ADVERTISEMENT

PV Web Exclusive: ಬಾಂಧವ್ಯದ ಕೊಂಡಿ ಕಳಚಿದ್ದೆಲ್ಲಿ?

ವಿಶ್ವನಾಥ ಎಸ್.
Published 31 ಅಕ್ಟೋಬರ್ 2020, 13:00 IST
Last Updated 31 ಅಕ್ಟೋಬರ್ 2020, 13:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಂತ್ರಜ್ಞಾನದ ಸಾಧ್ಯತೆಗಳು ಹಲವು ಬಾರಿ ನಮ್ಮೊಳಗೆ ಸಂಭ್ರಮ ಮೂಡಿಸುತ್ತವೆ. ಎಷ್ಟೊ ಬಾರಿ ಸಂಬಂಧಗಳ ನವೀಕರಣಕ್ಕೂ ಕಾರಣವಾದ ನಿದರ್ಶನಗಳು ಇವೆ. ಆದರೆ ಅವುಗಳ ಅತಿಯಾದ ಬಳಕೆಯಿಂದ ಸಂಬಂಧಗಳಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಬೇಕಾದ ಜಾಗರೂಕತೆಯು ಅವಶ್ಯ ಎನ್ನುವುದು ನೆನಪಲ್ಲಿದ್ದರೆ ಒಳಿತು.

ನಗರದಲ್ಲೇ ಇದ್ದವರಿಗೆ ನಿತ್ಯ ಜೀವನಕ್ಕೆ ತಂತ್ರಜ್ಞಾನದ ಬಳಕೆ ಅನಿವಾರ್ಯ. ಹಳ್ಳಿಯಿಂದ ಅಪರೂಪಕ್ಕೆ ಪಟ್ಟಣಕ್ಕೆ ಬರುವವರಿಗೆ ಅದೊಂದು ವಿಸ್ಮಯ ಜಗತ್ತು. ಲ್ಯಾಂಡ್‌ಲೈನ್‌ ಫೋನ್‌ ಅನ್ನೇ ಕಾಣದಿದ್ದ ಜನರ ಮೊಮ್ಮಕ್ಕಳು, ಮರಿಮಕ್ಕಳು ಇಂದು ಕಣ್ಣು ಬಿಡುತ್ತಿದ್ದಂತೆಯೇ ಸ್ಮಾರ್ಟ್‌ಫೋನ್‌ ಹಿಡಿಯುವಂತಾಗಿದೆ. ಆದರೆ, ಒಮ್ಮೆ ಹಿಂದಿರುಗಿ ನೋಡಿದರೆ, ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಭರದಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂದು ಅನ್ನಿಸದೇ ಇರಲಾರದು.

ಹಾಗಾದರೆ ಒಮ್ಮೆ ಹಳ್ಳಿಯನ್ನು ನೆನಪಿಸಿಕೊಳ್ಳೋಣ. ಮೊದಲೆಲ್ಲಾ ಅಜ್ಜಿ ಊರಿಗೆ ಹೋಗುವುದೇ ಒಂದು ಸಂಭ್ರಮ. ಕಾಡುಹಾದಿ, ಚಿಮಣಿ ಬುಡ್ಡಿ, ಕಂಬಳಿ ಎಲ್ಲವೂ ಕಣ್ಮುಂದೆ ಬರುತ್ತಿದ್ದವು. ಮನೆಯಲ್ಲಿ ಅಜ್ಜಿ ಜತೆ ಹರಟೆ, ಹಟ್ಟಿ ಯಲ್ಲಿ ಅತ್ತಿಂದಿತ್ತ ಜಿಗಿದಾಡುವ ಪುಟ್ಟ ಕರು, ಕಾಲಿಗೆ ಅಡ್ಡಾಗುವ ಬೆಕ್ಕಿನ ಮರಿಗಳು, ಬಾಲ ಅಲ್ಲಾಡಿಸುತ್ತಾ ಹಿಂದೆ ಸುತ್ತುವ ಟಾಮಿ, ಪಗಡೆ, ಚೆನ್ನೆಮಣೆ, ಮರಕೋತಿ ಆಟ... ಎಲ್ಲವೂ ಹೊಸ ಲೋಕಕ್ಕೇ ಕರೆದೊಯ್ಯುತ್ತಿದ್ದವು. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಮನೆಯವರ ದಿನಚರಿ ಶುರುವಾಗುತ‌್ತಿತ್ತು. ಸಂಜೆ 7ರ ವೇಳೆಗೆ ಬೆಕ್ಕು, ನಾಯಿಗಳೂ ಸೇರಿದಂತೆ ಮನೆ ಸದಸ್ಯರೆಲ್ಲ ಗಾಢ ನಿದ್ರೆಯಲ್ಲಿರುತ್ತಿದ್ದರು. ಆದರೆ, ಈಗ ಎಲ್ಲವೂ ಹಾಗಿಲ್ಲ.

ADVERTISEMENT

ಮರ್ಫಿ ರೇಡಿಯೊ ಅಟ್ಟದ ಮೂಲೆ ಸೇರಿದೆ. ಹಟ್ಟಿಯಲ್ಲಿ ಹಾಲು ಕೊಡುವ ಬೆರಳೆಣಿಕೆಯ ಆಕಳುಗಳೂ ಇಲ್ಲ. ಸೊಪ್ಪಿನ ಹಟ್ಟಿ ಹೋಗಿ, ಚಪ್ಪಡಿ, ಕಾಂಕ್ರೀಟ್‌ ಕೊಟ್ಟಿಗೆಯಾಗಿದೆ. ಇದಕ್ಕೆ ಸೊಪ್ಪಿನ ಕೊರತೆ, ಹಟ್ಟಿ ಬಾಚಲು ಜನ ಇಲ್ಲದೇ ಇರುವುದು, ಪಟ್ಟಣದಿಂದ ಬಂದ ಸೊಸೆ ಹಟ್ಟಿ ಕೆಲಸ ಮಾಡಲು ಒಪ್ಪದೇ ಇರುವುದು, ಮನೆಯಲ್ಲಿದ್ದ ಹುಡುಗರು, ಪಟ್ಟಣ ಸೇರಿರುವುದು, ಗಂಡಸರಿಗೆ ಯಜಮಾನಿಕೆ ಮಾಡುವುದರ ಕಡೆಗೇ ಹೆಚ್ಚಿದ ಆಸಕ್ತಿ... ಹೀಗೆ ಕಾರಣಗಳು ಅನೇಕ. ಇಷ್ಟಾದ ಮೇಲೆ, ಗದ್ದೆಗೆ, ತೋಟಕ್ಕೆ ಹಾಕಲು ದುಡ್ಡು ಕೊಟ್ಟು ಗೊಬ್ಬರ ತರಬೇಕಾಗುತ್ತದೆ ಎನ್ನುವುದನ್ನೂ ಬೇರೆ ಹೇಳಬೇಕಾಗಿಲ್ಲ.

ಹಿಂದೆಲ್ಲಾ ಮನೆಗೆ ನೆಂಟರು ಬಂದರೆ, ಅದರ ಸಂಭ್ರಮವೇ ಬೇರೆ. ಮಾತು ಮುಗಿಯುತ್ತಲೇ ಇರುತ್ತಿರಲಿಲ್ಲ. ಈಗ ಹೆಂಗಸರು ಧಾರಾವಾಹಿ ನೋಡೋ ಆತುರದಲ್ಲಿ, ಗಂಡಸರು ನ್ಯೂಸ್‌ ನೋಡೋ ಕಾತುರದಲ್ಲಿಯೇ ತಮ್ಮ ನಿತ್ಯದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಆಟವಾಡಲು, ಹರಟೆ ಹೊಡೆಯಲು ಜತೆಗಾರರು ಸಿಗುವುದು ಹಾಗಿರಲಿ ನಾಲ್ಕಾರು ಮಾತಾಡಲೂ ಯಾರೂ ಸಿಗಲ್ಲ. ಧಾವಂತದಲ್ಲಿಯೇ ಕೆಲಸಗಳನ್ನು ಮುಗಿಸಿ ಒಂದೋ ಟಿವಿ ಮುಂದೆ ಅಥವಾ ಮೊಬೈಲಿನೊಳಗೆ ಮುಳುಗಿ ಹೋಗುತ್ತಾರೆ! ಇನ್ನು ಮನೆಗೆ ಬಂದವರೊಂದಿಗೆ ಮಾತಿಗೆ ಕೂರಲು ಸಮಯ ಎಲ್ಲಿದೆ!?

ಮೊದಲೆಲ್ಲಾ ರಾಜ್ಯ, ದೇಶದ ಆಗುಹೋಗು ತಿಳಿಯಲು ರೇಡಿಯೊದಲ್ಲಿ ಬರುತ್ತಿದ್ದ ಪ್ರದೇಶ ಸಮಾಚಾರವೇ ಮೂಲವಾಗಿತ್ತು. ಗುಡ್ಡದ ಮೂಲೆಯಲ್ಲಿನ ಮನೆಗೆ ಪತ್ರಿಕೆ ಹಾಕೋರು ಇಲ್ಲದೆ, ಪೇಟೆಗೆ ಹೋದಾಗ ತರುವುದರಿಂದ ಎರಡು ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆಯೇ ಅದರ ದರ್ಶನ. ಈಗ ಹಾಗಿಲ್ಲ, ಪ್ರತಿ ಮನೆಯಲ್ಲಿ, ಪ್ರತಿಯೊಬ್ಬರಲ್ಲೂ ಸ್ಮಾರ್ಟ್‌ಫೋನ್‌ ಇರೋದ್ರಿಂದ ಬೆಂಗಳೂರಿನಲ್ಲಿರುವವರಿಗೆ ಅಲ್ಲಿ ಹೀಗಾಯ್ತಂತೆ ಹೌದಾ ಅಂತ ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಬಳಕೆ ರೂಡಿಯಾಗಿದೆ.

ಹಾಗಾದ್ರೆ, ಹಳ್ಳಿಯವರು ಟಿವಿ, ಮೊಬೈಲ್‌ ನೋಡಲೇಬಾರ್ದಾ? ಅವರೂ ಹೊಸ ತಂತ್ರಜ್ಞಾನ ಬಳಸೋದು ಬೇಡ್ವಾ. ಅವರಿಗೂ ಪಟ್ಟಣದ ಜೀವನ ಬದುಕಬೇಕು ಅನ್ನಿಸೋದಿಲ್ವಾ ಅನ್ನೋ ಪ್ರಶ್ನೆಗಳು ಮೂಡುತ್ತದೆ. ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆಲ್ಲಾ ಇವೆಲ್ಲಾ ತೀರಾ ಸಾಮಾನ್ಯವಾಗಿಬಿಡುತ್ತವೆ. ಆದರೆ, ಅವುಗಳ ನಡುವೆ ಇದ್ದರೂ ನಮ್ಮತನ ಕಾಯ್ದುಕೊಳ್ಳುವ ಮನೋಭಾವ ಕಾಪಾಡಿಕೊಂಡರೆ ಮಾತ್ರವೇ ಸಂಬಂಧ, ಬಾಂಧವ್ಯ ಉಳಿಯಲು–ಬೆಳೆಯಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.