ಭಾರತೀಯ ಆರ್ಥಿಕತೆಯ ಉದಾರೀಕರಣವು 1991ರಲ್ಲಿ ಪ್ರಾರಂಭವಾಗುವುದಕ್ಕಿಂತ 20 ವರ್ಷಗಳ ಮೊದಲು, ಕರ್ನಾಟಕವು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಲ್ಲಿ ಮುಂಚೂಣಿಯಲ್ಲಿರುವ ಜಾತ್ಯತೀತ ರಾಜ್ಯವೆಂದು ಹೆಸರಾಗಿತ್ತು. ತುಳಿತಕ್ಕೊಳಗಾದ ವರ್ಗಗಳಿಗೆ ಮೀಸಲಾತಿ, ಉಳುವವರಿಗೆ ಭೂಮಿಯ ಮರುಹಂಚಿಕೆ, ಪಂಚಾಯತ್ ರಾಜ್ ಮೂಲಕ ಕೆಳವರ್ಗದವರಿಗೆ ಅಧಿಕಾರದ ವಿಕೇಂದ್ರೀಕರಣ, ಇವೆಲ್ಲವೂ ರಾಷ್ಟ್ರದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದವು. ದೇಶದ ರಾಜಕೀಯ ವ್ಯಾಕರಣಕ್ಕೆ ‘ಮೌಲ್ಯಾಧಾರಿತ ಸರ್ಕಾರ’ ಎಂಬ ಘೋಷಣೆಯನ್ನು ಕೊಟ್ಟ ನಾಡು ಇದು. ಹಾಗಿದ್ದರೆ, ಕಳೆದ 30 ವರ್ಷಗಳಲ್ಲಿ ಕರ್ನಾಟಕವು ತನ್ನ ಭ್ರಷ್ಟಾಚಾರ, ಕೋಮುವಾದ, ಮತ್ತು ರಾಜಕೀಯದ ಒರಟುತನಕ್ಕೆ ಹೇಗೆ ಹೆಚ್ಚು ಪ್ರಸಿದ್ಧವಾಯಿತು?
ಈ ಸಂದಿಗ್ಧವನ್ನು ನೋಡಲು ಮೂರು ಮಾರ್ಗಗಳಿವೆ. ಮೊದಲನೆಯದಾಗಿ, ರಾಜ್ಯದ ರಾಜಕೀಯದಲ್ಲಿ ನಿಜವಾಗಿಯೂ ಒಂದು ಸುವರ್ಣಯುಗ ಇತ್ತೇ ಅಥವಾ ನಾವು ನಮ್ಮನ್ನು ಭ್ರಮೆಗೊಳಿಸುತ್ತಿದ್ದೇವೆಯೇ? ದೇವರಾಜ ಅರಸು ಹಾಗೂ ರಾಮಕೃಷ್ಣ ಹೆಗಡೆ ಅವರ ಮಧ್ಯೆ ಗುಂಡೂರಾಯರ ಕರಾಳ ದಿನಗಳು ಇರಲಿಲ್ಲವೇ? ಎರಡನೆಯದಾಗಿ, ಭಾರತದ ಹೆಚ್ಚಿನ ರಾಜ್ಯಗಳಲ್ಲಿ, ಪ್ರಪಂಚದ ಅನೇಕ ದೇಶಗಳಲ್ಲಿ, ರಾಜಕೀಯವು ಇದೇ ರೀತಿಯ ಗೊಂದಲದ ಸ್ಥಿತಿಯಲ್ಲಿದೆ. ಕರ್ನಾಟಕದ ರಾಜಕೀಯವು ಗುಣಾತ್ಮಕವಾಗಿ ಭಿನ್ನವಾಗಿರಬೇಕೆಂದು ನಿರೀಕ್ಷಿಸುವುದು ನ್ಯಾಯವೇ? ಇದು ಸಾಧ್ಯವೇ? ಮೂರನೆಯದಾಗಿ, ತಂತ್ರಜ್ಞಾನದಿಂದ ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳು ಭಯಾನಕ ವೇಗದಲ್ಲಿ ನಡೆಯುತ್ತಿವೆ. ಪ್ರಜಾಪ್ರಭುತ್ವದೊಂದಿಗೆ ನಾಗರಿಕರ ಸಂಬಂಧ ಮತ್ತು ಅದರಿಂದ ಅವರ ನಿರೀಕ್ಷೆಗಳು ಬದಲಾಗುತ್ತಿವೆ. ರಾಜಕಾರಣಿಗಳು ಈ ಪಲ್ಲಟಗಳಿಂದ ದೂರ ಉಳಿಯಬಹುದೇ?
ಸಮರ್ಥನೆ ಏನೇ ಇರಲಿ, ಇಂದಿನ ಕರ್ನಾಟಕದ ರಾಜಕೀಯ ಗುಣಮಟ್ಟ ನೋಡಿ ಸಭ್ಯ ಹಾಗೂ ಸುಸಂಸ್ಕೃತ ಕನ್ನಡಿಗರ ಕಣ್ಣಲ್ಲಿ ನೀರು ಬರಬೇಕು. ಮುಖ್ಯಮಂತ್ರಿ ಆದವರು ಹಗರಣದಲ್ಲಿ ಸಿಲುಕಿ ಪೊಲೀಸರ ಮುಂದೆ ಹಾಜರಾಗೋದು, ಜೈಲಿಗೆ ಹೋಗೋದು; ಜೈಲಿಗೆ ಹೋದವರು ಮತ್ತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗೋದು; ಮಂತ್ರಿಗಳು ಡೀಲು, ಸ್ಕೆಚ್ಚು, ಪರ್ಸಂಟೇಜ್ ಎಂದೆಲ್ಲ ವ್ಯವಹಾರದಲ್ಲಿ ಮುಳುಗೋದು; ಪ್ರಜಾಪ್ರಭುತ್ವದ ದೇವಾಲಯವಾದ ವಿಧಾನಸೌಧವನ್ನು ಆಪರೇಷನ್ ಕಮಲದ ಮೂಲಕ ಶಾಸಕರ ಮಾರುಕಟ್ಟೆಯನ್ನಾಗಿ ಪರಿವರ್ತನೆ ಮಾಡೋದು; ಸದನದ ಒಳಗೆ ಶಾಸಕರು ವಿಡಿಯೊ ನೋಡೋದು, ಹೊರಗೆ ಅತಿರೇಕದಿಂದ ವರ್ತಿಸೋದು, ಅಸಹ್ಯ ಭಾಷೆ ಬಳಸೋದು, ದ್ವೇಷ ಬಿತ್ತೋದು... ಜವಾಬ್ದಾರಿಯುತ ಕನ್ನಡಿಗರಿಗೆ ಈ ದೈನಂದಿನ ಅವಮಾನವನ್ನು ನೋಡದೆ ಬೇರೆ ದಾರಿಯಿಲ್ಲ.
ಕಣ್ಣು ಕಾಣದ ವ್ಯಕ್ತಿಗಳು ಆನೆಯನ್ನು ಮುಟ್ಟಿನೋಡಿ ತಾವು ಮುಟ್ಟಿದ ಭಾಗವಷ್ಟನ್ನೇ ಆನೆ ಎಂದು ಪರಿಭಾವಿಸುವಂತೆ, ಕರ್ನಾಟಕದ ನೈತಿಕತೆಯ ದಿಕ್ಸೂಚಿ ಹೇಗೆ ಕುಸಿಯಿತು ಎಂಬುದಕ್ಕೆ ನಮ್ಮ ನಮ್ಮ ಮಿತಿಯಲ್ಲಿ ಭಿನ್ನ ಭಿನ್ನ ಉತ್ತರ ಕಂಡುಕೊಳ್ಳಬಹುದು. ಕುಟುಂಬ ರಾಜಕಾರಣದ ಅಬ್ಬರ, ದಕ್ಷಿಣದ ಜಿಲ್ಲೆಗಳಲ್ಲೇ ಕೇಂದ್ರೀಕೃತಗೊಂಡ ಅಧಿಕಾರ, ಜಾತಿಯನ್ನೇ ಮುಖ್ಯವಾಗಿಸಿಕೊಂಡ ರಾಜಕೀಯದ ಮೇಲಾಟ, ಕೋಮು ಅಸ್ಮಿತೆಯನ್ನು ಬಡಿದೆಬ್ಬಿಸಿ ಧ್ರುವೀಕರಣಕ್ಕೆ ಒತ್ತು ನೀಡಿದ ಆರ್‌ಎಸ್‌ಎಸ್–ಬಿಜೆಪಿ ಪ್ರಭಾವ, ಉದ್ಯಮ ಸಂಸ್ಥೆಗಳಿಂದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಎಗ್ಗಿಲ್ಲದ ಲೂಟಿ, ಸಮಾಜದ ಕಾವಲು ನಾಯಿಗಳಂತಿದ್ದ ಸಂಸ್ಥೆಗಳ ಕಣ್ಮರೆ, ಸಾಹಿತ್ಯ, ಪತ್ರಿಕೋದ್ಯಮ, ಸಿನಿಮಾ ಮತ್ತು ರಂಗಭೂಮಿಯಲ್ಲಿ ಉಂಟಾದ ಬೌದ್ಧಿಕ ನಿರ್ವಾತ– ಎಲ್ಲವೂ ಕರ್ನಾಟಕದ ಇಂದಿನ ಅಧಃಪತನಕ್ಕೆ ಕೊಡುಗೆ ನೀಡಿವೆ.
ಇಂದಿನ ಈ ಸ್ಥಿತಿಗೆ ಎಲ್ಲಕ್ಕಿಂತ ಮುಖ್ಯ ಕಾರಣವೆಂದರೆ, ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಸಾಂಸ್ಥಿಕ ಸ್ವರೂಪ ಸಂಪೂರ್ಣವಾಗಿ ದುರ್ಬಲಗೊಂಡಿದ್ದು ಮತ್ತು ನಾಯಕತ್ವವೇ ಅಳಿಸಿಹೋಗಿದ್ದು. ಯಾರ ಮಾತು ಕಾನೂನಿಗೆ ಸಮವಾಗಿತ್ತೋ ಅಂತಹ ‘ಬಿಗ್ ಬಾಸ್’ಗಳ ಕಾಲ ಸಂದುಹೋಗಿದೆ. 1991ರ ಉದಾರೀಕರಣದ ಬಳಿಕ, ಹಣದ ಹರಿವು ಹೆಚ್ಚಿದ ಮೇಲೆ ರಾಜಕೀಯದ ಸ್ವರೂಪವೇ ಬದಲಾಗಿ ಹೋಗಿದೆ. ಗಣಿ ಧಣಿಗಳು, ರಿಯಲ್ ಎಸ್ಟೇಟ್ ಕುಳಗಳು, ಉದ್ಯಮಿಗಳು ಸೇರಿದಂತೆ ಸಿರಿತನದಲ್ಲಿ ಮುಳುಗಿ ಎದ್ದವರು ರಾಜಕೀಯ ಪ್ರವೇಶಿಸುತ್ತಿದ್ದಾರೆ. ಅಂಥವರಿಗೆ ಸಾಮಾಜಿಕ, ಭಾಷಿಕ ಹಾಗೂ ರಾಜಕೀಯ ಚಳವಳಿಗಳ ಹಿನ್ನೆಲೆ ಏನೇನೂ ಗೊತ್ತಿರುವುದಿಲ್ಲ. ಒಂದುವೇಳೆ ತಿಳಿದಿದ್ದರೂ ಅದು ಅಲ್ಪಮಾತ್ರ. ಅಸೋಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ಮಾಹಿತಿ ಪ್ರಕಾರ, ಕರ್ನಾಟಕದ ಶಾಸಕರು ಭಾರತದಲ್ಲೇ ಅತ್ಯಂತ ಶ್ರೀಮಂತರು. ಇಂತಹ ‘ಗಣ್ಯ’ ರಾಜಕೀಯ ವರ್ಗಕ್ಕೆ ರಾಜಕಾರಣವೆಂದರೆ ತಮ್ಮ ವೈಯಕ್ತಿಕ ಹಾಗೂ ಕುಟುಂಬದ ಸಿರಿವಂತಿಕೆಯನ್ನು ಹೆಚ್ಚಿಸುವುದೇ ಹೊರತು ಜನಸೇವೆಯಲ್ಲ. ಈ ರೀತಿ ರಾಜಕಾರಣದ ಅವಕಾಶವಾದಿತನ ಸಾಮಾನ್ಯೀಕರಣಗೊಂಡ ಪರಿಣಾಮ ಇಂದು ನಮ್ಮ ಮುಂದಿದೆ. ಒಂದು ಅಂದಾಜಿನ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಾಜ್ಯವು ಸಾಕ್ಷಿಯಾಗಿರುವ ದೊಡ್ಡ ಹಗರಣಗಳ ಒಟ್ಟು ಮೊತ್ತ ₹2 ಲಕ್ಷ ಕೋಟಿಯಷ್ಟು!
ಮುಂಚೆ ಇದ್ದಹಾಗೆ ತೂಕದ ವ್ಯಕ್ತಿತ್ವದ ನಾಯಕರು ಈಗಿಲ್ಲ. ಪಕ್ಷದಲ್ಲಿ ಖಜಾಂಚಿ ಹುದ್ದೆಗೆ ಮೊದಲಿನ ಕಿಮ್ಮತ್ತು ಕೂಡ ಉಳಿದಿಲ್ಲ. ಈಗ ಗಣನೆಗೆ ಒಳಗಾಗುತ್ತಿರುವುದು ಎಂದರೆ ‘ಗೆಲುವಿನ ಸಾಮರ್ಥ್ಯ’ವೊಂದೇ. ಪ್ರತಿಯೊಬ್ಬ ಅಭ್ಯರ್ಥಿಗೆ ಸಂಬಂಧಿಸಿದ ಗಣಿತವೂ ಇದೇ ಆಗಿದ್ದು, ಹಣದ ಚೀಲಗಳು ಹೇಗೆ ಹರಿದಾಡುತ್ತವೆ ಎಂಬುದನ್ನು ನಾವೆಲ್ಲ ಬಲ್ಲೆವು. ಇಂತಹ ಅರಾಜಕ ರಾಜಕಾರಣಿಗಳ ಪಾಲಿಗೆ ಕರ್ನಾಟಕದ ಕುರಿತು ಮಲತಾಯಿ ಧೋರಣೆ ಹೊಂದುವುದು ಅಪರಾಧದ ಸಂಗತಿ ಎನಿಸುವುದಿಲ್ಲ. ಹಿಂದಿ ಹೇರಿಕೆ ಅವರಿಗೆ ಸಮಸ್ಯೆಯಾಗಿ ಕಾಣುವುದಿಲ್ಲ. ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸಲು ಮೊಟ್ಟೆ ವಿತರಿಸಬೇಕೆನ್ನುವ ಸಂಗತಿ ಕೂಡ ಅವರಿಗೆ ಮುಖ್ಯವಾಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡು ಇಲ್ಲವೆ ಕೇರಳದವರಂತೆ, ಅಷ್ಟೇ ಏಕೆ, ನಮ್ಮದೇ ಪೂರ್ವಸೂರಿಗಳಂತೆ ಕರ್ನಾಟಕದ ಯಾವೊಬ್ಬ ಸಂಸದನಾದರೂ ಸಂಸತ್ತಿನಲ್ಲಿ ಸ್ಮರಣೀಯ ಭಾಷಣ ಮಾಡಿದ ಉದಾಹರಣೆ ಇದೆಯೇ? ಅದರ ಬದಲು, ಬೇರೆ ಪಕ್ಷಗಳ ತಮ್ಮದೇ ಸಹವರ್ತಿಗಳ ವಿರುದ್ಧ, ಅವರೇನು ತಮ್ಮ ವೈರಿಗಳೇನೋ ಎನ್ನುವಂತೆ, ಸಾಮಾಜಿಕ ತಾಣಗಳಲ್ಲಿ ಬೆಂಕಿ ಉಗುಳುವ ಪ್ರವೃತ್ತಿ ಸಾಮಾನ್ಯವಾಗಿದೆ.
ನಮ್ಮ ರಾಜಕಾರಣಿಗಳು ಸನ್ಯಾಸಿಗಳಂತೆ ಮೌನವಾಗಿರಬೇಕು ಎಂಬುದು ಇಲ್ಲಿನ ವಾದವಲ್ಲ. ನಮ್ಮ ರಾಜಕಾರಣಿಗಳು ಸಂಪೂರ್ಣವಾಗಿ ಸೋತಿದ್ದಾರೆ ಎಂದು ಹೇಳಲೂ ಈ ಲೇಖನ ಹೊರಟಿಲ್ಲ. ಇಲ್ಲಿನ ವಾದ ಇವುಗಳಿಗಿಂತ ತುಂಬಾ ಭಿನ್ನ. ಮತ್ತೆ ಮತ್ತೆ ಬಿಡುಗಡೆ ಆಗುತ್ತಿರುವ ಅಂಕಿ ಅಂಶಗಳು ಕರ್ನಾಟಕವು ದೇಶದ ಸಿರಿವಂತ ರಾಜ್ಯಗಳಲ್ಲಿ ಒಂದು ಎಂಬುದಾಗಿ ಸಾರಿ ಸಾರಿ ಹೇಳುತ್ತಿವೆ. ಮಹಾರಾಷ್ಟ್ರ ಹೊರತುಪಡಿಸಿದರೆ ಅತ್ಯಧಿಕ ತೆರಿಗೆ ನೀಡುತ್ತಿರುವ ರಾಜ್ಯವೂ ಇದಾಗಿದೆ. 1991ರ ನಂತರ ಹಲವು ವಿಷಯಗಳಲ್ಲಿ ರಾಜ್ಯ ಸರಿದಾರಿಯಲ್ಲಿದೆ ಎಂಬುದಕ್ಕೆ ಈ ಅಂಶಗಳೇ ಪುರಾವೆ. ಆದರೆ, ನಮ್ಮ ಮುಂದಿರುವ ವಾಸ್ತವ ಹೊಳಪು ಕಳೆದುಕೊಂಡಿದೆ. ರಾಜಕಾರಣದ ಹಣದ ಥೈಲಿಯಿಂದ ಹೊಳೆಯುವ ಮೇಲ್ಮೈನ ಅಡಿಯೊಳಗೆ ಈ ಹಿರಿಮೆಗಳೆಲ್ಲ ಸಿಕ್ಕಿಹಾಕಿಕೊಂಡಂತಿವೆ. ಬಸವಣ್ಣನ ಈ ನಾಡಿನಲ್ಲಿ, ಅದೂ ಯು.ಆರ್.ಅನಂತಮೂರ್ತಿ ಅವರು ನಿಧನ ಹೊಂದಿದಾಗ ಪಟಾಕಿ ಸಿಡಿಸಿ ಸಂಭ್ರಮಿಸುವಂತಹ, ಗೌರಿ ಲಂಕೇಶ್ ಅವರ ಕೊಲೆಗೈದ ಆರೋಪ ಹೊತ್ತವರು ಬಿಡುಗಡೆಯಾದಾಗ ಹೂಮಾಲೆ ಹಾಕಿ ಸ್ವಾಗತಿಸುವಂತಹ ವಿಕೃತಿಯನ್ನು ಮೆರೆಯುತ್ತಿರುವ ಈ ಹೊತ್ತಿನಲ್ಲಿ, ನಾವು ಏರಿದ ಎತ್ತರದಿಂದ ಹೇಗೆ ಪ್ರಪಾತಕ್ಕೆ ಬಿದ್ದೆವು ಎಂಬುದನ್ನು ಪ್ರತಿಯೊಬ್ಬ ಅಭಿಮಾನಿ ಕನ್ನಡಿಗನೂ ಕೇಳಿಕೊಳ್ಳಬೇಕು. ನಮ್ಮ ರಾಜಕಾರಣಿಗಳು ನಾವು ಮತ್ತೆ ಮೇಲೆ ಏರಲಾಗದಂತಹ ಆಳವಾದ ಪ್ರಪಾತಕ್ಕೆ ನಮ್ಮನ್ನು ಹೇಗೆ ತಳ್ಳಿದರು ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕು.
ಲೇಖಕ: ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.