯ ಮಾಧ್ಯಮ ನೈತಿಕತೆ- ಇವೆಲ್ಲವೂ ಆರೋಗ್ಯಕರ ಸಮಾಜದ ಗುಣಲಕ್ಷಣಗಳು. ಆಯಾ ಕ್ಷೇತ್ರದ ಆಂತರಿಕ ನೈತಿಕತೆ ಕುಸಿಯತೊಡಗಿದಾಗ ಬಹಿರಂಗದಲ್ಲಿ ನುಡಿ ನೈತಿಕತೆಯು ನಾಶದತ್ತ ಸಾಗುತ್ತದೆ. ನುಡಿ ನೈತಿಕತೆಯ ನಾಶಕ್ಕೂ ಆಯಾ ಕ್ಷೇತ್ರದ ಮಾನಸಿಕ ಮಾಲಿನ್ಯಕ್ಕೂ ಅವಿನಾಭಾವ ಸಂಬಂಧವಿರುತ್ತದೆ.

ನಾವಿಂದು ಪರಿಸರ ಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯಗಳ ವಿರುದ್ಧ ಮಾತಾಡುತ್ತಿದ್ದೇವೆ. ಈಗ ಮಾನಸಿಕ ಮಾಲಿನ್ಯದ ವಿರುದ್ಧವೂ ದನಿಯೆತ್ತಿ ನುಡಿ ನೈತಿಕತೆಯನ್ನು ಉಳಿಸಬೇಕಾಗಿದೆ. ಮಾನಸಿಕ ಮಾಲಿನ್ಯದ ವಿರುದ್ಧ ದನಿ ಎತ್ತುವುದೆಂದರೆ, ಪ್ರಜಾಸತ್ತಾತ್ಮಕ ಪರಿಭಾಷೆಯ ಪರವಾಗಿ ಪ್ರತಿಪಾದನೆ ಮಾಡಿದಂತೆ ಆಗುತ್ತದೆ. ಯಾಕೆಂದರೆ, ನುಡಿ ನೈತಿಕತೆಗೆ ಧಕ್ಕೆ ತರುವ ಮಾನಸಿಕ ಮಾಲಿನ್ಯವು ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ತಾರತಮ್ಯಗಳನ್ನು ಆಧರಿಸಿದ ನೀತಿ ನಿಲುವುಗಳ ಫಲಿತವಾಗಿರುತ್ತದೆ. ಪ್ರಜಾಸತ್ತಾತ್ಮಕ ತಾತ್ವಿಕತೆಯ ವಿರೋಧಿಯಾಗಿರುತ್ತದೆ.

ವಿವಿಧ ಕ್ಷೇತ್ರದ ಮುಂದಾಳುಗಳಿಗೆ ಪಾಠವಾಗುವಂತಹ ತಾತ್ವಿಕ ನುಡಿ ಸಂದೇಶಗಳು ಕನ್ನಡ ಸಾಹಿತ್ಯದಲ್ಲಿ ಇರುವುದನ್ನು ಇಲ್ಲಿ ಗಮನಿಸಬಹುದು. ಮಹಾಕವಿ ಪಂಪ, ಕನ್ನಡ ಭಾಷೆಯನ್ನು ‘ತಿರುಳ್ಗನ್ನಡ’ ಎಂದು ಕರೆದದ್ದನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಿಕೊಳ್ಳಬಹುದು. ಕ್ರಿ.ಶ. 850ರ ಶ್ರೀವಿಜಯ ಕೃತ ‘ಕವಿರಾಜಮಾರ್ಗ’ದಲ್ಲಿ ಜನಸಾಮಾನ್ಯರನ್ನು ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂದು ಪ್ರಶಂಸೆ ಮಾಡುವುದಲ್ಲದೆ ‘ಪದವನ್ನು ಅರ್ಥ ಮಾಡಿಕೊಂಡು ನುಡಿಯುವ, ಹೀಗೆ ನುಡಿದದ್ದನ್ನು ಅರಿತು ಅವಲೋಕಿಸುವ ಪ್ರತಿಭಾವಂತರು ನಮ್ಮ ನಾಡಿನವರು’ ಎಂದು ವಿಶ್ಲೇಷಿಸಲಾಗಿದೆ. ಜನಸಾಮಾನ್ಯ ಕನ್ನಡಿಗರ ಈ ವಿವೇಕವು ಎಲ್ಲ ಕ್ಷೇತ್ರದ ಮುಂದಾಳುಗಳಿಗೆ ಮಾದರಿಯಾಗಬೇಕಾಗಿದೆ. ಯಾಕೆಂದರೆ, ಇಂದು ಪದನರಿದು ನುಡಿಯುವ, ನುಡಿದುದನ್ನು ಅರಿತು ಅವಲೋಕಿಸಿ ವ್ಯಾಖ್ಯಾನ ಮಾಡುವ ಬದಲು ಅಪವ್ಯಾಖ್ಯಾನ ಮಾಡುವವರು ಮುನ್ನೆಲೆಗೆ ಬಂದಿದ್ದಾರೆ. ಆಡಿದ ಮಾತಿನ ಸಂದರ್ಭ ಮತ್ತು ಆಚೆ-ಈಚಿನ ಹಿನ್ನೆಲೆಯನ್ನು ಕತ್ತರಿಸಿ ನಿಜಾರ್ಥದ ಹತ್ಯೆ ಮಾಡಿ ಹಾದಿ ತಪ್ಪಿಸುತ್ತಿದ್ದಾರೆ. ‘ಕವಿರಾಜಮಾರ್ಗ’ದಲ್ಲಿ ಹೇಳಿರುವ ಜನಸಾಮಾನ್ಯರ ವಿವೇಕವೂ ಇಂಥವರಲ್ಲಿ ಇಲ್ಲವಾಗಿದೆ.

ಬಸವಣ್ಣನವರು ನುಡಿಯನ್ನು ಕುರಿತು ಹೇಳಿದ ಒಂದು ವಚನ ಯಾವತ್ತಿಗೂ ಆದರ್ಶಪ್ರಾಯವಾದುದು: ‘ನುಡಿದರೆ ಮುತ್ತಿನ ಹಾರದಂತಿರಬೇಕು| ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು| ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು | ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’- ನಮ್ಮ ನುಡಿ ಹೇಗಿರಬೇಕು ಎನ್ನುವುದಕ್ಕೆ ಬಸವಣ್ಣನವರ ಈ ವಚನಕ್ಕಿಂತ ಉದಾಹರಣೆ ಬೇಕೆ?

ಹದಿನೇಳನೇ ಶತಮಾನದ ಕವಿ, ಮಹಲಿಂಗರಂಗ, ಕನ್ನಡ ನುಡಿಯ ಸೊಗಸನ್ನು ಕುರಿತು ಬರೆದ ಮಾತುಗಳು ಮನನೀಯವಾಗಿವೆ : ‘ಸುಲಿದ ಬಾಳೆಯ ಹಣ್ಣಿನಂದದಿ| ಕಳೆದ ಸಿಗುರಿನ ಕಬ್ಬಿನಂದದಿ| ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ| ಲಲಿತವಹ ಕನ್ನಡದ ನುಡಿಯಲಿ’ ಎಂದು ಮೆಚ್ಚುಗೆಯ ಮಾತಾಡುವ ಮಹಲಿಂಗರಂಗ, ಕನ್ನಡ ನುಡಿಯಲ್ಲಿ ತನ್ನನ್ನು ತಾನು ತಿಳಿದು, ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೆ, ಮೋಕ್ಷಕ್ಕೆ ಸಂಸ್ಕೃತ ಯಾಕೆ ಎಂದು ಕೇಳಿದ್ದಾರೆ. ಇಲ್ಲಿ ತನ್ನನ್ನು ತಾನು ಕಂಡುಕೊಳ್ಳಲು ಕನ್ನಡ ನುಡಿ ಸಾಕು ಎಂಬ ಮಾತನ್ನು ಎಲ್ಲ ಜನಭಾಷೆಗಳಿಗೂ ಅನ್ವಯಿಸಬಹುದು. ಹಾಗೆಯೇ ತಂತಮ್ಮ ನುಡಿಯ ಮೂಲಕ ತಮ್ಮನ್ನು ತಾವು ತಿಳಿದುಕೊಂಡರೆ ನುಡಿ ನೈತಿಕತೆ ಉಳಿಯುತ್ತದೆಯೆಂದೂ ಆಶಿಸಬಹುದು.

ಇದು ಬರೀ ನುಡಿಯ ವಿಷಯವಲ್ಲ; ನಡೆಯ ವಿಷಯವೂ ಹೌದು; ನಡೆಯ ವಿಷಯವೆಂದರೆ ಅದು ಅವರವರ ಮನೋಧರ್ಮದ ವಿಷಯವೂ ಹೌದು, ಮನೋಧರ್ಮವು ವಿಚಾರಾತ್ಮಕವೊ, ವಿಕಾರಾತ್ಮಕವೊ ಎನ್ನುವುದು ನಡೆ-ನುಡಿಗಳಲ್ಲಿ ವ್ಯಕ್ತವಾಗುತ್ತದೆ.

ಇಂದು ನಮ್ಮ ಸನ್ನಿವೇಶ ಗಂಭೀರವಾಗಿದೆ. ಕೆಲವರಿಗೆ ಬಂದೂಕೇ ಬಾಯಿಯಾಗಿದೆ. ಇನ್ನು ಕೆಲವರಿಗೆ ಬಾಯಿಯೇ ಬಂದೂಕಾಗಿದೆ. ಬಂದೂಕನ್ನೇ ಬಾಯಿ ಮಾಡಿಕೊಂಡಿರುವ ಭಯೋತ್ಪಾದನೆಗೆ ಮತ್ತು ಬಾಯಿಯನ್ನೇ ಬಂದೂಕಿನಂತೆ ಬಳಸುವ ದ್ವೇಷೋತ್ಪಾದನೆಗೆ ಇತಿಶ್ರೀ ಹಾಡಬೇಕಾಗಿದೆ. ಫ್ಯೂಡಲ್ ಪಳೆಯುಳಿಕೆ ಮತ್ತು ಧಾರ್ಮಿಕ ಮೂಲಭೂತವಾದದ ಆಳ್ವಿಕೆ ಅಳಿಸಿಹೋದರೆ ನುಡಿ ನೈತಿಕತೆ ಉಳಿಯುತ್ತದೆ. ನುಡಿ ನೈತಿಕತೆಯು ಉಳಿದು ಬೆಳೆಯುವುದಕ್ಕೂ ಪ್ರಜಾಸತ್ತಾತ್ಮಕ ಸಂಸದೀಯ ಸಂವೇದನೆಯು ಉಳಿದು ಬೆಳೆಯುವುದಕ್ಕೂ ಪರಸ್ಪರ ಸಂಬಂಧವಿರುತ್ತದೆ. ಆದ್ದರಿಂದ ಸಂಸದೀಯ ಸಂವೇದನೆ ಸಮಾಜೀಕರಣಗೊಳ್ಳುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.